ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ.

 • ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ ಕೊಂಡೊಯ್ಯುತ್ತವೆ ಎಂಬುದು ಸತ್ಯವಾದರೂ, ಬಹುತೇಕ ಸಾವಯವ ವಸ್ತುಗಳು ಕಳಿತು ಮಣ್ಣಾಗಿ ಪರಿವರ್ತನೆಯಾಗಲು ಸೂಕ್ಷ್ಮಾಣು ಜೀವಿಗಳು ಸಹಕರಿಸಬೇಕು.
 • ಅವು ಅದನ್ನು ಬಳಸಿಕೊಳ್ಳಬೇಕಾದರೆ ಅದರಲ್ಲಿ ಇಂಗಾಲ – ಸಾರಜನಕ ಅನುಪಾತ ಹತ್ತಿರ ಇರಬೇಕು.
 • ಬಹುತೇಕ ಸ್ಥೂಲ ಸಾವಯವ ವಸ್ತುಗಳು( ಗೆಲ್ಲುಗಳು, ಬೇರುಗಳು, ) ಬೇಗ ಕಳಿಯುವುದಿಲ್ಲ.
 • ಅದನ್ನು  ಸಂಕ್ಷೇಪಗೊಳಿಸಿ ಮಣ್ಣಿಗೆ ಸೇರಿಸಲು ಸುಡು ಮಣ್ಣು ಮಾಡುವ ವಿಧಾನ ಸೂಕ್ತ.
 • ದೊಡ್ಡ ದೊಡ್ದ ಮರದ ತುಂಡುಗಳು, ಬೇರು ಗಿಡಗಂಟಿಗಳು, ತರಗೆಲೆ, ಗೆಲ್ಲುಗಳು ಹಾಗೆಯೇ ಅಲ್ಲಲ್ಲಿ ತಂಗಿದ ಮೇಲ್ಮಣ್ಣು ಎಲ್ಲಾ ಮಿಶ್ರಣವಾಗಿ ಸಂಕ್ಷೇಪಿತ ಮಣ್ಣಿನ ರೂಪಕ್ಕೆ ಬರುತ್ತದೆ.  

ಸುಡುಮಣ್ಣು ರಾಶಿ -sudumannu preparation -

ಸುಡು ಮಣ್ಣು  ತಯಾರಿಸುವ ವಿಧಾನ:

 • ಸುಡುಮಣ್ಣು ತಯಾರಿಸಲು ಬೇಸಿಗೆ ಕಾಲ ಸೂಕ್ತ. ಚಳಿಗಾಲ ಮುಗಿಯುವ ಸಮಯದಲ್ಲಿ ಎಲ್ಲಾ ಸಾವಯವ ವಸ್ತುಗಳನ್ನು ಒಟ್ಟು ಸೇರಿಸಿ  ಹಿತ ಮಿತವಾಗಿ ಒಣಗಿಸಿ ನಂತರ ಸೂಕ್ತ ವಿಧಾನದಲ್ಲಿ ಅಂತರ ಅಂತರದಲ್ಲಿ ಹಾಕಿ ಬೆಂಕಿ ಕೊಟ್ಟು ಸುಡಬೇಕು.
 • ಸುಡು ಮಣ್ಣಿಗೆ  ಮೂಲ ವಸ್ತುಗಳು  ಮರ – ಪೊದರಿನ ಸುತ್ತಲೂ ಇರುವ ಮೆಕ್ಕಲು ಮಣ್ಣು  ಮತ್ತು  ತಗ್ಗು ಪ್ರದೇಶದಲ್ಲಿ  ಮಳೆ ನೀರಿಗೆ ಕೊಚ್ಚಣೆಯಾಗಿ ತಂಗಿದ ಮಣ್ಣು.
 • ಈ ಮಣ್ಣಿನಲ್ಲಿ ಹೆಚ್ಚಾಗಿ ಅರೆ ಬರೆ  ಕೊಳೆತ ತರಗೆಲೆಗಳು, ಹುಲ್ಲು ಕಡ್ಡಿಗಳು ಇರುತ್ತವೆ.
 • ಈ ಸಾಮಾಗ್ರಿಗಳನ್ನು ಅಲ್ಲಲ್ಲಿ ಕೆರೆದು ಒಟ್ಟು ಮಾಡಬೇಕು.
 • ಸಂಗ್ರಹಿಸುವಾಗ ದೊರೆಯುವ ಸೊಪ್ಪು ಕಟ್ಟಿಗೆಗಳನ್ನು ತಳ ಭಾಗದಲ್ಲಿ ಹಾಕಬೇಕು.
 • ಮೊದಲೇ ಅವುಗಳನ್ನು ಎರಡು ಮೂರು ದಿನ ಇರುವ ಸ್ಥಳದಲ್ಲೇ ಒಣಗಿಸಿದ್ದರೆ ಒಮ್ಮೆಲೇ ರಾಶಿಗೆ ಹಾಕಬಹುದು. ಇಲ್ಲವಾದರೆ ಒಂದು  ಅಂತರ ಹಾಕಿ ಎರಡು ಮೂರು ದಿನ ಒಣಗಲು ಬಿಟ್ಟು ಮತ್ತೊಂದು ಅಂತರ ಹಾಕಬೇಕು.
 • ಮೊದಲ ಅಂತರದಲ್ಲಿ ಸೊಪ್ಪು, ಗೆಲ್ಲು, ಮರದ ಬೇರುಗಳು, ಅರೆ ಅರೆ ಲಡ್ಡಾದ ಮರದ ತುಂಡುಗಳನ್ನು ಮಿಶ್ರಣ ಮಾಡಿ ಹಾಕಬೇಕು.
 • ಹೀಗೆ ಮಾಡಿದರೆ  ಬೆಂಕಿ ಉರಿಯಲು ಅನುಕೂಲವಾಗುತ್ತದೆ.
 • ಎರಡನೇ ಅಂತಸ್ಥಿನಲ್ಲಿ  ಅಲ್ಲಲ್ಲಿ ಒಟ್ಟು ಸೇರಿಸಿದ ತಂಗಿದ ಮಣ್ಣನ್ನು ಹಾಕಬೇಕು.
 • ಹೆಚ್ಚು ಮಣ್ಣು ಇದ್ದರೆ ಮತ್ತೊಂದು  ಅಂತಸ್ತು ಮತ್ತೆ ಸೊಪ್ಪು ಕಟ್ಟಿಗೆಗಳನ್ನು ಹಾಕಿ ಅದರ ಮೇಲೆ ಮತ್ತೆ ಮಣ್ಣು ಹಾಕಬೇಕು.
 • ದೊಡ್ದ ದೊಡ್ಡ  ಬೇರು ಮುಂತಾದ ಸಸಿಯನ್ನು ಕಿತ್ತು ತೆಗೆದ ಭಾಗಗಳನ್ನು ಮೊದಲ ಅಂತಸ್ತಿನಲ್ಲಿ ಹಾಕಿದರೆ ಒಳ್ಳೆಯದು.
ಸುಡುಮಣ್ಣಿನ ತಳ ಭಾಗದ ತಯಾರಿ ಹೀಗೆ – base of sudumannu
ಸುಡುಮಣ್ಣಿನ ತಳ ಭಾಗದ ತಯಾರಿ ಹೀಗೆ

ಸುಡುಮಣ್ಣು ಮಾಡುವಾಗ ಅನುಸರಿಸಬೇಕಾದ ಕ್ರಮ:

 • ಸುಡುಮಣ್ಣು ಮಾಡುವಾಗ ತಳಭಾಗದಲ್ಲಿ ಗಾಳಿಯಾಡುವಂತೆ ಇದ್ದರೆ ಉರಿಯುವಿಕೆ ಸುಲಭವಾಗುತ್ತದೆ. ಹಾಕುವಾಗ ಅಪ್ಪಚ್ಚಿಯಾಗಕೂಡದು.
 • ಸುಡುಮಣ್ಣನ್ನು ಪಿರಮಿಡ್ ಆಕಾರದಲ್ಲಿ ರಾಶಿ ಹಾಕುವುದು ಸೂಕ್ತ.
 • ಯಾವುದೇ ಬೇಗ  ಕರಗಿ ಮಣ್ಣಾಗದ ಸಾವಯವ ತ್ಯಾಜ್ಯಗಳನ್ನು ಸುಡುಮಣ್ಣಿಗೆ ಹಾಕಬಹುದು.
 • ಸಾಮಾನ್ಯವಾಗಿ ಹೆರೆಸಿ ಸಿದ್ದಪಡಿಸಿಟ್ಟುಕೊಂಡ ಮಣ್ಣು  ಹಾಗೂ ಲಭ್ಯವಿರುವ ಸೊಪ್ಪು ಕಟ್ಟಿಗೆಗಳನ್ನು 2-3 ದಿನವಾದರೂ ಒಣಗಿಸಬೇಕು.
 • ಲಘು ಪ್ಲಾಸ್ಟಿಕ್, ಗೋಣಿ ಚೀಲ ಇತ್ಯಾದಿಗಳನ್ನು ಹಾಕುವಾಗ ಅದನ್ನು ತಳ ಭಾಗದಲ್ಲಿ ಹಾಕಬೇಕು.
 • ಬೆಂಕಿ ಕೊಡುವಾಗ  ಬುಡ ಭಾಗದಲ್ಲಿ ನಾಲ್ಕೂ ದಿಕ್ಕಿನಲ್ಲಿ ಬೆಂಕಿ ಕೊಡಬೇಕು. ಬೆಂಕಿ ನಿಧಾನವಾಗಿ ಉರಿಯುವ ತರಹ ಮಣ್ಣು ಹಾಕಿರಬೇಕು.
 • ಸೊಪ್ಪು ಸದೆ ಕಟ್ಟಿಗೆ, ಮುಂತಾದವುಗಳು ಉರಿಯುವಾಗ ಅದರ ಬಿಸಿಗೆ  ಮೇಲು ಭಾಗದಲ್ಲಿ ಹಾಕಿದ ಮಣ್ಣು ಬಿಸಿಯಾಗುತ್ತದೆ. ಸ್ವಲ್ಪ ಕರಕಲೂ ಆಗುತ್ತದೆ.

ಇದನ್ನು ದಿನಾ ಬೆಳಗ್ಗೆ ಹೊತ್ತು ಬಿಡಿಸಿ ಸರಿಸುತ್ತಾ ಇರಬೇಕು. ಒಂದು ವೇಳೆ ಹಾಗೆ ಬಿಟ್ಟರೆ ನಡು ಭಾಗ ಕುಸಿದು ಬೀಳಬಹುದು ಅಥವಾ ಅದು ಬಿಸಿಯಾಗದೆಯೇ ಇರಬಹುದು. ಅಥವಾ ಹೆಚ್ಚು ಸುಟ್ಟು, ಮಣ್ಣು  ಕೆಂಪಗೆಯೂ ಆಗಬಹುದು.

 • ಸುಡು ಮಣ್ಣು ಯಾವಾಗಲೂ ಕರಕಲಾಗಬೇಕೇ ವಿನಹ ಅದು  ಪೂರ್ತಿ ಸುಟ್ಟ ಮಣ್ಣಾಗಬಾರದು.
 • ಅದರಲ್ಲಿ ಕಟ್ಟಿಗೆಯ ಇದ್ದಿಲು ಇರಬೇಕು. ತರಗೆಲೆ  ಇತ್ಯಾದಿ ಸುಟ್ಟು ಬೂದಿಯಾದುದೂ ಇರಬೇಕು.
 • ಇದನ್ನು ಬೆಳೆಗಳ ಬುಡಕ್ಕೆ  ಹಾಕಿದರೆ ಆ ಸಸ್ಯದ ಬೆಳವಣಿಗೆಯ ಲಕ್ಷಣವೇ ಭಿನ್ನವಾಗಿರುತ್ತದೆ.

ಸುಡು ಮಣ್ಣು ನಮ್ಮ ಹಿರಿಯರು ಪ್ರತೀ ವರ್ಷ ಗೊಬ್ಬರ ಎಂದು ತಯಾರಿಸುತ್ತಿದ್ದ ಪದ್ದತಿ. ಇದಕ್ಕೆ ಆಧುನಿಕ ವಿಜ್ಞಾನ ಇದರಲ್ಲಿ ಸೂಕ್ಷ್ಮಾಣುಗಳು ಸಾಯುತ್ತವೆ ಎಂಬ ಕಾರಣಕ್ಕೆ, ಭಿನ್ನಾಭಿಪ್ರಾಯವನ್ನು  ಹೇಳುತ್ತದೆಯಾದರೂ, ಇದರಲ್ಲಿ ಫಲಿತಾಂಶ ಇಲ್ಲದಿಲ್ಲ. ಹಿರಿಯರು ಇದು ಬೆಳೆಗಳಿಗೆ ಒಳ್ಳೆಯದು ಎನ್ನುತ್ತಿದ್ದರು ಹೊರತಾಗಿ ಹೆಚ್ಚಿನ ಮಾಹಿತಿಯನ್ನು  ಹೊಂದಿರಲಿಲ್ಲ. ಅವರು ಅದರಲ್ಲಿ ಉತ್ತಮ ಫಲಿತಾಂಶವನ್ನೂ ಪಡೆಯುತ್ತಿದ್ದರು. ಈಗಲೂ ಇದನ್ನು ಬಳಸಿದ ಬೆಳೆಯಲ್ಲಿ ಉತ್ತಮ ಇಳುವರಿ  ಬರುವುದನ್ನು ಕಂಡಿದ್ದಾರೆ.

ಸುಡುಮಣ್ಣಿನ ರಾಶಿ ತುಂಬುವುದು – Filling of sudumannu materials
ಸುಡುಮಣ್ಣಿನ ರಾಶಿ ತುಂಬುವುದು

ಸುಡುಮಣ್ಣು ಯಾಕೆ ಉತ್ತಮ:

 • ಸುಡು ಮಣ್ಣು ಮಾಡುವಾಗ ಆ ಮಣ್ಣಿನಲ್ಲಿ ಇದ್ದ ಎಲ್ಲಾ ತರಹದ ಕಳೆ  ಬೀಜಗಳು ಜೀವಂತಿಗೆ ಕಳೆದು ಕೊಳ್ಳುತ್ತವೆ, ಮತ್ತೆ ಹುಟ್ಟುವುದಿಲ್ಲ.
 • ಇದರಲ್ಲಿ ಅರ್ಧಂಬರ್ಧ ಕರಕಲಾಗಿ  ಉಳಿದ ಮರದ ಇದ್ದಿಲುಗಳು, ಬಯೋ ಚಾರ್ ನಂತೆ  ಕೆಲಸ ಮಾಡುತ್ತದೆ.
 • ಮಣ್ಣು ತನ್ನ ಅಂಟುತನವನ್ನು ಕಳೆದು ಕೊಳ್ಳುತ್ತದೆ. ಸಡಿಲವಾಗಿ ಗಾಳಿಯಾಡುವಿಕೆಗೆ ಅನುಕೂಲವಾಗಿರುತ್ತದೆ.
 • ಎಲ್ಲಾ ಮಣ್ಣು ಶುದ್ಧ ಅಲ್ಲ. ಹೆಚ್ಚಿನ ಸಾವಯವ ಅಂಶಗಳನ್ನು ಕೊಚ್ಚಿಕೊಂಡು ಬಂದು ತಂಗಿದ ಮಣ್ಣಿನಲ್ಲಿ ಎಲ್ಲಾ ನಮೂನೆಯ ಜೀವಿಗಳೂ ಇರುತ್ತವೆ.
 • ಇದರಲ್ಲಿ ರೋಗ ಕಾರಕವೂ ಇರಬಹುದು, ಒಳ್ಳೆಯದೂ ಇರಬಹುದು.
 •  ಇದನ್ನು ನೇರವಾಗಿ ಬಳಕೆ ಮಾಡಿದಾಗ ಬೇರು ಸಂಬಂಧಿತ ಜಂತು ಹುಳಗಳೂ ಹೆಚ್ಚುವ ಸಾಧ್ಯತೆ ಇದೆ.

ಸುಡುಮಣ್ಣು ಎಂಬುದು ಹಾಳಲ್ಲ. ಅದನ್ನು ಅನುಕೂಲ ಇದ್ದವರು ಮಾಡುವುದು ಒಳ್ಳೆಯದು.  ಇದರ ಅತೀ ದೊಡ್ದ ಅನುಕೂಲ ಎಂದರೆ ಅನವಶ್ಯಕವಾಗಿ ಹಾಳಾಗುವ ಮೆಕ್ಕಲು ಮಣ್ಣು , ಸಾವಯವ ತ್ಯಾಜ್ಯಗಳು ಬಳಕೆಯಾಗುತ್ತವೆ. ತ್ವರಿತವಾಗಿ ಅವು ಸಸ್ಯಗಳ ಬಳಕೆಗೆ ಸಿಗುತ್ತವೆ. ಮರ ಸುಟ್ಟ ಬೂದಿಯಲ್ಲಿ ನೈಸರ್ಗಿಕ ಪೊಟ್ಯಾಶ್ ಅಂಶ ಇರುವ ಕಾರಣ ಅದು ಬೆಳೆಗಳಿಗೆ ಭಾರೀ ಪ್ರಯೋಜನ ಆಗುತ್ತದೆ.

ಸಾವಯವ ತ್ಯಾಜ್ಯಗಳ ಒಟ್ಟು ಸೇರಿಸುವಿಕೆ – Collection of Organic matters
ಸಾವಯವ ತ್ಯಾಜ್ಯಗಳ ಒಟ್ಟು ಸೇರಿಸುವಿಕೆ
 • ಮಣ್ಣನ್ನು ಹದವಾಗಿ ಬಿಸಿ ಮಾಡಿದಾಗ ಎಲ್ಲಾ ಜೀವಾಣುಗಳೂ ಸತ್ತು ಹೋಗುತ್ತವೆ.
 • ಅದನ್ನು ನಂತರ ಬೆಳೆಗಳ ಬುಡಕ್ಕೆ ಹಾಕಿದಾಗ ಬೆಳೆ ಬೆಳೆಯುವ ಮಣ್ಣಿನಲ್ಲಿ ಇರುವ ಉಪಕಾರೀ ಜೀವಾಣುಗಳು ಅದರಲ್ಲಿ  ಮರಳಿ ಸೇರಿಕೊಳ್ಳುತ್ತವೆ.
 • ಸುಟ್ಟ ಮಣ್ಣು ಹಾಕಿದಲ್ಲಿ  ಬೇರು ಹೆಚ್ಚಿನ ಪ್ರಮಾಣದಲ್ಲಿ ಬರಲು ಅನುಕೂಲವಾಗುತ್ತದೆ.
 • ಇದರಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಅಲ್ಲದೇ ಸಸ್ಯಗಳ ಆರೋಗ್ಯಕ್ಕೆ ಸಹಾಯಕವಾಗುವ ಕಾರ್ಬನ್ ಅಂಶವೂ ಸೇರಿರುತ್ತದೆ.
 • ಇದು ಮಣ್ಣಿನ ಸಡಿಲತೆಗೆ ಸಹಕಾರಿಯಾಗಿ, ಎಲ್ಲಾ ನಮೂನೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ.
 • ಕೆಲವು ಪ್ಲಾಸ್ಟಿಕ್ ವಸ್ತುಗಳನ್ನು ಸುಡು ಮಣ್ಣಿಗೆ ಸೇರಿಸಿದಾಗ ಅದು ಕರಗಿ ಗೊಬ್ಬರದ ರೂಪ ಪಡೆಯುತ್ತವೆ. ಇದು ಪ್ಲಾಸ್ಟಿಕ್ ವಿಲೇವಾರಿಗೂ ಅನುಕೂಲಕರ.

ಸುಡುಮಣ್ಣು ಎಂಬುದು ಆಧುನಿಕ ಬಯೋ ಚಾರ್ ಎಂಬುದರ ಕಚ್ಚಾ ರೂಪ. ಸುಡುಮಣ್ಣು  ಸರಳ ಹೆಸರು. ಬಯೋ ಚಾರ್ ಆಧುನಿಕ ಹೆಸರು ಇಷ್ಟೇ ವ್ಯತ್ಯಾಸ. ಇದು ಮಣ್ಣಿನ ಡಾಕ್ಟರ್ ಎಂದರೆ ತಪ್ಪಲ್ಲ.

Leave a Reply

Your email address will not be published. Required fields are marked *

error: Content is protected !!