ಸಂಪಿಗೆ ಹಣ್ಣು – ತಾತ್ಸಾರ ಬೇಡ ಇದು ಹೃದಯ ರಕ್ಷಕ

ಸಂಪಿಗೆ ಹಣ್ಣು

ಮಕ್ಕಳಾಟಿಕೆಯಲ್ಲಿ ಕಾಡು ಗುಡ್ಡಗಳಲ್ಲಿ ಹಿರಿಯರ ಜೊತೆಗೆ ಸುತ್ತಾಡಿ ತಿನ್ನುತ್ತಿದ್ದ  ಹಣ್ಣು  ಹಂಪಲುಗಳು ಎಷ್ಟೊಂದು ರುಚಿ. ಆ ಭಾಗ್ಯ ಹೊಸ ತಲೆಮಾರಿಗೆ ಇಲ್ಲ. ಮನೆ , ಪೇಟೆ, ಮಾಲುಗಳನ್ನು ಬಿಟ್ಟರೆ ಮತ್ತೇನೂ ಅರಿಯದ ಮುಗ್ಧ ಮಕ್ಕಳು ಮಕ್ಕಳಾಟಿಕೆಯೆ ಯಾವ  ಸುಖವನ್ನೂ ಅನುಭವಿಸಿಲ್ಲ. ಈ ಚಟುವಟಿಕೆ ಅವರ ಆರೋಗ್ಯವನ್ನೂ ಉಳಿಸಿಲ್ಲ.

ಮಕ್ಕಳ  ಪ್ರೀತಿಯ  ಹಣ್ಣುಗಳು:

  • ನಾವು ಮಕ್ಕಳಾಟಿಕೆಯಲ್ಲಿ  ಮಾಡಿದ ಕಾರುಬಾರುಗಳು ಅಷ್ಟಿಷ್ಟಲ್ಲ.
  • ಶಾಲೆಗೆ ಹೋದರೂ ನಮಗೆ ಚಿಂತೆ ಬೇರೊಂದರ ಮೇಲೆ.
  • ಶಾಲೆ ಹೋಗುವಾಗಲೂ , ಶಾಲೆ ಬಿಟ್ಟು ಬರುವಾಗಲೂ, ದಾರಿ ಬದಿಯ ಸುತ್ತ ಕಣ್ಣಾಡಿಸುತ್ತಾ,
  • ಕಾಟು ಮಾವಿನ ಹಣ್ಣು, ತಂಪಿನ ಹಣ್ಣು, ನೇರಳೆ, ಕುಂಟು ನೇರಳೆ, ಪುಚ್ಚೆ ಹಣ್ಣು,   (ಬೆಕ್ಕು ಕಣ್ಣಿನ  ಹಣ್ಣು), ಹೀಗೆ ಗಿಡ ಮರಗಳ ತಿನ್ನಬಹುದಾದ  ವಸ್ತುವನ್ನು  ತಿನ್ನುತ್ತಿದ್ದೆವು.
  • ಹೀಗೇ ಒಮ್ಮೆ  ಮಕ್ಕಳಾಟಿಕೆಯಲ್ಲಿ ತಂಪಿನ ಹಣ್ಣು ತಿಂದು  ತೇಗಿದ ಕತೆ ಹೇಳುತ್ತೇನೆ.

ನಮ್ಮ ಕಾಡು- ಹಣ್ಣುಗಳ ಬೀಡು :

  • ನಮ್ಮ ಮನೆಯ ಎದುರಿನ ದನ ಮೇಯುವ ಗುಡ್ಡವನ್ನು ಏರಿದರೆ ಸಿಗುವುದೇ ಒಂದು ಸಣ್ಣ ಕಾಡು.
  • ಈ ಕಾಡಿನಲ್ಲಿ ಒಂದು ಕಾಲದಲ್ಲಿ ಭಾರೀ ಹೆಬ್ಬಲಸಿನ, ಕರಿ ಮರಗಳ, ನಾಣೀಲಿನ (ಇಪ್ಪೆ), ಶಾಂತಿಯ, ರಾಮ ಪತ್ರೆಯ, ಪುನರ್ಪುಳಿಯ ಮರಗಳಿತ್ತು.
  • ವಾರದ ಪ್ರತೀ ಶನಿವಾರ ಮತ್ತು ಆದಿತ್ಯವಾರ ನದಿಯ ನೀರಿನಲ್ಲಿ ಈಜು  ಹೊಡೆಯದೆ ನಿದ್ರೆಯೇ ಬಾರದು.
  • ಹೊಳೆಗೆ ಹೋಗುವಾಗ ಎಲ್ಲಿ ತಿನ್ನಲು  ಸಿಗುತ್ತದೆ ಎಂಬುದರ ಮೇಲೆ ನಮ್ಮ ಕಣ್ಣು.
  • ಸುಮಾರಾಗಿ ಫೆಬ್ರವರಿಯಿಂದ ಎಪ್ರೀಲ್ ತನಕ ತಂಪಿನ ಹಣ್ಣು, ನಂತರ ನಾಣೀಲು ಹಣ್ಣು, ಹೆಬ್ಬಲಸಿನ ಹಣ್ಣು ಸಿಗುತ್ತದೆ.
  • ಚಳಿಗಾಲದಲ್ಲಿ ಶಾಂತಿ ಮರದ(Bahera, Terminalia  belerica) ಕಾಯಿಯನ್ನು ಒಡೆದಾಗ ಅದರೊಳಗೆ ಗೋಡಂಬಿ ತರಹದ ತಿರುಳು, ಯಾವುದೂ ಇಲ್ಲದಿದ್ದರೆ ಕೇಪಳ ಹಣ್ಣು, ನೆಕ್ಕರೆ ಹಣ್ಣು, ಮುಳ್ಳಂಕೋಲು ಇದ್ದೇ ಇರುತ್ತದೆ.

ಸಂಪೆ ಹಣ್ಣಿನ ಒಳಭಾಗ

ತಂಪಿನ ಹಣ್ಣು:

ಕಾಡಿನಲ್ಲಿ ದೊರೆಯುವ ತಂಪಿನಹಣ್ಣು ನೋಡಲು ಬಲು ಸುಂದರ. ಮರದ ತುಂಬೆಲ್ಲಾ ಹಣ್ಣುಗಳಾದರಂತೂ ಅದರ ಸೌಂದರ್ಯ ವರ್ಣನಾತೀತ. ತಂಪಿನ ಹಣ್ಣು ಎಂಬ ಹೆಸರು ತುಳು ಭಾಷೆಯದ್ದು. ಸಂಪೆ ಹಣ್ಣು ಸ್ವಲ್ಪ ಗ್ರಾಮ್ಯಕ್ಕೆ ತಿರುಗಿ ಈ ರೀತಿ ಆಗಿರಬಹುದು.

  • ಕನ್ನಡದಲ್ಲಿ ಇದನ್ನು ಸಂಪಿಗೆ ಹಣ್ಣು ಎಂಬುದಾಗಿ ಕರೆಯುತ್ತಾರೆ.
  • ಸಂಸ್ಕೃತದಲ್ಲಿ ವಿಕಂತಕ, ಹಿಂದಿಯಲ್ಲಿ ಚಂಪೇರಿ  ಎಂಬುದಾಗಿ ಕರೆಯುತ್ತಾರೆ.
  • ಇದರ ಸಸ್ಯ ಶಾಸ್ತ್ರೀಯ ಹೆಸರು ಪ್ಲಕೋರ್ಶಿಯಾ ಮೊಂಟಾನಾ  (Flacourtia Montana Garh) ಇದು ಪ್ಲಕೋರ್ಶಿಯೇಸೀ (Flacourtiaceae) ಕುಟುಂಬಕ್ಕೆ ಸೇರಿದೆ.
  • ಇದು ಹೆಚ್ಚು ಎತರಕ್ಕೆ ಬೆಳೆಯುವ ಸಸ್ಯವಲ್ಲ. ಸುಮರಾಗಿ 5-7 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.
  • ನಿತ್ಯ ಹಸುರು ಎಲೆಗಳಿರುವ ಸಸ್ಯ. ಕಾಂಡದಲ್ಲಿ  ಚೂಪಾದ  ಎರಡು ಇಂಚು ಉದ್ದದ ಗಟ್ಟಿ  ಮುಳ್ಳುಗಳಿರುತ್ತವೆ.
  • ಜನ ಹಿಂದೆ ಕಳ್ಳಕಾಕರು ಬಂದರೆ  ಆತ್ಮ ರಕ್ಷಣೆಗಾಗಿ ಇದರ  ಮುಳ್ಳುಗಳಿಂದೊಡಗೂಡಿದ ಕಾಂಡದ ಸುಮಾರು ಒಂದು ಮೀಟರ್ ಉದ್ದದ ದೊಣ್ಣೆ ಮಾಡಿ ಮನೆಯ ಬಾಗಿಲ ಸಂದಿಯಲ್ಲಿ  ಇಟ್ಟುಕೊಳ್ಳುತ್ತಿದ್ದರು.
  • ಗಿಡದಲ್ಲಿ ಚಿಕ್ಕ ಚಿಕ್ಕರೆಂಬೆಗಳು. ಈ ರೆಂಬೆಗಳ ತುಂಬಾ ಕಾಯಿಗಳಾಗುತ್ತವೆ. ಕಾಯಿಯ ಬಣ್ಣ ಎಳೆಯದಿರುವಾಗ ಹಸುರು.
  • ಹಣ್ಣಾದಾಗ ಕೆಂಪಿಗೆ ತಿರುಗುತ್ತದೆ. ಕೆಂಪು ಬಣ್ಣದ ಹಣ್ಣುಗಳು ತುಂಬಿರುವಾಗ ನೋಡಲು  ಮಿನಿ ಸೇಬಿನಂತೇ ಚಂದ.
  • ಈ ಸಸ್ಯದ ಮುಳ್ಳುಗಳನ್ನೂ ಲೆಕ್ಕಿಸದೇ ಅದರ ಮೇಲೇರಿ ಸಣಕಲು ಗೆಲ್ಲುಗಳನ್ನು  ಬಗ್ಗಿಸಿ ಹಣ್ಣು ತಿನ್ನುತ್ತಿದ್ದ ಮಜವೇ ಬೇರೆ.
  • ರುಚಿ ಹುಳಿ -ಒಗರು ಸಿಹಿ. ಒಳಗೆ ಎರಡೋ ನಾಲ್ಕು ಬೀಜಗಳು. ಬೀಜ ಸಮೇತ ತಿನ್ನುತ್ತಿದ್ದೆವು.
  • ಬೀಜದಿಂದ  ಅಭಿವೃದ್ದಿಯಾಗುವ ಸಸ್ಯ.  ಇದು ಉಷ್ಣ ಪ್ರಕೃತಿಯ ಹಣ್ಣು ಎಂಬುದಾಗಿ ಹಿರಿಯರು ಬಯ್ಯುತ್ತಿದ್ದರೂ ನಾವು ಹೊಟ್ಟೆ ತುಂಬಾ ತಿನ್ನುತ್ತಿದ್ದೆವು. ಏನೂ ಆಗುತ್ತಿರಲಿಲ್ಲ. ಹಣ್ಣು   ಮುಗಿಯುವ ತನಕ ದಿನಾ ತಿನ್ನುತ್ತಿದ್ದೆವು.
  • ಈ ಹಣ್ಣಿನಲ್ಲಿ ಹೃದಯದ ಶಕ್ತಿ ವರ್ಧಕ ಗುಣ ಇದೆ ಎಂಬುದಾಗಿ ಅಯುರ್ವೇದ ತಿಳಿದವರು ಈಗ ಬರೆಯುತ್ತಾರೆ.
  • ಇದನ್ನು ಕೆಲವರು ಚಬುಕಿನ ಹಣ್ಣು ಎಂಬುದಾಗಿಯೂ ಕರೆಯುತ್ತಾರೆ. ಇದರಲ್ಲಿ ಸಿಹಿ ರುಚಿಯ ಹಣ್ಣು ಕೊಡುವ ಸಸ್ಯಗಳು  ಇವೆ.

ಸಂಪಿಗೆ ಹಣ್ಣು ಗೊಂಚಲು

ಹಿಂದೆ ಹಳ್ಳಿಯ ಮಕ್ಕಳು ಮಕ್ಕಳಾಟಿಕೆಯ ಪೂರ್ಣ ಖುಷಿಯನ್ನು ಅನುಭವಿಸುವವರು.  ಓಡದ ಕಡೆಗಳಿಲ್ಲ, ಮಾಡದ ತಂಟೆಗಳಿಲ್ಲ, ಆಡದ ಆಟಗಳಿಲ್ಲ.  ಹೊಸ ತಲೆಮಾರಿನ ಮಕ್ಕಳಿಗೆ ಈ ಜೀವನಾನುಭವ ಇಲ್ಲದಾಗಿದೆ.
ನಮ್ಮ ಮಳೆ ಕಾಡುಗಳಲ್ಲಿ ಅದೆಷ್ಟು ಮಾನುಷ್ಯರು, ಪ್ರಾಣಿಗಳು ತಿನ್ನುವ ಹಣ್ಣುಗಳಿತ್ತು.  ಎಲ್ಲರೂ ಇದರಲ್ಲಿ ಪಾಲುದಾರರು. ಇವರೆಲ್ಲಾ ತಿಂದು ಹಾಕಿದ ಹಿಕ್ಕೆ ಯಲ್ಲಿ ಹುಟ್ಟಿ ಬೆಳೆದ ಸಸ್ಯಗಳು.
ಕ್ರಮೇಣ  ಕಾಡುಗಳಲ್ಲಿ ಈ ಸಸ್ಯಗಳು ಕಟ್ಟಿಗೆಗಾಗಿ ಕಡಿದು ನಾಶವಾದವು. ಕೆಲವು ರಬ್ಬರ ತೋಟ, ಅಡಿಕೆ ಕೃಷಿ ಮಾಡುವಾಗ ನಾಶವಾದವು. ಹಿಂದಿನವರು  ಬಯಲು ಶೌಚ ಮಾಡುತ್ತಿದ್ದ ಕಾರಣ ಅಲ್ಲೂ ಸಸ್ಯ ಹುಟ್ಟಿ ಬೆಳೆಯುತ್ತಿತ್ತು. ಈಗ ಕಾಡಿನಲ್ಲೂ ಇಲ್ಲ. ನಾಡಿನಲ್ಲೂ ಇಲ್ಲದ ಸ್ಥಿತಿ ಬಂದಿದೆ.
ಮೊನ್ನೆ ಹೀಗೆಯೇ ಮಕ್ಕಳಾಟಿಕೆಯನ್ನು ಬಿಡದ ಮನಸ್ಸು ತಂಪಿನ ಹಣ್ಣನ್ನು ಅರಸುತ್ತಾ ಕಾಡಿನತ್ತ ಸೆಳೆಯಿತು. ಕಾಡಿನ ಒಳೆಗೆ ಹೋದರೆ ಕಾಡಿನೊಳಗೆ ಹೋಗಲು ದಾರಿಯೇ ಇಲ್ಲ. . ಯಾವ ಪೆಜಕ್ಕಾಯಿಯ(ಹೆಬ್ಬಲಸು) ಮರವೂ ಇಲ್ಲ. ನಾಣೀಲಿನ(ಹಿಪ್ಪೆ) ಮರವೂ ಇಲ್ಲ. ರಣ, ಬ್ರಹ್ಮ ರಾಕ್ಷಸ ವಾಸಿಸುತ್ತಿರುವ ಮರವೆಂದು  ಹೇಳುತ್ತಿದ್ದ ಶಾಂತಿ(ತಾರೇಕಾಯಿ) ಮರವೂ ಇಲ್ಲ. ಎಲ್ಲಿ ಹುಡುಕಿದರೂ ತಂಪಿನ ಹಣ್ಣು ಗಿಡ ಸಿಗಲೇ ಇಲ್ಲ.!

ಇಂತಹ ಹಲವಾರು ಬಗೆಯ ಕಾಡಿನ ಹಣ್ಣುಗಳು ಈಗ ಅಳಿದು ಹೋಗಿದೆ. ನಮಗೆಲ್ಲಾ ಹಿರಿಯರ ಜೊತೆಗೆ ಕಾಡಿಗೆ ಹೋಗುವುದೆಂದರೆ ಅಲ್ಲಿ  ಅವರು ನಮಗೆ ಏನಾದರೂ  ಹಣ್ಣುಗಳನ್ನು ಹುಡುಕಿ ಕೊಟ್ಟಾರು ಎಂಬ ಕಾರಣಕ್ಕೆ. ಈಗಿನ ಮಕ್ಕಳಿಗೆ ಕಾಡು ಎಂದರೆ ಭಯ. ಕಾಡಿನಲ್ಲಿ ಮನುಷ್ಯ ತಿನ್ನುವ ಆರೋಗ್ಯಕರ ಹಣ್ಣುಗಳು ಇದ್ದವು ಎಂದರೆ ಯಾರೂ ನಂಬದ ಸ್ಥಿತಿ ಉಂಟಾಗಿದೆ.  ನಮ್ಮ ದುರಾಸೆ, ಸಂಬಂಧಿಸಿದವರ ನಿರ್ಲಕ್ಷ್ಯದಿಂದಾಗಿ  ಹಲವಾರು ಹಣ್ಣು ಹಂಪಲು ಸಸ್ಯ ಸಂಪತ್ತಿನ ಅವನತಿಗೆ ಕಾರಣವಾಯಿತು.

Leave a Reply

Your email address will not be published. Required fields are marked *

error: Content is protected !!