ನೋನಿ ಎಲ್ಲಾ ಕಡೆ ಬೆಳೆಯಬಹುದಾದ ಬೆಳೆ. ಇದರ ಇದಕ್ಕಿರುವ ಔಷಧೀಯ ಗುಣ ಅಪಾರ. ಇದರ ಆರೋಗ್ಯವರ್ಧಕ ಉತ್ಪನ್ನಗಳ ಬೆಲೆ ಭಾರೀ ದುಬಾರಿ. ಹಾಗೆಂದು ಬೆಳೆದವನಿಗೆ ಈ ಹಣ್ಣಿಗೆ ಕಿಲೋ 25 ರೂ ಸಹ ಸಿಗುತ್ತಿಲ್ಲ. ಹಣ್ಣಿಗೆ ಬೆಲೆ ಇಲ್ಲದಿದ್ದರೂ ಹಣ್ಣಿನ ಉತ್ಪನ್ನಗಳಿಗೆ ಭಾರೀ ಬೆಲೆ ಇದೆ. ಮೌಲ್ಯವರ್ಧನೆ ಮಾಡುವವರಿಗೆ ಬೆಳೆಸುವುದು ಸುಲಭ. ಉತ್ತಮ ಲಾಭವೂ ಇದೆ.
ನೋನಿ ಹಣ್ಣು ಬಗ್ಗೆ ಇತ್ತೀಚೆಗೆ ಜನರಲ್ಲಿ ಅರಿವು ಮೂಡಿದೆ. ಇದು ಹೊಸ ಹಣ್ಣು ಏನೂ ಅಲ್ಲ. ನಮ್ಮಲ್ಲಿ ಅಲ್ಲಲ್ಲಿ ಇದು ಕಳೆ ಸಸ್ಯವಾಗಿ ಬೆಳೆಯುತ್ತಿತ್ತು. ಈಗ ಅದರ ಔಷಧೀಯ ಗುಣದ ಬಗ್ಗೆ ಕೆಲವೊಂದು ಸಂಶೋಧನೆಗಳು ನಡೆದ ತರುವಾಯ, ಇದನ್ನು ಬೆಳೆಸಲು ಮುಂದಾಗಿದ್ದಾರೆ. ಇದರ ಆರೋಗ್ಯ ಪೇಯಗಳು ಇಂದು ಮಾರುಕಟ್ಟೆಯಲ್ಲಿ ಭಾರಿ ಸಂಚಲನವನ್ನು ಉಂಟು ಮಾಡಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಬಳಸುವ ಹಲವಾರೂ ಟಾನಿಕ್ ಗಳಲ್ಲಿ ಈ ನೋನಿ ಅಂಶ ಅಡಗಿದೆ.
- ನೋನಿ ಹಣ್ಣಿಗೆ ಸ್ಥಳೀಯ ಹೆಸರು ನೋನಾ, ನೋನಿ, ಮಡ್ಡಿ ಗಿಡ , ಹೆಡ್ಡೆಕ್ ಟ್ರೀ, ಮೋಮಿಟಿಗಾ ಪ್ರುಟ್ ಇಂಡಿಯನ್ ಮಲ್ಬೆರಿ ಎಂಬ ಹೆಸರುಗಳಿಂದ ಕರೆಯುತ್ತಾರೆ,
- ಇದರ ವೈಜ್ಞಾನಿಕ ಹೆಸರು ಮೊರಿಂಡಾ ಸಿಟ್ರಿಫ಼್ಹೋಲಿಯಾ.
- ರೂಬಿಯೇಸಿ ಕುಟುಂಬಕ್ಕೆ ಸೇರಿದೆ.
- ಡಾ ನೈಲ್ ಸೋಲೋಮನ್ ಎಂಬವನು ಇದರಲ್ಲಿ ಹಲವಾರು ಔಷಧೀಯ ಗುಣ ಇರುವ ಬಗ್ಗೆ ಸಂಶೋಧನೆ ನಡೆಸಿದ ತರುವಾಯ ಇದಕ್ಕೆ ಭಾರೀ ಮಹತ್ವ ಬಂತು.
- ಇದರ ಹಲವಾರು ಔಷಧೀಯ ಉತ್ಪನ್ನಗಳು ತಯಾರಾಗಲಾರಂಭಿಸಿದವು.
ಇದರ ಮೂಲ ಭಾರತ ದೇಶವೇ ಎನ್ನಲಾಗುತ್ತಿದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮತ್ತು ಸಮುದ್ರ ತೀರದ ಪ್ರದೇಶಗಳಲ್ಲಿ , ಇದರ ಸಸಿಗಳು ಶತಮಾನಗಳಿಂದಲೂ ಇದೆ. ಸ್ವಾಭಾವಿಕವಾಗಿ ಹುಟ್ಟಿ ಬೆಳೆಯುತ್ತಿವೆ. ಪೌರಾಣಿಕ ಔಷದೋಪಚಾರಕ್ಕೆ ಸಂಬಂಧಿಸಿದ ಗ್ರಂಥಗಳಲ್ಲೂ ಇದರ ಉಲ್ಲೇಖ ಇದ್ದು ಇದರಿಂದ ಹಲವಾರು ಜೀವ ಸಂರಕ್ಷಕ ಔಷಧಿಗಳನ್ನು ತಯಾರಿಸಬಹುದು ಎಂಬ ಉಲ್ಲೇಖ ಇದೆ. ತುಳಸಿ ಮತ್ತು ಬಿಲ್ವಗಳ ಜೊತೆಗೆ ಇದನ್ನೂ ಸಹ ದೇವಾಲಯಗಳ ಆವರಣದಲ್ಲಿ ಬೆಳೆಯಲಾಗುತ್ತಿತ್ತು ಎಂಬ ಬಗ್ಗೆ ಕೆಲವು ಕಡೆ ಮಾಹಿತಿಗಳು ಲಭ್ಯವಾಗುತ್ತವೆ.
ಬೆಳೆಸುವುದು ಹೇಗೆ?
- ನೋನಿ ಸಸ್ಯವನ್ನು ಬೀಜ ಬಿತ್ತನೆ ಮಾಡುವ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತದೆ.
- ಒಂದೊಂದು ಹಣ್ಣಿನಲ್ಲಿ ನೂರಾರು ಬೀಜಗಳಿರುತ್ತವೆ.
- ಇರುವೆಗಳಿಂದ ಹಾನಿಯಾಗದಂತೆ ರಕ್ಷಿಸಿ ಮೊಳಕೆ ಬರಿಸಿದರೆ 80% ಮೊಳಕೆ ಒಡೆಯುತ್ತದೆ.
- ಸಸಿ ನೆಟ್ಟು 2 ವರ್ಷಕ್ಕೆ ಫಲಕೊಡಲು ಪ್ರಾರಂಭವಾಗುತ್ತದೆ.ಹತಾರು ವರ್ಷ ಬದುಕಿರುತ್ತದೆ.
- ಮರ ಬೆಳೆದಂತೆ ಇಳುವರಿ ಹೆಚ್ಚು. ಯಾವುದೇ ರೋಗ ಇಲ್ಲ. ಕೀಟ ಇಲ್ಲ.
- ಸಾಮಾನ್ಯ ಫವತ್ತಾದ ಭೂಮಿಯಲ್ಲೂ ಬೆಳೆಯಬಹುದು.
- ಬೇಸಿಗೆಯಲ್ಲಿ ನೀರಾವರಿ ಬೇಕು. ನೆಟ್ಟು ಒಂದು ವರ್ಷದ ತನಕ ಸ್ವಲ್ಪ ನಿಗಾ ವಹಿಸಿದರೆ ಸಾಕು.
- ನಂತರ ಆದರಷ್ಟಕ್ಕೆ ಬೆಳೆಯುತ್ತಿರುತ್ತದೆ. ಕಡಿದರೂ ಚಿಗುರಿಕೊಂಡು ಬೆಳೆಯುತ್ತದೆ.
ಈ ಹಣ್ಣಿನಲ್ಲಿದೆ ವಿಶಿಷ್ಟ ಔಷಧಿ ;
- ನೋನೀ ಹಣ್ಣಿನಲ್ಲಿ ಪ್ರೋ-ಝಿರೋ ನೈನ್ ಎಂಬ ಅಂಶ ಇದೆ. ಇದು ಮೈ ,ಶರೀರಕ್ಕೆ ಸೇರಿದೊಡನೆ ಕರುಳಿನಲ್ಲಿರುವ ಕಿಣ್ವಗಳ ಜೊತೆಗೆ ರಾಸಾಯನಿಕ ಸಂಯೋಜನೆ ಹೊಂದಿ ಅದು ಝೀರೋ ನೈನ್ ಆಗಿ ರೂಪಾಂತರಗೊಳ್ಳುತ್ತದೆ.
- ನಮ್ಮ ದೇಹದ ಬಹಳಷ್ಟು ಪ್ರೋಟೀನುಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಝಿರೋ ನೈನ್ ಅತ್ಯವಶ್ಯಕ.
- ಇದಷ್ಟೇ ಅಲ್ಲದೆ ಈ ಹಣ್ಣುಗಳಲ್ಲಿ ಎ, ಬಿ ಬಿ2, ಬಿ 6 ಬಿ 12, ಸಿ ಮತ್ತು ಇ ಜೀವಸತ್ವಗಳು ಕ್ಯಾಲ್ಸಿಯಂ, ಕಬ್ಬಿಣ , ಖನಿಜಗಳು ಮತ್ತು ಅಮೈನೋ ಆಮ್ಲಗಳು, ಜೊತೆಗೆ 150 ಕ್ಕೂ ಹೆಚ್ಚು ಉಪಯುಕ್ತ ರಾಸಾಯನಿಕಗಳು ಇರುವ ಕಾರಣ ಇದು ಒಂದು ಆಂಟೀ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತವೆ.
- ಇದರ ಔಷಧೀಯ ಗುಣಗಳು ಅಪಾರ. ಇದರ ನಿಯಮಿತ ಸೇವನೆಯಿಂದ ದೇಹದ ಮೂಲಭೂತ ರಚನೆಗಳಾದ ಜೀವ ಕೋಶಗಳು ಪುನಶ್ಚೇತನಗೊಳ್ಳುತ್ತವೆ.
- ರಕ್ತ ಶುದ್ಧಿಯಾಗುತ್ತದೆ. ಜೀರ್ಣ ಕ್ರಿಯೆ ಉತ್ತಮವಾಗುತ್ತದೆ.
- ಕೂದಲು ಮತ್ತು ಚರ್ಮದ ಆರೋಗ್ಯ ಸುಧಾರಿಸುತ್ತದೆ.
- ದೇಹದ ನಿರೋಧಕ ಶಕ್ತಿ ಹೆಚ್ಚುತ್ತದೆ. ಸ್ಮರಣ ಶಕ್ತಿ, ಮತ್ತು ಏಕಾಗ್ರತೆ ಹೆಚ್ಚುತ್ತದೆ.
- ರಕ್ತದ ಒತ್ತಡ ಸಮತೋಲನದಲ್ಲಿರುತ್ತದೆ. ದೇಹದ ಬೊಜ್ಜು ಕರಗುತ್ತದೆ.
- ನಿದ್ರಾಹೀನತೆ ದೂರವಾಗಿ ಸ್ತ್ರೀಯರ ಋತು ಚಕ್ರ ಸಮಸ್ಯೆ ನಿವಾರಣೆಯಾಗುತ್ತದೆ.
- ಇದಲ್ಲದೆ ಏಡ್ಸ್ ನಂತಹ ಖಾಯಿಲೆಗಳೂ ಸಹ ಈ ಹಣ್ಣಿನ ಬಳಕೆಯಿಂದ ಸೊರಗುತ್ತದೆ.
- ಇದರ ಹಣ್ಣು ವಾಸನೆಯಿಂದ ಕೂಡಿದೆ. ಆದರೂ ಇದನ್ನು ಸಂಸ್ಕರಿಸಿದಾಗ ಯಾವ ವಾಸನೆಯೂ ಗೊತ್ತಾಗುವುದಿಲ್ಲ.
ಬೆಳೆದವನಿಗೆ ಆಕರ್ಷಕ ಬೆಲೆ ಇಲ್ಲ:
- ಬಹುತೇಕ ಔಷಧಿ ಮಾರಾಟಮಾಡುವ ಅಂಗಡಿಗಳಲ್ಲಿ ನೋನಿ ಹಣ್ಣಿನ ಬೇರೆ ಬೇರೆ ತಯಾರಿಕೆಗಳು ಸಿಗುತ್ತವೆ.
- ಆಕರ್ಷಕ ಪ್ಯಾಕಿಂಗ್ನಲ್ಲಿ ಲಭ್ಯ. ಮಾಧ್ಯಮಗಳಲ್ಲಿ ಕೇಳಿಬರುವ ಅದರ ಜಾಹೀರಾತುಗಾನ್ನು ನೋಡಿದರೆ ಅದು ಎಲ್ಲಾ ನಮೂನೆಯ ಖಾಯಿಲೆಗಳಿಗೆ ರಾಮಬಾಣವೆನ್ನುತ್ತಾರೆ.
- ಅದೆಲ್ಲಾ ನಿಜ. ನೋನಿ ಹಣ್ಣಿನ ಔಷಧೀಯ ಗುಣ ಅಪಾರ
- ದುರದೃಷ್ಟ ಎಂದರೆ ಬೆಳೆದವನಿಗೆ ಸಿಗುವ ಆದಾಯ ಏನೇನೂ ಸಾಲದು.
- ಉತ್ತಮ ತಳಿಯ ಗಿಡ ವರ್ಷಕ್ಕೆ 50 ಕಿಲೋ ಗೂ ಹೆಚ್ಚು ಇಳುವರಿ ಕೊಡಬಲ್ಲುದು. ಅಂತರ ಬೆಳೆಯಾಗಿಯೂ ಬೆಳೆಸಬಹುದು.
ಆಕರ್ಷಕ ಬೆಲೆ ಇಲ್ಲದಿರುವುದು ಒಂದು ದುರಂತ.ಪ್ರಪಂಚದಾದ್ಯಂತ ಇದರ ಬೆಳೆ ಇದೆ. ಬಳಕೆ ಇದೆ. ನಮ್ಮಲ್ಲೂ ಇದನ್ನು ಆಕರ್ಷಕ ಬೆಲೆಗೆ ಕೊಳ್ಳುವ ಸ್ಥಿತಿ ಉಂಟಾದರೆ ಬೆಳೆಗಾರರಿಗೆ ಅನುಕೂಲ. ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದು. ಬದುಗಳಲ್ಲಿ ಬೆಳೆಯಬಹುದು. ಮಂಗಗಳು ಅಳಿಲುಗಳ ಕಾಟ ಇಲ್ಲ.