ಹಾಡೆಬಳ್ಳಿಗೂ ಬಂತು ನೋಡಿ ರಾಜಯೋಗ- ಇದು ಕ್ಯಾನ್ಸರ್ ಗೆ ಔಷಧಿಯಂತೆ.

ಹಾಡೆ ಬಳ್ಳಿ ಎಲೆ

ಕೆಲವೊಮ್ಮೆ ನಮ್ಮ ಕಾಲ ಬುಡದಲ್ಲೇ ಚಿನ್ನ ಇರುತ್ತದೆ. ಅದು ನಮಗೆ ಬೇರೆಯವರು ಹೇಳದ ವಿನಹ ಗೊತ್ತೇ ಆಗುವುದಿಲ್ಲ. ಹಾಗೆಯೇ ನಮ್ಮ ಕಾಲಬುಡದಲ್ಲೇ ಇರುವ ಒಂದು ಕಳೆಯಂತಿರುವ ಹಾಡೆ ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಗುಣ ಪಡೆದ ಬಳ್ಳಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಇದಕ್ಕೆ ಪೇಟೆಂಟ್ ಸಹ ದೊರೆತಿದೆ. ಇದು ಮುಂದೆ ಭಾರೀ ಮೌಲ್ಯದ ಸಸ್ಯವಾದರೂ ಅಚ್ಚರಿ ಇಲ್ಲ.

ಕರಾವಳಿ ಮಲೆನಾಡಿನಲ್ಲೆಲ್ಲಾ ಕಾಡು ಬಳ್ಳಿಯಾಗಿ ಕಾಣಸಿಗುವ ಒಂದು ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಪಟ್ಟ ಸಿಕ್ಕಿದೆ. ಸಹಸ್ರ ಮಾನಗಳಿಂದ ಲಾಗಾಯ್ತು ಹಳ್ಳಿಯ ಜನ ಈ ಬಳ್ಳಿಯ ಎಲೆ, ಬೇರು ಹಣ್ಣುಗಳನ್ನು ಬೇರೆ ಬೇರೆ ಅಸ್ವಾಸ್ತ್ಯಗಳಿಗೆ ಔಷಧಿಯಾಗಿ ಬಳಸುತ್ತಿದ್ದರಾದರೂ ಅದು ನಾಟಿ ಪದ್ದತಿಯಾಗಿತ್ತು. ಈಗ ಅದಕ್ಕೆ ವೈಜ್ಞಾನಿಕ ಮುದ್ರೆ ಸಿಕ್ಕಿದೆ. ಇದನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಿ ಗುಣಪಡಿಸಬಹುದು ಎಂಬುದಾಗಿ ಮಂಗಳೂರು ವಿಶ್ವ ವಿಧ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಆದ ಕೆ.ಆರ್. ಚಂದ್ರಶೇಖರ್ ಮತ್ತು ಅವರ ತಂಡ ಸಂಶೋಧನೆ ನಡೆಸಿ ಅದಕ್ಕೆ ಪೇಟೆಂಟ್ ಸಹ ಪಡೆದಿದ್ದಾರಂತೆ. ಈಗ ಬಗ್ಗೆ ಪತ್ರಿಕೆಗಳು ವರದಿ ಮಾಡುತ್ತಿವೆ.

 • ನಮ್ಮ ಹಳ್ಳಿಗಳು ಔಷಧೀಯ ಸಸ್ಯಗಳ ಘನಿಯನ್ನೇ ಹೊಂದಿವೆ ಎಂದರೂ ಅಚ್ಚರಿ ಇಲ್ಲ.
 • ಆದೆಲ್ಲವೂ ಎಲ್ಲಿ ಇದೆಯೋ ಅಲ್ಲೇ ಬಳಕೆಯಾಗುತ್ತಾ ವೈಜ್ಞಾನಿಕ ಬೆಳವಣಿಗೆಯ ಸುಂಟರಗಾಳಿಯಲ್ಲಿ ದೂರವಾಗಿವೆ.
 • ಹಳ್ಳಿಯ ಕೆಲವು  ಔಷಧೀಯ ಸಸ್ಯಗಳನ್ನು  ಕೆಲವರು ವಿದೇಶೀ ಫಂಡಿಂಗ್ ನಲ್ಲಿ ದಾಖಲಾತಿ ಮಾಡಿ ಅದರ ವರದಿಯನ್ನು ವಿದೇಶಗಳಿಗೆ ಮಾರಿದ್ದು ಇದೆ ಎಂಬ ಸುದ್ದಿಗಳೂ ಇವೆ.
 • ಏನೇ ಆದರೂ ಹಳ್ಳಿಯವರ ತಿಳುವಳಿಕೆಗೆ ವೈಜ್ಞಾನಿಕ ಮುದ್ರೆ ಬೀಳದಿದ್ದರೆ ಅದು ಮುಡಿಯುವವರಿಲ್ಲದ ಹೂಮಾಲೆಯಂತೆ ಎಂಬುದಂತೂ ಸತ್ಯ.
ಹಾಡೆ ಬಳ್ಳಿಯ ಎಲೆ ರಚನೆ

ಹಾಡೆ ಬಳ್ಳಿ ಸಸ್ಯ ಮತ್ತು ಔಷಧೋಪಚಾರ:

 • ಹಾಡೆ ಬಳ್ಳಿ   Cyclea peltata  ಎಂಬುದು ಕರಾವಳಿ ಮಲೆನಾಡಿನ ಗುಡ್ದ ಕಾಡುಗಳಲ್ಲಿ, ಕಂಡು ಬರುವ ಒಂದು ಕಲೆ ಬಳ್ಳಿ ಎಂದೇ ಹೇಳಬಹುದು. Botanical Name— Cissampelos parieta Linn. (North India) Cyclea peltata (south India )
 • ಯಾವುದಾದರೂ ಸಸ್ಯದ ಆಧಾರದಲ್ಲಿ ಏರಿ ಬೆಳೆಯುವ ಈ  ಬಳ್ಳಿಯನ್ನು ಹಳ್ಳಿಯಲ್ಲಿ ಜನ ಅನಾದಿ ಕಾಲದಿಂದಲೂ ಒಂದು ಔಷಧಿ ಸಸ್ಯವಾಗಿಯೇ ಪರಿಗಣಿಸಿದ್ದರು.
 • ಇದರ ಬಳ್ಳಿಗಿಂತ ಬೇರು ದಪ್ಪ. ಆಳಕ್ಕೆ ಇಳಿಯುತ್ತದೆ.
 • ಬೇರನ್ನು ಅಗೆದು ಅದನ್ನು ಜಜ್ಜಿ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕಾಲು ಒಡೆಯುವ ತೊಂದರೆಯುಳ್ಳವರು ಕಾಲಿಗೆ (ಪಾದ) ಹಚ್ಚಿಕೊಂಡರೆ ಕಾಲು ಒಡೆಯುವ  ಹಾಗೂ ಮಳೆಗಾಲದಲ್ಲಿ ಕಾಲಿನ  ಚರ್ಮ ಕ್ಕೆ ಅಗುವ ಹಾನಿ( ಕ್ರಿಮಿ ತಿನ್ನುವುದು, ಇದು ಒಂದು ಶಿಲೀಂದ್ರದ ತೊಂದರೆ) ವಾಸಿಯಾಗುತ್ತದೆ.
 • ಹಳ್ಳಿಯಲ್ಲಿ ಕೆಲವರು ಗಾಯದ ಎಣ್ಣೆ ಮಾಡುವಾಗ ಇದನ್ನೂ ಸೇರಿಸುವುದು ರೂಢಿಯಲ್ಲಿದೆ. 
 • ತೀರಾ ಕಹಿಯಾದ ಇದು ಕ್ರಿಮಿಘಾತಿನಿ ಆಗಿ ಕೆಲಸ ಮಾಡುತ್ತದೆ.
 • ಹಾಡೆ ಬಳ್ಳಿ ಒಂದು ಜಂತು ಹುಳು ನಾಶಕ ಔಷಧಿ.
ಹಾಡೆ ಬಳ್ಳಿಯಲ್ಲಿ ಹಣ್ಣುಗಳು

ಹಾಡೆ ಬಳ್ಳಿಯ ಎಲೆಯನ್ನು ಜಜ್ಜಿ ಅದನ್ನು ಪಾನಕ ಮಾಡಿ ಸ್ವಲ್ಪ ಬೆಲ್ಲದ ಜೊತೆಗೆ ಸೇರಿಸಿ ಕುಡಿದರೆ ದೇಹದ ಉಷ್ಣ ತಗ್ಗುತ್ತದೆ ಎಂದು ಹಳ್ಳಿಯಲ್ಲಿ ಇದನ್ನು ಮಾಡುವುದು ಇದೆ.  ಎಲೆ ಹಿಚುಕಿದಾಗ ಇದು ದಪ್ಪವಾಗುತ್ತದೆ.  ಹೊಟ್ಟೆ ಹುಳದ ನಿವಾರಣೆಗೂ ಆಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

 • ಈ ಎಲೆಗೆ ಭಾರೀ ತಂಪು ಕೊಡುವ ಗುಣ ಇದೆ.
 • ಕಣ್ಣು ಉರಿ ಇತ್ಯಾದಿ ಸಮಸ್ಯೆ ಉಳ್ಳವರು ಈ ಬಳ್ಳಿಯ ಎಲೆಯನ್ನು ತಂದು ಶುದ್ಧವಾಗಿ ಜಜ್ಜಿ ಸಣ್ಣಗೆ ಮಾಡಿ ಅದನ್ನು ಇಂದು ಮರದ ಮಣೆ ಅಥವಾ ಇನ್ಯಾವುದಾದರೂ ಸ್ವಚ್ಚವಾದ ವಸ್ತುವಿನ ಮೇಲೆ ಸಣ್ಣ ದೋಸೆಯ  ತರಹ ಹೊಯ್ದು, ಕೆಲವು ನಿಮಿಷ ಬಿಟ್ಟಾಗ ಅದು ದೋಸೆಯಂತೆ ತೆಗೆಯಲು ಬರುತ್ತದೆ.
 • ಇದನ್ನು ಕಣ್ಣಿನ ಮೇಲೆ ಇಟ್ಟು –  5-10 ನಿಮಿಷಗಳ ಕಾಲ ಮಲಗಿದರೆ ಕಣ್ಣು ಮತ್ತೆ ತಿಂಗಳ ತನಕವೂ ಉರಿ ಬರುವುದಿಲ್ಲ.

ಇದಕ್ಕೆ ಉತ್ತಮ ಜೀರ್ಣಕಾರಿ ಗುಣ ಇದೆ ಎಂದು ಗುರುತಿಸಲಾಗಿದೆ. ಹೊಟ್ಟೆಯ ಹುಣ್ಣು ಸಹ ಇದರಿಂದ ವಾಸಿಯಾಗುತ್ತದೆ ಎನ್ನಲಾಗುತ್ತಿದೆ. ಮೂತ್ರ ಸಂಬಂಧಿತ ಸಮಸ್ಯೆಗೂ ಸಹ ಇದು ಮೂತ್ರ ವರ್ಧಕವಾಗಿ ಕೆಲಸ ಮಾಡುತ್ತದೆ ಎಂಬ ವರದಿಗಳಿವೆ. ಇದನ್ನು ಹಸಿ ಸೊಪ್ಪನ್ನು ಅರೆದು ಹಾಗೂ ಹಸಿ ಸೊಪ್ಪನ್ನು  ನೆರಳಿನಲ್ಲಿ ಒಣಗಿಸಿ ಹುಡಿ ಮಾಡಿ ಬಳಕೆ ಮಾಡಬಹುದು.

ಬಳ್ಳಿಯಲ್ಲಿ ದ್ರಾಕ್ಷಿ ಗೊಂಚಲಿನ ತರಹ ಕಾಯಿಗಳಾಗುತ್ತವೆ.ಇದು ಹಣ್ಣಾಗುವಾಗ ಬಿಳಿ ಬಣ್ಣ ಬರುತ್ತದೆ. ನೋಡಲು ಮಿನಿ ದ್ರಾಕ್ಷೆ ಗೊಂಚಲಿನ ತರಹವೇ ಇರುತ್ತದೆ. ಈ ಸಸ್ಯವನ್ನು ಬಹಳ ಹಿಂದೆಯೇ ಆಯುರ್ವೇದ ವಿಶ್ವಕೋಶವು ಒಂದು ಅಮೂಲ್ಯ ಔಷಧೀಯ ಸಸ್ಯವಾಗಿ ಗುರುತಿಸಿ ದಾಖಲಿಸಿದೆ. ಇವರು ಇದು ಉತ್ತಮ ಗಾಯ ಗುಣಪಡಿಸುವ ಶಕ್ತಿ ಹೊಂದಿದೆ ಎಂದು ಕಂಡುಕೊಂಡಿದ್ದಾರೆ. ಹಾವಿನ ಕಡಿತಕ್ಕೂ ಇದನ್ನು ಬಳಸುವ ಬಗ್ಗೆ ಉಲ್ಲೇಖ ಇದೆ.

ನಾಶ ಮಾಡಲಿಕ್ಕೆ ಆಗದ ಏರು ಬಳ್ಳಿ

ಕ್ಯಾನ್ಸರ್ ನಿವಾರಣೆಗೆ ಬಳಕೆ:

 • ಪತ್ರಿಕಾ ವರದಿಗಳ ಪ್ರಕಾರ ಕ್ಯಾನ್ಸರ್ ನಿವಾರಣೆಗೆ ಭಾರತದಿಂದ ಮೊದಲಾಗಿ ಸಂಶೋಧಿಸಲ್ಪಟ್ಟ ಔಷಧಿ  ಇದಂತೆ.
 • ಇದರ ಒಂದು ಭಾಗದಲ್ಲಿ ಈ ಗುಣ ಇದೆಯಂತೆ. ಭಾರತದಲ್ಲಿ ಈ ಗಿಡದ ಬಗ್ಗೆ ಈ ತನಕ ಸಂಶೋಧನೆ ನಡೆಸಿಯೇ ಇಲ್ಲವಂತೆ.
 • ಸ್ತನದ ಕ್ಯಾನ್ಸರ್ ಮತ್ತು ಮೇದೋಜೀರಕಾಂಗದ ಕ್ಯಾನ್ಸರ್ breast and pancreatic cancer  ಗುಣಪಡಿಸಲು ಆಗುತ್ತದೆ ಎಂಬ ವರದಿ ಇದೆ.
 • ಸಂಶೋಧನಾ ಪ್ರಬಂಧದ ಕುರಿತಾಗಿ ಉಲ್ಲೇಖ ಇದೆಯೇ ಹೊರತು ಈ ಬಳ್ಳಿಯ ಯಾವ ಸಾರಂಶ (Alkaloids) ನಲ್ಲಿ ಕ್ಯಾನ್ಸರ್ ನಿವಾರಕ ಗುಣ ಇದೆ ಎಂಬ ಬಗ್ಗೆ ವರದಿಗಳಿಲ್ಲ.
 • ಬಹುಶಃ ಇದು ಗೌಪ್ಯ ವಿಚಾರವಾಗಿರಬೇಕು. ಯಾಕೆಂದರೆ ಇಂತದ್ದನ್ನು ಪೂರ್ತಿ ಬಿಚ್ಚಿ ಹೇಳುವ ಕ್ರಮ ಇಲ್ಲ.

ನಮ್ಮ ಹಳ್ಳಿಗೆ ಇದು ಒಂದು ಕೀರ್ತಿ :

ಹಾಡೆ ಬಳ್ಳಿಯ  ಔಷಧೀಯ ಗುಣ ನಮ್ಮ ಹಳ್ಳಿಯ ಒಂದು ಸಸ್ಯಕ್ಕೆ ಸಿಕ್ಕಂತ ಒಂದು ಕಿರೀಟ ಎಂದೇ ಹೇಳಬಹುದು. ಹಳ್ಳಿಯವರು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದ ಔಷದೋಪಚಾರಕ್ಕೂ ಒಂದು  ತಳಹದಿ ಇದೆ ಎಂದಾಯಿತು. ಮುಂದೆ ಈ ಸಸ್ಯಕ್ಕೆ ಭಾರೀ ಬೇಡಿಕೆ ಬರಲೂ ಸಾಧ್ಯವಿದೆ.  ಇಂತಹ ಹಲವಾರು ಆಂಟಿಬಯೋಟಿಕ್ ಗುಣ ಹೊಂದಿದ, ಹಾಗೆಯೇ ಬೇರೆ ಬೇರೆ ಔಷದೀಯ ಗುಣ ಹೊಂದಿದ ಸಸ್ಯ ಸಂಪತ್ತು ನಮ್ಮಲ್ಲಿದೆ. ಇವುಗಳ ದಾಖಲಾತಿ, ಗುರುತಿಸುವಿಕೆಗೆ ದೇಶದ ಸಂಸ್ಥೆಗಳಿಗೆ ಬಿಟ್ಟು ಯಾವುದೇ ಸರಕಾರೇತರ  ವಿದೇಶೀ ಅನುದಾನದ ಸಂಸ್ಥೆಗಳಿಗೆ ಅವಕಾಶ ಕೊಡಬೇಡಿ. ಇದು ವಿದೇಶಿಯರ ಪಾಲು ಆದರೂ ಅಗಬಹುದು.

Leave a Reply

Your email address will not be published. Required fields are marked *

error: Content is protected !!