ಹೈನುಗಾರಿಕೆ ಎಂಬುದು ನಿತ್ಯ ಆದಾಯ ಕೊಡುವ ಕಸುಬು ಎಂದು ಕೆಲವು ಉತ್ಸಾಹಿಗಳು ಈ ಕ್ಷೇತ್ರಕ್ಕೆ ಇಳಿಯುತ್ತಾರೆ. ಹೈನುಗಾರಿಕೆ ರಂಗಕ್ಕೆ ಪ್ರವೇಶ ಸುಲಭ. ನಿರ್ಗಮನ ಮಾತ್ರ ಬಹಳ ಕಷ್ಟ. ಹೈನುಗಾರಿಕೆಗೆ ಹೇಗೆ ಇಳಿಯಬೇಕು, ಹೇಗೆ ನಷ್ಟ ಇಲ್ಲದೆ ಇದನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಬಗ್ಗೆ ರೈತರೊಬ್ಬರ ಅನುಭವದ ಸಲಹೆಗಳು ಇವು.
ನಾವೆಲ್ಲಾ ಕೆಲವು ಪತ್ರಿಕೆಗಳಲ್ಲಿ ಓದುತ್ತೇವೆ.ಸಾಪ್ಟ್ವೇರ್ ಉದ್ಯೋಗ ತ್ಯಜಿಸಿ ಹೈಟೆಕ್ ಡೈರಿ ಮಾಡಿದ ಕಥೆ. ಹಾಗೆಯೇ ಹೈನುಗಾರಿಕೆಯ ತಜ್ಞರ ಪಟ್ಟಕ್ಕೆ ಏರಿಸಿದ ಸುದ್ದಿಯನ್ನೂ ಓದುತ್ತೇವೆ. ಇದು ಅವರು ಹೈನುಗಾರಿಕೆಗೆ ಇಳಿಯುವಾಗಿನ ಸುದ್ದಿ ಆಗಿರುತ್ತದೆ. ಒಂದೆರಡು ವರ್ಷ ಬಿಟ್ಟು ಆ ಡೈರಿಯನ್ನು ನೋಡಲು ಹೋದರೆ ಅಲ್ಲಿ ಪಳೆಯುಳಿಕೆಗಳೇ ಸಿಗುತ್ತವೆ. ಅವರು ಡೈರಿ ಗಿರಿ ಬಿಟ್ಟು ಮತ್ತೆ ಪುನಹ ಅದೇ ಹಿಂದಿನ ಕ್ಷೇತ್ರಕ್ಕೆ ಹೋದರು ಎಂಬ ಸುದ್ದಿ ಮಾತ್ರ ಸಿಗುತ್ತದೆ. ಯಾಕೆ ಹೀಗಾಗುತ್ತದೆ?
- ಇಲ್ಲೊಬ್ಬರು ಶ್ರೀ ಪ್ರಭಾಕರ ಹೆಗ್ಡೆ ಎಂಬವರು ಕಳೆದ 40 ವರ್ಷಗಳಿಂದ ಹಸು ಸಾಕಣೆ ಮಾಡುತ್ತಾ ಅದರಲ್ಲಿ ನಷ್ಟ ಆಗುವುದಿಲ್ಲ. ಭಾರೀ ಲಾಭವಿಲ್ಲ. ಅದನ್ನು ಬಿಟ್ಟು ಹೋಗಬೇಕೆಂಬಷ್ಟು ಕಷ್ಟ ಇಲ್ಲ ಎನ್ನುತ್ತಾರೆ.
- ಇವರು ಡೈರಿ ಪ್ರಾರಂಭಿಸಿದ ರೀತಿ, ಅದನ್ನು ಮುಂದುವರಿಸಿಕೊಂಡು ಬಂದ ಕ್ರಮ, ಡೈರಿಯಿಂದ ಇತರ ಪ್ರಯೋಜನಗಳನ್ನು ಪಡೆದುಕೊಂಡ ಬಗೆ ಬಹುಷಃ ಹೊಸತಾಗಿ ಡೈರಿ ಮಾಡುವವರಿಗೆ ಸಹಾಯಕವಾಗಬಹುದು.
- ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು, ನಿಟ್ಟಡೆ ಗ್ರಾಮದಲ್ಲಿ ಇವರ ಡೈರಿ ಇದೆ.
ಅನುಭವ ಇಲ್ಲದ ಕ್ಷೇತ್ರಕ್ಕೆ ಹೇಗೆ ಇಳಿಯಬೇಕು?
- ನಾವು ಯಾವುದೇ ವೃತ್ತಿ ಕ್ಶೇತ್ರಕ್ಕೆ ಇಳಿಯುವುದಾದರೂ ಮೊದಲಾಗಿ ಅದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು.
- ಒಂದು ಅಂಗಡಿ ಮಾಡುವುದಿದ್ದರೂ ಅಂಗಡಿ ಮಾಡಿದವನ ಜೊತೆ ಸ್ವಲ್ಪ ಸಮಯ ಕೆಲಸಕ್ಕಾದರೂ ಸೇರಿ ಅನುಭವ ಸಂಪಾದಿಸಿಕೊಳ್ಳಬೇಕು.
- ಹಾಗೆಯೇ ಹೈನುಗಾರಿಕೆಯೂ. ಮೊದಲಾಗಿ ಮಾಡಿದವರನ್ನು ಸಂಪರ್ಕಿಸಿ ಅಲ್ಲಿನ ಸೂಕ್ಷ್ಮಗಳನ್ನು ನೋಡಿ.
- ಯಶಸ್ವಿಯಾದವರನ್ನೂ ಗಮನಿಸಿ, ಕೈಸುಟ್ಟುಕೊಂಡವರ ಕಥೆಯನ್ನೂ ಕೇಳಿ. ಕೊನೆಗೆ ಯೋಚಿಸಿ ತೀರ್ಮಾನಕ್ಕೆ ಬರಬೇಕು.
- ಪ್ರಾರಂಭದಲ್ಲಿ ಒಂದು ಎರಡು ಹಸು ಕಟ್ಟಬೇಕು. ಹಸುಗಳು ಸ್ಥಳೀಯ ತಳಿಗೆ ಕ್ರಾಸ್ ಮಾಡಿದ್ದು ಆದರೆ ಉತ್ತಮ.
- ಮೊದಲು ಅಧಿಕ ಹಾಲು ಸಿಗಬೇಕು ಎಂದು 50-60 ಸಾವಿರ ಕೊಟ್ಟು ದೂರದ ಊರಿನಿಂದ ಹಸುಗಳನ್ನು ತರುವುದಲ್ಲ.
- ಸ್ಥಳೀಯವಾಗಿ ಕಡಿಮೆ ಬೆಲೆಗೆ ಸಿಗುವ ಹಸುಗಳನ್ನು ತಂದು ಅದಕ್ಕೆ ಉತ್ತಮವಾಗಿ ಆಹಾರ ಕೊಟ್ಟು ಸಾಕಬೇಕು.
- ಸ್ಥಳೀಯವಾಗಿ ಕ್ರಾಸ್ ಬ್ರೀಡ್ ದನಗಳು, ಕರು ಹಾಕಲು ಸಿದ್ದವಾದ ಪೆಡ್ಡೆಗಳು 10-12 ಸಾವಿರದ ಒಳಗೆ ಸಿಗುತ್ತದೆ.
- ಒಂದೆರಡು ದನ ಕಟ್ಟಿ ಅದಕ್ಕೆ ಬೇಕಾದಷ್ಟು ಮೇವು, ಆಹಾರ ಕೊಟ್ಟು ಸಾಕಿ.ಅದರಲ್ಲಿ ಹುಟ್ಟುವ ಕರುಗಳನ್ನೂ ವಯಸ್ಸಿಗನುಗುಣವಾಗಿ ಆಹಾರ ಕೊಟ್ಟು ಬೆಳೆಸಿ.
- ಹೀಗೆ ತಳಿ ಅಭಿವೃದ್ದಿ ಮಾಡುತ್ತಾ ಬಂದರೆ ಒಂದೆಡೆ ಅನುಭವ ಹೆಚ್ಚಾಗುತ್ತದೆ.
- ಹಾಗೆಯೇ ಹಸುಗಳ ಖರೀದಿಗೆ ಬಂಡವಾಳ ಸಹ್ ಹೆಚ್ಚು ಬೇಕಾಗಿಲ್ಲ.
- ಇಂತಹ ಬ್ರೀಡ್ ಗಳಿಗೆ ರೋಗ ರುಜಿನಗಳೂ ಕಡಿಮೆ.
- ಸಣ್ಣ ಪ್ರಾಯದಿಂದ ಆಹಾರ ಕೊಟ್ಟು ಬೆಳೆಸಿದ ಕರು 12 ತಿಂಗಳಲ್ಲಿ ಬೆದೆಗೆ ಬರುತ್ತದೆ.
- ಸರಾಸರಿ ದಿನಕ್ಕೆ 15 ಲೀ. ಹಾಲು ಸಹ ಕೊಡುತ್ತದೆ.
- ಎಂತಹ ಮೇವನ್ನೂ ಸಹ ಅವು ತಿನ್ನುತ್ತವೆ.
- ಇವರು ಸರಾಸರಿ 10 ದನಗಳಿಂದ ದಿನಕ್ಕೆ ಸರಾಸರಿ 130 ಲೀ. ಹಾಲು ಉತ್ಪಾದಿಸುತ್ತಾರೆ.
ಮೇವು ಮತ್ತು ಹೈನುಗಾರಿಕೆ:
- ಮೇವು ಬೆಳೆಸಿ ಹೈನುಗಾರಿಕೆ ಮಾಡುವುದು ನಷ್ಟ. ಮೇವು ಬೆಳೆಸಲು ಉಪಯೋಗಿಸುವ ಹೊಲದಲ್ಲಿ ಬೇರೆ ಏನಾದರೂ ಕೃಷಿ ಮಾಡಿದರೆ ಹೆಚ್ಚು ಉತ್ಪತ್ತಿ ಬರುತ್ತದೆ.
- ಅದಕ್ಕಾಗಿ ನಾವು ಬೆಳೆಸುವ ಬೆಳೆಗಳ ಮಧ್ಯೆ ಹುಟ್ಟುವ ಹುಲ್ಲು, ಇತ್ಯಾದಿಗಳನ್ನೇ ಪಶು ಮೇವಾಗಿ ಬಳಕೆ ಮಾಡಬೇಕು.
- ಅಲ್ಪ ಸ್ವಲ್ಪ ಬೆಳೆಗಳ ಎಡೆಯಲ್ಲಿ ಹುಲ್ಲು ಬೆಳೆಯಬಹುದು.
- ಉಳಿದಂತೆ ಬಹುತೇಕ ಅವಶ್ಯಕತೆಗೆ ತೋಟದ ಮಧ್ಯಂತರದ ಕಳೆಗಳನ್ನೇ ಬಳಕೆ ಮಾಡಬೇಕು.
- ಇದು ಕಳೆ ನಿಯಂತ್ರಣಕ್ಕೂ ಆಗುತ್ತದೆ. ಹಾಗೆಯೇ ಭೂ ಹೊದಿಕೆಗೂ ಆಗುತ್ತದೆ.
- ರೂಢಿ ಮಾಡಿಕೊಂಡಂತೆ ಪಶುಗಳು ಮೇವನ್ನು ತಿನ್ನುತ್ತವೆ.
- ಇವರು ತೋಟಕ್ಕೆ ಕಳೆನಾಶಕ ಬಳಸದೆ ಬೇಕಾದಂತೆ ಕತ್ತರಿಸಿ ಸ್ವಚ್ಚ ಮಾಡಿ ಹಸುಗಳಿಗೆ ಹಾಕುತ್ತಾರೆ.
- ಹಳದಿ ಸೇವಂತಿಗೆ ಕಳೆ ಇವರ ತೋಟದಲ್ಲಿ ಬಲೆಯಂತೆ ಹಬ್ಬಿದ್ದು, ಇದನ್ನು ಮೇವಾಗಿ ಬಳಸಿಯೇ ಅದನ್ನು ಸ್ವಚ್ಚ ಮಾಡುತ್ತಾರೆ.
- ಇದನ್ನು ಮೂರು ದಿನ ಇಟ್ಟರೂ ಹಾಳಾಗುವುದಿಲ್ಲ. ಹಾಲು 1 ಲೀ ಹೆಚ್ಚು ಕೊಡುತ್ತದೆ ಎನ್ನುತ್ತಾರೆ.
ಹಸುಗಳಿಗೆ ಆಹಾರ:
- ಪಶು ಆಹಾರವನ್ನು ಕೊಡುವಾಗ ಒಂದೇ ಬ್ರಾಂಡ್ ನ ಆಹಾರವನ್ನು ಕೊಡುವ ಬದಲಿಗೆ ದರ ವ್ಯತ್ಯಾಸ ಇರುವ ಎರಡು ಮೂರು ಬ್ರಾಂಡ್ ನ ಆಹಾರಗಳನ್ನು ಮಿಶ್ರಣ ಮಾಡುವುದರಿಂದ ಕಿಲೋದಲ್ಲಿ 1-2 ರೂ. ಉಳಿತಾಯವಾಗುತ್ತದೆ.
- ಪಶುಗಳ ದೇಹ ಪೋಷಣೆಗೆ ಸ್ವಲ್ಪವೂ ತೊಂದರೆ ಆಗದಂತೆ ಪಶು ಆಹಾರನ್ನು ಕೊಡಬೇಕು.
- ಹಾಲೂಡದ ಹಸು, ಕರುಗಳು ಅನುತ್ಪಾದಕ ಎಂದು ಆಹಾರ ಕಡಿಮೆ ಮಾಡಿದರೆ ಅವು ಮುಂದೆ ಕರು ಹಾಕಿ ಹಾಲು ಕೊಡುವಾಗ ಕಡಿಮೆ ಹಾಲು ಕೊಡುತ್ತವೆ.
ಹಟ್ಟಿ ಎಲ್ಲಿ ಮಾಡಬೇಕು- ಹೇಗೆ ಮಾಡಬೇಕು:
- ಯಾವಾಗಲೂ ಹಟ್ಟಿ ಮಾಡುವಾಗ ಎತ್ತರದ ಸ್ಥಳದಲ್ಲಿ ನಿರ್ಮಾಣ ಮಾಡಬೇಕು.
- ಸರಳ ರಚನೆ ಇದ್ದಷ್ಟು ಮಿತವ್ಯಯ. ಹಸುಗಳಿಗೆಗಾಳಿ ಬೆಳಕು ಬೀಳುವಂತೆ ಇರಬೇಕು.
- ಹಟ್ಟಿಗಾಗಿ ಹೆಚ್ಚು ಖರ್ಚು ಮಾಡಬಾರದು.
- ಎತ್ತರದ ಸ್ಥಳದಲ್ಲಿ ಹಟ್ಟಿ ಮಾಡಿದರೆ ಪ್ರತಿ ದಿನ ಹಟ್ಟಿ ತೊಳೆಯುವಾಗ ಸಿಗುವ ನೀರು ತೋಟಕ್ಕೆ ಅಥವಾ ಬೆಳೆಗೆ ಹರಿಸಲು ಅನುಕೂಲವಾಗುತ್ತದೆ.
- ಹಟ್ಟಿ ಎಂದರೆ ಅಲ್ಲಿ ದಿನಕ್ಕೆ ಮೂರು ಸಲ ಪಶುಗಳನ್ನು ತೊಳೆಯುವ ಕೆಲಸ ಇರುತ್ತದೆ.
- ಅಗ ಸಾಕಶ್ಟು ಪೋಷಕಾಂಶಗಳುಳ್ಳ ನೀರು ಸಿಗುತ್ತದೆ.
- ಇದನ್ನು ಹೊಲಕ್ಕೆ ಹರಿಸಲು ಪಂಪ್ ಇತ್ಯಾದಿ ಬಳಸುವ ಬದಲು ಎತ್ತರದಲ್ಲಿ ಹಟ್ಟಿ ಮಾಡಿಕೊಂಡರೆ ಗುರುತ್ವ ಶಕ್ತಿಯಲ್ಲಿ ಅದನ್ನು ಬೇಕಾದಲ್ಲಿಗೆ ಹರಿಸಬಹುದು.
- ಕೃಷಿ ಇದ್ದು ಹೈನುಗಾರಿಕೆ ಮಾಡುವುದು ಉತ್ತಮ. ಕೃಷಿ ಹೊಲ ಇಲ್ಲದಿದ್ದರೆ, ಸಗಣಿ ಗೊಬ್ಬರ ಮಾರಾಟ ಮಾಡಬೇಕಾಗುತ್ತದೆ.
- ಇವರು ಹಟ್ಟಿ ತೊಳೆದ ನೀರನ್ನು ಗುರುತ್ವ ಶಕ್ತಿಯಲ್ಲೇ ತೋಟಕ್ಕೆ ಒಯ್ಯುತ್ತಾರೆ.
ಹಟ್ಟಿಯ ಸ್ವಚ್ಚತೆ:
- ಹಟ್ಟಿಯನ್ನು ನಿತ್ಯ ಮೂರು ಬಾರಿ ತೊಳೆದು ಸ್ವಚ್ಚ ಮಾಡಬೇಕು.
- ಅಗ ನೊಣಗಳು ಕಡಿಮೆಯಾಗುತ್ತದೆ. ಹಸುಗಳ ಕಾಲ ಬುಡಕ್ಕೆ ಕೌ ಮ್ಯಾಟ್ ಹಾಕುವುದರಿಂದ ಹಸುಗಳ ವಿಶ್ರಾಂತಿಗೆ ಅನುಕೂಲವಾಗುತ್ತದೆ.
- ಹಸುಗಳ ಮೈಯನ್ನು ತೊಳೆಯುವಾಗ ತಿಕ್ಕಿ ತಿಕ್ಕಿ ತೊಳೆಯಬಾರದು.
- ಬರೇ ನೀರು ಹರಿಸಿ ಸ್ವಚ್ಚ ಮಾಡಬೇಕು.
- ಹಟ್ಟಿಯ ಸ್ವಚ್ಚತೆಯಿಂದ ಹಸುಗಳ ಆರೋಗ್ಯ ಉತ್ತಮವಾಗುತ್ತದೆ.
- ಹಟ್ಟಿಯ ಸುತಮುತ್ತ ತೊಳೆದ ನೀರು ನಿಲ್ಲಬಾರದು.
- ಅದು ದೂರ ಹೋಗವ ವ್ಯವಸ್ಥೆ ಇದ್ದರೆ ಹಸುಗಳಿಗೆ ಚುಚ್ಚಿ ರಕ್ತ ಹೀರುವ ನುಶಿ, ತಿಗಣೆ, ನೊಣಗಳು ಕಡಿಮೆಯಾಗಿ ಹಸುಗಳು ಹೆಚ್ಚು ಹಾಲನ್ನು ಕೊಡಲು ಸಮರ್ಥವಾಗಿರುತ್ತವೆ.
ಸಾವಯವ ಕೃಷಿಗೆ ಹೈನುಗಾರಿಕೆ ಬೇಕು:
- ಸಾವಯವ ಕೃಷಿ ಎಂದರೆ ಬೆಳೆಗಳಿಗೆ ಬೇಕಾದಶ್ಟು ಪೋಷಕಾಂಶಗಳನ್ನು ಕೊಡಲೇ ಬೇಕಾಗುತ್ತದೆ.
- ಕೊಂಡು ತರುವ ಗೊಬ್ಬರಕ್ಕಿಂತ ನಮ್ಮಲ್ಲೇ ಉತ್ಪಾದನೆ ಮಾಡಿ ಬಳಸುವುದು ಉತ್ತಮ ಮತ್ತು ಮಿತವ್ಯಯ.
- ಹಸುವಿನ ಸಗಣಿ ಒಂದು ಸತೋಲನ ಗೊಬ್ಬರ ಆಗುತ್ತದೆ.
- ಕಾರಣ ನಮ್ಮ ಹೊಲದಲ್ಲಿ ಬೆಳೆದ ಹುಲ್ಲು ಹಾಗು ಅವುಗಳಿಗೆ ಹಾಕಿದ ಪಶು ಆಹಾರ ಪುನರ್ ಬಳಕೆ ಆಗಿ ಅದು ಪೊಷಕಾಂಶ ಸಮೃದ್ಧವಾಗಿರುತ್ತದೆ.
ಹೈನುಗಾರಿಕೆ ಗೊಬ್ಬರದ ಕಾರ್ಖಾನೆ:
- ಹೈನುಗಾರಿಕೆ ಎಂದರೆ ಅದು ಸಣ್ಣ ವಿಷಯವಲ್ಲ. ಒಂದು ಹಸು ದಿನಕ್ಕೆ ಸುಮಾರು 50 ಕಿಲೋ ದಷ್ಟು ಹಸುರು ಮೇವನ್ನು ತಿಂದು ಮತ್ತೆ 12 ಗಂಟೆಯಲ್ಲಿ ಅದನ್ನು ಗೊಬ್ಬರ ಮಾಡಿಕೊಡುತ್ತದೆ.
- ಈ ಗೊಬ್ಬರ ಕಾರ್ಖಾನೆಗೆ ಬಂಡವಾಳ ಹೂಡಬೇಕಾಗಿಲ್ಲ.
- ಇಷ್ಟು ಅಲ್ಪ ಅವಧಿಯಲ್ಲಿ ಗೊಬ್ಬರ ಮಾಡಿಕೊಂಡುವ ಯಾವ ಕಾರ್ಖಾನೆಯೂ ಇರುವುದಿಲ್ಲ.
- ಹಾಕಿದ ಎಲ್ಲಾ ಆಹಾರವನ್ನು ಅದು ಸ್ವಲ್ಪ ಬಳಸಿಕೊಂಡು ಉಳಿದವುಗಳನ್ನು ಸಗಣಿ, ಮೂತ್ರದ ರೂಪದಲ್ಲಿ ಮರಳಿ ಕೊಡುತ್ತದೆ.
ಇದು ಶ್ರೀಯುತ ಎ ಪ್ರಭಾಕರ ಹೆಗ್ಡೆಯವರ ಡೈರಿ ಅನುಭವ. 72 ವಯಸ್ಸಿನ ಇವರು 20-22 ಹಸುಗಳಲ್ಲಿ ಡೈರಿ ಮಾಡುವವರು. ದಿನಕ್ಕೆ 130 ಲೀ. ಸರಾಸರಿ ಹಾಲಿನ ಉತ್ಪಾದನೆ.ಸ್ಥಳೀಯ ಹಾಲು ಉತ್ಪಾದಕ ಸಂಘದಲ್ಲಿ ಹೆಚ್ಚು ಹಾಲು ಕೊಡುವವರು. ದಿನಕ್ಕೆ 3000-3500 ಉತ್ಪತ್ತಿ. ಗರಿಷ್ಟ 1500 ರೂ ಖರ್ಚು. ಡೈರಿ ಕೆಲಸದವರು ಬಿಡುವಿನ ವೇಳೆಯಲ್ಲಿ ತೋಟದ ಕೆಲಸವನ್ನೂ ಮಾಡುತ್ತಾರೆ.ವರ್ಷದ 365 ದಿನವೂ ಕೆಲಸ ಇದೆ. ಯಾವ ಸಾಂಕ್ರಾಮಿಕ ರೋಗ ಬಂದರೂ ಕೃಷಿ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬಹುದು. ಊರಿನ ಕೆಲವು ಮಂದಿಗೆ ಶಾಶ್ವತ ಉದ್ಯೋಗ ಸಿಗುತ್ತದೆ. ನಮಗೆ ಖರ್ಚಿಗೆ ಹಣ ಸಿಗುತ್ತದೆ. ಎಲ್ಲಿಯೂ ಅನವಶ್ಯಕ ಖರ್ಚು ಮಾಡಬಾರದು. ಸಾಧ್ಯವಾದಷ್ಟು ನಮ್ಮಲ್ಲೇ ಕರು ಆಗಿ ಅದರಲ್ಲೇ ಡೈರಿ ದೊಡ್ಡದು ಮಾಡುತ್ತಾ ಬರಬೇಕು. ಆಗ ಮಾತ್ರ ಅದು ಲಾಭ. ಹಾಗೆಂದು ಹೈನುಗಾರಿಕೆ ಭಾರೀ ಲಾಭದ್ದಲ್ಲ. ಕೃಷಿಗೆ ಪೂರಕವಾಗಿದ್ದರೆ ನಷ್ಟದ್ದಲ್ಲ.