ದನಗಳು ಇನ್ನು ಹಾಲು ಕೊಡಲಾರವು!

ಹಾಲು ಕರೆಯುವುದು

ಕೆಲ ದಿನಗಳ ಹಿಂದೆ ಶ್ರೀ ರಮೇಶ್ ದೇಲಂಪಾಡಿಯವರು  ಅನಿಲ್ ಕುಮಾರ್ ಜಿ ಅವರ ಒಂದು ಪೋಸ್ಟ್ ಹಂಚಿಕೊಂಡಿದ್ದರು. ದನಗಳು ಹಾಲು ಕೊಡುವುದಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸುವ ಒಂದು ಅರ್ಥಗರ್ಭಿತ ಬರಹ. ಇದಕ್ಕೆ ಪೂರಕವಾಗಿ ಇಂದಿನ ಹಸು ಸಾಕಾಣೆ ಮತ್ತು ಅದನ್ನು ಮುಂದುವರಿಸುವ ಕಷ್ಟದ ಬಗ್ಗೆ ಇಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇವೆ.

ಅನಾದಿ ಕಾಲದಿಂದಲೂ ಹಸು ಸಾಕುವುದು ಮಾನವನ ಒಂದು ಉಪಕಸುಬಾಗಿತ್ತು. ಹಸುಗಳನ್ನು ಸಾಕಿದರೆ ಮಾತ್ರ ಅದು ಉಳಿಯುತ್ತದೆ. ಇದು ಅನ್ಯರ ಆಶ್ರಯದಲ್ಲಿ ಬೆಳೆಯಬೇಕಾದ ಪ್ರಾಣಿ. ಅದಕ್ಕಾಗಿಯೇ ಇದನ್ನು ಸಾಕು ಪ್ರಾಣಿಗಳ ಸಾಲಿನಲ್ಲಿ ಸೇರಿಸಲಾಗಿದೆ. ಮಾನವ ನಾಗರೀಕತೆ ಬೆಳೆದಾಗಿನಿಂದಲೂ ಹಸು ಸಾಕಾಣಿಕೆ, ಎಮ್ಮೆ ಸಾಕಾಣಿಕೆ ಇದ್ದಿರಬೇಕು. ಸುಮಾರು 40 ವರ್ಷಗಳ ಹಿಂದಿನ ತನಕ ಹಸು ಸಾಕುವುದು  ಮನೆ ಬಳಕೆಯ ಹಾಲಿಗಾಗಿ ಮತ್ತು ಕೃಷಿ ಉದ್ದೇಶದ ಗೊಬ್ಬರಕ್ಕಾಗಿ ಆಗಿತ್ತು. ಆ ನಂತರ ಅದಕ್ಕೆ ವಾಣಿಜ್ಯ ರೂಪ ಬಂತು.ಹೈನುಗಾರಿಕೆ ಎಂಬ ನಾಮಕರಣವೂ ಆಯಿತು. ಆದಾಯಕ್ಕಾಗಿ ಹಸು ಸಾಕುವುದು ಪ್ರಾರಂಭವಾಯಿತು. ಇದರೊಂದಿಗೆ ಅಧಿಕ ಹಾಲೂಡುವ ಹಸುಗಳ ಪರಿಚಯವಾಗಿ ಸ್ಥಳೀಯ ಹಸುಗಳು ಮೂಲೆಗುಂಪಾದವು. ಹೈನುಗಾರಿಕೆ ಬೆಳೆಯುತ್ತಾ  ಒಬ್ಬರು ಬಿಟ್ಟಾಗ ಮತ್ತೊಬ್ಬರು ಹೀಗೆ ಬೆಳೆಯುತ್ತಲೇ ಇದೆ. ಬಹುಷಃ ಸದ್ಯವೇ ಈ ಒಂದು ಕಸುಬು ನಮ್ಮಿಂದ ದೂರವಾಗಿವ ಸಾಧ್ಯತೆ ಹೆಚ್ಚಾಗುತ್ತಿದೆ.

ಹೈನುಗಾರಿಕೆ  ಮಾಡುವ ಘಟಾನುಘಟಿಗಳೂ ಸಹ ಇದನ್ನು ನಿಲ್ಲಿಸಲೂ ಸಾಧ್ಯವಾಗುತ್ತಿಲ್ಲ. ಮುಂದುವರಿಸಲೂ ಸಾಧ್ಯವಾಗುತ್ತಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ. ಹಸು ಸಾಕಾಣಿಕೆ ಒಂದು ಉರುಳು. ಹಸು ಸಾಕಾಣಿಕೆ ಮಾಡುವವರಿಗೆ ಸಾರ್ವಜನಿಕ ಬದುಕು ಇಲ್ಲ್ಲ.  ಯಾವ ನೆಂಟರಿಷ್ಟರೂ ಇಲ್ಲ. ಹಸು, ಕೊಟ್ಟಿಗೆ, ತೋಟ ಮತ್ತು ಮನೆಯವರು. ಮನೆಯಲ್ಲೂ ಈ ವೃತ್ತಿಯ ಬಗ್ಗೆ ಅಪಸ್ವರ ಎದ್ದು, ಮನೆಯಲ್ಲೂ ಮೌನ ಗುದ್ದಾಟ ಇಲ್ಲದಿಲ್ಲ. ಹೈನುಗಾರಿಕೆಯಲ್ಲಿ ಸಂಪಾದನೆ ಆಗುತ್ತದೆ ಎಂಬುದು ಒಂದು ಭ್ರಾಂತಿ. ಹೈನುಗಾರಿಕೆ ಮಾಡುವವನಿಂದ ಹಾಲು ಉತ್ಪಾದಕ ಸಂಘ, ಮಹಾಮಂಡಲ, ಪಶು ಆಹಾರ ತಯಾರಕರು, ಹಟ್ಟಿ ಕೊಟ್ಟಿಗೆ ಕೆಲಸ ಮಾಡುವವರ ಜೀವನಕ್ಕೆ ದಾರಿಯಾಗುತ್ತದೆಯೇ ಹೊರತು ಹೈನುಗಾರಿಕೆಗೆ ಇಳಿದವನದ್ದು ಅಲ್ಲ. ಲಾಭ ನಷ್ಟಕ್ಕಿಂತಲೂ ಇದನ್ನು ಮುಂದುವರಿಸಲು ನಮ್ಮ ತಲೆಮಾರೇ ಸಿದ್ದರಿಲ್ಲದ ಕಾರಣ ಈ ಕಸುಬು ಸಧ್ಯವೇ ನಮ್ಮಿಂದ ದೂರವಾಗುತ್ತದೆ. ದನ ಸಾಕುವವರಿಲ್ಲ.ಹಾಲು ಕರೆಯುವವರಿಲ್ಲ ಹಾಗಾಗಿ  ಹಾಲು ಇಲ್ಲ ಎಂಬ ಸ್ಥಿತಿ ಉಂಟಾಗಲಿದೆ!

ಅಪರೂಪವಾಗುತ್ತಿರುವ ಈ ದೃಶ್ಯ
ಅಪರೂಪವಾಗುತ್ತಿರುವ ಈ ದೃಶ್ಯ

ಹಸು ಹಾಲು ಕೊಡಲಾರದು:

  • ಹಸುವು ಹಾಲು ಕೊಡುತ್ತದೆ. ಅದನ್ನು ಪ್ಯಾಕೆಟ್ ನಲ್ಲಿ ತುಂಬಿ ಮಾರಾಟಕ್ಕೆ ಇಟ್ಟಿರುತ್ತಾರೆ.
  • ಹಣ ಕೊಡುವುದು ತರುವುದು  ಬಳಸುವುದು ಇದು ಹೊಸ ತಲೆಮಾರಿನವರಿಗೆ ಗೊತ್ತಿದೆಯೇ ಹೊರತು  ಹಸು ಹಾಲು ಕೊಡಬೇಕಾದರೆ ಕಷ್ಟ ಎಷ್ಟು ಇದೆ ಎಂದು ಗೊತ್ತಿಲ್ಲ.
  • ಇಷ್ಟಕ್ಕೂ ಹೊಸ ತಲೆಮಾರಿನವರಿಗೆ ಹಸುಗಳು ಸಾಕಿದವರು ಸಮೀಪ ಹೋದ ತಕ್ಷಣ  ಹಾಲು ಕೊಡುತ್ತದೆ ಎಂದು  ತಿಳಿದಂತಿದೆ.
  • ವಾಸ್ತವವಾಗಿ ಹಾಗಿಲ್ಲ. ಹಸುಗಳು ಹಾಲು ಕೊಡುವುದೇ ಇಲ್ಲ.
  • ಅದರ ಮಕ್ಕಳಿಗಾಗಿ ಇರುವ ಹಾಲನ್ನು ನಾವು ಕದಿಯುವುದು ಅಥವಾ ಅಧಿಕ ಹಾಲನ್ನು ಪಡೆಯುವುದಕ್ಕಾಗಿ ಅವುಗಳಿಗೆ ತಿನ್ನಿಸಿ, ತಿನ್ನಿಸಿ ಅದರ ಜೀವ ಹಿಂಡುವುದೇ ಆಗಿದೆ.
  • ನಾವು ಕುಡಿಯುವ ಹಾಲಿನ ಹಿಂದೆ  ಒಂದು ರೀತಿಯ ಶೋಷಣೆ ಇದೆ. ಅಧಿಕ ಹಾಲೂಡುವ ಹಸುಗಳಿಂದ ಪಡೆಯುವ ಹಾಲಿನಲ್ಲಿ  ಶೋಷಣೆಯ ರೋಧನ ಇರುತ್ತದೆ.
  • ಕರು ಹಾಕಿದ ತಕ್ಷಣ ಅದರ ಮುಖವನ್ನು ಕೆಚ್ಚಲಿನಿಂದ ದೂರ ಸರಿಸಿ ಅದನ್ನು ತಾಯಿ ಹಾಲು ಪ್ರೀತಿಯಿಂದ ವಂಚಿಸಿ ಪಡೆಯುವ ಹಾಲಾಗಿರುತ್ತದೆ.
  • ಹಾಲು ಉತ್ಪಾದನೆಗಾಗಿ ನಾವು ಹಸುಗಳಿಗೆ ತಿನ್ನಿಸುವ ಆಹಾರ ಮತ್ತು ಮೇವು ಇವುಗಳ ಖರ್ಚು ನೋಡಿದರೆ ಯಾರೂ ಹಸು ಸಾಕಾಣಿಕೆ ಮಾಡಲಾರರು.
  • ಆದರೆ ಹಸು ಸಾಕುವವರು ಒಂದು ರೀತಿಯಲ್ಲಿ ಮಹಾ ದಾನಿಗಳು. ಇವರು ಇದನ್ನು ವ್ಯಾವಹಾರಿಕವಾಗಿ ಕಂಡವರಲ್ಲ.
  • ತಮ್ಮೆಲ್ಲಾ ಸುಖ ಭೋಗಗಳನ್ನು ಬದಿಗೊತ್ತಿ ತಮ್ಮ ಆದಾಯದಲ್ಲಿ ಒಂದಷ್ಟು ಪಾಲನ್ನು ಹಸುಗಳಿಗೆ ದಾನ ರೂಪದಲ್ಲಿ ಸಮರ್ಪಿಸುವವರು.
  • ಇಂತಹ ಮನೋಸ್ಥಿತಿ ಹೊಸ ತಲೆಮಾರಿನವರಿಗೆ ಬರಲಾರದು.
  • ನಮ್ಮಲ್ಲಿರುವ 50 ವರ್ಷ ಮೀರಿದ ಜನ ಹಸು ಸಾಕಾಣೆ, ಸಗಣಿ ಬಾಚುವಿಕೆ, ಹಾಲು ಕರೆಯುವಿಕೆ, ಹಾಲು ಮಾರಾಟ ಗೊಬ್ಬರ ಸಾಗಾಟ ಇತ್ಯಾದಿ ಮಾಡುವವರು.
  • 20 ರ ನಂತರದ ವಯಸ್ಸಿನವರು ಹಟ್ಟಿ ಸಮೀಪಕ್ಕೂ ಸುಳಿಯಲೊಲ್ಲರು. ಹಾಗಾಗಿ ಮುಂದೆ ಕೆಲವೇ ಸಮಯದಲ್ಲಿ ನಮ್ಮ ಹಸು ಹಾಲು ಕೊಡಲಾರದು.

ಕೆಲವು ಕಡೆ ಸಾಕಲಾರದೆ ಮುದಿ ಹಸು , ಗಂಡು ಕರುಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನ ಬದಿಯಲ್ಲಿ ಬಿಟ್ಟು ಬರುವುದೂ ಈಗ ಸಾಮಾನ್ಯವಾಗುತ್ತಿದೆ.

ಕಾಡಿಣ ಬದಿಗೆ ಬಿಟ್ಟ ಝಾನುವಾರುಗಳು

ಹೈನುಗಾರಿಕೆಯ ಕಷ್ಟಗಳು:

  • ದನ ಹಾಲು ಕೊಡಬೇಕಾದರೆ ಅದಕ್ಕೆ ಹೊಟ್ಟೆ ತುಂಬಾ ಮೇವು ಕೊಡಬೇಕು.
  • ಹಾಗೆಯೇ ಪಶು ಆಹಾರವನ್ನು ಕೊಡಬೇಕು. ಕಾಲ ಪರಿಸ್ಥಿತಿಗನುಗುಣವಾಗಿ ಈಗ ಹುಲ್ಲು ಬಹಳ ದುಬಾರಿಯ ವಸ್ತು.
  • ಹಸಿ ಹುಲ್ಲು  ಬೆಳೆಸಿದರೆ ತರುವವರ ಸಮಸ್ಯೆ.  ದಿನವೊಂದಕ್ಕೆ ಸರಾಸರಿ 25 ಕಿಲೋ ಗೂ ಹೆಚ್ಚು ಹಸಿ ಹುಲ್ಲು ಸಾಧಾರಣ ಹಸುಗಳ ಹೊಟ್ಟೆ ತುಂಬಿಸಲು ಬೇಕು. 
  • ಒಬ್ಬ ಕೆಲಸದವನನ್ನು  ನೇಮಿಸಿದರೆ  ಅವನ ಮಜೂರಿಯೇ 400 ರೂ. ಆಗುತ್ತದೆ.
  • ಈ ಸಂಬಳಕ್ಕೆ ದಿನಕ್ಕೆ 100 ಕಿಲೋ ದಷ್ಟು  ಹುಲ್ಲು ಮಾತ್ರ ಕೊಯ್ಯುವ ಸಾಮಾರ್ಥ್ಯ ನಮ್ಮ ಕೆಲಸಗಾರರದ್ದು.
  • ಹುಲ್ಲು  ಇದ್ದರೂ ಅದು ಹಸುಗಳ ಕೊಟ್ಟಿಗೆ ಸಮೀಪಕ್ಕೆ  ಬರಲಾರದ ಸ್ಥಿತಿ ಇದೆ.
  • ಪಶು ಆಹಾರಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಎಲ್ಲಾ ದೃಷ್ಟಿಯಿಂದಲೂ ಒಂದು ಹಸು ಸಾಕುವುದರಿಂದ ವರ್ಷಕ್ಕೆ ಕನಿಷ್ಟ 30,000-40,000 ರೂ ಖರ್ಚು ಇದೆ.
  • ಇಷ್ಟು ಉತ್ಪಾದನೆ ಹಸುವಿನಿಂದ ಬರಲಾರದು. ಇಂತಹ ನಷ್ಟದ ವ್ಯವಹಾರಕ್ಕೆ ಈಗಿನ ತಲೆಮಾರು ಇಳಿಯಲಾರದು.

ಹೈನುಗಾರ ಮನೆಮಂದಿಗಳ ಗೋಳು:

  • ನಮ್ಮೆಜಮಾನ್ರು ಅನವಶ್ಯಕ ಈ ದನಗಳನ್ನು ಸಾಕುತ್ತಾ ಇದ್ದಾರೆ. ನಾವು ಎಲ್ಲಿಗೂ ಹೋಗುವಂತಿಲ್ಲ.
  • ನಮಗೆ  ಈ ನಷ್ಟದ ಕಸುಬು ಮಾಡುವ ಬದಲು ಪ್ಯಾಕೆಟ್ ಹಾಲು ತರುವುದು ಒಳಿತಲ್ಲವೇ
  • ಹೀಗೆ ಹೈನುಗಾರಿಕೆಯ ಲೆಕ್ಕಾಚಾರವನ್ನು ಬಿಡಿಸಿ ಬಿಡಿಸಿ ಹೇಳುವ ಮನೆಯಾಕೆ.
  • ಇದನ್ನು ಕಂಡೂ ಕಾಣದಂತೆ ಮನಸ್ಸಿಲ್ಲದಿದ್ದರೂ ಹನುಗಾರಿಕೆ ಮಾಡುತ್ತಿರುವ ಮನೆ ಯಜಮಾನ.
  • ಇವರೊಳಗಿನ ಮುಸುಕಿನ ಗುದ್ದಾಟದಿಂದ ಕೆಲವು ಮನೆಗಳಲ್ಲಿ ಗಂಡ ಹೆಂಡಿರು ದೂರವಾದುದೂ ಉಂಟು. 
  • ಹಸುಗಳನ್ನು ಉಚಿತವಾಗಿ ಕೊಡುತ್ತೇನೆ ಎಂದರೂ ಒಯ್ಯುವರಿಲ್ಲದ  ಪರಿಸ್ಥಿತಿ  ದಕ್ಷೀಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿದೆ.
  • ಹಟ್ಟಿ ಕೊಟ್ಟಿಗೆಯ ಕೆಲಸಕ್ಕೆ ಜನವೇ ಸಿಗದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಹಸು ಸಾಕಾಣೆ ಮುಂದುವರಿಯುವುದು ಸಾಧ್ಯವೇ.
  • ಹಸು ಸಾಕುವವರ ಮನೆಯಲ್ಲಿ ಹೊಸ ತಲೆಮಾರು ಯಾರೂ ಕೃಷಿ ವೃತ್ತಿಯನ್ನು ಆರಿಸಿಲ್ಲ.
  • ಅದಕ್ಕಿಂತ ಹೆಚ್ಚಿನ ಆದಾಯ ಕೊಡುವ  ಉದ್ಯೋಗ ಹುಡುಕಿದ್ದಾರೆ.
  • ಒಬ್ಬ ವ್ಯಕ್ತಿ ಮದುವೆಯಾಗಿ ಸಂಸಾರಸ್ಥನಾಗಬೇಕಾದರೆ ಅವನು ಕೃಷಿ – ಹೈನುಗಾರಿಕೆಯ ಸಮೀಪವೂ ಸುಳಿಯಬಾರದು. ಈ ಸ್ಥಿತಿ ಈಗ ಇದೆ.
ಮುಂದಿನ ತಲೆಮಾರು ಕಾಣಬಹುದಾದ  ಹಸು ಸಾಕಣೆ
ಮುಂದಿನ ತಲೆಮಾರು ಕಾಣಬಹುದಾದ ಹಸು ಸಾಕಣೆ

 ವ್ಯವಸ್ಥೆ ಎಲ್ಲಾ ಅವ್ಯವಸ್ಥೆಯೇ:

ಹಸುಗಳು ಬೇಡವಾದರೆ ಅದನ್ನು ಸಾಕಲಿಕ್ಕಾಗಿ ಕೊಳ್ಳುವವರು ಯಾರು ಇಲ್ಲ. ಮಾಂಸದ ಉದ್ದೇಶಕ್ಕೆ ಇದು ಬೇಕಾಗಬಹುದು . ಆದರೆ ಸಾಕಿದವನ ಮನೋಸ್ಥಿತಿ ಇದಕ್ಕೆ ಒಪ್ಪುತ್ತಿಲ್ಲ. ಅಲ್ಲಲ್ಲಿ ಗೋಶಾಲೆಗಳಿದ್ದರೂ  ಅಲ್ಲಿ ಈಗಾಗಲೇ ಹೌಸ್ ಫುಲ್ ಸ್ಥಿತಿ ಉಂಟಾಗಿದೆ.  ಹೊಸ ಗೊಶಾಲೆಗಳನ್ನು ತೆರೆಯಲು ಸ್ಥಳವೇ ಇಲ್ಲ. ಗೋಮಾಳಗಳೂ ಅತಿಕ್ರಮಿಗಳ ಪಾಲಾಗಿದೆ. ಗೋಶಾಲೆ ನಡೆಸುವುದೂ ಕಷ್ಟದ ಕೆಲಸವೇ. ದಾನಿಗಳು, ಮಹಾದಾನಿಗಳು  ಇದಕ್ಕೆ ದಾನ ಮಾಡಲು ಒಲ್ಲರು. ಸರಕಾರೀ ಕೃಪಾಪೋಷಿತ ಗೋಶಾಲೆಗಳು ತೆರೆಯಲ್ಪಡಬೇಕು. ಆ ದಿನಗಳಿಗಾಗಿ ಜನ ಕಾಯುತ್ತಿದ್ದಾರೆ.

ಹಸು/ ಎಮ್ಮೆ ಸಾಕಣೆ ಬಿಟ್ಟರೆ ಏನಾಗಬಹುದು?

  • ಒಂದು ವಸ್ತು ನಮ್ಮಲ್ಲಿರುವ ತನಕ ನಮಗೆ ಅದರ ಮಹತ್ವ ಗೊತ್ತಾಗುವುದಿಲ್ಲ.
  • ಎಲ್ಲಾ ಕಷ್ಟಗಳ ಮುಖವೇ ಎದುರೆದುರು ಕಾಣಿಸುತ್ತದೆ. ಆ ವಸ್ತು ನಮ್ಮಿಂದ ದೂರವಾದಾಗ ಅದರ ಮಹತ್ವ ತಿಳಿಯುತ್ತದೆ.
  • ನಾವೆಲ್ಲಾ ನಮ್ಮ ಹಿರಿಯರು ಜೀವಂತ ಇದ್ದಾಗ ಸಾಕಷ್ಟು ನಿಂದನೆಗಳನ್ನು ಮಾಡಬಹುದು.
  • ಅವರಿಲ್ಲದಾಗ ನಾವು ತಪ್ಪು ಮಾಡಿದ ಅರಿವಾಗುತ್ತದೆ.  ಇದು ಮನುಷ್ಯ ಸಹಜ ಗುಣ.
  • ಹಾಗೆಯೇ ಹಸುಗಳು ಈಗ ಭಾರವಾಗಿದೆ. ಪರಿಸ್ಥಿಯೂ ಹಾಗೆಯೇ ಇದೆ. ಆದರೆ ಎಲ್ಲರೂ ಹಾಗೇ ಚಿಂತನೆ ಮಾಡಿದರೆ ಮುಂದೆ ಹಾಲು ತರುವುದು ಎಲ್ಲಿಂದ ?
  • ಹಸು ಸಾಕಿಕೊಂಡಿದ್ದವರ ಮನೆಗೆ ದಿನಕ್ಕೆ ಏನಿಲ್ಲವೆಂದರೂ 5 ಲೀ. ಹಾಲು ಬೇಕು.
  • ಇದನ್ನು ಬೇರೆ ಕಡೆಯಿಂದ ತರಬೇಕು. ಹಸುವಿನ ಸಗಣಿಯ ಗೊಬ್ಬರ ಕೃಷಿಗೆ ಪೂರಕ.
  • ಹಸುವಿನ ಗೊಬ್ಬರಕ್ಕೆ ಈಗ  ಬುಟ್ಟಿಗೆ 50-60  ರೂ. ಆಗಿದೆ. ಅದು ಬೇಡ ಎಂದರೂ  ಬೇರೆ ಮೂಲಗಳ ಗೊಬ್ಬರ ಬೇಕಲ್ಲವೇ?
  • ಇದಕ್ಕೂ  ಕಡಿಮೆ ಏನೂ ಇಲ್ಲ. ಅದು ಹಸು ಗೊಬ್ಬರಕ್ಕಿಂತ ದುಬಾರಿ. ಅದೂ ಸಹ  ದಿನದಿಂದ ದಿನಕ್ಕೆ ದುಬಾರಿಯಾಗುತ್ತದೆ.
  • ಇವೆಲ್ಲದರ ಪರಿಣಾಮ ಒಟ್ಟಾರೆ ಕೃಷಿ ಉತ್ಪಾದನೆಯ ಮೇಲೆ ಬೀಳುತ್ತದೆ.
  • ಕೃಷಿ ಭೂಮಿ ಸಾವಯವ ವಸ್ತುಗಳಿಂದ ವಂಚಿತವಾಗಿ ಕ್ರಮೇಣ ಫಲವತ್ತತೆ ಕಳೆದುಕೊಳ್ಳುತ್ತದೆ.
  • ಜೊತೆಗೆ ರಾಸಾಯನಿಕ ಗೊಬ್ಬರವೂ ದುಬಾರಿಯಾಗುತ್ತದೆ.

ಸರಕಾರ ಅಥವಾ ಸಮಾನ ಮನಸ್ಕ ರೈತರು ಸಂಘಟಿತರಾಗಿ ಎಲ್ಲಿ ಕೆಲಸಗಾರರ ಲಭ್ಯತೆ ಹೆಚ್ಚಾಗಿದೆಯೋ ಆ ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಉದ್ಯೋಗಾಕಾಂಕ್ಷಿಗಳನ್ನು ತರಿಸಿಕೊಂಡು ಅವರನ್ನು ಹೈನುಗಾರಿಕೆ, ಹಾಗೆಯೇ ಭತ್ತದ ಹೊಲ ಇತ್ಯಾದಿ ಕೆಲಸಗಳಿಗೆ ವ್ಯವಸ್ಥಿತವಾಗಿ ನಿಯುಕ್ತಿ ಮಾಡಬೇಕು. ಹೈನುಗಾರಿಕಾ ಕ್ಷೇತ್ರ ನಿರಂತರ ಉದ್ಯೋಗ ನೀಡುವ ರಂಗವಾಗಿದ್ದು, ಇದರಲ್ಲಿ ಉದ್ಯೋಗ ಭರವಸೆಯನ್ನೂ ನೀಡಲು ಸಾದ್ಯ. ಒಟ್ಟಿನಲ್ಲಿ ನಮಗೆಲ್ಲಾ ಹಾಲು ಬೇಕಾದರೆ ಹಾಲು ಉತ್ಪಾದನೆಗೆ  ಆಗಲೇ ಬೇಕು. ಹಾಲು ಉತ್ಪಾದಕರಿಗೆ ಅದು ಭಾರವಾಗದಿದ್ದರೆ ಮಾತ್ರ ಅದನ್ನು ಅವರು ಮುಂದುವರಿಸಿಯಾರು. ಇಲ್ಲವಾದರೆ ಮುಂದೆ  ಹಸು ಹಾಲು ಕೊಡಲಾರದು. ಈಗಾಗಲೇ ಸ್ವಲ್ಪ ಪ್ರಮಾಣದ ಜನ ಹಾಲನ್ನು ತ್ಯಜಿಸಿದ್ದಾರೆ. ಇನ್ನೂ ತ್ಯಜಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಬದಲಿಗೆ ಔದ್ಯಮಿಕ ಹಾಲು (ಸೋಯಾ ಹಾಲು ಇತ್ಯಾದಿ) ಮಾರುಕಟ್ಟೆಗೆ ಬಂದು ಹಾಲಿನ ಸ್ಥಾನವನ್ನು ತುಂಬುತ್ತದೆ.

2 thoughts on “ದನಗಳು ಇನ್ನು ಹಾಲು ಕೊಡಲಾರವು!

  1. ತುಂಬಾ ಸರಳವಾಗಿ ಬಹಳ ಜಟಿಲವಾದ ವಿಚಾರವನ್ನು ತಿಳಿಸಿದ್ದೀರಿ. 🙏🏼
    ಎಲ್ಲಾ ಪೀಳಿಗೆಗಳಿಗೂ ಈ ವಿಚಾರ ತಲುಪಿ ಅವಲೋಕನಕ್ಕೆ ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯ

    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಪ್ರತಿಕ್ರಿಯಿಸಿರಿ.
      ಕೃಷಿ ಅಭಿವೃದ್ದಿ ತಂಡ.

Leave a Reply

Your email address will not be published. Required fields are marked *

error: Content is protected !!