ಖರ್ಚು ಇಲ್ಲದೆ ನಿರಂತರ ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ. .

ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ

ಕೃಷಿಕರು ಬೆಳೆ ಬೆಳೆದು ಪಡೆಯುವ ಆದಾಯದಲ್ಲಿ  ಖರ್ಚು ಕಳೆದರೆ ನಿವ್ವಳ ಉಳಿಯುವುದು ಕೂಲಿ ಕೆಲಸದವರ ಆದಾಯಕ್ಕಿಂತ ಕಡಿಮೆ. ಅದಕ್ಕೇ ಬಹುತೇಕ ಕೃಷಿಕರು ಖರ್ಚು ವೆಚ್ಚಗಳನ್ನು ಬರೆದಿಡುವುದಿಲ್ಲ. ಸ್ವಲ್ಪ ಸ್ವಲ್ಪವಾದರೂ ಖರ್ಚು ಇಲ್ಲದೆ ಪಡೆಯಬಹುದಾದ ಬೆಳೆಗಳ ಬಗ್ಗೆ  ಕೃಷಿಕರು ಯೋಚಿಸಬೇಕಾಗಿದೆ.

 • ಕೃಷಿಯೊಂದಿಗೆ ಬೆಲೆಬಾಳುವ ಮರಮಟ್ಟನ್ನು ಬೆಳೆಸಿದರೆ  ನಿವೃತ್ತಿಯ ಕಾಲದಲ್ಲಿ ಅದು ಒಂದು ಆಸ್ತಿಯಾಗಬಲ್ಲದು.
 • ಕೆಲವು ವರ್ಷವೂ ವಾಣಿಜ್ಯ ಮಹತ್ವ ಉಳ್ಳ ಮರಮಟ್ಟು ಬೆಳೆದರೆ ಅದರಲ್ಲಿ ಬರುವ ಫಸಲು ವರ್ಷ ವರ್ಷವೂ ಆದಾಯಕೊಡುತ್ತದೆ.
 • ಅಂತಹ ಮರಮಟ್ಟುಗಳಲ್ಲಿ ರಾಂ ಪತ್ರೆ, ಮುರುಗಲ, ಜಾಯೀ ಕಾಯಿ, ದಾಳ್ಚಿನಿ ಮುಂತಾದ ಸಾಂಬಾರ ಬೆಳೆಗಳು  ಸೇರಿವೆ.

ದಾಳ್ಚೀನೀ ಮರ ಪೂರ್ತಿ ಹೂವುಗಳು

 ದೊಡ್ದ ಪ್ರಮಾಣದಲ್ಲಿ ದಾಳ್ಚಿನಿ ಬೆಳೆದವರು:

 • ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ಸೊರಬದ ಚಂದ್ರಗುತ್ತಿ ಸಮೀಪ ಹೊಸಕೊಪ್ಪದ ಶ್ರೀ ಯುತ ಶ್ರೀಧರ ಗೌಡ ಇವರು ಸುಮಾರು ನಾಲ್ಕು ಎಕ್ರೆಯಲ್ಲಿ ದಾಳ್ಚಿನಿ ಬೆಳೆ ಬೆಳೆಸಿದ್ದಾರೆ.
 • ಸುಮಾರು 30 ವರ್ಷಗಳ ಹಿಂದೆ ತೋಟಗಾರಿಕಾ ಇಲಾಖೆಯವರು ಸ್ವಲ್ಪ ಸಸಿ ಕೊಟ್ಟರಂತೆ.
 • ಅದನ್ನು ಬದುಗಳಲ್ಲಿ ನೆಟ್ಟು ಬೆಳೆಸಿ,ಅದರಲ್ಲಿ 5 ವರ್ಷ  ಕಳೆಯುವಾಗ ಹೂ ಮೊಗ್ಗು ಬಂತಂತೆ.
 • ದಾಳ್ಚಿನಿ ಮೊಗ್ಗು  ಮೊಗ್ಗಿಗೆ ಬೆಲೆ ಇದೆ ಎಂದು ತಿಳಿದಿದ್ದ ಕಾರಣ ಇದನ್ನೇ ಹೆಚ್ಚು ಬೆಳೆಯಬೇಕೆಂದು ನಿರ್ಧರಿಸಿ ಮತ್ತೆ ಸಸಿ ತಂದು ಸುಮಾರು ನಾಲ್ಕು ಎಕ್ರೆಯಲ್ಲಿ ಬೆಳೆಸಿದ್ದಾರೆ.
 • ಈಗ ಇಲ್ಲಿ 25  ವರ್ಷ ಹಳೆಯದಾದ ದಾಳ್ಚಿನೀ ಮರಗಳಿವೆ. ಎಕ್ರೆಗೆ ಸುಮಾರು 100 ಸಸಿಗಳಂತೆ ಬೆಳೆಸಿದ್ದಾರೆ.

ದಾಳ್ಚೀನೀ ಬೆಳೆದ ಶ್ರೀಧರ ಗೌಡರು

ಬೆಳೆ  ವಿಧಾನ;

 • ಪ್ರಾರಂಭದಲ್ಲಿ ನಾಲ್ಕು ವರ್ಷ ತನಕ ದಾಳ್ಚೀನೀ ಗಿಡಗಳು ಸಣ್ಣದಿರುವಾಗ ಅನನಾಸು ಬೆಳೆದಿದ್ದಾರಂತೆ.
 • ಮರ ದೊಡ್ಡದಾದ ನಂತರ ಅನನಾಸು ಬಿಟ್ಟು, ಅಲ್ಪ ಸ್ವಲ್ಪ ಜೋಳ ಇತ್ಯಾದಿ ಬೆಳೆಗಳನ್ನು ಬೆಳೆಸಿದ್ದಾರೆ.
 • ಬೀಜದ ಗಿಡವಾದ ಕಾರಣ ಐದನೇ ವರ್ಷಕ್ಕೆ ಹೂ ಬಿಟ್ಟಿದೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ( ಕೊಯ್ಯಲು ಸಾಕಾಗುವಷ್ಟು) ಹೂ ಬಿಡಲು ಪ್ರಾರಂಭವಾದುದು,
 • 10 ವರ್ಷಗಳ ನಂತರ. ಆ ನಂತರ ಮೊಗ್ಗು ಕೊಯ್ಯಲು ಪ್ರಾರಂಭಿಸಿದ್ದಾರೆ.
 • ವರ್ಷದಿಂದ ವರ್ಷಕ್ಕೆ ಮರ ಬೆಳೆಯುತ್ತಿದ್ದಂತೆ ಇಳುವರಿ ಹೆಚ್ಚು  ಹೆಚ್ಚು ಬರುತ್ತದೆ.
 • ಈಗ ಒಂದು ಮರದಲ್ಲಿ ಸರಾಸರಿ 2.5 ಕಿಲೋ ಇಳುವರಿ ಬರುತ್ತದೆ.
 • ಕಿಲೋ ಗೆ 1000 ರೂ. ಬೆಲೆ ಇದೆ. ಒಟ್ಟಾರೆ ಸುಮಾರು 400 ರಷ್ಟು ಮರಗಳು ಇವೆ. 
 • ಮರಕ್ಕೆ ಸರಾಸರಿ 2.5 ಕಿಲೊ ಪ್ರಮಾಣದಲ್ಲಿ ಸುಮಾರು 1000 ಕಿಲೋ ದಾಳ್ಚೀನೀ ಮೊಗ್ಗು ಸಿಗುತ್ತದೆ.

ದಾಳ್ಚೀನೀ ತೋಟ
ಬರೇ ಮೊಗ್ಗನ್ನೊಂದೇ ಕೊಯ್ಯವುದಲ್ಲ. ಮೊಗ್ಗು ಇರುವ ಚಿಗುರನ್ನೇ ಕೊಯ್ಯಲಾಗುತ್ತದೆ. ಅದರಲ್ಲಿ ಕೆಲವು ಎಲೆಗಳೂ ಇರುತ್ತವೆ. ಈ ಎಲೆಗಳು ಒಣಗಿಸಿದಾಗ ಕಿಲೋ 50 ರೂ. ಸರಾಸರಿ ಬೆಲೆ ಸಿಗುತ್ತದೆ. ಇದನ್ನು ಮಾರಿದಾಗ ಕೊಯಿಲು ಮಾಡಿದ ಖರ್ಚು ಹುಟ್ಟುತ್ತದೆ.

ದಾಳ್ಚಿನಿಯಲ್ಲಿ ಇಷ್ಟು ಇಳುವರಿ ಸಾಧ್ಯವೇ:

 • ಖಂಡಿತವಾಗಿಯೂ ಸಾಧ್ಯ. ನಾವೆಲ್ಲಾ ದಾಳ್ಚೀನೀ ಮರಗಳನ್ನು ಕಂಡಿದ್ದರೆ ಅದು ಫಲವತ್ತಾಗಿರದ ಭೂಮಿಯಲ್ಲಿ ಮಾತ್ರ.
 • ಇಲ್ಲಿ  ಮಿಶ್ರ ಬೆಳೆ ಬೆಳೆಸಿ ಮಣ್ಣಿನ  ಫಲವತ್ತತೆಯನ್ನು ಹೆಚ್ಚಿಸಿಕೊಟ್ಟಿದ್ದಾರೆ.
 • ಮಣ್ಣು ಸಡಿಲವಾಗಿದೆ. ಆಳ ಮಣ್ಣೂ ಇದೆ. ಇದರಲ್ಲಿ ದಾಳ್ಚೀನೀ ಗಿಡಗಳು ಪುಷ್ಟಿಯಾಗಿ ಬೆಳೆದಿವೆ.
 • ಫಲವತ್ತಾದ ಭೂಮಿಯಲ್ಲಿ ಬೆಳೆದ ಕಾರಣ ಅದರಲ್ಲಿ ಹೂ ಮುಗ್ಗು ಕಚ್ಚಿಕೊಂಡು ಗರಿಷ್ಟ ಪ್ರಮಾಣದಲ್ಲಿ  ಕಠಾವು ಮಾಡಬಹುದಾದ ಮೊಗ್ಗುಗಳು ದೊರೆಯುತ್ತದೆ.
 • ಕೆಲವು ತಳಿ ಗುಣದಲ್ಲಿ ಅಧಿಕ ಇಳುವರಿ ಕೊಡುವ ಲಕ್ಷಣಗಳಿರುತ್ತವೆ.
 • ಅಂತಹ ಉತ್ತಮ ಇಳುವರಿ ಕೊಡಬಲ್ಲ ಸಾಮರ್ಥ್ಯ ಇರುವ ತಳಿಯಾದರೆ  ಹೆಚ್ಚು ಹೂ ಬಿಟ್ಟು, ಹೆಚ್ಚು  ಕಾಯಿ ಕಚ್ಚುತ್ತದೆ. 

ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದ  ತೋಟಗಾರಿಕಾ ವಿಭಾಗದಲ್ಲಿ ಕೆಲವು ಮರಗಳಿದ್ದು, ಗರಿಷ್ಟ ಇಳುವರಿ ಕೊಡುತ್ತವೆ. ಅದೇ ರೀತಿಯಲ್ಲಿ ಧಾರವಾಡ ಕೃಷಿ ವಿಶ್ವ ವಿಧ್ಯಾನಿಲಯದ ತೋಟಗಾರಿಕಾ ವಿಭಾಗದ ಹಿಂದೆ ಇರುವ ತೆಂಗಿನ ತೋಟದ ಮಧ್ಯಂತರದಲ್ಲಿ ಕೆಲವು ಮರಗಳಿದ್ದು, ಅದೂ ಸಹ ಉತ್ತಮ ಇಳುವರಿ ಕೊಡುತ್ತವೆ. ಗಾಳಿ, ಬೆಳಕು, ವಾತಾವರಣ ಮತ್ತು ಮಣ್ಣಿನ ಫಲವತ್ತತೆಯ ಮೇಲೆ, ಇಳುವರಿ ನಿರ್ಧಾರವಾಗುತ್ತದೆ.

ಕಠಾವು ಮಾಡುವ ದಾಳ್ಚೀನಿ ಮೊಗ್ಗು

ದಾಳ್ಚೀನಿಯಲ್ಲಿ ತಳಿಗಳು:

 • ಇದು ಸಾಂಬಾರ ಬೆಳೆ. ಕೇರಳದ ಕಲ್ಲಿಕೋಟೆಯಲ್ಲಿರುವ  ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ  IISR calicut ದಾಳ್ಚೀನಿಯಲ್ಲಿ ನವಶ್ರೀ ಮತ್ತು ನಿತಿಶ್ರೀ ಎಂಬ ಎರಡು ಉತ್ತಮ ಇಳುವರಿ ಕೊಡಬಲ್ಲ ತಳಿಗಳನ್ನು ಗುರುತಿಸಿದೆ.
 • ಮಹಾರಾಷ್ಟ್ರದ ವೆಂಗುರ್ಲಾ ದಲ್ಲಿರುವ  ಪ್ರಾದೇಶಿಕ ಹಣ್ಣಿನ ಸಂಶೋಧನಾ ಸಂಸ್ಥೆಯಲ್ಲಿ ಕೊಂಕಣ್ ಸಿನ್ನಮೋನ್ ಎಂಬ ತಳಿಯನ್ನು ಆಯ್ಕೆ ಮಾಡಲಾಗಿದೆ.
 • ಇಂತಹ ತಳಿಗಳು ಹುಡುಕಿದರೆ ನಮ್ಮ ಸುತ್ತಮುತ್ತಲೂ ಇರಬಹುದು.

ಒಣ ದಾಳ್ಚೀನಿ ಮೊಗ್ಗು

ದಾಳ್ಚೀನಿಯಲ್ಲಿ ಬರೇ ಮೊಗ್ಗು ಮಾತ್ರವಲ್ಲ:

 • ದಾಳ್ಚಿನಿಯಲ್ಲಿ  ಮೊಗ್ಗು, ಅಧಿಕ ಮೌಲ್ಯದ ವಸ್ತು.
 • ಇದರ ಎಲೆಗೆ ಕಿಲೋ ಗೆ 50-60 ರೂ ತನಕ ಬೆಲೆ ಇದೆ.
 • ಇದನ್ನು ಮರಕ್ಕೆ ಗಾಯವಾಗದಂತೆ ಅಹಿಂಸಾತ್ಮಕವಾಗಿ  ತೊಗಟೆ ತೆಗೆದು ಅದನ್ನು ಮಾರಾಟ ಮಾಡಲಿಕ್ಕಾಗುತ್ತದೆ.
 • ಬೆಳೆದ ಮರ ಇನ್ನೇನೂ ಸಾಯುವ ಸಮಯದಲ್ಲಿ ಇದರ ಮರ ಮತ್ತು ಬೇರುಗಳಿಂದ ಅಗತ್ಯ ಸುವಾಸಿತ ಎಣ್ಣೆ ತೆಗೆಯಲಿಕ್ಕೆ ಆಗುತ್ತದೆ.
 • ಇದು ನೈಸರ್ಗಿಕ ಮೆಂಥಾಲ್ ಆಗಿದ್ದು, ಔಷಧೀಯ ಬಳಕೆಗೆ ಬೇಕಾಗುತ್ತದೆ.

ಶ್ರೀಯುತ ಶ್ರೀಧರ ಗೌಡ ಇವರು ದಾಳ್ಚೀನಿಯ ರುಚಿ ಹಿಡಿದಿದ್ದಾರೆ. ಯಾವುದೇ ಖರ್ಚು ಇಲ್ಲದೆ ವರ್ಷ ವರ್ಷವೂ ಹೆಚ್ಚು ಹೆಚ್ಚು ಆದಾಯ ಕೊಡಬಲ್ಲ ಬೆಳೆ ಇದು ಎಂದು ಇದನ್ನು ಬೆಳೆ ವಿಸ್ತರಣೆ ಮಾಡುತ್ತಲೇ ಇದ್ದಾರೆ.  ಇದರಲ್ಲಿ ಬರುತ್ತಿರುವುದೆಲ್ಲಾ ಖರ್ಚು ರಹಿತವಾದ ಕಾರಣ ನಿವ್ವಳ ಲಾಭದ್ದು ಎಂಬುದು ಇವರ ಅಭಿಪ್ರಾಯ.
ರೈತರ ಸಂಪರ್ಕಕ್ಕಾಗಿ:9008992432.
End of the article: ————————————————————————–
search words: Cinnamon cultivation # Succses story of cinnamon cultivation# Spice crop# Marati cekke# Chekke#  Konkan Cinnamon# Navashree cinnamon# Nityashree cinnamon# Dry land spice crop# High income spice crop

Leave a Reply

Your email address will not be published. Required fields are marked *

error: Content is protected !!