ಅಡಿಕೆ ಮಾರುಕಟ್ಟೆಯ ಸ್ಥಿತಿ- ಕೆಂಪಡಿಕೆ ಅಬಾಧಿತ- ಚಾಲಿ ಅಸ್ಥಿರ.

ಚಾಲಿ ಅಸ್ಥಿರ

ಕೆಂಪಡಿಕೆ ಮಾರುಕಟ್ಟೆಯಲ್ಲಿ ದೊಡ್ದ ಸಂಚಲನ ಇಲ್ಲ. ಆದರೆ ಚಾಲಿ ಮಾತ್ರ ಬಹಳ ಅಸ್ಥಿರತೆಯಲ್ಲಿ ಮುನ್ನಡೆಯುತ್ತಿದೆ. ಖಾಸಗಿಯವರ ದರ ಸಾಂಸ್ಥಿಕ ಮಾರುಕಟ್ಟೆಗಿಂತ ಕಡಿಮೆಯಾಗಿದೆ. ಸಾಂಸ್ಥಿಕ ಮಾರುಕಟ್ಟೆಯಲ್ಲಿ  ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ  ತುಂಬಾ ವ್ಯತ್ಯಾಸ ಇದೆ. ಗುಣಮಟ್ಟಕ್ಕೆ ಹೆಚ್ಚಿನ ಪ್ರಾತಿನಿಧ್ಯ ಬಂದಿದೆ. ಗುಣಮಟ್ಟದ ಅಡಿಕೆಗೆ ಮಾತ್ರ  ಗರಿಷ್ಟ ದರ ಇದೆ. ಖಾಸಗಿಯವರ ನಿರುತ್ಸಾಹ ಚಾಲಿ ಅಡಿಕೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ವಲ್ಪ ಹಿಂದೆ ಬರುವಂತೆ ಮಾಡುತ್ತದೆಯೋ ಎಂಬ ಅನುಮಾನ ಉಂಟಾಗಿದೆ. ವಿದೇಶಗಳಿಂದ ಸರಕಾರದ ಅನುಮತಿಯ ಮೇರೆಗೆ ಅಡಿಕೆ ಆಮದಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಲವು ಮೂಲಗಳ ಪ್ರಕಾರ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಪಾನ್ ಮಸಾಲ ರೂಪದಲ್ಲಿ ಅಡಿಕೆ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಹಿಂದೆ ಅಲ್ಲಲ್ಲಿ ಪಾನ್ ಬೀಡಾ ಸ್ಟಾಲುಗಳು ಇಟ್ಟುಕೊಂಡು ಅಲ್ಲಿ ವೀಳ್ಯದೆಲೆ ಇತ್ಯಾದಿಗಳ ಜೊತೆಗೆ ಅಡಿಕೆ ಸೇರಿಸಿ ಪಾನ್ ತಯಾರಿಕೊಡುವವರು ತುಂಬಾ ಬ್ಯೂಸಿ ವ್ಯವಹಾರ ಮಾಡುತ್ತಿದ್ದರು. ಈಗ ಅಂತಹ ಅಂಗಡಿಗಳಲ್ಲಿ ಸಿದ್ದ ರೂಪದ ಪಾನ್ ಮಸಾಲ ವ್ಯಾಪಾರವಾಗುವಷ್ಟು ಸ್ಥಳದಲ್ಲೇ ತಯಾರಾಗುವ ಪಾನ್ ಬೀಡಾ ಮಾರಾಟವಾಗುತ್ತಿಲ್ಲ. ಜನ ತುಂಬಾ ಬ್ಯೂಸಿಯಾಗಿರುತ್ತಾರೆ. ತಕ್ಷಣ ಪ್ಯಾಕೆಟ್ ನಲ್ಲಿ ಸಿದ್ದವಾಗಿ ದೊರೆಯುವ ಪಾನ್ ಮಸಾಲದ ಮಾಲೆಯನ್ನು ಖರೀದಿಸಿ ಅವರವರ ಕೆಲಸಕ್ಕೆ ಹೋಗುತ್ತಾರೆ. ಇದು ಪಾನ್ ಬೀಡಾಕ್ಕಿಂತ ಮಿತವ್ಯಯವೂ ಆಗುತ್ತದೆ. ಉತ್ತರ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಈಗ ಪಾನ್ ಬೀಡಾ ತಯಾರಿಸಿಕೊಡುವವರಿಗೆ ಹಿಂದಿನ ಕ್ರಮದ ವ್ಯಾಪಾರ ಬರೇ 50-60%  ಮಾತ್ರ. ಹಾಗೆಂದು ವ್ಯವಹಾರ ಚೆನ್ನಾಗಿದೆ. ಸಿದ್ದ ರೂಪದ ಪಾನ್ ಮಸಾಲ ವ್ಯಾಪಾರ ಹಿಂದಿಗಿಂತ ಹೆಚ್ಚಾಗಿದೆ.  ಈ ಕಾರಣದಿಂದ ತಾಜಾ (Fresh supari) ಅಡಿಕೆಯ ಬಳಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕೆಲವು ಜನ ಯಾವಾಗಲೂ ಸ್ಥಳದಲ್ಲೇ ತಯಾರಿಸಿ ಕೊಡುವ ಪಾನ್  ಮಾತ್ರ ತಿನ್ನುವವರು ಇದ್ದಾರೆ. ಅವರು ಉತ್ತಮ ಅಡಿಕೆ ( ಹಳೆ ಅಡಿಕೆ)ಯನ್ನೇ ಹೆಚ್ಚಾಗಿ ಖಾಯಸ್ ಮಾಡುವ ಕಾರಣ ಹಳೆ ಅಡಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಗುಜರಾತ್ ನ ಅಹಮದಾಬಾದ್ ನಲ್ಲಿನ ಒಂದು ಪ್ರಮುಖ ಪಾನ್ ಶಾಪ್ ನ ಓರ್ವ ಸಿಬ್ಬಂದಿ ಹೇಳಿದ ವಿಚಾರ. ವ್ಯಾಪಾರ ಹಿಂದಿನ ಹಾಗೆಯೇ ಇದೆ. ಆದರೆ ಹಿಂದಿನಷ್ಟು ಕೆಲಸ ಇಲ್ಲ. ಗ್ರಾಹಕರಲ್ಲಿ ಹೆಚ್ಚಿನವರು ಪಾನ್ ಮಸಾಲ ಪ್ಯಾಕೆಟ್ ಒಯ್ಯುವ ಕಾರಣ ಕೆಲಸ ಕಡಿಮೆಯಾಗಿದೆ ಎನ್ನುತ್ತಾರೆ.

ಅವರು ಹೇಳಿದ್ದಕ್ಕೂ ಈಗ ಮಾರುಕಟ್ಟೆಯಲ್ಲಿ ಆಗುತ್ತಿರುವುದಕ್ಕೂ ಹೋಲಿಕೆ ಕಂಡು ಬರುತ್ತದೆ.ಹಳೆ ಅಡಿಕೆಗೂ ಹೊಸತಕ್ಕೂ ಬರೋಬ್ಬರಿ ಕಿಲೋ ಮೇಲೆ 100-125 ರೂ.ವ್ಯತ್ಯಾಸ. ಹಳತು ಖರೀದಿಗೆ ಖಾಸಗಿಯವರೂ ಹಿಂದೇಟು ಹಾಕುವುದಿಲ್ಲ. ಸಹಕಾರಿಗಳೂ “ಬರಲಿ ಬರಲಿ ಎಷ್ಟಿದ್ದರೂ ಬರಲಿ” ಎಂಬ ಸ್ಥಿತಿಯಲ್ಲಿದ್ದಾರೆ.

ಕಚ್ಚಾ ಬಳಕೆಗೆ ಹೊಂದುವ ಅಡಿಕೆ ಇಲ್ಲ:

ಕಚ್ಚಾ ಬಳಕೆಗೆ ಹೊಂದುವ ಅಡಿಕೆ
  • ಕೆಲವರು ಬರೇ ಅಡಿಕೆಯನ್ನೇ ಜಗಿಯುವವರೂ ಇದ್ದಾರೆ. ಮತ್ತೆ ಕೆಲವರು ಸಿಹಿ, ತಂಬಾಕು ಮಿಶ್ರಿಯ ಪಾನ್ ತಿನ್ನುತ್ತಾರೆ.
  • ಇಂತವರು ಆಯ್ಕೆ ಮಾಡುವುದು ಅತ್ಯುತ್ತಮ ಗುಣಮಟ್ಟದ ಅಡಿಕೆ.
  • ಒಳಗೆ ಹಾಳಾಗಿರಬಾರದು. ಗಾತ್ರವೂ ದೊಡ್ದದಿರಬೇಕು.
  • ಇಂತಹ ಅಡಿಕೆ ಇದ್ದರೆ ಅದಕ್ಕೆ ಬೇಡಿಕೆ ಇದೆ.
  • ಇಲ್ಲವಾದರೆ ಅದೆಲ್ಲಾ ಹೋಗುವುದು ಪಾನ್ ಮಸಾಲಾ ತಯಾರಿಕೆಗೆ.
  • ಹೊಸ ಅಡಿಕೆ ಈ ವರ್ಷ ಬಹುಶಃ 50% ಹಾಳಾಗಿದೆ.
  • ಹಾಳಾದ ಅಡಿಕೆಯನ್ನು ಮೊದಲು ಮಾರುಕಟ್ಟೆಗೆ ಬಿಡುವುದು ಬೆಳೆಗಾರರ ಕ್ರಮ.
  • ಹಾಗಾಗಿ ಬರುವ ಬಹುತೇಕ ಅಡಿಕೆ ಈಗ ಪಾನ್ ಮಸಾಲ ತಯಾರಕರ ಕಂಟೈನರ್ ಗೆ ಹೋಗಿ ಪ್ಯಾಕೆಟ್ ಆಗಿ ಬರುತ್ತಿದೆ.
  • ಪಾನ್ ಮಸಾಲ ಎಂಬುದು ಅತೀ ದೊಡ್ಡ ಸಾಗರದಂತೆ.
  • ಇದಕ್ಕೆ ಅಡಿಕೆ ಎಷ್ಟಿದ್ದರೂ ಬೇಕು. ಗುಟ್ಕಾ ತಿನ್ನವ ಹವ್ಯಾಸ ಉಳ್ಳವರು ದಿನಕ್ಕೆ 20 -25 ಪ್ಯಾಕೆಟ್  ತಿನ್ನುವುದೂ ಇದೆ.
  • ಹಾಗಾಗಿ ಮುಂದಿನ ದಿನಗಳಲ್ಲಿ ಚಾಲಿ + ಕೆಂಪು ಎರಡೂ ಪಾನ್ ಮಸಾಲಕ್ಕೆ ಬಳಕೆಯಾಗಿ ತಾಜಾ ಚಾಲಿಯ ಬಳಕೆ ಕಡಿಮೆಯಾಗಲಿದೆ ಎನ್ನುತ್ತಾರೆ.
  • ಈಗ ಚಾಲಿ ಅಡಿಕೆಯ ದರ ಅಸ್ತಿರವಾಗಲು  ಪ್ರಮುಖ ಕಾರಣ ಆಮದು.
  • ಸರಕಾರ ಅಧಿಕೃತ ಪರವಾನಿಗೆಯಂತೆ ಸಿಂಗಾಪುರ ಮತ್ತು UAE ಮೂಲಕ ಅಡಿಕೆ ಆಮದಾಗುತ್ತಿದೆ ಎನ್ನುತ್ತಾರೆ ಶಿರಸಿಯ ಓರ್ವ ವ್ಯಾಪಾರಿಗಳು.
  • ಪ್ರಮಾಣ ಇತ್ಯಾದಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ ಅಡಿಕೆ ಆಮದು ಆಗುತ್ತಿರುವುದು ಹೌದು ಎನ್ನುತ್ತಾರೆ.
  • ಸ್ಥಳೀಯ ಅಡಿಕೆಯ ದರ ಮತ್ತು ವಿದೇಶಗಳ ಅಡಿಕೆಯ ದರ  ಭಾರಿ ವ್ಯತ್ಯಾಸವಿಲ್ಲ,
  • ಆದರೆ ಗುಣಮಟ್ಟ ಈಗೀಗ ಇಲ್ಲಿಯ ಅಡಿಕೆ ತರಹವೇ ಬರುವ ಕಾರಣ ಗುಟ್ಕಾ ಉದ್ದಿಮೆದಾರರು ಅದನ್ನೇ ಬಯಸುತ್ತಾರೆ.
  • ಗುಟ್ಕಾ ತಯಾರಕರಿಗೆ ಗುಣಮಟ್ಟದ ಬಗ್ಗೆ ಹೆಚ್ಚಿನ ಮಹತ್ವ ಇಲ್ಲದ ಕಾರಣ ಅಡಿಕೆ ಆದರೆ ಸೈ ಎಂಬ ಪರಿಸ್ಥಿತಿ ಇದೆ.

ಆಮದು ಪ್ರಾರಂಭವಾಗಿ ಸುಮಾರು 2 ತಿಂಗಳು ಕಳೆದಿದೆ. ಸದ್ಯವೇ ನಿಯೋಗಗಳು ಭಾರತ ಸರಕಾರದ ಕಣ್ಣು ತೆರೆಸಿ ಸ್ವಲ್ಪ ಕಡಿವಾಣ ಹಾಕಿಸಬೇಕಷ್ಟೆ. ಸದ್ಯವೇ ಇದು ಆಗಲಿದ್ದು. ಮುಂದೆ ಚುನಾವಣೆ ಇರುವ ಕಾರಣ ಬೆಳೆಗಾರರ ಪರವಾಗಿ ಸರಕಾರ ಮೃದು ಧೋರಣೆ ತೋರಿಸದೆಯೂ ನಿರ್ವಾಹ ಇಲ್ಲದಾಗಿ ಮತ್ತೆ ಮಾರುಕಟ್ಟೆ ಒಂದೆರಡು ತಿಂಗಳ ತರುವಾಯ ಯಥಾಸ್ಥಿತಿಗೆ ಬರಬಹುದು. 

ಪ್ರಚಲಿತ ಅಡಿಕೆ ಧಾರಣೆ:

ಚಾಲಿ ಅಡಿಕೆ:

ಚಾಲಿಗೆ ಖಾಸಗಿಯವರ ಗರಿಷ್ಟ ದರ 42,500 ಸಹಕಾರಿ ಖರೀದಿ ಕೇಂದ್ರಗಳ ಗರಿಷ್ಟ ದರ 45,000 ಸರಾಸರಿ ಎಲ್ಲರೂ ಕೊಳುವ ದರ 42,000-42,500 ಮಾತ್ರ.ಹಳೆ ಅಡಿಕೆಗೆ ಖಾಸಗಿಯವರು 55000 ತನಕ ಖರೀದಿ ಮಾಡುತ್ತಿದ್ದಾರೆ.  ಪಟೋರಾ ದರವೂ ಕ್ವಿಂಟಾಲಿಗೆ 1500 ರೂ. ಕಡಿಮೆಯಾಗಿದೆ. ಉಳ್ಳಿ ಗಡ್ಡೆ, ಕರಿಗೋಟು ಯಥಾಸ್ಥಿತಿಯಲ್ಲಿದೆ.

  • ಮಂಗಳೂರು: ಹಳೆಯ ಅಡಿಕೆ: 54000, 50000
  • ಹೊಸ ಅಡಿಕೆ: 45000, 42050
  • ಕಾರ್ಕಳ:ಹಳತು: 54500, 50000
  • ಹೊಸತು: 45000, 43000
  • ಕುಂದಾಪುರ: ಹಳೆಯದು :54000, 50000
  • ಹೊಸತು: 44500, 44000
  • ಪುತ್ತೂರು:ಹೊಸತು: 44500, 42000
  • ಹಳೆಯದು: 54500, 51000
  • ಸುಳ್ಯ: ಹೊಸತು: 45000, 42700
  • ಹಳೆಯದು: 55000, 51000
  • ಬೆಳ್ತಂಗಡಿ: ಹೊಸತು: 42400, 36500
  • ಹಳೆಯದು: 54000, 50000
  • ಕುಮಟಾ: ಹಳೆಯದು: 48769, 48149
  • ಹೊಸತು: 38609, 38089
  • ಶಿರಸಿ: ಹೊಸತು: 39419, 38173
  • ಸಿದ್ದಾಪುರ: 38999, 38499
  • ಸಾಗರ: 38529, 37899
  • ಯಲ್ಲಾಪುರ: 39130, 38209
  • ಹೊಸನಗರ: 38099, 37899
ಕೆಂಪಡಿಕೆ ಅಬಾಧಿತ

ಕೆಂಪು ಅಡಿಕೆ:

ಮೇ ಎರಡನೇ ವಾರದಲ್ಲಿ 50000 ದ ಸಮೀಪಕ್ಕೆ ತಲುಪಿದ ಧಾರಣೆ ತುಸು ಇಳಿಕೆ ಆಗಿ 49,000 ದಲ್ಲಿ  ನಿಂತಿದೆ. ಆಮದು ಅಡಿಕೆ ಬೇಯಿಸಿದ ಕೆಂಪಡಿಕೆ ಅಲ್ಲ, ಹಾಗಾಗಿ ಕೆಂಪಡಿಕೆಗೆ ಅಂತಹ ಸಮಸ್ಯೆ ಇಲ್ಲ. ಮಾರುಕಟ್ಟೆಯಲ್ಲಿ ಸುದ್ದಿಗಳಿಗೆ  ಅನುಗುಣವಾಗಿ  ದರ ಏರಿಳಿತ ಆಗುವಂತೆ ದರ ಸ್ವಲ್ಪ ಕೆಳಗೆ ಬಂದಿದೆ. ಅದರೆ ಕೆಂಪಡಿಕೆ ದರ ಅಬಾಧಿತ ಎನ್ನುತ್ತಾರೆ. ಹೊಸನಗರದಲ್ಲಿ ಅತ್ಯಧಿಕ 1533 ಚೀಲ ಮಾರಾಟವಾಗಿದೆ. ಉಳಿದೆಡೆ ಕಡಿಮೆ.

  • ಶಿರಸಿ: ರಾಶಿ: 49799, 48934
  • ಯಲ್ಲಾಪುರ: ರಾಶಿ: 54600, 51819
  • ಸಾಗರ: ರಾಶಿ: 49229, 48699
  • ಚಿತ್ರದುರ್ಗ: ರಾಶಿ: 48889, 48699
  • ಹೊನ್ನಾಳಿ: ರಾಶಿ: 49300, 49255
  • ಭದ್ರಾವತಿ: ರಾಶಿ. 49749, 48954
  • ಚೆನ್ನಗಿರಿ: ರಾಶಿ:49759, 48887
  • ಹೊಸನಗರ: ರಾಶಿ:50089, 49989
  • ಶಿವಮೊಗ್ಗ: ರಾಶಿ:49939, 49499
  • ತೀರ್ಥಹಳ್ಳಿ: ರಾಶಿ:49509, 49299

ಕಾಳುಮೆಣಸು ಧಾರಣೆ:

ಪೆಪ್ಪರ್

ಕಾಳುಮೆಣಸು ದಾರಣೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಇದಕ್ಕೆ ನಿಖರ ಕಾರಣ ಗೊತ್ತಿಲ್ಲ. ಕೊಚ್ಚಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಂತೆ ಇಲ್ಲಿಯೂ ಕಡಿಮೆಯಾಗುತ್ತಿದೆ. ಕ್ಯಾಂಪ್ಕೋ ಕರಿಮೆಣಸಿನ ದರ ಸ್ಥಿರತೆಗೆ ಬೆಂಗಾವಲಾಗಿದ್ದರೂ ಒಂದು ವಾರದಿಂದ ಇಲ್ಲಿಯೂ ಸಹ ಕಿಲೋ ಮೇಲೆ ರೂ.15 ಕಡಿಮೆಯಾಗಿದೆ. ಖಾಸಗಿಯವರಲ್ಲಿ ಇನ್ನೂ ಕಡಿಮೆ ಇದೆ. ಸ್ವಲ್ಪ ಪಮಾಣದಲ್ಲಿ ಆಮದು ಅಗುತ್ತಿದೆ. ಜೂನ್ ತಿಂಗಳಲ್ಲಿ ಇನ್ನೂ ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಜುಲೈ ಸುಮಾರಿಗೆ ದರ ಏರಿಕೆಯಾಗಬಹುದು. ಬೆಳೆಗಾರರು ಕರಿಮೆಣಸಿನ ದರ 500 ದಾಟುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಮಾರಾಟ ಮಾಡುತ್ತಾ ಸರಾಸರಿ ಉತ್ತಮ ಬೆಲೆ ಪಡೆಯುವುದು ಸೂಕ್ತ.

  • ಕ್ಯಾಂಪ್ಕೋ ದರ: ಕ್ವಿಂಟಾಲು.ರೂ.49,000
  • ಖಾಸಗಿ ದರ:47500-49000

ಶುಂಠಿ ದರ:

ಇಡೀ ಸೀಸನ್ ನಲ್ಲಿ  ಶುಂಠಿ ದರ ಏನೂ ಏರಿಕೆಯಾಗಲಿಲ್ಲ. ಈಗ ಬಹುತೇಕ ಬೆಳೆಗಾರರು ಕಿತ್ತು ಆಗಿದೆ. ನಾಟಿ ಮಾಡುವವರು ನೆಟ್ಟು ಆಗಿದೆ. ಈಗ ಮತ್ತೆ ಸ್ವಲ್ಪ ದರ  ಏರಿಕೆ ಕಾಣಲಾರಂಭಿಸಿದೆ. ಶಿರಾಳಕೊಪ್ಪದಲ್ಲಿ 1600, ಹಾಸನದಲ್ಲಿ 1800 ಇದೆ ಎಂಬ ಸುದ್ದಿಗಳಿವೆಯಾದರೂ ಖರೀದಿದಾರರು ಕಡಿಮೆ ಇದ್ದಾರೆ.

ಕೊಬ್ಬರಿ ಧಾರಣೆ:

ತೆಂಗಿನ ಕಾಯಿಯ ದರ ಭಾರೀ ಇಳಿಕೆಯಾಗಿದೆ.  ಹಾಗಾಗಿ ಕೊಬ್ಬರಿ ದರವೂ ಕುಸಿತಕಂಡಿದೆ.18000 ತನಕ ತಲುಪಿದ್ದ ಬಾಲ್ ಕೊಬ್ಬರಿ ದರ ಈಗ 13700 ತನಕ ಇಳಿಕೆಯಾಗಿದೆ. ಈಗ ಕೊಯಿಲಿನ ಸೀಸನ್ ಹಾಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬರುತ್ತಿದೆ. ತೆಂಗಿನ ಕಾಯಿಯ ಹುಡಿ(Decicated coconut) ಗೆ ಬೇಡಿಕೆ ಕಡಿಮೆಯಾಗಿದೆ. ಕೆಲವು ಬೆಳೆಗಾರರು ಎಳೆಯ ಕಾಯಿ ಕಠಾವು ಮಾಡಿ ಒಂದೆರಡು ದಿನ ಬಿಸಿಲಿಗೆ ಹಾಕಿ ಮಾರಾಟ ಮಾಡಿದ ಕಾರಣ ಈಗ ತೆಂಗಿನ ಕಾಯಿಯ ಬೇಡಿಕೆ ಕಡಿಮೆಯಾಗಿದೆ ಎಂಬುದಾಗಿ ವರ್ತಕರು ಹೇಳುತ್ತಾರೆ.

ಕೊಬ್ಬರಿ
  • ಅರಸೀಕೆರೆ ಕೊಬ್ಬರಿ( ಬಾಲ್) 13740 ಕ್ವಿಂ.
  • ತಿಪಟೂರು:13500
  • ಚೆನ್ನರಾಯಪಟ್ನ :7000-10200
  • ಮಂಗಳೂರು –ಪುತ್ತೂರು ಎಣ್ಣೆ ಕೊಬ್ಬರಿ: 8000-8100
  • ಹಸಿ ಸಿಪ್ಪೆ ಸುಲಿದ ಕಾಯಿ ಕಿಲೋ: 21-22

ಕಾಫೀ ಧಾರಣೆ: 50 kg

ಕಾಫೀ ದರ ಸ್ಥಿರವಾಗಿ ಮುಂದುವರಿದಿದೆ. ಇನ್ನು ಇಳಿಕೆ ಸಾಧ್ಯತೆ ಕಡಿಮೆ.

  • ಅರೇಬಿಕಾ ಪಾರ್ಚ್ ಮೆಂಟ್:15700- 16500
  • ಅರೇಬಿಕಾ ಚೆರಿ: 8200-8800
  • ರೋಬಸ್ಟಾ ಪಾರ್ಚ್ ಮೆಂಟ್:9600-9800
  • ರೋಬಸ್ಟಾ ಚೆರಿ: 4000-4700

ಏಲಕ್ಕಿ ಧಾರಣೆ: ಕಿಲೋ.

ಏಲಕ್ಕಿ ಧಾರಣೆ ಕುಸಿತವಾಗಿ ಬೆಳೆಗಾರರಿಗೆ ಅದು ಲಾಭದಾಯಕ ಬೆಳೆಯಾಗಿಲ್ಲ. ಕೇರಳದ ಇಡುಕ್ಕಿಯಲ್ಲಿ  ಕೆಲವು ಬೆಳೆಗಾರರು ಪ್ರತಿಭಟನೆ ರೂಪದಲ್ಲಿ ಏಲಕ್ಕಿ ಗಿಡ ಕಡಿದು ಹಸುಗಳಿಗೆ ಮೇವು  ರೂಪದಲ್ಲಿ ಕೊಡುತ್ತಿದ್ದಾರೆ.ಈಗಿನ ಕೆಲಸಗಾರರ ಮಜೂರಿ ಇತ್ಯಾದಿಗಳಿಂದ ಏಲಕ್ಕಿಯ ಈ ದರ ಲಾಭದಾಯಕವಲ್ಲ.

  •  ಆಯದೆ ಇದ್ದದ್ದು: 531.00
  • ಕೂಳೆ,  430-450.00  
  •  ನಡುಗೊಲು,  500-550.00 
  •  ರಾಶಿ,  600-650.00  
  •  ಜರಡಿ,  750-800.00 
  • ಹೇರಕ್ಕಿದ್ದು,  1100-1150.00  
  • ಹಸಿರು ಸಾದಾರಣ,  600-700.00  
  • ಹಸಿರು ಉತ್ತಮ,  900-950.00
  • ಹಸಿರು ಅತೀ ಉತ್ತಮ,  1200-1250.00  

ರಬ್ಬರ್ ಧಾರಣೆ: ಕಿಲೋ

ರಬ್ಬರ್ ದರ ಸ್ಥಿರವಾಗಿದೆ. .

  • 1X GRADE -182.00
  • RSS:4:172.00
  • RSS 5:165.00
  • RSS 3:172.50
  • LOT:160.00
  • SCRAP: 111.00-119.00

ಕೊಕ್ಕೋ :ಕಿಲೋ.

ತೆಂಗು ಅಡಿಕೆ ತೋಟದಲ್ಲಿ ಬೆಳೆಯಬಹುದಾದ ಮಿಶ್ರ ಬೆಳೆ ಕೊಕ್ಕೋ ಗೆ ಬೆಲೆ ಏರಿಕೆಯಾಗಲಿದೆ. ಕೊಕ್ಕೋ ಕೊರತೆ ಇದೆ. ಹಾಗಾಗಿ ಸರಕಾರದ ಇಲಾಖೆಗಳ ಮೂಲಕ ಕೊಕ್ಕೋ ಬೆಳೆ ಪ್ರೋತ್ಸಾಹವೂ ನಡೆಯುತ್ತಿದೆ.

ಈ ವರ್ಷ ಕೊಕ್ಕೋ ಬೆಲೆ ಚೆನ್ನಾಗಿದ್ದು, ಹಸಿ ಬೀಜಕ್ಕೆ ಕಿಲೋ 68.00 ರೂ. ತನಕ ಒಣ ಬೀಜಕ್ಕೆ 210 ತನಕ ಬೆಲೆ ಇದೆ.

ಕಾಡುತ್ಪತ್ತಿ (ಸಾಂಬಾರ)

  • ಜಾಯೀ ಕಾಯಿ:180 -200 ಕಿಲೊ
  • ಜಾಯಿ ಪತ್ರೆ: 800-950
  • ದಾಲ್ಛಿನಿ ಮೊಗ್ಗು: 900-1000
  • ರಾಂಪತ್ರೆ: 500-600
  • ಗೋಟು: 150 -200

ಅಡಿಕೆ ಬೆಳೆಗಾರರ ಪಾಲಿಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ಬೆಲೆ ಸ್ಥಿರತೆಗೆ ಕಾರಣವಾಗಿದೆ ಎನ್ನಬಹುದು. ಹಾಗೆಯೇ ಕರಿಮೆಣಸಿನ ಬೆಲೆ ಉಳಿಸಲೂ ಸಹ ಕ್ಯಾಂಪ್ಕೋ ಸಹಕರಿಸಿದೆ ಎನ್ನುತ್ತಾರೆ ಕಾರ್ಕಳದ ಒಬ್ಬ ಖಾಸಗಿ ವರ್ತಕರು. ಕೊಕ್ಕೋ ಖರೀದಿಯಲ್ಲೂ ಇದರ ಪಾತ್ರ ಇದೆ. ಸದ್ಯವೇ ತೆಂಗಿನ ಕಾಯಿಯ ಕೊಬ್ಬರಿ ಎಣ್ಣೆ ಕ್ಷೇತ್ರಕ್ಕೂ ಇಳಿಯುವ ಸಾಧ್ಯತೆ ಇದ್ದು, ಬೆಳೆಗಾರರಿಗೆ ಅನುಕೂಲ ಆಗಬಹುದು.

ಬೆಳೆಗಾರರು ಅಂಜಬೇಕಾಗಿಲ್ಲ, ಈ ವರ್ಷ  ದರ ಹೀಗೆಯೇ ಉಳಿಯಬಹುದು. ಆದರೆ, ಈಗ ಬಂದ ಬೆಲೆ ಮುಂದೆಯೂ ಶಾಶ್ವತವಾಗಿ ಉಳಿಯುವ ಭರವಸೆ ಇಲ್ಲ. ಈಗ ದೊರೆಯುವ ಹೆಚ್ಚಿನ ಬೆಲೆಯನ್ನು ದುಂದುವೆಚ್ಚ ಮಾಡದೆ ಮುಂದಿನ ದಿನಗಳಲ್ಲಿ ಏನಾದರೂ ದರ ಕುಸಿತವಾದರೆ ಆ ಸಮಯಕ್ಕೆ ಆಪತ್ ಧನವಾಗಿ ಉಳಿಸಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!