ಸರ್ವಾಂಗಕ್ಕೂ ಬೆಲೆ ಇದೆ- ದಾಳ್ಚಿನಿ – ಬೆಳೆಸಿ.

ದಾಳ್ಚಿನಿ ಮೊಗ್ಗು

ಯಾವುದೇ ರೋಗ ಇಲ್ಲ. ಕೀಟ ಇಲ್ಲ. ಬೆಳೆಸಲು ಗೊಬ್ಬರ, ನೀರಾವರಿ ಬೇಕಿಲ್ಲ . ಫಸಲಿಗೆ ಮಾತ್ರವಲ್ಲದೆ, ಎಲೆ , ತೊಗಟೆ, ಕಾಯಿ ಎಲ್ಲದಕ್ಕೂ ಬೇಡಿಕೆ ಇರುವ ನಮ್ಮೆಲ್ಲರ ಚಿರಪರಿಚಿತ ಸಂಬಾರ ಮರ ದಾಳ್ಚಿನಿ.

 •  ಬೆಳೆಸಿದವರಿಗೆ  ನಿರಂತರ ಲಾಭ ತಂದು ಕೊಡಬಲ್ಲ ಸಸ್ಯ ದಾಳ್ಚಿನಿ.
 • ದಾಳ್ಚಿನಿ ಕಾಯಿಗೆ 750 ರೂ ತನಕ ಇರುತ್ತದೆ.
 • ಎಲೆಗೆ ಕಿಲೋ 50 ರೂ.
 • ಚೆಕ್ಕೆಗೆ ಕಿಲೋ 75-100 ತನಕವೂ ಇರುತ್ತದೆ

 ಒಂದು ಗಿಡದ ಸರ್ವಾಂಗಕ್ಕೂ ಬೆಲೆ ಇರುವ ಏಕಮಾತ್ರ ಸಾಂಬಾರ ಬೆಳೆ ದಾಳ್ಚಿನಿ. ಇದನ್ನು ಬೆಳೆಸುವುದು ಸುಲಭ.

ಬೆಳೆ ಕ್ರಮ:

 • ಈಗ ನಮ್ಮಲ್ಲಿರುವ ದಾಳ್ಚಿನಿ ಸಸ್ಯ ಹಕ್ಕಿ- ಬಾವಲಿ ಮುಂತಾದ ಜೀವಿಗಳಿಂದ ಬೀಜ ಪ್ರಸಾರವಾಗಿ ಹುಟ್ಟಿ ಬೆಳೆದವುಗಳು.
 •  ಇದರ ಕಾಯಿ ಕೀಳುತ್ತೇವೆ, ಎಲೆ ತೆಗೆಯುತ್ತೇವೆ, ಚೆಕ್ಕೆ ತೆಗೆಯುತ್ತೇವೆ. ಎಲ್ಲವೂ ಹಿಂಸಾತ್ಮಕ ವಿಧಾನದಲ್ಲಿ.
 • ದಾಲ್ಚಿನಿ ಕಾಯಿ ಕೊಯ್ಯಲು, ಎಲೆ ಮಾರಲು, ಚೆಕ್ಕೆ  ತೆಗೆಯಲು ಗೆಲ್ಲನ್ನು ಸವರುತ್ತೇವೆ, ನಂತರ ಮೂರು ನಾಲ್ಕು ವರ್ಷ ಎಲೆಗಳೂ ಇಲ್ಲ, ಕಾಯಿಯೂ ಇರುವುದಿಲ್ಲ.

ಇದರ ಮಹತ್ವ ಗೊತ್ತಿಲ್ಲದೆ ನಾವು ಉರುವಲಿಗಾಗಿಯೂ  ಕಡಿಯುತ್ತೇವೆ. ನಿರಂತರ ಹೀಗೆ ಮಾಡಿ ಮರಗಳು ನಾಶವಾಗಿವೆ. ದಾಳ್ಚೀನಿ ಸಸ್ಯವರ್ಗ ನಾಶವಾಗದೇ ಇರಲು ಇರುವ ಏಕೈಕ ಮಾರ್ಗ ಅದನ್ನು ನೆಟ್ಟು ಬೆಳೆಸುವುದು.

 • ದಾಳ್ಚೀನಿ (cinnamomum verum)ಅತೀ ಪ್ರಾಚೀನ ಸಾಂಬಾರ ಸಸ್ಯ.
 • ಮೂಲ ದಕ್ಷಿಣ ಭಾರತದ ಮಳೆನಾಡು. ಉತ್ತಮ ಮಳೆಯಾಗುವಲ್ಲಿ ಚೆನ್ನಾಗಿ ಬೆಳೆಯುತ್ತದೆ.
 • ದಾಳ್ಚೀನಿಯನ್ನು ಬೆಳೆಸುವುದು ಸುಲಭ. ಹಣ್ಣಾದ ಬೀಜ  ಬಿತ್ತಿದರೆ ಸಸಿಯಾಗುತ್ತದೆ.
 • ಜೂನ್- ಜುಲೈತಿಂಗಳಿಗೆ ಹಣ್ಣುಗಳಾಗುತ್ತವೆ.
 • ಹಣ್ಣುಗಳನ್ನು ಹಕ್ಕಿಗಳು ತಿಂದು ಹಿಕ್ಕೆ ಹಾಕಿದಾಗ ಅದು ಚೆನ್ನಾಗಿ ಮೊಳಕೆ ಬಂದಿರುತ್ತದೆ.

ದಾಳ್ಛಿನೀ ಚೆಕ್ಕೆ

ಸಡಿಲ ಮಣ್ಣು ಇರುವ ಕಡೆ ಸ್ವಾಭಾವಿಕವಾಗಿ ಹುಟ್ಟಿದ ಸಸಿಗಳನ್ನು ಅಲ್ಲಿಂದ ಜಾಗರೂಕತೆಯಲ್ಲಿ  ತೆಗೆದು ಪಾಲಿಥೀನ್ ಚೀಲದಲ್ಲಿ ಬೆಳೆಸಿ ನಾಟಿ ಮಾಡಬಹುದು.

 • ಸಸಿಗೆ ತಾಯಿ ಗುಣ ಯಥಾವತ್ ಸಸ್ಯಕ್ಕೆ ಬರಬೇಕಾದರೆ ಕಸಿ ಗಿಡ ಉತ್ತಮ.
 • ದಾಳ್ಚೀನಿಯನ್ನು ಸಾಮಿಪ್ಯ ಕಸಿ, ಗೂಟಿ ಕಸಿ ಬಡ್ಡಿಂಗ್  ಮೂಖಾಂತರ ಸಸ್ಯಾಭಿವೃದ್ಧಿ ಮಾಡಬಹುದು.
 • ದಾಳ್ಚೀನೀ ಗಿಡವನ್ನು ಸೊಪ್ಪಿನ ಬೆಟ್ಟ ಅಥವಾ ತೋಟದ ಬದಿಯಲ್ಲಿ ನೆಟ್ಟು ಬೆಳೆಸಬಹುದು.
 • ಕಸಿ ಗಿಡಗಳು ಹೆಚ್ಚು ಎತ್ತರಕ್ಕೆ ಬೆಳೆಯಲಾರವು
 •  ಸಸಿಗಳಿಗೆ 4-5 ವರ್ಷ ಆದ ನಂತರ ಹೂ ಬಿಡಲು ಪ್ರಾರಂಭವಾಗುತ್ತದೆ.
 •  ಹೂ ಬಿಟ್ಟು ಕಾಯಿ ಬೆಳೆಯುವ ಸಮಯದ ತನಕ  ಬುಡದಲ್ಲಿ ಬೆಳಗ್ಗಿನ ಸಮಯ ಹೊಗೆ ಹಾಕಿದರೆ  ಕಾಯಿ ಉದುರುವಿಕೆ ಕಡಿಮೆಯಾಗುತ್ತದೆ.
 •  ಮರ ಬೆಳೆದಂತೆ ಇಳುವರಿ ಹೆಚ್ಚು.

   ಹೀಗೆ ಬೆಳೆಸಿ:

 •  ದಾಳ್ಚೀನೀ ಸಸ್ಯಗಳು  ತಗ್ಗಿನಲ್ಲಿ ವಿಶಾಲವಾಗಿ ಬೆಳೆದರೆ ಕಾಯಿ, ಎಲೆ, ಚೆಕ್ಕೆ ತೆಗೆಯುವುದು ಸುಲಭ.
 • ಗಿಡಕ್ಕೆ ಸುಮಾರು ಎರಡರಿಂದ ಮೂರು ವರ್ಷ ಪ್ರಾಯವಾದ ನಂತರ ಬೆಳವಣಿಗೆಯನ್ನು ಗಮನಿಸಿ ಅದಕ್ಕೆ ತರಬೇತಿ ನೀಡಬೇಕು.
 • ಸಸ್ಯವನ್ನು ನೆಲಮಟ್ಟದಿಂದ ಅರ್ಧ ಇಲ್ಲವೇ ಮುಕ್ಕಾಲು ಅಡಿ ಎತ್ತರಕ್ಕೆ ಕಾಂಡ ಸಿಗಿಯದಂತೆ ಗರಗಸದಿಂದ ಸಸಿ ಚಿಗುರುವ ಸಮಯದಲ್ಲಿ ಕತ್ತರಿಸಬೇಕು.
 • ಕತ್ತರಿಸಿದ ಗಾಯದ ಭಾಗಕ್ಕೆ ಸಗಣಿಯನ್ನು ಅಂಟಿಸಿ ಕಾಂಡಕ್ಕೆ ಒಂದು ಪಾಲಿಥೀನ್ ಚೀಲವನ್ನು ಹೊದಿಸಿ ಸುಮಾರು 3-4 ಇಂಚು ಕೆಳಕ್ಕೆ ಗಾಳಿಯಾಡದಂತೆ ಕಟ್ಟಬೇಕು.
 • ಇದರಲ್ಲಿ ಸುಮಾರು 1-2 ತಿಂಗಳಿಗೆ ಬುಡದಲ್ಲಿ ಚಿಗುರು ಮೂಡುತ್ತದೆ.

ಈ ಚಿಗುರಿನಲ್ಲಿ ಎರಡು ಮೂರನ್ನು ಬೇರೆ ದಿಕ್ಕಿಗೆ ಇರುವಂತೆ ಬೆಳೆಯಲು ಬಿಡಬೇಕು ಅದು ಬೆಳೆಯದಂತೆ ಕೆಳಕ್ಕೆ ಎಳೆದು ಕಟ್ಟುತ್ತಾ ತರಬೇತಿ ನೀಡುತ್ತಿರಬೇಕು. ಸುಮಾರು ಎರಡು ವರ್ಷ ಹೀಗೇ ಕಟ್ಟುತ್ತಾ ತರಬೇತಿ ನೀಡಿದರೆ, ಆ ಗೆಲ್ಲುಗಳು ನೆಲ ಮಟ್ಟದಲ್ಲಿ ಬೆಳೆಯಲಾರಂಭಿಸುತ್ತವೆ.

ದಾಳ್ಚಿನಿ ಸೊಪ್ಪು

ತಳಿಗಳು:

 •  ಸ್ಥಳೀಯ ತಳಿಗಳ ಇಳುವರಿ ಕಡಿಮೆ. ಹಾಗೆಂದು ಎಲೆ -ತೊಗಟೆಗೆ ತೊಂದರೆ ಇಲ್ಲ.
 • ಅದಕ್ಕಾಗಿ ಭಾರತೀಯ ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆಯು ನವಶ್ರೀ ಮತ್ತು ನಿತಿಶ್ರೀ ಎಂಬ ಎರಡು ಉತ್ತಮ ತಳಿಯನ್ನು ಬಿಡುಗಡೆ ಮಾಡಿದೆ.
 • ಮಹಾರಾಷ್ಟ್ರದ ವೆಂಗುರ್ಲಾದ ಹಣ್ಣಿನ ಬೆಳೆಗಳ ಸಂಶೋಧನಾ ಸಂಸ್ಥೆ ಕೊಂಕಣ್ ತೇಜ್ ಎಂಬ ತಳಿಯನ್ನು ಪರಿಚಯಿಸಿದೆ.
 • ಉತ್ತಮ ತಳಿಗಳು  ಹುಡುಕಿದರೆ ನಮ್ಮ ಸ್ಥಳೀಯ ತಳಿಗಳಲ್ಲು  ಇದೆ.

 ಅಹಿಂಸಾತ್ಮಕ ಬೆಳೆ ಕ್ರಮ:

 • ದಾಳ್ಚೀನಿ ಚೆಕ್ಕೆಯನ್ನೂ ಅಹಿಂಸಾತ್ಮಕವಾಗಿ,  ವೈಜಾನಿಕವಾಗಿ ತೆಗೆಯಬೇಕು.
 • ಎಳೆಯ ಕಂದು ಬಣ್ಣಕ್ಕೆ ತಿರುಗದ,ಇಡೀ ಗೆಲ್ಲಿನಿಂದ ತೆಗೆಯುವುದಲ್ಲ. ಸುಮಾರು 6 ಇಂಚು ಅಗಲಕ್ಕೆ ಮಾತ್ರ ತೆಗೆಯಬೇಕು.
 •  ಒಂದು ಗೆಲ್ಲಿನಲ್ಲಿ ಎರಡು ಮೂರು ಕಡೆ ಮಾತ್ರ ತೆಗೆಯಬೇಕು.
 • ಸಿಪ್ಪೆ ತೆಗೆದಾಗ ಗೆಲ್ಲು ಸಾಯಬಾರದು.
 • ಮತ್ತೆ ಆ ಗೆಲ್ಲಿನಲ್ಲಿ ತೊಗಟೆ ಬೆಳೆಯಬೇಕು.
 • ಅದಕ್ಕೆ ಮಣ್ಣು ಇಲ್ಲವೇ ಸಗಣಿ ಲೇಪಿಸಬೇಕು.
 • ಎಲೆಯನ್ನು ಹಿತಮಿತವಾಗಿ ತೆಗೆಯಬೇಕು.
 • ಜೀವಮಾನ ಪರ್ಯಂತ ತೊಗಟೆ , ಎಲೆ,  ಕಾಯಿ ದೊರೆಯುತ್ತಿರಬೇಕು.

ಎಲೆ ತೆಗೆಯುವಾಗ ಹಿತಮಿತವಾಗಿ ತೆಗೆದರೆ ತೊಂದರೆಯಾಗದು. ಗೆಲ್ಲು ಕಡಿಯುವುದು ಮುಂತಾದ ಹಿಂಸಾತ್ಮಕ ವಿಧಾನ ಮಾಡದಿದ್ದರೆ ಹಲವಾರು ವರ್ಷ ಆದಾಯ ಕೊಡುತ್ತಿರುತ್ತದೆ.

Leave a Reply

Your email address will not be published. Required fields are marked *

error: Content is protected !!