ಕಾಫೀ ಗಿಡದ ವೈಜ್ಞಾನಿಕ ಪ್ರೂನಿಂಗ್ ವಿಧಾನ.

by | Jan 23, 2020 | Coffee (ಕಾಫೀ) | 0 comments

ಕಾಫೀ ಸಸ್ಯ ಅದರಷ್ಟಕ್ಕೇ ಬೆಳೆದರೆ  ಸಣ್ಣ ಮರವೇ ಆಗಬಲ್ಲುದು. ಆದರೆ  ಕೊಯಿಲು ಮುಂತಾದ ನಿರ್ವಹಣೆಗೆ ಅದನ್ನು ವ್ಯವಸ್ಥಿತವಾಗಿ ಆಕಾರ ಕೊಡಬೇಕು. ಅದನ್ನೇ ಪ್ರೂನಿಂಗ್ ಎನ್ನುತ್ತಾರೆ. ಹಂತ ಹಂತವಾಗಿ ನೇರ ಚಿಗುರನ್ನು ತೆಗೆದು ರೆಕ್ಕೆ  ಚಿಗುರನ್ನು ಮಾತ್ರ ಉಳಿಸುವ ಈ ವಿಧಾನ ಕಾಫಿ ಬೆಳೆಯ ಪ್ರಮುಖ ನಿರ್ವಹಣೆ.

  • ಕಾಫೀ ಬೆಳೆಯ ನಾಡಿನಲ್ಲಿ  ನಿತ್ಯ ಕಾಫೀ ತೋಟದ ಕೆಲಸ ಇದ್ದೇ ಇರುತ್ತದೆ.
  • ಮಳೆಗಾಲ ಪ್ರಾರಂಭದಲ್ಲಿ ಮರದ ನೆರಳು ತೆಗೆಯುವ ಕೆಲಸವಾದರೆ ಮಳೆಗಾಲ ಮುಗಿಯುವಾಗ ಸಸ್ಯದಲ್ಲಿ ಬರುವ ಚಿಗುರು ತೆಗೆಯುವ ಕೆಲಸ.
  • ನಂತರ ಗೊಬ್ಬರ ಕೊಡುವಿಕೆ, ಅದಾದ ನಂತರ ಅರೇಬಿಕಾ ಕೊಯಿಲು, ಅನಂತರ ರೋಬಾಸ್ಟಾ ಕೊಯಿಲು, ನೀರಾವರಿ  ಇತ್ಯಾದಿ ವರ್ಷ ಪೂರ್ತಿ ಕೆಲಸ.
  • ಇದೆಲ್ಲವೂ ನುರಿತವರು ಕ್ರಮಬದ್ದವಾಗಿ ಮಾಡಬೇಕಾದ ಕೆಲಸ.

ಕಾಫೀ ಸಸ್ಯವನ್ನು ಅದರಷ್ಟಕ್ಕೇ ಬೆಳೆಯಲು ಬಿಟ್ಟರೆ  ಅದರಲ್ಲಿ  ಫಸಲು ಪಡೆಯಲಿಕ್ಕಾಗುವುದಿಲ್ಲ. ಕಾಫೀ ಹಣ್ಣುಗಳು ಕವಲು ಗೆಲ್ಲಿನಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಿಡುವುದು. ಕೊಯಿಲು ಮಾಡಲು ಸಹ ಕವಲು ಗೆಲ್ಲುಗಳಲ್ಲಿ ಬೀಜ ಬೆಳೆದರೆ ಮಾತ್ರ ಆನುಕೂಲ. ಅದಕ್ಕಾಗಿ ಇಡೀ ಸಸ್ಯವನ್ನು ಕುಬ್ಜವಾಗಿ ಹೆಚ್ಚು ರೆಕ್ಕೆ ಗೆಲ್ಲುಗಳಿರುವಂತೆ  ಬೆಳೆಸಲೇ ಬೇಕು. ಕಾಫೀ ಸಸ್ಯದ ನಿರ್ವಹಣೆಯಲ್ಲಿ ಪ್ರೂನಿಂಗ್ ಅತೀ ಪ್ರಾಮುಖ್ಯ ಹಂತ. ಇದು ಅಧಿಕ ಇಳುವರಿಗೆ ಅತ್ಯವಶ್ಯಕ.

ಕಾಫೀ  ಸಸಿಗೆ ತರಬೇತಿ:

ಎತ್ತರ ನಿಯಂತ್ರಣ

ಎತ್ತರ ನಿಯಂತ್ರಣ

  • ಇದು ಒಂದು ಸಂಕೀರ್ಣ  ವಿಷಯವಾಗಿದ್ದು, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ.
  • ಕಾಫೀ ಸಸ್ಯಕ್ಕೆ ಯೋಗ್ಯ ರಚನೆ ಕೊಡುವುದು ಮತ್ತು ಆವಶ್ಯಕ ಎತ್ತರಕ್ಕೆ ಬೆಳವಣಿಗೆಯನ್ನು ನಿಯಂತ್ರಿಸುವುದಕ್ಕೆ ತರಬೇತಿ ಎನ್ನುತ್ತಾರೆ.
  • ಇದರಲ್ಲಿ  ಎರಡು ಪ್ರಕಾರದ ತರಬೇತಿ ಇದೆ. ಏಕಕಾಂಡ ಪದ್ದತಿ ಮತ್ತು ಬಹುಕಾಂಡ ಪದ್ದತಿ.
  •  ಬಹು ಕಾಂಡ ಪದ್ದತಿಯನ್ನು ಇತ್ತೀಚೆಗೆ  ಕೆಲವು ರೈತರು ಪ್ರಾರಂಭಿಸಿದ್ದಾರೆ.
  • ಸಾಮಾನ್ಯವಾಗಿ ನಮ್ಮ ಕರ್ನಾಟಕದ ಕಾಫೀ ಪ್ಲಾಂಟೇಶನ್ ಗಳಲ್ಲಿ ಏಕ ಕಾಂಡ ಪದ್ದತಿಯನ್ನೇ ಅನುಸರಿಸಲಾಗುತ್ತಿದೆ.
  • ಸಸ್ಯಕ್ಕೆ ಎಷ್ಟೇ ವರ್ಷವಾದರೂ ಕೊಯಿಲು  ಮಾಡಲು ಸಿಗುವಷ್ಟೇ ಎತ್ತರ ಬೆಳೆಯಬೇಕಾಗುತ್ತದೆ.
  • ಇದನ್ನು  ಟೋಪಿಂಗ್ topping  ಅಥವಾ  ಕ್ಯಾಪಿಂಗ್ capping ಎನ್ನುತ್ತಾರೆ.

ಟೋಪಿಂಗ್ ಮಾಡಿದಾಗ  ಮುಖ್ಯ ಕಾಂಡದ ಬೆಳವಣಿಗೆ ಅಲ್ಲಿಗೇ ನಿಂತು ಅಲ್ಲಿ ಹೊಸ ಕವಲು ಚಿಗುರುಗಳು ಮೂಡುತ್ತವೆ. ಅದನ್ನು  ಕ್ರಮಬದ್ಧವಾಗಿ ತೆಗೆಯುತ್ತಿರುವುದು ಅತೀ ಅವಶ್ಯಕ. ಅರೇಬಿಕಾ ಕಾಫಿ ಸಸ್ಯವನ್ನು ಸಾಮಾನ್ಯವಾಗಿ 9-12 ತಿಂಗಳ ಒಳಗೆ ಟೋಪಿಂಗ್ ಮಾಡಬೇಕು. ರೋಬಸ್ಟಾ ಕಾಫಿಯನ್ನು  18-24  ತಿಂಗಳಲ್ಲಿ  ಟೋಪಿಂಗ್ ಮಾಡಬೇಕು.

ಟೋಪಿಂಗ್ ಎತ್ತರ:

  • ಗಿಡ್ದ ಅರೇಬಿಕಾ ತಳಿಗಳಲ್ಲಿ ಒಂದು ಸ್ಥರದಲ್ಲಿ ಮಾತ್ರ ತರಬೇತಿ  ಮಾಡಬೇಕು. ಅದು 3-5 ಅಡಿ ತನಕ ಮಾತ್ರ.
  • ಎತ್ತರದ ಅರೇಬಿಕಾದಲ್ಲಿ ಎರಡು ಅಂತಸ್ತಿನಲ್ಲಿ  ತರಬೇತಿ ಬೇಕು. ಮೊದಲ ಅಂತಸ್ತಿನಲ್ಲಿ 2.5 ಅಡಿ. ಎರಡನೇ ತರಬೇತಿಯನ್ನು 4.5-5  ಅಡಿ ಎತ್ತರಕ್ಕೆ  ಮಾಡಬೇಕು.
  • ಎರಡನೇ ಅಂತಸ್ತನ್ನು 3-4  ಕೊಯಿಲಿನ ನಂತರ ಗೆಲ್ಲುಗಳ ನಿಬಿಡತೆ ಹೆಚ್ಚಾದಾಗ ಮಾಡಬೇಕು.
  • ಹೊಸತಾಗಿ ಈಗ ಕೆಲವೇ ಕೆಲವು ಜನ ಬಹು ಕಾಂಡ ಪದ್ದತಿಯನ್ನು ಪ್ರಾರಂಭಿಸಿದ್ದಾರೆ. ಇಲ್ಲಿ  ಇಳುವರಿ  ಬಂದ ಮೇಲೆ 4-5 ವರ್ಷಕ್ಕೊಮ್ಮೆ ಬುಡವನ್ನು ಸ್ಟಂಪಿಂಗ್ ಮಾಡಿ ಬಹು ಕಾಂಡಕ್ಕೆ ಬಿಡಬೇಕು.

ರೆಕ್ಕೆ ಗೆಲ್ಲುಗಳಲ್ಲಿ ಇಳುವರಿ

ಪ್ರೂನಿಂಗ್:

  • ಇದು ಪ್ರತೀ ವರ್ಷ ಮಾಡುವ ಕೆಲಸವಾಗಿದೆ.
  • ಇದಕ್ಕೆ ನಿರ್ದಿಷ್ಟ ಎತ್ತರವನ್ನು ಗೊತ್ತುಮಾಡಿ ಆ ಪ್ರಕಾರ ಕಾಫೀ ಸಸಿಯಲ್ಲಿ ತುದಿ ಭಾಗದಲ್ಲಿ  ಬೆಳೆಯುವ ನೇರ ಗೆಲ್ಲುಗಳನ್ನು ಕತ್ತರಿಸುತ್ತಿರಬೇಕು.
  • ಇದರ ಮುಖ್ಯ ತತ್ವ ಉಪಯೋಗಕ್ಕೆ  ಬಾರದ ಹಳೆಯ ಗೆಲ್ಲುಗಳನ್ನು ತೆಗೆಯುವುದು ಮತ್ತು ಹೊಸ ರೆಕ್ಕೆ  ಗೆಲ್ಲುಗಳ ಬೆಳವಣಿಗೆಗೆ  ಅವಕಾಶ ಕಲ್ಪಿಸುವುದು.
  • ಇದರಿಂದ ವರ್ಷವೂ ಏಕ ಪ್ರಕಾರ ಇಳುವರಿ ಬರುತ್ತದೆ.
  • ಬೆಳಕು ಮತ್ತು ಗಾಳಿ ಯಥೇಚ್ಚವಾಗಿ  ಬಿದ್ದು , ರೋಗ ಮತ್ತು  ಕೀಟ ಬಾಧೆ  ಕಡಿಮೆಯಾಗುತ್ತದೆ.
  • ಸಸ್ಯಕ್ಕೆ  ನಿರ್ಧಿಷ್ಟ ಆಕಾರ ಬರುವುದರೊಂದಿಗೆ ಕೊಯಿಲಿಗೆ, ಸಿಂಪರಣೆಗೆ ಅನುಕೂಲವಾಗುತ್ತದೆ.
  • ಈ ಪ್ರೂನಿಂಗ್ ವರ್ಷ ವರ್ಷವೂ ನಿರಂತರವಾಗಿ ಮಾಡುತ್ತಲೇ ಇರಬೇಕಾಗುತ್ತದೆ.
  • ಅವಶ್ಯಕತೆ ಇದ್ದಾಗ ಆಗಾಗ ಮಾಡಬೇಕಾಗುತ್ತದೆ.

ಪ್ರೂನಿಂಗ್ ಮಾಡುವಾಗ ಉತ್ತಮ ಕಟ್ಟರ್ ಬಳಕೆ ಮಾಡಬೇಕು. ಸೂಕ್ತ ಎತ್ತರ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಒಂದು ಅಳತೆ ಕೋಲನ್ನು  ಕೆಲಸದವರ ಕೈಯಲ್ಲಿ  ಕೊಡಬೇಕು. ಕೆಳಸ್ತರದ ಹಳೆಯ ಅನುತ್ಪಾದಕ ಗೆಲ್ಲು ತೆಗೆಯುತ್ತಿದ್ದರೆ  ರೋಗ ಸಾಧ್ಯತೆ ಕಡಿಮೆಯಾಗುತ್ತದೆ.        

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!