ಅಲೋಪತಿಯಲ್ಲೂ ಸಿಗಲಾರದ ಉಪಶಮನ ಈ ಸಸ್ಯದ ಎಲೆ ಕೊಡುತ್ತದೆ.

ಅಲೋಪತಿಯಲ್ಲೂ ಸಿಗಲಾರದ ಉಪಶಮನ ಈ ಸಸ್ಯದ ಎಲೆ ಕೊಡುತ್ತದೆ
ಈ ಸಸ್ಯದ ಸೊಪ್ಪಿಗೆ ಒಂದು ವಿಶೇಷ ಶಕ್ತಿ ಇದ್ದು, ಅಲರ್ಜಿಗೆ ಇದು ನೀಡುವ ತಕ್ಷಣದ ಉಪಶಮನ ಆಧುನಿಕ ಅಲೋಪತಿ ಔಷದೋಪಚಾರದಲ್ಲೂ ಇಲ್ಲ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಇದನ್ನು ಬಳಸುತ್ತಾ ಬಂದಿದ್ದಾರೆ, ಕಿರಿಯ ತಲೆಮಾರಿನವರಿಗೆ ಈ ಜ್ಞಾನ ವರ್ಗಾವಣೆಯಾಗದೆ  ಅಲರ್ಜಿಯಂತಹ Alarge healing herb ಸಮಸ್ಯೆಗೆ ತಕ್ಷಣ ವೈದ್ಯರಲ್ಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ನಾವು ಯಾವುದೇ ಕೃಷಿ ಕೆಲಸ ಮಾಡುವಾಗ ತೀರಾ ಜಾಗರೂಕರಾಗಿ ಇರುವುದಿಲ್ಲ. ಒಮ್ಮೊಮ್ಮೆ ನೆಲದಲ್ಲಿ ಬೆಳೆಯುವ  ತುರಿಕೆ ಉಂಟುಮಾಡುವ ಸಸ್ಯಗಳಾದ ಗಿಡ ತುರುಚೆ (Choriyanam nettles), ಬಳ್ಳಿ ತುರುಚೆ (Tragia involucrate) ಕೈಕಾಲಿಗೆ ಮೈಗೆ ತಾಗುವುದು ಸಾಮಾನ್ಯ. ಹಾಗೆಯೇ ಮರ ಗಿಡಗಳಲ್ಲಿ ಹರಿದಾಡುವ ಕಂಬಳಿ ಹುಳಗಳೂ ಒಮ್ಮೆಮ್ಮೆ ನಮಗೆ ಕಾಣಿಸದೆ ಮೈಗೆ, ಕೈಗೆ ತಾಗುತ್ತದೆ.  ತಡೆಯಲಾರದ ತುರಿಕೆ ಉಂಟಾಗುತ್ತದೆ. ಕಣ್ಣು ತುರಿಸುತ್ತದೆ. ನೆಗಡಿಯಾದ ಅನುಭವವಾಗುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಯಾರಾದರೂ ಹಿರಿಯರು ಇದ್ದರೆ ಹೇಳುತ್ತಾರೆ, ಅಲ್ಲೇ ಬೇಲಿಬದಿಯಲ್ಲಿರುವ  ಸಾರೊಳಿ ತುದಿ ಚಿಗುರು ತೆಗೆದು ಅದನ್ನು ಕೈಯಲ್ಲಿ ಹಿಚುಕಿ ಹಚ್ಚು ಎಂದು. ಸಾಮಾನ್ಯವಾಗಿ ಮನೆಯಲ್ಲಿ  ಹಿರಿಯ ತಲೆಮಾರಿನವರು ಹೇಳುವ ಪರಿಹಾರ ಇದನ್ನೇ. ಇದು ನಮ್ಮ ಪುರಾತನ ಪಾರಂಪರಿಕ ಮೂಲಿಕಾ ಜ್ಞಾನ.

ಸಳ್ಳೆ ಮರದ ಮಹತ್ವ:

ಸಳ್ಳೆ ಮರದ ಸೊಪ್ಪು
ಸಳ್ಳೆಮರ Aporosa lindleyana ಎಂದರೆ ಅದು ತಿರುಳಿಲ್ಲದ ಮೆದು ಮರ. ದೊಡ್ಡ ಗಾತ್ರದ ಮರ ಆಗುವುದಿಲ್ಲ. ಯಾವುದೇ ಕಿರುಕುಳ ಕೊಡದೆ ಬೆಳೆಯಲು ಬಿಟ್ಟರೆ ಸುಮಾರು – 5-6 ಮೀ. ಎತ್ತರದ ತನಕ ಬೆಳೆಯುತ್ತದೆ.  ಅದರೆ ಮರವಾಗಿ ಬೆಳೆಯಲು ಮಾನವ ಬಿಡುವುದೇ ಇಲ್ಲ. ಇದರ ಸೊಪ್ಪು, ಕಟ್ಟಿಗೆ ಮನಗೆ ಬೇಕು. ಹಾಗಾಗಿ ಇದು ಒಮ್ಮೆ ಚಿಗುರುತ್ತದೆ. ಆಗ ಮಾನವನ ಕಣ್ಣಿಗೆ ಬಿದ್ದು ಮತ್ತೆ ಕ್ಷೌರಕ್ಕೊಳಪಟ್ಟು ಮತ್ತೆ ಗಿಡವಾಗುತ್ತದೆ. ಆದರೆ ಸಾಯುವುದು ಅಪರೂಪ. ದಕ್ಷೀಣ ಭಾರತದ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಮರ. ಇದನ್ನು ನಾವೆಲ್ಲಾ ಗಿಡವಾಗಿಯೇ ಕಾಣುವುದು. ಕಡಿದಷ್ಟೂ ಹೊಸ ಕೆನ್ನೆತ್ತರು ಬಣ್ಣದ ಕುಡಿಯೊಂದಿಗೆ ಚಿಗುರುತ್ತದೆ.  ಚಳಿಗಾಲದಲ್ಲಿ ಹೂಬಿಡುತ್ತದೆ. ಬೇಸಿಗೆಯಲ್ಲಿ  ಕಾಯಿಯಾಗುತ್ತದೆ. ಹೂವು ಜೇನು ನೊಣಗಳಿಗೆ ಮಕರಂದವನ್ನು ಹೇರಳವಾಗಿ ನೀಡುತ್ತದೆ. ಹಣ್ಣು ಆದಾಗ  ಅದನ್ನು ಪಕ್ಷಿಗಳು ತಿನ್ನುತ್ತವೆ. ಮಂಗಗಳು ತಿನ್ನುತ್ತವೆ.ಮನುಷ್ಯರೂ ತಿನ್ನಬಹುದು.  ಇದರ ಎಳೆ ಚಿಗುರಿಗೆ ಒಂದು ಅಂಟು ಗುಣ ಇದೆ. ಅದಕ್ಕಾಗಿ ತುಳು ನಾಡಿನಲ್ಲಿ ಇದನ್ನು  ಬಿಳಿ ಸಾರೋಳಿ ಸೊಪ್ಪು ಎನ್ನುತ್ತಾರೆ. ನಾಲ್ಕಾರು ಎಳೆ ಚಿಗುರುರನ್ನು ಚಿವುಟಿ ಕೈಯಲ್ಲಿ ಹಿಚುಕಿ, ತುರುಚೆ ಗಿಡ ತಾಗಿದ ಜಾಗಕ್ಕೆ  ಉಜ್ಜಿದರೆ ಸಾಕು, ಕೇವಲ 5 ನಿಮಿಷದಲ್ಲಿ ತುರಿಕೆ ಮಾಯವಾಗುತ್ತದೆ. ಊದಿಕೊಳ್ಳುವುದೂ ಕಡಿಮೆಯಾಗುತ್ತದೆ. ಬರೇ ತುರುಚೆ ಗಿಡ  ಮಾತ್ರವಲ್ಲ, ಕಂಬಳಿ ಹುಳ ತಾಗಿದರೆ ಆ ಭಾಗಕ್ಕೆ ಇದನ್ನು ಹಚ್ಚಿದರೆ ತುರಿಕೆ ನಿಲ್ಲುತ್ತದೆ.
ಇದಲ್ಲದೆ ಈ ಗಿಡದ ಚಿಗುರನ್ನು ಇತರ ಬೇರೆ ಬೇರೆ  ಚಿಗುರುಗಳ ಜೊತೆಗೆ ಮಿಶ್ರಣ ಮಾಡಿ ತಂಬುಳಿ ಎಂಬ ಅಡುಗೆಯನ್ನು ಮಾಡುವ ಕ್ರಮ ಹಳ್ಳಿಗಳಲ್ಲಿ ಇದೆ. ಚಿಗುರನ್ನು ನೇರವಾಗಿ ಜಗಿದರೆ ಬಾಯಿ ಹುಣ್ಣು ವಾಸಿಯಾಗುತ್ತದೆ ಎನ್ನುತ್ತಾರೆ. ಹಾಗೆಯೇ ಇದನ್ನು ಕಶಾಯ ಮಾಡಿ ಕುಡಿದರೆ ಹೊಟ್ಟೆ ನೋವು ಸಹ ಕಡಿಮೆಯಾಗುತ್ತದೆ ಎನ್ನುತ್ತಾರೆ.
ತುರಿಕೆ ಒಂದು ಅಲರ್ಜಿ

ತುರಿಕೆ ಒಂದು ಅಲರ್ಜಿ:

ತುರಿಕೆ  ಆಗುವುದು ಒಂದು ಅಲರ್ಜಿ ಎನ್ನುತ್ತಾರೆ ವೈದ್ಯರು. ಇದಕ್ಕೆ ಈಗ ಹೆಚ್ಚಾಗಿ ಸಿಟ್ರಜಿನ್ ಮಾತ್ರೆಗಳನ್ನು ನುಂಗಲು ಕೊಡುತ್ತಾರೆ. ಇದನ್ನು  ಪಡೆಯಲು ಮೆಡಿಕಲ್ ಸ್ಟೋರ್ ಅಥವಾ ವೈದ್ಯರಲ್ಲಿಗೆ ಹೋಗಬೇಕು. ಅದರೆ ಸಳ್ಳೆ ಸೊಪ್ಪು ವೈದ್ಯರಲ್ಲಿಗೆ ಹೋಗುವ ಕೆಲಸವನ್ನು ಇಲ್ಲದಂತೆ ಮಾಡುತ್ತದೆ.ಸಳ್ಳೆ ಸೊಪ್ಪು ಅಲರ್ಜಿಗೆ ಪ್ರತ್ಯೌಷಧಿಯಾಗಿ ಕೆಲಸ ಮಾಡುತ್ತದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ಆಗಬೇಕಾಗಿದೆ. ಹಾಡೆ ಬಳ್ಳಿಯ ಕ್ಯಾನ್ಸರ್ ನಿವಾರಕ ಗುಣವನ್ನು ಅಧ್ಯಯನ ಮಾಡಿದಂತೆ ಈ ಸಸ್ಯದ ಅಲರ್ಜಿ ನಿವಾರಕ ಗುಣವನ್ನೂ  ತಜ್ಞರು  ಅದ್ಯಯನ ಮಾಡಬೇಕಾಗಿದೆ.

ಗಿಡ ತುರುಚೆ (Choriyanam nettles
ಗಿಡ ತುರುಚೆ (Choriyanam nettles

ತುರುಚೆ ಗಿಡ ಯಾಕೆ ತುರಿಸುತ್ತದೆ?

ಬಳ್ಳಿ ತುರಿಕೆ (Tragia involucrate
ಬಳ್ಳಿ ತುರಿಕೆ (Tragia involucrate

ತುರುಚೆ ಗಿಡ ಎಂಬ ಹೆಸರು ಬಂದಿರುವುದೇ ಅದು ಚರ್ಮಕ್ಕೆ ತಾಗಿದಾಗ ತುರಿಸುತ್ತದೆ ಎಂಬ ಕಾರಣಕ್ಕೆ, ಅದು ಅಂಗೈ ಅಥವಾ ಕಾಲಿನ ಅಡಿಗೆ ತಾಗಿದರೆ ತುರಿಸುವುದು ಕಡಿಮೆ. ಚರ್ಮಕ್ಕೆ ತಾಗಿದರೆ ತುರಿಕೆಯಾಗುತ್ತದೆ. ಕಾರಣ ಅದರ ಎಲೆಗಳಲ್ಲಿ ಇರುವ ಒಂದು ಮುಳ್ಳು. ಅಥವಾ ಕೂದಲು. ಇದು ಯಾಕೆ ತುರಿಸುತ್ತದೆ ಎಂಬ ಬಗ್ಗೆ ಇನ್ನೂ ನಿಖರವಾಗಿ ಅಧ್ಯಯನಗಳು ಆಗಿಲ್ಲ. ಇದು ಒಂದು Toxic ವಸ್ತುವನ್ನು Gympietides  ಎಲೆಯ ರೋಮಗಳ ಮೂಲಕ ತಾಗಿಸುತ್ತದೆ ಎನ್ನುತ್ತಾರೆ. ಇದನ್ನು ಕೆಲವು ಔಷಧೀಯವಾಗಿಯೂ ಬಳಕೆ ಮಾಡಲಾಗುತ್ತದೆ. ಇಂತಹ ತುರಿಕೆ ಉಂಟುಮಾಡುವ ಬೇರೆ ಬೇರೆ ಗಿಡಗಳು, ಬಳ್ಳಿಗಳು ಕಾಯಿಗಳು ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ  ಕಾಣಿಸುತ್ತದೆ.

ಸಳ್ಳೆ ಮರಗಳು ಅಳಿಯುತ್ತಿವೆ. ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಹೇರಳವಾಗಿ ಇರುತ್ತಿದ್ದ ಕಾಸರಕನ ಮರ  Nux- vomica ಇಂದು ಅಪರೂಪವಾಗಿದೆ. ಕಾರಣ 1998-99 ನೇ ಇಸವಿಯಲ್ಲಿ ಈ ಅರದ ಚೆಕ್ಕೆಗೆ ಕಿಲೋ 20 ರೂ. ಬೆಲೆ ಬಂತು. ಆಗ ಮರದ ಬುಡದಿಂದ ತುದಿ ತನಕ ಚೆಕ್ಕೆ ತೆಗೆದು ಮಾರಾಟಮಾಡಿ  ಮರವೇ ಅಳಿಯಿತು. ಹಾಗೆಯೇ ಸಳ್ಳೆ ಮರಗಳೂ ಸಹ ಕಟ್ಟಿಗೆಯ ಆಸೆಗೆ ಮತ್ತು ಕೃಷಿ ವಿಸ್ತರಣೆ ನೆಪದಲ್ಲಿ ಈಗ ಕಡಿಮೆಯಾಗುತ್ತಿದೆ. ಇದರ ಒಂದೆರಡು ಸಸಿಗಳನ್ನಾದರೂ ಉಳಿಸಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!