ಎಲೆ ಚುಕ್ಕೆ ರೋಗ ಎಂಬ ಅಡಿಕೆ ತೆಂಗು ಬೆಳೆಯ ಪ್ರಾಮುಖ್ಯ ರೋಗ ಈಗ ಎಲ್ಲಾ ಪ್ರದೇಶಗಳಲ್ಲಿ ವ್ಯಾಪಿಸಲಾರಂಭಿದೆ. ಕೆಲವರು ಗುರುತಿಸಿರಬಹುದು. ಇನ್ನು ಕೆಲವರು ಗುರುತಿಸದೆಯೂ ಇರಬಹುದು. ಆದರೆ 90% ಕ್ಕೂ ಹೆಚ್ಚಿನ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಇದೆ ಎಂದರೆ ಅಚ್ಚರಿಯಾಗಬಹುದು. ಈಗ ಇದು ಚುಕ್ಕೆಯಾಗಿ ಕಂಡರೂ ಇದು ಮುಂದೆ ದೊಡ್ಡದಾದರೂ ಅಚ್ಚರಿ ಇಲ್ಲ.ಕ್ರಮೇಣ ಅಡಿಕೆ ಬೆಳೆಗಾರರ ಬದುಕಿನ ಮೇಲೆಯೇ ಇದು ಸವಾರಿ ಮಾಡಿದರೂ ಅಚ್ಚರಿ ಇಲ್ಲ.
ಬಹಳಷ್ಟು ಜನ ಅಡಿಕೆ ಬೆಳೆಗಾರರು ಶಿವಮೊಗ್ಗ ಜಿಲ್ಲೆಯಲ್ಲಿ ಎಲೆ ಚುಕ್ಕಿ ರೋಗ ಇದೆಯಂತೆ ಎಂದು ಮಾತಾಡಿಕೊಳ್ಳುತ್ತಾರೆ. ಆದರೆ ಅವರ ತೋಟದಲ್ಲೂ ಇದು ಇದೆಯೋ ಇಲ್ಲವೋ ಎಂದು ಅವರು ನೋಡಿದ್ದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲ. ಎಲ್ಲಾ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲೂ ಇದು ಇದೆ. ವಾತಾವರಣ ಇದೇ ರೀತಿ ಮುಂದುವರಿದರೆ ಇನ್ನೇನು ಒಂದೆರಡು ವರ್ಷಗಳಲ್ಲಿ ತನ್ನ ರೌದ್ರಾವತಾರ ಪ್ರದರ್ಶಿಸಲಿದೆ. ನೀವು ನಿಮ್ಮ ಅಡಿಕೆ ಮರದ ಗರಿಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಹಾಗೆಯೇ ನೆಲಕ್ಕೆ ಬೀಳುವ ಅರೆ ಬಲಿತ ಕಾಯಿಗಳನ್ನು ಪರೀಕ್ಷಿಸಿರಿ. ಹಾಳೆಯನ್ನು ಸೂಕ್ಷ್ಮವಾಗಿ ನೋಡಿ. ಅಡಿಕೆ ಮರ ಅಲ್ಲದೆ ತೆಂಗಿನ ಮರದ ಗರಿಗಳನ್ನೂ ಒಮ್ಮೆ ನೋಡಿ. ನಿಮ್ಮಲ್ಲೂ ಇದು ಇದೆ. ಸ್ವಲ್ಪ ಪ್ರಮಾಣದಲ್ಲೂ ಇರಬಹುದು. ಅತಿಯಾಗಿಯೂ ಇರಬಹುದು. ಸ್ವಲ್ಪ ಇದ್ದರೆ ಕೆಲವೇ ಸಮಯದಲ್ಲಿ ಇದು ಹೆಚ್ಚಾಗಲೂ ಬಹುದು. ಕಾರಣ ಇದು ಗಾಳಿಯ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗ. ಯಾಕೋ ಪ್ರಕೃತಿ ಅಡಿಕೆ ಬೆಳೆಗಾರರ ಪಾಲಿಗೆ ತಿರುಗಿ ಬಿದ್ದಳೋ ಎಂಬ ಅನುಮಾನ ಉಂಟಾಗುತ್ತಿದೆ. ಈಗ ಈ ರೋಗಕ್ಕೆ ಶಿಫಾರಸು ಮಾಡಲಾದ ಔಷದೋಪಚಾರಗಳು ಪೂರ್ಣವಾಗಿ ಇದನ್ನು ನಿಯಂತ್ರಿಸಲು ವಿಫಲವಾಗಿವೆ ಎನ್ನುತ್ತಾರೆ ಬೆಳೆಗಾರರು.
ಎಲೆ ಚುಕ್ಕೆ ರೋಗ ಏನು?
- ವಿಜ್ಞಾನಿಗಳ ಪ್ರಕಾರ ಎಲೆ ಚುಕ್ಕೆ ರೋಗ ರೋಗ ಎಂದರೆ ಇದು ಕೊಲೆಟ್ರೋಟ್ರಿಕಂ ಶಿಲೀಂದ್ರದ (Coletrotricum sp) ಒಂದು ರೂಪಾಂತರಿ ಎಂಬುದಾಗಿ ಹೇಳುತ್ತಿದ್ದಾರೆ.
- ಕೊಲೆಟ್ರೋಟ್ರಿಕಂ ಶಿಲೀಂದ್ರ ಬಹಳಷ್ಟು ಬೆಳೆಗಳಿಗೆ ಗರಿಷ್ಟ ಪ್ರಮಾಣದಲ್ಲಿ ಹಾನಿ ಮಾಡುವ ಶಿಲೀಂದ್ರವಾಗಿದೆ.
- ಇದು ಇತರ ಯಾವುದೋ ಬೆಳೆಗಳಿಂದ ಅಡಿಕೆ- ತೆಂಗಿಗೆ ಬಂದಿರಬಹುದು.
- ಅದಲ್ಲದೆ ಈ ಶಿಲೀಂದ್ರದ ಬೆಳವಣಿಗೆ ಮತ್ತು ರೂಪಾಂತರಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿರಬೇಕು.
- ಕಳೆದ ಮೂರು ವರ್ಷಗಳಿಂದ ವರ್ಷದ ಎಲ್ಲಾ ತಿಂಗಳುಗಳಲ್ಲೂ ಮಳೆ ಬರಲಾರಂಭಿಸಿದ್ದೂ ಇದರ ಸಂತಾನ ವೃದ್ಧಿಯಾಗಲು ಕಾರಣವಾಗಿರಬಹುದು.
- ಇದು ಮಾವು ಬೆಳೆಗೆ ಎಲೆಗಳಿಗೆ, ಕಾಯಿಗಳಿಗೆ ಹೂ ಗೊಂಚಲುಗಳಿಗೆ ಬರುತ್ತದೆ.
- ಕೊಕ್ಕೋ ಬೆಳೆಗೂ ಬರುತ್ತದೆ. ಬಾಳೆಗೂ ಬರುತ್ತದೆ. ಕಾಫಿಗೂ ಬರುತ್ತದೆ.
- ಇದ್ಯಾವುದೋ ಬೆಳೆಗಳ ಮೂಲಕ ಅಡಿಕೆ ತೆಂಗಿಗೆ ಬಂದಿರಬಹುದು ಎಂಬ ಸಂಶಯ ಇದೆ.
- ಯಾವುದಾದರೂ ಬೆಳೆ ಸಮೀಪ ಇದ್ದರೆ ಅದರ ಮೂಲಕ ಬೇರೆ ಆಸರೆ ಸಸ್ಯಗಳಿಗೆ ಪ್ರಸಾರವಾಗುವುದು ಶಿಲೀಂದ್ರದ ಗುಣ.
- ಕೆಲವು ಮೂಲಗಳ ಪ್ರಕಾರ ಇದು ಅಡಿಕೆಯೊಂದಿಗೆ ಕಾಫೀ ಬೆಳೆದ ಕಡೆಯಿಂದ ಪ್ರಸಾರವಾಗಿರಬಹುದು ಎನ್ನಲಾಗುತ್ತಿದೆ.
- ಕಾಫೀ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಕೆಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಮಾಡಿದ ವರದಿ ಇದೆ.
ಏನು ತೊಂದರೆ:
- ಮೊದಲು ಈ ಎಲೆ ಚುಕ್ಕೆ ರೋಗ ಎಲೆಯಲ್ಲಿ ಹಳದಿ ಚುಕ್ಕೆಗಳ ಮೂಲಕ ಕಾಣಿಸಿ ನಂತರ ಅದು ದೊಡ್ಡದಾಗುತ್ತಾ ಬರುತ್ತದೆ.
- ಹಳದಿ ಚುಕ್ಕೆ ದೊಡ್ಡದಾಗಿ ಭಾಗ ಒಣಗುತ್ತದೆ.ಎಲೆ ಚುಕ್ಕೆ ರೋಗ ಎಷ್ಟು ತೀವ್ರವೆಂದರೆ ಇದು ಮರವನ್ನು ಗಿಡವನ್ನು ಏಳಿಗೆ ಆಗಲು ಬಿಡುವುದಿಲ್ಲ.
- ಕೆಲವು ಕಡೆ ಇತ್ತೀಚೆಗೆ ಹೆಚ್ಚಿನ ಸಸ್ಯಾಭಿವೃದ್ದಿ ಮಾಡುವ ಕಡೆ ಇದು ಸಣ್ಣ ಗಿಡಗಳಿಗೂ ಸೋಕು ತಗಲಿದ್ದು ವರದಿಯಾಗಿದೆ.
- ಇಂತಹ ಗಿಡಗಳನ್ನು ನಾಟಿ ಮಾಡಿದರೆ ಅದು ಏಳಿಗೆಯಾಗುವುದೇ ಇಲ್ಲ.
- ಹೊಸ ಎಲೆಗಳು ಬರುವುದು ಕಡಿಮೆಯಾಗುತ್ತದೆ. ಹಳೆ ಎಲೆಗಳು ಬೇಗ ಒಣಗುತ್ತವೆ.
- ಎಲೆಗಳು ಹಳದಿಯಾಗಿ ಕೃಷವಾಗುತ್ತವೆ. ಈ ಶಿಲೀಂದ್ರದ ಗುಣವೇ ಸಸ್ಯದ ಇಮ್ಯೂನ್ ಸಿಸ್ಟಮ್ ಅನ್ನು ಹಾಳು ಮಾಡುವುದು.
- ಮರಗಳಿಗೆ ಕೆಳಭಾಗದ ಎಲೆಗಳಿಗೆ ಬಾಧಿಸಿ ಮೇಲಿನ ಎಲೆಗಳಿಗೆ ಪ್ರಸಾರವಾಗುತ್ತದೆ.
- ಎಲೆಗಳಲ್ಲಿ ಹರಿತ್ತು ಕಡಿಮೆಯಾಗಿ ಮರ ಸೊರಗುತ್ತದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ – ನಿಟ್ಟೂರು ಕಡೆಗಳಲ್ಲಿ ಕೆಲವು ಬೆಳೆಗಾರರಲ್ಲಿ ಹೆಚ್ಚಿನ ಪ್ರಮಾಣದ ಅಡಿಕೆ ಮರಗಳು ಬರೇ ಮರವಾಗಿ ಅನುತ್ಪಾದಕವಾಗಿ ಉಳಿದಿವೆ.
- ಎಕ್ರೆಗೆ 2 ಕ್ವಿಂಟಾಲು ಇಳುವರಿ ಕೊಡುತ್ತಲೂ ಇಲ್ಲ.
- ಅಲ್ಲೆಲ್ಲಾ ದಿನದಿಂದ ದಿನಕ್ಕೆ ರೋಗ ಹೊಸ ಹೊಸ ತೋಟಗಳಿಗೆ ಪ್ರಸಾರವಾಗುತ್ತಿವೆ.
- ಕಾಯಿಯ ಮೇಲೆಯೂ ಈ ಶಿಲೀಂದ್ರ ಹಾನಿ ಮಾಡುತ್ತದೆ.
- ಕಾಯಿಯ ಮೇಲ್ಮೈಯಲ್ಲಿ ಸುಟ್ಟ ತರಹ ತೇಪೆ ಕಾಣಿಸುತ್ತದೆ.
- ಅಪಕ್ವವಾಗಿ ಉದುರುತ್ತದೆ. ಸುಳಿಯ ತನಕವೂ ಬಾಧಿಸಿದ ವರದಿ ಇದೆ.
- ಇದರ ಸೋಂಕು ತೀವ್ರವಾದಾಗ ಮರ ಸಾಯುವ ಸಾಧ್ಯತೆಯೂ ಇದೆ.
- ಅಡಿಕೆ ಹಾಳೆ – ಹೂ ಗೊಂಚಲು ಹಾಗೂ ಮಿಡಿಗಳಿಗೂ ಇದು ಬಾಧಿಸಬಹುದು.
ಸಾಮೂಹಿಕ ನಿಯಂತ್ರಣ ಅಗತ್ಯ:
- ಇದರ ನಿಯಂತ್ರಣಕ್ಕೆ ವಿಷಯ ವಸ್ತುವನ್ನು ಅಧ್ಯನ ಮಾಡಿದ ತಜ್ಞರು ಹೆಕ್ಸಾಕೊನೆಜ಼ಾಲ್ ಶಿಲೀಂದ್ರ ನಾಶಕವನ್ನು ಶಿಫಾರಸು ಮಾಡುತ್ತಿದ್ದರು.
- ಇದನ್ನು ಬಹುತೇಕ ಎಲ್ಲಾ ರೈತರೂ ಸಿಂಪರಣೆ ಮಾಡಿ ಅದರಲ್ಲಿ ತೃಪ್ತಿಕರ ಫಲಿತಾಂಶ ಸಿಗಲಿಲ್ಲ ಎನ್ನುತ್ತಾರೆ.
- ಈ ಶಿಲೀಂದ್ರಕ್ಕೆ ಇದರ ಸಾಮರ್ಥ್ಯ ಸಾಲದೆಂದು ಈಗ ಪ್ರೊಪಿಯೋಕೊನೆಜ಼ಾಲ್ ಸಿಂಪರಣೆಗೆ ಸಲಹೆ ಮಾಡಲಾಗುತ್ತಿದ್ದು, ಇದಕ್ಕೂ ಶಿಲೀಂದ್ರ ಬಗ್ಗದ ಸ್ಥಿತಿ ಉಂಟಾಗಿದೆ.
- ಸಿಂಪರಣೆಯನ್ನು ಪುನರಾವರ್ತಿಸಲು ಸಲಹೆ ಮಾಡಲಾಗಿದ್ದರೂ ಅಡಿಕೆ ಮರಗಳಿಗೆ ಸಿಂಪರಣೆ ಅಷ್ಟೊಂದು ಸುಲಭದ ಕೆಲಸ ಅಲ್ಲ ಎಂಬ ಕಾರಕ್ಕೆ ರೈತರು ಸ್ವಲ್ಪ ಉದಾಸೀನವನ್ನೂ ತಳೆಯುತ್ತಿದ್ದಾರೆ.
- ಕೆಲವು ರೈತರು ಈ ಶಿಲೀಂದ್ರ ನಾಶಕವೂ ಫಲಿತಾಂಶ ಕೊಡುತ್ತಿಲ್ಲ ಎನ್ನುವರರೂ ಇದ್ದಾರೆ.
- ಇನ್ನು ಬೇರೆ ವಿಶಾಲ ಶ್ರೇಣಿಯ ಬೇರೆ ಶಿಲೀಂದ್ರ ನಾಶಕವನ್ನು ಬಳಕೆ ಮಾಡಿ ನೋಡಬೇಕಾದ ಅಗತ್ಯ ಇದೆ.
- ಇಂತಹ ಹರಡುವ ರೋಗಕ್ಕೆ ರಕ್ಷಣಾತ್ಮಕ (Protective) ಗುಣಪಡಿಸುವ ( Curative) ಮತ್ತು ನಿರ್ಮೂಲನೆ ಮಾಡುವ ಗುಣ ಉಳ್ಳ ಅತ್ಯಾಧುನಿಕ ಶ್ರೇಣಿಯ ಶಿಲೀಂದ್ರ ನಾಶಕದ ಅಗತ್ಯ ಇದೆ.
- ಅಡಿಕೆ ಹೊರತಾಗಿ ಬೇರೆ ಬೆಳೆಗಳಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಈಗ ಪ್ರಪಂಚದಾದ್ಯಂತ Tebuconazole ಶಿಲೀಂದ್ರ ನಾಶಕವನ್ನು ಬಳಕೆ ಮಾಡುತ್ತಿದ್ದು, ಇದನ್ನು ಅಡಿಕೆ ತೆಂಗು ,ಮುಂತಾದ ಬೆಳೆಗಳಿಗೆ ಅಧ್ಯಯನ ಮಾಡಲಾಗಿಲ್ಲ.
ಅಡಿಕೆ ಬೆಳೆಗೆ ವಿಸ್ತರಣೆಗೆ ಸ್ವಲ್ಪ ವಿರಾಮ ಕೊಡುವುದು ಸೂಕ್ತ:
- ಈಗ ಅಡಿಕೆ ಬೆಳೆ ಉಛ್ರಾಯ ಸ್ಥಿತಿಗೆ ಹೋಗುತ್ತಿದ್ದು, ಅದರ ಬೆಂಬತ್ತಿ ಈ ರೋಗವೂ ಹೋಗುತ್ತಿದೆ.
- ಬಹುತೇಕ ಕಡೆ ಎಲೆ ಚುಕ್ಕೆ ರೋಗ ಇರುವ ಕಾರಣ ಹೆಚ್ಚಿನೆಲ್ಲಾ ಸಸ್ಯೋತ್ಪಾದಕ ಕೇಂದ್ರಗಳಲ್ಲೂ ಇದು ಕಾಣಲಾರಂಭಿಸಿದೆ.
- ಎಳೆ ಸಸ್ಯಗಳಿಗೆ ಈ ರೋಗ ಬಾಧಿಸಿದರೆ ವೇಗವಾಗಿ ಹಾನಿ ಮಾಡುತ್ತದೆ.
- ಬೆಳೆದ ಮರಗಳಿಗೆ ಹೆಚ್ಚು ಎಲೆ ಇರುವ ಕಾರಣ ಸ್ವಲ್ಪ ನಿಧಾನವಾಗಿರುತ್ತದೆ.
- ಸಸ್ಯೋತ್ಪಾದನೆ ಮಾಡುವಲ್ಲಿ ಈ ಸಮಸ್ಯೆ ಕಂಡು ಬಂದ ಕಾರಣ ಈ ಸಸ್ಯಗಳನ್ನು ನೆಟ್ಟಾಗ ಅದರ ಜೊತೆಗೆ ರೋಗಾಣು ಪ್ರಸಾರವಾಗುತ್ತದೆ.
- ಹಾಗಾಗಿ ಅಡಿಕೆ ಬೆಳೆ ಪ್ರದೇಶ ಹೆಚ್ಚಿಸುವುದನ್ನು ಸ್ವಲ್ಪ ಸಮಯದ ತನಕ ಕಡಿಮೆ ಮಾಡಿ.
- ರೋಗಾಣುವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸಿದಂತಾಗುತ್ತದೆ.
- ಹಾಗಾಗಿ ಸಮರ್ಪಕ ಪರಿಹಾರ ಕಂಡುಕೊಳ್ಳುವ ತನಕ ಅಡಿಕೆ ಸಸಿ ನೆಡುವ ಕೆಲಸ ಮಾಡದೆ ಇರುವುದು ಸೂಕ್ತ.
ತೆಂಗಿಗೂ ಹಾನಿ ಮಾಡುತ್ತದೆ:
ಬಹಳಷ್ಟು ಕಡೆಗಳಲ್ಲಿ ಎಳೆ ಸಸಿಗಳಲ್ಲಿ ಎಲೆ ಕರಟಿ ಹೋಗುವುದು ಇತ್ತೀಚೆಗೆ ಕಾಣಿಸಲಾರಂಭಿಸಿದೆ. ದೊಡ್ದ ಮರಗಳಲ್ಲೂ ಎಲೆಯಲ್ಲಿ ಚುಕ್ಕೆಗಳು ಕಾಣಿಸಿಕೊಂಡು ಅದು ದೊಡ್ಡದಾಗಿ ಒಣಗಿ ಗರಿ ಒಣಗಿದ್ದೂ ಇದೆ. ಹಾಗಾಗಿ ಇದು ತೆಂಗಿಗೂ ಬಾಧಿಸುತ್ತದೆ.
ಸಂಶೋಧನೆಗಳು ಮುಂದುವರಿದಿದೆ:
ಎಲೆ ಚುಕ್ಕೆ ರೋಗ ತೀವ್ರತೆಯನ್ನು ಸಂಬಂಧಿಸಿದ ಸಂಶೊಧನಾ ಕೆಂದ್ರಗಳು ಗಂಭೀರ ವಿಷಯವಾಗಿ ಸ್ವೀಕರಿಸಿವೆ. ಇದಕ್ಕೆ ಯಾವ ಉಷದೋಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಆ ಕಾರಣದಿಂದ ಕೆಲವೇ ಸಮಯದಲ್ಲಿ ಇದಕ್ಕೆ ಸೂಕ್ತ ಪರಿಹಾರವನ್ನು ನಿರೀಕ್ಷಿಸಬಹುದು.
ಈ ಮುಂಜಾಗ್ರತೆಯನ್ನು ಅಗತ್ಯವಾಗಿ ಪಾಲಿಸಿ:
- ಅಡಿಕೆ ತೆಂಗು ಬೆಳೆಸುವವ ಎಲ್ಲಾ ರೈತರೂ ಅದು ಎಷ್ಟೇ ಕಡಿಮೆ ಬೆಳೆ ಇದ್ದರೂ ಮರದ ಸ್ವಚ್ಚತೆಯ ಕಡೆಗೆ ಗಮನ ಇಡಿ.
- ತೆಂಗಿನ ಮರದ ಒಣ ಗರಿ ಇತ್ಯಾದಿಗಳನ್ನು ತೆಗೆದು ಸ್ವಚ್ಚವಾಗಿಡಿ.
- ಅಡಿಕೆ ಮರದ ಕೆಳಭಾಗದ ಬಲಿತ ಗರಿಗಳಲ್ಲಿ ಎಲೆ ಚುಕ್ಕೆ ರೋಗದ ಚಿನ್ಹೆ ಇದ್ದರೆ ಅದನ್ನು ಬಿದ್ದ ತಕ್ಷಣ ಸುಡಿ.
- ಎಳೆ ಸಸಿಗಳಲ್ಲಿ ಎಲೆ ಚುಕ್ಕೆ ಇರುವ ಭಾಗವನ್ನು ಕತರಿಸಿ ಅದನ್ನು ಸುಡುವುದು ಸೂಕ್ತ.
- ಅಡಿಕೆ , ತೆಂಗು ಬೆಳೆಗಳಿಗೆ ಶಿಫಾರಿತ ಪ್ರಮಾಣದ ಗೊಬ್ಬರ (ಅಡಿಕೆ 120-40:150 NPK) ತೆಂಗು 500:320:1200 NPK) ಕೊಡಿ.
- ವರ್ಷವೂ ಟ್ರೈಕೋಡರ್ಮಾ ವಿರಿಡೆಯಂತಹ ಜೈವಿಕ ಶಿಲೀಂದ್ರನಾಶಕ ಬಳಕೆ ಮಾಡುವುದನ್ನು ರೂಢಿ ಮಾಡಿಕೊಳ್ಳಿ.
- ದ್ವಿತೀಯ ಪೋಷಕಾಂಶದ (ಕ್ಯಾಲ್ಸಿಯಂ, ಮೆಗ್ನೀಶಿಯ ಮತ್ತು ಗಂಧಕ) ಕೊರೆತೆ ಇದ್ದರೆ ಕೊಡಿ.
- ಸಾವಯವ ಗೊಬ್ಬರವನ್ನು ಗರಿಷ್ಟ ಪ್ರಮಾಣದಲ್ಲಿ ಕೊಡಿ. ಬೇರುಗಳಿಗೆ ಗಾಯವಾಗಿ ಮರದ ಶಕ್ತಿ ಕಡಿಮೆಯಾಗುವ ಬೇಸಾಯ ಕ್ರಮ (ಉಳುಮೆ ಇತ್ಯಾದಿ) ಮಾಡುವುದನ್ನು ಕಡಿಮೆ ಮಾಡಿ.
ಎಲೆ ಚುಕ್ಕೆ ರೋಗ ವಾತಾವರಣವನ್ನು ಅವಲಂಭಿಸಿ ತೀವ್ರ ರೂಪ ತಳೆದಿರುವ ಸಾಧ್ಯತೆ ಹೆಚ್ಚು. ಈ ವರ್ಷ ಹಿಂದಿನಂತೆ ಮಳೆ ಆಯಾ ಋತುಮಾನಕ್ಕೆ ಅನುಗುಣವಾಗಿ ಬರಲಾರಂಭಿದರೆ ಇದು ತನ್ನಷ್ಟಕ್ಕೆ ಸರಿಯಾದರೂ ಅಚ್ಚರಿ ಇಲ್ಲ. ಸಾಧ್ಯವಾದಷ್ಟು ತೋಟದಲ್ಲಿ ಸ್ವಚ್ಚತೆಯನ್ನು ಪಾಲಿಸಿ. ಹೊರ ಪ್ರದೇಶಗಳಿಂದ ಗಿಡ ಇತ್ಯಾದಿ ತರುವಾಗ ಜಾಗರೂಕತೆ ವಹಿಸಿ.