ಅಡಿಕೆ ಬೆಳೆಯಲ್ಲಿ ಈ ಸಮಸ್ಯೆ ಬಾರೀ ಹೆಚ್ಚಳವಾಗಲು ಕಾರಣ.

ಅಡಿಕೆ ಬೆಳೆಯಲ್ಲಿ ಹೆಚ್ಚಳವಾಗುತ್ತಿರುವ ಸಮಸ್ಯೆ

ಇತ್ತೀಚೆಗೆ ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಇದಕ್ಕೆ ಏನು ಪರಿಹಾರ ಎಂದು ಕೇಳುವವರು. ಆದರೆ ಯಾಕಾಗಿ ಈ  ಸಮಸ್ಯೆ ಹೆಚ್ಚಾಯಿತು ಎಂದು ಯಾರೂ ಹೇಳುತ್ತಿಲ್ಲ.ಇದು ಹೊಸ ಸಮಸ್ಯೆ ಅಲ್ಲ. ಅಡಿಕೆ ಬೆಳೆ ಪ್ರಾರಂಭವಾದಾಗಿನಿಂದಲೂ ಇದ್ದುದೇ. ಆದರೆ ಈಗ ಅದು ಮಿತಿ ಮೀರಿ ಹೆಚ್ಚಳವಾಗುತ್ತಿದೆ.ಎಲ್ಲಾ ಕಡೆಯಲ್ಲೂ ಇದು ಅಡಿಕೆ ಬೆಳೆಯನ್ನು ಪೀಡಿಸುತ್ತಿದೆ.

ಅಡಿಕೆ ಮರ/ ಸಸಿಗಳ ಎಲೆಯನ್ನು ಹಾಳು ಮಾಡುವ ಒಂದು ರೀತಿಯ ತಿಗಣೆ ಇತ್ತೀಚಿನ ವರ್ಷಗಳಲ್ಲಿ  ಭಾರೀ ಸಮಸ್ಯೆ ಉಂಟು ಮಾಡುತ್ತಿದೆ. ಇದರ ಸಂಖ್ಯೆ ಗಣನೀಯವಾಗಿ ಹೆಚ್ಚಲು ಕಾರಣ ಏನು ಎಂಬುದನ್ನು ಇಲ್ಲಿ ವಿಸೃತವಾಗಿ ತಿಳಿಸಲಾಗಿದೆ. ಅಡಿಕೆ ಬೆಳೆಗಾರರು ಇನ್ನಾದರೂ ಕೆಲವು ಸುರಕ್ಷಿತ ಕೀಟ ನಿಯಂತ್ರಣದತ್ತ ಗಮನಹರಿಸದಿದ್ದರೆ ಸಣ್ಣ ಪ್ರಮಾಣದಲ್ಲಿ ಹಾನಿ ಮಾಡುತ್ತಿರುವ ಕೀಟಗಳು ಇನ್ನು ದೊಡ್ಡ ಹಾನಿ ಮಾಡುವಂತಾಗಬಹುದು.

 • ಇದು ಒಂದು ರಸ ಹೀರುವ ಕೀಟ. ಅಡಿಕೆ ಮರದ ಎಳೆಯ ಅಂಗಾಂಶಕ್ಕೂ ಇದಕ್ಕೂ ಅವಿನಾಭಾವ  ಸಂಬಂಧ.
 • ಈ ಕೀಟದ ಹೆಸರು ಸ್ಪಿಂಡಲ್ ಬಗ್.(Spindle bug Carvalhoia arecae  ) ಇದು ಅಡಿಕೆ ಮರ/ಸಸಿಯ ಸುಳಿ ಭಾಗದಲ್ಲಿ ವಾಸ್ತವ್ಯ ಇರುತ್ತದೆ.
 • ಮಿತಿ ಮೀರಿದಾಗ ಅದು ನೆಲದ ಕಳೆಗಳಲ್ಲು ಕಾಣಸಿಗುತ್ತದೆ.
 • ಅಡಿಕೆ ಸುಳಿಯಲ್ಲೆ ಸಂತಾನಾಭಿವೃದ್ದಿಯಾಗಿ ಎಲೆಮೂಡುವ ಹಂತ, ಗರಿ ಬಿಡಿಸಿಕೊಳ್ಳುವ ಮುಂಚೆಯೇ ಅದರ ರಸ ಹೀರಿ ಬೆಳವಣಿಗೆಗೆ ಅಗತ್ಯವಾದ ಹರಿತ್ತನ್ನು ಕಡಿಮೆ ಮಾಡುತ್ತದೆ.
 • ಕೀಟಗಳ ಸಂಖ್ಯೆ ಹೆಚ್ಚಾಗಿದ್ದಾಗ ಎಳೆ ಭಾಗದಲ್ಲೆಲ್ಲಾ ಚುಚ್ಚಿದ ಗಾಯ ಮಾಡಿ, ಅದರ  ಬೆಳವಣಿಗೆಯನ್ನು ಹತ್ತಿಕ್ಕುತ್ತವೆ.
 • ವಿಪರೀತವಾಗಿ ಹಾನಿ ಆದಾಗ ಸುಳಿ ಭಾಗ ಗುಚ್ಚವಾಗುತ್ತದೆ.
 • ಎಳೆ ಕಾಂಡದ ಭಾಗ ಒಡಕು ಉಂಟಾಗುತ್ತದೆ. ಶಿರ ಭಾಗ ವಿಕಾರವಾಗುವುದೂ ಇದೆ.
ಅಡಿಕೆ ಸಸ್ಯದ ಜೀವ ಹಿಂಡುವ ಸ್ಪಿಂಡಲ್ ಬಗ್
ಪ್ರೌಢ ಸ್ಪಿಂಡಲ್ ಬಗ್

ಚಿತ್ರದುರ್ಗ ಹೊಳಲ್ಕೆರೆಯ ಮಿತ್ರರೊಬ್ಬರು ಕಳೆದ ಮೂರು ವರ್ಷಗಳಿಂದ ಈ ಕೀಟದ ನಿಯಂತ್ರಣಕ್ಕಾಗಿ ವರ್ಷವೂ ಮೊನೋಕ್ರೋಟೋಫೋಸ್ ಕೀಟನಾಶಕವನ್ನು ಸಿಂಪಡಿಸುತ್ತಾರಂತೆ. ಒಮ್ಮೆಗೆ ಇದರಲ್ಲಿ ನಿಯಂತ್ರಣಕ್ಕೆ ಬರುತ್ತದೆ, ಮತ್ತೆ ಪುನಹ ನಾನಿದ್ದೇನೆ ಎಂದು ಕಾಣಿಸಿಕೊಳ್ಳುತ್ತದೆಯಂತೆ. ಕಳೆದ ವರ್ಷದಿಂದ ಇದರ ಹಾನಿ ವಿಪರೀತವಾಗಿದ್ದು,  ಎಳೆಯ ನರ್ಸರಿ ಗಿಡಗಳಿಗೂ ಇದರ ಹಾನಿ ಪ್ರಾರಂಭವಾಗಿದೆಯಂತೆ. ಇಂತಹ ಹಲವಾರು ಮಾಹಿತಿಗಳು ಫೇಸ್ ಬುಕ್ ಮುಂತಾದ ಮಾಹಿತಿ ಹಂಚಿಕೊಳ್ಳುವ ಮಾಧ್ಯಮಗಳಲ್ಲಿ ನಿತ್ಯ ಬರುತ್ತಿವೆ.  ಹಾಗಾದರೆ ಈ ಕೀಟ ಯಾಕೆ ಪ್ರಭಲವಾಯಿತು. ಯಾವ ಕಾರಣಕ್ಕೆ ಇದು ಕೀಟ ನಾಶಕಕ್ಕೆ ಬಗುವುದಿಲ್ಲ.  ಎಂಬುದನ್ನು ಪ್ರತೀಯೊಬ್ಬ ಅಡಿಕೆ ಬೆಳೆಗಾರರೂ ತಿಳಿಯಬೇಕು.

ಹಿಂದೆ ಮೈನರ್ – ಈಗ ಮೇಜರ್: ಯಾಕಾಯಿತು?

 • ಮೊದಲೇ ಹೇಳಿದಂತೆ ಈ ಸ್ಪಿಂಡಲ್ ಬಗ್ ಎಂಬುದು  ಹೊಸ ಕೀಟ ಅಲ್ಲ.
 • ಅಡಿಕೆ ಬೆಳೆಯಲಾಗುವ ಎಲ್ಲಾ ದೇಶಗಳಲ್ಲೂ ಇದು ಇದೆ.
 • ನಮ್ಮಲ್ಲೂ ಬಹಳ ಹಿಂದಿನಿಂದಲೂ ಇದರ ತೊಂದರೆ ಇದೆ.
 • ಕೆಲವು ಸೀನನ್ ನಲ್ಲಿ ಮಾತ್ರ ಇದರ ಹಾವಳಿ ಹೆಚ್ಚಾಗಿರುತ್ತಿತ್ತು.
 • ಎಳೆ ಸಸಿಗಳಿಗೆ ಮಾತ್ರ ತೊಂದರೆ ಎನ್ನಲಾಗುತ್ತಿತ್ತು.
 • ಈಗ ಹಾಗಿಲ್ಲ. ವರ್ಷದ ಎಲ್ಲಾ ಸೀಸನ್ ನಲ್ಲೂ ಇದರ ಹಾವಳಿ ಇದೆ.
 • ಎತ್ತರವಾಗಿ ಬೆಳೆಯುವ ಸಸಿಗಳಿಗೂ ಇದರ ಕಾಟ ಕಂಡು ಬರುತ್ತಿದೆ.
 • ಹಿಂದೆ ನಾವು ಕಂಡಿದ್ದ ಹಾನಿಗಿಂತ ವಿಪರೀತವಾದ ಹಾನಿ ಕಾಣಸಿಗುತ್ತದೆ.
 • ಈ ಕೀಟ ಈಗ ಸಾಧಾರಣ ಕೀಟವಾಗಿ ಉಳಿದಿಲ್ಲ.
ಸ್ಪಿಂಡಲ್ ಬಗ್ ಮಾಡುವ ಹಾನಿ
ಸ್ಪಿಂಡಲ್ ಬಗ್ ಮಾಡುವ ಹಾನಿ

ಕೆಲವೊಂದು ವಾತಾವರಣದ ಏರುಪೇರಿನ ಕಾರಣದಿಂದ ಹಾಗೆಯೇ ನಮ್ಮ ಬೇಸಾಯ ಕ್ರಮದಿಂದ ಸಾಧಾರಣ ಕೀಟಗಳೂ ಕೆಲವೊಮ್ಮೆ ಮೇಜರ್ ಕೀಟಗಳಾಗುವುದು  ಸರ್ವೇ ಸಾಮಾನ್ಯ. ಆ ಸಮಯದಲ್ಲಿ ನಮಗೆ ತುಂಬಾ ನಷ್ಟವಾಗಬಹುದು. ಆದರೆ ಅದು ಮತ್ತೆ ಸಾಮಾನ್ಯ ಕೀಟ  ಆಗಿಯೇ ಆಗುತ್ತದೆ.

ಕೀಟನಾಶಕಗಳಿಗೆ ನಿರೋಧಕ ಶಕ್ತಿ ಬೆಳೆಸಿಕೊಂಡಂತಿದೆ:

 • ಈ ಕೀಟವನ್ನು ಯಾರೂ  ನಿರ್ಲಕ್ಷ್ಯ ಮಾಡುತ್ತಿಲ್ಲ.
 • ಅದಕ್ಕೆ ಬೇಕಾದ ಕೀಟನಾಶಕ ಸಿಂಪಡಿಸಿ ಹತೋಟಿ ಕ್ರಮಗಳನ್ನು ಅನುಸರಿಸುತ್ತಾರೆ.
 • ಒಂದು ಕೀಟನಾಶಕಕ್ಕೆ ಬಗ್ಗಲಿಲ್ಲ ಎಂದರೆ ಅದಕ್ಕಿಂತ ಪ್ರಭಲ ಕೀಟನಾಶಕ ಬಳಕೆ ಮಾಡುತ್ತಾರೆ.
 • ಇದೇ ಕಾರಣದಿಂದಾಗಿ ಇಂದು ಈ ಕೀಟ ಪ್ರಭಲವಾಯಿತೋ ಎಂಬ ಅನುಮಾನವೂ ಇದೆ.
 • ಯಾವಾಗಲೂ ಕೀಟಗಳನ್ನು ಮೊದಲು ಸಾಮಾನ್ಯ ಕೀಟನಾಶಕದಲ್ಲಿ ಬಗ್ಗಿಸಲು  ಪ್ರಯತ್ನ ಪಡಬೇಕು.
 • ಅಂತರ್ ವ್ಯಾಪೀ ಕೀಟನಾಶಕ ಬಳಕೆ ಮಾಡುವಾಗ ಎರಡೆರಡು ಬಾರಿ ಯೋಚನೆ ಮಾಡಬೇಕು.
 • ಇದರ ಅತೀ ದೊಡ್ಡ ಸಮಸ್ಯೆ ಎಂದರೆ ಕೀಟಗಳು ಇದಕ್ಕೆ ನಿರೋಧಕ ಶಕ್ತಿ ಪಡೆಯುವುದು.
 • ಒಮ್ಮೆ ಬಳಕೆ ಮಾಡಿ ಎರಡನೇ ಸಲ ಬಳಕೆ ಮಾಡಿದರೆ ಅದಕ್ಕೆ ಕೀಟಗಳು ಬಗ್ಗುವುದಿಲ್ಲ.
 • ಪ್ರಾರಂಭದಲ್ಲೇ ಇಲಿಯ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬಾರದು.
 • ಇತ್ತೀಚೆಗೆ ನಮ್ಮ ಕೃಷಿ ಕ್ರಮ ಈ ಕ್ರಮದಲ್ಲಿ ಸಾಗುತ್ತಿದೆ.
 • ಕೀಟನಾಶಕ ಮಾರಾಟ ಮಾಡುವ ಕೆಲವರಿಗೆ ಯಾವ ಕೀಟಕ್ಕೆ ಯಾವ ಔಷಧಿ ಎಂಬುದು ಗೊತ್ತಿಲ್ಲ.
 • ರೈತರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಮಾರ್ಗದರ್ಶನ ಕೊಡುವವರೂ ಇಲ್ಲ.
 • ಇದೇ ಕಾರಣಕ್ಕೆ ಇಂದು  ಬೇರೆ ಬೇರೆ ಬೆಳೆಗಳಲ್ಲಿ ಮೈನರ್ ಕೀಟಗಳು ಮೇಜರ್ ಆಗುತ್ತಿವೆ. ಪ್ರಭಲ, ಅತಿ ಪ್ರಭಲ ಕೀಟನಾಶಕಗಳು ಮಾರುಕಟ್ಟೆಗೆ ಬರುತ್ತಲೇ ಇವೆ.
 • ರೈತರ ಹೊಲ ಇವುಗಳಿಗೆಲ್ಲಾ ಪ್ರಾತ್ಯಕ್ಷಿಕೆಯಾಗುತ್ತಿದೆ.
 • ಇಂದು ಅಡಿಕೆ ಬೆಳೆಯಲ್ಲಿ ಸ್ಪಿಂಡಲ್ ಬಗ್ ಹಾವಳಿ ಹೆಚ್ಚಾಗಲೂ ಇದೂ ಒಂದು ಕಾರಣ. ಜೊತೆಗೆ ವಾತಾವರಣದ ಪಾತ್ರವೂ ಇಲ್ಲದಿಲ್ಲ.
ರಸ ಹೀರಿ ಹಾನಿ ಮಾಡುವ ಅಪ್ಸರೆ ಕೀಟ (ಹಸುರು ಬಣ್ಣದ್ದು)
ರಸ ಹೀರಿ ಹಾನಿ ಮಾಡುವ ಅಪ್ಸರೆ ಕೀಟ (ಹಸುರು ಬಣ್ಣದ್ದು)

ಹಿಂದೆ ಯಾಕೆ ಮಿತಿಯಲ್ಲಿತ್ತು:

 • ಈ ಕೀಟ ಮಿತಿಯಲ್ಲಿ ಇದ್ದಾಗ ಪರಿಸರದಲ್ಲಿ ಅದರ ವೈರಿ ಕೀಟಗಳು  ಇದ್ದವು.
 • ಈಗ ಅವುಗಳ ಅವನತಿ ಬಹಳಷ್ಟು ಆಗಿವೆ.
 • ಸ್ಪಿಂಡಲ್ ಬಗ್ ಅನ್ನು  ಕೆಲವು ಪಕ್ಷಿಗಳು (King crow) ಬಕ್ಷಣೆ ಮಾಡುತ್ತವೆ.
 • ಅಂತಹ ಪಕ್ಷಿಗಳು ಈಗ ಬಹಳಷ್ಟು ಕಡಿಮೆಯಾಗಿವೆ. 
 • ನೆಲದಲ್ಲಿ ಹಲವಾರು ಬಗೆಯ ದುಂಬಿಗಳು ಇರುತ್ತವೆ. ಅವುಗಳಿಗೆ ನೆಲದ ಮೇಲೆ ನಾವು ಹಾಲುವ ಸಾವಯವ ವಸ್ತುಗಳು ಆಸರೆ.
 • ಸ್ಥೂಲ ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸುವುದು ಕಡಿಮೆಯಾದ ಕಾರಣ ನೆಲದಲ್ಲಿ ಬದುಕುವ (Ground beetle) ದುಂಬಿಗಳು, ಹುಲಿ ದುಂಬಿಗಳು ( Tiger beetle) ಕ್ಷೀಣಿಸಲಾರಂಭಿಸಿದವು.
 • ಇವು ಸ್ಪಿಂಡಲ್ ಬಗ್ ಭಕ್ಷಕಗಳು. ಮಣ್ಣಿನ ತೂತು ಮಾಡಿಕೊಂಡು ಕೆಲವು ಜೇನು ನೊಣದ ತರಹದ  ನೊಣಗಳು (Wasp)  ಇರುತ್ತವೆ.
 • ಈ ನೊಣಗಳು ಸ್ಪಿಂಡಲ್ ಬಗ್ ನ ವಿರೋಧಿ ಕೀಟಗಳು.
 • ಇವುಗಳ ಸಂತಾನ ನಮ್ಮ ಬೇಸಾಯ ಕ್ರಮದಿಂದ ತುಂಬಾ ಕಡಿಮೆಯಾಗುತ್ತಿದೆ.
 • ನೆಲಕ್ಕೆ ಅಗತೆ, ಇತ್ಯಾದಿ ದಬ್ಬಾಳಿಕೆಯ ಪರಿಣಾಮದಿಂದ  ಈ ನೊಣಗಳ ಗೂಡುಗಳೇ  ನಾಶವಾಗಿವೆ.
 • ಕೆಲವು ಜಾತಿಯ ಜೇಡಗಳು ಸ್ಪಿಂಡಲ್ ಬಗ್ ಭಕ್ಷಕಗಳಾಗಿದ್ದು, ಅವು ಸಹ ಸಂತತಿ ಕಡಿಮೆಯಾಗುತ್ತಿದೆ.
 • ಅಳಿಲುಗಳು ಸಹ ಈ ಕೀಟವನ್ನು ಭಕ್ಷಿಸುತ್ತವೆ. ಹಾಗೆಯೇ ಗೂಬೆಗಳೂ.
 • ಇವುಗಳ ಸಂತತಿ ಇತ್ತೀಚೆಗೆ ತುಂಬಾ ಕಡಿಮೆಯಾಗುತ್ತಿರುವ ಕಾರಣ ಮೈನರ್ ಕೀಟಗಳು ಪ್ರಭಲವಾಗುತ್ತಿವೆ.
 • ಇವುಗಳ ಸಂತತಿ ಕಡಿಮೆಯಾಗಲೂ ನಾವು ಬಳಸುವ ಕೆಲವು ಕೀಟನಾಶಕಗಳೂ ಕಾರಣ.
 • ಪ್ರಭಲ ಕೀಟನಾಶಕಗಳು, ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕದ ಬಳಕೆ, ಅಗತ್ಯ ಇಲ್ಲದ ಸಂದರ್ಭಗಳಲ್ಲಿ ಕೀಟನಾಶಕದ ಬಳಕೆ ಇವೆಲ್ಲಾ ಪರಾವಲಂಭಿ ಕೀಟಗಳ ಸಂತತಿ ನಾಶಕ್ಕೆ ಕಾರಣವಾಗುತ್ತವೆ.
 • ಉದಾಹರಣೆಗೆ ಭತ್ತಕ್ಕೆ ಪ್ರಭಲ ಕೀಟನಾಶಕ ಬಳಕೆ ಮಾಡಿದಾಗ ಆ ಭತ್ತವನ್ನು ತಿಂದ ಕೆಲವು ಹಕ್ಕಿಗಳ ಮೊಟ್ಟೆಯ ತೊಗಟೆ ತೆಳುವಾಗಿ ಅವುಗಳ ಸಂತಾನಾನಾಭಿವೃದ್ದಿಗೆ ಅಡ್ಡಿಯಾಗುತ್ತದೆ.
ಇತ್ತೀಚೆಗೆ ಇದು ನರ್ಸರಿ ಗಿಡಗಳಿಗೂ ತೊಂದರೆ ಮಾಡಲಾರಂಭಿಸಿದೆ.
ಇತ್ತೀಚೆಗೆ ಇದು ನರ್ಸರಿ ಗಿಡಗಳಿಗೂ ತೊಂದರೆ ಮಾಡಲಾರಂಭಿಸಿದೆ.

ರೈತರು ಏನು ಮಾಡಬೇಕು:

 • ಮುಖ್ಯವಾಗಿ ರೈತರು ಸಸ್ಯಗಳಿಗೆ ರೋಗ – ಕೀಟ ನಿರೋಧಕ ಶಕ್ತಿ ಬರುವಂತೆ ಬೇಸಾಯ ಕ್ರಮವನ್ನು ಅನುಸರಿಸಬೇಕು.
 • ನಮ್ಮ ಬಹುತೇಕ ಮಣ್ಣಿಗೆ ಗಂಧಕ ಪೋಷಕಾಂಶದ ಅವಶ್ಯಕತೆ ಇರುತ್ತದೆ.
 • ಹೆಚ್ಚಿನವರ ಹೊಲದಲ್ಲಿ ಮಳೆಗೆ ಮೇಲ್ಮಣ್ಣು ಕರಗಿ ಹೋಗುವುದು ಸಾಮಾನ್ಯ.
 • ಮೇಲ್ಮಣ್ಣು ಸವಕಳಿಯಾಗಿ ಹೋಗುವಾಗ ಮತ್ತು ಅಧಿಕ ನೀರಾವರಿಯಿಂದ ಗಂಧಕದ ಕೊರತೆ ಉಂಟಾಗುತ್ತದೆ.
 • ಇದನ್ನು ಪ್ರತೀ ವರ್ಷವೂ ನಾವು ಪೂರೈಕೆ ಮಾಡಬೇಕಾಗುತ್ತದೆ.
 • ಸಾಮಾನ್ಯವಾಗಿ ಅಡಿಕೆ ಮರಗಳಿಗೆ ವಾರ್ಷಿಕ 50 ಗ್ರಾಂ ತೆಂಗಿಗೆ ವಾರ್ಷಿಕ 100 ಗ್ರಾಮ್ ಗಳಷ್ಟು ಗಂಧಕ ಪೋಷಕಾಂಶ ಕೊಡಬೇಕಾಗುತ್ತದೆ.
 • ಕೆಲವು ಖಾಸಗಿ ಗೊಬ್ಬರ ತಯಾರಕರ ಉತ್ಪನ್ನಗಳಲ್ಲಿ ಗಂಧಕ ಸೇರಿಸ್ಪಟ್ಟ ಕಾರಣ ಅವು ಹೆಚ್ಚಿನ ಫಲಿತಾಂಶವನ್ನು ಕೊಡುವುದನ್ನು ಗಮನಿಸಬಹುದು.
 • ತೆಂಗು ಇತ್ಯಾದಿ ಬೆಳೆ ಬೆಳೆಸುವವರು ಮರಗಳ ಕೀಟ ರೊಗ ನಿರೋಧಕ ಶಕ್ತಿಗೆ  ಗಂಧಕ ಗೊಬ್ಬರವನ್ನು ಬಳಸಲೇ ಬೇಕು.
 • ಮೆಗ್ನಿಶಿಯಂ ಸಲ್ಫೇಟ್, ಸತುವಿನ ಸಲ್ಫೇಟ್, ಹಾಗೆಯೇ ಪೊಟ್ಯಾಶಿಯಂ ಸಲ್ಫೇಟ್ ಬಳಕೆ ಮಾಡಿದಾಗ ಗಂಧಕ ಸಿಗುತ್ತದೆ.
 • ಗೊಬ್ಬರ ಕೊಡುವಾಗ NPK ಮತ್ತು ದ್ವಿತೀಯ ಪೊಷಕಾಂಶಗಳನ್ನೊಳಗೊಂಡಂತೆ ಸಮತೋಲನ ಪ್ರಮಾಣದಲ್ಲಿ ಕೊಡುವುದು ತುಂಬಾ ಅಗತ್ಯ.  
 • ಅನಿವಾರ್ಯ ಕಾರಣಗಳಿಂದಾಗಿ ಈಗ ನಮ್ಮ ಮಣ್ಣಿನಲ್ಲಿ ಸಾವಯವ ಅಂಶಗಳು ಕಡಿಮೆಯಾಗುತ್ತಿವೆ.
 • ಹಾಕುವ ಸಾವಯವ ವಸ್ತುಗಳು ಮಣ್ಣು ಕೊಚ್ಚಣೆ ಮೂಲಕ ಪೋಲಾಗುತ್ತಿವೆ.
 • ಹಿಂದಿನಂತೆ ನಾವು ಸಾವಯವ ವಸ್ತು ಬಳಕೆ ಮಾಡುವುದಕ್ಕೆ ತುಂಬಾ ಕಷ್ಟವೂ ಇದೆ.
 • ಆದರೂ ಸಾಧ್ಯವಾದಷ್ಟು ಸ್ಥೂಲ ಗೊಬ್ಬರಗಳನ್ನು (Bulk) ಮಣ್ಣಿಗೆ ಸೇರಿಸುತ್ತಾ ಇರಬೇಕು.
 • ಕೃಷಿ ತ್ಯಾಜ್ಯಗಳನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸಮತೋಲನಕ್ಕೆ ಬರುತ್ತದೆ.
 • ಹಿಂದೆ ಹಟ್ಟಿ ಎಂಬ ವ್ಯವಸ್ಥೆಯಲ್ಲಿ ಸೊಪ್ಪು ಸದೆ ಮುಂತಾದ ಹಸು, ಎಮ್ಮೆ ಕಾಲಿನ ಬುಡಕ್ಕೆ  ಹಾಕುವ ಹಾಸಲು ಗೊಬ್ಬರ  ಹೆಚ್ಚಿನ ಪ್ರಮಾಣದ ಸ್ಥೂಲ ಗೊಬ್ಬರದ ಅವಶ್ಯಕತೆಯನ್ನು ಪೂರೈಸುತ್ತಿತ್ತು.
 • ಈಗ ಆ ಪದ್ದತಿ ತುಂಬಾ ಕಡಿಮೆಯಾಗಿದೆ. ಮಣ್ಣಿನಲ್ಲಿ ಕಾರ್ಬನ್ ಅಂಶ  ಹೆಚ್ಚಾದಂತೆ ಸಸ್ಯಕ್ಕೆ ತನ್ನಿಂದ ತಾನೇ ಶಕ್ತಿ ಬರುತ್ತದೆ.
 • ಮಣ್ಣು ಪರೀಕ್ಷೆಯನ್ನು ಮಾಡಿಸಬೇಕು. ಕೊರತೆ ಉಳ್ಳ ಪೊಷಕಾಂಶಗಳನ್ನು ಒದಗಿಸಿದಾಗ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.
 • ಗಂದಕ ಯುಕ್ತ ಪೊಷಕಗಳನ್ನು ಸ್ವಲ್ಪವಾದರೂ ಬಳಕೆ ಮಾಡಿದಾಗ ಕೆಲವು ಕೀಟ ರೋಗ ಸಮಸ್ಯೆ ಕಡಿಮೆಯಾಗುತ್ತದೆ.
 • ಜೈವಿಕ ಕೀಟ ನಿಯಂತ್ರಕವಾದ ವೆರ್ಟಿಸೀಲಿಯಂ (Verticillium chlamydospori  10 9 spores/ml ))  ಬಳಕೆ ಹಾಗೂ ವೆಟ್ಟೆಬಲ್ ಸಲ್ಫರ್ ( ನೀರಿನಲ್ಲಿ ಕರಗುವ ಗಂಧಕ) ಸಿಂಪರಣೆ ಮಾಡಿ ನಿಯಂತ್ರಣಕ್ಕೆ ತರಲು ಮೊದಲು ಪ್ರಯತ್ನಿಸಿ ನಂತರ ಅಗತ್ಯವಾದರೆ ಬೇರೆ ಕೀಟ ನಾಶಕ ಬಳಕೆ ಮಾಡಬೇಕು.

ಹಾನಿ ಮಾಡುವ ಕೀಟಗಳು ಅಲ್ಪ ಸ್ವಲ್ಪ ಇರಲೇ ಬೇಕು. ಅವುಗಳಿಂದ ಆಗುವ ಕನಿಷ್ಟ ಹಾನಿ ಸಹ್ಯವಾಗಿರಬೇಕು. ಹಾಗಿದ್ದಾಗ ಅವುಗಳ ವೈರಿ ಜೀವಿಗಳೂ ಬದುಕಿರುತ್ತವೆ. ವೈರಿ ಜೀವಿ (predetors) ನಾಶವಾಗುವ ಯಾವ ಸಸ್ಯ ಸಂರಕ್ಷಣಾ ಕ್ರಮವೂ ಒಳ್ಳೆಯದಲ್ಲ.

Leave a Reply

Your email address will not be published. Required fields are marked *

error: Content is protected !!