ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ಸೂಕ್ತ ವಿಧಾನ.

good yielded plant

ಈಗ ಎಲ್ಲರೂ ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ (ಬೀಜದ ಅಡಿಕೆ) ಅವಸರದಲ್ಲಿದ್ದಾರೆ. ಉತ್ತಮ ಇಳುವರಿ ಕೊಡುವ ತಳಿ ಬೇಕು ಎಂಬುದು ಎಲ್ಲರ ಆಕಾಂಕ್ಷೆ . ಬೀಜದ ಅಡಿಕೆ ಹುಡುಕಾಟದ ಭರದಲ್ಲಿ ತಮ್ಮ ಕಾಲ ಬುಡದಲ್ಲೇ ಇರುವ  ಉತ್ಕೃಷ್ಟ ತಳಿಯ ಅಡಿಕೆಯನ್ನು ಗಮನಿಸುವುದೇ ಇಲ್ಲ.  ನಿಜವಾಗಿ ಹೇಳಬೇಕೆಂದರೆ ಅವರವರ ಹೊಲದಲ್ಲಿ  ಅಥವಾ ಅವರ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ತಳಿಗಳೇ  ಉತ್ಕೃಷ್ಟ ತಳಿಯಾಗಿರುತ್ತದೆ.

ಯಾವುದೇ ಬೆಳೆಯಲ್ಲಿ ಬೀಜದ ಆಯ್ಕೆ ಎಂಬುದು ಪ್ರಾಮುಖ್ಯ ಘಟ್ಟ. ಬೀಜದ ಗುಣದಲ್ಲೇ ಇಡೀ ಬೆಳೆಯ ಭವಿಷ್ಯ ನಿರ್ಧಾರವಾಗುತ್ತದೆ. ಆದ ಕಾರಣ ಬೀಜವನ್ನು ಸ್ವ ಆಯ್ಕೆ ಮಾಡುವುದು ಅತಿ ಉತ್ತಮ. ನಂಬಿಗಸ್ಥರ ಮೂಲಕ ಆಯ್ಕೆ ಮಾಡಿದ್ದನ್ನು ಕೊಳ್ಳುವುದು ತೊಂದರೆ ಇಲ್ಲ. ಮೂಲ ತಿಳಿಯದ ಕಡೆಯಿಂದ  ಸಸಿ ಆಯ್ಕೆ ಮಾಡುವುದು ಕನಿಷ್ಟ. ಅವರವರ ತೋಟದ ಉತ್ತಮ ಮರದ ಅಡಿಕೆ ಆಯ್ಕೆ ಮಾಡುವುದು ಎಲ್ಲದಕ್ಕಿಂತ ಶ್ರೇಷ್ಟ. ರೈತರು ಅವರವರ ಬಳಕೆಗೆ ಬೀಜ ಆಯ್ಕೆಮಾಡುವ ವಿಧಾನ ಈ ರೀತಿ ಇರುತ್ತದೆ.

ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ತೋಟದಲ್ಲಿ ಸುತ್ತಲೂ ಇಂತಹ ಇಳುವರಿ ಕೊಡುವ ಮರಗಳು ಇರಬೇಕು.
ಇಂತಹ ಇಳುವರಿ ಕೊಡುವ ಮರಗಳು ಸುತ್ತಲೂ ಇರುವ ಕಡೆ ಉತ್ತಮ ಮರದ ಬೀಜದ ಆಯ್ಕೆ ಮಾಡಿದರೆ ಒಳ್ಳೆಯದು.
 • ಧೀರ್ಘಾವಧಿ ಬೆಳೆಗಳಲ್ಲಿ ಅದರಲ್ಲೂ ಮಿಶ್ರ ಪರಾಗಸ್ಪರ್ಷ ಆಗುವ ಅಡಿಕೆ- ತೆಂಗು  ಸಸ್ಯದಲ್ಲಿ ಬೀಜದ ಆಯ್ಕೆ ಮಾಡುವುದಕ್ಕೆ ಕೆಲವು ಮಾನದಂಡಗಳಿವೆ.
 • ಆ ಪ್ರಕಾರ ಆಯ್ಕೆ ಮಾಡಿದ್ದೇ ಆದರೆ  ತೋಟದಲ್ಲಿ ಉತ್ಪಾದಕ ಮರಗಳ ಸಂಖ್ಯೆ ಹೆಚ್ಚು ಇರುತ್ತದೆ.
 • ಬೀಜದ ಅಯ್ಕೆ ಎಂಬುದು ಒಂದು ಅಧ್ಯಯನ ಇದ್ದಂತೆ.
 • ಮರದಲ್ಲಿ ಯಾವ ಮರದ ಬೀಜ ಉತ್ತಮ ಅಡಿಕೆ ಎಂಬುದನ್ನು ಹಲವಾರು ವರ್ಷಗಳಿಂದ ಅಭ್ಯಾಸ  ಮಾಡಿ ಅದನ್ನು ಪ್ಲಸ್ ಟ್ರೀ ಎಂದು ಗುರುತಿಸಿ, ಅದರಿಂದ ಮಾತ್ರ ಬೀಜದ ಆಯ್ಕೆ ಮಾಡುವುದು ಸೂಕ್ತ.
ಗೊನೆಯಲ್ಲಿ ಕಾಯಿ ಹೀಗೆ ಹಣ್ಣು ಆಗಿರಬೇಕು.
ಗೊನೆಯಲ್ಲಿ ಕಾಯಿ ಹೀಗೆ ಹಣ್ಣು ಆಗಿರಬೇಕು.

ಬೀಜ ಆರಿಸುವ ಮರದ ಪ್ರಾಯ:

 • ಬೀಜಕ್ಕಾಗಿ ಅಡಿಕೆಯನ್ನು ಆಯ್ಕೆ ಮಾಡುವಾಗ ಕೆಲವರು 40 ವರ್ಷದ ಮರ ಆಗಿರಬೇಕು, ಅಥವಾ ಅದಕ್ಕಿಂತ ಹೆಚ್ಚು ಆಗಿರಬೇಕು ಎಂದೆಲ್ಲಾ ಹೇಳುತ್ತಾರೆ.
 • ವಾಸ್ತವವಾಗಿ ಹಾಗೇನೂ ಇಲ್ಲ.  ಇತ್ತೀಚಿನ ಬೇಸಾಯ ಕ್ರಮ, ಹಾವಾಮಾನದಿಂದ ಅಡಿಕೆ ಮರಗಳು ಇಷ್ಟು ವರ್ಷ ಬದುಕುವುದೂ  ಕಡಿಮೆ.
 • ಮರವು ಫಲಕೊಡಲು ಪ್ರಾರಂಭವಾಗಿ ಸುಸ್ಥಿರ ( regular sustainable yield) ಇಳುವರಿ ಬರಲು ಪ್ರಾರಂಭವಾದ ತರುವಾಯ ( 10-15 ವರ್ಷದ) ನಂತರ ಬೀಜವನ್ನು ಆಯ್ಕೆ ಮಾಡಬಹುದು.
 • ಸಾಮಾನ್ಯ ಆರೈಕೆಯಲ್ಲಿ ಅಡಿಕೆ ಮರವು 5 ವರ್ಷಕ್ಕೆ ಇಳುವರಿ ಕೊಡಲು ಪ್ರಾರಂಭವಾಗುತ್ತದೆ.
 • ಸುಮಾರು 10 ವರ್ಷದ ವರೆಗೆ ಇದರ ಮರದ ಲಕ್ಷಣ ಇತ್ಯಾದಿ ಸ್ವಲ್ಪ ಬದಲಾವಣೆ ಆಗಿ, ನಂತರ ಏಕ ಪ್ರಕಾರವಾಗಿ ಬೆಳೆವಣಿಗೆಯಾಗುತ್ತದೆ.
 • ಆ ನಂತರ ಬೀಜದ ಆಯ್ಕೆ ಮಾಡಬಹುದು. ಮರ ಅರೋಗ್ಯವಾಗಿರಬೇಕು.
 • ಮರದ ಪ್ರಾಯ ಪ್ರಮುಖ ಮಾನದಂಡ ಆಲ್ಲ. ಉತ್ತಮ ಇಳುವರಿ ಕೊಡಬಲ್ಲ ಪ್ರಾಯದಲ್ಲಿ ಬೀಜದ ಆಯ್ಕೆ ಮಾಡಬೇಕು.
 • ತೀರಾ ಬೆಳವಣಿಗೆ ಆದ ನಂತರ ಬೀಜದ ಆಯ್ಕೆ ಮಾಡುವುದು ಉತ್ತಮವಲ್ಲ.
 • 10 ವರ್ಷದಿಂದ 20 ವರ್ಷದ ವರೆಗಿನ ಮರದ ಬೀಜ ಆಯ್ಕೆ ಮಾಡಬಹುದು.
 • ಈಗಿನ, ಅಧಿಕ ಇಳುವರಿ ಕೊಡುವ ತಳಿಗಳು, ಬೇಸಾಯ ಕ್ರಮ ಮತ್ತು ಬೆಳೆ ಪ್ರದೇಶದ ಆಯ್ಕೆಯಲ್ಲಿ ಮರದ ಆಯುಸ್ಸು, ಸರಾಸರಿ 30-40 ವರ್ಷಗಳೇ ಆಗಿರುತ್ತವೆ.( ಕೆಲವು ನೈರುತ್ಯ – ದಕ್ಷಿಣ ಕೂಡಿರುವ ಪ್ರದೇಶಗಳನ್ನು ಹೊರತಾಗಿಸಿ)
 • ಆದ ಕಾರಣ ಮಧ್ಯಮ ವಯಸ್ಸಿನ ಮರದ ಬೀಜಗಳೇ ಉತ್ತಮ.
ಬೀಜದ ಗೋಟು ಹೀಗೆ ಸಿಪ್ಪೆ ಬಿಡಿಸಿದ್ದರೆ ಒಳ್ಳೆಯದು
ಬೀಜದ ಗೋಟು ಹೀಗೆ ಸಿಪ್ಪೆ ಬಿಡಿಸಿದ್ದರೆ ಒಳ್ಳೆಯದು

ಬೀಜದ ಆಯ್ಕೆ ಹೇಗೆ:

 • ಒಂದು ಮರವನ್ನು ಬೀಜಕ್ಕೆ ಆಯ್ಕೆ ಮಾಡುವಾಗ  ಆ ತೋಟದಲ್ಲಿ ಒಟ್ಟು  ಮರಗಳಲ್ಲಿ ಇಳುವರಿ ಹೇಗಿದೆ ಎಂಬುದನ್ನು ನೋಡಬೇಕು. 
 • ಬಹುತೇಕ ಮರಗಳಲ್ಲಿ ಕನಿಷ್ಟ 2-3  ಗೊನೆಯಾದರೂ ಅಡಿಕೆ ಇರಬೇಕು.
 • ಮರದ ಬೆಳವಣಿಗೆ ಲಕ್ಷಣ ಉತ್ತಮವಾಗಿರಬೇಕು.
 • ಮರದ ಸುತ್ತಮುತ್ತ ಬಂಜೆ ಮರಗಳು ಇರಬಾರದು. ಅಂಡೊಡಕ, ಹಾಗೆಯೇ ವೈಪರೀತ್ಯದ ಬೆಳೆವಣಿಗೆ ಉಳ್ಳ ಮರಗಳು ಇರಬಾರದು.
 • ಮರದಲ್ಲಿ ಮೊದಲ ಗೊನೆಯ ಅಡಿಕೆಯನ್ನು ಬೀಜಕ್ಕೆ ಆಯ್ಕೆ ಮಾಡಬಾರದು.
 • ನಂತರದ ಉತ್ತಮ ಇಳುವರಿ ಇರುವ ಗೊನೆಯ ಬೀಜವನ್ನು ಆಯ್ಕೆ ಮಾಡಬೇಕು.
 • ಕೊನೆಯ ಗೊನೆಯನ್ನು ಬೀಜಕ್ಕೆ ಆಯ್ಕೆ ಮಾಡಬಾರದು.

thin husk is important
ಗೊನೆಯ ಎಲ್ಲಾ ಮರದ ಅಡಿಕೆಯನ್ನೂ ಬೀಜಕ್ಕಾಗಿ ಆಯ್ಕೆ ಮಾಡುವುದಲ್ಲ. ಅದನ್ನು ನೀರಿನಲ್ಲಿ ಹಾಕಿ ಅದರಲ್ಲಿ ತೊಟ್ಟು ಮೇಲಕ್ಕೆ ನಿಲ್ಲುವ ಬೀಜದಲ್ಲಿ ಶಕ್ತಿಯುತವಾದ ಮೊಳಕೆ ಬರುತ್ತದೆ ಎಂದರ್ಥ.

 • ಬೀಜವನ್ನು ಆಯ್ಕೆ ಮಾಡುವಾಗ  ಬರೇ ಹೊರ ಭಾಗದ ಗಾತ್ರವನ್ನು ಮಾತ್ರ ನೋಡುವುದಲ್ಲ.
 • ಗೊನೆಯ ಒಂದೆರಡು ಅಡಿಕೆಯನ್ನು ಒಡೆದು ನೋಡುವುದು ಉತ್ತಮ.
 • ಮೊದಲ ಕೊಯಿಲು, ಮತ್ತು ಕೊನೆಯ ಕೊಯಿಲಿನ ಕೆಲವು ಮರದ ಅಡಿಕೆಯಲ್ಲಿ ಬ್ರೂಣದ ನ್ಯೂನತೆ ಇರುತ್ತದೆ.
 • ಒಳ ತಿರುಳು ಗಟ್ಟಿಯಾಗಿರಬೇಕು. ಮರಗಳ ಆರೋಗ್ಯ ಚೆನ್ನಾಗಿರಲಿ.
 • ಹೆಚ್ಚು ಬಿಳಿ ಭಾಗ ಇರಬಾರದು.
 • ಒಳ ಭಾಗದಲ್ಲಿ  ಹೆಚ್ಚು ಬಿಳಿ ತಿರುಳು ಇದ್ದರೆ ಹೆಚ್ಚು ವರ್ಷ ದಾಸ್ತಾನು ಇಡಲಿಕ್ಕೆ ಆಗುವುದಿಲ್ಲ ಎಂಬುದಕ್ಕೆ  ಹೀಗೆ ಹೇಳಲಾಗುತ್ತದೆ.
 • ಈಗ ಅಂತಹ ಗುಣ ಲಕ್ಷಣಗಳಿಗೆ ಮಹತ್ವ ಕಡಿಮೆಯಾಗಿದೆ.
 • ಸ್ಥಳೀಯ ಮಾರುಕಟ್ಟೆಗೆ ಯಾವ ರೀತಿಯದ್ದು ಬೇಕು ಅಂತಹ  ಗಾತ್ರದ ಅಡಿಕೆ ಆಗಿರಬೇಕು.

ಬೀಜದ ಅಡಿಕೆ ಕೊಯಿಲು:

seeds should be floated

 • ಅಡಿಕೆಯನ್ನು ಮರದಲ್ಲಿ ಪೂರ್ತಿ ಹಣ್ಣಾದ ನಂತರ ಕೊಯಿಲು ಮಾಡಬೇಕು. ಕೊಯ್ಯುವಾಗ  ಗೊನೆಯನ್ನು ಕೆಳಕ್ಕೆ ಬೀಳಿಸಬಾರದು.
 • ಇಳಿಸಬೇಕು. ಇಲ್ಲವಾದರೆ ಅದರ ಬ್ರೂಣಕ್ಕೆ ಘಾಸಿ ಉಂಟಾಗುವ ಸಾಧ್ಯತೆ ಇರುತ್ತದೆ.
 • ಕೊಯಿಲು ಮಾಡಿ ತಕ್ಷಣ ಅದನ್ನು ಗೊಂಚಲಿನಿಂದ ಬೇರ್ಪಡಿಸದೆ  ಒಂದು ಎರಡು ದಿನ ನೆರಳಿನಲ್ಲಿ ಇಟ್ಟು ಬಿಡಿಸಬೇಕು.
 • ಬಿಡಿಸಿ ಅದರಲ್ಲಿ ನ್ಯೂನತೆ ಉಳ್ಳ ಕಾಯಿಗಳನ್ನು ಬಿಡಬೇಕು. ನಂತರ ಅದನ್ನು ನೀರಿನಲ್ಲಿ ಹಾಕಿ ಪರೀಕ್ಷೆ ಮಾಡಬೇಕು.
 • ನೀರಿನಲ್ಲಿ ಹಾಕಿದಾದ ತೊಟ್ಟು ಭಾಗ ಮೇಲೆ ನಿಲ್ಲುವ ಅಡಿಕೆ ಬೀಜಕ್ಕೆ ಉತ್ತಮ ಎನ್ನುತ್ತಾರೆ.
 • ಹಾಗೆಂದು ಬಿದ್ದು ಹುಟ್ಟುವ ಅಡಿಕೆಗೆ ಅಂತಹ ಯಾವ ಪರೀಕ್ಷಾ ಮಾನದಂಡವೂ ಇರುವುದಿಲ್ಲ.

ಪಾತಿಯಲ್ಲಿ ಬೆಳೆಸುವುದು:

 • ಬೀಜದ ಅಡಿಕೆಯನ್ನು ನೇರವಾಗಿ ಪಾಲಿಥೀನ್ ಚೀಲಕ್ಕೆ ಹಾಕುವುದಕ್ಕಿಂತ ಪಾತಿಯಲ್ಲಿ ಬೆಳೆಸಿ ಹಾಕುವುದು ಸೂಕ್ತ.
 • ಪಾಯಿಯಲ್ಲಿ ಸಡಿಲವಾದ ಫಲವತ್ತಾದ  ಮಾಧ್ಯಮ ಇರಬೇಕು.
 • ಬೀಜದ ಗೋಟನ್ನು ಹರಡುವ ಪಾತಿಯ ಕೆಳಭಾಗದಲ್ಲಿ ಸುಮಾರು 4-5 ಇಂಚು ಮರಳು ಮಿಶ್ರ ಕಾಂಪೋಸ್ಟು  ಹಾಕಿ ಅದರ ಮೇಲೆ ಬೀಜದ ಅಡಿಕೆಯನ್ನು ಮೇಲೆ ಮೇಲೆ ಬೀಳದಂತೆ ಹರಡಿ,
 • ಮೇಲ್ಭಾಗದಲ್ಲಿ  ತೇವಾಂಶ ಆರದಂತೆ ಬತ್ತದ ಹೊಟ್ಟು ಅಥವಾ ಬಾಳೆಯ ಒಣ ಗರಿಗಳನ್ನು ತುಂಡು ಮಾಡಿ ಹಾಕಿ ನಿತ್ಯ ತೇವಾಂಶ ಇರುವಂತೆ ನೋಡಿಕೊಳ್ಳಬೇಕು.
 • ಪಾತಿಯಲ್ಲಿ ನೇರವಾಗಿ ಇಡುವುದಕ್ಕಿಂತ ಅಡ್ದ ಇಟ್ಟರೆ ಒಳ್ಳೆಯದು.
 • ಅಡಿಕೆಯು  ಮೊಳಕೆ ಬರುವ ಮೊದಲು ಬೇರು ಬಂದಿರುತ್ತದೆ.
 • ಪಾತಿಯಿಂದ ಮೊಳಕೆ  ಸಸಿಯನ್ನು ತೆಗೆಯುವಾಗ  ಬೇರುಗಳಿಗೆ ಗಾಯ ಆಗಬಾರದು.

ಪಾತಿಯಲ್ಲಿ ಬೆಳೆಸುವ ಉದ್ದೇಶ, ಯಾವ ಅಡಿಕೆ ಬೇಗ ಮೊಳಕೆ ಬಂದಿದೆಯೋ ಅದು ಉತ್ತಮ ಗಿಡವಾಗಿರುತ್ತದೆ.ಸುಮಾರು 40 ದಿನಕ್ಕೆ ಮೊಳಕೆ ಬರಲು ಪ್ರಾರಂಭವಾಗುತ್ತದೆ.ಚಳಿಗಾಲದಲ್ಲಿ ಮೊಳಕೆ ಸ್ವಲ್ಪ ನಿಧಾನ. ಬೇಸಿಗೆಯಲ್ಲಿ 30-40 ದಿನದ ಒಳಗೆ ಮೊಳಕೆ ಬರುತ್ತದೆ.ಸುಮಾರು 60 ದಿನಗಳ ತನಕ ಮೊಳಕೆ ಬಂದ ಬೀಜಗಳನ್ನು ಮಾತ್ರ ಪಾಲಿಥೀನ್ ಕೊಟ್ಟೆಗೆ ಹಾಕಿ, ಉಳಿದವುಗಳನ್ನು  ಬಿಡುವುದು ಉತ್ತಮ.
ಇದೆಲ್ಲಾ ಕ್ರಮಗಳನ್ನು ಕರಾರುವಕ್ಕಾಗಿ ಅನುಸರಿಸುವ ಸಸ್ಯೋತ್ಪಾದಕರು ತುಂಬಾ ಕಡಿಮೆ. ಒಂದು ವೇಳೆ ಹೀಗೆ ಮಾಡುವವರು ಇದ್ದರೆ ಅವರಿಂದ ಗಿಡ ಖರೀದಿ ಮಾಡಬಹುದು. ಇದರ ನಿಖರತೆ ಇಲ್ಲದವರ ಕೈಯಿಂದ ಸಸಿ ಖರೀದಿ  ಮಾಡಿದರೆ ಅನುತ್ಪಾದಕ ಮರಗಳ ಸಂಖ್ಯೆ ಹೆಚ್ಚಾಗುತ್ತದೆ.

One thought on “ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ಸೂಕ್ತ ವಿಧಾನ.

Leave a Reply

Your email address will not be published. Required fields are marked *

error: Content is protected !!