ಸಾವಯವ ಇಂಗಾಲ- ಇದು ಇದ್ದರೆ ಮಣ್ಣಿಗೆ ಬೇರೆ ಹೆಚ್ಚೇನೂ ಬೇಡ.

ಮಣ್ಣು ವಿಜ್ಞಾನಿಗಳು ಮಣ್ಣು ನೋಡಿ ಮೊದಲು ಹೇಳುವುದು ಈ ಮಣ್ಣಿನಲ್ಲಿ ಸಾವಯವ ಇಂಗಾಲ ಎಷ್ಟು ಇದೆ ಎಂಬುದನ್ನು. ಇದನ್ನು ಅನುಸರಿಸಿ ನಂತರದ ಸಲಹೆಗಳು.

ಮಣ್ಣು ಯಾವ ಪೋಷಕಾಂಶ  ಹಾಕಿದರೂ ಅದು ಸಸ್ಯ ಸ್ವೀಕರಿಸಬೇಕಾದರೆ ಆದರಲ್ಲಿ ಇಂಗಾಲದ ಅಂಶ ಹೆಚ್ಚಿನ ಪ್ರಮಾಣದಲ್ಲಿ  ಇರಬೇಕು. ಈಗ ನಮ್ಮ ಸುತ್ತಮುತ್ತ ಮಾರಾಟವಾಗುತ್ತಿರುವ ವಿವಿಧ ಹೆಸರಿನ ಜೈವಿಕ ಗೊಬ್ಬರಗಳೂ ಕೆಲಸ ಮಾಡಿ ನಮಗೆ ತೃಪ್ತಿಕರ ಫಲಿತಾಂಶ ಕೊಡಬೇಕಿದ್ದರೆ ಮಣ್ಣಿನಲ್ಲಿ  ಕಾರ್ಬನ್ ( ಇಂಗಾಲ) ಅಂಶ ಹೇರಳವಾಗಿ ಇರಬೇಕು. ಹೀಗಿರುವಾಗ ನಾವು ಗೊಬ್ಬರ ಹಾಕುವುದಕ್ಕಿಂತ ಮುಂಚೆ ಮಾಡಬೇಕಾದ ಪ್ರಥಮ ಕೆಲಸ ಮಣ್ಣಿನಲ್ಲಿ ಇಂಗಾಲದ ಅಂಶ ಹೆಚ್ಚಿಸುವುದೇ ಆಗಿರುತ್ತದೆ.

ಸಾವಯವ ಇಂಗಾಲ ಎಂದರೆ ಅದೇನೂ ಪ್ಯಾಕ್ಟರಿಯಲ್ಲಿ ಉತ್ಪಾದನೆಯಾಗುವ ರಸ ಗೊಬ್ಬರ, ಇಂದಿನಿಂದ ನಾಳೆಗೆ ಆಗುವ ವಸ್ತುವೂ ಅಲ್ಲ. ಅದು ಕೋಟಿ ಹಣ ಸುರಿದರೂ ಬರುವುದಿಲ್ಲ. ನಮ್ಮ ಸುತ್ತಮುತ್ತ ಇರುವ ಸಾವಯವ ತ್ಯಾಜ್ಯಗಳು ಮಣ್ಣಿನಲ್ಲಿ ವಿಲೀನವಾಗಿ ಆಗುವುದು ಸಾವಯವ ಇಂಗಾಲ. ಸಾವಯವ ವಸ್ತುಗಳಲ್ಲೆಲ್ಲಾ ಇರುವುದು ಇಂಗಾಲ. ಸಾವಯವ ಇಂಗಾಲ ಹೆಚ್ಚಿದಷ್ಟೂ ಮಣ್ಣು ಫಲವತ್ತಾಗುತ್ತದೆ. ಹಾಗಾಗಿಯೇ ಕೆಲವರಿಗೆ ಜೈವಿಕ ಗೊಬ್ಬರಗಳು ಉತ್ತಮ ಫಲಿತಾಂಶ ಕೊಡುತ್ತವೆ. ಎಲ್ಲಿ ಇಂಗಾಲದ ಅಂಶ ಕಡಿಮೆ ಇದೆಯೋ ಅಲ್ಲಿ  ನಿರಾಶಾದಾಯಕವಾಗಿರುತ್ತದೆ.

ಸಾವಯವ ಇಂಗಾಲ ಸಮೃದ್ಧ ಮಣ್ಣು
ಸಾವಯವ ಸಂಮೃದ್ಧ ಮಣ್ಣು
  • ಮಣ್ಣಿನಲ್ಲಿ ಸಾವಯವ ಇಂಗಾಲ ಎಂದರೆ ಅದು ಮಣ್ಣು ಫಲವತ್ತೆಯ ದ್ಯೋತಕ.
  • ಮಣ್ಣಿನ ಜೈವಿಕ, ಭೌತಿಕ, ರಾಸಾಯನಿಕ ಸ್ಥಿತಿ ಸುಸ್ಥಿತಿಯಲ್ಲಿರುವುದು ಸಾವಯವ ಇಂಗಾಲ ಸಮರ್ಪಕವಾಗಿ ಇದ್ದಾಗ ಮಾತ್ರ.
  • ಮಣ್ಣಿನ ಫಲವತ್ತತೆ ಚೆನ್ನಾಗಿದ್ದರೆ ಮಾತ್ರ ಬೆಳೆ ಉತ್ಪಾದನೆ ಚೆನ್ನಾಗಿರುತ್ತದೆ.
  • ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾರ್ಯಕ್ಕೆ ಹೇಳುವುದೇ ಸಾವಯವ ಇಂಗಾಲದ ಹೆಚ್ಚಳ.

ಸಾವಯವ ಇಂಗಾಲದ ಉತ್ಪಾದನೆ ಹೇಗೆ?

Organic rich soil is like this
ಸಾವಯವ ಸಂಮೃದ್ಧ ಮಣ್ಣು ಹೀಗೆ ಉಂಡೆ ಕಟ್ಟಲು ಬರುತ್ತದೆ
  • ಮಣ್ಣಿಗೆ ಮರ ಗಿಡಗಳಿಂದ ಉದುರಿದ ಎಲೆಗಳು, ನೆಲದಲ್ಲಿ ಬೀಜ ಬಿದ್ದು ಹುಟ್ಟಿ ಒಣಗಿದ ಸಸ್ಯಗಳು, ಮರ, ಗಿಡ, ಹುಲ್ಲು ಸಸ್ಯಗಳ ಸತ್ತ ಬೇರುಗಳು,
  • ಹಾಗೂ ಮಣ್ಣಿನಲ್ಲಿರುವ ಪ್ರಾಣಿಗಳು ಸೂಕ್ಷ್ಮ ಜೀವಿಗಳಿಂದ ಜೀರ್ಣಕ್ಕೊಳಪಟ್ಟು (Decompose) ಅವು ಸ್ಥಿತಿ ಪಲ್ಲಟಗೊಳ್ಳುತ್ತವೆ.
  • ಆಗ ಅದರಲ್ಲಿ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ.
  • ಈ ಇಂಗಾಲದ ಡೈ ಆಕ್ಸೈಡ್ ಮಣ್ಣಿನಲ್ಲಿರುವ ಪ್ರಾಣಿ ಹಾಗೂ ಸಸ್ಯಗಳಿಗೆಲ್ಲಾ ಅಧಿಕ ಪ್ರಮಾಣದಲ್ಲಿ ಜೀವ ಚೈತನ್ಯವನ್ನು ಕೊಡುವಂತದ್ದು.
  • ಮಣ್ಣಿನಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿದ್ದಷ್ಟು ಸಸ್ಯ ಬೆಳವಣಿಗೆ ಚೆನ್ನಾಗಿರುತ್ತದೆ.
  • ಮಣ್ಣಿನ ಒಳಗೆ ಮತ್ತು ಮಣ್ಣಿನ ಮೇಲೆ ಈ ಮೂಲವಸ್ತುವು ತಾಳುವ ಅನೇಕ ಪರಿವರ್ತನೆಯನ್ನು ಒಟ್ಟಾರೆಯಾಗಿ ಇಂಗಾಲದ ವೃತ್ತ ಎಂದು ಕರೆಯುತ್ತಾರೆ.
contributers to soil organic carbon content
ಇವೆಲ್ಲಾ ಸೇರಿದಾಗ ಮಣ್ಣಿಗೆ ಸಾವಯವ ಇಂಗಾಲ ಕೂಡುತ್ತದೆ.
  • ಸರಳವಾಗಿ ಹೇಳಬೇಕಾದರೆ ಸಸ್ಯಗಳು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತವೆ.
  • ಭೂಮಿಯ ಮೇಲಿರುವ ಪ್ರಾಣಿಗಳು ಉಸಿರಾಟದ ಮೂಲಕ ಇಂಗಾಲದ ಡೈ ಆಕ್ಸೈಡ್  ಬಿಡುತ್ತವೆ.
  • ಮಣ್ಣಿನಲ್ಲಿ ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು (microorganisams)  ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ.
  • ನಾವು ಹಾಕುವ ಸಾವಯವ  ತ್ಯಾಜ್ಯಗಳು,ಸಸ್ಯ ಶೇಷಗಳು ಜೀರ್ಣವಾದಂತೆ ಇಂಗಾಲ ಬಿಡುಗಡೆಯಾಗುತ್ತದೆ.
  • ಸಸ್ಯಗಳ ಬೇರುಗಳೂ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ.
  •  ಇವೆಲ್ಲವೂ ಮಳೆ ನೀರಿನ ಮೂಲಕ ತಳಕ್ಕೆ ಇಳಿಯುತ್ತದೆ.ಆವಿಯೂ ಆಗುತ್ತದೆ.
  • ಇದನ್ನೇ ಸಸ್ಯಗಳು  ಬೇರುಗಳ ಮೂಲಕ ಉಪಯೋಗಿಸಿಕೊಳ್ಳುತ್ತವೆ.
  • ಸಸ್ಯ ಬೆಳವಣಿಗೆಗೆ ಅನುಕೂಲವಾಗುವ ಪರಿಸ್ಥಿತಿಗೆ ಇಂಗಾಲದ ವೃತ್ತ. ಎನ್ನುತ್ತಾರೆ.

ಮಣ್ಣಿಗೆ ಇಂಗಾಲ ಏಕೆ ಅಗತ್ಯ:

ಜೀವಾಮೃತ ತಯಾರಿಸುವಾಗ ಕಾಡಿನ ಮಣ್ಣು ಸ್ವಲ್ಪ ಹಾಕಬೇಕು ಎನ್ನುತ್ತಾರೆ. ಅದಕ್ಕೆ ಕಾರಣ, ಕಾಡಿನ ಮಣ್ಣಿನಲ್ಲಿ ಸ್ವಾಭಾವಿಕವಾಗಿ ಎಲ್ಲಾ ಜೀವಾಣುಗಳೂ ಇರುತ್ತವೆ. ಇಂದು ನಾವು  ಕಾಣುತ್ತಿರುವ ಎಲ್ಲಾ ಜೀವಾಣುಗಳ ಮೂಲ ಮಾನವ ಹಸ್ತಕ್ಷೇಪ ಇಲ್ಲದ ನೈಸರ್ಗಿಕ ಕಾಡು ಮಣ್ಣೇ ಆಗಿರುತ್ತದೆ.

This type of forest soil is naturally rich in organic carbon
ದಟ್ಟ ಕಾಡಿನ ಮಣ್ಣಿನಲ್ಲಿ ಸಾವಯವ ಅಂಶ ಹೇರಳವಾಗಿರುತ್ತದೆ.
  • ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಹೆಚ್ಚು ಇದ್ದಷ್ಟು  ಪೋಷಕಾಂಶಗಳು ಸಂಗ್ರಹವಾಗಿ (Store and release)ಅದು ಸಸ್ಯಗಳಿಗೆ ಲಭ್ಯವಾಗುತ್ತದೆ.ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ.
  • ಮಣ್ಣಿನಲ್ಲಿ ಸಾವಯವ ವಸ್ತುಗಳು ಕಳಿತು ಅದು ಮಣ್ಣಿಗೆ ಸೇರ್ಪಡೆಗೊಂಡಾಗ ಮಣ್ಣಿನ ಕಣ ರಚನೆ ಉತ್ತಮವಾಗಿ, ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಮತ್ತು ಬೇರುಗಳಿಗೆ ಬೇಕಾಗುವ ಗಾಳಿ ದೊರೆಯುತ್ತದೆ.
  • ಬೆಳೆಗಳಲ್ಲಿ ಅಧಿಕ ಉತ್ಪಾದನೆ ಬೇಕೆಂದಾದರೆ ಇದು ಅಗತ್ಯವಾಗಿ ಇರಬೇಕು.
  • ಸಸ್ಯ ಬೆಳವಣಿಗೆ  ಚೆನ್ನಾಗಿದ್ದಾಗ ಅವು ಉತ್ತಮವಾಗಿ ವಾತಾವರಣದ ಇಂಗಾಲವನ್ನು ಹೀರಿಕೊಳ್ಳುತ್ತವೆ.
  • ಸಾವಯವ ಇಂಗಾಲ ಮಣ್ಣಿನಲ್ಲಿ ಹೆಚ್ಚಾದರೆ  ಬೆಳೆಗಳಿಗೆ ನೀರು ಕಡಿಮೆ ಸಾಕು.
  • ಗೊಬ್ಬರ ಕಡಿಮೆ ಸಾಕು. ರೈತರ ಬೇಸಾಯ ಖರ್ಚು ಕಡಿಮೆಯಾಗುತ್ತದೆ.

 ಸಾವಯವ ಇಂಗಾಲ ಎಲ್ಲಿ ಹೆಚ್ಚು ಇರುತ್ತದೆ:

  • ಹುಲ್ಲು ಇತ್ಯಾದಿ ಬೆಳೆಯುವ ಜಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಂಗಾಲದ ಅಂಶ ಇರುತ್ತದೆ.
  • ಬೆಳೆಗಳಿಲ್ಲದ ಬಂಜರು ಭೂಮಿಯಲ್ಲಿ ಇಂಗಾಲದ ಅಂಶ ತುಂಬಾ ಕಡಿಮೆ ಇರುತ್ತದೆ.
  • ಇಂಗಾಲದ ಅಂಶ ಚೆನ್ನಾಗಿರುವ ಮಣ್ಣಿನಲ್ಲಿ ನೀರು ಶುದ್ದವಾಗಿರುತ್ತದೆ.
  • ಬೆಳೆ ಫಸಲು ಪೋಷಕಾಂಶಗಳಿಂದ ಕೂಡಿರುತ್ತವೆ.
  • ನೆಲದ ಮೇಲೆ ಜೀವ ಕೋಟಿಗಳ ಬದುಕಿಗೂ ಇದು ಅಗತ್ಯವಾಗಿರುತ್ತದೆ.
  • ಪಾಳು ಬಿದ್ದ ಭೂಮಿಯಲ್ಲಿ ಹಸುರು ಹೊದಿಕೆ ಹೊದಿಸುವುದರಿಂದ ಇಂಗಾಲದ ಅಂಶವನ್ನು  ಹೆಚ್ಚಿಸಬಹುದು.
  • ಆಯಾಯ ಭೂ ಪ್ರಕೃತಿಗನುಗುಣವಾಗಿ ಬೆಳೆ ಕ್ರಮವನ್ನು ಅನುಸರಿಸುವ ಮೂಲಕ ಸಾವಯವ ಇಂಗಾಲವನ್ನು ಹೆಚ್ಚಿಸಬಹುದು.
  • ಮಣ್ಣಿನ ಸಾವಯವ ಇಂಗಾಲದ ಹೆಚ್ಚಳದಿಂದ ವಾತಾವರಣದ ಸಮತೋಲನ ಕಾಯ್ದುಕೊಳ್ಳಬಹುದು.

ಸಾವಯವ ಇಂಗಾಲ ಕಡಿಮೆಯಾಗಲು ಕಾರಣ:

  • ಸಾವಯವ ಇಂಗಾಲ ಹೆಚ್ಚಿಸಲು ವರ್ಷ ವರ್ಷವೂ ನಾವು ಬುಟ್ಟಿ ಬುಟ್ಟಿ ಸಾವಯವ ತ್ಯಾಜ್ಯಗಳನ್ನು ಸುರಿದರೆ ಫಲವಿಲ್ಲ.
  • ವಿಶೇಷವಾಗಿ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಇದೆಲ್ಲವೂ ಮಳೆ ನೀರಿಗೆ ಕೊಚ್ಚಣೆಯಾಗಿ ನಷ್ಟವಾಗುತ್ತದೆ.
  • ಹಾಕಿದ ಯಾವ ಸಾವಯವ ತ್ಯಾಜ್ಯವೂ ನಷ್ಟ ಆಗದಂತೆ ಬೇಸಾಯ ಕ್ರಮ ಅನುಸರಿಸಿದರೆ ಮಾತ್ರ ಇದು ವರ್ಷದಿಂದ ವರ್ಷಕ್ಕೆ ವೃದ್ದಿಯಾಗುತ್ತಾ ಇರುತ್ತದೆ.
  • ಮಣ್ಣು ಕೊಚ್ಚಣೆ ತಡೆದರೆ 25% ಗೊಬ್ಬರ ಉಳಿತಾಯ ಮಾಡಬಹುದು. ಇಳುವರಿಯನ್ನೂ ಹೆಚ್ಚು ಪಡೆಯಬಹುದು.
  • ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ಕಪ್ಪು ಹತ್ತಿ ಮಣ್ಣು ಇರುತ್ತದೆ.
  • ಇಂತಹ ಮಣ್ಣು ರಚನೆ ಆಗಿರುವುದು ಯತೇಚ್ಚ ಸಾವಯವ ವಸ್ತುಗಳ ಸೇರ್ಪಡೆಯಿಂದಾಗಿ.ಈ ಭಾಗಗಳಲ್ಲಿ ಮಳೆ ಕಡಿಮೆ ಇರುತ್ತದೆ.
  • ಹಾಗಾಗಿ ಅದು ವರ್ಷ ವರ್ಷವೂ ನವೀಕರಣ ಆಗುತ್ತಿರುತ್ತದೆ. 
  • ಸಾಮಾನ್ಯವಾಗಿ ವಾರ್ಷಿಕ ಬೆಳೆಗಳಾದ ಹತ್ತಿ, ಜೋಳ, ಭತ್ತ ಬೆಳೆಯುವ ಕಡೆ ಬೆಳೆಯ ಬೇರಿನ ಭಾಗವನ್ನು ( ಸುಮಾರು ¼  ಭಾಗ)ಮಣ್ಣಿನಲ್ಲಿ ಹಾಗೆ ಬಿಟ್ಟು ಬಿಡುವ ಕಾರಣ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಏರಿಕೆಯಾಗುತ್ತಾ ಇರುತ್ತದೆ.
  • ಬಹುವಾರ್ಷಿಕ ಬೆಳೆಗಳಲ್ಲಿ ಈ ಅವಕಾಶ ಕಡಿಮೆ ಇರುತ್ತದೆ.

ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು ಹಂಪಲು ತರಕಾರಿ ಮುಂತಾದ ಬೆಳೆಗಳು ರುಚಿ ಇರುತ್ತದೆ ಎಂಬುದಕ್ಕೆ ಇದು ಒಂದು ಕಾರಣ.ನಮ್ಮಲ್ಲಿ ಇಂದು ಕೃಷಿ ಉತ್ಪಾದನೆಗೆ ಖರ್ಚು ಹೆಚ್ಚಾಗಿ ಉತ್ಪತ್ತಿ ಸಾಲದಾಗಿರುವುದಕ್ಕೆ ಒಂದು ಕಾರಣ ಮಣ್ಣಿನ ಫಲವತ್ತತೆ ಕ್ಷೀಣತೆ. ಇದನ್ನು ಎಲ್ಲಾ ರೈತರೂ ಯಾರ ಒತ್ತಾಯವೂ ಇಲ್ಲದೆ, ಅವರವರ ಒಳ್ಳೆಯದಕ್ಕಾಗಿ ಎಂದು ಮಾಡಲೇ ಬೇಕು. ಸಾಕಷ್ಟು ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಮಣ್ಣಿನ ಜೀವ ಚೈತನ್ಯವನ್ನು ಉಳಿಸಬೇಕಿದೆ.

error: Content is protected !!