ಮಣ್ಣಿನ ಸಮಸ್ಥಿತಿಯನ್ನು ವೈಜ್ಞಾನಿಕ ಭಾಷೆಯಲ್ಲಿ pH (Potentila hydrogen) ಎಂಬುದಾಗಿ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ರಸ ಸಾರ ಎಂಬುದಾಗಿ ಕರೆಯುತ್ತಾರೆ. ಹುಳಿ ಹೆಚ್ಚಾದರೆ ಅದು ಆಮ್ಲ, ಸುಡುವಿಕೆ ಆದರೆ ಅದು ಕ್ಷಾರ. ಇವೆರಡೂ ಆಗದಿದ್ದರೆ ಅದು ಸಮಸ್ಥಿತಿ. ಇದನ್ನು ಸಹನಾ ಸ್ಥಿತಿ ಎಂಬುದಾಗಿ ಹೇಳಬಹುದು.ಇದು ಮಣ್ಣಿಗೆ ಮಾತ್ರವಲ್ಲ. ಪ್ರತೀಯೊಂದು ಜೀವಿಗೂ ಇರುವಂತದ್ದು. ಮನುಷ್ಯನ ಶರೀರದಲ್ಲಿ ಜೊಲ್ಲು, ರಕ್ತ ಇವುಗಳಲ್ಲೂ ಆಮ್ಲ, ಕ್ಷಾರ, ಮತ್ತು ತಟಸ್ಥ ಎಂಬುದಿದೆ.
ಮಣ್ಣು ಎಂಬುದು ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ ನಾವು ಕೊಡುವ ಎಲ್ಲಾ ಪೋಷಕಗಳೂ ಸಮರ್ಪಕವಾಗಿ ಬಳಕೆಯಾಗಿ ಬೆಳೆಯಲ್ಲಿ ಫಸಲು ಉತ್ತಮವಾಗುತ್ತದೆ. ಸಮಸ್ಥಿತಿಯ ಮಣ್ಣಿನಲ್ಲಿ ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ. ಇಲ್ಲಿ ಕೊಡಮಾಡಲ್ಪಡುವ ಎಲ್ಲಾ ಬೆಳೆ ಪೋಷಕಗಳೂ ಸಮರ್ಪಕವಾಗಿ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಇರುವ ಪೋಷಕಗಳೂ ಸಸ್ಯ ಬೆಳವಣಿಗೆಗೆ ಸಹಕಾರ ಕೊಡುತ್ತವೆ. ಮಣ್ಣಿನ ತಟಸ್ಥ ಸ್ಥಿತಿಯ ಮೇಲೆ ಅದರ ಆರೋಗ್ಯ ನಿರ್ಧರಿತವಾಗುತ್ತದೆ. ಸಸ್ಯಗಳಿಗೆ ರೋಗ ಕೀಟ ಬಾಧೆಯೂ ಕಡಿಮೆಯಾಗುತ್ತದೆ.
- ಬಹುತೇಕ ನಾವೆಲ್ಲಾ ತಾಂಬೂಲ ತಿಂದು ಬಲ್ಲವರು.
- ತಾಂಬೂಲ ಜಗಿಯುವಾಗ ವೀಳ್ಯದೆಲೆ, ಸುಣ್ಣ ಮತ್ತು ಅಡಿಕೆ ಮೂಲವಸ್ತುಗಳು.
- ಈ ಮೂರರ ಪ್ರಮಾಣ ಎಷ್ಟು ಬೇಕೋ ಅಷ್ಟೇ ಇದ್ದರೆ ಅದು ತಿನ್ನಲು ರುಚಿಯಾಗಿರುತ್ತದೆ.
- ಬಾಯಿ ಕೆಂಪಗಾಗುತ್ತದೆ. ಒಂದು ವೇಳೆ ಸುಣ್ಣ ಹೆಚ್ಚಾದರೆ ಬಾಯಿ ಸುಡುತ್ತದೆ.
- ಸುಣ್ಣ ಕಡಿಮೆಯಾದರೆ ನಾಲಗೆಗೆ ಹುಳಿ ಹುಳಿಯಾಗುತ್ತದೆ.
- ಸುಡುವ ಸ್ಥಿತಿಗೆ ಕ್ಷಾರ ಎಂತಲೂ, ಹುಳಿಯಾಗುವ ಸ್ಥಿತಿಗೆ ಆಮ್ಲೀಯ ಎಂತಲೂ , ಕೆಂಪಾಗಿ ರುಚಿಕಟ್ಟಾಗಿರುವ ಸ್ಥಿತಿಗೆ ಸಮಸ್ಥಿತಿ ಎಂತಲೂ ಹೇಳಬಹುದು.
- ಮಣ್ಣು ತನ್ನ ಗುಣವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡಿದ್ದರೆ ಅದು ಎಲ್ಲಾ ಪೊಷಕಗಳನ್ನೂ ಬಳಸಿಕೊಳ್ಳುತ್ತದೆ.
- ಒಂದು ವೇಳೆ ಆಮ್ಲೀಯ ಅಥವಾ ಕ್ಷಾರೀಯ ಆದಾಗ ಅದು ಬೇರೆ ಬೇರೆ ತೊಂದರೆಗೆ ಒಳಗಾಗುತ್ತದೆ.
pH ಮೌಲ್ಯ ತಿಳಿಯುವುದು ಹೇಗೆ:
- ಇದನ್ನು ತಿಳಿಯಲು ಪ್ರಯೋಗಾಲಯದಲ್ಲಿ ಇರುವ ವಿಧಾನವೇ ಬೇರೆ.
- ಸರಳವಾಗಿ ರೈತರು ತಿಳಿಯಬಹುದಾದ ವಿಧಾನವೇ ಬೇರೆ ಇರುತ್ತದೆ.
- ಮಣ್ಣಿನಲ್ಲಿ ಸಾಕಷ್ಟು ಸಾವಯವ ಅಂಶಗಳು ಇದ್ದು, ಅದು ನೀರು ಬೇಕಾದಷ್ಟೇ ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದ್ದರೆ ಅದು ಒಂದು ಸಮಸ್ಥಿತಿಯ ಲಕ್ಷಣ.
- ಮಣ್ಣಿನಲ್ಲಿ ಕಣ್ಣಿಗೆ ಕಾಣುವ ಜೀವಿಗಳಾದ ಎರೆಹುಳು, ಸಹಸ್ರಪದಿ, ಗಂಗೆ ಹುಳು ಇತ್ಯಾದಿಗಳು ಹೇರಳವಾಗಿದ್ದರೆ ಅದು ಸಹ ಒಂದು ಸಮಸ್ಥಿತಿಯ ಲಕ್ಷಣ.
- ಸಾವಯವ ಅಂಶಗಳು ತೀರಾ ಕಡಿಮೆ ಇರುವ ಮರಳು ಅಂಶ ಹೆಚ್ಚಾಗಿರುವ ಮಣ್ಣು ಹೆಚ್ಚಾಗಿ ಆಮ್ಲೀಯವೇ ಆಗಿರುತ್ತದೆ.
- ಮಳೆ ಹೆಚ್ಚು ಬರುವಲ್ಲಿ ಸಾವಯವ ವಸ್ತುಗಳು ತೊಳೆದು ಹೋಗುವ ಸ್ಥಿತಿ ಇರುವಂತಹ ಮಣ್ಣು ಸಹ ಆಮ್ಲೀಯ.
- ತುಂಬಾ ಅಂಟು ಮಣ್ಣು, ಮಳೆ ನೀರು ಬಿದ್ದರೆ ಅದು ವಾರಗಳ ತನಕವೂ ಇಳಿದು ಹೋಗದೆ ಇರುವಂತಹ ಸ್ಥಿತಿ ಕ್ಷಾರೀಯ.
- ಮಳೆ ಕಡಿಮೆ ಇರುವ ಪ್ರದೇಶದ ಹೆಚ್ಚಿನ ಮಣ್ಣು ಕ್ಷಾರೀಯವಾಗಿರುತ್ತದೆ.
- ನಮ್ಮ ರಾಜ್ಯದಲ್ಲಿ ಕರಾವಳಿಯ ಹೆಚ್ಚಿನೆಲ್ಲಾ ಮಣ್ಣು ಆಮ್ಲೀಯ.
- ಹಾಗೆಯೇ ಮಲೆನಾಡಿನ ಕೆಲವು ಭಾಗಗಳ ಮಣ್ಣು ಆಮ್ಲೀಯ.
- ಅರೆ ಮಲೆನಾಡಿನಲ್ಲಿ ಹೆಚ್ಚಿನ ಕಡೆ ತಟಸ್ಥ ಮಣ್ಣು ಇರುತ್ತದೆ.
- ಮಣ್ಣು ವಿಜ್ಞಾನಿಗಳು ಕಂಡುಕೊಂಡಂತೆ ಶಿವಮೊಗ್ಗ ಜಿಲ್ಲೆಯಯ ಕೆಲವು ಮಣ್ಣು ತಟಸ್ಥ ಸ್ಥಿತಿಯವುಗಳಾಗಿವೆ.
- ಬಯಲು ಸೀಮೆಯ ಮಣ್ಣು ಸ್ವಲ್ಪ ಮಟ್ಟಿಗೆ ಕ್ಷಾರೀಯವಾಗಿರುತ್ತದೆ.
ನಿಖರವಾಗಿ ಮಣ್ಣಿನ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಈಗ ಎಲೆಕ್ಟ್ರೋನಿಕ್ ಮಾಪಕಗಳು ಬಂದಿವೆ. ಮಣ್ಣಿನ ದ್ರಾವಣವನ್ನು ಮಾಡಿಕೊಂಡು ಅದರಲ್ಲಿ ಅದ್ದಿ, ಅದರ ಸ್ಥಿತಿಯನ್ನು ಪತ್ತೆ ಮಾಡಲಾಗುತ್ತದೆ. ಇದು ಕರಾರುವಕ್ಕಾದ ಕ್ರಮವಾಗಿರುತ್ತದೆ.
pH ವ್ಯತ್ಯಯವಾದಾಗ ಏನಾಗುತ್ತದೆ?
- ಸಾಮಾನ್ಯವಾಗಿ ಮಣ್ಣಿನ pH 4 ರಿಂದ 10 ತನಕ ಇರುತ್ತದೆ.
- ಇದರ ಒಟ್ಟಾರೆ ಮೌಲ್ಯ 1 ರಿಂದ 14 ತನಕ. ಇದು 7 ರಲ್ಲಿ ಇದ್ದರೆ ಅದು ಸಹನಾ ಸ್ಥಿತಿ ಅಥವಾ ತಟಸ್ಥ ಸ್ಥಿತಿಯೂ , 7 ರ ಆಸು ಪಾಸಿನಲ್ಲಿದ್ದರೆ ಸ್ವಲ್ಪ ಮಟ್ಟಿಗೆ ಧಕ್ಕೆ ಸಹನೆ ತಡೆಯುವ ಶಕ್ತಿಯನ್ನು ಹೊಂದಿರುತ್ತದೆ.
- ಅದರೆ 6 ರಿಂದ ಕೆಳಕ್ಕೆ ಬಂದರೆ 8 ರಿಂದ ಮೇಲೆ ಹೋದರೂ ಸಹನಾ ಶಕ್ತಿಗೆ ತೊಂದರೆಯಾಗುತ್ತದೆ.
- 6 ರಿಂದ ಕೆಳಗೆ ಬಂದರೆ ಅದು ಆಮ್ಲೀಯ ಎಂದು ಪರಿಗಣಿಸಲ್ಪಡುತ್ತದೆ.
- ಸರಳವಾಗಿ ಹೇಳಬೇಕೆಂದರೆ ಅಜೀರ್ಣವಾಗುವ ಸ್ಥಿತಿ.
- 8 ರಿಂದ ಮೇಲೆ ಹೋದರೆ ಅದು ಮೇಲೆ ಹೇಳಿದಂತೆ ಸುಡು ಗುಣ ಅಥವಾ ಕ್ಷಾರೀಯ.
- ಇಲ್ಲಿ ಸಸ್ಯಗಳಿಗೆ ಬೇರು ಬರಲು ತೊಂದರೆ ಉಂಟಾಗುತ್ತದೆ.
- ಸಸ್ಯ ಬೆಳವಣಿಗೆಗೆ ಅಲ್ಲಿರುವ ಕ್ಷಾರೀಯ ವಸ್ತುಗಳಾದ ಸುಣ್ಣದ ಅಂಶ ತೊಂದರೆ ಮಾಡುತ್ತದೆ.
- ಮಣ್ಣಿಗೆ ಕೆಲವು ತೀಕ್ಷ್ಣ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಅದರ ಸ್ಥಿತಿ ವ್ಯತ್ಯಯವಾಗುತ್ತದೆ.
- ಮಣ್ಣನ್ನು ಕರಾರುವಕ್ಕಾಗು ತಟಸ್ಥೀಕರಣ ಮಾಡುವುದು ತುಂಬಾ ಕಷ್ಟ.
- ಅದು ತಟಸ್ಥೀಕರಣದ ಆಸುಪಾಸಿನಲ್ಲಿರುವಂತೆ ನೋಡಿಕೊಳ್ಳಬಹುದು. ಅದಕ್ಕೆ ಮಣ್ಣು ನಿರ್ವಹಣೆ ಎನ್ನುತ್ತಾರೆ.
ಪೋಷಕಗಳ ಲಭ್ಯತೆ ಮತ್ತು ರಸಸಾರ:
- ಕೆಲವು ಪೊಷಕಗಳು ಮಣ್ಣು ಹುಳಿಯಾದಾಗ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಗಳಿಗೆ ಲಭ್ಯವಾಗುತ್ತದೆ.
- ಇನ್ನು ಕೆಲವು ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತದೆ.
- ಇದರಲ್ಲಿ ಕೆಲವು ಅವಶ್ಯವಲ್ಲದ ಪೋಷಕಗಳು ಇರುತ್ತವೆ.
- ಕಬ್ಬಿಣ Fe,ಮ್ಯಾಂಗನೀಸ್ Mn, ಬೋರಾನ್, ತಾಮ್ರ,Cu,ಕ್ಲೋರಿನ್ Cl ಸತು Zn,ಮಣ್ಣು ಹುಳಿಯಾದಾಗ ಹೆಚ್ಚಿನ ಪ್ರಮಾಣದಲ್ಲಿ ಕರಗಿದ ರೂಪದಲ್ಲಿರುತ್ತದೆ.
- ಇವು ಸಮಸ್ಥಿತಿ ಮತ್ತು ಅಲ್ಪಸ್ವಲ್ಪ ಹಿಂದೆ ಮುಂದೆ ಆದಾಗಲೂ ಹಿತಮಿತವಾಗಿ ಕರಗಿರುತ್ತದೆ.
- ಇವು ಹೆಚ್ಚು ಕರಗಬೇಕಾಗಿಲ್ಲ. ಅವು ಅತೀ ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಪೋಷಕಗಳು.
- ಸಾಮಾನ್ಯವಾಗಿ ಬೋರಾನ್ ಆಮ್ಲ ಮಣ್ಣಿನಲ್ಲಿ ಹೇರಳವಾಗಿ ದೊರೆಯುತ್ತದೆ.
- ಮಾಲಿಬ್ಡಿನಂ ಆಮ್ಲೀಯ ಸ್ಥಿತಿಯಲ್ಲಿ ಹಾಗೇಯೇ , ಹುಳಿ ಕಡಿಮೆಯಾದಾಗಲೂ ಲಭ್ಯವಾಗುತ್ತದೆ.
- ಸಸ್ಯ ಪೋಷಕಗಳು ಧಾರಾಳವಾಗಿ ಒದಗಲು ರಸಸಾರ 6.5-7.5 ರ ಒಳಗೆ ಇದ್ದರೆ ಉತ್ತಮ.
- ಸಾರಜನಕ N ಗೊಬ್ಬರವು ರಸಸಾರ 6.5 -7.5 ರ ಒಳಗೆ ಇದ್ದಾಗ ಉತ್ತಮವಾಗಿ ಸಸ್ಯಗಳಿಗೆ ಲಭ್ಯವಾಗುತ್ತದೆ.
- ರಂಜಕ P 6.5-8 ರಸಸಾರ ಇರುವ ತನಕ ಉತ್ತಮವಾಗಿ ಲಭ್ಯವಾಗುತ್ತದೆ.
- ಪೊಟ್ಯಾಶಿಯಂ K ಮತ್ತು ಗಂಧಕ Su 6.5 -7.5 ತನಕ ಚೆನ್ನಾಗಿ ಲಭ್ಯವಾಗುತ್ತದೆ.
- ಮೆಗ್ನೀಶಿಯಂ Mg ಮತ್ತು ಕ್ಯಾಲ್ಸಿಯಂ 6.5-8.5 pH ಇದ್ದಾಗ ಉತ್ತಮವಾಗಿ ಲಭ್ಯವಾಗುತ್ತದೆ.
- ಬೆಳೆ ಪೋಷಕಗಳಾದ ಯೂರಿಯಾದ ರಸ ಸಾರ 6.5 ರಷ್ಟು ಇರುತ್ತದೆ.
- DAP ಗೊಬ್ಬರವು 7.5-8 ರಷ್ಟು ರಸಸಾರವನ್ನು ಹೊಂದಿರುತ್ತದೆ.
- MOP ಮ್ಯುರೆಟ್ ಅಪ್ ಪೊಟ್ಯಾಸ್ ನ ರಸಸಾರ 7 ರಷ್ಟು ಇರುತ್ತದೆ.
- ರಾಕ್ ಫೋಸ್ಫೇಟ್ ನ ರಸ ಸಾರ 5.5 ರಷ್ಟು ಇರುತ್ತದೆ.
- ಸುಪರ್ ಫೋಸ್ಫೇಟ್ (SSP) 7-9 ರಷ್ಟು ರಸ ಸರ ಹೊಂದಿರುತ್ತದೆ.
- ಸುಣ್ಣದ ರಸಸಾರ 9.9 ರಷ್ಟು ಇರುತ್ತದೆ.
- ಮೆಗ್ನೀಶಿಯಂ ಸಲ್ಫೆಟ್ (MgSO4) 5.3-5.7 ರಸ ಸಾರ ಹೊಂದಿರುತ್ತದೆ.
ಆಮ್ಲ ಮಣ್ಣಿನ ನಿರ್ವಹಣೆ:
- ಮಣ್ಣು ಆಮ್ಲೀಯವಾಗಿದ್ದರೆ ಅದು ಅಜೀರ್ಣಾವಸ್ಥೆಯಲ್ಲಿದೆ ಎಂದು ಹೇಳಬಹುದು.
- ಪೋಷಕಗಳ ಸಮರ್ಪಕ ಬಳಕೆ ಆಗದೆ ಬೆಳೆಯು ಸೊರಗುತ್ತದೆ.
- ಆಮ್ಲ ಮಣ್ಣು ರೋಗಾಣುಗಳ ( ಬ್ಯಾಕ್ಟೀರಿಯಾ, ಶಿಲೀಂದ್ರ) ಚಟುವಟಿಕೆಗೆ ಸಹಕಾರಿ.
- ಆದನ್ನು ಸರಿಪಡಿಸಲು ಸುಣ್ಣ (ಕ್ಯಾಲ್ಸಿಯಂ ಕಾರ್ಬೋನೇಟ್ ) ಬಳಸಲು ಶಿಫಾರಸು ಮಾಡಲಾಗುತ್ತದೆ.
- ಮಣ್ಣಿನಲ್ಲಿ ಸಾವಯವ ಇಂಗಾಲದ ಅನುಪಾತ ಕಡಿಮೆ ಆದಾಗ ರಸಸಾರ ತಹಬಂದಿಗೆ ಬರುತ್ತದೆ ಎಂಬುದು ಎಲ್ಲರೂ ತಿಳಿದಿರಬೇಕಾದ ಅಂಶ.
- ಸುಣ್ಣದ ಬಳಕೆ ತಾತ್ಕಾಲಿಕವಾಗಿ ತುಸು ಆಮ್ಲೀಯತೆಯನ್ನು ನಿವಾರಿಸುತ್ತದೆಯೇ ಹೊರತು ಧೀರ್ಘಕಾಲಿಕವಲ್ಲ.
- ರಸಸಾರ 5-6 ಇರವ ಕಡೆ ಎಕ್ರೆಗೆ 1-1.5ಟನ್ ಸುಣ್ಣ ಬಳಕೆ ಮಾಡಿದರೆ ಸ್ವಲ್ಪ ಹುಳಿ ಕಡಿಮೆಯಾಗುತ್ತದೆ.
ಕ್ಷಾರ ಮಣ್ಣಿನ ನಿರ್ವಹಣೆ:
- ಕ್ಷಾರ ಮಣ್ಣನ್ನು ಸುಧಾರಿಸಲು ಮಣ್ಣಿನ ಉಪ್ಪು ಮತ್ತು ಸೋಡಿಯಂ ಅಂಶವನ್ನು ತಗ್ಗಿಸಬೇಕು, ಅದಕ್ಕಾಗಿ ಉಳುಮೆ ಮಾಡಬೇಕು.
- ಜಿಪ್ಸಂ ಅಥವಾ ಗಂಧಕವನ್ನು ಮಣ್ಣಿಗೆ ಸೇರಿಸಿದಾಗ ಮಣ್ಣಿನ ಸೋಡಿಯಂ ಮತ್ತು ಅಂಶ ಕಡಿಮೆಯಾಗುತ್ತದೆ.
- ರಸ ಸಾರ 10 ಇದ್ದರೆ ಎಕ್ರೆಗೆ 17 ಟನ್ ಜಿಪ್ಸಂ ಅನ್ನು 30-40 ಸೆಂ ಮೀ. ಆಳದ ವರೆಗೆ ಹೋಗುವಂತೆ ಮಣ್ಣು ಉಳುಮೆ ಮಾಡುವಾಗ ಸೇರಿಸಬೇಕು. ಗಂಧಕ ಆದರೆ ಎಕ್ರೆಗೆ 3.2 ಟನ್ ಬೇಕಾಗುತ್ತದೆ.
- ಹಿತ ಮಿತ ನೀರಾವರಿ ಮಾಡಿ, ಸಾವಯವ ವಸ್ತು ಸೇರಿಸಿ ಕ್ಷಾರೀಯತೆ ತಗ್ಗಿಸಬಹುದು.
ಮಣ್ಣು ಎಂಬುದು ಬೆಳೆ ಬೆಳೆಯುವ ರೈತನ ಆಸ್ತಿ. ಅದರ ಆರೋಗ್ಯ ವೇ ರೈತನಿಗೆ ಭಾಗ್ಯ. ಮಣ್ಣಿನ ಆರೋಗ್ಯ ಚೆನ್ನಾಗಿರಬೇಕಾದರೆ ಅದು ತಟಸ್ಥ ಸ್ಥಿತಿಯಲ್ಲಿ ಇರಬೇಕು. ಆಗ ಯಾವ ರೋಗವೂ ಇಲ್ಲ. ಫಸಲೂ ಉತ್ತಮವಾಗಿರುತ್ತದೆ.