ಅಡಿಕೆಯ ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ ಬೆಳವಣಿಗೆಯನ್ನು ಹತ್ತಿಕ್ಕುವ ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ ಸಸಿ ಏಳಿಗೆ ಆಗುವುದೇ ಇಲ್ಲ.
ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ತೊಂದರೆ ಮಾಡುತ್ತಿವೆ.
- ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು.
- ಆದರೆ ಇಂತಹ ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ ಆಗುವುದಿಲ್ಲ.
- ಅಧಿಕ ಖರ್ಚು ಮಾಡಿ, ಉತ್ತಮ ಆದಾಯದ ನಿರೀಕ್ಷೆಯಲ್ಲಿರುವಾಗ ಹೀಗಾದರೆ ಬಹಳ ತೆಲೆಬಿಸಿ.
- ಒಂದು ಎರಡು ಮರಗಳಿಗೆ ಪ್ರಾರಂಭವಾಗಿ ಅದು ಹೆಚ್ಚಾಗುತ್ತಾ ಹೋಗುತ್ತದೆ.
- ಈ ತೊಂದರೆ ಮಾಡುವ ಕೀಟಗಳಲ್ಲಿ ಎರಡು ಮೂರು ವಿಧಗಳನ್ನು ಕಾಣಬಹುದು.
- ಎಲ್ಲವೂ ಸುಳಿ ತಿಗಣೆಗಳು. ಇದನ್ನು ಇಂಗ್ಲೀಷಿನಲ್ಲಿ Spindle bug (Carvalhoia arecae)ಎನ್ನುತ್ತಾರೆ.
- ಇವು ಮೂಡುತ್ತಿರುವ ಎಳೆ ಸುಳಿಯ ಭಾಗದಲ್ಲಿ ವಾಸಿಸುತ್ತಾ , ಅಲ್ಲೇ ಸಂತಾನಾಭಿವೃದ್ದಿಯಾಗಿ ಅದರ ರಸ ಹೀರಿ ಸಸ್ಯ ಬೆಳವಣಿಗೆಯನ್ನು ಹತ್ತಿಕ್ಕುತ್ತದೆ.
- ಆ ಭಾಗಕ್ಕೆ ಹಿಟ್ಟು ತಿಗಣೆಯೂ ಬರುತ್ತದೆ.
ಎಲ್ಲಿಂದ ಪ್ರಾರಂಭವಾಯಿತು:
- ಮೊದಲಾಗಿ ಈ ಕೀಟವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಅಡಿಕೆ ತೋಟಗಳಲ್ಲಿ ಕಂಡು ಬಂತು.
- 1956 ರಲ್ಲಿ ಅಡಿಕೆ ಬೆಳೆಯಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಗುರುತಿಸಲಾಯಿತು.
- ಈಗ ಅಡಿಕೆ ಬೆಳೆಯಲಾಗುವ ಕರ್ನಾಟಕದ ಎಲ್ಲಾ ಭಾಗಗಳಲ್ಲೀ ತೀವ್ರ ತರವಾಗಿ ಕಾಣಿಸುತ್ತಿದೆ.
- ಅಡಿಕೆ ಸಸ್ಯವು ಇದರ ಬೆಳವಣಿಗೆಯ ಆಶ್ರಯ ಸಸ್ಯವಾಗಿದ್ದು, ಅದರ ಸುಳಿಯಲ್ಲಿಯೇ ಇದರ ಸಂತಾನಾಭಿವೃದ್ದಿಯಾಗಿ ಒಂದು ತಿಂಗಳಲ್ಲಿ ಹೊಸ ತಲೆಮಾರು ಉಂಟಾಗುತ್ತದೆ.
- ಹಿಂದೆ ಈ ಕೀಟವನ್ನು ಸಾಮಾನ್ಯ ಪ್ರಮಾಣದಲ್ಲಿ ಹಾನಿ ಮಾಡುವ ಕೀಟವೆಂದು ವರ್ಗೀಕರಿಸಲಾಗಿತ್ತಾದರೂ ಈಗ ಇದು ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಮಾಡುವ ಕೀಟವಾಗಿದೆ.
ಚಿನ್ಹೆಯ ಪತ್ತೆ:
- ನಿಮ್ಮ ತೋಟದಲ್ಲಿನ ಎಳೆಸಸಿಯ ಎಲೆಗಳು ಗಿಡ್ಡವಾಗುವುದು, ಮತ್ತು ಬಿಡಿಸಿದ ಎಲೆಗಳಲ್ಲಿ ತೂತು ತೂತುಗಳು ಇರುವುದನ್ನು ಕಂಡಿರಬಹುದು.
- ಅಷ್ಟೇ ಅಲ್ಲದೆ ಬೆಳೆದು ಫಸಲು ನೀಡುವ ಮರಗಳ ಎಲೆಗಳಲ್ಲೂ ಇದೇ ರೀತಿ ತೂತುಗಳು ಇರುವುದನ್ನೂ ಗಮನಿಸಿರಬಹುದು.
- ಕೆಲವು ಫಲ ಬಿಡುತ್ತಿರುವ ಅಡಿಕೆ ಸಸಿಗಳ ಎಲೆಗಳು ಮೂಡುತ್ತಿರುವಾಗ ಹಿಂದಿನ ಎಲೆಗಿಂತ ಸಣ್ಣದಾಗಿ ಮತ್ತು ಗರಿಗಳು ಪರಸ್ಪರ ಅಂಟಿ ಕೊಂಡಂತೆ ಹೊರ ಬರುವುದನ್ನೂ ನಾವೆಲ್ಲಾ ಗಮನಿಸಿದ್ದೇವೆ.
- ಇದನ್ನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ತುಳು ಭಾಷೆಯಲ್ಲಿ ಕುಂಟಿ ಸಿರಿ (ಬೆಳವಣಿಗೆ ಕುಂಠಿತ ಸುಳಿ)ಎನ್ನುತ್ತಾರೆ.
ಸುಳಿಯ ಬೆಳವಣಿಗೆ ಕುಂಠಿತವಾಗಲು ಆ ಭಾಗದಲ್ಲಿ ಕೀಟವು ವಾಸಿಸಿ ರಸ ಹೀರಿ ಹಾನಿ ಮಾಡುವುದು ಆಗಿರುತ್ತದೆ. ಎಲೆಗೆ ಉಂಟಾಗುವ ಘಾಸಿಯಿಂದಾಗಿ ಆ ಸುಳಿ ಭಾಗ ಮತ್ತು ನಂತರ ಬರುವ ಸುಳಿಗಳು ಕುಬ್ಜ ಕುಬ್ಜವಾಗುತ್ತಾ ಬಂದು ಕೊನೆಗೆ ಆ ಭಾಗದಲ್ಲಿ ಸುಳಿಕೊಳೆ ಉಂಟಾಗಿ ಸುಳಿಯೇ ಸತ್ತು ಹೋಗುವ ಸಾಧ್ಯತೆಯೂ ಇದೆ.
- ಆದ ಕಾರಣ ಈ ಕೀಟದ ಭಾಧೆ ಇದ್ದಲ್ಲಿ ಇದನ್ನು ನಿರ್ಲಕ್ಷ್ಯ ಮಾಡದೆ ನಿವಾರಣೋಪಾಯ ಕೈಗೊಳ್ಳಬೇಕು.
- ಬರೇ ಎಳೆ ಎಲೆಗಳ ರಸ ಹೀರುವುದೇ ಅಲ್ಲದೆ ಹೂ ಗೊಂಚಲಿನ ರಸವನ್ನೂ ಹೀರಿ ತೊಂದರೆ ಮಾಡುತ್ತವೆ.
- ಇದರಿಂದ ಹೂ ಗೊಂಚಲು ಒಣಗುತ್ತದೆ.
ಕೀಟ ಏನು:
- ಎಳೆಯ ತಿಗಣೆಗೆ ಅಪ್ಸರೆ (ರೆಕ್ಕೆ ಬಾರದ) ಎಂಬುದಾಗಿಯೂ , ಬೆಳೆದ ತಿಗಣೆಗೆ ಪ್ರೌಡ ತಿಗಣೆ ಎಂಬುದಾಗಿಯೂ ಕರೆಯುತ್ತಾರೆ.
- ಎರಡೂ ರಸ ಹೀರುತ್ತವೆ. ಅಪ್ಸರೆಯು ಹಸುರು ಮೈ ಬಣ್ಣದಲ್ಲಿ ತುದಿ ಮತ್ತು ಶರೀರದ ಅಲಗುಗಳಲ್ಲಿ ಕೆಂಪು ಬಣ್ಣದಲ್ಲಿರುತ್ತದೆ.
- ಪ್ರೌಢ ಕೀಟದ ಮೀಸೆ , ಭುಜ ಮತ್ತು ಮೂತಿ ಭಾಗ ಕಪ್ಪಗಿದ್ದು ಉಳಿದ ಭಾಗ ಕೆಂಪಾಗಿರುತ್ತದೆ. ಕೆಲವು ಕಾಫೀ ಬಣ್ಣದವುಗಳೂ ಇರುತ್ತವೆ.
ಕೃಷಿ ವ್ಯವಸ್ಥೆಯಲ್ಲಿ ಅತಿಯಾದ ಕೀಟನಾಶಕದ ಬಳಕೆ ಅಂದರೆ ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣ, ಕನಿಶ್ಟ ಹಾನಿಯ ಕೀಟಕ್ಕೆ ಪ್ರಭಲ ಕೀಟ ನಾಶಕದ ಬಳಕೆ, ಸೂಕ್ತ ಸಮಯವನ್ನು (ಹೊತ್ತು)ಗಮನಿಸದೆ ಕೀಟನಾಶಕದ ಸಿಂಪರಣೆ, ಕೆಲವು ಕೀಟಗಳ ವೈರಿ ಕೀಟಗಳನ್ನು (ನೈಸರ್ಗಿಕ ವೈರಿ ಕೀಟಗಳು Predetors ) ನಾಶ ಮಾಡಿವೆ. ಕೆಲವು ಅಗತ್ಯ ಪೊಷಕಾಂಶಗಳ ಅಸಮತೋಲನದಿಂದಾಗಿ ಬೆಳೆಗಳಲ್ಲಿ ಕೀಟ ರೋಗಗಳಿಗೆ ನಿರೋಧಕ ಶಕ್ತಿ ಕುಂದುವಂತಾಗಿದೆ. ಇದನ್ನು ಕೃಷಿಕರಾದವರು ಗಮನಿಸಬೇಕು. ತಜ್ಞರಾದವರು ಈ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು. ಇಂದು ಸುಳಿ ತಿಗಣೆಯ ಪ್ರಾಭಲ್ಯ ಹೆಚ್ಚಾಗಲು ಪ್ರಮುಖ ಕಾರಣ ಅದರ ವೈರಿ ಕೀಟ ನಾಶವಾಗಿರುವುದು. ಗಂಧಕದಂತಹ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡುವ ಪೋಷಕಾಂಶಗಳ ಬಳಕೆ ಕಡಿಮೆಯಾಗಿರುವುದೂ ಒಂದು ಕಾರಣ.
ನಿವಾರಣೋಪಾಯ:
- ಸಿಪಿಸಿಆರ್‍ಐ ಹಾಗೂ ಕೃಷಿ ವಿಶ್ವ ವಿಧ್ಯಾನಿಲಯಗಳ ಮಾಹಿತಿಯಲ್ಲಿ ಈ ಕೀಟ ಸಮಸ್ಯೆಗೆ ಕ್ವಿನಾಲ್ಫೋಸ್ (ಎಕಾಲಕ್ಸ್) ಕೀಟ ನಾಶಕವನ್ನು ಸಿಂಪಡಿಸಬೇಕು.
- ಸುಳಿ ಕಂಕುಳಲ್ಲಿ ಸಣ್ಣ ಪಾಲಿಥೀನ್ ಚೀಲದಲ್ಲಿ ಫೋರೇಟ್ ಹರಳನ್ನು ಹಾಕಿ ಅದಕ್ಕೆ ತೂತನ್ನು ಮಾಡಿ ಇಟ್ಟರೆ ನಿಯಂತ್ರಣ ಆಗುತ್ತದೆ.
- ಈ ಕೀಟನಾಶಕ ಬಳಸಿದಲ್ಲಿ ಸುಮಾರು 20 ದಿನಗಳ ಕಾಲ ಅಡಿಕೆ ಹಾಳೆಗಳನ್ನು ಪಶು ಆಹಾರವಾಗಿ ಬಳಕೆ ಮಾಡಬಾರದು.
- ತೋಟದ ಹುಲ್ಲಿನ ಮೇಲೆ ಕೀಟನಾಶಕ ಬಿದ್ದಲ್ಲಿ ಅದನ್ನೂ ಸಹ ಅಷ್ಟೇ ದಿನ ಪಶು ಮೇವಾಗಿ ಬಳಕೆ ಮಾಡಬಾರದು.
- ಫೋರೇಟ್ ಹರಳಿನ ಘಾಟು ವಾಸನೆಗೆ ಕೀಟಗಳು ದೂರವಾಗುತ್ತವೆ.
- ಸುರಕ್ಷತೆಯ ದೃಷ್ಟಿಯಿಂದ ಈ ಪರಿಹಾರ ಉತ್ತಮ.
- ತೀವ್ರ ಹಾನಿ ಇದ್ದಲ್ಲಿ ಮಾತ್ರ ಒಮ್ಮೆ ಸಿಂಪರಣೆ ಕೈಗೊಂಡು ನಂತರ ಮೇಲಿನ ವಿಧಾನವನ್ನು ಅನುಸರಿಸಿರಿ.
- ಕರಾಟೆ ಕೀಟನಾಶಕಕ್ಕೆ ಕೀಟ ದೂರವಾಗುತ್ತದೆ.
- ಸಾವಯವ ವಿಧಾನದಲ್ಲಿ ಇದಕ್ಕೆ ಸೂಕ್ತ ಪರಿಹಾರ ಇದ್ದಂತಿಲ್ಲ.
- ಹೊಂಗೆ – ಬೇವಿನ ಸಾಬೂನು ಸಾಮಾನ್ಯ ರಸ ಹೀರುವ ಕೀಟಗಳ ನಿಯಂತ್ರಣಕ್ಕೆ ಆಗುತ್ತದೆ ಎನ್ನುತ್ತಾರೆ.
- ಮೊನೋಕ್ರೋಟೋಫೋಸ್, ಲಾಂಬ್ಡ್ರಾಸೈಹೋಥ್ರಿನ್ ಕೀಟನಾಶಕ ಸಿಂಪರಣೆ ಮಾಡಿದರೆ ಇದು ನಿಯಂತ್ರಣಕ್ಕೆ ಬರುತ್ತದೆ.
ಪ್ರಾರಂಭಿಕ ಹಂತದ ಕೀಟ ಹತೋಟಿಗೆ ವೆಟ್ಟೆಬಲ್ ಸಲ್ಫರ್ (Wetteble sulphur) ಸಿಂಪಡಿಸಿ. ಅದರಲ್ಲಿ ಅಗದಿದ್ದರೆ ಬೇರೆ ಆಯ್ಕೆ ಮಾಡಿ. ಮೊದಲೇ ಪ್ರಭಲ ಕೀಟನಾಶಕ ಬಳಸಬೇಡಿ. ಇದು ಮೈಟ್,ಹಾಗೂ ಕೆಲವು ಸಾಮಾನ್ಯ ರೋಗಗಳನ್ನು ತಡೆಯುತ್ತದೆ. ಜೊತೆಗೆ ಒಂದು ಪೋಷಕವಾಗಿಯೂ ಕೆಲಸ ಮಾಡುತ್ತದೆ.
ಇತ್ತೀಚೆಗೆ ಬಾಯರ್ ಕಂಪೆನಿಯವರು ಒಬೆರಾನ್ (Oberon) ಎಂಬ ಉತ್ಪನವನ್ನು ಮೈಟ್ ಗಾಗಿಯೇ ಪರಿಚಯಿಸಿದ್ದು , ಇದನ್ನು 1 ಲೀ. ನೀರಿಗೆ 1 ಮಿಲಿ ಹಾಕಿ ಸಿಂಪಡಿಸಿದರೆ ಮೈಟ್ ನ ಮೊಟ್ಟೆಗಳ ಮೇಲೂ ಕೆಲಸ ಮಾಡುತ್ತದೆ. ದುಬಾರಿಯಾದರೂ ಪರಿಣಾಮಕಾರಿ ಎನ್ನುತ್ತಾರೆ. ಹಾಗೆಯೇ BASF ಕಂಪೆನಿಯ ಒಂದು ಕೀಟ ನಾಶಕ ಇದೆ.
- ಮರದ ಬುಡಕ್ಕೆ ಜೈವಿಕ ಕೀಟನಾಶಕವಾದ ವೆರ್ಟಿಸೀಲಿಯಂ, ಬೆವೇರಿಯಾ ಇವುಗಳನ್ನು ಬಳಸಿ ನಿಯಂತ್ರಣ ಮಾಡಬಹುದು.
- ಇದು ವಿಷ ರಹಿತ ಹಾನಿರಹಿತ ಜೈವಿಕ ನಿಯಂತ್ರಕವಾಗಿದೆ.
ಇದರ ನೈಸರ್ಗಿಕ ವೈರಿ ಕೀಟದ (ಆರು ಕಾಲು, ಎರಡು ಮೀಸೆ, ಕತ್ತಲೆಗೆ ಬೆಳಕಿನ ಸಮೀಪ ಬರುತ್ತದೆ) ಸಂತತಿ ಕಡಿಮೆಯಾಗುದೇ ಇದರ ಹಾವಳಿ ಹೆಚ್ಚಲು ಕಾರಣ.