ತೆಂಗಿನ ತೋಟ – ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಹೀಗೆ ಮಾಡಿ.

by | Jan 4, 2021 | Coconut (ತೆಂಗು), Garden Management (ತೋಟ ನಿರ್ವಹಣೆ) | 0 comments

ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿಂದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು.
ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ. ಅದರ ಜೊತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯೂ ನಡೆಯುತ್ತಿರಬೇಕು. ಹೀಗೆ ಆಗಲು ಬೆಳೆಗಾರರು ಮಾಡಬೇಕಾದ ಕೆಲವು ಅಗತ್ಯ ಕೆಲಸಗಳು ಹೀಗಿವೆ.

Coconut husk mulching to base of coconut plant

  • ತೆಂಗಿನ ಮರ ಎಂದರೆ ನಾವು ಅದಕ್ಕೆ ಎಲ್ಲಾ ಸಾವಯವ ತ್ಯಾಜ್ಯಗಳನ್ನು ಬುಡಕ್ಕೆ ಹಾಕುತ್ತೇವೆ.
  • ಅವು ಮಳೆಗಾಲದಲ್ಲಿ ಕರಗಿ ಬುಡದಲ್ಲಿ ಗೊಬ್ಬರವಾಗುತ್ತದೆ.
  • ಬೇಸಿಗೆಯಲ್ಲಿ ಬಿಸಿಲಿಗೆ ಒಣಗುತ್ತಾ ಇರುತ್ತದೆ.

ಬೇಸಿಗೆ ಮತ್ತು ಮಳೆಗಾಲ ಎರಡರಲ್ಲೂ ಬುಡಕ್ಕೆ ಹಾಕುವ ಸಾವಯವ ತ್ಯಾಜ್ಯಗಳು ಕಳಿತು ಮಣ್ಣಿಗೆ ಲಭ್ಯವಾಗುತ್ತಾ ಇದ್ದರೆ ಅದರ ಫಲಿತಾಂಶ ಅತ್ಯಧಿಕ.

ತೆಂಗಿನ ತೋಟದಲ್ಲಿ ಬೇಸಿಗೆಯ ಕೆಲಸ:

Coconut leaf mulching  and irrigation

  • ಬೇಸಿಗೆಯ ಸಮಯದಲ್ಲಿ ಮುಖ್ಯವಾಗಿ ತೆಂಗಿನ ಮರದ ಬುಡವನ್ನು ಸುಮಾರು -5-6 ಅಡಿ ತ್ರಿಜ್ಯಕ್ಕೆ ನೆಲ ಒಣಗದಂತೆ ರಕ್ಷಣೆ ಮಾಡಬೇಕು.
  • ತೆಂಗಿನ ಮರದಲ್ಲಿ ಈ ಸಮಯದಲ್ಲಿ ಒಣ ಗರಿಗಳು ಬೀಳುವುದು ಹೆಚ್ಚು.
  • ಅದೇ ರೀತಿಯಲ್ಲಿ ಮಳೆಗಾಲದ ಅವಧಿಯಲ್ಲಿ ಹುಟ್ಟುವ ಕಳೆಗಳನ್ನೆಲ್ಲಾ ತೆಂಗಿನ ಮರದ ಬುಡಕ್ಕೆ ಸವರಿ ಹಾಕುತ್ತೇವೆ.
  • ಇವುಗಳನ್ನೆಲ್ಲಾ ತೆಂಗಿನ ಮರದ ಬುಡದಲ್ಲಿ ಕಡಿದು ಓರಣವಾಗಿ ಹಾಕಿದರೆ ಬುಡ ಭಾಗದಲ್ಲಿ ತೇವಾಂಶ ಆವೀಕರಣ ಕಡಿಮೆಯಾಗುತ್ತದೆ.
  • ನೀರನ್ನು 50% ದಷ್ಟು ಕಡಿಮೆ ಮಾಡಬಹುದು.
  • ತೆಂಗಿನ ಕಾಯಿಯ ಸಿಪ್ಪೆಯನ್ನು ಮರದ ಬುಡಕ್ಕೆ ಕವುಚಿ ಹಾಕುವುದರಿಂದ 50% ನೀರಿನ ಉಳಿತಾಯ ಮಾಡಬಹುದು.
  • ಇದು ನಿಧಾನವಾಗಿ ಕರಗಿ ಮಣ್ಣಿನ ಸಾವಯವ ಅಂಶ ಹೆಚ್ಚಳಕ್ಕೆ ನೆರವಾಗುತ್ತದೆ.
  • ನಮ್ಮ ತೆಂಗಿನ ಮರಗಳಲ್ಲಿ ನವೆಂಬರ್ ತಿಂಗಳಿನಿಂದ ಎಪ್ರೀಲ್ ತಿಂಗಳ ತನಕ ಕಾಯಿ ಹಿಡಿಯುವುದು ಕಡಿಮೆ.
  • ಈ ಸಮಯದಲ್ಲಿ ಬರುವ ಹೂ ಗೊಂಚಲು ಸಹ ಸಣ್ಣದಾಗಿರುತ್ತದೆ.
  • ಇದರಿಂದಾಗಿ ಪ್ರತೀ ವರ್ಷವೂ ಈ ಸಮಯದಲ್ಲಿ ಕಾಯಿಗಳು ಕಡಿಮೆ ಮತ್ತು ಇರುವ ಕಾಯಿಗಳ ಗಾತ್ರವೂ ಸಣ್ಣದಾಗಿರುತ್ತದೆ.
  • ಇದನ್ನು ಸರಿಪಡಿಸಿದರೆ ತೆಂಗಿನಲ್ಲಿ 25% ಇಳುವರಿ ಹೆಚ್ಚಿಸಿಕೊಳ್ಳಬಹುದು.

ಇದಕ್ಕೆ ಮಾಡಬೇಕಾದ ಕೆಲಸ ಎಂದರೆ ತೆಂಗಿನ ಮರದ ಬುಡಭಾಗದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ತೇವಾಂಶ ಇರುವಂತೆ ನೋಡಿಕೊಳ್ಳುವುದು ಮತ್ತು ಬುಡದಲ್ಲಿ ಇರುವ ಎಲ್ಲಾ ಸಾವಯವ ತ್ಯಾಜ್ಯಗಳೂ ಕರಗಿಕೊಂಡಿರುವಂತೆ ನೋಡಿಕೊಳ್ಳುವುದು.

ತೆಂಗಿನ ಮರದಲ್ಲಿ ಏಕಪ್ರಕಾರದ ಇಳುವರಿ ಬರುವುದು ಹೇಗೆ?

  • ವರ್ಷದ ಎಲ್ಲಾ ತಿಂಗಳಲ್ಲೂ ಬರುವ ಹೂ ಗೊಂಚಲು ಏಕಪ್ರಕಾರವಾಗಿದ್ದರೆ ಬಿಡುವ ಕಾಯಿಗಳ ಗಾತ್ರವೂ ಏಕಪ್ರಕಾರವಾಗಿರುತ್ತದೆ.
  • ಬೇರುಗಳು ಹಬ್ಬಿರುವ ಭಾಗಕೆ ನಿರಂತರವಾಗಿ ತೇವಾಂಶ ಲಭ್ಯವಾಗುತ್ತಿದ್ದರೆ ಆ ಮರ ವರ್ಷದುದ್ದಕ್ಕೂ ಏಕಪ್ರಕಾರವಾಗಿ ಇಳುವರಿ ಕೊಡುತ್ತಿರುತ್ತದೆ.
  • ಹರಿ ನೀರಾವರಿ ಮಾಡುವ ಕಡೆ ಇಳುವರಿ ಹೆಚ್ಚು ಇರುತ್ತದೆ.
  • ನಾಲ್ಕೂ ದಿಕ್ಕಿಗೆ ವಿಶಾಲ ಭಾಗಕ್ಕೆ ನೀರು ಬೀಳುತ್ತಿದ್ದರೆ ಫಸಲು ಹೆಚ್ಚಾಗುತ್ತದೆ.
  • ಫಲವತ್ತಾದ ಮಣ್ಣು ಇರುವ ಹೊಳೆ, ಹಳ್ಳ ಹಾಗೂ ಗದ್ದೆಗಳ ಬದಿಯ ತೆಂಗಿನ ಮಾರಗಳಲ್ಲಿ ಇಳುವರಿ ಹೆಚ್ಚು ಇರುತ್ತದೆ.
  • ಮಣ್ಣಿನ ಗುಣವನ್ನು ರಾಸಾಯನಿಕ ಗೊಬ್ಬರಗಳನ್ನು ಹಾಕಿ ಸರಿಪಡಿಸಲಿಕ್ಕೆ ಕಷ್ಟ,
  • ಮಣ್ಣಿನ ಫಲವತ್ತತೆ ಹೆಚ್ಚಳವಾಗಲು ಸಾವಯವ ವಸ್ತುಗಳೇ ಆಗಬೇಕು.
  • ಅದು ನಿರಂತರವಾಗಿ ಮಣ್ಣಿಗೆ ಲಭ್ಯವಾಗುತ್ತಲೇ ಇದ್ದರೆ ಪೋಷಕಗಳು ನಿರಂತರವಾಗಿ ದೊರೆಯುತ್ತಾ ಇರುತ್ತದೆ.

ಏನು ಮಾಡಬೇಕು:

Sprinkle irrigation on oarganic waste

ಸಾವಯವ ವಸ್ತುಗಳ ಮೇಲೆ ನೀರು ಬೀಳುತ್ತಿದ್ದರೆ ಅದು ಗೊಬ್ಬರವಾಗಿ ಲಭ್ಯ.

  • ತೆಂಗಿನ ಮರದ ಬುಡಕ್ಕೆ ವರ್ಷದುದ್ಧಕ್ಕೂ ಸಾವಯವ ವಸ್ತುಗಳು ಪೂರೈಕೆಯಾಗುವಂತೆ ನೊಡಿಕೊಳ್ಳಬೇಕು.
  • ಬೇಸಿಗೆಯ ಅವಧಿಯಲ್ಲಿ ಬುಡದಲ್ಲಿ ಹಾಕಲಾದ ಸಾವಯವ ವಸ್ತುಗಳು ಕರಗಿ ಅದರ ಸಾರ ನಿರಂತರ ಮಣ್ಣಿಗೆ ಸೇರುತ್ತಿದ್ದರೆ, ಮಣ್ಣು ಫಲವತ್ತಾಗುತ್ತದೆ.
  • ಇದಕ್ಕೆ ಮರದ ಬುಡದಲ್ಲಿ ಹಾಸಲಾದ ಸಾವಯವ ವಸ್ತುಗಳು ಬೇಗ ಕರಗಿ ಶಿಥಿಲವಾಗುವಂತೆ ಮಾಡಲು ಬುಡಭಾಗದ ಸಾವಯವ ತ್ಯಾಜ್ಯಗಳ ಮೇಲೆ ನೀರು ಬೀಳುತ್ತಾ ಇರಬೇಕು.
  • ಆಗ ಆ ತ್ಯಾಜ್ಯಗಳು ಕರಗುತ್ತಾ ಇರುತ್ತವೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ.
    ನಿರಂತರವಾಗಿ ಸಾವಯವ ವಸ್ತುಗಳು ಲಭ್ಯವಾಗುತ್ತಾ ಇದ್ದರೆ ಮಣ್ಣಿನ ಜೈವಿಕ ಗುಣಧರ್ಮ ಮೇಲ್ದರ್ಜೆಗೆ ಏರಿ ಇಳುವರಿ ಹೆಚ್ಚಲು ಸಹಾಯಕವಾಗುತ್ತದೆ. ಇದನ್ನು ನಿಮ್ಮ ತೋಟದ ಮರಗಳಲ್ಲಿ ಮಾಡಿ ನೊಡಿ. ಎರಡು ಮೂರು ವರ್ಷಗಳಲ್ಲಿ ತೆಂಗಿನ ಗರಿ ಲಕ್ಷಣ ಬದಲಾವಣೆಯಾಗುತ್ತದೆ. ಹೂಗೊಂಚಲು ದೊಡ್ಡದಾಗಿ ಬೆಳೆದು, ಉತ್ತಮ ಇಳುವರಿ ಕೊಡುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!