ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಹುಳ ತಿಂದು ಸತ್ತ ತೆಂಗಿನ ಮರ

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ.
ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ?

  • ನಮ್ಮಲ್ಲಿ ಹಿರಿಯರು ಹೇಳುವುದುಂಟು, ತೆಂಗಿನ ಮರದ ಹಸಿ ಗರಿ, ಅಥವಾ ಯಾವುದೇ ಅಂಗವನ್ನು ಕಡಿದರೆ ಭಾರೀ ದೋಷವಿದೆ.
  • ಅದನ್ನು ಮಾಡಬಾರದು ಎಂದು ಅದಕ್ಕೆ ದೈವಿಕ ಭಾವನೆಯನ್ನು ಹೆಣೆದಿರುತ್ತಾರೆ.
  • ಇದಕ್ಕೆ ಎಷ್ಟೊಂದು ಅರ್ಥವಿದೆ ಎಂಬುದು ಗೊತ್ತೇ?

ತೆಂಗಿನ ಮರಗಳು /ಸಸಿಗಳು ಹೀಗೆ ಕಾಣುಕಾಣುತ್ತಿದ್ದಂತೆ ಸಾಯುತ್ತವೆ-Coconut trees die like this

 ಹಸಿ ಭಾಗ ಕಡಿದರೆ ಏನಾಗುತ್ತದೆ?

  • ತೆಂಗಿನ ಮರದ ಹಸಿ ಅಂಗಾಂಶಗಳಾದ ಗರಿ, ಕಾಂಡವನ್ನು ಕಡಿದಾಗ ಅದರಲ್ಲಿ ಒಂದು ರಸ ಬರುತ್ತದೆ.
  • ಅದು ಹುಳಿ ರಸವಾಗಿದ್ದು, ಶೇಂದಿಯಂತೆ.ಇದು ಹುಳಿ ವಾಸನೆ ಬರುತ್ತದೆ.
  • ಬರೇ ತೆಂಗು ಮಾತ್ರವಲ್ಲ ತಾಳೆ ವರ್ಗದ (ಈಚಲು, ಅಡಿಕೆ, ತಾಳೆ)ಎಲ್ಲಾ ಮರಗಳಲ್ಲೂ ಕಡಿದ ಭಾಗದಲ್ಲಿ ರಸ ಸೋರುತ್ತದೆ.
  • ಈ ರಸ ಮರದ ಬೇರುಗಳಿಂದ ಸರಬರಾಜು ಆಗುವ ಜೀವ ರಸವಾಗಿರುತ್ತದೆ.
  • ಮರದ ಗರಿಯನ್ನು ಕಡಿದಾಗಲೂ ಅದರಲ್ಲಿ ಸ್ವಲ್ಪ ಮಟ್ಟಿಗೆ ರಸ ಸ್ರವಿಸುತ್ತದೆ.
ಕಾಂಡದಲ್ಲಿ ಈ ರೀತಿ ತೂತುಗಳು ಇರುತ್ತವೆ.-we can observe this type of holes on trunk.
ಕಾಂಡದಲ್ಲಿ ಈ ರೀತಿ ತೂತುಗಳು ಇರುತ್ತವೆ.
  • ಕಾಂಡವನ್ನು ಕಡಿದಾಗ ಅಧಿಕ ಪ್ರಮಾಣದಲ್ಲಿ ರಸ ಸ್ರಾವವಾಗುತ್ತದೆ.
  • ಮರದ  ಶಿರ ಭಾಗ ಯಾವುದಾದರೂ ರೋಗ, ಸಿಡಿಲು ಇತ್ಯಾದಿಗಳಿಂದ ಸತ್ತಾಗಲೂ ಸಹ ಕಾಂಡದಲ್ಲಿ ರಸ ಸ್ರಾವವಾಗುತ್ತದೆ.
  • ಈ ರಸವು ಶಿರ ಭಾಗದಲ್ಲಿ ಬಳಕೆಯಾಗದೆ  ಕಾಂಡದ ಮೂಲಕ ಹೊರ ಸ್ರವಿಸಲು ಪ್ರಾರಂಭವಾಗುತ್ತದೆ.
  • ರಸ ಹೊರ ಬಂದಾಗ ಒಂದು ರೀತಿಯ ಕೊಳೆತ ವಾಸನೆ ಇರುತ್ತದೆ.
  • ವಾಸನೆಗೆ ಕೀಟಗಳು ಆಕರ್ಷಣೆಯಾಗುತ್ತದೆ. ಎಲ್ಲಿದ್ದರೂ ಆ ವಾಸನೆಯನ್ನು ಹುಡುಕಿಕೊಂಡು ಕೆಂಪು ಮೂತಿ ಹುಳ,ಬರುತ್ತದೆ.
  • ಅದಕ್ಕಾಗಿಯೇ ನಮ್ಮ ಹಿರಿಯರು ತೆಂಗಿನ ಮರ ಕಡಿಯಲಾರರು.
  • ಅದರ ಹಸಿ ಗರಿಯನ್ನೂ ಕಡಿಯಲಾರರು.

ಈಗ ಹಾಗಿಲ್ಲ. ಒಂದು ಮನೆ ಕಟ್ಟಬೇಕಾದರೆ, ಕಟ್ಟಡ ಕಟ್ಟಬೇಕಾದರೆ, ರಸ್ತೆ ಮಾಡಬೇಕಾದರೆ ನಾವು ತೆಂಗು ಇದೆ ಎಂದು ಭಾವನಾತ್ಮಕ ಮುಲಾಜನ್ನು ಇಟ್ಟುಕೊಳ್ಳುವುದಿಲ್ಲ.  ಮರವನ್ನು ಕಡಿದು ಒಂದು ಬದಿಗೆ ದೂಡಿ ಬಿಡುತ್ತೇವೆ. ಹಿಂದೆ ಇದನ್ನು ಮನೆ ಕೊಟ್ಟಿಗೆಗೆ ಚಾವಣಿ ಮಾಡಲು ಮರಮಟ್ಟಾಗಿ ಬಳಸುತ್ತಿದ್ದರು, ಈಗ ಅದಕ್ಕೂ ಬಳಕೆಯಾಗದ ಕಾರಣ ಇದನ್ನು ಕಡಿದು ಒಂದೆಡೆ ಬಿಡುತ್ತಾರೆ. ಇದು ಒಣಗುವ ವರೆಗೂ ರಸ ಸ್ರವಿಸುತ್ತಿರುತ್ತದೆ.  ಇದಕ್ಕೆ ಕೆಲವು ಕೀಟಗಳು ಧಾಳಿ ಮಾಡುತ್ತವೆ.

 ತೆಂಗಿನ ಮರಗಳು /ಸಸಿಗಳು ಸತ್ತಾಗ ಇಂತಹ ಉಂಡೆಗಳು (ಪ್ಯ್ಪೂಪೆ) ಸಿಗುತ್ತವೆ-we can observe this type of pupae near its crown.

ಸಿಡಿಲು ಬಡಿದ ಮರ:

  • ತೆಂಗಿನ  ಮರಕ್ಕೆ ಮಿಂಚು ಬಡಿಯುವುದು ಬೇಗ. ಕಾರಣ ಇದರ ಗರಿ, ಮತ್ತು ಮರದ ಎತ್ತರ ಮಿಂಚನ್ನು  ಅರ್ಥಿಂಗ್ ಮಾಡುತ್ತದೆ.
  • ಮನೆ ಸಮೀಪ ತೆಂಗಿನ ಮರ ಇದ್ದರೆ ಮಿಂಚನ್ನು ಅದು ಆಕರ್ಷಿಸುತ್ತದೆ ಎನ್ನುತ್ತಾರೆ.
  • ಬಲವಾದ ಮಿಂಚು ಹೊಡೆದಾಗ ಮರ ಸಾಯುತ್ತದೆ.
  • ಕೂಡಲೇ ಮರ ಸತ್ತದ್ದು ಗೊತ್ತಾಗುವುದಿಲ್ಲ.
  • ಮೂರು ನಾಲ್ಕು ದಿನದಲ್ಲಿ ಕಾಂಡದಲ್ಲಿ ರಸಸೋರುವಿಕೆ  ಪ್ರಾರಂಭವಾಗುತ್ತದೆ.
  • ಎಲೆಗಳು ಬಾಡಲು ಪ್ರಾರಂಭವಾಗುತ್ತದೆ.
  • ರಸ ಸೋರಲು ಪ್ರಾರಂಭವಾದ ತಕ್ಷಣ ಕೆಂಪು ಮೂತಿ ಹುಳ ಬಂದು ಕಾಂಡ ಸತ್ತ ಭಾಗದಲ್ಲಿ ರಂದ್ರ ಕೊರೆದು  ಮೊಟ್ಟೆ ಇಡುತ್ತದೆ.
  • ಮರಿಯಾಗಿ ನೂರಾರು ಸಂಖ್ಯೆಯಲ್ಲಿ ದುಂಬಿಗಳಾಗಿ ಹೊಸ ಮರವನ್ನು / ಸಸಿಯನ್ನು ಆಶ್ರಯಿಸಿ ಮತ್ತೆ ಸಂತಾನಾಭಿವೃದ್ದಿಯಾಗುತ್ತದೆ.
ತೆಂಗಿನ ಮರಗಳು ಗಾಯದ ಭಾಗದಲ್ಲಿ ಇಂತಹ ದುಂಬಿಗಳು ಇರುತ್ತವೆ-we can observe this type of beetles at damaged part.
ತೆಂಗಿನ ಮರಗಳು ಗಾಯದ ಭಾಗದಲ್ಲಿ ಇಂತಹ ದುಂಬಿಗಳು ಇರುತ್ತವೆ

ಕೂಡಲೇ ಕಡಿಯಿರಿ ಮತ್ತು ವಿಲೇವಾರಿ ಮಾಡಿ:

ತೆಂಗಿನ ಮರಗಳ ಗರಿಯನ್ನು ಕಾಣುವಾಗ ಹೀಗೆ ಇರುತ್ತದೆ.-we can observe this type of damage on leaves.
ತೆಂಗಿನ ಮರಗಳ ಗರಿಯನ್ನು ಕಾಣುವಾಗ ಹೀಗೆ ಇರುತ್ತದೆ
  • ಕಡಿದ ತೆಂಗಿನ ಮರ ಇದ್ದರೆ, ಅಥವಾ ಸಿಡಿಲು ಬಡಿದ ಮರ ಇದ್ದರೆ ಅದನ್ನು ಹಾಗೆ ಬಿಡಬೇಡಿ.
  • ತಕ್ಷಣ ಅದನ್ನು ಬುಡದಿಂದ ಕಡಿಯಿರಿ. ಕಡಿದು ಅಲ್ಲೇ ಹಾಕಬೇಡಿ.
  • ಅದನ್ನು ಬಿಸಿಲಿಗೆ ಹಾಕಿ ಅದನ್ನು ಸೌದೆಯಾಗಿ ಮಾಡಿ.
  • ಅದರ ಯಾವುದೇ ಶೇಷವನ್ನು ಹಾಗೆ ಉಳಿಸಬೇಡಿ. ತಕ್ಷಣ ಒಣಗುವಂತೆ ಮಾಡಿ.
  • ಕಡಿದ  ಭಾಗಕ್ಕೆ ಮೋನೋಕ್ರೋಟೋಫೋಸ್ ನಂತಹ ಕೀಟನಾಶಕವನ್ನು ಹಾಕಿದರೆ  ರಸ ಹುಡುಕಿ ಬರುವ ದುಂಬಿಗಳು ಅಲ್ಲಿ ವಾಸ ಮಾಡದಂತೆ ನೊಡಿಕೊಳ್ಳಿ.

ಮರ ಸತ್ತಿದೆ ಎಂದು ಹಾಗೆ ಬಿಟ್ಟರೆ ಅದರಿಂದಾಗಿ ಉಳಿದ ಮರ/ ಸಸಿಗಳಿಗೆ  ತೊಂದರೆ. ಈಗಿತ್ತಲಾಗಿ ತೆಂಗಿಗೆ, ಅಡಿಕೆಗೆ ಕೆಂಪು ಮೂತಿ ದುಂಬಿ ಕಾಟ ಅಧಿಕವಾಗಲು ಇದೇ ಕಾರಣ. ಬರೇ ತೆಂಗು ಮಾತ್ರವಲ್ಲ. ಅಡಿಕೆ ಮರ ಸತ್ತರೂ ತಕ್ಷಣ ಕಡಿದು ಅದನ್ನು ವಿಲೇವಾರಿ ಮಾಡಿ.

Leave a Reply

Your email address will not be published. Required fields are marked *

error: Content is protected !!