ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ?   

ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ

ಕೃಷಿಕರಾದವರೆಲ್ಲರೂ ಒಂದಿಲ್ಲೊಂದು ಉದ್ದೇಶಕ್ಕೆ ಕೀಟನಾಶಕ- ರೋಗನಾಶಕ ಸಿಂಪಡಿಸಿರಬಹುದು. ಇವುಗಳನ್ನು ಸಿಂಪಡಿಸುವಾಗ ನಾವು ಅನುಸರಿಸಿದ ಕ್ರಮ ಎಷ್ಟು ಸರಿ- ಎಷ್ಟು ತಪ್ಪು  ಎಂಬುದನ್ನು ಒಮ್ಮೆ ಯೋಚನೆ ಮಾಡಲೇಬೇಕು.  ಪ್ರತೀಯೊಂದು ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆಗೆ ನಿರ್ದಿಷ್ಟ ಪ್ರಮಾಣ ಎಂಬುದಿದೆ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದಾಗ ಆಗುವ ಅನಾಹುತಗಳೇನು? ಈಗಾಗಲೇ ಆದದ್ದು ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ವೈಧ್ಯರು ರೋಗಿಗೆ ಒಂದು ಔಷಧಿ ಕೊಡುತ್ತಾರೆ, ಯಾವ ವೈಧ್ಯರೂ ಕೊಡುವಾಗ ಇದನ್ನು ಇಂತಹ (ಬೆಳಿಗ್ಗೆ+ ಮಧ್ಯಾನ್ಹ+ ರಾತ್ರೆ) ಹೊತ್ತಿನಲ್ಲಿ, ಇಂತಹ ಸಮಯದಲ್ಲಿ ( ಊಟಕ್ಕೆ ಮುಂಚೆ ಅಥವಾ ಊಟದ ನಂತರ) ಇಂತಿಷ್ಟು ದಿನ ತೆಗೆದುಕೊಳ್ಳಬೇಕು ಎನ್ನುತ್ತಾರೆ.  ತೆಗೆದುಕೊಳ್ಳುವಾಗ ಶುದ್ಧವಾದ ಬಿಸಿ ನೀರಿನ ಜೊತೆ ಸೇವಿಸಿ ಎನ್ನುತ್ತಾರೆ.  ಕೆಲವರು ಸಮಸ್ಯೆ ನಿವಾರಣೆ ಆಗುತ್ತಿದೆ ಎನ್ನುವಾಗ ಮಾತ್ರೆ ಅಥವಾ ದ್ರವ ಸೇವನೆಯನ್ನು  ನಿಲ್ಲಿಸುತ್ತಾರೆ. ಮತ್ತೆ ಕೆಲವರು ನೀರಿನ ಬದಲು, ಚಹ, ಕಾಫಿ ಇವುಗಳ ಜೊತೆಗೂ ಸೇವನೆ ಮಾಡುತ್ತಾರೆ. ಮಾತ್ರೆ ತಿಂದರೆ ಆರೋಗ್ಯಕ್ಕೆ ಹಾಳು ಎಂದು ವೈಧ್ಯರು ಕೊಟ್ಟ ಎಲ್ಲಾ ಔಷಧಿಗಳನ್ನು  ತೆಗೆದುಕೊಳ್ಳುವುದಿಲ್ಲ. ಕೆಲವರು ಉಷ್ಣ ಎಂದು ಅರ್ಧದಲ್ಲಿ ನಿಲ್ಲಿಸುತ್ತಾರೆ. ಕೆಲವರು ಜೀವಿನಿರೋಧಕ (Antibiotics) ಔಷಧಿಗಳನ್ನೂ ಸಹ ಅದರ ಕೋರ್ಸ್ ಮಾಡುವುದಿಲ್ಲ.

 • ಇದೇ ರೀತಿಯಲ್ಲಿ ನಮ್ಮ ಸಸ್ಯ ಸಂರಕ್ಷಣೆ  ಕ್ರಮವೂ ಆಗಿದೆ.
 • ರಾಸಾಯನಿಕ ಔಷಧಿ ಒಳ್ಳೆಯದಲ್ಲ ಎಂದು ಶಿಫಾರಿತ ಪ್ರಮಾಣಕ್ಕಿಂತ ಕಡಿಮೆ ಬಳಕೆ ಮಾಡುವುದು, ಸ್ಟಾಂಗ್ ಇರಲಿ. ಕೀಟ- ರೋಗ ಸರ್ವನಾಶವಾಗಿ ಹೋಗಲಿ ಎಂದು ಓವರ್ ಡೋಸ್ ಬಳಕೆ ಮಾಡುವುದು ಮಾಡುವುದೂ ಇದೆ.
 • ಮನುಷ್ಯರ ದೇಹದ ವ್ಯಾಧಿಗಳಿಗೆ ಬಳಕೆ ಮಾಡುವ ಔಷಧಿಗಳಂತೆ ಸಸ್ಯ ಸಂರಕ್ಷಣಾ ಔಷಧಿಗಳಿಗೂ ಬಳಕೆಗೆ ಪ್ರಮಾಣ, ಕ್ರಮ, ಹೊತ್ತು, ಇತ್ಯಾದಿ ಇವೆ.
 • ಅದನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲವಾದರೆ ವಾತಾವರಣದ ಮೇಲೆ ಇದು ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ.

ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಿದರೆ ಏನಾಗುತ್ತದೆ?

 • ಕೀಟನಾಶಕ- ರೋಗನಾಶಕಗಳನ್ನು  ಬಳಕೆ ಮಾಡುವಾಗ ಶಿಫಾರಿತ ಪ್ರಮಾಣದಷ್ಟನ್ನೇ ಬಳಕೆ ಮಾಡಬೇಕು.
 • ಶಿಫಾರಿತ ಪ್ರಮಾಣ ಬೆಳೆಯನ್ನು ಅವಲಂಭಿಸಿ ಬೇರೆ ಬೇರೆ ಇರುತ್ತದೆ. 
 • ಓವರ್ ಡೋಸ್ ಬಳಕೆ ಮಾಡಿದಾಗ ಕೀಟಗಳು ಅಥವಾ ರೋಗಾಣುಗಳು ಅದಕ್ಕೆ ಪ್ರತಿರೋಧಕ ಅಥವಾ ನಿರೋಧಕ ಶಕ್ತಿಯನ್ನು  ಹೊಂದುತ್ತವೆ.
 • ಒಮ್ಮೆ ಒಂದು ವರ್ಗದ ಸಸ್ಯ ಸಂರಕ್ಷಕವನ್ನು ಸಿಂಪಡಿಸಿ, ಮತ್ತೆ ಮತ್ತೆ ಅದನ್ನೇ ಸಿಂಪಡಿಸುತ್ತಾ ಇದ್ದರೂ ಸಹ ಕೀಟ- ರೋಗಕಾರಕ ಅದಕ್ಕೆ ನಿರೋಧಕ ಶಕ್ತಿಯನ್ನು ಪಡೆಯುತ್ತವೆ. (Repeated use of same insecticide  in same chemical class may lead to resistance)  
 • ಕೀಟ- ರೋಗಗಳು ನಿರೋಧಕ ಶಕ್ತಿ ಪಡೆದವೆಂದರೆ ಅದಕ್ಕೆ ಮತ್ತೆ ಬೇರೆ ಔಷಧಿ ಬಳಕೆ ಮಾಡಬೇಕಾಗುತ್ತದೆ.
 • ಅದನ್ನೇ ಹೊಡೆದರೆ  ನಿಯಂತ್ರಣಕ್ಕೆ ಬರುವುದಿಲ್ಲ.
 • ಕೀಟಗಳಿಗೆ ಒಂದು ಔಷಧಿ ಅಭ್ಯಾಸವಾದರೆ ಅದರ ವಾಸನೆಗೆ ಅವು ಸಿಂಪರಣಾ ದ್ರಾವಣ ಬೀಳುವ ಜಾಗದಿಂದ ದೂರ ಹೋಗುತ್ತವೆ.
 • ಹಾಗೆಯೇ ಕೆಲವೊಮ್ಮೆ ಆ ಸಮಯಕ್ಕೆ ಬೇರೆ ಬೆಳೆ ಅಥವಾ ಸಸ್ಯವನ್ನು ಆಶ್ರಯಿಸುತ್ತವೆ.
 • ಕೆಲವು ಕೀಟಗಳು ತಮ್ಮ ಶರೀರದಲ್ಲಿ ರಕ್ಷಣಾ ಕವಚವನ್ನು (insect’s outer cuticle develop barrier which can slow absorption of the chemical in to their bodies) ನಿರ್ಮಿಸಿಕೊಳ್ಳುತ್ತದೆ.
 • ನಿರೋಧಕಶಕ್ತಿಯನ್ನು ಪಡೆದುಕೊಂಡ ಕೆಲವು ಕೀಟಗಳು  ತಮ ದೇಹದ ಒಳಗೆ ಕಿಣ್ವಗಳನ್ನು (internal enzyme system to break down the insecticides) ಉತ್ಪಾದಿಸಿಕೊಂಡಿರುತ್ತವೆ
 • ಮನುಷ್ಯರಿಗೆ – ಸಸ್ಯಗಳಿಗೆ ಸಹ ಓವರ್ ಡೋಸ್ ಹಾನಿಕರ.ನಿರ್ಧರಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ – ರೋಗನಾಶಕ ಬಳಸಿದರೆ ಅದು ಬೆಳೆಯಲ್ಲಿ ಉಳಿಕೆಯಾಗುತ್ತದೆ.
 • ಹಾಗೆಯೇ ಅದು ಚರ್ಮಕ್ಕೆ ತಾಗಿದಾಗ ತೊಂದರೆ ಉಂಟಾಗುತ್ತದೆ.
 • ಸಸ್ಯಗಳಿಗೆ ಓವರ್ ಡೋಸ್ ಬಳಕೆ ಮಾಡಿದಾಗ ಸುಟ್ಟಂತಾಗುವುದು, ಅವುಗಳ ಜೀವ ಕೋಶಗಳಿಗೆ ಹಾನಿಯಾಗುವುದು ಆಗುತ್ತದೆ.
 • ಪರಿಸರದ ಮೇಲೆ ಅವುಗಳ ಸಂತತಿ ಹೆಚ್ಚಳ ಹಾಗೆಯೇ ಒವರ್ ಡೋಸ್ ನಿಂದಾಗಿ  ಪ್ರಭಕ್ಷಕ ಕೀಟಗಳ ನಾಶ ಉಂಟಾಗಿ ಅಸಮತೋಲನ ಉಂಟಾಗುತ್ತದೆ.
 • ಒಂದಕ್ಕಿಂತ ಹೆಚ್ಚು ಬೇರೆ ಬೇರೆ ವರ್ಗದ ಕೀಟನಾಶಕ+ ರೋಗನಾಶಕಗಳನ್ನು ಮಿಶ್ರಣ  ಮಾಡಿ ಸಿಂಪಡಿಸಿದಾಗ ರಸ ಸಾರ pH ವ್ಯತ್ಯಯವಾಗಿ  ಪೀಡೆಗೆ ಅದು ಪರಿಣಾಮಕಾರಿಯಾಗದೆ ಇರುವ ಸಾಧ್ಯತೆಯೂ ಇರುತ್ತದೆ.

ರೈತರು ಯಾವುದೇ ಕಾರಣಕ್ಕೆ ಕೀಟನಾಶಕಗಳನ್ನು ಶಿಫಾರಿತ ಪ್ರಮಾಣದಿಂದ ಹೆಚ್ಚಾಗಿ ಬಳಸಬಾರದು. ಇದು ಬಳಸಿದವರಿಗೂ ಹಾನಿ, ಕೀಟಗಳ ನಾಶಕಕ್ಕೂ ಪ್ರಯೋಜನ ಇಲ್ಲ. ಜೇಬಿಗೂ ನಷ್ಟ.

ಕಡಿಮೆ ಪ್ರಮಾಣ ಬಳಕೆ ಮಾಡಿದರೆ ಏನಾಗುತ್ತದೆ?

 • ಕೀಟನಾಶಕ ಅಥವಾ ರೋಗನಾಶಕ ಹಾಗೆಯೇ ಕಳೆನಾಶಕಗಳನ್ನು ತಯಾರಿಸುವವರು ಇದರ ಫಲಿತಾಂಶ ಇಂತಿಷ್ಟು ಪ್ರಮಾಣದಲ್ಲಿ ಇದ್ದಾಗ ಮಾತ್ರ ಪರಿಣಾಮಕಾರಿ ಎಂದು  ಸಂಶೊಧನೆಯ ಮೂಲಕ ಕಂಡುಕೊಂಡಿರುತ್ತಾರೆ.
 • ಕೀಟ- ರೋಗ ಮುನ್ನೆಚ್ಚರಿಕೆಯಾಗಿ ಸಿಂಪಡಿಸುವಾಗ ಶಿಫಾರಿತ ಪ್ರಮಾಣಕ್ಕಿಂತ ¼ ಪಾಲು ಕಡಿಮೆ ಬಳಕೆ ಮಾಡಿದರೂ ಅಂತಹ ತೊಂದರೆ ಆಗಲಿಕ್ಕಿಲ್ಲ.
 • ಪ್ರಾರಂಭಿಕ ಹಂತದಲ್ಲಿಯೂ ಇದು ಕೆಲಸ ಮಾಡಬಹುದು. ಗುರುತಿಸುವುದು ತಡವಾಗಿ ಉಲ್ಬಣ ಸ್ಥಿತಿಯಲ್ಲಿದ್ದಾಗ ಕಡಿಮೆ ಪ್ರಮಾಣ ಪ್ರಯೋಜನಕಾರಿಯಲ್ಲ.
 • ಬಳಕೆದಾರ ಕೃಷಿಕನಿಗೆ ಕೀಟ ನಿಯಂತ್ರಣ ಸಮರ್ಪಕವಾಗಿ ಆಗಬೇಕಾದ ಅನಿವಾರ್ಯತೆ ಇರುವ ಕಾರಣ ಶಿಫಾರಿತ ಪ್ರಮಾಣಕ್ಕಿಂತ ಕಡಿಮೆ ಮಾಡಿ ಬಳಕೆ ಮಾಡುವುದು ಲಾಭದಾಯಕವಲ್ಲ.
ರೈತರು ಯಾವುದೇ ಕಾರಣಕ್ಕೆ ಕೀಟನಾಶಕಗಳನ್ನು ಶಿಫಾರಿತ ಪ್ರಮಾಣದಿಂದ ಹೆಚ್ಚಾಗಿ ಬಳಸಬಾರದು

ಹೇಗೆ ಬಳಕೆ ಮಾಡಬೇಕು:

 • ಕೆಲವು ಕೀಟನಾಶಕಗಳು ದ್ರವರೂಪದಲ್ಲಿ ಇರುತ್ತವೆ. ಕೆಲವು ಹುಡಿ ರೂಪದಲ್ಲಿರುತ್ತವೆ.
 • ಇನ್ನು ಕೆಲವು ಹರಳು ರೂಪದಲ್ಲಿ ಇರುತ್ತವೆ. ದ್ರವ ಮತ್ತು ಹುಡಿ ರೂಪದ ಕೀಟ- ರೋಗ ನಾಶಕಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ.
 • ಹರಳು ರೂಪದ್ದು ಕರಗಲಾರದು. ಹರಳು ರೂಪದ್ದನ್ನು ಮಣ್ಣಿಗೆ ಸೇರಿಸಬೇಕು.
 • ದ್ರವೀಕರಿಸುವಂತದ್ದನ್ನು ಸಿಂಪರಣೆಗೆ ಬಳಕೆ ಮಾಡಬೇಕು. ಹಾಗೆಯೇ ಮಣ್ಣಿಗೆ ಡ್ರೆಂಚಿಂಗ್ ಮಾಡುವಂತದ್ದಾದರೆ ಹಾಗೆ ಬಳಕೆ ಮಾಡಬೇಕು.
 • ಸಿಂಪಡಿಸುವಾಗ ಸರಿಯಾದ ನಾಸಲ್ ಉಳ್ಳ ಸಿಂಪರಣಾ ಸಾಧನವನ್ನು ಬಳಕೆ ಮಾಡಬೇಕು. 
 • ನೆಲಕ್ಕೆ ಬೀಳುವಂತೆ ಸಿಂಪರಣಾ ನಾಸಲ್ ಬಳಕೆ ಮಾಡಬಾರದು.
 • ಹರಳು ರೂಪದ್ದನ್ನು ಕರಗಿಸಲು ಪ್ರಯತ್ನಿಸುವುದು ಯುಕ್ತವಲ್ಲ.
 • ಸಿಂಪಡಿಸುವಾಗ ಅದು ಎಲೆಗಳಿಗೆ ಬಳಸಿದರೆ ಅದಕ್ಕೆ ಮಾತ್ರ ಬೀಳಬೇಕು ಹೊರತಾಗಿ ನೆಲಕ್ಕೆ ಬೀಳಬಾರದು.
 • ನೆಲಕ್ಕೆ ಬಿದ್ದಾಗ ಅದು ಮಣ್ಣಿನ ಮತ್ತು ನೀರಿನ ಮೇಲೆ ಪರಿಣಾಮ ಉಂಟುಮಾಡುತ್ತದೆ.
 • ಬಹುತೇಕ ರೈತರು ಸಿಂಪಡಿಸುವ ಕೀಟನಾಶಕ, ಶಿಲೀಂದ್ರ ನಾಶಕಗಳು ಗುರಿಗೆ ತಾಗುವ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.
 • ಹೆಚ್ಚಿನದ್ದು ಮಣ್ಣಿಗೆ ಬಿದ್ದು ಮಾಲಿನ್ಯ ಉಂಟಾಗುತ್ತದೆ. 
 • ಅದಕ್ಕಾಗಿ ಇಬ್ಬನಿಯಂತೆ ಬೀಳುವ ನಾಸಲ್ ಅನ್ನು ಬಳಕೆ ಮಾಡಬೇಕು.
 • ನಿಧಾನವಾಗಿಯಾದರೂ ಜಾಗರೂಕತೆಯಲ್ಲಿ ಸಿಂಪರಣೆ ಮಾಡಬೇಕು.

ಏನೇನು ತೊಂದರೆಗಳು ಉಂಟಾಗುತ್ತವೆ?

 •  ಕೀಟನಾಶಕ- ರೋಗನಾಶಕ, ಮತ್ತು ಕಳೆ ನಾಶಕಗಳಿಗೆ ಅದರದ್ದೇ ಆದ ಕರಗುವಿಕೆಯ ಆವಧಿ (Degradation time) ಎಂಬುದು ಇರುತ್ತದೆ.
 • ಅದು  1-2-10-30 365  ದಿನಗಳೂ ಇರುವುದಿದೆ.
 • ಕೆಲವು ಮಣ್ಣಿನಲ್ಲಿ (Soil degradation) ಕರಗಲ್ಪಟ್ಟರೆ ಮತ್ತೆ ಕೆಲವು ಸೂರ್ಯನ ಬಿಸಿಲಿಗೆ ಕರಗಲ್ಪಡುತ್ತದೆ.
 • ಮಣ್ಣಿನ ರಸಸಾರ, ತೇವಾಂಶ, ಮಣ್ಣಿನ ತಾಪಮಾನ ಇವುಗಳನ್ನು ಅವಲಂಭಿಸಿ ಅವು ಕರಗುವ ಸಮಯ ನಿರ್ಧರಿತವಾಗುತ್ತದೆ.
 • ಬೆಳಕಿಗೆ  ಕರಗಲ್ಪಡುವುದು Photo- degradation ಸೂರ್ಯನ ಬೆಳಕಿನ ಪ್ರಖರತೆ, ಅದರ ಅವಧಿ  ಮತ್ತು ಕೀಟನಾಶಕ- ಶಿಲಿಂದ್ರ ನಾಶಕ ತಾಗಿದ ಭಾಗ ಬೆಳಕಿಗೆ ತೆರೆದುಕೊಳ್ಳುವುದರ ಮೇಲೆ ಅವಲಂಭಿಸಿದೆ.
 • ಬಹುತೇಕ ಕೀಟನಾಶಕಗಳು ಸೂರ್ಯನ ಬೆಳಕಿಗೆ ಕರಗಲ್ಪಡುತ್ತವೆ.
 • ಮೆಕ್ಕಲು ಮಣ್ಣು ( ಸಾವಯವ ಅಂಶ ಹೆಚ್ಚು ಇರುವ) ಇರುವಲ್ಲಿ ಕೀಟನಾಶಕ ರೋಗನಾಶಕ ಮಣ್ಣಿನ ಒಳ ಭಾಗಕ್ಕೆ ಸೇರಿಕೊಳ್ಳುವುದು ಕಡಿಮೆ.
 • ಅಲ್ಲೇ ಮೇಲೆ  ಇರುತ್ತದೆ. (Accumulate on a surface)
 • ಮರಳು ಮಣ್ಣಿನಲ್ಲಿ ಜಾಸ್ತಿ. ಒಣ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕವನ್ನು ಒಳಗೆ ಸೇರಿಸಿಕೊಳ್ಳುತ್ತದೆ.
 • ಜಗತ್ತಿನಲ್ಲಿ ತಯಾರಾಗುತ್ತಿರುವ ಬಹಳಷ್ಟು ಕೀಟನಾಶಕಗಳು ಮಣ್ಣಿನಲ್ಲಿ ಇಳಿದು ಹೋಗಿ ಅಂತರ್ಜಲವನ್ನು ಸೇರುತ್ತವೆ.
 • ಹೆಚ್ಚು ಸಮಯದ ತನಕ ಉಳಿಕೆ ಅಂಶ ಇರುವ ಕೀಟನಾಶಕದ ಇಳಿದುಕೊಳ್ಳುವಿಕೆ ಹೆಚ್ಚು.
 • ಮಳೆ ಪ್ರಮಾಣ, ಉಷ್ಣತೆ ಇವುಗಳನ್ನು ಅವಲಂಭಿಸಿ ಇಳಿದುಹೋಗುವಿಕೆ ಇರುತ್ತದೆ.
 • ಮಣ್ಣಿನ ಮೇಲ್ಪಾಗದಲ್ಲಿ ಸಾವಯವ ವಸ್ತುಗಳು ಇದ್ದರೆ ಕೆಳಕ್ಕೆ ಇಳಿಯುವಿಕೆ ಕಡಿಮೆಯಾಗುತ್ತದೆ.

ರೈತರಿಗೆ ಈಗ ಬೆಳೆ ಬೆಳೆಯುವುದು ಬದುಕಿಗೆ ಅನಿವಾರ್ಯ. ಬೆಳೆ ಉಳಿಸಿಕೊಳ್ಳುವುದೂ ಅವನ ಅಸ್ತಿತ್ವಕ್ಕೆ ಅನಿವಾರ್ಯ. ರೈತರ ಬೆಳೆಗೆ ಪಾಲುದಾರರಾದ ಪರಾವಲಂಭಿ ರೋಗಾಣುಗಳು, ಕೀಟಗಳೂ ಸಹ ಸ್ಪರ್ಧಿಗಳಾಗುತ್ತಿವೆ. ಕೃಷಿ ಮತ್ತು ಕೀಟ+ ರೋಗನಾಶಕ ಅನಿವಾರ್ಯವಾಗುತ್ತಿದೆ. ಅನಿವಾರ್ಯವಾದರೂ ಅದನ್ನು ವೈಜ್ಞಾನಿಕವಾಗಿ ಬಳಸಿ ಅವರವರ ಸ್ವಾಸ್ಥ್ಯವನ್ನು ಹಾಗೆಯೇ ಪರಿಸರದ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!