ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.

ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ

ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ  ಬಳಸಬೇಕು.

ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ  ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ. ನಮಗೂ ಬಳಸುವವರಿಗೂ ತೊಂದರೆ ಆಗದಂತೆ ಬಳಸುವುದು ನಮಗೆ ತಿಳಿದಿರಬೇಕು.

  • ಅಂಗಡಿಯವನು ಹೇಳುತ್ತಾನೆ, ಮುಚ್ಚಳದಲ್ಲಿ ಒಂದು ಮುಚ್ಚಳ ಹಾಕಿ ಸಿಂಪಡಿಸಿ ಎಂದು.
  • ನಾವು ಸ್ವಲ್ಪ ಮುಂದುವರಿದು ಸ್ವಲ್ಪ ಸಾಕಾಗಲಿಕ್ಕಿಲ್ಲ   ಎಂದು ಹೆಚ್ಚು ಬಳಸುತ್ತೇವೆ.
  • ಇದೇ ಈಗ ತೊಂದರೆ ಆಗಿರುವುದು.ಎಲ್ಲದಕ್ಕೂ ಬಳಕೆಗೆ ಒಂದು ಕ್ರಮ ಇದೆ.ಸಮಯ ಇದೆ.
  • ಅದಕ್ಕನುಗುಣವಾಗಿ ಬಳಕೆ ಮಾಡಬೇಕು.
  • ಎಲ್ಲಕ್ಕೂ ಮುಖ್ಯವಾಗಿ ಬಳಸುವ ಬಗ್ಗೆ  ಕೊಡಲಾದ  ಮಾಹಿತಿಯನ್ನು ಓದಬೇಕು.

ಇದು ಅಗತ್ಯ ಗೊತ್ತಿರಲಿ:

  •  ಬೆಳೆ ಬೆಳೆಸುವಾಗ ಕೀಟಗಳು, ಅಲ್ಲದೆ ರೋಗಾಣುಗಳು ಬರುವುದು ಸಾಮಾನ್ಯ.
  • ಇವುಗಳಿಂದ ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ.
  • ಇದಕ್ಕಾಗಿ ಬೇರೆ ಬೇರೆ ಕೀಟನಾಶಕಗಳು ಹಾಗೂ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಬೇಕಾಗುತ್ತದೆ.
  • ಈ ಬೆಳೆ ಸಂರಕ್ಷಣಾ ರಾಸಾಯನಿಕಗಳನ್ನು ಬಳಕೆ ಮಾಡುವಾಗ ಅವುಗಳ ಉಳಿಕೆಗಳು ಫಸಲಿನಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ.
  • ಸಾರ್ವಜನಿಕ ಸ್ವಾಸ್ತ್ಯದ ದೃಷ್ಟಿಯಿಂದ ಕೀಟ ನಾಶಕ, ಶಿಲೀಂದ್ರನಾಶಕಗಳ ಉಳಿಕೆಗಳು ಸಹ್ಯ ಪ್ರಮಾಣದಲ್ಲಿರುವಂತೇ ಮಾಡಲು ಗರಿಷ್ಟ ಉಳಿಕೆ ಮಿತಿಯನ್ನು  (Maximum Residue Limit  MRT ) ನಿರ್ಧರಿಸಲಾಗಿದೆ.
  •   ಈ ಮಿತಿಯಲ್ಲಿರುವ ಹಣ್ಣನ್ನು, ತರಕಾರಿಯನ್ನು ತಿನ್ನುವುದರಿಂದ ಬಳಕೆದಾರರ ಆರೋಗ್ಯಕ್ಕೆ ತೊಂದರೆ ಇರುವುದಿಲ್ಲ.
  • ಈ ನಿಯಮವನ್ನು  ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ  ಆಹಾರ ಕಲಬೆರಕೆ ನಿಯಂತ್ರಣ ಕಾಯಿದೆ 1954  (Prevention of Food  Adulteration (PFA) Act 1954,  by Ministry of Health and Family Welfare) ರ ಅಡಿಯಲ್ಲಿ ಜ್ಯಾರಿಗೆ ತರಲಾಗಿದೆ.
  • ಇದು ಮಿಲಿ ಗ್ರಾಂ, ಕಿಲೋ, ಅಥವಾ ಪಿಪಿಎಂ ನ ಅಳತೆಯಲ್ಲಿರುತ್ತದೆ.
  • ಈ ಮಟ್ಟವನ್ನು ಪೂರೈಸಲು ಯಾವುದೇ ರಾಸಾಯನಿಕಗಳನ್ನು ಸಿಂಪರಣೆ ಮಾಡುವಾಗ ಪ್ರಥಮ ಕೊಯಿಲಿನ  ಮುಂಚೆ ನಿರ್ಧರಿತ ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
  • ದಿನಗಳ ಅಂತರವನ್ನು ಕೊಯಿಲಿಗೆ ಮುಂಚಿನ ಮಧ್ಯಂತರ (Pre Harvest Interval (PHI ) ಎನ್ನುತ್ತಾರೆ. 
  • ಇದನ್ನು ಅನುಸರಿಸಿದಾಗ ಹೊಲದಲ್ಲಿ ಕೃಷಿ ರಾಸಾಯನಿಕಗಳ ಕರಗದೇ ಉಳಿಯುವಿಕೆ ನಗಣ್ಯಗಾಗುತ್ತದೆ.
  • ಪ್ರತೀಯೊಂದು ಕೀಟನಾಶಕ, ಶಿಲೀಂದ್ರ ನಾಶಕಗಳಿಗೆ ಅವುಗಳನ್ನು ತಯಾರಿಸಿದ ಮೂಲವಸ್ತುವಿನ ಮೇಲೆ ಅವುಗಳ ಕರಗುವ ಅವಧಿ  ಭಿನ್ನವಾಗಿರುತ್ತದೆ.

ಸುರಕ್ಷತೆ ಇಲ್ಲದೆ ಬಳಸುವುದು ಅಪಾಯಕಾರಿ

ಉಳಿಕೆ ಅವಧಿ:

ಸಾಮಾನ್ಯವಾಗಿ ಬಳಕೆಯಾಗುವ ಕೀಟನಾಶಕಗಳು ಮತ್ತು ಅವುಗಳ ಬಳಕೆ ಪ್ರಮಾಣ ಗರಿಷ್ಟ ಉಳಿಕೆ ಮಿತಿ, ಮತ್ತು ಕೊಯಿಲಿನ ಮುಂಚೆ ಕಾಯ್ದುಕೊಳ್ಳಬೇಕಾದ ದಿನಗಳ ಅಂತರ ಹೀಗಿದೆ.

  • ಅಸೆಫೇಟ್ (Acephate )                   1.0ಗ್ರಾಂ/ಲೀ       0.01 ಪಿಪಿಎಂ.       30 ದಿನಗಳು
  • ಬೆನೊಮಿಲ್ (Benomyl )                   1.0 ಗ್ರಾಂ/ಲೀ     2.00 ಪಿಪಿಎಂ        30 ದಿನಗಳು
  • ಬಿಫೆನ್‍ಥ್ರ್ರಿನ್ (Bifenthrin )                  0.5 ಮಿಲಿ/ಲೀ.    0.50 ಪಿಪಿಎಂ       16 ದಿನಗಳು
  • ಕಾರ್ಬನ್ ಡೈಜಿಮ್ (Carbendazim)       1.0 ಗ್ರಾಂ/ಲೀ     2.00 ಪಿಪಿಎಂ.      30 ದಿನಗಳು
  • ಸೈಪರ್ ಮೆಥ್ರಿನ್ (Cypermethrin)         1.0 ಮಿಲಿ/ಲೀ     0.03 ಪಿಪಿಎಂ       21 ದಿನಗಳು
  • ಡಿಫೆನೋಕೊನೆಝೋಲ್ (Difonoconazole)  0.5 ಮಿಲಿ /ಲೀ.   0.07 ಪಿಪಿಎಂ.       28 ದಿನಗಳು
  • ಡೆಲ್ಟ್ರಾಮೆಥ್ರಿನ್ (Deltramethrin)             1.0 ಮಿಲಿ/ಲೀ     0.50 ಪಿಪಿಎಂ       21 ದಿನಗಳು
  • ಡೈಮೆಥೊಯೇಟ್ (Dimethoate)            2.0 ಮಿಲಿ/ಲೀ     1.00 ಪಿಪಿಎಂ       15 ದಿನಗಳು
  • ಫೆನ್‍ಥಿಯೋನ್ (Fenthion)                 2.0 ಮಿಲಿ/ಲೀ    2.00 ಪಿಪಿಎಂ        21 ದಿನಗಳು
  • ಫೆನ್ವೊಲೊರೇಟ್ (Fenvalerate)            1.0 ಮಿಲಿ/ಲೀ    1.00 ಪಿಪಿಎಂ        30 ದಿನಗಳು
  • ಇಮಿಡಾ ಕ್ಲೋಫ್ರಿಡ್ (Imidacloprid)          0.4 ಮಿಲಿ/ಲೀ    1.00 ಪಿಪಿಎಂ        60 ದಿನಗಳು
  • ಪ್ರೋಡಿಯೋನ್  (Iprodione)               2.0 ಗ್ರಾಂ/ಲೀ.   10.0 ಪಿಪಿಎಂ        3 ದಿನಗಳು
  • ಲಾಂಬ್ಡಾ ಹಲೋಥ್ರಿನ್(Lambda cyhalothrin)   0.5 ಮಿಲಿ/ಲೀ   0.50ಪಿಪಿಎಂ.  15 ದಿನಗಳು
  • ಪ್ರೊಕ್ಲೊರಾಜ್(Prochloraz)                      1.0 ಗ್ರಾಂ/ಲೀ   2.00 ಪಿಪಿಎಂ 6 ದಿನಗಳು
  • ಕ್ವಿನಾಲ್ ಪೋಸ್(Quinalphos)                2.0 ಮಿಲಿ/ಲೀ    0.02 ಪಿಪಿಎಂ.  20 ದಿನಗಳು
  • ಥಿಯೋಫೆನೇಟ್ ಮಿಥೇಲ್ (Thiophanatemethyl)1.0 ಗ್ರಾಂ/ಲೀ.   2.00 ಪಿಪಿಎಂ  30 ದಿನಗಳು.

ಕಡಿಮೆ ಮಾಡುವುದು:

ಇವುಗಳಲ್ಲಿ ಕೆಲವು ಕೀಟನಾಶಕ ಮತ್ತು ಶಿಲೀಂದ್ರನಾಶಕಗಳನ್ನು ನೀರಿನಲ್ಲಿ ತೊಳೆಯುವುದರಿಂದ, ಸಾಮಾನ್ಯ ಉಪ್ಪಿನ ದ್ರಾವಣದಲ್ಲಿ ತೊಳೆಯುವುದರಿಂದ, ಸಾಮಾನ್ಯ ಸಾಬೂನು ಸೇರಿಸಿದ ನೀರಿನಲ್ಲಿ ತೊಳೆಯುವುದರಿಂದ, ಸಿಪ್ಪೆ ತೆಗೆಯುವುದರಿಂದ ಅದರ ಉಳಿಕೆಯನ್ನು ಕಡಿಮೆ ಮಾಡಬಹುದು. ಕಾರ್ಬನ್ ಡೈಜಿಮ್ ಅನ್ನು ಈ ರೀತಿ ತೊಳೆದರೆ 25-30 % ಕಡಿಮೆಯಾಗುತ್ತದೆ. ಡಿಫೆನೋಕೊನೆಝೋಲ್ 30-50 % ವೂ, ಪೊರಡಿಯೋನ್ 75-80 % ವೂ, ಪ್ಲೊಕ್ಲೊರಾಜ್ 75-80 % ವೂ ಕಡಿಮೆಯಾಗುತ್ತದೆ.

ಮುನ್ನೆಚ್ಚರಿಕೆ:

ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳ ಉಳಿಕೆಯನ್ನು ಕಡಿಮೆ ಮಾಡಲು  ಕೆಲವು ಕ್ರಮಗಳನ್ನು ಪಾಲಿಸಬೇಕು ಅವುಗಳೆಂದರೆ

  • ಯಾವಾಗಲೂ ಶಿಫಾರಿತ ಕೀಟನಾಶಕ, ಶಿಲೀಂದ್ರ ನಾಶಕಗಳನ್ನು ಸಮಗ್ರ ಕೀಟ ನಿಯಂತ್ರಣ ಕ್ರಮದಂತೆ ಬಳಕೆ ಮಾಡಬೇಕು.
  • ರಾಸಾಯನಿಕ ಮೂಲದವುಗಳನ್ನು ಸಸ್ಯ ಬೆಳವಣಿಗೆ ಸಮಯದಲ್ಲೂ, ಸಸ್ಯ ಜನ್ಯ ಔಷಧಿಗಳನ್ನು ಕಾಯಿಯಾದ ನಂತರವೂ ಬಳಕೆ ಮಾಡಬೇಕು.
  • ಯಾವಾಗಲೂ ಕೊಯಿಲಿಗೆ ಹತ್ತಿರದ ಸಮಯದಲ್ಲಿ ಸಿಂಪರಣೆ ಮಾಡಬೇಡಿ.
  • ಪರಿಸರಕ್ಕೆ  ಹಾನಿ ಇಲ್ಲದ್ದನ್ನು ಆರಿಸಿ ಕಡಿಮೆ ಸಾಂದ್ರತೆಯಲ್ಲಿ ಬಳಸಿರಿ
  • ಸಿಂಪಡಿಸಲು ಸೂಕ್ತ ಸಾಧನಗಳನ್ನು, ಮತ್ತು ಸಿಂಪಡಿಸುವಾಗ ತೊಡಬೇಕಾದ ರಕ್ಷಕ ಉಡುಗೆ ಧರಿಸಲು ಮರೆಯಬೇಡಿ.
  • ಕೈಯಲ್ಲಿ ಕಲಕಬಾರದು. ಕಲಸುವಾಗ ಮುಖಕ್ಕೆ ವಾಸನೆ ತಾಗದಂತೆ ಬಟ್ಟೆ ಕಟ್ಟಿಕೊಳ್ಳಬೇಕು.

ಈ ವಿಚಾರಗಳನ್ನು ರೈತರು ಅರಿತು ಸಸ್ಯ ಸಂರಕ್ಷಕಗಳನ್ನು ಜಾಗರೂಕತೆಯಲ್ಲಿ ಬಳಸಿದರೆ ಯಾರಿಗೂ ಯಾವ ಹಾನಿಯು ಬರಲಾರದು.

Leave a Reply

Your email address will not be published. Required fields are marked *

error: Content is protected !!