ಕಳೆನಾಶಕಗಳಿಂದ ಕ್ಯಾನ್ಸರ್ ಬರುವುದು ನಿಜವೇ ?

ಕಳೆನಾಶಕ ಬಳಸಿ ಸಾಯಿಸಿದ ಹುಲ್ಲು

ಕಳೆನಾಶಕಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ಈಗ ಇರುವ ವ್ಯಾಪಕ ಪ್ರಚಾರ. ಕಳೆನಾಶಕ ಬಳಕೆ ಮಾಡುವುದು ಕಳೆಗಳನ್ನು ಕೊಲ್ಲಲು. ಕಳೆಗಳನ್ನು ಕೊಲ್ಲಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದರೆ, ಕಳೆನಾಶಕ ಬಳಸಿದ ಹುಲ್ಲನ್ನು ಪಶುಗಳಿಗೆ ಮೇವಾಗಿ ಕೊಟ್ಟರೆ ಅದು ಕ್ಯಾನ್ಸರ್ ಕಾರಕವಾಗಬಹುದು. ಆದರೆ ಹುಲ್ಲು ಸತ್ತಾಗ ಅದಕ್ಕೆ ಕ್ಯಾನ್ಸರ್ ಬರಲಾರದು. ಹಾಗಾಗಿ ಕಳೆನಾಶಕ ಕಳೆಗಳಿಗೆ ಅಗತ್ಯವಿದ್ದರೆ ಮಾತ್ರ ಬಳಕೆ ಮಾಡುವುದು ಸೂಕ್ತ.

ಬಹುಷಃ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವ ಪ್ರತೀಯೊಬ್ಬ ಕಳೆನಾಶಕ ಬಳಕೆದಾರನಿಗೂ ಈ ಸಂದೇಶ ತಲುಪಿರಬಹುದು. ಜನ ರೌಂಡ್‍ಅಪ್ ಬೇಡ, ಬೇರೆ ಕಳೆನಾಶಕ ಕೊಡಿ ಎನ್ನುವಷ್ಟರ ಮಟ್ಟಿಗೆ ಈ ಮಾಹಿತಿ ತನ್ನ ಪ್ರಭಾವವನ್ನು ಬೀರಿದೆ.

 • ಬಹುಷಃ ನಮ್ಮ ಜನ ಒಂದು ಸುದ್ದಿಯನ್ನು ಎಷ್ಟರ ಮಟ್ಟಿಗೆ ನಂಬುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ.
 • ಕೃಷಿಕರು- ಕೃಷಿ ಕೂಲಿ ಕಾರ್ಮಿಕರು, ದಾರಿ ಹೋಕರೂ ಸಹ ಕಳೆನಾಶಕ ಹೊಡೆದರೆ ಕ್ಯಾನ್ಸರ್ ಬರುತ್ತದಂತೆ ಎನ್ನುವಷ್ಟರ ಮಟ್ಟಿಗೆ, ಸುದ್ದಿಗಳು ಸುಗಂಧವನ್ನು ಪಸರಿಸಿದೆ.

 ಸೆನ್ಸಿಟಿವ್ ಸುದ್ದಿಗಳು:

ಈಗಿನ ಜನರೇ ಹಾಗೆ. ಸೆನ್ಸಿಟಿವ್ ಸುದ್ದಿಗಳನ್ನು ಬೇಗ ಗ್ರಹಿಸುತ್ತಾರೆ. ಅದನ್ನು ವಿಮರ್ಶೆ  ಮಾಡುವ ಗೋಜಿಗೇ ಹೋಗುವುದಿಲ್ಲ. ಅದನ್ನು ಮತ್ತು ಮತ್ತೂ ಸುದ್ದಿ ಪ್ರಸಾರ ಮಾಡುವುದರಲ್ಲೇ ಇರುತ್ತಾರೆ. ಮೂಲ ಸುದ್ದಿ ಏನು? ಎಂಬುದರ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.

 • ರೌಂಡ್ ಅಪ್ ಇದು ಒಂದು ಕಳೆ ನಾಶಕದ ಬ್ರಾಂಡ್ ಅಷ್ಟೇ.
 • ಇದನ್ನು  ಮಾನ್ಸಂಟೋ ಎಂಬ ಅಮೇರಿಕಾ ಕಂಪೆನಿಯು ತಯಾರಿಸಿ ಮಾರಾಟ ಮಾಡುತ್ತದೆ.
 • ರೌಂಡ್ ಅಪ್ ಒಂದು ಕಳೆ ನಾಶಕದ ಬ್ರಾಂಡ್ ಅಷ್ಟೇ ಹೊರತಾಗಿ ಅದೇ ಒಂದು ಕಳೆ ನಾಶಕ ಅಲ್ಲ.
 • ಇದರಲ್ಲಿ ಇರುವ ಮೂಲವಸ್ತು  ಗ್ಲೈಪೋಸೆಟ್ 41 % ಇದು ಕಳೆಗಳನ್ನು ಕೊಲ್ಲುವ ಕೆಲಸವನ್ನು ಮಾಡುತ್ತದೆ.
 • ಇದನ್ನು ಕೇವಲ ಮಾನ್ಸಂಟೋ ಕಂಪೆನಿ ಮಾತ್ರ ತಯಾರು  ಮಾಡುವುದಲ್ಲ.
 • ಬೇರೆ ಬೇರೆ ಕಂಪೆನಿಗಳೂ ಬೇರೆ ಬೇರೆ  ಬ್ರಾಂಡ್ ಹೆಸರಿನಲ್ಲಿ  ತಯಾರಿಸಿ ಮಾರಾಟ ಮಾಡುತ್ತವೆ.
 • ಅದರಲ್ಲೂ ಇರುವುದು ಗ್ಲೈಪೋಸೆಟ್ ಅಂಶ, ಇದರಲ್ಲೂ ಇರುವುದು ಗ್ಲೈಪೋಸೆಟ್.
 • ಹಾಗಿರುವಾಗ ಒಂದು ಕಂಪೆನಿಯ ಬ್ರಾಂಡ್ ಮಾತ್ರ ಕ್ಯಾನ್ಸರ್ ಕಾರಕವಾಗುವುದು ಹೇಗೆ, ಉಳಿದವುಗಳ ಬಗ್ಗೆ ಜನ ಯಾಕೆ ಮೌನವಾಗಿದ್ದಾರೆ ಎಂದು ತಿಳಿಯುವುದಿಲ್ಲ.
 • ಇದೆಲ್ಲವೂ ಸುದ್ದಿಗಳ ಪ್ರಭಾವವೇ ಹೊರತು ಮತ್ತೇನಲ್ಲ.
 • ಇದನ್ನೇ  ಕೆಲವು ತಯಾರಕರು ಹುಡಿ, ಹರಳು, ಸಣ್ಣ ಕಡ್ಡಿ(ಶ್ಯಾವಿಗೆ) ಗಾತ್ರದಲ್ಲಿ  ಒದಗಿಸುತ್ತಾರೆ.
 • ಅಮೇರಿಕಾದ ಮೋನ್ಸಾಂಟೋ ಅಲ್ಲದೆ  ಭಾರತದಲ್ಲೂ  ಇದನ್ನು ಬೇರೆ ಬೇರೆ ತಯಾರಕರು ಉತ್ಪಾದಿಸಿ ಮಾರುಕಟ್ಟೆ ಮಾಡುತ್ತಾರೆ.
 • ಅದರಲ್ಲೂ ಇದರಲ್ಲೂ ಇರುವ ಕ್ರಿಯಾಶೀಲ ಅಂಶ ಒಂದೇ ಆಗಿರುತ್ತದೆ.

ಹಾಗೆಂದು ಕಳೆ ನಾಶಕಗಳು ಸುರಕ್ಷಿತವಲ್ಲ. ತೀರಾ ವಿಷಕಾರಿ ಅಥವಾ ಹಾನಿಕಾರಕ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಹಾನಿಕರವೇ. ಅದಕ್ಕಾಗಿ ಅದನ್ನು ಸುರಕ್ಷಿತ ಮುನ್ನೆಚ್ಚರಿಕೆ ವಹಿಸಿ ಸಿಂಪರಣೆ ಮಾಡಬೇಕು. ನಂತರ ನಿರ್ವಹಣೆಯನ್ನೂ ಮಾಡಬೇಕು. ಮನಬಂದಂತೆ ಸಿಂಪರಣೆ ಮಾಡಿದರೆ ಅದು ಸಿಂಪಡಿಸಿದವರಿಗೆ ಅಪಾಯಕಾರಿಯಾಗಬಹುದು.

 ಸುರಕ್ಷಾ ಕ್ರಮ ಏನು:

 •  ಕಳೆನಾಶಕವನ್ನು ನೀರಿಗೆ  ಹಾಕುವಾಗ ಅದು ದ್ರವ ಆಗಿರಲಿ, ಪುಡಿ ಆಗಿರಲಿ ಅದಕ್ಕೆ  ಮೂಗು, ಕಣ್ಣು, ಬಾಯಿ ಸಂಪರ್ಕ ಆಗದಂತೆ ನೋಡಿಕೊಳ್ಳಿ. ಅದನ್ನು ಉಸಿರಾಟದೊಂದಿಗೆ ತೆಗೆದುಕೊಳ್ಳಬೇಡಿ.
 •  ಮಿಶ್ರಣ ಮಾಡುವಾಗ ಕೈಯಿಂದ ಕಲಕಬೇಡಿ. ಸೂಕ್ತ ಕಲಕುವ ಸಾಧನವನ್ನು ಇಟ್ಟುಕೊಳ್ಳಿ. ಅದರ ಮೂಲಕ ಕಲಕಿರಿ.
 •  ಮೈ ಕೈಗೆ ತಗಲದಂತೆ ಗ್ಲೌಸ್ ಹಾಕಿಕೊಳ್ಳಿ. ಸಿಂಪರಣೆ ಮಾಡುವಾಗ ಗಾಳಿಯ  ಸಂಚಾರಕ್ಕೆ  ವಿರುದ್ಧವಾಗಿ ಹೋಗಬೇಡಿ. ಅದು ಮೈ ಕೈಗೆ  ಬೀಳುತ್ತದೆ. ಕಾಲಿಗೆ  ತಗಲದಂತೆ ಬೂಟನ್ನು ಧರಿಸಬೇಕು.
 •  ಒಂದೊಂದೇ ಸಾಲಿನಲ್ಲಿ ಸಿಂಪಡಿಸುತ್ತಾ ಹಿಂದೆ ಹಿಂದೆ ಬರಬೇಕು. ಆಗ ಚರ್ಮಕ್ಕೆ ತಗಲಾರದು.
 •  ಸಿಂಪರಣೆಗೆ ಉತ್ತಮ ನಾಸಲ್ ಬಳಕೆ ಮಾಡಿ. ಕಡಿಮೆ ಸಾಂದ್ರತೆಯಲ್ಲಿ ಸಿಂಪಡಿಸುವ ಮೈಕ್ರಾನ್ ಸ್ಪ್ರೇಯರ್ ಆದರೆ ಒಳ್ಳೆಯದು.
 •  ಕಳೆನಾಶಕ ತುಂಬಿದ ಸ್ಪ್ರೇಯರಿನ ಒಳ ಭಾಗವನ್ನು ಚೆನ್ನಾಗಿ ತೊಳೆದು ಒಂದೆರಡು ಬಾರಿ ಪ್ಲಶ್ ಮಾಡಿ ದ್ರಾವಣದ ಅಂಶ ಉಳಿಯದಂತೆ ನೋಡಿಕೊಳ್ಳಿ.
 • ತೇವಾಂಶ ಇರುವ ಸಮಯದಲ್ಲಿ ಸಿಂಪರಣೆ ಮಾಡಿ.
 • ನೆಲ ಒಣಗಿದ್ದಾಗ ಸಿಂಪರಣೆ  ಮಾಡಿದರೆ  ಫಲ ಕಡಿಮೆ.
 • ಸಿಂಪರಣೆ ಮಾಡಿ 3-6 ತಾಸು ನೀರು ಹಾಯಿಸಬಾರದು. ಮಳೆ ಬರಬಾರದು.
 • ದ್ರಾವಣದೊಂದಿಗೆ ಉಪ್ಪು ಅಥವಾ ಯೂರಿಯಾ ಅಥವಾ ಸಕ್ಕರೆಯನ್ನು ಸೇರಿಸಿದರೆ ಫಲಿತಾಂಶ ಉತ್ತಮವಾಗಿರುತ್ತದೆ.
 • ಉತ್ತಮ ಸ್ಪ್ರೆಡ್ಡರನ್ನು ಸೇರಿಸಿದರೆ  ಕಡಿಮೆ ಪ್ರಮಾಣದ ಕಳೆನಾಶಕ ಬಳಕೆ ಸಾಕಾಗುತ್ತದೆ.
 • ಸಿಂಪರಣೆ ಮಾಡುವಾಗ ಚರ್ಮಕ್ಕೆ ತಗಲುವ ಸಂಭವ ಇದ್ದಲ್ಲಿ ಆ ಭಾಗಕ್ಕೆಲ್ಲಾ ತೆಂಗಿನೆಣ್ಣೆ ಸವರಿಕೊಂಡು ಸಿಂಪರಣೆ  ಮಾಡಿ.
 • ಮಕ್ಕಳಿಗೆ ಸಿಗದಂತೆ ನೋಡಿಕೊಳ್ಳಿ. ಸುರಕ್ಷಿತ ಜಾಗದಲ್ಲಿಡಿ.
 • ಮೈಗೆ ಬಟ್ಟೆ ಧರಿಸಿದ್ದರೆ ಅದು ಒದ್ದೆಯಾಗಿ ಚರ್ಮಕ್ಕೆ ಕಳೆನಾಶಕ ದ್ರಾವಣ ಚೆಲ್ಲದಂತೆ ಜಾಗರೂಕತೆ ವಹಿಸಬೇಕು.

ತೀರಾ ಅಗತ್ಯವಾದಲ್ಲಿ ಮಾತ್ರ ಸಿಂಪರಣೆ ಮಾಡಿ:

 • ಕಳೆಗಳಲ್ಲಿ ಕೆಲವು ಯಾವುದೇ ನಿರ್ವಹಣೆಗೂ ಬಗ್ಗದ ಕಳೆಗಳಿರುತ್ತವೆ.
 • ಇವುಗಳನ್ನು  ಪಶುಗಳೂ ಸೇವಿಸುವುದಿಲ್ಲ.
 • ಕೊಚ್ಚಿ ಹಾಕಿದರೂ ಅದು ಹುಟ್ಟಿಕೊಳ್ಳುತ್ತದೆ.
 • ಕೃಷಿಗೆ ಅಡ್ಡಿಯಾಗುತ್ತದೆ ಎಂಬ ಕಳೆಗಳನ್ನು ಮಾತ್ರ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕಳೆನಾಶಕ ಸಿಂಪಡಿಸಿ.
 • ಪಶುಗಳು ತಿನ್ನುವ, ನೆಲಕ್ಕೆ ಹಾಸಲಾಗಿ ರಕ್ಷಣೆ ಕೊಡುವ ಕಳೆಗಳನ್ನು ಸವರಿ ನಿಯಂತ್ರಣ ಮಾಡಿ.
 • ಕಳೆನಾಶಕಗಳು ಯಾವುದೂ ಕಳೆ ನಾಶಕಗಳಲ್ಲ. ಅವೆಲ್ಲಾ ತಾತ್ಕಾಲಿಕ ಕಳೆ ನಿಯಂತ್ರಕಗಳು.
 • ಸ್ವಲ್ಪ ಸಮಯದ ತನಕ ಅದು ಕಳೆಗಳನ್ನು ಕಡಿಮೆ ಮಾಡುತ್ತದೆ.
 • ನಂತರ ಹಿಂದಿಗಿಂತ ಹೆಚ್ಚು ಕಳೆಗಳು ಹುಟ್ಟಿಕೊಳ್ಳುತ್ತವೆ.
 • ಬೇರೆ ಬಗೆಯ ಕಳೆಗಳು ಹುಟ್ಟಿಕೊಳ್ಳುತ್ತವೆ. ಕಳೆನಿಯಂತ್ರಕಗಳಲ್ಲಿ ಹಾಲಿ ಇರುವ ಕಳೆಗಳನ್ನು ಕೊಲ್ಲುವ ಕಳೆಗಳನ್ನು ಬಳಸಿದರೆ ಇದ್ದ ಕಳೆ ಮಾತ್ರ ಸಾಯುತ್ತದೆ.
 • ಗಾಳಿಯಲ್ಲಿ ಬಂದ ಬೀಜ ಮತ್ತೆ ಹುಟ್ಟಿಕೊಳ್ಳುತ್ತದೆ.
 • ಕಳೆ ಬೀಜಗಳೂ ಸಾಯುವ ಕಳೆ ನಿಯಂತ್ರಕಗಳು ಸಿಂಪಡಿಸಿದ ಸಮಯದಲ್ಲಿ ಇದ್ದ ಬೀಜಗಳನ್ನು ನಾಶಮಾಡುತ್ತದೆ.
 • ನಂತರ ಗಾಳಿಯ ಮೂಲಕ ಬರುವ ಕಳೆಗಳೂ ಹುಟ್ತುತ್ತವೆ.
 • ಕಳೆ ಎಂಬುದು ಪ್ರಕೃತಿಯ ಸೃಷ್ಟಿ. ಇದನ್ನು ಮಾನವ ಮಾತ್ರರಿಂದ ನಾಶ ಮಾಡಲು ಸಾಧ್ಯವಿಲ್ಲ.
 • ಬೇಸಿಗೆಯಲ್ಲಿ ತೇವಾಂಶ ಸಂರಕ್ಷಣೆಗೆ ಕಳೆ  ಬೇಕು. ಮಳೆಗಾಲದಲ್ಲಿ ಮಣ್ಣು ಸಂರಕ್ಷಣೆಗೆ ಕಳೆ ಹೊದಿಕೆ ಬೇಕು.

ತಯಾರಕರ ತಪ್ಪು ಇದೆ:

 • ಕಳೆ ನಾಶಕ ಅಥವಾ ಕಳೆ ನಿಯಂತ್ರಗಳ ಪ್ಯಾಕೆಟ್ ಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.
 • ಸುರಕ್ಷಿತವಾಗಿ ಸಿಂಪಡಿಸುವ ಬಗ್ಗೆ ಸಹ ಸಲಹೆಗಳು ಇಲ್ಲ.
 • ಇದರಿಂದಾಗಿ ಆಗುವ ಅಡ್ಡ ಪರಿಣಾಮ, ಉಳಿಕೆ ಅವಧಿ ಬಗ್ಗೆಯೂ ಯಾವ ಪ್ರಸ್ತಾಪವೂ ಇಲ್ಲ.
 • ಯಾವುದೇ ಒಂದು ತಯಾರಿಕೆ ಇದ್ದರೂ ಅದನ್ನು ಬಳಸುವಾಗ ಏನಾದರೂ ವ್ಯತ್ಯಯವಾದರೆ ಅಂತಹ ಸಂಧರ್ಭಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಅವರು ಅಧ್ಯಯನ ಮಾಡಿ ಅದನ್ನು ಬಳಕೆದಾರರಿಗೆ ತಿಳಿಸಬೇಕು.
 • ಅದನ್ನು ಎಲ್ಲವನ್ನೂ ಗಾಳಿಗೆ ತೂರಿ ಕಳೆನಾಶಕಗಳು ಮಾರುಕಟ್ಟೆ ಪ್ರವೇಶಿಸಿವೆ.

ಸೂಕ್ತ ಮುನ್ನೆಚ್ಚರಿಕೆ ವಹಿಸಿ ಯಾವುದೇ ರಾಸಾಯನಿಕ ಕೀಟನಾಶಕ , ರೋಗನಾಶಕ , ಕಳೆ ನಾಶಕ ಬಳಸುವುದು ನಮ್ಮ ಕರ್ತವ್ಯ. ಅದನ್ನು ಮಾಡದಿರುವುದು ಅನಾಹುತಗಳಿಗೆ ಕಾರಣ.ಕಳೆ ನಾಶಕ ಬಳಕೆ ಯಾವಾಗಲೂ ಅನಿವಾರ್ಯತೆ ಇದ್ದಾಗ ಮಾತ್ರ ಮಾಡಬೇಕು. ಬದಲಿ ವ್ಯವಸ್ಥೆಗಳಿದ್ದರೆ ಅದರಲ್ಲೇ ಕಳೆ ನಿಯಂತ್ರಣ ಮಾಡಬೇಕು.ತರಬೇತಿ ಇರುವವವ ಮೂಲಕ ಸಿಂಪರಣೆ ಮಾಡಿಸಬೇಕು. ಪವರ್ ಸ್ಪ್ರೇಯರ್ ಹಾಗೂ ಅತೀ ಒತ್ತಡದಲ್ಲಿ ಹೊರ ಚೆಲ್ಲುವ ಸಿಂಪರಕಗಳನ್ನು ಬಳಸಿ ಸಿಂಪರಣೆ ಮಾಡಿದರೆ ತಪ್ಪುಗಳು ಆಗುವುದು ಸಹಜ. ಹಾಗಾಗಿ ಮಾನವ ಶ್ರಮದ ಅಥವಾ ಸಾಮಾನ್ಯ ಸಿಂಪರಕಗಳ ಮೂಲಕ ಸಿಂಪರಣೆ ಮಾಡಿದರೆ ಜಾಗರೂಕತೆ ವಹಿಸಲು ಸಾಧ್ಯ.

Leave a Reply

Your email address will not be published. Required fields are marked *

error: Content is protected !!