ರತ್ನಗಿರಿ ಅಲ್ಫೋನ್ಸ್ ಮಾವು – ಹೇಗೆ ಬೆಳೆಯುತ್ತಾರೆ? ಯಾಕೆ ರುಚಿ?

ರತ್ನಗಿರಿ ಅಲ್ಫೊನ್ಸ್ ಹಣ್ಣು
ನಾವೆಲ್ಲಾ ರತ್ನಗಿರಿ ಅಲ್ಫೋನ್ಸ್ ಮಾವಿನ ಹಣ್ಣು ಕೇಳಿದ್ದೇವೆ. ಇದರ ರುಚಿಗೆ ಸರಿಸಟಿಯಾದ ಮಾವು ಬೇರೊಂದಿಲ್ಲ ಎಂಬ ಹೆಗ್ಗಳಿಕೆಯೂ ಇದೆ. ಭಾರತದಿಂದ ರಪ್ತು ಆಗುವ ಮಾವುಗಳ ಸಾಲಿನಲ್ಲಿ ಈ ಅಲ್ಫೋನ್ಸ್ ಹಣ್ಣೇ ಅತ್ಯಧಿಕ. ಮಹಾರಾಷ್ಟ್ರದಲ್ಲಿ ರತ್ನಗಿರಿ ಅಲ್ಫೋನ್ಸ್ ಬೆಳೆಯುವ ಜಾಗ ಹೇಗಿದೆ? ಹೇಗೆ ಬೆಳೆಯುತ್ತಾರೆ. ಯಾಕೆ ಅದು ರುಚಿಯಾಗಿರುತ್ತದೆ ಎಂಬುದರ ಎಲ್ಲಾ ಮಾಹಿತಿ ಇಲ್ಲಿ ಇದೆ.
ಭೌಗೋಳಿಕ ಸ್ಥಿತಿಯು ಪ್ರತಿಯೊಂದು ಬೆಳೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಭೌಗೋಳಿಕ ಸ್ಥಿತಿಗತಿಗೆ ಸಮನಾಗಿರುವ ಇನ್ನೊಂದು ಪ್ರದೇಶದಲ್ಲಿ ಅದನ್ನು  ಬೆಳೆಸಿದರೆ ಸುಮಾರಾಗಿ ಸಾಮ್ಯತೆ ಬರಬಹುದು.
 • ಮಾವಿನ ಬೆಳೆ ಅಧಿಕ ಮಳೆಯಾಗುವ ಸ್ಥಳದಲ್ಲಿ ಚೆನ್ನಾಗಿ ಬರುವುದಿಲ್ಲ ಎಂಬ ಮಾತಿದೆ.
 • ಆದರೆ ಅಲ್ಫೋನ್ಸೋ ಮಾವನ್ನು ಮಹಾರಾಷ್ಟ್ರದ ಅಧಿಕ ಮಳೆಯಾಗುವ ತೀರ ಪ್ರದೇಶಗಳಾದ ವೆಂಗುರ್ಲಾ, ರತ್ನಗಿರಿ ಮುಂತಾದ  ಕಡೆ ಬೆಳೆಸುತ್ತಾರೆ.
 • ಆ ಮಾವಿಗೆ ಮಳೆಯ ಕಾರಣದಿಂದ  ಗುಣಮಟ್ಟಕ್ಕೆ  ಯಾವುದೇ ಕೊರತೆ ಆಗಲಿಲ್ಲ. ಕಾರಣ ಇದು.

ಯಾವುದೇ ಬೆಳೆಯನ್ನು ಅದಕ್ಕೆ ಹೊಂದುವ ಪ್ರದೇಶದಲ್ಲೇ  ಬೆಳೆಯಬೇಕು. ಅಲ್ಲಿ ಅದು  ಉತ್ತಮವಾಗಿ ಬರುತ್ತದೆ. ಮಾವು, ಗೇರು ಒಣ ಪ್ರದೇಶಕ್ಕೆ ಹೊಂದುವ ಬೆಳೆ. ಅಂಥಹ ಪ್ರದೇಶಗಳಲ್ಲಿಯೇ  ಬೆಳೆಸಿದರೆ ಗುಣಮಟ್ಟ ಮತ್ತು ಇಳುವರಿ  ಎರಡೂ ಉತ್ತಮವಾಗಿರುತ್ತದೆ.

 • ಅಡಿಕೆ ಬೆಳೆಯನ್ನು ಎಲ್ಲಾ ಪ್ರದೇಶಗಳಲ್ಲೂ  ಬೆಳೆಯಬಹುದಾದರೂ ಕೆಲವು ನಿರ್ಧಿಷ್ಟ ಮಣ್ಣಿನಲ್ಲಿ ಅದು ಕಡಿಮೆ ಆರೈಕೆಯಲ್ಲೂ  ಚೆನ್ನಾಗಿ ಬರುತ್ತದೆ.
 • ಉದಾಹರಣೆಗೆ ವಿಟ್ಲ, ಕಾಸರಗೋಡಿನ ಅಡಿಕೆ. ಅಲ್ಲಿನ ಮಣ್ಣಿನ ಗುಣದ ಕಾರಣ ಆ ಪ್ರದೇಶದ ಅಡಿಕೆಯ ಗುಣಮಟ್ಟ ಉತ್ಕೃಷ್ಟ ಮತ್ತು ಬೆಲೆ- ಬೇಡಿಕೆ ಅಧಿಕ.

ಮಹಾರಾಷ್ಟ್ರದ ಕೊಂಕಣ ಸೀಮೆಯ ಮಣ್ಣು ಇಂತದ್ದೇ. ಇಲ್ಲಿ ಇರುವುದು ಹಾಸು ಜಂಬಿಟ್ಟಿಗೆ ಕಲ್ಲಿನ ಮಣ್ಣು. ಇಲ್ಲಿ ಕರಾವಳಿಯಲ್ಲಿ ಬೆಳೆಯಲ್ಪಡುವ ಎಲ್ಲಾ ಬೆಳೆಗಳನ್ನೂ ಬೆಳೆಸಲಾಗುತ್ತದೆ. ಆದರೆ ಅದರ ಗುಣಮಟ್ಟ ಮಾತ್ರ ಭಿನ್ನವಾಗಿರುತ್ತದೆ. ವೆಂಗುರ್ಲಾ ತಳಿಯ ಗೇರನ್ನು ತಂದು ಬೇರೆ ಕಡೆ ಬೆಳೆಸಿದಾಗಲೂ ಆ ಗುಣಮಟ್ಟವನ್ನು ಬೇರೆಡೆ ಪಡೆಯಲಿಕ್ಕಾಗುವುದಿಲ್ಲ. ಅದೇ ರೀತಿಯಲ್ಲಿ ಕೊಂಕಣ ಸೀಮೆಯ  ರತ್ನಗಿರಿ ಹೆಸರಿನ ಅಡಿಕೆ ತಳಿಗೂ ಮಾರುಕಟ್ಟೆಯಲ್ಲಿ  ವಿಶೇಷ ಹೆಸರು ಇದೆ.

ರತ್ನಗಿರಿ ಅಲ್ಫೊನ್ಸ್ ಮಾವಿನ ಮರ       
ಯಾಕೆ ವಿಶೇಷ:

 • ಅಲ್ಫೋನ್ಸೋ ಬೆಳೆಯುವ ರತ್ನಗಿರಿ, ವೆಂಗುರ್ಲಾ ಕಡೆಯಲ್ಲಿ  ಮಾವು ಬೆಳೆಯನ್ನು  ಹಾಸು ಜಂಬಿಟ್ಟಿಗೆ  ಮಣ್ಣಿನಲ್ಲಿ ಮಾತ್ರ ಬೆಳೆಸುತ್ತಾರೆ.
 • ಮಾವು ಬೆಳೆಯಲು ಪ್ರಶಸ್ತವಾದ ಭೂಮಿಗೆ ಇಲ್ಲಿ ಎಕ್ರೆಗೆ  25-30 ಲಕ್ಷಕ್ಕೂ ಹೆಚ್ಚಿನ ಬೆಲೆ  ಇದೆ.
 • ವೆಂಗುರ್ಲಾದ  ಪ್ರಾದೇಶಿಕ ಹಣ್ಣು ಸಂಶೋಧನಾ ಕೇಂದ್ರದ  ವಿಜ್ಞಾನಿಗಳಾದ ಶ್ರೀ ವಾಲಿಯವರು ಹೇಳುವಂತೆ  ಎಲ್ಲಿ ಜಂಬಿಟ್ಟಿಗೆ ಕಲ್ಲುಗಳಿಂದ ಕೂಡಿದ ಮಣ್ಣು ಇದೆಯೋ ಅಲ್ಲಿ ಬೆಳೆದ ಮಾವು ಮಾತ್ರ ತಾಜಾ ರತ್ನಗಿರಿ ಅಲ್ಫೋನ್ಸ್ ಆಗುತ್ತದೆ.
 • ಬೆಳೆಯುವವರು ಇದನ್ನು ಅಂತಹ ಸ್ಥಳದಲ್ಲಿ ಮಾತ್ರ ಬೆಳೆಸುತ್ತಾರೆ.
 • ತಗ್ಗು ಪ್ರದೇಶಗಳಲ್ಲಿ ಬೆಳೆದ ಮಾವಿಗೆ  ಬೆಲೆಯೂ ಅಷ್ಟು ಇರುವುದಿಲ್ಲ.

 ಹೇಗೆ ಬೆಳೆಯುತ್ತಾರೆ:

ನೆಡುವ ವಿಧಾನ
ನೆಡುವ ವಿಧಾನ
 • ಹಾಸು ಜಂಬಿಟ್ಟಿಗೆ ಮಣ್ಣು , ಉಂಡೆ ಜಂಬಿಟ್ಟಿಗೆ  ಕಲ್ಲುಗಳೇ ತುಂಬಿರುವ ಸ್ಥಳದಲ್ಲಿ ಕಂಪ್ರೆಸ್ಸರ್ ಯಂತ್ರದ ಮೂಲಕ ಮಣ್ಣನ್ನು ಪುಡಿಗಟ್ಟಿ ಏಳಿಸಲಾಗುತ್ತದೆ.
 • ಸುಮಾರು 10-15 ಅಡಿ ಸುತ್ತಳತೆಯಲ್ಲಿ ಕಲ್ಲನ್ನು 3 ಅಡಿ ಆಳಕ್ಕೆ ಎಬ್ಬಿಸುತ್ತಾರೆ.
 • ನಂತರ ಮಧ್ಯಭಾಗದಲ್ಲಿ ಮತ್ತೆ  3 ಅಡಿ ಆಳಕ್ಕೆ ಸುಮಾರು 4-5 ಅಡಿ ಸುತ್ತಳತೆಯ ಹೊಂಡವನ್ನು  ಮಾಡುತ್ತಾರೆ.
 • ಇದನ್ನು ಕಲ್ಲು ಏಳಿಸುವ ಸಮಯದಲ್ಲಿ ದೊರೆಯುವ ಹುಡಿ ಮಣ್ಣಿನಿಂದ ತುಂಬಿಸುತ್ತಾರೆ.
ನೆರಳು ಬೀಳುವ ಈ ಜಾಗಕ್ಕೆ ಹಾರ್ಮೊನು ಹಾಕುತ್ತಾರೆ.
ನೆರಳು ಬೀಳುವ ಈ ಜಾಗಕ್ಕೆ ಹಾರ್ಮೊನು ಹಾಕುತ್ತಾರೆ.
 • ನಂತರ ಮೇಲು ಭಾಗದ 3 ಅಡಿ ಆಳದ ಹೊಂಡವನ್ನು ಉಳಿದಿರುವ ಜಂಬಿಟ್ಟಿಗೆ  ಕಲ್ಲಿನ ಹುಡಿ ಮಣ್ಣು ಮತ್ತು ಮಿಗತೆ ಬೇಕಾದರೆ  ಹೊರಗಡೆಯಿಂದ ಮಣ್ಣು ತಂದು  ತುಂಬಿಸಿ ನೆಲಮಟ್ಟದಿಂದ  2  ಅಡಿ ಎತ್ತರಕ್ಕಿರುವಂತೆ  ಮಾಡಿ ಸಸಿಯನ್ನು  ನೆಡುತ್ತಾರೆ.
 • ಸಸಿ ನೆಟ್ಟು  ನೀರಾವರಿ ವ್ಯವಸ್ಥೆಯನ್ನೂ ಮಾಡುತ್ತಾರೆ. ಸುತ್ತಲೂ ಜಂಬಿಟ್ಟಿಗೆ  ಕಲ್ಲು ಕಟ್ಟಿ ಕಟ್ಟೆ  ರಚನೆ ಮಾಡುತ್ತಾರೆ.ಸಸಿ ನೆಡುವುದು ಎಲ್ಲಾ ಖರ್ಚು ಸೇರಿ ಸುಮಾರು 5000 ಕ್ಕೂ ಹೆಚ್ಚು ಖರ್ಚು ತಗಲುತ್ತದೆ.
 • ಸಸಿಗೆ ಎರಡು ರೂಟ್ ಸ್ಟಾಕ್ ಮೇಲೆ  ಒಂದು ಸಸಿ ಇರುವಂತೆ  ಕಸಿ ಮಾಡಲ್ಪಟ್ಟ ಸಸಿಯನ್ನು ನೆಡುವುದು ಜಾಸ್ತಿ.
ಒಂದು ವರ್ಷ ತುಂಬುವಾಗ ಇಷ್ಟು ಬೆಳೆಯುತ್ತದೆ.
ಒಂದು ವರ್ಷ ತುಂಬುವಾಗ ಇಷ್ಟು ಬೆಳೆಯುತ್ತದೆ.

 ಮಣ್ಣು ಹವಾಗುಣ ಕಾರಣ:

 • ಇಲ್ಲಿನ ಮಣ್ಣು, ಹವಾಗುಣದ ಮೇಲೆ ಈ ಮಾವಿಗೆ ಉತ್ತಮ ರುಚಿ, ಸುವಾಸನೆ ಇರುತ್ತದೆ.
 • ಇದೇ ಸಸಿಯನ್ನು  ತಗ್ಗಿನ ಜಾಗದಲ್ಲಿ  ನೆಟ್ಟರೆ ಈ ಗುಣ ಬರುವುದಿಲ್ಲ ಎಂಬುದು ಅಲ್ಲಿನ ಹಣ್ಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಅಭಿಪ್ರಾಯ.
 • ಇಲ್ಲಿ ಕಡಿದಾದ ಎತ್ತರ ಗುಡ್ದ  ಪ್ರದೇಶಗಳಲ್ಲಿ  ಮಾವು, ಗೇರು ಬೆಳೆಸುತ್ತಾರೆ.
 • ತಗ್ಗು ಸ್ಥಳದಲ್ಲಿ ತೆಂಗು, ಅಡಿಕೆ ಬೆಳೆಸುತ್ತಾರೆ.
 • ಎಲ್ಲೆಡೆಯೂ ಜಂಬಿಟ್ಟಿಗೆ  ಮಣ್ಣೇ ಇರುವ ಕಾರಣ ಫಸಲಿನ ಗುಣಮಟ್ಟ ಉತ್ತಮವಾಗಿರುತ್ತದೆ.
 • ಹೂವು ಬೇಗ ಬರಲಿಕ್ಕಾಗಿ ಬಹುತೇಕ ಎಲ್ಲಾ ಬೆಳೆಗಾರರೂ  ಕಲ್ಟಾರ್ ಎಂಬ ಬೆಳವಣಿಗೆ ಪ್ರಚೋದಕವನ್ನು ಬಳಕೆ ಮಾಡುತ್ತಾರೆ. Cultar, Plant Growth Regulator  Paclobutrazol 23%
 • ಇದರಿಂದ ವರ್ಷವೂ ಏಕ ಪ್ರಕಾರ ಹೂ ಬಿಟ್ಟು ಕಾಯಿಯಾಗುತ್ತದೆ.
 • ಮರದ ನೆರಳು ಎಷ್ಟು ದೂರಕ್ಕೆ ಬೀಳುತ್ತದೆ ಆ ಭಾಗದಲ್ಲಿ ಈ ಬೆಳವಣಿಗೆ ಪ್ರಚೋದಕವನ್ನು ವೈಜ್ಞಾನಿಕ ರೀತಿಯಲ್ಲಿ ಹಾಕಬೇಕು.
ಫಸಲು ತುಂಬಿದ ಮರ
ಫಸಲು ತುಂಬಿದ ಮರ

ಇದೇ ತೆರನಾದ ಭೂ ಪ್ರಕೃತಿ ಉಳ್ಳ, ಅಂಕೋಲಾದ ಸುತ್ತಮುತ್ತ ಕರೇ ಈಶಾಡ್ ಎಂಬ ಮಾವನ್ನು  ಬೆಳೆಸುತ್ತಾರೆ. ಇದಕ್ಕೂ ಅಲ್ಫೋನ್ಸ್ ಮಾವಿನ ಗುಣಮಟ್ಟ ಭೌಗೋಳಿಕ ಸ್ಥಿತಿಗತಿಯಿಂದ ಬಂದಿದೆ.

 ಮಣ್ಣಿನ ಗುಣದಿಂದ ಅದರಲ್ಲೂ ಜಂಬಿಟ್ಟಿಗೆ  ಮಣ್ಣು ಅದರ ವಿಶೇಷ ಗುಣ, ಬೆಳೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೆಲ್ಲಾ ಒಂದು ಉದಾಹರಣೆಗಳು.

Leave a Reply

Your email address will not be published. Required fields are marked *

error: Content is protected !!