ಕಳೆ ನಿಯಂತ್ರಣ ಮಾಡುವ ಸುರಕ್ಷಿತ ವಿಧಾನಗಳು.

weedicide spraying

ಬೆಳೆಗಳಿಗೆ ನಾವು ಕೊಡುವ ಪೋಷಕಗಳು ಅವುಗಳಿಗೇ ದೊರೆತು ಫಲ ಸಿಗಬೇಕಾದರೆ  ಕಳೆ ನಿಯಂತ್ರಣ ಅತ್ಯಗತ್ಯ.

ಕಳೆ ನಿಯಂತ್ರಣಕ್ಕೆ ಇರುವ ವಿಧಾನಗಳಲ್ಲಿ,  ಕೆಲವು ಬೇಸಾಯ ಕ್ರಮಗಳು, ಮತ್ತೆ ಕೆಲವು ಹತ್ತಿಕ್ಕುವ ತಂತ್ರಗಳು, ಹಾಗೆಯೇ ಕೊನೆಯ ಅಸ್ತ್ರವಾಗಿ ಕಳೆ ನಾಶಕಗಳನ್ನು ಬಳಕೆ ಮಾಡಲಾಗುತ್ತದೆ. ಕಳೆ ನಾಶಕಗಳಲ್ಲೂ ಬೆಳೆಗಳನ್ನು ಹೊಂದಿಕೊಂಡು ಅದಕ್ಕೆ ಸೂಕ್ತವಾದ  ಕಳೆ ನಾಶಕವನ್ನು ಮಾತ್ರ ಬಳಕೆ ಮಾಡಬೇಕು. ಯಾವಾಗಲೂ ಕಳೆ ನಿಯಂತ್ರಣ ಮಾಡುವುದಲ್ಲ. ಅದಕ್ಕೂ ನಿರ್ಧಿಷ್ಟ ಕಾಲಾವಧಿ  ಎಂಬುದು ಇದೆ.

ಕಳೆ ನಿಯಂತ್ರಣದ ಕೆಲವು ಉಪಾಯಗಳ ಬಗ್ಗೆ ಇಲ್ಲಿ ನಾವು ವಿವರವಾಗಿ ತಿಳಿಯೋಣ.

summer plough
ಮಾಗಿ ಉಳುಮೆ ಸುರಕ್ಷಿತ ಕಳೆ ನಿಯಂತ್ರಣ ವಿಧಾನ

ಮಾಗಿ ಉಳುಮೆ:

  •  ಬೆಳೆ ಕಟಾವಾದ ನಂತರ, ಭೂಮಿಯನ್ನು ಉಳುಮೆ ಮಾಡಿದರೆ ಭೂಮಿಯ ಕೆಳಭಾಗದಲ್ಲಿರುವ ಕಳೆಯ ಬೀಜಗಳು ಮೇಲ್ಬಾಗಕ್ಕೆ ಬಂದು ಬಿಸಿಲಿನ  ಹೊಡೆತಕ್ಕೆ ಸಿಕ್ಕಿ ಸಾಯುತ್ತವೆ.
  • ಕೆಲವು ಕಳೆ ಸಸ್ಯದ ಬೇರುಗಳು ಕಿತ್ತು ಬಂದು ಅದನ್ನು ಅಲ್ಲಿಂದ ಆರಿಸಿ ತೆಗೆಯಲು ಉಳುಮೆ ಮಾಡುವುದು ಸಹಾಯಕ.
  • ಇದರಿಂದ ಬೇಸಾಯದ  ಉಳುಮೆಗೂ ಮತ್ತು ಮಳೆಯ ನೀರು ಭೂಮಿಯೊಳಗೆ ಇಂಗಲು ಅನುಕೂಲವಾಗುತ್ತದೆ.
  • ಬಿತ್ತನೆ ಅಥವಾ ನಾಟಿ ಸಮಯದ  ಉಳುಮೆಯಿಂದ ಮೊಳೆತಿರುವ  ಕಳೆಗಳನ್ನು ಕೊಲ್ಲಬಹುದು.
  • ಈ ವಿಧಾನವನ್ನು ಅನುಸರಿಸಿದರೆ ಕಳೆಯ ಮೊಳೆಯುವಿಕೆಯನ್ನು ಶೇ.10 ರಿಂದ 15 ರಷ್ಟು ಕಡಿಮೆ ಮಾಡಬಹುದು.

ಸಾಲು ಬಿತ್ತನೆ ಕ್ರಮ:

  • ಸಾಲು ಬಿತ್ತನೆಯಿಂದ ಬೆಳೆಗಳ ಮಧ್ಯೆ ಇರುವು ಕಳೆಗಳನ್ನು ಮಧ್ಯಂತರ ಬೇಸಾಯದಿಂದ ನಿಯಂತ್ರಿಸಬಹುದು
  • ಸರಿಯಾದ ಬಿತ್ತನೆ ಪ್ರಮಾಣ ಅಥವಾ ಸಸಿಗಳ ಸಂಖ್ಯೆಯಿಂದ ಕಳೆಗಳ ಜೊತೆ ಹೆಚ್ಚು ಸ್ಪರ್ಧೆ ಮಾಡುವ ಶಕ್ತಿ ಬೆಳೆಗಳು ಹೊಂದಿರುತ್ತದೆ.

ಮಧ್ಯಂತರ ಬೇಸಾಯ ಹಾಗೂ ಕೈ ಕಳೆ ಮಾಡುವಿಕೆ:

Hand weeding
ಕೈಯಿಂದ ಕಳೆ ತೆಗೆಯುವುದು
  •  ಮಧ್ಯಂತರ ಬೇಸಾಯದಿಂದ ಸಾಲುಗಳ ಮಧ್ಯೆ ಇರುವ ಕಳೆಗಳಲ್ಲಿ ಸುಲಭವಾಗಿ ನಿಯಂತ್ರಿಸಬಹುದು.
  • ಕೈಕಳೆಯಿಂದ ಎಲ್ಲಾ ತರಹದ ಕಳೆಗಳನ್ನು ಎಲ್ಲಾ ಬೆಳೆಗಳಲ್ಲಿ ನಿಯಂತ್ರಿಸಬಹುದು.
  • ಎರಡು ಸಾರಿ ಕೈಕಳೆಯನ್ನು ಬೆಳೆಗಳಲ್ಲಿ ಮೊದಲ 15-20 ದಿವಸದಲ್ಲಿ ಮತ್ತು 40-45 ದಿವಸಗಳಲ್ಲಿ ಅನುಸರಿಸಿದರೆ, ಬೆಳೆಗಳ ಬೆಳವಣಿಗೆ ಅಭಿವೃದ್ಧಿ ಹೊಂದಿ ಉತ್ತಮ ಇಳುವರಿಯನ್ನು ಕೊಡುತ್ತದೆ.
  • ಕೃಷಿ ಕಾರ್ಮಿಕರು ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ಪ್ರಮಾಣದಲ್ಲಿ ದೊರೆಯದಿರುವುದರಿಂದ ಕೈಕಳೆ ತೆಗೆಯುವುದು ಕಷ್ಟವಾಗಿದೆ.
  • ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

ನೀರು ಮತ್ತು ಗೊಬ್ಬರ ನಿಯಂತ್ರಣ:

  • ಹನಿ ನೀರಾವರಿಯಲ್ಲಿ ಕಳೆಗಳು ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ ಮತ್ತು ಹರಿ ನೀರಾವರಿಯಲ್ಲಿ ಹೆಚ್ಚಿನ ರೂಪದಲ್ಲಿ ಕಂಡುಬರುತ್ತವೆ.
  • ಭತ್ತದ ಮೊದಲ 20 ರಿಂದ 25 ದಿವಸಗಳಲ್ಲಿ ನೀರು 2 ರಿಂದ 5 ಸೆಂಟಿ ಮೀಟರ್ ನಿಲ್ಲಿಸಿದರೆ ಹೆಚ್ಚಿನ ಕಳೆಗಳನ್ನು ನಿಯಂತ್ರಿಸಬಹುದು.
  • ಗೊಬ್ಬರವನ್ನು ಬೆಳೆಯ ಸಾಲಿನಲ್ಲಿ ಹಾಕಿದರೆ, ಬೆಳೆಯ ಬೆಳವಣಿಗೆ ಹೆಚ್ಚಾಗುತ್ತದೆ.
  • ಇದೇ ಗೊಬ್ಬರವನ್ನು ಭೂಮಿಯ ಎಲ್ಲಾ ಕಡೆ ಎರಚಿದರೆ, ಕಳೆಗಳು ಬೆಳೆಗಳ ಜೊತೆ ಉಪಯೋಗಿಸಿಕೊಂಡು ಬೆಳೆಗೆ ದೊರಕದಂತೆ ಮಾಡುತ್ತದೆ.

ಬೆಳೆ ಪರಿವರ್ತನೆ: 

  • ಇದರಿಂದ ಪರವಲಂಬಿ ಕಳೆಗಳಾದ ಬಿಳಿಕಸ, ಬಂಗುಗುಳನ್ನು ಜೋಳ ಹಾಗೂ ತಂಬಾಕು ಬೆಳೆಗಳಲ್ಲಿ ಬರದಂತೆ ಮಾಡಬಹುದು.
  • ಜೋಳದಲ್ಲಿ ಬಿಳಿ ಕಸವನ್ನುಕಡಿಮೆ ಮಾಡಲು ಹತ್ತಿ ನೆಲಗಡಲೆ, ಸೂರ್ಯಕಾಂತಿಯನ್ನು ಬೆಳೆಯಬೇಕು.

ಭೂಹೊದಿಕೆ: 

Mulching sheet covering
ಮಲ್ಚಿಂಗ್ ಹಾಕಿ ಬೆಳೆಯುವುದು
  • ಭೂಹೊದಿಕೆ ವಸ್ತುಗಳಾದ ಹಸಿರೆಲೆ ಗೊಬ್ಬರ ಬೆಳೆಯ ತ್ಯಾಜ್ಯ ವಸ್ತುಗಳನ್ನು ಮತ್ತು ಪ್ಲಾಸ್ಟಿಕ್ ಹೊದಿಕೆಗಳನ್ನು ಉಪಯೋಗಿಸುವುದರಿಂದ ಕಳೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು.
Organic matter mulching
  • ಸಾವಯವ ತ್ಯಾಜ್ಯ ಹೊದಿಕೆ: ಇದು ಉತ್ತಮ ಕಳೆ ನಿಯಂತ್ರಣ ವಿಧಾನ.
  • ಕಳೆಗಳ ಮೇಲೆ ದಪ್ಪವಾಗಿ ಸಾವಯವ ತ್ಯಾಜ್ಯಗಳಾದ ಸೊಪ್ಪು, ತರಗೆಲೆ, ಕೆಲವು ದ್ವಿದಳ ಸೊಪ್ಪು ಹಾಸುವುದರಿಂದ ಅಡಿ ಭಾಗದ ಕಳೆಗಳು ಸತ್ತು ಹೋಗುತ್ತದೆ.
  • ಇದಕ್ಕಾಗಿ ಅಲ್ಪಾವಧಿಯ  ದ್ವಿದಳ ಸಸ್ಯಗಳನ್ನು ಬೆಳೆಸಿ ಅವು ಹೂ ಬರುವ ಸಮಯದಲ್ಲಿ ಕಡಿದು ನೆಲಕ್ಕೆ ಹಾಸಬೇಕು.
  • ಇದು ಸಾರದಿಂದ ಕೂಡಿರುವ ಕಾರಣ ಅಡಿ ಭಾಗದ ಕಳೆಗಳು ಸತ್ತು ಹೋಗುತ್ತವೆ. ಮಣ್ಣು ಫಲವತ್ತಾಗುತ್ತದೆ.
  • ಮರದ ಹುಡಿ, ಅಡಿಕೆ ಸಿಪ್ಪೆ, ಇವುಗಳ ಮೂಲಕ ಕಳೆ ನಿಯಂತ್ರಣ ಮಾಡಬಹುದು.

ಕಳೆನಾಶಕದ ಬಳಕೆ:

  • ಇದು ಅಂತಿಮ ಕಳೆ ನಿಯಂತ್ರಣ ವಿಧಾನವಾದರೂ ಈಗ ಅನಿವಾರ್ಯತೆಯ ಕಾರಣ ರೈತರು ಇದನ್ನು ಅನುಸರಿಸುತ್ತಿದ್ದಾರೆ.
  • ಸೂಕ್ತ ಮುನ್ನೆಚ್ಚರಿಕೆ ಮತ್ತು ಕಾಲಾವಧಿಯಲ್ಲಿ ಇದನ್ನು ಬಳಸಬೇಕು.
  • ಸರಿಯಾಗಿ ತಿಳಿದುಕೊಂಡು ಬಳಕೆ ಮಾಡಬೇಕು.
  • ಕಳೆನಾಶಕ ಎಂದರೆ ಬೆಳೆಗಳ ಅಂಗಾಂಶವನ್ನು ಸಾಯುವಂತೆ ಮಾಡುವ  ರಾಸಾಯನಿಕ ಸಂಯೋಜನೆ.
  • ಇದನ್ನು  ಅರಿತು  ಉಪಯೋಗಿಸಿದಾಗ ಬೆಳೆಗಳಿಗೆ ಹಾನಿ ಮಾಡದೇ ಕಳೆಗಳನ್ನು ಮಾತ್ರ ಕೊಲ್ಲುವ ಶಕ್ತಿ ಹೊಂದಿರುತ್ತದೆ.

ರೈತರು ಅಲ್ಪಾವಧಿ ಬೆಳೆಗಳಿಗೆ ಕಳೆ ನಿಯಂತ್ರಣಕ್ಕೆ ಹೆಚ್ಚಿನ ಗಮನ ಕೊಡಿ. ಧೀರ್ಘಾವಧಿ ಬೆಳೆಗಳಲ್ಲಿ ತೀರಾ ಉಪಟಳ ಕೊಡುವ ಕಳೆಗಳಾದ ಕಸ್ಕೂಟಾ ಪರಾವಲಂಬಿ ಸಸ್ಯ, ಕೆಲವು ಬೀಜ ಮತ್ತು ಗಣ್ಣುಗಳ ಮೂಲ ಹುಟ್ಟುವ ಬಳ್ಳಿ ಸಸ್ಯಗಳ ನಿಯಂತ್ರಣವನ್ನು ತಪ್ಪದೇ ಮಾಡಿ. ಹುಲ್ಲು ಇತ್ಯಾದಿ ಕಳೆಗಳ ಬೆಳವಣಿಗೆಯನ್ನು ಆಗಾಗ ಸವರುವ ಮೂಲಕ ನಿಯಂತ್ರಿಸಿರಿ. ಅನವಶ್ಯಕ ಕಳೆ ನಾಶಕ ಬಳಸಬೇಡಿ.

ಲೇಖಕರು – 1. ಡಾ. ಯುಸುಫ್‍ ಅಲಿ ನಿಂಬರಗಿ,ವಿಜ್ಞಾನಿ (ಬೇಸಾಯಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ;2. ಡಾ. ಶ್ರೀನಿವಾಸ ಬಿ. ವಿ, ವಿಜ್ಞಾನಿ (ಮಣ್ಣು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ; 3. ಡಾ. ಜಹೀರ್ ಅಹೆಮದ್ ವಿಜ್ಞಾನಿ (ಸಸ್ಯರೋಗ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ; 4. ಡಾ. ರಾಜು ಜಿ. ತೆಗ್ಗಳ್ಳಿ , ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ;5.  ನಿಸರ್ಗ ಹೆಚ್. ಎಸ್, ಕೃಷಿ ವಿಶ್ವವಿದ್ಯಾಲಯ, ರಾಯಚೂರು:  6.  ಚೈತ್ರಾ ಜಿ ಎಮ್

Leave a Reply

Your email address will not be published. Required fields are marked *

error: Content is protected !!