ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕದ ಬಳಕೆಯಿಂದ ಮಣ್ಣು ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುವವರೇ ಹೊರತು ಇದನ್ನು ಬಳಸಿದ ಮಾನವನಿಗೆ ಏನಾಗುತ್ತದೆ ಎಂದು ಹೇಳುವವರು ಬಲು ಅಪರೂಪ. ಕಳೆನಾಶಕಗಳಿಂದ ಮಣ್ಣಿಗೆ ಹಾಳು ಎಂಬ ವಿಚಾರ ಒತ್ತಟ್ಟಿಗಿರಲಿ. ಬಳಕೆ ಮಾಡುವ ನಮಗೆಷ್ಟು ಹಾನಿಕರ ಎಂಬುದನ್ನು ತಿಳಿದುಕೊಳ್ಳುವ.
ಕಳೆ ನಿಯಂತ್ರಣ ಬೆಳೆಗಾರರಿಗೆ ಈಗ ಅತೀ ದೊಡ್ಡ ಖರ್ಚಿನ ಬಾಬ್ತು ಆಗಿದೆ. ಹಿಂದೆ ಕಳೆಗಳನ್ನು ಕತ್ತಿ, ಕೈಯಿಂದ ಕೀಳಿ ತೆಗೆಯುತ್ತಿದ್ದೆವು. ಈಗ ಅದನ್ನು ಮಾಡಿದರೆ ಕೃಷಿ ಉತ್ಪತ್ತಿ ಆ ಕೆಲಸದವರ ಮಜೂರಿಗೆ ಸಾಲದು. ಆ ಸಮಸ್ಯೆ ನಿವಾರಣೆಗಾಗಿ ಈಗ ಕಳೆ ಕತ್ತರಿಸುವ ಯಂತ್ರಗಳು ಬಂದಿವೆ. ಇವು ಕಳೆಗಳನ್ನು ಕತ್ತರಿಸುತ್ತವೆ. ಆದರೆ ಅದೇ ಕಳೆಗಳು ಕೊಳೆತು ಗೊಬ್ಬರವಾಗಿ ಮತ್ತೆ ಹುಲುಸಾಗಿ ಬೆಳೆಯುತ್ತವೆ. ಎಲ್ಲೆಲ್ಲಿ ಕಳೆ ತುಂಡುಗಳು ಬೀಳುತ್ತವೆಯೋ ಅಲ್ಲೆಲ್ಲಾ ಅದು ಹುಟ್ಟಿಕೊಳ್ಳುತ್ತದೆ. ಕಳೆಗಳು ಹುಟ್ಟಿಕೊಳ್ಳುವುದು ಹೆಚ್ಚಾಗುತ್ತದೆ. ಹಾಗಾಗಿ ಮಿತವ್ಯಯದಲ್ಲಿ ಕಳೆ ನಿಯಂತ್ರಣಕ್ಕಾಗಿ ರೈತರು ಕಳೆನಾಶಕಗಳನ್ನು ಬಳಕೆ ಮಾಡುತ್ತಾರೆ.
“ಕಳೆನಾಶಕ” ಎಂಬುದು ಇಲ್ಲ. ಎಲ್ಲವೂ ತತ್ಕಾಲಕ್ಕೆ ಕಳೆ ನಿಯಂತ್ರಿಸುವ ಕೆಲಸ ಮಾಡುತ್ತವೆ ಅಷ್ಟೇ. ಹಾಗಾಗಿ ಕಳೆ ನಾಶಕಗಳಲ್ಲ. ಕಳೆ ನಿಯಂತ್ರಕಗಳು ಎಂದು ಕರೆಯುವುದೇ ಸೂಕ್ತ. ಕೆಲವು ಸಮಯದವರೆಗೆ ಹುಲ್ಲು, ಹಾಗೂ ಇನ್ನಿತರ ಕಳೆಗಳನ್ನು ಸಾಯಿಸಿ ನಮ್ಮ ಕೆಲಸ ಮಾಡಲು ಅನುಕೂಲವಾಗುತ್ತದೆ. ನಂತರ ಆ ಮಣ್ಣಿನಲ್ಲಿ ಮತ್ತೆ ಕಳೆ ಬೀಜಗಳು ಮೊಳೆತು ಹುಲುಸಾಗಿ ಬೆಳೆಯುತ್ತವೆ. ಸುಮಾರಾಗಿ ಕಳೆನಿಯಂತ್ರಕ ಬಳಸಿ ಹೊಲದಲ್ಲಿ ಕಳೆ ಹತೋಟಿ ಮಾಡಬೇಕಿದ್ದರೆ ವರ್ಷಕ್ಕೆ ಎರಡೂ ಮೂರು ಬಾರಿ ಸಿಂಪರಣೆ ಮಾಡಬೇಕಾಗಬಹುದು. ಕಳೆನಾಶಕ ಸಿಂಪಡಿಸಿದ ಹೊಲದಲ್ಲಿ ಹಾಲೀ ಬೆಳೆದಿದ್ದ ಕಳೆಗಳು ಸಾಯುತ್ತವೆ. ಕೊಳೆತು ಮಣ್ಣಿಗೆ ಗೊಬ್ಬರವಾಗುತ್ತದೆ. ಮಣ್ಣು ಫಲವತ್ತಾಗುತ್ತದೆ. ಆ ಮಣ್ಣಿಗೆ ಗಾಳಿಯ ಮೂಲಕ ಪ್ರಸಾರವಾಗುವ ಕಳೆ ಬೀಜಗಳು ಬಿದ್ದು ಅವು ಹುಟ್ಟಿಕೊಳ್ಳುತ್ತವೆ. ಹೆಚ್ಚಿನ ರೈತರು ಬಳಸುವ ಕಳೆ ನಿಯಂತ್ರಕಗಳು ಮತ್ತೆ ಕಳೆಬೆಳೆಯುವಂತೆ ಮಾಡುತ್ತದೆ. ಹಿಂದೆ ಇದ್ದ ಕಳೆಯೇ ಬೆಳೆಯುತ್ತದೆ ಎಂದಲ್ಲ. ಹೆಚ್ಚಾಗಿ ಕೆಲವು ಗಾಳಿಯ ಮೂಲಕ ಬೀಜ ಪ್ರಸಾರವಾಗುವ ಕಳೆ ಗಿಡಗಳ ಪ್ರಾಭಲ್ಯ ಹೆಚ್ಚಾಗುತ್ತದೆ. ರೈತರಿಗೆ ಗೊಬ್ಬರ ಹಾಕುವ ಸಮಯದಲ್ಲಿ ಹೊಲದಲ್ಲಿ ಕಳೆ ಇರಬಾರದು. ಕೊಯಿಲು ಮಾಡುವ ಸಮಯದಲ್ಲಿ ಇರಬಾರದು. ಬೇಸಿಗೆಯ ಸಮಯದಲ್ಲಿ ನೆಲಕ್ಕೆ ಹೊದಿಕೆಯಾಗಿ ಕಳೆಗಳು ಇದ್ದರೆ ಮಣ್ಣಿಗೆ ರಕ್ಷಣೆ ದೊರೆಯುತ್ತದೆ. ಕಳೆಗಳು ಹಿತಮಿತವಾಗಿ ಇದ್ದರೆ ಅಂತಹ ಸಮಸ್ಯೆ ಇಲ್ಲ. ಆದರೆ ಗೊಬ್ಬರ ಕೊಟ್ಟಾಗ ಅವು ಬೆಳೆಗಳ ಬೇರುಗಳು ಹೀರಿಕೊಳ್ಳುವ ಮುಂಚೆ ಹೀರಿಕೊಂಡು ತೊಂದರೆ ಉಂಟುಮಾಡುತ್ತದೆ ಎಂಬುದಂತೂ ಸತ್ಯ.


ಕಳೆ ನಿಯಂತ್ರಗಳು ಏನು ಕೆಲಸ ಮಾಡುತ್ತವೆ?

 • ಕಳೆ ನಿಯಂತ್ರಕಗಳಲ್ಲಿ ಉಪಯೋಗಿಸಲಾದ ರಾಸಾಯನಿಗಳು ಕಳೆಯ ಎಲೆಯ ಮೇಲೆ ಬಿದ್ದಾಕ್ಷಣ ಅದನ್ನು ಎಲೆಗಳು ಹೀರಿಕೊಳ್ಳುತ್ತವೆ.
 • ಅದರ ಹನಿ ಮಣ್ಣಿಗೆ ಸಹ ಬೀಳುತ್ತದೆ.
 • ಅದರ ಕೋಶಗಳನ್ನು ಅವು ಹಾನಿ ಮಾಡುವ ಕಿಣ್ವಗಳನ್ನು ಹೊಂದಿರುತ್ತವೆ.
 • ಎಲೆಗಳ ಮೇಲೆ ಇವುಗಳನ್ನು ಸಿಂಪಡಿಸಿದಾಗ ಅವುಗಳ ಸಾಮಾನ್ಯ ಬೆಳವಣಿಗೆಯ ವಿರುದ್ದ ಪರಿಣಾಮವನ್ನು ಉಂಟು ಮಾಡುವ ಕಾರಣ ಅವು ಸಾಯುತ್ತವೆ.
 • ಒಟ್ಟಿನಲ್ಲಿ ಇವು ಸಸ್ಯಗಳ ಜೀವ ಕೊಶಗಳ ಮೇಲೆ ಪರಿಣಾಮ ಬೀರಿ ಅವುಗಳನ್ನು ಕೊಲ್ಲುವ ಗುಣ ಹೊಂದಿರುತ್ತದೆ.
 • ಕೆಲವು ಸ್ಪರ್ಶ ಕಳೆ ನಿಯಂತ್ರಕಗಳು ಎಲೆಯ ಮೇಲೆ ಸಿಂಪಡಿಸಿದಾಗ ಅವು ಎಲೆಗಳನ್ನು ತಕ್ಷಣ ಸಾಯುವಂತೆ ಮಾಡುತ್ತದೆ.
 • ಎಲ್ಲೆಲ್ಲಿ ತಾಗಿದೆಯೋ ಆ ಭಾಗ ಸಾಯುತ್ತದೆ. ಬೇರು ಇತ್ಯಾದಿ ಸಾಯುವುದಿಲ್ಲ.
 • ಮತ್ತೆ ಹುಟ್ಟಿಕೊಳ್ಳುತ್ತವೆ. ಕೆಲವು ಅಂತರ್ವ್ಯಾಪೀ ಕಳೆ ನಿಯಂತ್ರಗಳು ಸ್ವಲ್ಪ ನಿಧಾನವಾಗಿ ಕೋಶಗಳ ಮೇಲೆ ಪರಿಣಾಮ ಬೀರಿ ಸಾಯಿಸುತ್ತಾ ಬರುತ್ತದೆ.
 • ಎರಡು ವಾರದ ಅವಧಿಯಲ್ಲಿ ಸಿಂಪಡಿಸಿದ ಕಳೆ ಗಿಡ ಸತ್ತು ಹೋಗುತ್ತದೆ.
 • ಬೇರು ಸಮೇತ ಅಂದರೆ ಇಡೀ ಸಸ್ಯವನ್ನೇ ಅದು ಸಾಯಿಸುತ್ತದೆ.
 • ಕೆಲವು ಮಣ್ಣಿಗೆ ಸೇರಿಸುವ ಕಳೆ ನಿಯಂತ್ರಕಗಳು ಇರುತ್ತವೆ.
 • ಇವು ಕಳೆ ಬೇರುಗಳ ಮೂಲಕ ಸಸ್ಯಕ್ಕೆ ಸೇರಲ್ಪಟ್ಟು ಅದು ಸಾಯುತ್ತದೆ.
 • ಕೆಲವು ಕಳೆ ನಿಯಂತ್ರಕಗಳು ಕಳೆಯೊಂದಿಗೆ ನೆಲದಲ್ಲಿ ಬಿದ್ದಿರುವ ಕಳೆ ಬೀಜವನ್ನೂ ಮೊಳಕೆ ಒಡೆಯದಂತೆ ಮಾಡುತ್ತದೆ.
 • ಆಂಗ್ಲ ಬಾಷೆಯಲ್ಲಿ HERBICIDE ಎಂದರೆ ಕಳೆ ನಿಯಂತ್ರಕ.
 • ಇವುಗಳ ಸಿಂಪರಣೆಯಿಂದ ಮಣ್ಣು ಹಾಳಾಗುತ್ತದೆ, ಮಣ್ಣಿನ ಜೀವಿಗಳು ಸಾಯುತ್ತವೆ ಎಂಬುದನ್ನು ಕೆಲವು ಮಂದಿ ಹೇಳುತ್ತಾರೆ.
 • ಅದನ್ನು ಯಾವ ಕೃಷಿ ತಜ್ಞರೂ ಕೂಲಂಕುಶವಾಗಿ ಅಧ್ಯಯನ ನಡೆಸಿ ಹೇಳಿದಂತಿಲ್ಲ.
 • ಒಂದಷ್ಟು ಜನ ಕಳೆ ನಾಶಕಗಳ ಬಗ್ಗೆ ಭಾರೀ ಅಪಸ್ವರವನ್ನು ಹೊಂದಿದ್ದಾರೆ.
 • ಆದರೆ ವರ್ಷದಿಂದ ವರ್ಷಕ್ಕೆ ಕಳೆ ನಾಶಕಗಳ ಮಾರುಕಟ್ಟೆ ಬೆಳೆಯುತ್ತಾ ಇದೆ.
  ಮಣ್ಣು ಎಂಬ ಸಂಪನ್ಮೂಲವನ್ನು ಮನುಷ್ಯ ಮಾತ್ರರಿಂದ ಹಾಳು ಮಾಡಲು ಸಾಧ್ಯವಿಲ್ಲ. ಒಂದು ಚದರ ಅಡಿ ಸುತ್ತಳತೆಯ ಮಣ್ಣಿಗೆ ಕನಿಷ್ಟ ಅದರ 10% ದಷ್ಟು ಕೃತ್ರಿಮಕಾರೀ ರಾಸಾಯನಿಕವನ್ನು ಸೇರಿಸಿದರೆ ಅದರ ರಚನೆ ವ್ಯತ್ಯಾಸವಾಗಲೂಬಹುದು. ಅಷ್ಟೊಂದು ಪ್ರಮಾಣದ ಯಾವುದೇ ರಾಸಾಯನಿಕವನ್ನು ಬಳಸಲು ಅಸಾಧ್ಯ. ಆದರೂ ಕೆಲವು ತಾತ್ಕಾಲಿಕ ತೊಂದಗಳು ಆಗಬಹುದೇನೋ? ಆದರೆ ಇವೆಲ್ಲಕ್ಕಿಂತ ಮೊದಲ ಬಲಿಪಶು ಮಾನವೇ ಆಗಿರುತ್ತಾರೆ. ಹೇಗೆ ನೋಡೋಣ.
ಮಣ್ಣಿನಲ್ಲಿ ಮತ್ತೆ ಕಳೆ ಬೀಜಗಳು ಮೊಳೆತು ಹುಲುಸಾಗಿ ಬೆಳೆಯುತ್ತವೆ
ಮಣ್ಣಿನಲ್ಲಿ ಮತ್ತೆ ಕಳೆ ಬೀಜಗಳು ಮೊಳೆತು ಹುಲುಸಾಗಿ ಬೆಳೆಯುತ್ತವೆ


ಮಾನವನಿಗೆ ಕಳೆ ನಿಯಂತ್ರಕಗಳಿಂದ ಆಗುವ ಸಮಸ್ಯೆ:

 • ಇತ್ತೀಚೆಗೆ ಅದರಲ್ಲೂ ವಿಶೇಷವಾಗಿ ಕೃಷಿಕರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ವೈದ್ಯರಿಗೂ ನಿಖರವಾಗಿ ಸಮಸ್ಯೆ ಕಂಡು ಹುಡುಕಲಾಗದ ಅನಾರೋಗ್ಯಗಳು ಬರುತ್ತಿವೆ.
 • ಹೃದಯಾಘಾತ, ಕಿಡ್ನಿ ವೈಪಲ್ಯಗಳು, ಕ್ಯಾನ್ಸರ್ ಮುಂತಾದ ಖಾಯಿಲೆಗಳು ಹೆಚ್ಚಾಗುತ್ತಿವೆ.
 • ಇದಕ್ಕೆ ಕಾರಣ ಕೃಷಿ ರಾಸಾಯನಿಕಗಳು ಅತ್ಯಲ್ಪ ಪ್ರಮಾಣದಲ್ಲಿ ಶರೀರಕ್ಕೆ ಸೇರ್ಪಡೆಯಾಗುವುದು ಎಂಬುದಾಗಿ ಕೆಲವು ವೈದ್ಯರು ಹೇಳುವುದಿದೆ.
 • ಇದನ್ನು ಅಲ್ಲಗಳೆಯುವಂತಿಲ್ಲ. ನಾವು ಕಳೆ ನಿಯಂತ್ರಕಗಳನ್ನು ಸಿಂಪಡಿಸುವಾಗ, ಕೀಟನಾಶಕಗಳನ್ನು ಸಿಂಪಡಿಸುವಾಗ ಯಾವುದೇ ಸುರಕ್ಷತಾ ಕ್ರಮವನ್ನು ಪಾಲಿಸುವುದಿಲ್ಲ.
 • ಅದು ಗಾಳಿಯ ಮೂಲಕ ಮುಖಕ್ಕೆ, ಚರ್ಮಕ್ಕೆ ತಗಲದೆ ಇರುವುದಿಲ್ಲ.
 • ಕೆಲವರು ಸಿಂಪಡಿಸುವಾಗ ಅದು ಇಡೀ ಮೈಗೆ ಬೀಳಿಸಿಕೊಳ್ಳುವುದೂ ಇದೆ.
 • ಕಳೆ ನಾಶಕ ಸಿಂಪಡಿಸುವಾಗ ಕಾಲಿಗೆ ನಿರಂತರವಾಗಿ ದ್ರಾವಣ ತಗಲುತ್ತದೆ.
 • ಇವೆಲ್ಲಾ ನಮ್ಮ ದೇಹದ ರೋಮನಾಳಗಳ ಮೂಲಕ ಜೀವ ಕೋಶಗಳಿಗೆ ತಾಗಿಯೇ ತಾಗುತ್ತದೆ.
 • ಇದು ನಿಧಾನವಾಗಿ ಜೀವ ಕೋಶಗಳ ಮೇಲೆ ಪರಿಣಾಮ ಬೀರದೆ ಇರಲಾರದು.
 • ಅದು ಅಂಗ ವೈಕಲ್ಯವನ್ನು ಉಂಟು ಮಾಡಬಹುದು. ಜೀವ ಕೋಶಗಳ ಅನಿಯಂತ್ರಿತ ಬೆಳವಣಿಗೆಗೂ ( ಕ್ಯಾನ್ಸರ್) ಕಾರಣವಾಗಬಹುದು.
 • ಅದೆಲ್ಲವೂ ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುವಂತದ್ದು. ದೇಹದ ಅಂತಃ ಶಕ್ತಿ ಬಲವಾಗಿದ್ದಾಗ ಅವು ಸಮಸ್ಯೆ ತಂದೊಡ್ಡುವುದಿಲ್ಲ.
 • ಅವು ದುರ್ಬಲವಾಗುವ ಸಮಯ 50-60 ವಯಸ್ಸಿನ ತರುವಾಯ ಏನಾದರೂ ಸಮಸ್ಯೆಗಳನ್ನು ತಂದೊಡ್ದುತ್ತದೆ.
 • ಕೆಲವರಿಗೆ ಏನೂ ಆಗದೆಯೂ ಇರಬಹುದು. ಹಾಗೆಂದು ಎಲ್ಲರೂ ಸುರಕ್ಷಿತರಲ್ಲ.
 • ಕಳೆ ನಾಶಕ, ಕೀಟನಾಶಕಗಳನ್ನು ಸುರಕ್ಷಿತ ಉಡುಗೆಗಳನ್ನು ಧರಿಸಿ ಸಿಂಪರಣೆ ಮಾಡುವುದೇ ಸೂಕ್ತ.


ಸುರಕ್ಷಿತ ಉಡುಗೆ ಮತ್ತು ಕೃಷಿಕ:

 • ಕೃಷಿ ರಾಸಾಯನಿಕಗಳನ್ನು ಬಳಸುವಾಗ ದೇಹದ ಯಾವುದೇ ಭಾಗಗಳಿಗೆ ಅದರ ಹನಿಯೂ ಬೀಳದಂತೆ ಉಡುಗೆ ಧರಿಸಿ ಸಿಂಪರಣೆ ಮಾಡಬೇಕು.
 • ಮೂಗಿನ ಮೂಲಕ ಉಸಿರಾಡುವಾಗಲೂ ಅದರ ಗಾಳಿಯನ್ನು ನಾವು ದೇಹದ ಒಳಗೆ ತೆತೆದುಕೊಳ್ಳುತ್ತೇವೆ.
 • ಇದೂ ಸಹ ಆಗದಂತೆ ಧರಿಸು ತೊಟ್ಟಿರಬೇಕು.
 • ಇಂತಹ ಧರಿಸು ಮಾರುಕಟ್ಟೆಯಲ್ಲಿ ಲಭ್ಯವೂ ಇಲ್ಲ.
 • ಇದ್ದರೆ ಅದಕ್ಕೆ ಸಾವಿರಾರು ರೂ. ಬೆಲೆಯೂ ಇದೆ.
 • ಇಂತದ್ದನ್ನು ಹೊಂದುವಷ್ಟು ನಮ್ಮ ದೇಶದ ರೈತ ಅನುಕೂಲಸ್ಥನೂ ಅಲ್ಲ!
 • ಉಷ್ಣ ವಲಯದ ಈ ಪ್ರದೇಶದಲ್ಲಿ ಇಂತಹ ಧರಿಸನ್ನು ತೊಟ್ಟು ಸಿಂಪರಣೆ ಮಾಡುವುದು ಕಷ್ಟಕರವೂ ಹೌದು.
 • ಕಾಲಿಗೆ ಬೂಟು ಹಾಕಿ, ಮೈ ಕೈಗೆ ಬೀಳದಂತೆ ತುಂಬಾ ಜಾಗರೂಕತೆಯಲ್ಲಿ ಸಿಂಪರಣೆ ಮಾಡಿದರೆ ಸ್ವಲ್ಪ ಕ್ಷೇಮ.
 • ಗಾಳಿಯ ವಿರುದ್ಧ ದಿಕ್ಕಿಗೆ ಸಿಂಪರಣೆ ಮಾಡುವುದು ಅತ್ಯಗತ್ಯ.
ಅಡಿಕೆ ತೋಟದವರು ಕೊಕ್ಕೋ, ಕಾಫೀ ಇತ್ಯಾದಿ ಬೆಳೆಸಿ ಕಳೆ ನಿಯಂತ್ರಣ ಮಾಡಬಹುದು
ಅಡಿಕೆ ತೋಟದವರು ಕೊಕ್ಕೋ, ಕಾಫೀ ಇತ್ಯಾದಿ ಬೆಳೆಸಿ ಕಳೆ ನಿಯಂತ್ರಣ ಮಾಡಬಹುದು


ಕಳೆ ನಿಯಂತ್ರಣಕ್ಕೆ ಸುಲಭೋಪಾಯ ಏನು?


ಕಳೆಗಳನ್ನು ಕೆಲವು ಸುರಕ್ಷಿತ ವಿಧಾನಗಳ ಮೂಲಕವೇ ನಿಯಂತ್ರಣ ಮಾಡುವುದು ಎಲ್ಲದಕ್ಕಿಂತ ಉತ್ತಮ. ನಮ್ಮ ಹಿರಿಯರು ಮಳೆಗಾಲದಲ್ಲಿ ಹೊಲಕ್ಕೆ ಸೊಪ್ಪು ಸದೆ ಇತ್ಯಾದಿಗಳನ್ನು ದಪ್ಪಕ್ಕೆ ಹಾಸಿ ಸೂರ್ಯನ ಬೆಳಕು ಮಣ್ಣಿಗೆ ಬೀಳದಂತೆ ಮಾಡಿ ಕಳೆ ನಿಯಂತ್ರಣ ಮಾಡುತ್ತಿದ್ದರು. ನೆಲದಲ್ಲಿ ಇದ್ದ ಕಳೆಗಳು ಸತ್ತೇ ಹೋಗುತ್ತಿದ್ದವು. ನೆಲಕ್ಕೆ ಬಿಸಿಲು ಬಿದ್ದರೆ ಮಾತ್ರ ಕಳೆಗಳು ಚೆನ್ನಾಗಿ ಬೆಳೆಯುವುದು. ಈ ಸಂಗತಿ ಎಲ್ಲರಿಗೂ ತಿಳಿದಿರಲಿ. ಬಿಸಿಲು ನೆಲಕ್ಕೆ ಬೀಳದಂತೆ ಅಡಿಕೆ ತೋಟದವರು ಕೊಕ್ಕೋ, ಕಾಫೀ ಇತ್ಯಾದಿ ಬೆಳೆಸಿ ಕಳೆ ನಿಯಂತ್ರಣ ಮಾಡಬಹುದು.

ಯಾವುದೂ ಆಗದವರು ನೆಲಕ್ಕೆ ಕಳೆ ಬೆಳೆಯದಂತೆ ತಡೆಯುವ ಮ್ಯಾಟ್ ಹಾಕಿ ಕಳೆ ನಿಯಂತ್ರಣ ಮಾಡಬಹುದು. ಇದರಿಂದ ಮಣ್ಣಿನ ಫಲವತ್ತತೆ ಕಪಾಡಲ್ಪಡುತ್ತದೆ. ತುಂಬಾ ಕಳೆಗಳು ಹೊಲದಲ್ಲಿ ಇದ್ದರೆ ಮಣ್ಣು ಸಡಿಲವಾಗುತ್ತದೆ. ಕೊಯಿಲು, ಗೊಬ್ಬರ ಇತ್ಯಾದಿ ಪೂರೈಕೆ ಸಮಯದಲ್ಲಿ ಅನಿವಾರ್ಯ ಇದ್ದಾಗ ಮಾತ್ರ ಸುರಕ್ಷಿತ ವಿಧಾನಗಳನ್ನು ಅನುಸರಿಸಿ ಸಿಂಪಡಿಸಿರಿ. ವರ್ಷವಿಡೀ ಹೊಲದಲ್ಲಿ ಕಳೆಗಳು ಇಲ್ಲದಂತೆ ಮಾಡಬೇಡಿ.

Leave a Reply

Your email address will not be published. Required fields are marked *

error: Content is protected !!