ಬಹಳ ಜನ ಕೀಟನಾಶಕ ಸಿಂಪಡಿಸಿದಾಗ ಜೇನು ನೊಣಗಳು ಸಾಯುತ್ತವೆ ಎಂಬುದಾಗಿ ನಂಬಿದ್ದಾರೆ. ಆದರೆ ಎಲ್ಲಾ ಕೀಟನಾಶಕಗಳಲ್ಲಿ ಜೇನು ನೊಣ ಸಾಯಲಾರದು. ಪ್ರಭಲ ಕೀಟ ನಾಶಕಗಳ ಬಳಕೆ ಕಡಿಮೆ ಮಾಡಿ, ಜೇನು ನೊಣಗಳನ್ನು ಸಂರಕ್ಷಿಸಬಹುದು. ತೀರಾ ಅಗತ್ಯ ಇದ್ದಾಗ ಮಾತ್ರ ಬಳಕೆ ಮಾಡಬೇಕು.
- ಜೇನು ನೊಣ, ಅಥವಾ ಉಪಕಾರೀ ಕೀಟಗಳು ಸಾಮಾನ್ಯವಾಗಿ ಹಾರುವ ಕೀಟಗಳಾಗಿರುತ್ತವೆ.
- ಕೀಟ ಪ್ರಪಂಚದಲ್ಲಿ ಸುಮಾರು 20-25% ಕ್ಕೂ ಕಡಿಮೆ ಪ್ರಮಾಣದವು ಮಾತ್ರ ಬೆಳೆಗಳಿಗೆ ತೊಂದರೆ ಮಾಡುವ ಕೀಟಗಳಾಗಿದ್ದು, ಉಳಿದವುಗಳು ಹಾನಿ ಮಾಡದ ಕೀಟಗಳಾಗಿವೆ.
- ಕೀಟಗಳಿಗೆ ಪ್ರತಿಕೂಲ ಹವಾಮಾನದಲ್ಲೂ ಬದುಕುವಂತಹ ಶಕ್ತಿಯನ್ನು ಪ್ರಕೃತಿ ಕೊಟ್ಟಿದೆ.
- ಇತ್ತೀಚೆಗೆ ಬೆಳೆ ಸಂರಕ್ಷಕವಾಗಿ ಪರಿಚಯಿಸಲ್ಪಟ್ಟ ಕೀಟನಾಶಕಗಳಿಂದ ವಿಶೇಷವಾಗಿ ಪರಾಗದಾನಿಗಳೆಂದು ಗುರುತಿಸಲ್ಪಟ್ಟ ಕೀಟಗಳು ನಾಶವಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
- ಇದು ಸ್ವಲ್ಪ ನಿಜವಾದರೂ ಪೂರ್ತಿ ನಿಜವಲ್ಲ.
- ಕೆಲವು ಕೀಟನಾಶಕಗಳು ಮಾತ್ರ ಜೇನು ನೊಣದಂತಹ ಕೀಟಗಳಿಗೆ ಹಾನಿಕರವಾಗಿರಬಹುದು.
- ಆದರೆ ಹೆಚ್ಚಿನವು ಹಾನಿ ಮಾಡದೆ ಇರುವ ಕೀಟನಾಶಕಗಳಾಗಿವೆ.
ಬಹಳಷ್ಟು ರೈತರು ಜೇನು ವ್ಯವಸಾಯ ಮಾಡುವವರು. ಕೆಲವು ಜೇನು ವ್ಯವಸಾಯ ಮಾಡುವವರು ತಮ್ಮ ಯಾವುದೇ ಬೆಳೆಗಳಿಗೆ ಕೀಟನಾಶಕ ಸಿಂಪಡಿಸದೇ ಇರಬಹುದು. ಆದರೆ ಅವರ ಸುತ್ತಮುತಲಿನವರು ಸಿಂಪಡಿಸದೆ ಬಿಡುತ್ತಾರೆಯೇ? ಇಲ್ಲ. ಸುಮಾರು 1 ಕಿಲೋ ಮೀಟರು ವಿಸ್ತೀರ್ಣದ ತನಕ ಹಾರಿ ಮಧು ಮಕರಂದ ತರಬಲ್ಲ ಜೇನು ನೊಣಕ್ಕೆ ಕೀಟನಾಶಕ ಸಿಂಪಡಿಸಿದ ಹೂವು ಯಾವುದು, ಸಿಂಪಡಿಸದೆ ಇರುವಂತದ್ದು ಯಾವುದು ಎಂದು ಗೊತ್ತಾಗುವ ಸೆನ್ಸಾರ್ ಇರಲಿಕ್ಕಿಲ್ಲ.
- ಒಂದು ವೇಳೆ ಕೀಟನಾಶಕಗಳೆಲ್ಲವೂ ಜೇನು ನೊಣಗಳಿಗೆ ಹಾನಿಕರವೇ ಆಗಿದ್ದಲ್ಲಿ, ಈಗ ಜೇನು ನೊಣಗಳೇ ಇರುತ್ತಿರಲಿಲ್ಲ.
- ಅಷ್ಟು ಕೀಟನಾಶಕಗಳು ಬೆಳೆಗಳಿಗೆ ಸಿಂಪಡಿಸಲ್ಪಡುತ್ತದೆ.
- ಎಲ್ಲಾ ಹೂವುಗಳಿಗೂ ಜೇನುನೊಣಗಳು ಮುತ್ತುತ್ತವೆ ಮಧು, ಮಕರಂದ ತರುತ್ತವೆ.ಸಂತಾನಾಭಿವೃದ್ಧಿಯಾಗುತ್ತವೆ.
- ಇದೆಲ್ಲಾ ಒಬ್ಬರು ಹೇಳಿದ್ದನ್ನು ಮತ್ತೊಬ್ಬ ಕೇಳುವುದು ಹಾಗೆಯೇ ಅದನ್ನು ಮುಂದುವರಿಸುವುದು.
ಕೀಟನಾಶಕಗಳಲ್ಲಿ ಜೇನುನೊಣ ಕೊಲ್ಲುವಂತದ್ದು ಯಾವುದು?
- ಕೀಟನಾಶಕಗಳು ಎಲ್ಲವೂ ಒಂದೇ ಅಲ್ಲ. ನಮ್ಮಲ್ಲಿ ಹಲವಾರು ಬಗೆಯ ಕೀಟನಾಶಕಗಳಿವೆ.
- ಎಲ್ಲದಕ್ಕೂ ಒಂದೊಂದು ಗುಣ ಇರುತ್ತದೆ. ಕೆಲವು ಪ್ರಭಲ ಕೀಟನಾಶಕಗಳಾಗಿರುತ್ತವೆ.
- ಕೆಲವು ಸಾಮಾನ್ಯ ಕೀಟನಾಶಕಗಳಾಗಿರುತ್ತವೆ. ಇನ್ನು ಕೆಲವು ಸೌಮ್ಯ ಕೀಟನಾಶಕಗಳಾಗಿರುತ್ತವೆ.
- ಇದರಲ್ಲೂ ಎರಡು ವರ್ಗೀಕರಣ ಇರುತ್ತದೆ. ಒಂದು ಸ್ಪರ್ಶ (Contact) ಕೀಟನಾಶಕ, ಇನ್ನೊಂದು ಅಂತರ್ ವ್ಯಾಪೀ( Systemic) ಕೀಟನಾಶಕ.
- ಸ್ಪರ್ಶಕೀಟನಾಶಕವು ಕೀಟವು ಸ್ಪರ್ಶಕ್ಕೆ ಬಂದಾಗ ಅದು ಸತ್ತು ಹೋಗುವ ಗುಣವನ್ನು ಪಡೆದಿರುತ್ತದೆ.
- ಅಂತರ್ ವ್ಯಾಪೀ ಕೀಟನಾಶಕಗಳು ಸಿಂಪಡಿಸಿದಾಗ ಅದು ಸಸ್ಯ ಅಂಗದ ಒಳಗೆ ಸೇರಲ್ಪಟ್ಟು ಅದು ಕೆಲವು ಸಮಯದ ನಂತರ ಬಂದು ಹಾನಿ ಮಾಡುವ ಕೀಟಕ್ಕೆ ವಿಷಕಾರಿಯಾಗಿ ಕೆಲಸ ಮಾಡುತ್ತದೆ.
- ಇವು ನಿಧಾನವಾಗಿ ಜೇನು ನೊಣಗಳನ್ನು ಕೊಲ್ಲಬಹುದು.
- ಕೀಟ ನಾಶಕ ತಯಾರಿಕೆಗೆ ಮತ್ತು ಮತ್ತು ಅದರ ಮಾರಾಟಕ್ಕೆ ಕೆಲವು ನಿಬಂಧನೆಗಳಿವೆ.
- ಬಹುತೇಕ ಕೀಟನಾಶಕಗಳು ಸಂಬಂಧಿಸಿದ ಕೀಟಗಳನ್ನು ಮಾತ್ರ ಕೊಲ್ಲುವಂತೆ ತಯಾರಿಸಲ್ಪಟ್ಟಿರುತ್ತದೆ.
- ಬ್ರಾಡ್ ಸ್ಪೆಕ್ಟ್ರಮ್ ( ಬಹುಸ್ಥರದ ) ಕೀಟನಾಶಕಗಳು ಬಹಳ ಕಡಿಮೆ ಪ್ರಮಾಣದಲ್ಲಿದ್ದು,
- ಅದನ್ನು ಸುಲಭವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತಿಲ್ಲ.ಅಂತಹ ಕೀಟನಾಶಕಗಳನ್ನೂ ಆಗಲೇ ನಿಷೇಧ ಸಹ ಮಾಡಲಾಗಿದೆ.
ಕೀಟ ನಾಶಕ ಬಳಸುವಾಗ ಇದನ್ನು ನೋಡಿಕೊಳ್ಳಿ:
- ಎಲ್ಲಾ ಕೀಟನಾಶಕ ಬಾಟಲಿಯಲ್ಲಿ ಬರೆದಿರುವ ವಿಚಾರಗಳನ್ನು ಓದುವ ತಾಳ್ಮೆ ರೈತರಲ್ಲಿ ಇರದೇ ಇರಬಹುದು.
- ಕೆಲವು ಸಾಧಾರಣ ದೃಷ್ಟಿಯಲ್ಲಿ ಓದುವಂತೆಯೂ ಬರೆದಿರುವುದಿಲ್ಲ.
- ಆದಾಗ್ಯೂ ಅಗತ್ಯವಾಗಿ ಓದಬೇಕಾದ ಮತ್ತು ಗಮನಿಸಬೇಕಾದ ಸಂಗತಿಗಳನ್ನು ದೊಡ್ಡದಾಗಿ ನಮೂದಿಸಿರುತ್ತಾರೆ.
- ಅದುವೇ ಕೀಟನಾಶಕ ಬಾಟಲಿಗಳಲ್ಲಿ ಬರೆದಿರುವ ಮೊದಲ ಅಕ್ಷರ. ಇದು ——— ಕಂಟೆಂಟ್ ಹೊಂದಿದೆ.
- ಇದು ಒಂದು ಸ್ಪರ್ಶ(Contact) ಅಥವಾ ಅಂತರ್ ವ್ಯಾಪೀ(Systemic) ಕೀಟನಾಶಕ ಎಂಬುದಾಗಿ ಬರೆದಿರುತ್ತಾರೆ.
- ಇದಲ್ಲದೆ ಪ್ರತೀ ಕೀಟನಾಶಕದ ಬಾಟಲಿ ಪ್ಯಾಕೆಟ್ ನಲ್ಲಿ ಒಂದು ಚೌಕಾಕಾರ ಬಾಕ್ಸ್ ನಲ್ಲಿ ಅರ್ಧ ಭಾಗದಲ್ಲಿ ಹಳದಿ, ಕೆಂಪು, ಹಸುರು, ನೀಲಿ ಬಣ್ಣವನ್ನು ಕೊಟ್ಟಿರುತ್ತಾರೆ.
- ಹಸುರು, ತೀರಾ ಕಡಿಮೆ ವಿಷಕಾರಿ, ನೀಲಿ ಸಲ್ಪ ಸ್ವಲ್ಪ ವಿಷಕಾರಿ,ಹಳದಿ ಸಾಮಾನ್ಯ ವಿಷಕಾರಿ ಹಾಗೂ ಕೆಂಪು ಮಹಾ ವಿಷಕಾರಿಯಾಗಿರುತ್ತದೆ.
- ರೈತರು ಯಾವುದನ್ನು ನೊಡದ್ದ್ದರೂ ಇದನ್ನು ಗಮನಿಸಬೇಕು.
- ಸಾಮಾನ್ಯವಾಗಿ ಹಸುರು, ನೀಲಿ, ಹಳದಿ ಬಣ್ಣದ ಕೀಟನಾಶಕಗಳು ಜೇನು ನೊಣಗಳನ್ನು ಸಾಯಿಸಲಾರವು.
- ಕೆಂಪು ಬಣ್ಣದ ಕೀಟನಾಶಕಗಳು ಕೆಲವು ತಕ್ಷಣಕ್ಕೆ ಸಾಯಿಸದಿದ್ದರೂ ನೊಣಗಳಿಗೆ ನಿಧಾನ ವಿಷಕಾರಿಯಾಗಿ ಪರಿಣಮಿಸಬಹುದು.
ಇಂದು ಜೇನು ನೊಣಗಳ ಸಂತತಿ ಕಡಿಮೆಯಾಗಿದೆ, ಇದಕ್ಕೆಲ್ಲಾ ಕೀಟನಾಶಕವೇ ಕಾರಣ ಎನ್ನಲಾಗುತ್ತಿದೆ. ವಾಸ್ತವವಾಗಿ ಕೀಟನಾಶಕಕ್ಕಿಂತಲೂ ಜೇನು ನೊಣಗಳಿಗೆ ಆಹಾರದ ಲಭ್ಯತೆ ಕಡಿಮೆಯಾಗಿಯೇ ಅವುಗಳ ಸಂತತಿ ಕಡಿಮೆಯಾಗಿವೆ. ಹೆಚ್ಚು ಹೆಚ್ಚು ಒಣ ವಾತಾವರಣ, ಕಾಡು ಹೂ ಬಿಡುವ ಸಸ್ಯಗಳ ಕೊರತೆ, ಜೊತೆಗೆ ಒಂದು ಕಾರಣ ಕೀಟನಾಶಕವಾಗಿರಬಹುದು ಅಷ್ಟೇ.
ಕೀಟಗಳಿಗೆ ಹಾನಿಯಾಗದ ರೀತಿಯಲ್ಲಿ ಸಿಂಪರಣೆ:
- ಬಹುತೇಕ ಕೀಟನಾಶಕ ತಯಾರಕರು ಬಳಕೆದಾರರಿಗೆ ಕೊಡುವ ಹಸ್ತ (Users manual) ಪ್ರತಿಯಲ್ಲಿ ಕೀಟನಾಶಕವನ್ನು ಹೇಗೆ ಬಳಸಬೇಕು ಎಂದು ಬರೆದಿರುತ್ತಾರೆ.
- ಹೆಚ್ಚಿನ ಕೀಟನಾಶಕಗಳನ್ನು ಮಧ್ಯಾನ್ಹದ ಹೊತ್ತಿನಲ್ಲಿ ಸಿಂಪಡಿಸಬೇಕು ಎಂದು ಬರೆದಿರುತ್ತದೆ.
- ಬೆಳಗ್ಗೆ ಗಂಟೆ 11 ತನಕ , ಸಂಜೆ ಗಂಟೆ 4 ರ ನಂತರ ಪರಾಗ ಸ್ಪರ್ಶ ಮಾಡುವ ಕೀಟಗಳ ಹಾರಾಟ ಹೆಚ್ಚು. ಈ ಸಮಯದಲ್ಲಿ ಅಪಾಯ ಇರಲಿ, ಇಲ್ಲದಿರಲಿ, ಸಿಂಪಡಿಸುವುದು ಸೂಕ್ತವಲ್ಲ.
- ಕೀಟನಾಶಕಗಳನ್ನು ಇಂತಿಷ್ಟು ನೀರಿಗೆ ಇಂತಿಷ್ಟು ಪ್ರಮಾಣ ಎಂದು ಶಿಫಾರಸು ಮಾಡಿರುತ್ತಾರೆ.
- (ದುರದೃಷ್ಟವೆಂದರೆ ಎಲ್ಲಾ ತಯಾರಿಕಾ ಬಾಟಲಿಗಳಲ್ಲಿ ಹೆಕ್ಟೇರಿಗೆ ಇಂತಿಷ್ಟು ಎಂದು ನಮೂದಿಸಿರುತ್ತಾರೆ)
- ತಜ್ಞರ ಬಳಿಯಲ್ಲಿ ಸಮೀಪದ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಇಲಾಖೆ ಇವರಲ್ಲಿ ಪ್ರಮಾಣ ಎಷ್ಟು ಎಂದು ಕೇಳಿ ಅಷ್ಟೇ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣವನ್ನು ಬಳಕೆ ಮಾಡಬೇಕು.
- ಯಾವುದೇ ಕಾರಣಕ್ಕೆ ಅಳತೆ ಪಾತ್ರೆ ಇಲ್ಲದೆ ಅಂದಾಜಿಗೆ ಹಾಕುವುದು ಮಾಡಬಾರದು.
- ಕಡಿಮೆ ಪ್ರಮಾಣ ಹಾಕಿದರೂ ಅಂತಹ ಸಮಸ್ಯೆ ಉಂಟಾಗುವುದಿಲ್ಲ.
- ಹೆಚ್ಚು ಹಾಕಿದರೆ ಮುಂದೆ ರೈತರಿಗೆ ಇದು ತೊಂದರೆ.
- ಸಾವಯವ ಕೀಟನಾಶಕವಾದರೂ ಆದರಲ್ಲಿ ಏನು ಇದೆ ಎಂದು ತಿಳಿದು ಬಳಸಿರಿ. ಇದರಲ್ಲಿ ತಂಬಾಕು ರಸ ಸೇರಿಸಿರುತ್ತಾರೆ. ಇದು ಕೀಟಗಳಿಗೆ ಹಾನಿ ಮಾಡುತ್ತದೆ.
- ಸಿಂಪರಣೆ ಮಾಡುವಾಗ ಯಾವ ಬೆಳೆಗೆ ಸಿಂಪಡಿಸುತ್ತೀರೋ ಅದಕ್ಕೆ ಮಾತ್ರ ಬೀಳಬೇಕು.
- ಗಮ್, ಸ್ಪ್ರೆಡ್ಡರ್ ಹಾಕಿ ಸಿಂಪಡಿಸಿ. ನೆಲದಲ್ಲಿ ಇರುವ ಕಳೆ ಗಿಡಗಳಿಗೆ ಬೀಳದಂತೆ ಜಾಗರೂಕತೆ ವಹಿಸಿ.
- ಕಳೆ ಗಿಡಗಳ ಹೂವುಗಳಿಗೂ ಜೇನು ನೊಣಗಳು ಬರುವ ಕಾರಣ ಬೆಳೆಗೆ ಕೆಲವು ದಿನ ಬಾರದೆ ಇದ್ದರೂ ಅವು ಕಳೆಗಳಲ್ಲಿ ಆಹಾರ ಹುಡುಕುತ್ತವೆ.
ಕೀಟನಾಶಕ ಎಂಬುದು ವಿಷ. ಇದರಲ್ಲಿ ಮಕ್ಕಳಾಟಿಕೆ ಮಾಡಬಾರದು. ತುಂಬಾ ಜಾಗರೂಕತೆ ವಹಿಸಿ ಸಿಂಪರಣೆ ಮಾಡಬೇಕು. ಹಸ್ತ ಪ್ರತಿಯನ್ನು ತಾಳ್ಮೆಯಲ್ಲಿ ಪೂರ್ತಿ ಓದಿಕೊಳ್ಳಬೇಕು. ಒಬ್ಬರು ಹೇಳಿದರು ಎಂದು ಅದನ್ನೇ ನಾವೂ ಹೇಳುವುದಲ್ಲ. ಸ್ವಲ್ಪ ತಮ್ಮ ಯೋಚನಾ ಶಕ್ತಿಯನ್ನು ಬಳಸಿಕೊಂಡು ಪರಾಮರ್ಶಿಸಬೇಕು. ನಾವು ಹಲವಾರು ವರ್ಷಗಳಿಂದ ಜೇನು ಸಾಕುವವರಾಗಿದ್ದೇವೆ. ಅಗತ್ಯ ಇದ್ದಾಗ ಕೀಟನಾಶಕವನ್ನೂ ಬಳಸುತ್ತೇವೆ. ನಮಗೆ ಏನೂ ತೊಂದರೆ ಆಗಿಲ್ಲ ಎಂಬ ರೈತರ ಬಳಿಗೆ ಹೋಗಿ ಪರೀಕ್ಷೆ ಮಾಡಿ. ಇವರು ಹೇಳುವುದು ಸರಿ ಇರುತ್ತದೆ.