ಕೀಟನಾಶಕಗಳು ಮೈಗೆ ಕೈಗೆ ತಾಗಿದರೆ ಏನು ಮಾಡಬೇಕು?

ಕೀಟ-ರೋಗನಾಶಕ ಸಿಂಪರಣೆ

ಬೆಳೆ ರಕ್ಷಣೆಯಲ್ಲಿ ರೈತರು ಕೀಟನಾಶಕಗಳನ್ನು ಬಳಸಿದಾಗ ಕೆಲವೊಮ್ಮೆ ಅಪ್ಪಿ ತಪ್ಪಿ ಅದು ಚರ್ಮ, ಕಣ್ಣು, ಬಾಯಿ ಮುಂತಾದ ಭಾಗಗಳಿಗೆ ತಾಗುತ್ತದೆ. ಅದರ ವಾಸನೆ ಉಸಿರಾಟದ ಮೂಲಕ ದೇಹದ ಒಳಗೆ ಸೇರುತ್ತದೆ.  ಹೀಗಾದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು.ಪ್ರಥಮ ಚಿಕಿತ್ಸೆ ಅಥವಾ ಹೆಚ್ಚು ತೊಂದರೆಗಳಿದ್ದರೆ ತಜ್ಞ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇದು ನಮ್ಮ ದೇಹವನ್ನು ನಿಧಾನ ವಿಷಕ್ಕೆ ಬಲಿಯಾಗುವಂತೆ ಮಾಡುತ್ತದೆ.

 ರೈತರ ಮತ್ತು ಕೃಷಿಕಾರ್ಮಿಕರು ಕೀಟನಾಶಕಗಳನ್ನು ಮತ್ತು ಸಿಂಪರಣೆ ಯಂತ್ರಗಳನ್ನು ಸಮರ್ಪಕವಾಗಿ ಉಪಯೋಗ ಮಾಡಿದಾಗ ಮಾತ್ರ ಅದು ಸುರಕ್ಷಿತ. ಅಜಾಗರೂಕತೆ ಮಾಡಲೇ ಬಾರದು. ಕೀಟನಾಶಕ – ರೋಗ ನಾಶಕ ಬಳಕೆಯ ಮುನ್ನ ಅದರ ಜೊತೆಗೆ ಕೊಡಲಾದ ಹಸ್ತ ಪ್ರತಿಯನ್ನು  ಕಡ್ದಾಯವಾಗಿ ಓದಬೇಕು. ಪ್ರಮಾಣ ಇತ್ಯಾದಿಗಳನ್ನು ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಕೆ ಮಾಡಬಾರದು. ಮಿಶ್ರಣ ಮಾಡುವಾಗ ಅದನ್ನು ಆಘ್ರಾಣಿಸಬಾರದು. ಸಿಂಪರಣೆ ಮಾಡುವಾಗ ಅದು ಮೈ ಕೈಗೆ ಬೀಳಬಾರದು. ಸಿಂಪರಣೆ ಮಾಡುವಾಗ ಮೈಗೆ ಸುರಕ್ಷಾ ವಸ್ತ್ರ ಧರಿಸಿರಬೇಕು. ಇವೆಲ್ಲವನ್ನೂ ಪಾಲಿಸಬೇಕು. ಹೆಚ್ಚಿನವರು ಇದರಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದಾಗಿ ತಕ್ಷಣ ತೊಂದರೆಯೂ ಆಗಬಹುದು. ನಿಧಾನವಾಗಿ ತೊಂದರೆಯೂ ಆಗಬಹುದು. ಕೀಟನಾಶಕಗಳು ಯಾವುದೂ ಸುರಕ್ಷಿತವಲ್ಲ. ಎಲ್ಲವೂ ಆಪಾಯಕಾರಿ.ಆದ ಕಾರಣ ಇದನ್ನು ಬಳಕೆ ಮಾಡುವಾಗ ಬಹಳ ಜಾಗರೂಕತೆ ವಹಿಸಬೇಕು. ಕೀಟನಾಶಕ ಬಹಳ ವಿಷಕಾರಿ ಹಾಗೂ ಸ್ವಲ್ಪವೇ ಪ್ರಮಾಣದ ವಿಷಕಾರಿಯಾದರರೂ ಅದು ತುಂಬಾ ಆಪತ್ತಿಗೆ ಕಾರಣ. ಜನ ಇಂದು ರೋಗ ರುಜಿನಗಳಿಗೆ ಬಲಿಯಾಗುವುದಕ್ಕೆ, ಅಕಾಲಿಕ ಸಾವನ್ನು ಹೊಂದುವುದಕ್ಕೂ ಇದು ಇಂದು ಕಾರಣ. ಆದುದರಿಂದ ಕೆಲವು ಸೂಕ್ಷ್ಮಗಳನ್ನು ಅರಿತು ಇವುಗಳನ್ನು ಬಳಕೆ ಮಾಡಬೇಕು.  

ಕೀಟನಾಶಕಗಳ ವಿಷಮತೆಯ ತೊಂದರೆಗಳು:

ಪೀಡೆನಾಶಕದ ವಿಷವು ದೇಹವನ್ನು ಆಹಾರ (ಮೌಖಿಕವಾಗಿ), ಚರ್ಮದ ಮೂಲಕ ಅಥವಾ ಶ್ವಾಸದ ಮೂಲಕ ಪ್ರವೇಶಿಸುತ್ತದೆ. ವಿಷಮತೆಯ ಲಕ್ಷಣಗಳು ದೇಹವನ್ನು ನಿಗದಿತ ಅವಧಿಯಲ್ಲಿ ಸೇರಿರುವ ಪ್ರಮಾಣವನ್ನು ಅವಲಂಬಿಸಿರುತ್ತವೆ.

ಮನುಷ್ಯನ ದೇಹವು ವಿಷವನ್ನು ಸ್ವಲ್ಪ ಪ್ರಮಾಣದಲ್ಲಿ ವಿಷಯುಕ್ತ ಹಾಗೂ ಹೀರಿಕೊಂಡಿರುವ ವಿಷವನ್ನು ವರ್ಜಿಸುವ ಸಾಮರ್ಥ್ಯ ಹೊಂದಿರುತ್ತದೆ.ಒಂದು ವೇಳೆ ಹೆಚ್ಚಿನ ಪ್ರಮಾಣದ ವಿಷವನ್ನು ಹೀರಿಕೊಂಡಲ್ಲಿ ಅದು ಶೇಖರಣೆಯಾಗಿ ಹಾನಿ ಮಾಡುತ್ತದೆ. ಅದು ಕೆಲವು ಸಲ ತೀವ್ರ ವಿಷವಾಗಿಯೂ ಪರಿಣಮಿಸುತ್ತದೆ. ವಿಷದ ಲಕ್ಷಣಗಳು ಕೆಲವೇ ಸೆಕೆಂಡು ಇಲ್ಲವೇ ನಿಮಿಷಗಳಲ್ಲಿ ಕಂಡುಬರುತ್ತವೆ.

ಸ್ವಲ್ಪ ವಿಷಕಾರಿ ಶೇಷಗಳನ್ನು ಕಾಳಿನಲ್ಲಿ, ನೀರಿನಲ್ಲಿ, ಹಾಲಿನಲ್ಲಿ, ಕಾಯಿಪಲ್ಲೆ, ಹಣ್ಣುಗಳ ಜೊತೆಗೆ ನಿರಂತರವಾಗಿ ದೇಹದಲ್ಲಿ ಸಂಗ್ರಹವಾಗಿ ದೀರ್ಘಕಾಲದ ವಿಷವಾಗಿ (ವ್ಯಾಧಿ) ಪರಿಣಮಿಸುತ್ತವೆ. ಕೆಲ ಸಮಯದ ನಂತರ ಕ್ಯಾನ್ಸರ್, ಮಕ್ಕಳ ಅಂಗವಿಕಲತೆ, ಸಂತಾನಶಕ್ತಿ ಕುಂದಿಸುವಿಕೆ, ಗರ್ಭಪಾತ, ಬಲಹೀನತೆ, ಮಾನಸಿಕ ಅಶ್ವಸ್ಥತೆ, ಅನಾರೋಗ್ಯಕರ ಬೆಳವಣಿಗೆಗೆ ಉಂಟು ಮಾಡುತ್ತವೆ ಹಾಗೂ ದೇಹದ ಕೆಲ ಮುಖ್ಯ ಅಂಗಾಂಗಗಳಾದ ಪಿತ್ತಜನಕಾಂಗ, ಮೂತ್ರಜನಕಾಂಗ, ಮೆದುಳು ಅಥವಾ ನರಗಳ ವ್ಯವಸ್ಥೆ ಹಾನಿಗೊಳಗಾಗುತ್ತವೆ.

ಮನಬಂದಂತೆ ಕೀಟನಾಶಕ ಬಾಟಲಿ ಎಸೆಯದಿರಿ

ವಿಷಮತೆಯ ಲಕ್ಷಣಗಳು:

ಕೆಳಗೆ ತಿಳಿಸಿರುವ ಲಕ್ಷಣಗಳು ತಕ್ಷಣದ ಎಚ್ಚರಿಕೆ ವಹಿಸುವುದಕ್ಕೆ ಸೂಚಿಸುತ್ತವೆ ಮತ್ತು ವಿಷಮತೆಯಿಂದ ಬಳಲುವುದನ್ನು ತಿಳಿಸುತ್ತವೆ.

  • ಸಾಮಾನ್ಯ     : ವಿಪರೀತ ನಿಶ್ಯಕ್ತಿ ಮತ್ತು ಬಳಲುವಿಕೆ
  • ಚರ್ಮ          : ವಿಪರೀತ ಬೇವರುವಿಕೆ, ರೇಗುವುದು, ಸಿಟ್ಟಾಗುವಿಕೆ
  • ಕಣ್ಣುಗಳು       : ಕಡಿತ ಅಥವಾ ತುರಿಕೆ, ಉರಿ, ನೀರು ಬರುವಿಕೆ, ಪ್ರಯಾಸದ ಅಥವಾ ಅಸ್ಪಷ್ಟ ನೋಟ,
  • ಕೀರಿದಾದ ಅಥವಾ ದೊಡ್ಡದಾದ ಕಣ್ಣಿನ ಗೊಂಬೆ
  • ಜೀರ್ಣಾಂಗ   : ಬಾಯಿಯಲ್ಲಿ ಉರಿ ಮತ್ತು ಗಂಟಲಲ್ಲಿ ಅತಿಯಾದ ಜೊಲ್ಲು ಬರುವಿಕೆ, ಪಿತ್ತೋದ್ರೇಕದಿಂದ
  •  ವಾಕರಿಕೆ ಬಂದಂತಾಗುವುದು, ವಾಂತಿ, ಹೊಟ್ಟೆ ನೋವು, ಭೇದಿ
  • ನರವ್ಯೂಹ     : ತಲೆನೋವು, ತಲೆತಿರುಗುವಂತಾಗಿ, ಗೊಂದಲ, ತಾಳ್ಮೆ ಇಲ್ಲದ, ಮಾಂಸ ಖಂಡಗಳ ಸ್ನಾಯು
  • ಸೆಳೆತ, ತೊದಲು ಮಾತು, ಮೂರ್ಛೆ
  • ಉಸಿರಾಟ ಕ್ರಿಯೆ : ಕೆಮ್ಮು, ಎದೆನೋವು, ಬಿಗಿಯಾದ ಮತ್ತುತೊಂದರೆದಾಯಕ ಉಸಿರಾಟ, ಉಬ್ಬಸ.

ವಿಷಮತೆಯಿಂದ ಹೇಗೆ ಸಂರಕ್ಷಿಸಿಕೊಳ್ಳಬಹುದು;.

ಕೀಟನಾಶಕಗಳು ನಮ್ಮ ದೇಹಕ್ಕೆ ಬೇರೆ ಬೇರೆ ವಿಧದಲ್ಲಿ ಸೇರಿಕೊಳ್ಳುತ್ತವೆ. ಹೇಗೆಯೇ ಸೇರಿಕೊಂಡರೂ ಅದು ವಿಷವೇ. ಚರ್ಮ, ಉಸಿರು ಇತ್ಯಾದಿ ಇವುಗಳಲ್ಲಿ ಪ್ರಾಮುಖ್ಯ.

  • ಸಿಂಪಡಿಸುವಾಗ ಮೈಗೆ ಎಲ್ಲೆಲ್ಲಿ ಅನಿವಾರ್ಯವಾಗಿ ಕೀಟನಾಶಕದ ಸ್ಪರ್ಶ ಆಗುತ್ತದೆಯೋ ಅಲ್ಲಿಗೆಲ್ಲಾ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳಬೇಕು.
  • ಕೈಯಿಂದ ಕಲಕುವುದು, ಮಾಡಬಾರದು. ಕಲಕುವಾಗ ಮುಖ ಭಾಗಕ್ಕೆ ಮಾಸ್ಕ್ ತರಹ ಟವೆಲ್ ಕಟ್ಟಿಕೊಳ್ಳಬೇಕು.
  • ಸಿಂಪಡಿಸುವಾಗ ಗಾಳಿಯ ದಿಕ್ಕಿಗೆ ಸಿಂಪರಣೆ ಮಾಡಬೇಕು. ಅಗ ಮೈಗೆ ಹಾರುವುದು ಕಡಿಮೆಯಾಗುತ್ತದೆ.
  • ಸುರಕ್ಷಾ ಕ್ರಮಗಳನ್ನು ಪಾಲಿಸದೆ ಕೀಟನಾಶಕಗಳನ್ನು ಯಾವಾಗಲೂ ಬಳಕೆ ಮಾಡಲೇ ಬಾರದು.
  • ಚರ್ಮ : ದೇಹದಲ್ಲಿ ವಿಷ ಸೇರಿಕೊಳ್ಳಲು ಚರ್ಮವು ಸುಲಭ ಮಾರ್ಗವಾಗಿದೆ.
  • ಪ್ರ ಪ್ರಥಮವಾಗಿ ಪೀಡೆನಾಶಕವನ್ನು ಸರಿಯಾಗಿ ಬಳಸದೇ ಒಂದು ವೇಳೆ ಚರ್ಮದ ಮೇಲೆ ಚೆಲ್ಲಿದರೆ ಕೆಲ ಪೀಡೆನಾಶಕಗಳು ಶೀಘ್ರವಾಗಿ ಪ್ರವೇಶಿಸುತ್ತವೆ.
  • ನಂತರ ಹೀರಲ್ಪಡುವುದರಿಂದ ದೇಹವು ವಿಷಮತೆಯ ಲಕ್ಷಣಗಳನ್ನು ತೋರಿಸುತ್ತದೆ.
  • ಅಪಾಯಕಾರಿ ವಿಷಮತೆಯಿಂದ ಸಂರಕ್ಷಿಸಿಕೊಳ್ಳಲು ವಿಳಂಬ ಮಾಡದೇ ತಕ್ಷಣವೇ ಚಿಕಿತ್ಸೆ ಪಡೆಯಬೇಕು.
  • ವಿಷವು ತಗಲಿದ ಚರ್ಮವನ್ನು ತಕ್ಷಣದಲ್ಲಿ ಸಾಬೂನು ಮತ್ತು ಸ್ವಚ್ಛ ನೀರಿನಿಂದ ಚೆನ್ನಾಗಿ ತೊಳೆಯಿರಿ.
  • ವಿಷ ಸೋಂಕಿತ ಅರಿವೆಗಳನ್ನು ತೆಗೆಯಿರಿ ಮತ್ತು ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿರಿ.
  • ಒಂದು ವೇಳೆ ಗುಳ್ಳೆ, ಗಾದರಿ ಅಥವಾ ಕಡಿತದ ಅನುಭವ ಉಂಟಾದಲ್ಲಿ ಸೂಕ್ತ ಸಂತೈಸುವ ಲೇಪನ (ಕ್ರೀಮ) ಹಚ್ಚಿರಿ.
  • ಒಂದು ವೇಳೆ ಪೀಡೆನಾಶಕ ಶೀಘ್ರಗತಿಯಲ್ಲಿ ಚರ್ಮವನ್ನು ಪ್ರವೇಶಿಸಿದಲ್ಲಿ, ಬಾಯಿಯ ಮೂಲಕ ವಿಷ ಸೇವಿಸಿದಾಗ ಉಂಟಾಗುವ ಲಕ್ಷಣಗಳಂತೆ ಕಂಡುಬರುತ್ತವೆ.
  • ತಕ್ಷಣವೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು.

ಕಣ್ಣುಗಳಿಗೆ ಕೀಟನಾಶಕ ತಾಗಿದರೆ:

ಈ ಮೂಲಕ ವಿಷ ಸೇರುವುದು ಆಕಸ್ಮಿಕವಾಗಿ ಮಾತ್ರ, ಹಾಗಾದಲ್ಲಿ ಕಣ್ಣುಗಳನ್ನು ಸುಮಾರು 10 ನಿಮಿಷಗಳ ಕಾಲ ಶುದ್ಧ ಹಾಗೂ ತಂಪಾದ ನೀರಿನಿಂದ ತೊಳೆಯಿರಿ. ಇದು ಕಣ್ಣುಗಳಲ್ಲಿ ಉರಿತ ಅಥವಾ ನವೆಯನ್ನು ಕಡಿಮೆ ಮಾಡುತ್ತದೆ.ನೋವು ಇನ್ನು ಹೆಚ್ಚಾದಲ್ಲಿ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಉಸಿರಾಟಕ್ಕೆ ಸಮಸ್ಯೆ ಉಂಟಾದರೆ:

  • ಕೀಟನಾಶಕಗಳೊಂದಿಗೆ ಕೆಲಸ ಮಾಡುವಾಗ ಅವು ಅವಿಯಾಗುವ (ಹವೆಯಾಗುವ) ಸಾಧ್ಯತೆಗಳುಂಟು.
  • ಶ್ವಾಸಕೋಶಗಳು ಇದನ್ನು ಹೀರುವುದು ಸರ್ವೆಸಾಮಾನ್ಯ.
  • ಸೋಂಕಿತ ರೋಗಿಯನ್ನು ಕೆಲಸ ನಿರ್ವಹಿಸುವ ಆ ಪ್ರದೇಶದಿಂದ ಬೇರೆಡೆಗೆ ಸಾಗಿಸಿ, ಅವರ ಎದೆ ಮತ್ತು ಕುತ್ತಿಗೆಯ ಸುತ್ತಿರುವ ಅರಿವೆಗಳನ್ನು ಸಡಿಲಗೊಳಿಸಿ, ನಂತರ ಅವಶ್ಯಕತೆ ಇದ್ದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕು
  • ನಂತರ ಆದಷ್ಟು ಬೇಗ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಬೇಕು.

ಕೀಟ ನಾಶಕದಿಂದ ತೊಂದರೆಗೆ ಪ್ರಥಮ ಚಿಕಿತ್ಸೆ

ವಿಷದಿಂದ ಬಳಲುತ್ತಿರುವ ರೋಗಿಗೆ ಸಾಧ್ಯವಾದಷ್ಟು ಶೀಘ್ರವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಇದಕ್ಕಾಗಿ ತಕ್ಷಣವೇ ರೋಗಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವುದಾಗಲೀ ಅಥವಾ ವೈದ್ಯರನ್ನೆ ರೋಗಿ ಇದ್ದ ಕಡೆಗೆ ಕರೆತರುವುದಕ್ಕೂ ಮುಂಚೆ ಈ ಕೆಳಗಿನ ಪ್ರಥಮಚಿಕಿತ್ಸೆಯನ್ನು ನೀಡಬೇಕು.

  • ಸೋಂಕು ಕಡಿಮೆ ಮಾಡಿಕೊಳ್ಳುವಿಕೆ
  • ರೋಗಿಗೆಚಿಕಿತ್ಸೆ ನೀಡುವಾಗ ಸ್ವಯಂ ಸೋಂಕಿಗೊಳಗಾಗದಂತೆ ಎಚ್ಚರವಹಿಸಿ.
  • ವ್ಯಕ್ತಿಯನ್ನು ವಿಷ ಚಲ್ಲಿದ ಸ್ಥಳದಿಂದ ಅಥವಾ ಇತರೆ ಮಲಿನಗೊಂಡ ಸ್ಥಳದಿಂದ ಬೇರ್ಪಡಿಸಿ.
  • ವಿಷವು ಚರ್ಮದೊಂದಿಗೆ ಸಂಪರ್ಕಿಸುವುದು ತಡೆಯಿರಿ.
  • ವಿಷದಿಂದ ಮಲಿನಗೊಂಡ ಅರಿವೆ ಮತ್ತು ಪಾದರಕ್ಷೆಗಳನ್ನು ತಕ್ಷಣವೇ ತಗೆಯಿರಿ.
  • ಸಾಕಷ್ಟು ಶುದ್ಧ ನೀರನ್ನು ಬಳಸಿ ಪೀಡೆನಾಶಕವನ್ನು ಚರ್ಮ, ಕಣ್ಣುಗಳು ಮತ್ತು ತಲೆಗೂದಲಿಂದ ಸ್ವಚ್ಫಗೊಳಿಸಿರಿ.
  • ನೀರಿರದೇ ಇದ್ದ ಪಕ್ಷದಲ್ಲಿ, ಕಾಗದ ಅಥವಾ ಅರಿವೆಯಿಂದ ಚರ್ಮವನ್ನು ಸಾವಕಾಶವಾಗಿ ಒರೆಸಿರಿ, ನಂತರ ಅದನ್ನು ನಾಶಪಡಿಸಿ, ಜೋರಾಗಿ ಚರ್ಮವನ್ನು ತಿಕ್ಕುವುದು ಅಥವಾ ಕೆರೆಯುವುದನ್ನು ಮಾಡಬೇಡಿ.

ಆಹಾರದ ಮೂಲಕ :

  • ಪೀಡೆನಾಶಕ ಸೋಂಕಿತ ವ್ಯಕ್ತಿ ಅತಿಯಾಗಿ ಉದ್ವೇಗಕ್ಕೊಳಗಾದಲ್ಲಿ ಅಥವಾ ಎದೆಗುಂದಿದ್ದಲ್ಲಿ, ನಿರಂತರವಾಗಿ ಶಾಂತತೆಯಿಂದಿರಲು ಧೈರ್ಯ ಕೊಡುವುದು ಅವಶ್ಯಕ.
  • ಶರೀರಕ್ಕೆ ಸೇರಿದ ರಾಸಾಯನಿಕ ಬಹಳ ವಿಷಕಾರಿಯಾಗಿರದೇ ಇದ್ದಲ್ಲಿ ಅಥವಾ ಪ್ರಾಣಾಂತಿಕವಾಗಿರದೇ ಇದ್ದಲ್ಲಿ ಪ್ರಥಮಚಿಕಿತ್ಸೆಯಲ್ಲಿ ವಾಂತಿ ಮಾಡಿಕೊಳ್ಳಲು ಸೂಚಿಸುವುದಿಲ್ಲ.
  • ಹಾಗೇನಾದರೂ ವಾಂತಿ ಮಾಡಿಸಬೇಕೆ ಬೇಡವೆ ಎನ್ನುವುದನ್ನು ಪೀಡೆನಾಶಕದ ಬಾಟಲ್‌ನ ಮೇಲೆ ಇರುವ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ.
  • ಸೋಂಕಿತ ವ್ಯಕ್ತಿ ಎಚ್ಚರವಿದ್ದಾಗ ವಾಂತಿ ಮಾಡಿಕೊಳ್ಳಲು ಹೇಳಿ. ವಾಂತಿ ಮಾಡಿಸಲೇ ಬೇಕಾದಲ್ಲಿ ಈ ಕೆಳಗಿನ ವಿಧಾನ ಅನುಸರಿಸಿರಿ.
  • ಸೋಂಕಿತ ವ್ಯಕ್ತಿಯನ್ನು ಕುಳಿತುಕೊಳ್ಳಲು ಅಥವಾ ಎದ್ದು ನಿಲ್ಲಲು ತಿಳಿಸಿ.
  • ಸೋಂಕಿತ ವ್ಯಕ್ತಿಯ ಗಂಟಲಿನ ಹಿಂಭಾಗದಲ್ಲಿ ನಿಮ್ಮ ಕೈಗೊರಳುಗಳಿಂದ ನಾಜೂಕಾಗಿ ಕಚಗುಳಿ ಇಡುವುದರೊಂದಿಗೆ ವಾಂತಿ ಮಾಡಿಕೊಳ್ಳಲು ಸಹಕರಿಸಿ.
  • ನಿಮ್ಮ ಕೈ ಬೆರಳುಗಳನ್ನು ಕಚ್ಚದಂತೆ, ಬೇರೆ ಕೈಯ್ಯ ಎರಡು ಬೆರಳುಗಳಿಂದ ಗಲ್ಲವನ್ನು ಎರಡು ದವಡೆಯ ಮಧ್ಯೆ ಅದುಮಿರಿ.
  • ವಾಂತಿಯಾದ ನಂತರ ಅಥವಾ ವಾಂತಿ ಆಗದೇ ಇದ್ದಲ್ಲಿ, ವೈದ್ಯರು ಬರುವತನಕ 3 ಚಮಚ ಹುಡಿ ಮಾಡಿದ ಇದ್ದಿಲ್ಲನ್ನುಅರ್ಧ ಲೋಟ ನೀರಿನಲ್ಲಿ ಸೇರಿಸಿ ಮೇಲಿಂದ ಮೇಲೆ ಕುಡಿಸಿರಿ.

ಪ್ರಾಮುಖ್ಯ ಸಲಹೆ;

  • ಉಪ್ಪಿನ ನೀರನ್ನುಕೊಡಬೇಡಿ.
  • ಬೀಡಿ ಸೇದಲು ಅಥವಾ ಸರಾಯಿ ಅಥವಾ ಹಾಲು ಕುಡಿಯುವುದನ್ನು ಸೋಂಕಿತ ವ್ಯಕ್ತಿ ಮಾಡಕೂಡದು, ಇದು ವಿಷವನ್ನು ಕರುಳಿನಿಂದ ಶೀಘ್ರವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.
  • ಸೋಂಕಿತ ವ್ಯಕ್ತಿಯನ್ನು ಆತನ ಒಂದು ಬದಿಯಲ್ಲಿ ಮಲಗಿಸಿ ತಲೆಯು ದೇಹದ ಇತರೆ ಭಾಗಗಳಿಗಿಂತ ಕೆಳಗಿರಲಿ ಇದು ಶ್ವಾಸಕೋಶದ ಉರಿಯುವಿಕೆಯನ್ನು ಕಡಿಮೆ ಮಾಡುತ್ತದೆ.
  • ಸೋಂಕಿತ ವ್ಯಕ್ತಿಯ ಉಸಿರಾಟ ಕ್ರಿಯೆಯನ್ನು ಮತ್ತು ಪ್ರಜ್ಞೆಯಿರುವುದನ್ನು ಸೂಕ್ಷ್ಮರೀತಿಯಲ್ಲಿ ಗಮನಿಸಿ. ದೇಹಕ್ಕೆ ವಿಷ ಹೆಚ್ಚು ಸೇರಿದರೆ ಪ್ರಜ್ಞಾಹೀನನಾಗಿ ವಾಂತಿ ಮಾಡಿಕೊಳ್ಳಬಹುದು ಅಥವಾ ಅಲ್ಲಿಗೇ ಉಸಿರು ನಿಲ್ಲಲೂ ಬಹುದು. ಆದ ಕಾರಣ ಜಾಗರೂಕತೆಯಲ್ಲಿ ಕೀಟನಾಶಕಗಳನ್ನು ಬಳಕೆ ಮಾಡಿ.

ಲೇಖಕರು;

ಡಾ. ಬಿ. ದೊಡ್ಡಬಸಪ್ಪ1, ಡಾ.ಆರತಿ ಪನ್ನೂರೆ 2, ಮಲ್ಲಿಕಾ ಮೇಟಿ 3 ಮತ್ತುಡಾ. ಶ್ವೇತಾ ಬಿ.ಎಸ್ 4.1-2ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತç), 3-4 ಸಹಾಯಕ ಪ್ರಾಧ್ಯಾಪಕರು (ಕೃಷಿ ವಿಸ್ತರಣೆ),2.ಕೃಷಿ ಮಹಾವಿದ್ಯಾಲಯ, ಚಿಂತಾಮಣಿ, ಚಿಕ್ಕಬಳ್ಳಾಪುರ 3.ಕೃಷಿ ಮಹಾವಿದ್ಯಾಲಯ, ರಾಯಚೂರು 1-4 ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತಾರಣಾಕೇಂದ್ರ, ತೋವಿವಿ ಅವರಣ, ಜಿಕೆವಿಕೆ, ಬೆಂಗಳೂರು-560 065 ಮಿಚಂಚೆ: dbasappa7096@gmail.com

Leave a Reply

Your email address will not be published. Required fields are marked *

error: Content is protected !!