ಅಡಿಕೆ ಮರಗಳು ಸಾಯುವುದಕ್ಕೆ ಪ್ರಮುಖ ಕಾರಣ ಮತ್ತು ಪರಿಹಾರ.

ಎಲೆ ಹಳದಿಯಾಗಿ ಅಡಿಕೆ ಮರ ಸಾಯುವ ಕ್ರಮ

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಫಲಕೊಡುತ್ತಿರುವ ಸಸಿ/ ಮರಗಳು ಸಾಯುತ್ತವೆ. ರೈತರು ಇಂತಹ ಸಮಸ್ಯೆ ಆದಾಗ ಫೇಸ್ ಬುಕ್ ನಲ್ಲಿ ವಿಷಯ ಹಾಕಿ ಪರಿಹಾರ ಅಪೇಕ್ಷಿಸುತ್ತಾರೆ. ಅಲ್ಲಿ ಒಂದಶ್ಟು ಕಮೆಂಟ್ ಗಳು ಬರುತ್ತವೆ. ಅವರಿಗೆ ಸರಿಕಂಡದ್ದನ್ನು ಸ್ವೀಕರಿಸುತ್ತಾರೆ. ವಾಸ್ತವವಾಗಿ ಅಡಿಕೆ ಸಸಿಗಳು ಸಾಯುವುದಕ್ಕೆ ಕಾರಣ ಎರಡು.

ಯಾವುದೇ ಸಸಿ ಸಾಯಬೇಕಾದರೆ ಅದರ ಬೇರಿಗೆ ತೊಂದರೆ ಆಗಿರಬೇಕು ಆಥವಾ ಸಸ್ಯದ ಮೇಲಿನ  ಭಾಗಕ್ಕೆ ಯಾವುದಾದರೂ ರೋಗ ತಗಲಿ ಅದರಿಂದಾಗಿ ಸಾಯಬೇಕು. ಇವೆರಡರಲ್ಲಿ ಯಾವುದು ಆಗಿದೆ ಎಂದು ಪರಿಶೀಲಿಸಿದರೆ ಅದಕ್ಕೆ ಬೇಕಾದ ಪರಿಹಾರ ಹುಡುಕುವುದು ಸುಲಭ.

ಅಡಿಕೆ ಸಸಿ ಎಂಬುದು ಒಂದು ಏಕದಳ ಸಸ್ಯ. ಇದಕ್ಕೆ ಒಂದು ಕಾಂಡ ಮಾತ್ರ ಇರುವುದು.  ಕಾಂಡದ ಬುಡದಲ್ಲಿ  ಮಣ್ಣಿಗೆ ತಾಗಿಕೊಂದಿರುವ ಸ್ಥಳದಲ್ಲಿ ಗಂಟುಗಳ ಭಾಗದಿಂದ ಬೇರುಗಳು ಮೂಡುತ್ತವೆ.  ಈ ಬೇರುಗಳು ನೆಲದ ಮೇಲು ಭಾಗದಲ್ಲಿ ಪಸರಿಸುತ್ತಾ ಬೆಳೆಯುತ್ತವೆ.  ಎಷ್ಟೇ ಆಳ ಮಾಡಿ ನೆಟ್ಟರೂ ಸಹ ಅದರ ಬೇರುಗಳು ಮೇಲ್ಮುಖವಾಗಿಯೇ ಬೆಳೆಯುವುದು. ಮರ ಬೆಳೆದಂತೆ ತಳ ಭಾಗದ ಬೇರುಗಳು ನಿಶ್ಕ್ರಿಯವಾಗುತ್ತವೆ. ಅದರ ಮೇಲಿನ ಬೇರು ಮರಕ್ಕೆ ಆಧಾರವಾಗಿ  ಇರುತ್ತದೆ. ಅದಕ್ಕೂ ಮೇಲಿರುವ ಬಿಳಿ ಬಣ್ಣದ ಬೇರುಗಳು  ಆಹಾರ ನೀರನ್ನು ಹೀರಿ ಕಾಂಡಕ್ಕೆ ತಲುಪಿಸಿ ಕಾಂಡದ ಮೂಲಕ ಎಲೆಗಳ ಕಡೆಗೆ ಸರಬರಾಜು ಆಗುತ್ತವೆ. ನಿರಂತರವಾಗಿ ಹಳೆ ಬೇರುಗಳು ಸತ್ತು ಹೊಸ ಬೇರುಗಳು ಹುಟ್ಟಿಕೊಳ್ಳುತ್ತಾ ಇರುತ್ತವೆ. ಕಾಂಡದ  ರಚನೆ ಆಗುವುದು ಎಲೆಗಳು ಅಥವಾ ಗರಿಗಳು ಉದುರಿದಾದ. ಎಲೆಗಳ ಅಂತರವನ್ನು ಅವಲಂಭಿಸಿ  ಗಂಟುಗಳಾಗುತ್ತವೆ. ಎಲೆಗಳ ಭಾಗವನ್ನು ಶಿರ ಭಾಗ  ಎನ್ನುತ್ತೇವೆ. ಇಲ್ಲಿ ಇರುವ ಎಲೆಗಳ ತುದಿಯಲ್ಲಿ ಸುಳಿ ಇರುತ್ತದೆ. ಸುಳಿ ಎಂದರೆ ಅದು ಬೆಳೆದಾಗ ಎಲೆಯಾಗಿ ಮಾರ್ಪಡುವ ಭಾಗ.ಸುಳಿ ಭಾಗ ಮಾತ್ರ ಬೆಳವಣಿಗೆ ಆಗುತ್ತಾ ಮರ ಎತ್ತರವಾಗುತ್ತಾ ಹೋಗುತ್ತದೆ. ಕಾಂಡದಲ್ಲಿ ಮೊಗ್ಗು ಚಿಗುರಿ ಕವಲು ರೆಂಬೆ ಆಗುವ ಕ್ರಮ ಈ ತಾಳೆ ಜಾತಿಯ ಸಸ್ಯಗಳಲ್ಲಿ ಇಲ್ಲ.

ಅಡಿಕೆ ಮರ ಸುಳಿ ಕೊಳೆತು ಸಾಯುವುದು

ಅಡಿಕೆ ಸಸಿ/ಮರ ಸಾಯುವುದಕ್ಕೆ ಕಾರಣ:

  • ಇತ್ತೀಚೆಗೆ ಅಡಿಕೆ ಮರಗಳು ಸಾಯುವ ಪ್ರಮಾಣ ಹೆಚ್ಚಾಗುತ್ತಿದೆ.
  • ಯಾವಾಗಲೂ ಬೆಳೆಗಾರರು ಮರದ ಶಿರ ಭಾಗವನ್ನು ಗಮನಿಸುತ್ತಾ ಇರುವುದಿಲ್ಲ.
  • ಯಾವಗಲಾದರೂ ಗಮನಿಸಿದಾಗ ಮರದ ಎಲೆಗಳೂ ಹಳದಿಯಾಗಿರುವುದು  ಕಾಣಿಸುತ್ತದೆ.
  • ಇನ್ನು ಕೆಲವರ ತೋಟದಲ್ಲಿ ಎಲೆಗಳು ಹಸುರಾಗಿಯೇ ಇರುತ್ತವೆ.
  • ಆದರೆ ಸೂಕ್ಷ್ಮವಾಗಿ  ಗಮನಿಸಿದರೆ ಅದರ ಸುಳಿ ಇರುವುದಿಲ್ಲ.
  • ಅಡಿಕೆ ಗೊನೆಗಳಿದ್ದರೆ ಅದು ಬೆಳೆಯುತ್ತಿರುತ್ತದೆ. ಬೆಳೆದ ಎಲೆ ಉದುರುತ್ತಿರುತ್ತದೆ.
  • ಎಲ್ಲಾ ಉದುರಿದಾಗ ಮರದ ಶಿರ ಭಾಗದಲ್ಲಿ ಎಲೆಗಳೇ ಇರುವುದಿಲ್ಲ.
  • ಇವೆರಡೂ ಬೇರೆ ಬೇರೆ ಕಾರಣಗಳಿಂದ ಸತ್ತು ಹೋಗಿರುತ್ತವೆ.

ಎಲೆ ಹಳದಿಯಾಗಿ ಸಾಯುವುದು ಯಾಕೆ?

ಎಲೆ ಹಳದಿಯಾಗುವ ಪ್ರಾರಂಭಿಕ ಲಕ್ಷಣ
ಎಲೆ ಹಳದಿಯಾಗುವ ಪ್ರಾರಂಭಿಕ ಲಕ್ಷಣ
  • ಅಡಿಕೆ ಮರದ ಎಲೆಗಳು ಹಳದಿಯಾಗಿ ಸಾಯುತ್ತಿದ್ದರೆ , ಅದರ ಲಕ್ಷಣ  ಹೇಗಿರುತ್ತದೆ ಎಂದರೆ, ಕೆಳ ಭಾಗದ ಎಲೆಗಳು ಮೊದಲು ಹಳದಿಯಾಗುತ್ತಾ ಹೋಗುತ್ತದೆ.
  • ಅಪಕ್ವ ಸ್ಥಿತಿಯಲ್ಲೇ ಅವು ಹಣ್ಣಾಗಿ ಉದುರುತ್ತವೆ.ಕೊನೆಗೆ ಸುಳಿ ಭಾಗ ಸಹ ಹಳದಿಯಾಗಿ ಮರ ಸಾಯುತ್ತದೆ.
  • ಇಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಬೇರು ಕೊಳೆತು ಸತ್ತಾಗ ಮರ ಹೀಗೆ ಕಾಣಿಸುತ್ತದೆ
ಬೇರು ಕೊಳೆತು ಸತ್ತಾಗ ಮರ ಹೀಗೆ ಕಾಣಿಸುತ್ತದೆ
  • ಇದಕ್ಕೆ ಕಾರಣ ಬೇರು ಹಾನಿಯಾದದ್ದೇ ಹೊರತು ಬೇರೇನೂ ಅಲ್ಲ.
  • ಬೇರು ಕೊಳೆ (Root rot) ಆಗಲು ಪ್ರಮುಖ ಕಾರಣ  ಒಂದು ಶಿಲೀಂದ್ರ.
  • ಅಡಿಕೆ ಕಾಯಿಗಳಿಗೆ ಹೇಗೆ ಶಿಲೀಂದ್ರ ಸೋಂಕು ತಗಲುತ್ತದೆಯೋ ಅದೇ ರೀತಿಯಲ್ಲಿ  ಬೇರುಗಳೂ ಶಿಲೀಂದ್ರ ಸೋಂಕು ಉಂಟಾಗುತ್ತದೆ.
  • ಬೇರುಗಳು ಕೊಳೆಯಲು ಪ್ರಾರಂಭವಾಗುವಾಗ ಅದರ ಮೂಲಕ ಆಹಾರ ಸರಬರಾಜು ಕಡಿಮೆಯಾಗುತ್ತಾ ಬರುತ್ತದೆ.
  • ಒಮ್ಮೆಲೇ ಎಲ್ಲಾ ಬೇರುಗಳೂ ಕೊಳೆಯುವುದಿಲ್ಲ.
  • ಒಂದೆರಡು ಬೇರು ಕೊಳೆತು ಅದರ ಮೂಲಕ ಸೋಂಕು  ಇತರ ಬೇರುಗಳಿಗೆ ಹರಡಿ, ಸ್ವಲ್ಪ ಸ್ವಲ್ಪವೇ ಹೆಚ್ಚು ಕೊಳೆಯುತ್ತಾ ಹೋಗುತ್ತದೆ.
  • ಆ ಸಮಯದಲ್ಲಿ ಕೆಳ ಭಾಗದ ಎಲೆಗಳಿಗೆ ಆಹಾರ ಕೊರತೆ ಉಂಟಾಗಿ ಅದು ಹಳದಿಯಾಗಲು ಪ್ರಾರಭವಾಗುತ್ತದೆ.
  • ಹೆಚ್ಚು ಹೆಚ್ಚು ಬೇರುಗಳು ಕೊಳೆತಂತೆ ಎಲೆಗಳು ಹೆಚ್ಚುಹೆಚ್ಚು  ಹಳದಿಯಾಗಿ ಒಣಗುತ್ತದೆ.
  • ಪೂರ್ತಿ ಬೇರು ಸತ್ತಾಗ ಮರದ ಸುಳಿ ಭಾಗ ಒಣಗಿ ಅಲ್ಲೇ ಗರಿಗಳು ಅಂಟಿ ಕೊಂಡು ಇರಬಹುದು, ಅಥವಾ ಉದುರಿ ಬೀಳಬಹುದು.
ಬೇರು ಕೊಳೆತಾಗ  ಹೀಗೆ ಆಗುತ್ತದೆ. ಸುಳಿ ಇರುತ್ತದೆ. ತಳ ಭಾಗದ ಎಲೆ ಹಳದಿಯಾಗಿ ಒಣಗುತ್ತಾ ಬರುತ್ತದೆ.
ಬೇರು ಕೊಳೆತಾಗ ಹೀಗೆ ಆಗುತ್ತದೆ. ಸುಳಿ ಇರುತ್ತದೆ. ತಳ ಭಾಗದ ಎಲೆ ಹಳದಿಯಾಗಿ ಒಣಗುತ್ತಾ ಬರುತ್ತದೆ.

ಯಾಕೆ ಆಗುತ್ತದೆ?

  • ಬೇರುಕೊಳೆಯಲು ಶಿಲೀಂದ್ರ ಸೋಂಕು ಕಾರಣ ನಿಶ್ಚಿತ.
  • ಆದರೆ ಆ ಶಿಲೀಂದ್ರ ಅಲ್ಲಿಗೆ ಹೇಗೆ ಬರುತ್ತದೆ ಎಂಬುದಕ್ಕೆ ಹಲವು ಕಾರಣಗಳನ್ನು ಕೊಡಬೇಕಾಗುತ್ತದೆ.
  • ಕೊಳೆ ರೋಗ ವಿಪರೀತವಾಗಿ ಕಾಯಿಗಳು ಉದುರಿ ಬಿದ್ದು, ಆ ಶಿಲೀಂದ್ರ ಬೇರಿಗೆ ಹಾನಿ ಮಾಡಬಹುದು.
  • ನೆಲದಲ್ಲಿ ನೀರು ಬಸಿಯದೆ ಶಿಲೀಂದ್ರ ಸೋಂಕು ಆಗಬಹುದು.
  • ಸಾವಯವ ಗೊಬ್ಬರದ ಮೂಲಕವೂ ಸೋಂಕು ಉಂಟಾಗಬಹುದು.
  • ಗಾಳಿ ನೀರಿನ ಮೂಲಕವೂ ಉಂಟಾಗಬಹುದು. ಮರಕ್ಕೆ ರೋಗ ತಡೆದುಕೊಳ್ಳುವ ಶಕ್ತಿ ಕಡಿಮೆ ಇದ್ದಾಗಲೂ ಆಗಬಹುದು.
  • ಒಮ್ಮೆ ಶಿಲೀಂದ್ರ ಸೋಂಕು ತಗಲಿ, ಸತ್ತ ಮರದ ಜಾಗದಲ್ಲಿ ಬೇರೆ ಸಸಿ ನೆಟ್ಟಾಗಲೂ ಆಗಬಹುದು.
  • ಮಳೆಗಾಲದಲ್ಲಿ ಕೊಳೆಯುವ ವಸ್ತುಗಳಾದ ಅಡಿಕೆ ಹಾಳೆ, ಗರಿ ಇತ್ಯಾದಿಗಳನ್ನು ಬುಡದಲ್ಲಿ ಹಾಕುವುದರಿಂದಲೂ ಬೇರು ಕೊಳೆ ಆಗುವ ಸಂಭವ ಇದೆ.

ಏನು ಪರಿಹಾರ:

  • ಮಳೆಗಾಲ ಹಾಗೂ ಬೇಸಿಗೆಯ ಸಮಯದಲ್ಲೂ ತೋಟದಲ್ಲಿ ಸುತ್ತಾಡುವಾಗ ಬರೇ ಬುಡ ಮಾತ್ರ ನೋಡುವುದಲ್ಲ.
  • ಶಿರ ಭಾಗವನ್ನೂ ನೋಡುತ್ತಿರಬೇಕು. ಗರಿಗಳ ಬಣ್ಣ ಏನಾದರೂ ಸ್ವಲ್ಪ ಬದಲಾವಣೆ ಆಗಿದೆಯೇ ಎಂದು ನೋಡುತ್ತಾ ಇರಬೇಕು.
  • ಕೆಳಸ್ಥರದ ಮೂರು ನಾಲ್ಕು ಎಲೆ ಸ್ವಲ್ಪ ಹಸುರು ಹೋಗಿ ಹಳದಿ ಆಗಿದ್ದರೆ ( ಬಲಿತ ಎಲೆ ಹೊರತುಪಡಿಸಿ) ಅಲ್ಲಿ ಬುಡ ಭಾಗದ ಕೊಳೆ ಪ್ರಾರಂಭವಾಗಿದೆ ಎಂದರ್ಥ.
  • ಇದನ್ನು ಈ ಸಮಯದಲ್ಲಿ ಮಾತ್ರ ಉಪಚಾರ ಮಾಡಿ ಬದುಕಿಸಲಿಕ್ಕೆ ಸಾಧ್ಯ.
  • ಕೆಳ ಭಾಗದ- 4-5 ಗರಿಗಳು ಹಳದಿ ಬಣ್ಣಕ್ಕೆ ಬದಲಾಗಿದ್ದರೆ ಅಂತಹ  ಮರವನ್ನು ಬದುಕಿಸಲು ಕಷ್ಟ ಸಾಧ್ಯ. ಆಗಲೇ ಅದರ  ಹೆಚ್ಚಿನ ಬೇರುಗಳು ಹಾಳಾಗಿರುತ್ತವೆ.

ಇಂತಹ ಸಮಸ್ಯೆ ಉಂಟಾದಾಗ ಅಡಿಕೆ ಮರದ ಬೇರಿನ ಭಾಗವು ಒದ್ದೆಯಾಗುವಂತೆ ರಿಡೋಮಿಲ್ ಶಿಲೀಂದ್ರ ನಾಶಕ, ಅಥವಾ ಸೆಕ್ಟಿನ್ ಶಿಲೀಂದ್ರ ನಾಶಕ 3-5 ಗ್ರಾಂ 1 ಲೀ. ನೀರಿಗೆ ಬೆರೆಸಿ, ಒಂದು ಬುಡದ ಸುತ್ತ 3 ಅಡಿ ಸುತ್ತಳತೆ ಒದ್ದೆಯಾಗುವಂತೆ ಎರೆಯುವುದರಿಂದ ಮರವನ್ನು ಬದುಕಿಸಬಹುದು.  ಬದಲಾವಣೆ ನಿಧಾನವಾಗಿ ಎಲೆಗಳು ಹಸುರು ಬಣ್ಣದಲ್ಲಿ ಬೆಳೆಯುವಾಗ ಗಮನಕ್ಕೆ ಬರುತ್ತದೆ.

ಸುಳಿ ಕೊಳೆತು ಮರ ಸಾಯುವುದು
ಸುಳಿ ಕೊಳೆತು ಮರ ಸಾಯುವುದು

ಮರದ ಸುಳಿ ಸಾಯುವುದು:

  • ಇದು ಬೇಗನೆ ಗಮನಕ್ಕೆ  ಬರುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನವರ ತೋಟದಲ್ಲಿ ವರ್ಷಕ್ಕೆ ನಾಲ್ಕಾರು ಫಲಕೊಡುವ ಮರಗಳು ಈ ರೀತಿ ಆಗುತ್ತವೆ. 
  • ಇದು ಸುಳಿ ( bud rot) ಭಾಗಕ್ಕೆ ಶಿಲೀಂದ್ರ ಸೋಂಕು ತಗಲುವುದು.
  • ವಾತಾವರಣದ ಕಾರಣದಿಂದ ಹೀಗೆ ಆಗುತ್ತದೆ. ಇಂತಹ ಮರಗಳ ಬೇರಿಗೆ ಹಾನಿ ಆಗಿರುವುದಿಲ್ಲ.
  • ತುತ್ತ ತುದಿಯ ಸುಳಿ ಭಾಗದಿಂದ ಪ್ರಾರಂಭವಾಗಿ ಎಲೆಗಳು ಕೊಳೆಯುತ್ತದೆ.
  • ಬೇರು ಕೊಳೆತಾಗ ಎಲೆಯ ಕೆಳ ಬಾಗದ ಎಲೆ ಹಳದಿಯಾಗಿ ಒಣಗುತ್ತದೆ.
  • ಸುಳಿ ಕೊಳೆತಾಗ ಎಲೆಯ ತುದಿಭಾಗದಿಂದ  ಎಲೆಗಳು ಕೊಳೆತು ಸಾಯುತ್ತಾ ಬರುತ್ತದೆ. 
  • ಕೊನೆಗೆ ಎಲೆಗಳೆಲ್ಲಾ ಮುಗಿದ ನಂತರ ಮರದ ಕಾಂಡ ಸಾಯುತ್ತದೆ.
ಸಸಿಗಳಲ್ಲಿ ಸುಳಿ ಕೊಳೆ ಪ್ರಾರಂಭಿಕ ಲಕ್ಷಣ
ಸಸಿಗಳಲ್ಲಿ ಸುಳಿ ಕೊಳೆ ಪ್ರಾರಂಭಿಕ ಲಕ್ಷಣ

ಪರಿಹಾರ:

ಇಂತಹ ಸಮಸ್ಯೆ ಉಂಟಾದಾಗ ಎಳೆಯ ಸಸಿಗಳಾದರೆ ಸುಳಿ ಭಾಗವನ್ನು ಸ್ವಚ್ಚ ಮಾಡಿ ಶೇ. 1 ರ ಬೋರ್ಡೋ ಪೇಸ್ಟ್ ಅಥವಾ ಕಾಪರ್ ಆಕ್ಸಿ ಕ್ಲೋರೈಡ್  ಪೇಸ್ಟ್, ಅಥವಾ ಬಾವಿಸ್ಟಿನ್ ದ್ರಾವಣವನ್ನು  ಸೋಂಕು ತಗಲಿದ ಭಾಗ ಹಚ್ಚುವುದರಿಂದ ಹೊಸ ಸುಳಿ ಬರಬಹುದು. ಎತ್ತರದ ಮರಗಳಿಗೆ ಇದನ್ನು ಮಾಡುವುದು ಅಸಾಧ್ಯ. ಇದಕ್ಕೆ ಕೊಳೆ ಔಷಧಿಯಾಗಿ ಸಿಂಪಡಿಸುವ ಬೋರ್ದೋ ದ್ರಾವಣವನ್ನು ಸುಳಿ ಭಾಗಕ್ಕೆ ತಾಗುವಂತೆ ಸಿಂಪರಣೆ ಮಾಡುವುದರಿಂದ ಎಲೆ ಕಂಕುಳಲ್ಲಿ ಈ ದ್ರಾವಣ ಉಳಿದು ರೋಗಾಣು ಶಿಲೀಂದ್ರವನ್ನು ನಿಯಂತ್ರಿಸುತ್ತದೆ.

ಇವೆರಡು ರೋಗಗಳು ಇತ್ತೀಚೆಗೆ ಅಡಿಕೆ ಬೆಳೆಗಾರರಿಗೆ  ಬಾರೀ ಸಮಸ್ಯೆ ಉಂಟು ಮಾಡುತ್ತಿದ್ದು, ವರ್ಷ ವರ್ಷವೂ ಉತ್ತಮ ಫಲಬಿಡುತ್ತಿರುವ ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಗುರುತಿಸಿ  ಉಪಚಾರ ಮಾಡಿದರೆ ಮಾತ್ರ ಬದುಕಿಸಲಿಕ್ಕೆ ಸಾಧ್ಯ.

Leave a Reply

Your email address will not be published. Required fields are marked *

error: Content is protected !!