ಪ್ರಧಾನಿಗಳು ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದು ಯಾಕೆ?

ದೇಶದ ಪ್ರಧಾನಿಗಳು

ದೇಶದ ಪ್ರಧಾನಿಯೊಬ್ಬರು ದೇಶವಾಸಿಗಳ ಕ್ಷಮೆ ಯಾಚಿಸುವುದೆಂದರೆ ಅಂಥಃ ತಪ್ಪನ್ನೇನು ಮಾಡಿರಬಹುದು? “मैं आज देशवासियों से क्षमा मांगते हुए ” ತಪ್ಪಿಗಾಗಿ ಕ್ಷಮೆ ಕೇಳಿದ್ದೋ, ಏನು ಬೇಕಾದರೂ ಮಾಡಿಕೊಳ್ಳಿ. ನಿಮ್ಮ ತಂಟೆಗೆ  ನಾವಿಲ್ಲ ಎಂದು ವಿಷಯಕ್ಕೆ ಅಂತ್ಯ ಹಾಡಿದ್ದೋ ತಿಳಿಯದು. ಪ್ರಧಾನಿಗಳಾದವರು ಸಾಮಾನ್ಯ ಜನರಂತೆ ಮನ ಬಂದಂತೆ ಮಾತಾಡುವಂತಿಲ್ಲ. ಮನಬಂದಂತೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಇದಂತೂ ಸತ್ಯ.

ಸಂಯುಕ್ತ ಕಿಸಾನ್ ಮೋರ್ಚಾ ಎಂಬುದು 2020 ರಲ್ಲಿ ಹುಟ್ಟಿಕೊಂಡ ರಾಷ್ಟ ಸಂಘಟನೆ. ಕೇಂದ್ರ ಸರಕಾರ “ಕೃಷಿ ಕಾಯಿದೆ 2020” ಎಂಬ ಐತಿಹಾಸಿಕ ಕಾಯಿದೆಯನ್ನು ತರುವಾಗಲೇ ಈ ಸಂಘಟನೆ ಹುಟ್ಟಿಕೊಂಡಿತು. ಭಾರತ ಸರಕಾರ ಎಂಬ ಅತೀ ದೊಡ್ದ ವ್ಯವಸ್ಥೆಗೆ ಹೋಲಿಸಿದರೆ ಇದು ಬಹಳ ಸಣ್ಣದು. ಕಿಸಾನ್ ಮೋರ್ಚಾ ಎಂಬ ರೈತ ಸಂಘಟನೆ ರಾಜ್ಯರಾಜ್ಯಗಳ ರೈತ ಸಂಘಟನೆಗಳ ಜೊತೆ ಸೇರಿ ಜನತೆಯ ಬಳಿಗೆ ಹೋಗಿ  ಕೃಷಿ ಕಾಯಿದೆಯಿಂದ ನಮಗೆ ಏನಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದು ನಮಗೆಲ್ಲಾ ಗೊತ್ತಿದೆ. ಅದರೆ ಭಾರತ ಸರಕಾರಕ್ಕೆ ಇದನ್ನು ದೇಶದ ರೈತರಿಗೆ ಮನವರಿಕೆ ಮಾಡಿಕೊಡಲು ಆಗಲಿಲ್ಲವೊ, ಅಥವಾ ನಮ್ಮ  ದೇಶದ ರೈತಾಪಿ ವರ್ಗ ಸರಕಾರದ ಕಾಯಿದೆ ಕಾನೂನನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ದಿವಂತರಲ್ಲವೋ? ಈ ಎರಡರಲ್ಲಿ ಒಂದು ಕಾರಣಕ್ಕಾಗಿ, ಕಾಯಿದೆ ಒಳ್ಳೆಯದೋ, ಕೆಟ್ಟದೋ ಅದಕ್ಕೆ ಜ್ಯಾರಿಯಾಗುವ ಭಾಗ್ಯ ಸಿಗಲೇ ಇಲ್ಲ.

ಹಿನ್ನೆಲೆ:

ಶತಾಯ ಗತಾಯ ಕೃಷಿ ಕಾಯಿದೆಗಳನ್ನು ಹಿಂಪಡೆಯುವುದಿಲ್ಲ ಎಂದು ಕಳೆದ 15 ತಿಂಗಳಿನಿಂದ ಪಟ್ಟು ಹಿಡಿದಿತ್ತು ಕೇಂದ್ರ ಸರಕಾರ. ಪ್ರಾಣ ಹೋದರೂ ಧರಣಿ ನಿಲ್ಲಿಸುವುದಿಲ್ಲ ಎಂದು ದೆಹಲಿ ಗಡಿಯಲ್ಲಿ ಠಿಕಾಣಿ  ಹೂಡಿದ ರೈತ ಸಂಘಟನೆ. ಕೊನೆಗೂ ರೈತರಿಗೆ ಸರಕಾರ ಮಣಿಯಲೇ ಬೇಕಾಯಿತು. ಈಗ ಬೇಷರತ್ ಅದನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದೆ. ಸುಗ್ರೀವಾಜ್ಞೆಯ ಮೂಲಕ ಜ್ಯಾರಿಗೆ ತಂದ ಈ ಕಾಯಿದೆ ಬರೇ ಮಕ್ಕಳಾಟಿಕೆಯೋ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ರೈತರಿಗೆ ಬೇಡವಾಗಿದ್ದ ಈ ಕಾಯಿದೆಗಳು ಸರಕಾರಕ್ಕೆ ಯಾಕೆ ಬೇಕಿತ್ತೋ ತಿಳಿಯದು. ಆದರೆ ಭಾರತದಲ್ಲಿ ರೈತ ಶಕ್ತಿ ಏನು ಎಂಬುದು ಮತ್ತೊಮ್ಮೆ ಸ್ಫುಟಕ್ಕೆ ಬಂದಿದೆ.

ಸಂಯುಕ್ತ ಕಿಸಾನ್ ಮೋರ್ಚಾ ದ ನಾಯಕ
ಸಂಯುಕ್ತ ಕಿಸಾನ್ ಮೋರ್ಚಾ ದ ನಾಯಕ ರಾಕೇಶ್ ಟಿಕಾಯತ್ ನಮ್ಮ ರಾಜ್ಯದ ರೈತರ ಜೊತೆ.

ಯಾವ ಕಾಯಿದೆ?

ಕೇಂದ್ರ ಸರಕಾರ ಕಳೆದ ವರ್ಷ 3 ಕೃಷಿ ಕಾಯಿದೆಯನ್ನು ತರುವ ಮೂಲಕ ರೈತರಿಗೆ ಅನುಕೂಲ ಮಾಡಲು ಪ್ರಯತ್ನಿಸಿದೆ.ಅ ಮೂರು ಕೃಷಿ ಕಾಯಿದೆಯನ್ನು ಹೀಗೆ ಕರೆಯಲಾಗಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಮಸೂದೆ, 2020 ಮತ್ತು ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020 .

ಮೂರು ಕೃಷಿ ಕಾಯಿದೆಗಳು ಇವು:

  • ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, 2020.
  • ರೈತರ ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ 2020.
  • ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020.

ರೈತರು ತಾವು ಬೆಳೆದ ಉತ್ಪನ್ನವನ್ನು ರಾಜ್ಯದ ಹೊರತಾಗಿ ಹೊರ ರಾಜ್ಯಗಳಿಗೂ ಬೇಕಾದವರಿಗೆ ಮಾರಾಟ ಮಾಡಬಹುದು.ರೈತರು ತಾವು ಬೆಳೆ ಬೆಳೆಯಲು ಕೊಳ್ಳುವವರ ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಇದಕ್ಕೆ ಭಾರತ ಸರಕಾರವು ಕಾನೂನಾತ್ಮಕ ಅವಕಾಶವನ್ನೂ ಕಲ್ಪಿಸುತ್ತದೆ.ಕೆಲವು ಅಗತ್ಯ  ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಲಾದ (ಧಾನ್ಯ ಬೇಳೆ ಕಾಳು, ಖಾದ್ಯ ಎಣ್ಣೆ, ಇತ್ಯಾದಿ) ವಸ್ತುಗಳನ್ನು ದಾಸ್ತಾನು ಮುಕ್ತಗೊಳಿಸಿ,ಕೆಲವು ಅನಿವಾರ್ಯ ಸಂಧರ್ಭಗಳಲ್ಲಿ ಮಾತ್ರವೇ  ಅದಕ್ಕೆ  ದಾಸ್ತಾನು ನಿರ್ಭಂಧಗಳನ್ನು ವಿಧಿಸುವುದಾಗಿರುತ್ತದೆ.

ರೈತರು ತಮ್ಮ ಉತ್ಪನ್ನಗಳನ್ನು APMC ಗಳಿಗಲ್ಲದೆ ನೇರ ಮಾರುಕಟ್ಟೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಮತ್ತು ಹೆಚ್ಚು ಬೆಲೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಹಿಂದೆ ಇದ್ದ MSP ವ್ಯವಸ್ಥೆಯು  ಹಾಗೆಯೇ ಇರುತ್ತದೆ . ಇದು ಗ್ರಾಹಕರಿಗೆ ಮತ್ತು ರೈತರಿಗೆ  ಇಬ್ಬರಿಗೂ ಪ್ರಯೋಜನವಾಗಲಿದೆ ಎಂಬ ಆಶಯದಲ್ಲಿ ಈ ಕೃಷಿ ಕಾಯಿದೆಯನ್ನು ಜ್ಯಾರಿಗೆ ತರಲಾಗಿತ್ತು.

ಇದಕ್ಕೆ ಜನವರಿ 2021 ರಲ್ಲಿ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ.

ವಿವಾದದ ಕಾಯಿದೆಯೆಂದೇ ಕರೆಯಲ್ಪಟ್ಟಿತ್ತು:

ಕಾಯಿದೆ ಜ್ಯಾರಿಗೆ ತರುವಾಗಲೂ ಯಾರಿಂದಲೂ ಯಾವ ಅಭಿಪ್ರಾಯವನ್ನೂ ಕೇಳಿಲ್ಲ. ಚರ್ಚೆ ನಡೆಸದೆ  ಏಕಾಯೇಕಿ ಜ್ಯಾರಿಗೆ ತರಲಾಗಿತ್ತು ಎಂಬ ಅಪವಾದ ಈ ಕಾಯಿದೆಗೆ ಇದೆ. ರೈತ ಸಂಘಟನೆಗಳು ಈ ಕಾಯಿದೆಯಲ್ಲಿ ನಮಗೆ ತೊಂದರೆ ಇದೆ ಎಂದು ದೇಶವ್ಯಾಪಿಯಾಗಿ ರೈತರಿಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದಾರೆ. ಸರಕಾರ ಮಾತ್ರ ಇದರಿಂದ ಹೇಗೆ ಅನುಕೂಲ, ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಲು ವಿಫಲವಾದ ಕಾರಣವೋ ಏನೋ ಜನ ಈ ಬಗ್ಗೆ ಅಪಸ್ವರ ಎತ್ತುವಂತಾಗಿದೆ. ಜನರ ವಿರೋಧ ಸರಕಾರಕ್ಕೆ ತುಂಬಾ ಕಿರಿಕಿರಿ ಉಂಟುಮಾಡಿದೆ. ಅದಕ್ಕಾಗಿ ಸುಗ್ರೀವಾಜ್ಞೆಯ ತರಹವೇ ಇದನ್ನು ವಾಪಸು ಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರೈತರು ಯಾಕೆ ವಿರೋಧಿಸಿದರು:

ಕಾನೂನಿನಲ್ಲಿ ಸಾಮಾನ್ಯ ಜನ ಅರ್ಥ ಮಾಡಿಕೊಳ್ಳದ ಹಲವಾರು ವಿಚಾರಗಳಿರುತ್ತವೆ. ಜ್ಯಾರಿಗೆ ಬಂದ ನಂತರವೇ ಅದರ ಕರಾಳ ಮುಖ ಒಂದೊಂದೇ ಹೊರಬೀಳುತ್ತದೆ. ರೈತರ ಬೇಡಿಕೆ  ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ಕಾನೂನು ಖಾತರಿ ನೀಡಬೇಕು ಎಂಬುದಾಗಿತ್ತು. ಸರಕಾರ ಎಂ ಎಸ್ ಪಿ ರದ್ದು ಮಾಡುವುದಿಲ್ಲ ಎನ್ನುತ್ತಿತ್ತಾದರೂ ಅದಕ್ಕೆ ಕಾನೂನು ಚೌಕಟ್ಟು ನೀಡುವಲ್ಲಿ ಹಿಂದೇಟು ಹಾಕುತ್ತಿತ್ತು.

ಈ ಕಾಯಿದೆ ನಿಧಾನವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಕಿತ್ತುಹಾಕುತ್ತವೆ ಎಂಬುದು  ರೈತ ಸಂಘಟನೆಗಳ ವಾದವಾಗಿತ್ತು. ಕಾಲಕ್ರಮೇಣ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ರೈತರನ್ನು ನಿರ್ಧೇಶಿಸುವ ಪರಿಸ್ಥಿತಿ ಬರುತ್ತದೆ. ರೈತರು ತಮ್ಮ ಬೆಳೆಗಳಿಗೆ ಅವರು ನಿರ್ಧರಿಸಿದಂತೆ ಕಡಿಮೆ ಬೆಲೆ ಪಡೆಯುತ್ತಾರೆ ಎಂಬ ವಾದ ಇತ್ತು. ಮಂಡಿ ವ್ಯವಸ್ಥೆಯನ್ನು ವಿಸರ್ಜಿಸುವುದರಿಂದ ರೈತರು ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆಯನ್ನು ಪಡೆಯಲಾಗುವುದಿಲ್ಲ, ಅವರು ಬೇರೆಯವರ ಅಡಿಯಾಳಾಗಿಯೇ ಉಳಿಯುತ್ತಾರೆ ಎಂಬ ವಾದ ರೈತ ಸಂಘಟನೆಗಳದ್ದು.

ವಿರೋಧ ಪಕ್ಷಗಳ ಟೀಕೆ:

ಕೃಷಿ ಕಾಯಿದೆಯ ಬಗ್ಗೆ ಒಂದೆರಡು ದಿನ ವಿರೋಧ ಪಕ್ಷಗಳು ಸದ್ದೆಬ್ಬಿಸಿದವು, ನಂತರ ಅವರೆಲ್ಲಾ ತಣ್ಣಗಾದರು. ರೈತ ಹೋರಾಟಕ್ಕೆ ಬೆಂಬಲ ತೋರಿದವು. ತಮಗೆ ಇಲ್ಲಿ ಲಾಭ ಇಲ್ಲ ಎಂದು ಅರಿತು ದೂರ ಸರಿದವು. ಈಗ ವಾಪಾಸು ತೆಗೆದುಕೊಂಡ ನಂತರ ಮತ್ತೆ ಮಾತಾಡಲು ಪ್ರಾರಂಭಿಸಿದ್ದಾರೆ. ಇದೆಲ್ಲಾ ರಾಜಕೀಯ ಲಾಭದ ಆಶೆಗೇ ಹೊರತು ರೈತರ ಹಿತಕ್ಕಲ್ಲ. ಹಾಗೆ ನೋಡಿದರೆ ಈ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ರೈತರಿಗೆ ಅಂತಹ ಮಹದುಪಕಾರ ಮಾಡಿಲ್ಲ,  ಇಂಥಹ ಕೆಲಸ ಮಾಡಿ ಕ್ಷಮೆ ಯಾಚನೆಯನ್ನೂ ಮಾಡಿಲ್ಲ. ರೈತರ ಬಗ್ಗೆ ನೈಜ ಕಳಕಳಿ ಇದ್ದಲ್ಲಿ, ರೈತ ಸಂಘಟನೆಯ ಜೊತೆ ಸೇರಿ ಸುಧೀರ್ಘ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿತ್ತು.

ಕರ್ನಾಟಕದ ರೈತರೂ ಹೋರಾಟಡಲ್ಲಿ
ಕರ್ನಾಟಕದ ರೈತರೂ ಹೋರಾಟಡಲ್ಲಿ ಪೊಟೊ: KT Gangadhar ಅವರ ಪುಟದಿಂದ

ರೈತರು ಹೋರಾಟ ನಿಲ್ಲಿಸಿಲ್ಲ:

ಕಾಯಿದೆ ವಾಪಾಸು ತೆಗೆದುಕೊಂಡಿದ್ದೇವೆ. ರೈತರೆಲ್ಲಾ ಮನೆಗೆ ಹೋಗಿ ಎಂದು ಪ್ರಧಾನಿಯವರು ಕರೆಕೊಟ್ಟರೂ ರೈತ ಸಂಘಟನೆ ಮಾತ್ರ ಪ್ರತಿಭಟನೆ ಮೊಟಕುಗೊಳಿಸಿಲ್ಲ. ಕಾರಣ ಅವರು ಎಲ್ಲವನ್ನೂ ಕಾನೂನಾತ್ಮಕವಾಗಿ ಮುಗಿಸಬೇಕು ಎಂಬುದೇ ಇವರ ಹಠ. ಇಷ್ಟು ಧೀರ್ಘ ಕಾಲ ಪ್ರತಿಭಟನೆ ಮಾಡಿ, ಬಲಿದಾನ ಮಾಡಿದ ಶ್ರಮವನ್ನು ಹಾಳು ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಪ್ರತಿಭಟನಾ ನಿರತ ಕಿಸಾನ್ ಮೋರ್ಚಾ ಮುಂತಾದ ಸಂಘಟನೆಗಳು.

ರೈತ ಸಂಘಟನೆಗೆಷ್ಟು ಬೆಲೆ ಇದೆ  ಗೊತ್ತೇ?

ಶತಾಯ ಗತಾಯ ಕಾಯಿದೆ ಹಿಂತೆಗೆದುಕೊಳ್ಳುವುದಿಲ್ಲ ಎಂದಿದ್ದ ಕೇಂದ್ರ ಸರಕಾರದ ನಿಲುವನ್ನು ಮೆತ್ತಗೆ ಮಾಡಿದ ಶಕ್ತಿ ರೈತ ಶಕ್ತಿ. ಪ್ರತಿಭಟನಾಕಾರ ಮೇಲೆ ಅಪವಾದವನ್ನೂ ಹೊರಿಸಲಾಗಿತ್ತು. ಕೇಸನ್ನೂ ಹಾಕಲಾಗಿತ್ತು. ಕೆಲವು ಸಾವು ನೋವುಗಳೂ ಆಗಿದ್ದವು. ಆದರೆ ರೈತ ಸಂಘಟನೆ ಧೃತಿಗೆಡಲಿಲ್ಲ. ಹೋರಾಟವನ್ನು ಬಿಡಲೇ ಇಲ್ಲ. ಕೊನೆಗೂ ಜಯಗಳಿಸಿದ್ದು ರೈತರೇ. ಅದೇ ಕಾರಣಕ್ಕೆ ಹೇಳುವುದು ರೈತರು ಸಂಘಟಿತರಾಗಬೇಕು ಎಂದು. ಒಂದು ಕಾಲದಲ್ಲಿ ಪ್ರೊ. ನಂಜುಂಡ ಸ್ವಾಮಿಯವರು ರೈತಸಂಘ ಎಂಬ ಎಂಬ ಸಂಘಟನೆಯನ್ನು ಹುಟ್ಟು ಹಾಕಿರದೇ ಇರುತ್ತಿದ್ದರೆ ಇಂದು ರೈತರಿಗೆ ಸಂಘಟನೆ ಏನು ಎಂದೇ ಗೊತ್ತಾಗುತ್ತಿರಲಿಲ್ಲ. ರೈತರೆಂಬ ಅಸಂಘಟಿತ ವರ್ಗ ಈ ದೇಶದಲ್ಲಿ  ಯಾವತ್ತೂ ತುಳಿಯಲ್ಪಡುವ ವರ್ಗ. ಈ ತುಳಿತ ಆಗದಂತೆ , ನಮಗೂ ಒಂದು ಬಲಿಷ್ಟ  ಧ್ವನಿ ಸಿಗಬೇಕಾದರೆ ಸಂಘಟಿತರಾಗಿ ಇರಲೇ ಬೇಕು. ರೈತರ ಹೋರಾಟದಲ್ಲಿ ಜೀವ ಕಳೆದುಕೊಂಡವರಿಗೆ ಪರಿಹಾರ ಸಿಗಲೇ ಬೇಕು. ಯಾವುದೇ ಸರಕಾರ, ಅಧಿಕಾರಿ ರೈತರ ಜೀವದಲ್ಲಿ ಆಟ ಆಡುವ ಸಾಹಸಕ್ಕೆ ಎಂದೂ ಮುಂದಾಗಬಾರದು.ರೈತರು ಬೆಳೆದ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗಲೇಬೇಕು.

Leave a Reply

Your email address will not be published. Required fields are marked *

error: Content is protected !!