ತೆಂಗಿನ ಮರಗಳಿಗೆ ಸಿಡಿಲು ಬಡಿದರೆ ಏನು ಮಾಡಬೇಕು?

Lighting effected coconut palm

ಈಗಾಗಲೇ ಮುಂಗಾರು ಪೂರ್ವ ಮಳೆ ಬರಲಾರಂಭಿಸಿದೆ. ಮಿಂಚು ಸಿಡಿಲಿನ ಅಬ್ಬರದಲ್ಲಿ ಬಹಳಷ್ಟು ಕಡೆ ಅಡಿಕೆ, ತೆಂಗಿನ ಮರಗಳು ಬಲಿಯಾಗುತ್ತಿವೆ.

Lighting effected coconut palm
  • ಮಳೆಗಾಲ ಪ್ರಾರಂಭದಲ್ಲಿ ಮತ್ತು ಮಳೆಗಾಲ ಕೊನೆಯಲ್ಲಿ ಮಿಂಚು ಸಿಡಿಲಿನ ಆರ್ಭಟ ಅಧಿಕ. ಮಳೆ ಬಾರದಿದ್ದರೂ ಪ್ರಭಲವಾದ ಈ ಗುಡುಗು ಸಿಡಿಲಿನ ಆರ್ಭಟ ಇದ್ದೇ ಇರುತ್ತದೆ.
  • ಈ ಸಿಡಿಲು ಮೋಡಗಳ ಅಪ್ಪಳಿಸುವಿಕೆಯಿಂದ ಉತ್ಪಾದನೆಯಾಗುವ ಒಂದು ವಿದ್ಯುತ್ ಶಕ್ತಿ. ಇದು ಉತ್ಪಾದನೆಯಾಗಿ  ಅರ್ಥಿಂಗ್ ಆಗಬೇಕು.
  • ಅದು ಎತ್ತರದ ಮರಗಳು, ಅಥವಾ ಕೆಲವು ಮಿಂಚು ಆಕರ್ಶಕಗಳ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ  ತಲುಪುತ್ತದೆ.
  • ಕೆಲವು ಬೆಟ್ಟ ಗುಡ್ಡಗಳ ಮರಗಳಿಗೆ, ಬಂಡೆ ಕಲ್ಲುಗಳಿಗೆ ಬೀಳುತ್ತದೆ. ಎತ್ತರದ ಮರಗಳಾದ ತೆಂಗು ಅಡಿಕೆಗೂ ಬೀಳುತ್ತದೆ.
  • ಹಾಗೆಂದು ನಿರ್ದಿಷ್ಟವಾಗಿ ಇಲ್ಲಿಗೇ ಬೀಳುತ್ತದೆ ಎಂದಿಲ್ಲ. ನೆಲಮಟ್ಟದ ಬೆಳೆಗಳಿಗೂ ಹೊಡೆಯುವುದಿದೆ.
  • ತೆಂಗಿನ ಮರದ ಗರಿಗಳು ವಿಶಾಲವಾಗಿರುವ ಕಾರಣ ಅವು ಹೆಚ್ಚು ಅದನ್ನು ಆಕರ್ಶಿಸುತ್ತವೆ ಎನ್ನುತ್ತಾರೆ. 

ಮರಗಳಿಗೆ ಬಡಿಯುವುದು ಮಿಂಚಿನ ಶಾಕ್. ಅದು ಸಣ್ಣ ಪ್ರಮಾಣದ ವಿದ್ಯುತ್ ಶಾಕ್ ಅಲ್ಲ. ಸಾಮಾನ್ಯವಾಗಿ 1400  ಕಿಲೊ ವ್ಯಾಟ್ ವಿದ್ಯುತ್ ಪ್ರವಾಹ ಮಿಂಚಿನಲ್ಲಿ ಇರುತ್ತದೆ. ಇದು ಪೂರ್ತಿಯಾಗಿ ಒಂದೇ ಕಡೆಗೆ ಹೊಡೆಯುವುದು ವಿರಳ. ಉತ್ಪಾದನೆಯಾದ ಈ ಶಕ್ತಿ ಬೇರೆ ಬೇರೆ ಕಡೆಗೆ ಭಿನ್ನ ಭಿನ್ನ ಪ್ರಮಾಣದಲ್ಲಿ ಹಂಚಿಕೆಯಾಗಿ ಹೊಡೆಯುತ್ತದೆ. ಹೊಡೆಯುವುದೆಂದರೆ ಅದು ಅರ್ಥಿಂಗ್ ಆಗುವುದು.

  • ಕೆಲವೊಮ್ಮೆ ಇದು ಲಘುವಾಗಿಯೂ, ಕೆಲವೊಮ್ಮೆ ಇದು ತೀವ್ರವಾಗಿಯೂ ಇರುತ್ತದೆ. 
  • ತೀವ್ರವಾಗಿದ್ದಲ್ಲಿ ಬೆಂಕಿ ಹತ್ತಿಕೊಂಡೂ ಉರಿಯಬಹುದು.
  • ಹೊತ್ತಿ ಬೂದಿಯಾಗಲೂ ಬಹುದು. ಲಘುವಾಗಿದ್ದಲ್ಲಿ,ಹೊಡೆದ ತಕ್ಷಣ ಯಾವ ಪರಿಣಾಮವೂ ಕಾಣದೆ ದಿನಗಳು ಕಳೆದಂತೆ  ಎಲೆಗಳು ಬಾಡುವುದು, ಫಲ ಉದುರುವುದು, ಸಸ್ಯದ ಕಾಂಡದಲ್ಲಿ ರಸ ಸೋರುವುದು, ಸಾಯುವುದು ಮುಂತಾದವುಗಳು ಆಗುತ್ತದೆ.
  • ಕೆಲವು ಕಡೆ ಸಿಡಿಲು ಬಡಿದು ಭಸ್ಮ ಆಯಿತು ಎಂದು ಕೆಲವರು ಹೇಳುತ್ತಾರೆ.
  • ಅಲ್ಲಿ ಅದರ ತೀವ್ರತೆ ಹೆಚ್ಚು ಇರುತ್ತದೆ.

ತೆಂಗಿನ ಮರಕ್ಕೆ ಮಿಂಚು ಹೊಡೆದರೆ:

lightning rays effected palm
  • ತೆಂಗಿನ ಮರದ ಗರಿಯ ಭಾಗಕ್ಕೆ ಲಘುವಾಗಿ ಸಿಡಿಲು ಬಡಿದರೆ  ಎಲೆಗಳ ಮೇಲ್ಭಾಗ ಸ್ವಲ್ಪ ಒಣಗಬಹುದು.
  • ಇದನ್ನು ಹಳ್ಳಿಯ ಭಾಷೆಯಲ್ಲಿ ಸಿಡಿಲಿನ ‘ಎರಿ’ ಹೊಡೆದದ್ದು ಎನ್ನುತ್ತಾರೆ.
  • ಸ್ವಲ್ಪ ತೀವ್ರವಾಗಿ ಹೊಡೆದರೆ ಗರಿಗಳೆಲ್ಲಾ ಎರಡು ದಿನದಲ್ಲಿ ಬೆಂದಂತಾಗಿ ಕಾಂಡಕ್ಕೆ ಜೋತು ಬೀಳಬಹುದು.
  • ಕೆಲವೊಮ್ಮೆ ತೀವ್ರತೆ ಸ್ವಲ್ಪ ಕಡಿಮೆ ಇದ್ದು, ಗರಿ ಅಲ್ಪ ಸ್ವಲ್ಪ  ಬಾಡಲೂ ಬಹುದು.
  • ಕಾಂಡಕ್ಕೆ ಹೊಡೆಯುವುದು ಕಡಿಮೆ. ಶಿರ ಭಾಗಕ್ಕೆ ಹೆಚ್ಚು. ಅದರ ತೀವ್ರತೆಗೆ ಅನುಗುಣವಾಗಿ ಮಿಡಿ ಉದುರುವಿಕೆ, ಕೆಲವೊಮ್ಮೆ ಕೊಳೆತಂತಹ ವಾಸನೆ ಬರುವುದು.
  • ನಾಲ್ಕು ಐದು  ದಿನಗಳಲ್ಲಿ ಕಾಂಡದಲ್ಲಿ ರಸ ಸೋರುವುದು ಪ್ರಾರಂಭವಾಗುತ್ತದೆ.

ಮಿಂಚು ಹೊಡೆದ ಮರ ಬದುಕುತ್ತದೆಯೇ?

Bleeding in stem
  • ಮಿಂಚಿನ ತೀವ್ರತೆ ತೀರಾ ಕಡಿಮೆ ಇದ್ದರೆ ಆ ಮರದ ಕೆಲವು ಗರಿಗಳ ತುದಿ ಭಾಗ ಮಾತ್ರ ಒಣಗಿ ಮರಕ್ಕೆ ಅಂತಹ ಹಾನಿಯಾಗದೆ ಉಳಿಯಬಹುದು.
  • ಹೆಚ್ಚಿನ ಗರಿಗಳಿಗೆ  ಮಿಂಚು ಹೊಡೆದರೆ ಕೆಲವು ದಿನಗಳಲ್ಲಿ ಮರದ ಮಿಡಿಗಳು ಉದುರಲು ಪ್ರಾರಂಭವಾಗುತ್ತದೆ.
  • ಮಿಡಿ ಉದುರುವ ಹಂತಕ್ಕೆ ಬಂದಾಗ ಎಲೆಗಳು ಸ್ವಲ್ಪ ಬಾಡಲೂ ಬಹುದು. ಅಥವಾ ಸುಳಿ ಭಾಗದ ಎಲೆ ಬಾಡಿ ಸುಳಿ ಕೊಳೆಯಲೂ ಬಹುದು.
  • ಇನ್ನೂ ತೀವ್ರತೆ ಹೆಚ್ಚಾದಾಗ  ಒಂದೆರಡು ವಾರದಲ್ಲಿ ಕಾಂಡದಲ್ಲಿ ರಸ ಸೋರುವಿಕೆ ಪ್ರಾರಂಭವಾಗುತ್ತದೆ.
  • ಆ ನಂತರ ಮರವನ್ನು ಯಾವುದೇ ಕಾರಣಕ್ಕೂ ಉಳಿಸಬೇಡಿ. ಅದನ್ನು ಕಡಿಯಿರಿ.
  • ಅದು ಬದುಕಲಾರದು. ಒಂದು ವೇಳೆ ಮಿಡಿ, ಎಳೆ ಕಾಯಿ ಉದುರಿ ಮರ ಹಸುರಾಗಿಯೇ ಕೆಲವು ದಿನಗಳ ತನಕ ಇದ್ದರೆ ಅದರ ಜೀವ ಕೋಶಗಳಿಗೆ  ಹಾನಿಯಾಗಿ ನಿಧಾನವಾಗಿ ಅದು ಸಾಯಬಹುದು. 
  • ಒಂದು ವೇಳೆ ಬದುಕಿ ಉಳಿದರೂ ಅದು ಅನುತ್ಪಾದಕವಾಗಿಯೇ ಇರುತ್ತದೆ.
  • ಸಿಡಿಲು ಹೊಡೆದ ಮರ ಗರಿ ಜೋತು ಬಿದ್ದರೆ , ಕಾಂಡದಲ್ಲಿ ರಸ ಸೋರಲ್ಪಟ್ಟರೆ, ವಾಸನೆ ಬಂದರೆ ಅದನ್ನು ತಕ್ಷಣ ಕಡಿದು ತೆಗೆಯಿರಿ.
  •  ಅಂತಹ ಯಾವುದೇ ಹಾನಿ ಗೋಚರವಾಗದಿದ್ದರೆ ಅದನ್ನು ಉಳಿಸಿ ,
  • ಅನುತ್ಪಾದಕ ಎಂದು ಮನವರಿಕೆ ಆದ ನಂತರ ಅದನ್ನು ವಿಲೇವಾರಿ ಮಾಡಿ.

ಮಿಂಚು ಬಡಿದ ಮರದಿಂದ ಹಾನಿ:

Red palm weevil effected by lighting effected tree
  • ಮಿಂಚು ಬಡಿದ ತೆಂಗಿನ ಮರದ ಸುಳಿ ಭಾಗ ಸುಳಿ ಕೊಳೆಗೆ ತುತ್ತಾಗಬಹುದು,
  • ಹೆಚ್ಚಿನ ಕಡೆ ಇದು ಆಗುತ್ತದೆ.  ಸುಳಿ ಕೊಳೆತರೆ ಅದರ ಶಿಲೀಂದ್ರವು ಬೇರೆ ಮರಗಳಿಗೆ ಪ್ರಸಾರವಾಗಬಹುದು.
  • ಸುಳಿ ಕೊಳೆತ ಮರಕ್ಕೆ ಸೂಕ್ತ ಸಮಯಕ್ಕೆ ಉಪಚಾರ ಮಾಡದಿದ್ದರೆ ಅದು ಸತ್ತು ಹೋಗುತ್ತದ
  • ತೀವ್ರವಾದ ಹಾನಿಯಾಗಿ ಕಾಂಡದಲ್ಲಿ ರಸ ಸೋರುವ ಸ್ಥಿತಿ ಬಂದರೆ ಅದನ್ನು ತಕ್ಷಣ ಕಡಿಯಬೇಕು.
  • ಇಲ್ಲವಾದರೆ  ಆ ರಸದ ವಾಸನೆಗೆ ಕೆಂಪು ಮೂತಿ ದುಂಬಿ ಬರುತ್ತದೆ.
  • ಅದು ಅಲ್ಲಿ ಸಂತಾನೋತ್ಪತ್ತಿ ಮಾಡಿ, ಉಳಿದ ಮರ ಮತ್ತು ಸಸಿಗಳಿಗೆ ಹಾನಿ ಮಾಡುತ್ತದೆ. 
  • ಒಂದು ತೆಂಗಿನ ಮರ ಸಿಡಿಲು ಬಡಿದು ಸತ್ತರೆ, ಅದನ್ನು ಹಾಗೆಯೇ ಉಳಿಸಿಕೊಂಡರೆ ಮತ್ತೆ ಕೆಲವು ಆರೋಗ್ಯವಂತ ಮರಗಳು ಕೆಂಪು ಮೂತಿ ದುಂಬಿಯ ಕಾರಣದಿಂದ ಸಾಯುತ್ತದೆ. ಕೆಂಪು ಮೂತಿ ದುಂಬಿ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ.
Red palm weevil

ಮಿಂಚು ಬಡಿಯುತ್ತದೆ ಎಂದು ಅಂಜಬೇಕಾಗಿಲ್ಲ. ಮಿಂಚು ಬಡಿಯುವುದನ್ನು ತಪ್ಪಿಸಲು ಆಗುವುದಿಲ್ಲ. ಮಿಂಚು ಬಂಧಕಗಳು ಸ್ವಲ್ಪ ಮಟ್ಟಿಗೆ ರಕ್ಷಣೆ ಕೊಡಬಹುದು. ಒಂದು ಸಂಗತಿ ಎಲ್ಲರಿಗೂ ಗೊತ್ತಿರಲಿ, ಬಲವಾದ ಮಿಂಚು ಹೊಡೆದರೆ ನಮಗೆ ಗೊತ್ತೇ ಆಗದು. ನಾವು ಸತ್ತೇ ಹೋಗುತ್ತೇವೆ. ಭಾಗಶಃ ಶಾಕ್ ಬಡಿದರೆ ಮಾತ್ರ ಜೀವ ಕೋಶಗಳಿಗೆ ಹಾನಿಯಾಗಿ ನಿಧಾನವಾಗಿ ನಿತ್ರಾಣವಾಗುತ್ತೇವೆ.

Leave a Reply

Your email address will not be published. Required fields are marked *

error: Content is protected !!