ಸಿಹಿ ಸೌತೇ ಕಾಯಿ ಈಗ ಕಹಿ ಸೌತೇ ಆಗಲಾರಂಭಿಸಿದೆ. ಅದು ಬರೇ ಮುಳ್ಳು ಸೌತೆ ಮಾತ್ರವಲ್ಲ, ಸಾಂಬಾರ್ ಸೌತೆಗೂ ಪ್ರಾರಂಭವಾಗಿದೆ.
ಸುಮಾರು 10 ವರ್ಷಕ್ಕೆ ಹಿಂದೆ ಮುಳ್ಳು ಸೌತೆ ಬೆಳೆಯುವವರಿಗೆ ಈ ಸಮಸ್ಯೆ ಇರಲಿಲ್ಲ. ಯಾರೇ ಬೀಜ ಕೊಡಲಿ, ಅವರದ್ದೇ ಬೀಜ ಹಾಕಿದರೂ ಮುಳ್ಳು ಸೌತೆ ಎಂದರೆ ಅದನ್ನು ಹಸಿಯಾಗಿ ತಿನ್ನಬಹುದುದಿತ್ತು. ಈಗಿತ್ತಲಾಗಿ ಬೀಜ ಹಾಕಿ ಮುಳ್ಳು ಸೌತೆ ಆದ ನಂತರ ಅದನ್ನು ಕೊರೆದು ಅದರ ಒಳ ತಿರುಳಿನ ಒಂದು ತುಂಡನ್ನು ಬಾಯಿಗಿಟ್ಟು ಪರೀಕ್ಷಿಸಿದ ನಂತರ ರುಚಿ ಮುಳ್ಳು ಸೌತೆಯದ್ಡೇ ಎಂದು ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ರುಚಿ ನೋಡದೆ ಯಾವ ಅಡುಗೆಯನ್ನೂ ಮಾಡುವಂತಿಲ್ಲ. ಮುಳ್ಳು ಸೌತೆಗಳು ಕಹಿಯಾಗಲಾರಂಭಿಸಿವೆ. ಕಾರಣ ತಿಳಿಯದಾಗಿದೆ.
- ಕಹಿ ಸೌತೇ ಕಾಯಿ ಎಂಬುದು ಹಿಂದೆ ಕಾಡು ಮೇಡುಗಳ ಬದಿಯಲ್ಲಿ ಇರುತ್ತಿತ್ತು.
- ಅದು ಹೇಗೆ ನಾಡಿಗೆ ಬಂತೋ ಗೊತ್ತಿಲ್ಲ. ಈಗ ರೈತ ಹೊಲದಲ್ಲಿ ಅಲ್ಲಲ್ಲಿ ಸೌತೇ ಸಸಿಗಳು ಹುಟ್ಟಿಕೊಳ್ಳುತ್ತವೆ.
- ಆದರೆ ಅದರಲ್ಲಿ ಆಗುವ ಕಾಯಿ ಮಾತ್ರ ಯಾರೂ ತಿನ್ನಲು ಸಾಧ್ಯವಿಲ್ಲದಷ್ಟು ಕಹಿ.
- ಹಿಂದೆ ಸೌತೆಯ ಆಕಾರ ಮತ್ತು ನೋಟ ನೋಡಿ ಇದು ಕಹಿ ಎಂದು ಗುರುತಿಸಬಹುದಿತ್ತು,
- ಆದರೆ ಈಗ ಹಾಗಿಲ್ಲ. ಎಲ್ಲಾ ನಮೂನೆಯ ಸೌತೆಯೂ ಕಹಿಯಾಗಲಾರಂಭಿಸಿವೆ.
ಯಾಕೆ ಕಹಿಯಾಯಿತು:
- ಕೊಡಪಾನ ಹಾಲನ್ನು ಮಜ್ಜಿಗೆ ಮಾಡಲು ಬಿಂದು ಹುಳಿ ಸಾಕೌ ಎಂಬಂತೆ ಎಲ್ಲೋ ಕಹಿ ಸೌತೇ ಕಾಯಿ ಬೆಳೆಯುತ್ತಿತ್ತು.
- ಅದರ ಬೀಜ ಗೊಬ್ಬರದ ಮೂಲಕವೋ, ಹಕ್ಕಿ ಪಕ್ಷಿ, ದಂಶಕಗಳ ಮೂಲಕವೋ ಪ್ರಸಾರ ವಾಯಿತು.
- ಹೀಗೆ ಪ್ರಸಾರವಾದ ಬೀಜದ ಸಸಿ ಹೊಲದ ಎಲ್ಲೋ ಒಂದು ಕಡೆ ಹುಟ್ಟಿ ಹೂವಾಗಿರಬಹುದು.
- ಪರಾಗ ದಾನಿಗಳೆಂಬ ಜೀವಿಗಳಿಗೆ ಇದು ಕಹಿಯೋ ಸಿಹಿಯೋ ತಿಳಿಯದೆ ಅವು ಅದರ ಹೂವಿನಲ್ಲೂ ಮಕರಂದ ಸಂಗ್ರಹಿಸಿದವು.
- ಅದೇ ರೀತಿ ನಾವು ಬೆಳೆಯಾಗಿ ಬೆಳೆದ ಸೌತೇ ಕಾಯಿಯ ಮಕರಂದಕ್ಕೂ ಬಂದವು.
- ಎರಡೂ ಮಿಶ್ರ ಪರಾಗಸ್ಪರ್ಶ ಆದವು. ಆ ಕಾಯಿ ಕಹಿ ಆಗಿರದ ಕಾರಣ ಅದರ ಬೀಜವನ್ನು ನಾವು ಶುದ್ಧ ಬೀಜವಾಗಿ ನಂತರ ಬಿತ್ತನೆಗೆ ಇಟ್ಟೆವು.
- ಅದು ಹುಟ್ಟಿ ಸಸಿಯಾಗಿ ಬೆಳೆದು ಕಾಯಿಯಾದಾಗ ಅದರಲ್ಲಿ ಬಿಟ್ಟ ಕಾಯಿಯ ಗುಣ ಕಹಿಯಾಯಿತು.
- ಇದು ನೈಸರ್ಗಿಕ ಮಿಶ್ರ ಪರಾಗಸ್ಪರ್ಶ ಹೇಗೆ ಆಗುತ್ತದೆ ಎಂಬುದರ ಒಂದು ಪಾಠವಾದರೆ, ಇಂದು ಸೌತೆ ಕಾಯಿಗಳೇ ಕಹಿಯಾಗುತ್ತಿರುವುದು ಒಂದು ದುರಂತವೇ ಸರಿ.
- ಎಲ್ಲೆಲ್ಲೂ ರೈತರು ಹೇಳುತ್ತಾರೆ ಈ ಬಾರಿ ಸೌತೇ ಕಾಯಿ ಕಹಿಯಾಗಿದೆ.
- ಇನ್ನು ಬೀಜ ಬೇರೆಡೆಯಿಂದ ತರಬೇಕು ಎಂದು.
- ಮುಂದೆ ಇದು ಸಿಹಿ ಸೌತೇ ಕಾಯಿಯ ಬೀಜದ ಅವನತಿಗೂ ಕಾರಣ ಆಗಬಹುದು.
ಸೌತೆ ವರ್ಗದ (Cucurbitaceous family) ಗಿಡಗಳಲ್ಲಿ ಪರಸ್ಪರ ಮಿಶ್ರ ಪರಾಗಸ್ಪರ್ಶ ಅತೀ ದೊಡ್ಡ ಸವಾಲು. ಇದನ್ನು ತಡೆಯುವುದೂ ಸಹ ಅಷ್ಟು ಸುಲಭವಲ್ಲ.
ಬರೇ ಮುಳ್ಳು ಸೌತೆ ಮಾತ್ರವಲ್ಲ:
- ಮೊನ್ನೆ ತೋಟದಲ್ಲಿ ಒಂದು ಸಾಂಬಾರ ಸೌತೇ ಕಾಯಿಯ ಗಿಡವನ್ನು ಕಂಡೆ.
- ಮಾಮೂಲು ಸೌತೇ ಕಾಯಿಯಂತೇ ಗಿಡ ಇತ್ತು ಅದೇ ರೀತಿಯ ಹೂವು.
- ಆದರೆ ಕಾಯಿ ನೊಡಿದರೆ ಸ್ವಲ್ಪ ಸಣ್ಣದು.
- ಸಾಂಬಾರ್ ಸೌತೆಯ ಮೇಲ್ಮೈಯಲ್ಲಿ ಇರುವ ಎಲ್ಲಾ ಪಟ್ಟೆ ರಚನೆಗಳು ಸೌತೇ ಕಾಯಿಯನ್ನೇ ಹೋಲುತ್ತಿದ್ದವು.
- ಕೊಯಿದು ಕತ್ತರಿಸಿ ಬಾಯಿಗಿಟ್ಟರೆ ಅದರ ರುಚಿ ರಕ್ತವಾಳ ದ ಕಹಿಗಿಂತಲೂ ಕಹಿಯಾಗಿತ್ತು.
- ಇದು ಬೇರೆ ಎಷ್ಟು ಸೌತೇ ಕಾಯಿ ಗಿಡದ ಹೂವಿನ ಮೂಲಕ ಮಿಶ್ರ ಪರಾಗ ಸ್ಪರ್ಶ ಆಗಿದೆಯೋ ತಿಳಿಯದು.
ಸೌತೇ ಕಾಯಿ ಬೆಳೆಸುವುದು ಹೇಗೆ:
- ಮುಳ್ಳು ಸೌತೆ ಇರಲಿ ಅಥವಾ ಸಾಂಬಾರ್ ಸೌತೆ ಇರಲಿ ಇನ್ನು ಬೆಳೆಯಬೇಕಿದ್ದರೆ ಅದು ಶುದ್ಧ ಬೀಜವೇ ಆಗಿದ್ದಲ್ಲಿ ನಿಮ್ಮ ಹೊಲದಲ್ಲಿ ಅಥವಾ ಪಕ್ಕದವರ ಹೊಲದಲ್ಲಿ ಸುಮಾರು ಒಂದು ಕಿಲೋ ಮೀಟರು ದೂರದ ತನಕ ಯಾವುದೇ ಕಹಿ ಸೌತೇ ಕಾಯಿಯ ಸಸ್ಯ ಇಲ್ಲದ್ದನ್ನು ಖಾತ್ರಿ ಮಾಡಿಕೊಳ್ಳಬೇಕು.
- ಇದು ಎಷ್ಟು ಸಾಧ್ಯವೋ ತಿಳಿಯದು. ಬೀಜ ಒದಗಿಸಿಕೊಂಡುವ ಬೀಜೋತ್ಪಾದಕರು ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಕಾರಣ ಅವರ ಬೀಜ ಈ ರೀತಿ ಆಗಿಲ್ಲ.
- ಪಾರ್ಥೆನೋಕೋರ್ಪಿಕ್ (ಪರಾಗಸರ್ಶ ಆಗದೆ ಕಾಯಿ ಕಚ್ಚುವ) ತಳಿಯ ಬೀಜಗಳನ್ನು ಆಯ್ಕೆ ಮಾಡಬೇಕು.
- ಸ್ಥಳೀಯ ಸೌತೇ ಕಾಯಿ ಈ ಕಹಿ ಗುಣದ ಕಾರಣ ಅಳಿದು ಹೋದರೂ ಹೋಗಬಹುದು.
ರೈತರು ತಮ್ಮ ಹೊಲದಲ್ಲಿ, ತಮ್ಮ ಸುತ್ತಮುತ್ತ ನಿರುಪಯುಕ್ತ ಭೂಮಿಯಲ್ಲಿ ಎಲ್ಲಿಯಾದರೂ ಕಹಿ ಸೌತೇ ಕಾಯಿ ಗಿಡ ಕಂಡರೆ ಅದನ್ನು ಉಳಿಸಬೇಡಿ. ಅದರ ಸಸಿ ಬೆಳೆಯಲೂ ಬಿಡಬೇಡಿ. ಕೂಡಲೇ ಕಿತ್ತು ತೆಗೆಯಿರಿ. ಹೂವಾಗದಂತೆ ಮತ್ತು ಕಾಯಿ ಬಲಿತು ಹಣ್ಣಾಗದಂತೆ ನೋಡಿಕೊಂಡರೆ ಸ್ವಲ್ಪ ಪ್ರಯೋಜನ ಆಗಬಹುದು.ಸಾಧ್ಯವಾದಷ್ಟು ಹೊರ ಊರಿನ ಗೊಬ್ಬರ ತಂದು ಬಳಸುವಾಗ ಹುಟ್ಟುವ ಗಿಡಗಳನ್ನು ತಕ್ಷಣ ಕಿತ್ತು ಬಿಸಾಡಿ.