ಕೆಲವು ರೈತರ ತೋಟದ ನೆಲದಲ್ಲಿ ಹಾವಸೆ ಸಸ್ಯ ಬೆಳೆಯುತ್ತದೆ. ಈ ಸಸ್ಯ ಬೆಳೆಯುವುದು ಯಾಕೆ ಮತ್ತು ಇದರ ಅನುಕೂಲ ಏನು?
ನಿಮ್ಮ ತೋಟದಲ್ಲಿ, ಮನೆಯ ಕಂಪೌಂಡ್ ಗೊಡೆಯಲ್ಲಿ, ಅಡಿಕೆ, ತೆಂಗಿನ ಮರದ ಕಾಂಡದಲ್ಲಿ ಅಂಟಿಕೊಂಡಿರುವ ಒಂದು ಹಾವಸೆ ಸಸ್ಯ ನಮಗೆಷ್ಟು ಉಪಕಾರಿ ಎಂಬುದನ್ನು ಪ್ರತೀಯೊಬ್ಬರೂ ತಿಳಿದಿರಬೇಕು. ಮಳೆಗಾಲ ಬಂತೆಂದರೆ ಸಾಕು ಹಾವಸೆ ಸಸ್ಯಗಳು ಜೀವತುಂಬಿಕೊಂಡು ಎಲ್ಲೆಡೆ ಆವರಿಸುತ್ತವೆ. ಬೇಸಿಗೆಯಲ್ಲಿ ಸಾಕಷ್ಟು ತೇವಾಂಶ ಲಭ್ಯವಿರುವಲ್ಲಿ ಬೆಳೆಯುತ್ತದೆ. ಒಟ್ಟಿನಲ್ಲಿ ತೇವಾಂಶವನ್ನು ಬಳಸಿ ಬದುಕುವ ಈ ಸಸ್ಯ ವರ್ಗ ಕೃಷಿಕನ ಮಿತ್ರ ಎಂದೇ ಹೇಳಬಹುದು.
- ಪಕೃತಿಯಲ್ಲಿ ಎಲ್ಲವೂ ಇದೆ. ಅದರೆ ಮಹತ್ವ ನಮಗೆ ಗೊತ್ತಿರುವುದಿಲ್ಲ.
- ಪ್ರಕೃತಿ ತನ್ನನ್ನು ಅವಲಂಭಿಸಿ ಬದುಕುವ ಸಕಲ ಜೀವ ರಾಶಿಗಳಿಗೂ ರಕ್ಷಣೆ ಕೊಡುತ್ತದೆ.
- ಆದರೆ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಅವುಗಳ ನಾಶಕ್ಕೂ ಕಾರಣರಾಗುತ್ತೇವೆ.
- ನಿಜವಾಗಿ ಹೇಳಬೇಕೆಂದರೆ ನೆಲದಲ್ಲಿ ಬೆಳೆಯುವ ಪ್ರತೀಯೊಂದು ಸಸ್ಯಗಳೂ ಸಹ ಮಣ್ಣಿನ ಗುಣ ವೃದ್ದಿಗೆ ಸಹಕಾರಿ.
- ಅನಿವಾರ್ಯ ಕಾರಣಗಳಿಗೆ ಮಾತ್ರ ನಾವು ಅದನ್ನು ನಿಯಂತ್ರಣ ಮಾಡಬೇಕು.
- ಯಾವುದನ್ನೂ ಅನವಶ್ಯಕವಾಗಿ ನಾಶ ಮಾಡಲೇ ಬಾರದು.
ಇಲ್ಲಿ ಹೆಚ್ಚಿನವರ ಹೊಲದಲ್ಲಿ ಬೆಳೆಯುವ ಹಾವಸೆ ಸಸ್ಯ (Bryophytes) ಬಗ್ಗೆ ಹೇಳುತ್ತಿದ್ದೇವೆ. ಕೆಲವರ ತೋಟದಲ್ಲಿ ಇದು ಮಳೆಗಾಲದಲ್ಲಿ ಮಾತ್ರ ಬೆಳೆಯುತ್ತದೆ. ಮತ್ತೆ ಕೆಲವರ ತೋಟದಲ್ಲಿ ಬೇಸಿಗೆಯ ಸಮಯದಲ್ಲೂ ಬೆಳೆಯುತ್ತಿರುತ್ತದೆ. ಇದು ಕೃಷಿ ಭೂಮಿಯ ಶ್ರೀಮಂತಿಕೆಯ ಸಂಕೇತವೇ ಹೊರತು ಇದರಿಂದ ಯಾವ ಹಾನಿಯೂ ಇಲ್ಲ.
ಹಾವಸೆ ಸಸ್ಯಗಳ ಪ್ರಯೋಜನ:
- ನಮ್ಮೆಲ್ಲರ ಮನೆಯ ಪಂಚಾಂಗದ ಸುತ್ತ, ದಂಡೆಗಳಲ್ಲಿ , ಅಡಿಕೆ , ತೆಂಗು ಹಾಗೆಯೇ ಹಲಸು ಮಾವು ಮುಂತಾದ ಮರದ ಕಾಂಡದಲ್ಲಿ , ಹಾಗೆಯೇ ನೆಲದಲ್ಲಿ ಒಂದು ರೀತಿಯ ತಳವರ್ಗದ, ಅಥವಾ ಸರಳ ಸಸ್ಯ (ಎತ್ತರಕ್ಕೆ ಬೆಳೆಯದೆ ಇರುವ) ವನ್ನು ಕಾಣಬಹುದು.
- ಇದಕ್ಕೆ ತೋರಿಕೆಯ ಕಾಂಡ , ಎಲೆ, ಬೇರು, ನಾಳ ವ್ಯವಸ್ಥೆ ಇಲ್ಲ.
- ಇದು ಅತ್ಯಂತ ಪ್ರಾಚೀನ ಸಸ್ಯ ವರ್ಗವಾಗಿದ್ದು, ಇದರ ಉಪಯುಕ್ತತೆ ಹಲವು.
- ಇದಕ್ಕೆ ಔಷಧೀಯ ಉಪಯೋಗ ಸಾಕಷ್ಟು ಇದೆ. ಅದೇ ರೀತಿಯಲ್ಲಿ ಕೃಷಿ ಉಪಯೋಗವೂ ಇದೆ.
- ಪಶ್ಚಿಮ ಘಟ್ಟದ ಮಳೆ ಕಾಡುಗಳಲ್ಲಿ ಮರಗಳಲ್ಲಿ , ನೆಲದಲ್ಲಿ, ಬೆಳೆಯುವ ಈ ಬ್ರಯೋಫೈಟ್ ಗಳನ್ನು ಕೆಲವರು (ಗೂಟಿ ಕಸಿಗೆ) ಉತ್ತಮ ಬೇರು ಬರುವ ಮಾಧ್ಯಮವಾಗಿ ಬಳಕೆ ಮಾಡುವುದೂ ಇದೆ.
- ಇದು ಅತ್ಯಧಿಕ ಪ್ರಮಾಣದಲ್ಲಿ ಕವಲೊಡೆಯುವಿಕೆ ಗುಣವನ್ನು ಹೊಂದಿದ ಕಾರಣ ನೆಲವನ್ನು ಪೂರ್ತಿಯಾಗಿ ಆವರಿಸಿ, ಮುಚ್ಚುತ್ತವೆ.
ಇವು ಮರಕ್ಕೆ ಅಂಟಿಕೊಂಡು ಬೆಳೆದಾದ ಮರದ ಕಾಂಡಕ್ಕೆ ರಕ್ಷಣೆಯನ್ನು ಕೊಡುತ್ತವೆ. ನೆಲಕ್ಕೂ ಹಾಗೆಯೇ ರಕ್ಷಣೆಯನ್ನು ಕೊಡುತ್ತವೆ. ಬೇಸಿಗೆಯಲ್ಲಿ ಇವು ಸುಪ್ತಾವಸ್ಥೆಯಲ್ಲಿ ಬದುಕಿಕೊಂಡು ಮಳೆ ಅಥವಾ ಸಾಕಷ್ಟು ತೇವಾಂಶ ಲಭ್ಯವಾದಾಗ ಮತ್ತೆ ಜೀವ ಕಳೆ ತುಂಬಿಕೊಳ್ಳುತ್ತವೆ.
- ಇವು ಮಣ್ಣಿನ ತೇವಾಂಶ ಪರೀಕ್ಷೆಗೆ ಸಹಾಯಕ, ನೆಲದಲ್ಲಿ ಇವು ಇದ್ದರೆ ತೇವಾಂಶ ಸಾಕಷ್ಟು ಇದೆ ಎಂದರ್ಥ.
- ಮಣ್ಣಿನ ಸವಕಳಿಯನ್ನು ತಡೆಯುತ್ತವೆ.
- ನೆಲದಲ್ಲಿ ಹಾಸಿಗೆಯ ತರಹ ಇದ್ದು, ಯಾವುದೇ ಬೀಜಗಳು ಬಿದ್ದರೂ ಅದು ಮೊಳಕೆ ಒಡೆದು ಸಸ್ಯವಾಗಲು ಇದು ಸಹಕರಿಸುತ್ತದೆ.
- ಪರಿಸರ ಶಾಸ್ತ್ರ ಮತ್ತು ತೋಟಗಾರಿಕೆಯಲ್ಲಿ ಇದರ ಪಾತ್ರ ಮಹತ್ವವಾದದ್ದು.
- ಪರಿಸರ ಶಾಸ್ತ್ರ ಅಧ್ಯಯನಕಾರರು ಇದನ್ನು ಪರಿಸರ ಪೂರಕ ಎಂದು ಪರಿಗಣಿಸಿದ್ದಾರೆ.
- ತೋಟಗಾರಿಕೆ ವಿಷಯಕ್ಕೆ ಬಂದಾಗ ಇದು ನೆಲದಲ್ಲಿ ಬೆಳೆದಿದ್ದರೆ, ಕ್ಯಾಲ್ಸಿಯಂ ಮತ್ತು ಪೋಷಕಗಳು ಮಣ್ಣಿನಲ್ಲಿ ಹೇರಳವಾಗಿ ಇವೆ ಎಂದು ಭಾವಿಸಬಹುದು.
- ಮಣ್ಣಿನ pH ಸ್ಥಿತಿ ತಟಸ್ಥ ವಾಗಿರುವಲ್ಲಿ ಇದರ ಬೆಳವಣಿಗೆಗೆ ಚೆನ್ನಾಗಿರುತ್ತದೆ.
- ಇದು ಮಣ್ಣಿನ pH ಸ್ಥಿತಿಯ ದ್ಯೋತಕ.
- ಇವು ಮಣ್ಣಿಗೆ ಸಾವಯವ ಅಂಶವನ್ನು ಒದಗಿಸಿಕೊಡುತ್ತವೆ.
- ಸತ್ತ ನಂತರ ಮಣ್ಣಿಗೆ ಖನಿಜಗಳು, ಪೋಷಕಾಂಶಗಳು ಹೇರಳವಾಗಿ ದೊರೆಯುತ್ತದೆ.
- ನಾವು ಬಳಕೆ ಮಾಡುವ ಬೆಳೆ ಪೋಷಕಗಳಲ್ಲಿ ಕೆಲವು ಪೊಟ್ಯಾಶ್ , ಕ್ಯಾಲ್ಸಿಯಂ. ಮೆಗ್ನೀಶಿಯಂ ಗಳು ಬೇಗನೆ ಇಳಿದು ಹೋಗುತ್ತದೆ.
- ಇದು ಇಳಿದು ಹೋಗುವ ಗತಿಯನ್ನು ನಿಧಾನಿಸುತ್ತದೆ.
- ಇವು ಮಣ್ಣಿನಲ್ಲಿರುವ ರಂಜಕಾಂಶದ ಜೊತೆಗೆ ಸ್ಪರ್ಧಿಗಳಲ್ಲ.
- ಮಣ್ಣಿಗೆ ಕಬ್ಬಿಣಾಂಶ (Ferous)ವನ್ನು ಲಭ್ಯವಾಗಿಸುತ್ತವೆ.
- ನಾವು ಬೆಳೆಗಳಿಗೆ ಒದಗಿಸುವ ಸಾರಜನಕ ಪೋಷಕವನ್ನು ಸಸ್ಯಗಳು ಬಳಕೆ ಮಾಡಿಕೊಳ್ಳಲು ನೆರವಾಗುವ ಜೀವಾಣು ಸಯನೋಬ್ಯಾಕ್ಟೀರಿಯಾ ( ಬೇರಿನ ಸನಿಹದಲ್ಲಿ ಸಹಜೀವನ ನಡೆಸಿ ಸಾರಜನಕ ಸ್ಥಿರೀಕರಣ ಮಾಡಿಕೊಡುವ ಪ್ರಮುಖ ಜೀವಾಣು) ಇದು ಆಶ್ರಯ ಕೊಡುತ್ತದೆ ಅಥವಾ ಬದುಕಲು ಅನುಕೂಲ ವಾತಾವರಣ ಕಲ್ಪಿಸಿ ಕೊಡುತ್ತವೆ.
- ಇವು ತಾಮ್ರ ಸಮೃದ್ಧ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳು. ವಾಯು ಮಾಲಿನ್ಯವನ್ನು ಇವು ಕಡಿಮೆ ಮಾಡುತ್ತವೆ.
- ಮಣ್ಣಿನಲ್ಲಿ ಗಾಳಿಯಾಡುವಿಕೆಯನ್ನು ಹೆಚ್ಚಿಸಿಕೊಟ್ಟು ಮುಖ್ಯ ಬೆಳೆಗಳ ಬೇರುಗಳ ಬೆಳವಣಿಗೆ ಸಹಾಯಕವಾಗುತ್ತದೆ.
- ಇದನ್ನು ಮಣ್ಣಿಗೆ ಸೇರಿಸಿದರೆ ಸೂಕ್ಷ್ಮ ಪೊಷಕಾಂಶಗಳು , ಬೆಳವಣಿಗೆ ಪ್ರಚೋದಕಗಳು ಲಭ್ಯವಾಗುತ್ತದೆ.
- ನೆಲಕ್ಕೆ ತಂಪನ್ನು (Cooling effect) ಕೊಡುತ್ತದೆ. ನೆಲ, ಮರದ ಕಾಂಡ, ಗೋಡೆಗಳಲ್ಲಿ ಇವು ಹಬ್ಬಿದ್ದರೆ ಅದು ಬಿಸಿಲಿನ ಹೊಡೆತವನ್ನು ತಗ್ಗಿಸಿ ತಂಪನ್ನು ಕೊಡುತ್ತವೆ.
ನಾಶ ಮಾಡಬೇಡಿ:
- ಇಂದು ನಾವು ಗೋಡೆಗಳಿಗೆ ಪಾಚಿ ನಿರೋಧಕ ಪೈಂಟ್ ಗಳನ್ನು ಹೊಡೆಯುತ್ತೇವೆ.
- ನೆಲದಲ್ಲಿ ಯಾವುದೇ ಬೇರೆ ಸಸ್ಯ ಕಂಡರೂ ಅದನ್ನು ಕಳೆ ನಾಶಕ ಬಳಸಿ ಕೊಲ್ಲುತ್ತೇವೆ.
- ಅದನ್ನು ಅಗೆದು ಹಾಳು ಮಾಡುತ್ತೇವೆ.
- ಇದೆಲ್ಲಾ ಮಾಡಬಾರದು. ಜಾಗತಿಕ ತಾಪಮಾನದ ಏರಿಕೆಗೆ ಈ ತರದ ನೈಸರ್ಗಿಕ ಭೂ ಹೊದಿಕೆಗಳೂ ಒಂದು ಕಾರಣ.
- ಆದುದರಿಂದ ಇದನ್ನು ನಾಶ ಮಾಡಬೇಡಿ. ಇದನ್ನು ಹೆಚ್ಚು ಹೆಚ್ಚು ಬೆಳೆಸಿ,
ಈ ಸಸ್ಯಗಳು ನೆಲದಲ್ಲಿ ಇದ್ದರೆ ನಮಗೆ ನಡೆದಾಡಲು ಮೆತ್ತನೆ ಹಾಸಿಗೆಯ ಆನಂದವನ್ನು ಕೊಡುತ್ತದೆ. ಯಾವುದೇ ಕೃಷಿ ಕೆಲಸಗಳಿಗೆ ಅಡ್ಡಿ ಮಾಡುವುದಿಲ್ಲ. ಬಹುತೇಕ ಕೃಷಿಕರು ಅನುಭವಿಸುವ ಚರ್ಮದ ಒಣಗುವಿಕೆ( Dry skin) ಅಥವಾ ಕಾಲು ಒಡೆಯುವಿಕೆ ತಡೆಯಲು ಇದು ಸಹಾಯಕ. ಇದರಲ್ಲಿ ಮೂರು ಪ್ರಭೇಧಗಳಿವೆ.