ಹಲಸು ಬೆಳೆಸುವವರು ಹೀಗೊಮ್ಮೆ ಯೋಚಿಸಿ- ಸಸಿ ನೆಡಿ.

Grafted jack plant

ಹಲಸಿಗೆ ಭವಿಷ್ಯದಲ್ಲಿ ಭಾರೀ ಬೆಲೆ ಬರಲಿದೆ ಎಂದು ಬಹಳ ಜನ ಹಲಸಿನ ಕೃಷಿಗೆ ಮುಂದಾಗಿದ್ದಾರೆ. ಒಳ್ಳೆಯದು.ಆದರೆ ಎಲ್ಲವೂ ಕಸಿ ಗಿಡ ಬೇಡ.
ಹಲಸು ಬೆಳೆಸುವುದೆಂದರೆ ಎಲ್ಲರಿಗೂ ಈಗ ಪ್ರತಿಷ್ಟೆಯ ಪ್ರಶ್ನೆ. ಇದಕ್ಕೆ ಎಲ್ಲೆಡೆಯೂ ಪ್ರೋತ್ಸಾಹ ಇದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ. ಕೇರಳ, ಆಂದ್ರ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರಗಳಲ್ಲಿ ಸಹ ಭಾರೀ ಪ್ರಮಾಣದಲ್ಲಿ ಹಲಸಿನ ಸಸಿ  ನೆಡಲಾಗುತ್ತಿದೆ. ವಾರ್ಷಿಕ ಕರ್ನಾಟಕ, ಕೇರಳದ ಹಲಸಿನ ಸಸಿ ಮಾಡುವ ನರ್ಸರಿಗಳಿಂದ ಕೋಟ್ಯಾಂತರ ಸಂಖ್ಯೆಯ ಹಲಸಿನ ಕಸಿ ಗಿಡಗಳು ಮಾರಾಟವಾಗುತ್ತಿದೆ. ಜನ ಬೀಜ ಹಾಕಿ ಹಲಸಿನ ಸಸಿ ನೆಡುವ ಅಭ್ಯಾಸ ಬಿಟ್ಟು, ಕಸಿ ಗಿಡದತ್ತ ಬದಲಾಗಿದ್ದಾರೆ. ಇದರಿಂದ ಬೆಳೆಗಾರರಿಗೆ ಹಣ್ಣಿನ ಲಾಭ ಮಾತ್ರ ಆಗುತ್ತದೆ.

Grafted jack tree
ಕಸಿ ಮಾಡಿದ ಹಲಸಿನ ಮರ
  • ಹಲಸಿನ ಹಣ್ಣು ಮಾತ್ರ ಮಾರಾಟ ಮಾಡಿ ಲಾಭಮಾಡಿಕೊಂಡರೆ ಸಾಕೇ?
  • ಎಲ್ಲರೂ ಹಲಸಿನ ಸಸಿ ನೆಟ್ಟರೆ ಅದರ ಉತ್ಪಾದನೆ  ಹೆಚ್ಚಳವಾಗಲಿಕ್ಕಿಲ್ಲವೇ?
  • ನಾವು ಎಷ್ಟು ಮುಂದೆ ಹೋಗುತ್ತೇವೆಯೋ ಅದಕ್ಕಿಂತ ಹೆಚ್ಚು ಮುಂದೆ ಹೋಗಿ ಮೌಲ್ಯವರ್ಧನೆ ಮುಂತಾದ ಸಾಹಸಗಳಲ್ಲಿ ಕೈಯಾಡಿಸಿ ನಮ್ಮೊಂದಿಗೆ ಸ್ಪರ್ಧೆ ಮಾಡಲು ಬೇರೆ ದೇಶಗಳು ತುದಿಗಾಲಲ್ಲಿವೆ.
  • ನಮ್ಮ ದೇಶದ ಹವಾಮಾನ, ಮಣ್ಣಿನ ಗುಣಮಟ್ಟ, ಹಾಗೂ ಇನ್ನಿತರ ಇತಿಮಿತಿಗಳಲ್ಲಿ ಹಲಸಿನ ಹಣ್ಣಿದ್ದರೇನಂತೆ ಕೊಳ್ಳುವವರೇ ಇಲ್ಲದಾದರೂ ಆಗಬಹುದು.
  • ಅಂತಹ ಸ್ಥಿತಿಯಲ್ಲೂ ಹಲಸು ನಮ್ಮ ಕೈ ಹಿಡಿಯಬೇಕೆಂದಿದ್ದರೆ ಮಾಡಬೇಕಾದ ಅಗತ್ಯ ಕೆಲಸ ಇದು.

ಹಲಸಿನ ಬೆಳೆ ಬೆಳೆಸುವಾಗ ನಾವು ಬರೇ ಹಣ್ಣು- ಕಾಯಿ ಮಾತ್ರ ಯೋಚಿಸಿದರೆ ಸಾಲದು. ಲಕ್ಷಾಂತರ ಬೆಲೆ ಬಾಳುವ ಮರವೂ ನಮಗೆ ಆದಾಯ ಕೊಡಬೇಕಿದ್ದರೆ ನಾವು ಬೀಜದ ಸಸಿಯನ್ನು ನೆಡಬೇಕು.

ಕಸಿ ಗಿಡದ ಜೊತೆಗೆ ಬೀಜದ ಸಸಿಯೂ ಇರಲಿ:

  • ಕಸಿ ಮಾಡಿದ ಹಲಸಿನ ಸಸಿಯಲ್ಲಿ ಮಾತೃಗುಣ ಯಥಾವತ್ ಬರುತ್ತದೆ ಎಂಬ ಕಾರಣಕ್ಕೆ ಜನ ಅದಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.
  • ಜೊತೆಗೆ ಬೇಗ ಫಲಕೊಡುತ್ತದೆ ಎಂಬುದೂ ಒಂದು ಕಾರಣ.
  • ಸಾಮಾನ್ಯವಾಗಿ ಹಲಸಿನಲ್ಲಿ ಕಣ್ಣು ಕಸಿಯ ಸಸ್ಯಗಳನ್ನೇ ಮಾಡಲಾಗುತ್ತದೆ.
  • ಒಂದು ಹಲಸಿನ ಸಸಿ ಸಿಕ್ಕರೆ ಅದನ್ನು ದೊಡ್ಡ ಪಾಲೀ  ಬ್ಯಾಗ್ ನಲ್ಲಿ ಬೆಳೆಸಿದರೆ ಒಂದು ವರ್ಷ ಕಳೆದರೆ ಸಾಕು, ಒಂದಷ್ಟು ಕಸಿ ಮಾಡಲು ಕಣ್ಣುಗಳು ಸಿಗುತ್ತವೆ.
  • ಹೀಗಾಗಿ ನರ್ಸರಿ ಮಾಡುವವರು ಅಧಿಕ ಸಂಖ್ಯೆಯಲ್ಲಿ ಕಸಿ ಗಿಡ  ತಯಾರಿಸಿ ಕೊಡುತ್ತಾರೆ.
  • ಇದು ಅವರ ವೃತ್ತಿ. ಇಂದು ಬಹಳಷ್ಟು ಜನ ಹಲಸಿನ ಕೃಷಿಗೆ ಮುಂದಾಗಿರುವುದರ ಹಿಂದೆ ಇವರ ಶ್ರಮವೂ ಸಾಕಷ್ಟು ಇದೆ.
  • ಆದರೆ ಕಸಿ ಮಾಡಿದ ಹಲಸಿನ ಸಸಿ ಮರವಾಗಿ ಬೆಳೆಯುವುದೇ ಆದರೂ ಅದು ನಾಟದ ಮರವಾಗಿ ಬೆಳೆಯಲಾರದು.
  • ಹಲಸಿನ ಮರ ಒಂದು ಅತ್ಯುತ್ತಮ ಬಣ್ಣದ  ನಾಟಾ  ಕೊಡುವ ಮರ.
  • ಜಗತ್ತಿನಲ್ಲೇ ಈ ಹಳದಿ, ಕೇಸರಿ ಬಣ್ಣ ಕೊಡಬಲ್ಲ ಬೇರೆ ಮರಮಟ್ಟು  ಬೇರೆ ಇಲ್ಲ ಎಂದೇ ಹೇಳಬಹುದು.
  • ಸುಮಾರು 25-30 ವರ್ಷಕ್ಕೆ ಹಿಂದೆ ಹಲಸಿನ ಸಸ್ಯಾಭಿವೃದ್ದಿ, ಬೀಜಗಳ ಮೂಲಕ ನಡೆಯುತ್ತಿತ್ತು.
  • ನಮ್ಮ ಹಿರಿಯರಿಗೆ ಹಲಸಿನ ಬೀಜ ಹಾಕುವುದು ಬೆಳೆಸುವುದು ಒಂದು ಹವ್ಯಾಸವಾಗಿತ್ತು.
  • ನಾವು ಹಲಸಿನ ಮರಕ್ಕೆ ಬೆಲೆ ಇದೆ ಎಂದು ಕಡಿದು ಮಾರಿದೆವು.
  • ಹಲಸಿನ ಮರಮಟ್ಟು ಹುಡುಕಿದರೂ ಸಿಗದ ಸ್ಥಿತಿ ಉಂಟಾದ ಈ ಕಾಲದಲ್ಲಿ ಹಲಸಿನ ನಾಟಾಕ್ಕೆ ಈಗ ಚದರ ಅಡಿಗೆ 4,500 ರೂ. ದಾಟಿದೆ.
35 years old jack tree
35 ವರ್ಷದ ಸುಮಾರು 50,000 ಬೆಲೆ ಬಾಳುವ ಹಲಸಿನ ಮರ
  • ಹೀಗಿರುವಾಗ ನಾವು ಕಸಿ ಗಿಡವನ್ನೇ ನಾಟಿ ಮಾಡಿದರೆ ಹಲಸಿನ ಮರಮಟ್ಟಿಗೆ ಎಲ್ಲಿಗೆ ಹೋಗುವುದು.
  • ಮುಂದೆ ಹಲಸಿನ ಮರದ ಈ ಕೊರತೆಯಿಂದಾಗಿ ಚದರ ಅಡಿಗೆ 10,000 ರೂ. ಆದರೂ ಅಚ್ಚರಿ ಇಲ್ಲ.
  • ಒಂದು ಹಲಸಿನ ಮರ, ಸುಮಾರು 40-50 ವರ್ಷ ಬೆಳೆದಾಗ ಕನಿಷ್ಟ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮರಮಟ್ಟನ್ನು ಕೊಡುತ್ತದೆ.
  • ಈ ಮೌಲ್ಯ ಸಣ್ಣದಲ್ಲ. ಇದನ್ನು ಹಾಗೆಯೇ ಉಳಿಸಿದರೆ ಅದು ಮತ್ತೂ ದೊಡ್ದ ಮೊತ್ತವಾಗುತ್ತದೆ.
  • ಆದ ಕಾರಣ 50% ದಷ್ಟಾದರೂ ಬೀಜದ ಸಸಿಯನ್ನು ನೆಟ್ಟು, ಆಪತ್ಕಾಲಕ್ಕೆ ವಿಮೆ ಮಾಡಿಸಿಟ್ಟುಕೊಳ್ಳಿ.
  • ಕೆಲವು ಜನ ಹೇಳುವುದುಂಟು, ನಮ್ಮ ನಂತರದ ತಲೆಮಾರಿಗೆ ನಾವು ಕೊಡುವ ಆಸ್ತಿ ಈಗಿನದ್ದಕ್ಕಿಂತ ಉತ್ತಮವಾಗಿರಬೇಕು ಎಂದು.
  • ಅದು ನೈಜ ಕಳಕಳಿಯೇ ಆಗಿದ್ದರೆ ,ಅವರಿಗಾಗಿ ಕೆಲವು ಹಲಸಿನ ಬೀಜದ ಸಸಿಗಳನ್ನು ನೆಟ್ಟು ಬೆಳೆಸಿ.

ಬೀಜದ ಸಸಿಯೂ ಬೇಗ ಫಲ ಕೊಡುತ್ತದೆ:

Jack plantations in other states
ಹೊರ ರಾಜ್ಯಗಳಲ್ಲಿ ಹಲಸಿನ ಪ್ಲಾಂಟೇಶನ್ ಗಳು ಹೀಗೆ ಇವೆ
  • ಬೀಜದ ಸಸಿ ಎಂದು ಅದನ್ನು ತಾತ್ಸಾರ ಮಾಡಬೇಡಿ. ಇದು ಸುಮಾರು 10 ವರ್ಷ ತುಂಬುವುದರ ಒಳಗೆ ಫಲ ಕೊಡಲು ಪ್ರಾರಂಭವಾಗುತ್ತದೆ.
  • ಕಸಿ ಗಿಡಕ್ಕೆ ಹೇಗೆ ಆರೈಕೆ ಮಾಡುತ್ತೀರೋ ಅದೇ ಆರೈಕೆಯನ್ನು ಇದಕ್ಕೆ ಮಾಡಿದರೆ ದಷ್ಟ ಪುಷ್ಟವಾಗಿ ಬೆಳೆಯುತ್ತದೆ.
  • ಬೇಗ ಫಲ ಕೊಡುತ್ತದೆ. ಅಧಿಕ ಫಲವನ್ನೂ ಕೊಡುತ್ತದೆ. ಮರಮಟ್ಟು ತಾಯಿ ಬೇರು ಚೆನ್ನಾಗಿ ಬೆಳೆಯುವ ಕಾರಣ ಅದಕ್ಕೆ ಉತ್ತಮ ಗಡಸುತನವೂ ಇರುತ್ತದೆ.
  • ಬೀಜದ ಸಸಿಗಳಿಂದಲೇ ಇಂದು ನಾವು ವೈವಿಧ್ಯಮಯ ಗುಣದ ಹಳದಿ, ಕಿತ್ತಳೆ, ಕೆಂಪು, ದುಂಡಗೆ, ಉದ್ದುಂಡಗೆ, ಅಂಬಲಿ, ಬಕ್ಕೆ, ಗಮ್ಲೆಸ್  ಹೀಗೆಲ್ಲಾ  ತಳಿ ಮೂಲವನ್ನು ಪಡೆದದ್ದು.
  • ಇದು ಪ್ರಾಕೃತಿಕವಾಗಿ ಆದ ಮಾರ್ಪಾಡು. ಬೀಜದ ಸಸಿಯಲ್ಲಿ ಈ ಮಾರ್ಪಾಟು ಇನ್ನೂ  ಆಗುತ್ತಲೇ ಇರುತ್ತದೆ.
  • ಅದರಲ್ಲಿ ಉನ್ನತ ಗುಣದ ತಳಿಯೂ ಲಭ್ಯವಾಗಬಹುದು.

ಸಿದ್ದು, ಶಂಕರ, ಮಧುರಾ ಮಂಕಾಳೆ, ಮುಂತಾದ ಹಲಸಿನಲ್ಲಿ ಇನ್ನೂ ಹೊಸ ಹೊಸ ತಳಿಗಳನ್ನು ನೈಸರ್ಗಿಕವಾಗಿ ಪಡೆಯಬೇಕಿದ್ದರೆ ಅದು ಬೀಜದ ಸಸಿಗಳಿಂದ ಮಾತ್ರ ಸಾಧ್ಯ.

ಅಂಬಲಿ ಹಲಸು- ತಾತ್ಸಾರ ಬೇಡ:

  • ಹಲಸು ಬೆಳೆಯುವವರು ಅಂಬಲಿ ಹಲಸು ಎಂದರೆ ಮುಖ ಸಿಮ್ಡರಿಸಿಕೊಳ್ಳುತ್ತಾರೆ.
  • ಹಾಗೆ ಮಾಡಬೇಕಾದ ಅಗತ್ಯ ಇಲ್ಲ.
  • ಅಂಬಲಿ ಹಲಸು ಹಣ್ಣಿಗೆ ಯೋಗ್ಯವಾಗದೆ ಎಇರಬಹುದು.
  • ಆದರೆ ಹಣ್ಣಿನ ಕೆಲವು ಮೌಲ್ಯವರ್ಧೆನೆಗೆ ಹೇಳಿ ಮಾಡಿಸಿದ ತಳಿ.
  • ಇದರ ಬಲಿತ ಕಾಯಿಯ ಚಿಪ್ಸ್, ಹಾಗೆಯೇ ಎಳೆ ಕಾಯಿ ಅಡುಗೆಗೆ ಬಹಳ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
  • ಅಂಬಲಿಯಾದರೇನಂತೆ ಹಣ್ಣಲ್ಲದೆ ಹಪ್ಪಳ ಮಾಡಬಹುದು.
  • ಚಿಪ್ಸ್ ಇತ್ಯಾದಿ ಮಾಡುವವರಿಗೆ ಮಾರಾಟ ಮಾಡಬಹುದು.
  • ಹಣ್ಣನ್ನು ವಿವಿಧ ( ಮಾಂಬಳ) ಮೌಲ್ಯವರ್ಧನೆಗೆ ಬಳಸಬಹುದು. ಹಲಸು ಅಂಬಲಿ ಆಗುವುದು ನೈಸರ್ಗಿಕ ತಳಿ ಮಾರ್ಪಾಡು.
  • ಹಲಸಿನ ಮರ ಅದ ನಂತರವೂ ಅದಕ್ಕೆ ಕಸಿ ಮಾಡಿ ಪುನಃಶ್ಚೇತನ ಮಾಡಬಹುದು
Natural  orange colour wood
ನೈಸರ್ಗಿಕ ಹಳದಿ ಮತ್ತು ಕಿತ್ತಳೆ ಬಣ್ಣದ ಮರ

ಮರಮಟ್ಟಿಗಾಗಿ ಹಲಸು ಬೆಳೆಸಿ:

  • ಹಲಸಿನ ಮರ ಅಧಿಕ ಮೌಲ್ಯದ ಮರವಾಗಿದ್ದು, ಇದಕ್ಕೆ ನಿರಂತರ ಬೇಡಿಕೆ ಇದೆ.
  • ಇದು ತಿರುಳು ಉಳ್ಳ ಮರಮಟ್ಟು.. ಇದಕ್ಕೆ ಸುರಿ ಬೀಳುವುದಿಲ್ಲ.
  • ನೂರರು ವರ್ಷ ಬಾಳ್ವಿಕೆ ಬರುವಂತದ್ದು.
  • ಮುಂದಿನ ದಿನಗಳಲ್ಲಿ ಹಲಸಿನ ಮರಮಟ್ಟು ಖಂಡಿತವಾಗಿಯೂ ಕೊರತೆಯಾಗಲಿದು,
  • ರೈತರು 50:50 ಪ್ರಮಾಣದಲ್ಲಿ ಬೀಜದ  ಹಾಗೂ ಕಸಿ ಗಿಡವನ್ನು ಬೆಳೆಸಿರಿ.

ಇತ್ತೀಚೆಗೆ ಹಲಸಿನ ಗಿಡಗಳು ಕೆಲವು ರೋಗ ಬಾಧೆಗೆ ತುತ್ತಾಗುತ್ತಿವೆ. ಕೆಲವ್ರು ಇದು ಕಸಿ ಗಿಡಕ್ಕೆ ಮಾತ್ರ ಎನ್ನುತ್ತಾರೆ. ಆದರೆ ಹಾಗಿಲ್ಲ. ಎಲ್ಲದಕ್ಕೂ ಬರುತ್ತದೆ. ಸ್ವಲ್ಪಅಂತರ್ಗತ ಶಕ್ತಿ ಕಡಿಮೆ ಇರುವ ಮರಗಳಿಗೆ ಇದರ ತೊಂದರೆ ಜಾಸ್ತಿ. ಬೀಜದ ಗಿಡಕ್ಕೆ ಅದರದ್ದೇ ಆದ ಶಕ್ತಿ ಇರುವ ಕಾರಣ ಅದು ಬೇಗ ರೋಗಕ್ಕೆ ತುತ್ತಾಗಲಾರದು.

error: Content is protected !!