ಮಾವು ಕೊಯ್ಯುವಷ್ಟು ಬೆಳೆದಿದೆಯೇ ? ಹೇಗೆ ತಿಳಿಯುವುದು?

ರತ್ನಗಿರಿ ಅಲ್ಫೊನ್ಸ್ ಹಣ್ಣು

ಮಾವಿನ ಕಾಯಿ ಕೊಯ್ಯುವಾಗ ಅದು ಸರಿಯಾಗಿ ಬೆಳೆದಿದ್ದರೆ ಅದರ ರುಚಿಯೇ ಭಿನ್ನ. ಕಾಯಿ ಕೊಯ್ಯುವಷ್ಟು ಬೆಳೆದಿದೆಯೇ ಇಲ್ಲವೇ ಎಂದು ತಿಳಿಯಲು ಸ್ವಲ್ಪ ಅನುಭವ ಬೇಕು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಈಗ ಮಾವಿನ ಕಾಯಿ ಮಾಗುವ ಸಮಯ. ಮಾವಿನ ಕಾಯಿ ಹೂ  ಬಿಟ್ಟು, ಮಾಗಿ ಹಣ್ಣಾಗಲು 3 ತಿಂಗಳು ಬೇಕು. ಈ ಅವಧಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಹಾಕಲು ಆಗದು. ಅದಕ್ಕಾಗಿ ಕೆಲವು ಕಣ್ಣಂದಾಜಿನ ಪರೀಕ್ಷೆಗಳು ಮತ್ತು ಯಾದೃಚ್ಚಿಕ ಪರೀಕ್ಷೆಗಳನ್ನು ಮಾಡಿ ಬಲಿತಿದೆಯೇ ಇಲ್ಲವೇ ಎಂದು ತಿಳಿಯಬಹುದು. ಎಳೆಯದಾದ ಮಾವನ್ನು ಕೊಯಿಲು ಮಾಡಿದರೆ ಅದರ ನಿಜವಾದ ರುಚಿ ಇರುವುದಿಲ್ಲ. ಸರಿಯಾಗಿ ಬಲಿತರೆ ತೂಕವೂ ಇರುತ್ತದೆ. ರುಚಿಯೂ ಇರುತ್ತದೆ. ಬೇಗ ಹಣ್ಣೂ ಆಗುತ್ತದೆ.

ಕೊಯ್ಯುವಷ್ಟು ಬೆಳೆದ ಮಾವಿನ ಕಾಯಿಗಳು
ಬಲಿತ ಮಾವಿನ ಕಾಯಿಗಳು
 • ಪಕ್ವತೆ ಹಣ್ಣು ಹಂಪಲುಗಳಲ್ಲಿ ಪ್ರಮುಖ ಮಾನದಂಡ.
 • ಪಕ್ವವಾಗಾದಾಗ ಮಾತ್ರ ಅದರಲ್ಲಿ ಸಕ್ಕರೆ ಅಂಶ (TSS)ಹಾಗೂ ಸತ್ವಗಳು ಸೇರಿಕೊಳ್ಳುತ್ತವೆ.
 • ಅದಕ್ಕಾಗಿ ಬಲಿತ ಹಣ್ಣು ಹಂಪಲುಗಳನ್ನೇ ಕೊಯಿಲು ಮಾಡಬೇಕು.

ಬಲಿತ ಮಾವಿನ ಕಾಯಿಯ ಲಕ್ಷಣ:

The enlarged spots in ripe mangos -ಬೆಳೆದ ಮಾವಿನಲ್ಲಿ ಈ ರೀತಿಯಲ್ಲಿ ಕಲೆಗಳು ಕಾಣಿಸುತ್ತವೆ
ಬೆಳೆದ ಮಾವಿನಲ್ಲಿ ಈ ರೀತಿಯಲ್ಲಿ ಕಲೆಗಳು ಕಾಣಿಸುತ್ತವೆ
 • ಮರದಲ್ಲಿ ಮಾವಿನ ಹೂವು ಯಾವಾಗ ಬಿಟ್ಟಿದೆ ಎಂಬುದು ನಮಗೆ ಗೊತ್ತಿರಬೇಕು.
 • ಹೂ ಬಿಟ್ಟು ಕಾಯಿಯಾಗಿ ಅದು ಬಲಿತು ಹಣ್ಣಾಗಲು ತಳಿ ಹೊಂದಿ ಸುಮಾರು 3-4 ತಿಂಗಳ ಕಾಲಾವಧಿ ಬೇಕು.
 • ಕೆಲವೊಮ್ಮೆ ಎಡೆ ಎಡೆಯಲ್ಲಿ ಹೂ ಬಿಟ್ಟು ಕಾಯಿಯಾಗುವುದೂ ಇದೆ.  (ಉದಾ: ಅಲ್ಫೋನ್ಸ್)
 • ಆಗ ಕೆಲವು ಎಳೆ ಕಾಯಿಗಳು ಮತ್ತೆ ಕೆಲವು ಬಲಿತ ಕಾಯಿಗಳೂ ಇರುತ್ತವೆ.
 • ಕೊಯಿಲು ಮಾಡುವಾಗ ಇದನ್ನು ಗಮನಿಸಿ ಕೊಯಿಲು ಮಾಡಬೇಕು.
 • ಬಲಿತ ಮಾವಿನ ಕಾಯಿಗಳ ಮೇಲೆ ಅನುಭವದಲ್ಲಿ ತಿಳಿಯಬಹುದಾಗ ಬಣ್ಣ ಬದಲಾವಣೆ ಅಥವಾ ಹೊಳಪು ಕಾಣಿಸುತ್ತದೆ.
 • ಕಾಯಿಯ ಮೇಲ್ಮೈಯಲ್ಲಿ ಉಬ್ಬು ತಗ್ಗುಗಳಿಲ್ಲದ ಚುಕ್ಕೆಗಳು ಅಗಲವಾಗಿ  ಸರಿಯಾಗಿ ಕಾಣಿಸಲಾರಂಭಿಸುತ್ತದೆ.
 • ಮಾವಿನ ಕಾಯಿಯ ತೊಟ್ಟಿನ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿ ಕೊಯ್ಲು ಮಾಡಬೇಕು.
 • ಬುಡ ಭಾಗ ಕುಳಿ ಬಿದ್ದಂತಿದ್ದರೆ ಅಂತಹ ಮಾವು ಬಲಿತಿದೆ ಎಂದರ್ಥ.
 • ತೊಟ್ಟಿನ ಭಾಗ ಉಬ್ಬಿದ್ದರೆ ಅದು ಎಳೆಯದು ಎಂಬುದು ಸ್ಪಷ್ಟ.
Bottom of Ripe mango like this-ಬಲಿತ ಮಾವಿನ ಕಾಯಿಯ ತೊಟ್ಟಿನ ಭಾಗ ಹೀಗೆ ಇರುತ್ತದೆ.
ಬಲಿತ ಮಾವಿನ ಕಾಯಿಯ ತೊಟ್ಟಿನ ಭಾಗ ಹೀಗೆ  ಕುಳಿ ಬಂದಿರುತ್ತದೆ.

ಒಂದು ಮಾವಿನ ಕಾಯಿಯನ್ನು ಮೇಲಿನ ಲಕ್ಷಣಗಳನ್ನು ಗಮನಿಸಿ ಕೊಯಿಲು ಮಾಡಿ ಅದನ್ನು ಒಂದು ಭಾಗ ತುಂಡು ಮಾಡಿ. ಆಗ ಒಳ ತಿರುಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಂತಹ ಮಾವು ಬಲಿತಿದೆ ಎಂದು ತಿಳಿಯಬಹುದು.

 • ಕೊಯಿಲು ಮಾಡಿದ ಮಾವಿನ ಕಾಯಿಯನ್ನು  ಬಕೆಟ್ ನ ನೀರಿನಲ್ಲಿ ಹಾಕಿ.
 • ಅದು ತೇಲಿದರೆ ಬಲಿತಿಲ್ಲ,  ಎಳೆಯದು ಎಂದು ತಿಳಿಯಬಹುದು.
Inside colour of ripe mango -ಬಲಿತ ಮಾವಿನ ಕಾಯಿಯ ಒಳ ತಿರುಳು
ಬಲಿತ ಮಾವಿನ ಕಾಯಿಯ ಒಳ ತಿರುಳು
 • ಪೂರ್ತಿ ಅಡಿಗೆ ಹೋಗದಿದ್ದರೂ ಸ್ವಲ್ಪ ಭಾಗ ಮಾತ್ರ ನೀರಿನ ಮೇಲೆ ತೇಲುತ್ತಿದ್ದರೆ  (Floating) ಸಾಧಾರಣ ಬಲಿತಿದೆ ಎಂದು ತಿಳಿಯಬಹುದು.
 • ಮರದಲ್ಲಿ ಮಾವು ಒಂದು ಎರಡು ಹಣ್ಣಾಗಿ ಬಿದ್ದ ತಕ್ಷಣ ಎಲ್ಲವನ್ನೂ ಕೊಯಿಲು ಮಾಡಬೇಡಿ.
 • ಅದು ಮೊದಲು ಹೂ ಬಿಟ್ಟು ಆದ ಕಾಯಿಗಳಾಗಿರಬಹುದು.
 • ಮರಕ್ಕೆ ಹತ್ತಿ ಕಾಯಿಗಳ ತೊಟ್ಟಿನ ಭಾಗ ಎಷ್ಟು ಪ್ರಮಾಣದಲ್ಲಿ ಕುಳಿ ಬಿದ್ದಿದೆ ಎಂಬುದನ್ನು ಅಂದಾಜು ಮಾಡಿ ನಂತರ ಕೊಯಿಲು ಮಾಡಿ.
Non ripe mango - ಎಳೆಯ ಮಾವಿನ ಕಾಯಿ
ಎಳೆಯ ಮಾವಿನ ಕಾಯಿ
In side colour of non ripe mango- ಎಳೆಯ ಮಾವಿನ ಕಾಯಿಯ ತಿರುಳು
ಎಳೆಯ ಮಾವಿನ ಕಾಯಿಯ ತಿರುಳು

ಕೊಯ್ಯುವ ವಿಧಾನ:

 • ಮಾವಿನ ಕಾಯಿಯನ್ನು ಕೊಯಿಲು ಮಾಡುವಾಗ ಕೆಲವು ಪ್ರಾಮುಖ್ಯ ಕ್ರಮಗಳನ್ನು ಅನುಸರಿಸಬೇಕು.
 • ಮುಖ್ಯವಾಗಿ ಮಾವಿನ ಕಾಯಿಯನ್ನು ಕೊಯಿದು ನೆಲಕ್ಕೆ ಬೀಳಿಸಬಾರದು.
 • ಹೀಗೆ ಬೀಳಿಸಿದರೆ ಎಲ್ಲಾ ಮಾವಿನ ಕಾಯಿಗಳೂ ಹಾಳಾಗುತ್ತವೆ.
 • ಕೊಯಿಲು ಮಾಡಲು ಇರುವ ಕೆಲವು ಸಾಧನಗಳ ಮೂಲಕ ಕೊಯ್ಯಬಹುದು.
 • ಒಂದು ವೇಳೆ ನೆಲಕ್ಕೆ ಹಾಕುವುದೇ ಆಗಿದ್ದರೆ ನೆಲಕ್ಕೆ ತಾಗದಂತೆ, ಬಲೆಯನ್ನು ಹಾಕಿ ಅದಕ್ಕೆ ಬೀಳುವಂತೆ ಕೆಳಕ್ಕೆ ಹಾಕಬೇಕು.
 • ಕೊಯಿಲು ಮಾಡಿದ ಮಾವಿನ ಕಾಯಿಗಳನ್ನು ನೆಲದಲ್ಲಿ  ರಾಶಿ ಹಾಕಬಾರದು.
 • ಬುಟ್ಟಿಗೆ ಹಾಕಿ ತಕ್ಷಣ ಅದಕ್ಕೆ ಬಟ್ಟೆಯನ್ನು ಅಥವಾ ಸೆಣಬಿನ ಗೋಣಿ  ಚೀಲವನ್ನು ಮುಚ್ಚಬೇಕು.
 • ಬಹುತೇಕ ಮಾವಿನ ಮರಗಳ ಬುಡದಲ್ಲಿ ಹಣ್ಣು ನೊಣಗಳ ಮರಿಗಳು ಮತ್ತು ನೊಣಗಳು ಈ ಸಮಯದಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇರುತ್ತವೆ.
 • ಇವು ನೆಲದಲ್ಲಿ ರಾಶಿ ಹಾಕಿದ ಮಾವಿನ ಕಾಯಿಯ ಮೇಲೆ ಕುಳಿತು ಮೊಟ್ಟೆ ಇಡುತ್ತವೆ.  ಅದನ್ನು ತಡೆಯಲು ಮುಚ್ಚುವುದು ಪರಿಹಾರ.
Shining of ripe mango - ಬಲಿತ ಮಾವಿನ ಕಾಯಿಯ ಹೊಳಪು
ಬಲಿತ ಮಾವಿನ ಕಾಯಿಯ ಹೊಳಪು

ಮಾವಿನ ಕಾಯಿಯನ್ನು ಕೊಯಿಲು ಮಾಡುವಾಗ ಬುಡ ಭಾಗದ ತೊಟ್ಟು ಕನಿಷ್ಟ 1 ಇಂಚಿನಷ್ಟಾದರೂ ಉದ್ದಕ್ಕೆ ಇರುವಂತೆ ಉಳಿಸಬೇಕು.  ಅದನ್ನು ಮುರಿಯಬಾರದು. ಕೊಯಿಲು ಮಾಡಿದ ತಕ್ಷಣ ಅದನ್ನು ಸ್ನಾನ ಮಾಡುವಷ್ಟು ಬೆಚ್ಚಗಿನ ಬಿಸಿ ನೀರಿಗೆ ಬಕೆಟ್ ಗೆ ಒಂದು ಮುಷ್ಟಿ ಉಪ್ಪು ಹಾಕಿ ಅದರಲ್ಲಿ ತೊಳೆದು ಅದನ್ನು ತೇವಾಂಶ ಆರುವಂತೆ ಹರಡಿ ಇಡಬೇಕು. 

 • ನೀರಿನ ತೇವ ಆರಿದ ನಂತರ ಅದನ್ನು ಭತ್ತದ ಹೊಟ್ಟು ಅಥವಾ ಹುಲ್ಲು ರಾಶಿ, ಅಥವಾ ಕಾಗದ ಚೂರುಗಳ ರಾಶಿಯಲ್ಲಿ ಮುಚ್ಚಿ ವಾತಾವರಣ ಏರು ಪೇರಾಗದ ಕಡೆ ದಾಸ್ತಾನು ಇಡಬೇಕು.
 • ವಾತಾವರಣ ಹೆಚ್ಚು ಕಡಿಮೆ ಆಗದಂತೆ ಈ ಸಾಮಾಗ್ರಿಗಳು ತಡೆಯುತ್ತವೆ.
 • ಇಲ್ಲವಾದರೆ ಹಣ್ಣಿನ ಮೇಲ್ಮೈಯಲ್ಲಿ ಕೊಳೆಯುವಿಕೆ ಉಂಟಾಗುತ್ತದೆ.
 • ಹಣ್ಣಿಗೆ ಇಟ್ಟ ಮಾವು ಸುಮಾರು 3 ದಿನಗಳ ಕಾಲ ಹಣ್ಣಾಗಲಾರದು.
 • ಆ ಸಮಯದ ತನಕ ಅದಕ್ಕೆ ಮುಚ್ಚಿದ ವಸ್ತುಗಳನ್ನು ತೆಗೆದು ನೋಡುವುದು ಮಾಡಬೇಡಿ.
 • ರಾಸಾಯನಿಕ  ಉಪಚಾರ ಮಾಡುವುದಾದರೆ ಶೇ.0.5 ರ ಬಾವಿಸ್ಟಿನ್ ದ್ರಾವಣದಲ್ಲಿ ಅದ್ದಿ ಒಣಗಿಸಿ ದಾಸ್ತಾನು ಇಡಿ.

ಹಣ್ಣಿಗೆ ಇಡುವಾಗ ಗಮನಿಸಿ:

harwest like this for riping mango - ಮಾವಿನ ಕಾಯಿ ಹಣ್ಣಿಗೆ ಇಡುವಾಗ ಹೀಗೆ ಕೊಯಿಲು ಮಾಡಿ
ಮಾವಿನ ಕಾಯಿ ಹಣ್ಣಿಗೆ ಇಡುವಾಗ ಹೀಗೆ ಕೊಯಿಲು ಮಾಡಿ
 • ಮಾವಿನ ಕಾಯಿಯನ್ನು ತೊಳೆಯುವಾಗ ಅದರ ಮೇಲ್ಮೈಯಲ್ಲಿ  ಏನಾದರೂ ಕಲೆಗಳು ಇವೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.
 • ಕಪ್ಪು ಚುಕ್ಕೆಗಳು ಇದ್ದರೆ ಅದನ್ನು ಪ್ರತ್ಯೇಕವಾಗಿ  ಇಡಿ.
 • ಬಿದ್ದ ಮಾವಿನ ಕಾಯಿಗಳನ್ನು ಪ್ರತ್ಯೇಕವಾಗಿ ಇಟ್ಟು ಅದನ್ನು ಹಣ್ಣು ಮಾಡುವ ಲಾಟ್ ಜೊತೆ ಮಿಶ್ರ ಮಾಡಬೇಡಿ.
 • ಹಣ್ಣು ಆಗುವಾಗ ಒಂದು ಎರಡು ಮೊದಲು ಹಣ್ಣಾದರೆ ಅದನ್ನು ತಕ್ಷಣ ಪ್ರತ್ಯೇಕಿಸಬೇಡಿ.
 • ಅದು ರಾಶಿಯಲ್ಲೇ ಇರಲಿ. ಅದು ಉಳಿದ ಕಾಯಿಗಳು ಬೇಗ ಹಣ್ಣಾಗಲು ಬೇಕಾಗುವ ಎಥಿಲಿನ್ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತವೆ.
 • ಬುಟ್ಟಿಯಲ್ಲಿ ಹಣ್ಣು ಮಾಡಲು ಇಟ್ಟರೆ ಅದಕ್ಕೆ ಒಣ ಗೋಣಿ ಚೀಲವನ್ನೂ ಮುಚ್ಚಿ.
 • ತಂಪು, ಬಿಸಿ ವಾತಾವರಣ ವೆತ್ಯಾಸವಾಗದಂತೆ  ನೋಡಿಕೊಳ್ಳಿ.
 • ಜನ ಸಂಚಾರ ಹೆಚ್ಚು ಇಲ್ಲದ ಕೋಣೆಯಲ್ಲಿ ಹಣ್ಣು ಮಾಡಲು ಇಡಿ.
 • ಆಗ ತೊಟ್ಟು , ಮೇಲ್ಮೈ  ಕೊಳೆಯುವಿಕೆ ಕಡಿಮೆಯಾಗುತ್ತದೆ.

ಮಾವಿನ ಹಣ್ಣನ್ನು ಜಾಗರೂಕತೆಯಲ್ಲಿ ಮಾಗಿದ್ದನ್ನು ಮಾತ್ರ ಕೊಯಿಲು ಮಾಡಬೇಕು. ಕೊಯಿಲು ಮಾಡುವಾಗ ಜೋಪಾನವಾಗಿ ಕೊಯ್ಯಬೇಕು. ಹಣ್ಣು ಮಾಡುವಾಗಲೂ ಸೂಕ್ತ ರೀತಿಯಲ್ಲಿ ಇಟ್ಟರೆ ಮಾತ್ರ ಹೆಚ್ಚಿನ ಹಣ್ಣು ತಿನ್ನಲು ಸಿಗುತ್ತದೆ.

error: Content is protected !!