ಕುರಿ – ಮೇಕೆ ಗೊಬ್ಬರ ಯಾಕೆ ಉತ್ತಮ?

ಪೌಷ್ಟಿಕ ಸೊಪ್ಪು ಕೊಡಿ

ಹೆಚ್ಚಿನ ರೈತರು ಸಾವಯವ ಗೊಬ್ಬರವಾಗಿ ಬಳಸುವ  ಕುರಿ, ಮೇಕೆ ಹಿಕ್ಕೆಯಲ್ಲಿ ಏನು ಇದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.
ಕುರಿ, ಮೇಕೆಗಳ ಹಿಕ್ಕೆ ಒಂದು ಉತ್ತಮ ಬೆಳೆ ಪೋಷಕ ಗೊಬ್ಬರ ಮಾತ್ರವಲ್ಲ ,ಮಣ್ಣಿನ ತರಗತಿಯನ್ನು  ಉತ್ತಮ ಪಡಿಸುವ ಸಾವಯವ ವಸ್ತು ಎಂದರೆ ಅತಿಶಯೋಕ್ತಿಯಲ್ಲ. ಸಾವಯವ ಗೊಬ್ಬರ ಎಂದರೆ ಅದು ದೊಡ್ದ ಪ್ರಮಾಣದ್ದಾಗಿರಬೇಕು. ಹೆಚ್ಚು ಸಮಯ ಮಣ್ಣಿನಲ್ಲಿ ಉಳಿದು, ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ನಿಧಾನವಾಗಿ ಲಭ್ಯವಾಗುತ್ತಾ ಇರಬೇಕು. ಇಂತಹ ಗೊಬ್ಬರಗಳಲ್ಲಿ ಕೊಟ್ಟಿಗೆ ಗೊಬ್ಬರ, ಸೊಪ್ಪು ಸದೆಗಳನ್ನು ಒಟ್ಟು ಸೇರಿಸಿ ಮಾಡಿದ ಕಾಂಪೋಸ್ಟು ಗೊಬ್ಬರ, ಹಸು, ಎಮ್ಮೆ ಕಟ್ಟಿ ಹಾಕಿದ ಜಾಗದಲ್ಲಿ ಅದರ ಕಾಲ ಬುಡಕ್ಕೆ ಹಾಕಿದ ಸೊಪ್ಪು, ತರಗೆಲೆ ಸೇರಿಸಿದ ಗೊಬ್ಬರ ಹಾಗೆಯೇ ಕುರಿ, ಮೇಕೆಗಳ ಹಿಕ್ಕೆಗಳು ಪ್ರಾಮುಖ್ಯವಾದವುಗಳು.

Goat excreta

ಏಲ್ಲದಕ್ಕಿಂತ ಉತ್ತಮ ಕೊಟ್ಟಿಗೆ ಗೊಬ್ಬರ- ಆದರೆ?

  • ಹಿಂದೆ ನಮ್ಮ ಪ್ರತೀಯೊಬ್ಬ ಕೃಷಿಕನ ಮನೆಯಲ್ಲೂ ಹಸು, ಎಮ್ಮೆಗಳನ್ನು ಸಾಕುತ್ತಿದ್ದರು.
  • ಇವುಗಳನ್ನು ಸಾಕುವುದೆಂದರೆ ಹಾಲಿನ ಉದ್ದೇಶದ ಜೊತೆಗೆ ಗೊಬ್ಬರದ ಉದ್ಡೇಶವೇ ದೊಡ್ಡದಾಗಿತ್ತು.
  • ಹಸು, ಎಮ್ಮೆಗಳ ಕಾಲಿನ ಬುಡಕ್ಕೆ ಸೊಪ್ಪು , ತರಗೆಲೆ ಹಾಸುತ್ತಾ, ಅದರ ಮೇಲೆ ಅವುಗಳು ಮಲ ಮೂತ್ರ ವಿಸರ್ಜನೆ ಮಾಡುತ್ತಾ ಸುಮಾರು ಒಂದು ತಿಂಗಳ ತನಕ ಹಾಗೆಯೇ ಬಿಟ್ಟು, ಅದನ್ನು ಕೊಟ್ಟಿಗೆ  ಗೊಬ್ಬರ, ಅಥವಾ ಹಟ್ಟಿ ಗೊಬ್ಬರವಾಗಿ ಬಳಕೆ ಮಾಡುತ್ತಿದ್ದರು.
  • ಸೊಪ್ಪಿನ ಬೆಟ್ಟಗಳಲ್ಲಿ ವೈವಿಧ್ಯಮಯವಾದ ಸೊಪ್ಪನ್ನು ತಂದು ಹಸುಗಳ ಕಾಲಿನ ಬುಡದಲ್ಲಿ ಹಾಕಿದಾಗ ಅವುಗಳು ಅದರಲ್ಲಿ ಸ್ವಲ್ಪ ತಿನ್ನುವುದೂ ಇತ್ತು.
  • ಆ ಸೊಪ್ಪು ಭಾಗಶಃ ಕಳಿತು ಎಲ್ಲಾ ಸೊಪ್ಪಿನ ಮೇಲೆ ಸಗಣಿ, ಮೂತ್ರದ ಲೇಪನವಾಗಿ ಅದರ ಬಣ್ಣವೇ ಬದಲಾಗುತ್ತಿತ್ತು.
  • ಇಂತಹ ಗೊಬ್ಬರವನ್ನು ಬಹಳಷ್ಟು ಜನ ಕಚ್ಚಾ ರೀತಿಯಲ್ಲಿ ಬೆಳೆಗಳ ಬುಡಕ್ಕೆ ಹಾಕುತ್ತಿದ್ದರು.
  • ಕೆಲವರು ರಾಶಿ ಹಾಕಿ ಸ್ವಲ್ಪ ಹುಡಿಯಾದ ನಂತರ ಬಳಕೆ ಮಾಡುತ್ತಿದ್ದರು.

ಇದು ಎಲ್ಲಾ ಸಾವಯವ ಗೊಬ್ಬರಗಳಲ್ಲಿ ಸರ್ವ ಶ್ರೇಷ್ಟ ಗೊಬ್ಬರ. ಕಾರಣ ಅದರಲ್ಲಿ ಸೇರಿರುವ ಬೇರೆ ಬೇರೆ ಸೊಪ್ಪುಗಳು, ತರಗೆಲೆಗಳು, ಮಲ ಮೂತ್ರಗಳು, ಚೆಲ್ಲಿದ ಅಕ್ಕಚ್ಚು ಎಲ್ಲವೂ ಸಸ್ಯಗಳಿಗೆ ಉತ್ತಮ ಗೊಬ್ಬರವಾಗಿ ಕೆಲಸ ಮಾಡುತ್ತಿತ್ತು. ನಮ್ಮ ಹಿರಿಯರು ಒಂದು ತೆಂಗಿನ ಮರಕ್ಕೆ ಹತ್ತು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿದರೆ ಬೇರೆ ಯಾವ ಗೊಬ್ಬರವನ್ನೂ ಹಾಕದೆ ಉತ್ತಮ ಫಲ ಪಡೆಯುತ್ತಿದ್ದರು.  ಈ ಪದ್ದತಿ ಈಗ ಅಳಿದೇ ಹೋಗಿದೆ. ಆದರ ಬದಲು ಸಗಣಿಯನ್ನೇ ಬಳಸಲಾಗುತ್ತದೆ.  ಆದರೂ ಇದರ ಬಳಕೆ ತುಂಬಾ ಕಡಿಮೆಯಾಗಿದೆ.

ಕುರಿ ಆಡಿನ ಹಿಕ್ಕೆ ಯಾಕೆ ಉತ್ತಮ:

  • ಕುರಿ- ಆಡುಗಳನ್ನು ಹೆಚ್ಚಾಗಿ ಬಯಲು ಸೀಮೆಯ ಪ್ರದೇಶಗಳಲ್ಲಿ ಸಾಕಲಾಗುತ್ತದೆ.
  • ಇಲ್ಲಿ ಬೆಳೆ ಆದ ತರುವಾಯ ಆ ಹೊಲದಲ್ಲಿ ಅವುಗಳನ್ನು ಮೇಯಿಸಲಾಗುತ್ತದೆ.
  • ಹೀಗೆ ಮೇಯುವಾಗ ಅವುಗಳು ತಿನ್ನುವ ಆಹಾರ ಬೆಳೆ ಉಳಿಕೆಗಳೇ ಆಗಿರುತ್ತವೆ.
  •   ಸಾಮಾನ್ಯವಾಗಿ ಬೆಳೆಗೆ ಬಳಕೆ ಮಾಡಿದ ಪೋಷಕಗಳಲ್ಲಿ 2-5% ತನಕ ಅವುಗಳ ಪೈರಿನಲ್ಲಿ ಉಳಿದುಕೊಂಡಿರುತ್ತದೆ.
  • ಅದನ್ನು ತಿನ್ನುವ ಪ್ರಾಣಿಗಳಿಗೆ ಅದು ಲಭ್ಯವಾಗುತ್ತದೆ.
  • ಅಷ್ಟೇ ಅಲ್ಲದೆ ಕುರಿ, ಆಡುಗಳು ಹುಲ್ಲುಗಾವಲಿನಲ್ಲಿ ಮೇಯುವಾಗ ತರಾವಳಿಯ ಸೊಪ್ಪು, ಕಳೆಗಳನ್ನು ತಿನ್ನುತ್ತವೆ.
  • ಅದು ಸಹ ಅವುಗಳ ಹಿಕ್ಕೆಯಲ್ಲಿ ಸೇರಿರುತ್ತದೆ. ಹಿಂದೆ ಕೊಟ್ಟಿಗೆ ಗೊಬ್ಬರ  ಬಳಕೆ ಮಾಡುವ ಸಮಯದಲ್ಲಿ  ಸೂಕ್ಷ್ಮ ಪೋಷಕಾಂಶಗಳು ಎಂಬ ವಿಷಯವೇ ಬರುತ್ತಿರಲಿಲ್ಲ.
  • ಅವೆಲ್ಲವೂ  ಸೊಪ್ಪು, ಸದೆ ಮುಂತಾದ ಸಾವಯವ ವಸ್ತುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇದ್ದ ಕಾರಣ ಅದು ಸಸ್ಯಗಳಿಗೆ ಲಭ್ಯವಾಗುತ್ತಾ ಇತ್ತು.
Fed goat\ sheep manure is good
ದಾಣಿ ಮಿಶ್ರಣ ತಿಂದ ಆಡು/ ಕುರಿ ಗೊಬ್ಬರ ಉತ್ತಮ
  • ಈಗ  ಅವುಗಳ ಕೊರತೆ ಬಹುತೇಕ ಮಣ್ಣಿನಲ್ಲೂ ಕಂಡು ಬರುತ್ತಿದ್ದು, ಇದನ್ನು ರಾಸಾಯನಿಕ ಮೂಲದಲ್ಲಿ ಒದಗಿಸುತ್ತೇವೆ.
  • ನೈಸರ್ಗಿಕ ಮೂಲದಲ್ಲಿ ಇವು ಬೇಕಾದಷ್ಟೇ ಪ್ರಮಾಣದಲ್ಲಿ ಲಭ್ಯವಾಗಲು ಕುರಿ ಹಿಕ್ಕೆ, ಹುಲ್ಲುಗಾವಲಿನಲ್ಲಿ ಮೇಯುವ ಹಸು, ಎಮ್ಮೆಗಳ ಮಲ ಮೂತ್ರಗಳೇ ಆಗಬೇಕು.
  • ಕುರಿ ಹಿಕ್ಕೆಗಳನ್ನು ಈಗಲೂ ಜನ ಜೋಪಾನವಾಗಿ ದಾಸ್ತಾನು ಇಟ್ಟು ಮಾರಾಟ ಮಾಡುತ್ತಾರೆ.
  • ಅದು ಒಣ ತೂಕದಲ್ಲಿ ಲಭ್ಯವಾಗುವ ಕಾರಣ ಒಂದು ಬುಟ್ಟಿ ಕುರಿ,ಆಡಿನ ಹಿಕ್ಕೆ ಸಾಮಾನ್ಯ 3 ಬುಟ್ಟಿ ಕೊಟ್ಟಿಗೆ ಗೊಬ್ಬರಕ್ಕೆ ಸಮವಾಗಿರುತ್ತದೆ.

ಕುರಿ ಹಿಕ್ಕೆಯಲ್ಲಿ ಏನು ಪೋಷಕಗಳಿರುತ್ತವೆ?:

  • ಕುರಿ ಹಿಕ್ಕೆಯೆಂಬುದು ಸ್ವಲ್ಪ   ಮಟ್ಟಿಗೆ ಕಲ್ಲು ಮಣ್ಣುಗಳಿಂದ ಮಿಶ್ರಣವಾಗಿರುತ್ತದೆ.
  • ಕಾರಣ ಅದನ್ನು ಆರಿಸುವ ವಿಧಾನವೇ ಹಾಗೆ ಇರುತ್ತದೆ.
  • ಇದನ್ನು ಯಾದೃಚ್ಚಿಕವಾಗಿ ಪರೀಕ್ಷಿಸಿದಾಗ ಅದರಲ್ಲಿ 1-1.5 % ಸಾರಜನಕ, 50 ಕ್ಕಿಂತ ಕಡಿಮೆ ರಂಜಕ ಮತ್ತು 1 % ಕ್ಕಿಂತ ಕಡಿಮೆ ಪೊಟ್ಯಾಶ್ ಇರುವುದು ಕಂಡು ಬಂದಿದೆ.
  • ಇದು ಸಾಂಪಲ್ ನಿಂದ ಸ್ಯಾಂಪಲ್ ಗೆ ವೆತ್ಯಾಸವಾಗುತ್ತದೆ.
  • ಕೆಲವರು ಇವುಗಳಿಗೆ ಕೈ ತಿಂಡಿ ಕೊಡುತ್ತಾರೆ.
  • ಅಂತಲ್ಲಿ  ಪೋಷಕಾಂಶದ ಪ್ರಮಾಣ ಸ್ವಲ್ಪ  ಹೆಚ್ಚು ಇರುತ್ತದೆ.
  • ಬರೇ ಇಷ್ಟೇ ಅಲ್ಲ, ಸೂಕ್ಷ್ಮ ಪೋಷಕಾಂಶಗಳೂ ಇರುತ್ತವೆ.
  • ಒಂದು ಬುಟ್ಟಿ, ಸುಮಾರು 10 ಕಿಲೋ ತೂಕದಲ್ಲಿ 50- 100 ಗ್ರಾಂ ನಷ್ಟು ಸಾರಜನಕ ಮತ್ತು 25 ಗ್ರಾಂ ನಷ್ಟು  ರಂಜಕ, ಮತ್ತು 50 ಗ್ರಾಂ ನಶ್ಟು ಪೊಟ್ಯಾಶ್ ಇರುತ್ತದೆ ಎನ್ನುತ್ತಾರೆ.
  • ಇದಲ್ಲದೆ ಈ ಗೊಬ್ಬರ ಕಳಿಯಲು ಹೆಚ್ಚು ಸಮಯ ಬೇಕಾಗುತ್ತದೆ.
  • ಆ ಸಮಯದಲ್ಲಿ ಇದರಲ್ಲಿ ಗರಿಷ್ಟ ಪ್ರಮಾಣದಲ್ಲಿ ಎರೆಹುಳು ಸೇರಿದಂತೆ ಸೂಕ್ಷ್ಮಾಣು ಜೀವಿಗಳು ಬದುಕುವ ಕಾರಣ ಇದು  ಬೆಳೆಗಳಲ್ಲಿ ಉತ್ತಮ ಫಸಲಿಗೆ ನೆರವಾಗುತ್ತದೆ. ಮಣ್ಣಿನ ತರಗತಿ ಉತ್ತಮವಾಗುತ್ತದೆ.

ಕುರಿ ಗೊಬ್ಬರ ಎಂಬುದು ಈಗ ಲಭ್ಯವಿರುವ ಕಚ್ಚಾ ಸಾವಯವ ಗೊಬ್ಬರಗಳಲ್ಲಿ ಉತ್ತಮ ಗೊಬ್ಬರವಾಗಿರುತ್ತದೆ. ಇದರಲ್ಲಿ ಕೆಲವು ಕಳೆ ಬೀಜಗಳು ಹುಟ್ಟುತ್ತವೆಯಾದರೂ ಅದನ್ನು ಪ್ರಾರಂಭದಲ್ಲೇ ಕಿತ್ತು ನಾಶ ಮಾಡಿದರೆ ಒಂದು ಅಡಿಕೆ ಮರಕ್ಕೆ 10-15 ಕಿಲೊ, ತೆಂಗಿಗೆ ಸುಮಾರು 50 ಕಿಲೋ ಹಾಕಿದಲ್ಲಿ ಉತ್ತಮ ಬೆಳೆವಣಿಗೆ ಆಗಿ, ಫಸಲು ಹೆಚ್ಚಳವಾಗುತ್ತದೆ.

error: Content is protected !!