ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತೇ?

ಕೆಲವು ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ಯಾವುದೇ ಬೆಳೆಯ ಇಳುವರಿ 50% ಕ್ಕೂ ಕಡಿಮೆ. ಬೇಸಾಯದ ಖರ್ಚು 50% ಹೆಚ್ಚು. ಇದು ಯಾಕೆ ಹೀಗಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ವಿಯೆಟ್ನಾಂ ದೇಶದ ಕೃಷಿಯ ಮುಂದೆ ನಮ್ಮ ಕೃಷಿ ಏನೂ ಅಲ್ಲ. ಮಲೇಶಿಯಾದಲ್ಲಿ ತೆಂಗಿನ ಮರದಲ್ಲಿ 200 ಕ್ಕೂ ಹೆಚ್ಚು ಕಾಯಿಗಳಾಗುತ್ತವೆ. ಬ್ರೆಝಿಲ್ ನ ಕಾಫಿಯ ಇಳುವರಿ ನಮ್ಮದಕ್ಕಿಂತ ದುಪ್ಪಟ್ಟು. ಅದೇ ರೀತಿಯಲ್ಲಿ ಚೀನಾ ದೇಶದಲ್ಲೂ ನಮ್ಮಲ್ಲಿ ಬೆಳೆಯಲಾಗುವ ಎಲ್ಲಾ ನಮೂನೆಯ ಬೆಳೆಗಳಲ್ಲಿ ಇಳುವರಿ ತುಂಬಾ ಹೆಚ್ಚಾಗಿದೆ. ಎಲ್ಲಾ ಹೊರ ರಾಷ್ಟ್ರಗಳಲ್ಲಿ ಉತ್ಪಾದನಾ ಖರ್ಚು ಸಹ ಕಡಿಮೆ. ಕಾರಣ ಇಷ್ಟೇ ಮಣ್ಣಿನ ಫಲವತ್ತತೆ. ನಮ್ಮ ದೇಶದಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾದ ಕಾರಣ ಅಧಿಕ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಬೇರೆ ದೇಶದವರ ಜೊತೆಗೆ ಸ್ಪರ್ಧೆ ಮಾಡಲೂ ಆಗುತ್ತಿಲ್ಲ. ವಿದೇಶದಿಂದ ಯಾವುದೇ ಕೃಷಿ ಉತ್ಪನ್ನ ಆಮದು ನಡೆದರೂ ನಾವು ನೆಲಕಚ್ಚಲೇಬೇಕಾಗುತ್ತದೆ.

Root penetration on soil
ಒಂದು ಹುಲ್ಲು ಸಸ್ಯ ನೆಲದಲ್ಲಿ ಇಷ್ಟು ಆಳಕ್ಕೆ ಬೇರು ಬಿಡಬಲ್ಲುದು
 • ಫಲವತ್ತೆತೆ ಇಲ್ಲದ ಮಣ್ಣು ಬರಡು ಆಕಳಿನಂತೆ. ಮಣ್ಣು ಫಲವತ್ತಾಗಿದ್ದರೆ ಬೇಸಾಯದ ಖರ್ಚು  ಕಡಿಮೆಯಾಗುತ್ತದೆ.
 • ಉತ್ಪಾದನೆಯೂ ಹೆಚ್ಚಾಗುತ್ತದೆ. ನಾವು ಬೆಳೆಗಳಿಗೆ ಹೊರ ಮೂಲದಿಂದ ಕೊಡುವ ಪೋಷಕಾಂಶಗಳೂ ಸಹ ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ಪ್ರತಿಫಲ ಕೊಡುತ್ತದೆ.
 • ಇಂದು ನಮ್ಮ ಮಣ್ಣಿನ ಅಂತರ್ಗತ ಶಕ್ತಿ ಕಡಿಮೆಯಾಗುತ್ತಿದೆ.
 • ಇದನ್ನು ಬದಿಗಿರಿಸಿ ಅಧಿಕ ಇಳುವರಿಗಾಗಿ ನಾವು ಪೋಷಕಗಳನ್ನು ಸುರಿಯುತ್ತಿದ್ದೇವೆ.
 • ಒಂದೆಡೆ ಬೇಸಾಯದ ಖರ್ಚು ಹೆಚ್ಚಾಗುತ್ತದೆ.
 • ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಾ ಬರುತ್ತಿದೆ.

ಮಣ್ಣಿನ ಫಲವತ್ತತೆ ಕ್ಷೀಣಿಸಲು ಕಾರಣ:

 • ಬೇಸಾಯ ಮಾಡುವವರು ಒಮ್ಮೆ ನಿಸರ್ಗವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಾಡನ್ನು ಒಂದಲ್ಲ ಎರಡಲ್ಲ ಹತ್ತಾರು ಸಾರಿ ನೋಡಬೇಕು.
 • ಅಲ್ಲಿಂದಲೇ ಕೃಷಿ ಶಿಕ್ಷಣವನ್ನು ಗಳಿಸಬೇಕು. ಕಾಡಿನಲ್ಲಿ ಮರಮಟ್ಟುಗಳು ದಷ್ಟ ಪುಷ್ಟವಾಗಿ ಬೆಳೆಯಲು ಕಾರಣ ಏನು? ಅದೇ ನಮಗೆ ಬೇಸಾಯದ ಪಾಠ.

ನಮ್ಮ ಹಿರಿಯರಿಗೆ ಇದು ಗೊತ್ತಿತ್ತು. ಅದೇ ಕಾರಣಕ್ಕಾಗಿ ಬೆಳೆಗಳಿಗೆ ಸಾಧ್ಯವಾದಷ್ಟು ಗರಿಷ್ಟ ಪ್ರಮಾಣದಲ್ಲಿ ಸೊಪ್ಪು, ತರಗೆಲೆ ಮುಂತಾದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿದ್ದರು, ಇತ್ತೀಚೆಗೆ ಕಾಲ ಪರಿಸ್ಥಿತಿಯ ಕಾರಣ ಸೊಪ್ಪಿನ ಬೆಟ್ಟಗಳಲ್ಲಿರುವ ತರೆಗೆಲೆ ಅಲ್ಲೇ ಇರುತ್ತದೆ.

Grass cover to retain top soil fertility
ಮೇಲ್ಮಣ್ಣು ಸಂರಕ್ಷಣೆಗಾಗಿ ನೆಲಕ್ಕೆ ಹೊದಿಕೆ
 • ಮಳೆಗೆ ಕೊಚ್ಚಿ ಹೋಗಿ ನದಿ, ಸಮುದ್ರ ಸೇರುತ್ತದೆ.
 • ಕೃಷಿ ಭೂಮಿಗೆ ಅನುಗುಣವಾಗಿ ಸೊಪ್ಪು ಸದೆಗಳ ಬಳಕೆಗಾಗಿ ನಮ್ಮಲ್ಲಿ ಬೆಟ್ಟ ಗುಡ್ದಗಳಿಲ್ಲ.
 •  ಬೆಳೆಗಳಿಗೆ ಸೊಪ್ಪು ಹಾಕುವ ಅಭ್ಯಾಸವೇ ಬಿಟ್ಟಿದ್ದೇವೆ.
 • ಎಲ್ಲರಿಗೂ ಒಂದೊಂಡು ಹೊರೆ ಸೊಪ್ಪು ಹಾಕಿದರೆ ಒಳ್ಳೆಯದು ಎಂದು ಗೊತ್ತಿದೆ.
 • ಆದರೆ ಒಂದು ಹೊರೆ ಸೊಪ್ಪಿಗೆ  100 ರೂ. ಗಿಂತಲೂ ಹೆಚ್ಚು ಖರ್ಚು ಅಗುವ ಕಾರಣ ನಾವು ಅದರ ಬದಲು ರಸ  ಗೊಬ್ಬರದಲ್ಲೇ ಸುಧಾರಿಸಲು ಹೊರಟಿದ್ದೇವೆ.
 • ಇದು ಒಂದೆರಡು ವರ್ಷ ನಮಗೆ ಕೈ ಹಿಡಿದರೆ ನಂತರದ ವರ್ಷಗಳಲ್ಲಿ ಕೈ ಕೊಡುತ್ತಾ ಬರಲಾರಂಭಿಸಿದೆ.

ಮಣ್ಣು  ಸವಕಳಿ ಹೆಚ್ಚುತ್ತಿದೆ:

 • ಇತ್ತೀಚಿನ ದಿನಗಳಲ್ಲಿ ನಮ್ಮ ಬೇಸಾಯದ ಕಾರಣದಿಂದ ಭೂ ಸವಕಳಿ ಹೆಚ್ಚಾಗುತ್ತಿದೆ.
 • ಭೂ ಸವಕಳಿ ಫಲವತ್ತತೆ ಕ್ಷೀಣಿಸಲು ಮೂಲ ಕಾರಣ.
 • ಒಂದು ಹೊರೆ ಸೊಪ್ಪು ಹಾಕಿದಾಗ ಅದರಲ್ಲಿ ಮೆಕ್ಕಲು ಮಣ್ಣು ಹೆಚ್ಚೆಂದರೆ 1 ಕಿಲೋ ಆಗಬಹುದು.
 • ಅಷ್ಟೂ ಮಣ್ಣು ಮಳೆಯ ಹೊಡೆತಕ್ಕೆ ನೇರವಾಗಿ ಸಿಕ್ಕಿದರೆ ಒಂದೇ ಮಳೆಗೆ ನೀರಿನೊಂದಿಗೆ ಕೊಚ್ಚಿ ಹೋಗುತ್ತದೆ.
 • ಅಪರೂಪದಲ್ಲಿ ಕೆಲವರ ಹೊಲದಲ್ಲಿ ಕೊಚ್ಚಣೆ ಆಗದೇ ಇರಬಹುದು.
Oraganic mulching helps much to retain top soil
ಸಾವಯವ ಹೊದಿಕೆ ಮಣ್ಣನ್ನು ಉತ್ತಮಪಡಿಸುತ್ತದೆ.
 • ಬಹುತೇಕ ರೈತರ ಹೊಲದಲ್ಲಿ ಕೊಚ್ಚಣೆ ಆಗಿಯೇ ತೀರುತ್ತದೆ.
 • ನದಿಗಳಲ್ಲಿ, ಹಳ್ಳ, ತೊರೆಗಳಲ್ಲಿ ಮಳೆ ಬಂದರೆ ಸಾಕು ಕೆಂಪು ನೀರು ಹರಿದು ಹೋಗುವುದು ಮೇಲ್ಮಣ್ಣಿನ ಕೊಚ್ಚಣೆಯ ಪರಿಣಾಮದಿಂದಾಗಿ.
 • ಮಳೆಗಾಲ ಪ್ರಾರಂಭದಿಂದ ಕೊನೆಯ ತನಕವೂ ಬಣ್ಣದ ನೀರು ಹರಿಯುವುದು ಈಗಿನ ಪರಿಸ್ಥಿತಿ.
 • ಹಿಂದೆ ಹಾಗೆ ಇರಲಿಲ್ಲ.  ಮೊದಲ ಒಂದೆರಡು ಮಳೆಗೆ ಸ್ವಲ್ಪ ಕೆಂಪು ನೀರು ಹರಿದರೆ, ನಂತರ ಭೂ ಹೊದಿಕೆ ಉಂಟಾಗಿ ತಿಳಿ ನೀರೇ ಹರಿಯುತ್ತಿತ್ತು.
 • ಕಾಡಿನ ಮೂಲಕ ಹರಿದು ಬರುವಾಗ ನದಿಗಳ ನೀರು ಎಂತಹ ಮಳೆಯಿದ್ದರೂ ತಿಳಿ ನೀರಾಗಿರುತ್ತದೆ. ನಂತರ ಅದು ಕೆಂಪಾಗುತ್ತದೆ.

ಕೆಲವು ಹುಲ್ಲು ಸಸ್ಯಗಳು ಇಲ್ಲದಾಗಿದೆ:

 • ಮಣ್ಣು  ಸವಕಳಿಯನ್ನು ತಡೆಯಲು ಸ್ವಾಭಾವಿಕ ರಕ್ಷಣೆಗಳಾದ ಮರಮಟ್ಟುಗಳು ಕಡಿಮೆಯಾಗುತ್ತಿದೆ.
 • ನೆಲದ  ಮೇಲೆ ಮಳೆ ನೀರಿನ ನೇರ ಹೊಡೆತ ಹೆಚ್ಚಾಗುತ್ತಿದೆ.
 • ನೆಲದ ಮೇಲೆ ಕೆಲವು ಜಾತಿಯ ಹುಲ್ಲು ಸಸ್ಯಗಳು ಮಳೆ ಹನಿ ಬಿದ್ದ ತಕ್ಷಣ ಹುಟ್ಟಿ ಬೆಳೆಯುತ್ತಿದ್ದವುಗಳು ಈಗ ನಶಿಸುತ್ತಿವೆ.
 • ಬರೇ ಹಿಮದ ನೀರಿನಲ್ಲಿ ಬದುಕುವ ಹುಲ್ಲು ಸಸ್ಯಗಳು ಸಹ ಕಡಿಮೆಯಾಗುತ್ತಿದೆ.
 • ಇರುವ ಕೆಲವು ಕಳೆ ಸಸ್ಯಗಳು ನೆಲದಲ್ಲಿ ನಿಬಿಡವಾದ ಬೇರು ಪಸರಿಸದ ಹುಲ್ಲು ಸಸ್ಯಗಳಾಗಿವೆ.
 • ಹಿಂದೆ ದನಗಳು ಮೆಂದರೂ ಸಹ ನಾಶವಾಗದ ಹುಲ್ಲು, ಕಳೆ ಸಸ್ಯಗಳು ಈಗ ಮೇಯದೇ ನಾಶವಾಗುತ್ತಿವೆ, ಇದೂ ಸಹ ಫಲವತ್ತೆತೆ ಇಲ್ಲದೆ.
 • ಫಲವತ್ತಾದ ಮಣ್ಣು ಇದ್ದರೆ ಗಾಳಿಯ ಮೂಲಕ ಪ್ರಸಾರವಾಗಿ ನೆಲಕ್ಕೆ ಬಿದ್ದ ಹುಲ್ಲು -ಕಳೆ ಗಿಡಗಳ ಬೀಜಗಳು ಬೇಗ ಮೊಳೆತು ಹುಲುಸಾಗಿ ಬೆಳೆಯುತ್ತವೆ.
 • ಈಗ ಬೀಜ ಮೊಳಕೆಯೊಡೆಯುವಷ್ಟೂ ಫಲವತ್ತಾದ ಮಣ್ಣು ಇಲ್ಲದಾಗಿದೆ.
 • ಹುಲ್ಲು, ಕುರುಚಲು ಸಸ್ಯಗಳು, ಮಳೆ ಬಂದ ತಕ್ಷಣ ಮಣ್ಣಿನಲ್ಲಿ ಹುಟ್ಟಿಕೊಳ್ಳಬೇಕು.
 • ಮಳೆ ಹೋದ ನಂತರ ಒಣಗಿ ಮಣ್ಣಿಗೆ ಸೇರಬೇಕು. ಆಗ ನೈಸರ್ಗಿಕವಾಗಿ ಮಣ್ಣು ಫಲವತ್ತಾಗುತ್ತಾ ಬರುತ್ತದೆ.
organic mulching on barren soil
ಸವಕಳಿ ಆಗುವ ಜಾಗಕ್ಕೆ ತ್ಯಾಜ್ಯ ಮುಚ್ಚಿ ಅದನ್ನು ರಕ್ಷಿಸಿ

ಭೂಮಿಗೆ ಹೊದಿಕೆ ಅಗತ್ಯ:

 • ಆಧುನಿಕ ಅಗೆಯುವ ಯಂತ್ರಗಳಿಂದ ಹೊಲ ಸಿದ್ದತೆ ಮಾಡುವುದು ಅನಿವಾರ್ಯವಾದರೂ ಮೇಲ್ಮಣ್ಣನ್ನು ಗಾಯ ಮಾಡದೆ ಅಗೆಯುವುದು ಮಾಡಿ.
 • ಆಗ ಒಮ್ಮೆ ಮಣ್ಣಿಗೆ ಗಾಯವಾದರೂ ಅಲ್ಲಿ ತಕ್ಷಣ ಕಳೆ ಬೀಜಗಳು ಬಿದ್ದು ಹುಟ್ಟಿಕೊಂಡು ಸವಕಳಿ ತಡೆಯಲ್ಪಡುತ್ತದೆ.
 •  ಮಣ್ಣಿಗೆ ಸಾವಯವ ತ್ಯಾಜ್ಯಗಳು ಯಾವುದೇ ಇದ್ದರೂ ಮೇಲು ಹೊದಿಕೆಯಾಗಿ ಹಾಕುತ್ತಾ ಇರಬೇಕು.
 • ಇದು ನಿರಂತರ ಮಾಡುತ್ತಾ ಇರಬೇಕಾದ ಕೆಲಸ. ಕುರಿ ಹಿಕ್ಕೆಯಂತಹ ಒಣ ಗೊಬ್ಬರವನ್ನು ಮಣ್ಣಿಗೆ ಬಳಕೆ ಮಾಡುವುದು ಉತ್ತಮ.
 • ಆದರೆ ಅದು ನೀರಿನಲ್ಲಿ ಕೊಚ್ಚಿ ನಷ್ಟವಾಗಬಾರದು.

ಫಲವತ್ತಾದ ಭೂಮಿ ಕೃಷಿ ಏತರ ಬಳಕೆಗೆ ಮಾರಾಟ ಮಾಡುವುದು ಸೂಕ್ತವಲ್ಲ.ಫಲವತ್ತಾದ ಭೂಮಿಯನ್ನು ಸರಕಾರ ಭೂ ಸ್ವಾದೀನ ಪ್ರಕ್ರಿಯೆಗೆ  ಪಡೆದುಕೊಳ್ಳುವುದನ್ನು  ವಿರೋಧಿಸಬೇಕು. ಒಂದು ಕಟ್ಟಡ , ರಸ್ತೆ, ಉದ್ದಿಮೆಗೆ ಫಲವತ್ತಾದ ಭೂಮಿ ಬೇಕಾಗಿಲ್ಲ. ಕೃಷಿಗೆ ಅದೇ ಬೇಕು. ಕೃಷಿಕರೂ ಸಹ ಯಾವುದೇ ಕಾರಣಕ್ಕೆ ಫಲವತ್ತಾದ ಭೂಮಿಯನ್ನು ಕೃಷಿ ಬಳಕೆಗೇ ಉಪಯೋಗಿಸಬೇಕು.

error: Content is protected !!