10:26:26  ಗೊಬ್ಬರ ಸಿಗುತ್ತಿಲ್ಲವೇ? ಬದಲಿಗೆ ಏನು ಹಾಕಬಹುದು?

by | Oct 13, 2022 | Manure (ಫೋಷಕಾಂಶ) | 0 comments

ನಮ್ಮ ಕೃಷಿಕರಿಗೆ ಅಚ್ಚುಮೆಚ್ಚಿನ ಗೊಬ್ಬರ 10:26:26 ಸಂಯೋಜನೆಯ NPK.ಯಾವುದೋ ಕಾರಣಕ್ಕೆ ಈ ಗೊಬ್ಬರದ ಕೊರತೆ ಉಂಟಾಗಿದೆ. ಮಾರುಕಟ್ಟೆಗೆ ಸರಬರಾಜು ಆಗುತ್ತಿಲ್ಲ. ಹಾಗಾಗಿ ಜನ ಕೇಳುವುದು ಈ ಗೊಬ್ಬರ ಎಲ್ಲಿ ಸಿಗುತ್ತದೆ ತಿಳಿಸಿ ಎಂದು? ಈ ಒಂದು ಸಂಯೋಜನೆಯ ಗೊಬ್ಬರ ಇಲ್ಲದಿದ್ದರೆ ಆಕಾಶ ಏನೂ ತಲೆಗೆ ಬೀಳಲಾರದು. ಇದರ ಬದಲು ಬೇರೆ ಗೊಬ್ಬರಗಳನ್ನು ಅದೇ ಪ್ರಮಾಣಕ್ಕೆ ಅಥವಾ ಶಿಫಾರಿತ ಪ್ರಮಾಣಕ್ಕೆ ಅನುಗುಣವಾಗಿ ತಯಾರಿಸಬಹುದು. ಇಷ್ಟಕ್ಕೂ ಈ ಗೊಬ್ಬರ ಅಡಿಕೆಗೆ ಸಮತೋಲನ ಗೊಬ್ಬರ ಅಲ್ಲ.

 ಈ ಸಂಯೋಜನೆಯ ಗೊಬ್ಬರ ಮಾರುಕಟ್ಟೆಗೆ ಪರಿಚಯಿಸಲ್ಪಟ್ಟು ಸುಮಾರು 10 ವರ್ಷಗಳಾಗಿರಬಹುದು. ಇಷ್ಟು ಸಮಯದಲ್ಲೇ ಈ ಗೊಬ್ಬರ ರೈತಾಪಿ ಜನರಿಂದ ಭಾರೀ ಬೇಡಿಕೆ ಪಡೆಯಿತು. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಾರಜನಕ ಇದ್ದು, ಅಧಿಕ ಪ್ರಮಾಣದಲ್ಲಿ ಸಮನಾಗಿ ರಂಜಕ ಮತ್ತು ಪೊಟ್ಯಾಶ್ ಅಂಶ ಇದೆ. ಇದು ಒಂದು ಕಾಂಪ್ಲೆಕ್ಸ್ ಗೊಬ್ಬರವಾಗಿದ್ದು, ಬೇರೆ ಬೇರೆ ಗೊಬ್ಬರಗಳನ್ನು ಮಿಶ್ರಣ ಮಾಡುವುದಕ್ಕಿಂತ ಇದು ಸುಲಭ ಎಂಬ ಕಾರಣಕ್ಕೆ ಜನ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ. ಇದರ ಬಳಕೆ ಹಿಂದೆ ಒಬ್ಬರಿಗೊಬ್ಬರು ಇದು ಒಳ್ಳೆಯದಾಗುತ್ತದೆ ಎಂದು ಹೇಳುವುದೇ ಮುಖ್ಯ ಕಾರಣವಾಗಿರುತ್ತದೆ.

10:26:26 ಇದರಲ್ಲಿ ವಿಶೇಷ ಏನಿದೆ?

  • ಇದು ರಂಜಕ ಮತ್ತು ಪೊಟ್ಯಾಶ್  ಹೆಚ್ಚಿನ ಪ್ರಮಾಣದಲ್ಲಿರುವ ಕಾಂಪ್ಲೆಕ್ಸ್ ಗೊಬ್ಬರ.
  • ಈ ಎರಡು ಪೋಷಕಾಂಶಗಳು ಅಧಿಕ ಇರುವ ಏಕೈಕ ಸಂಯುಕ್ತ ಗೊಬ್ಬರ ಎಂಬ ಖ್ಯಾತಿ.  
  • ಇದರಲ್ಲಿ 7 % ದಷ್ಟು ಸಾರಜನಕ ಅಮೋನಿಯಾ ರೂಪದಲ್ಲಿ ಇದೆ.
  • 26% ರಂಜಕದಲ್ಲಿ 22 % ನೀರಿನಲ್ಲಿ ಕರಗುವಂತದ್ದೂ 26 % ಪೊಟ್ಯಾಶ್ ಪೂರ್ತಿಯಾಗಿ ನೀರಿನಲ್ಲಿ ಕರಗುವಂತದ್ದು.
  • ಅಡಿಕೆ ಬೆಳೆಗಾರರು ಹೆಚ್ಚಾಗಿ ಸಾರಜನಕವನ್ನು ಇತರ ಮೂಲಗಳಾದ ಕೊಟ್ಟಿಗೆ ಗೊಬ್ಬರ, ಕುರಿ, ಆಡು ಕೋಳಿ ಗೊಬ್ಬರಗಳ ಮೂಲಕ ಪೂರೈಕೆ ಮಾಡುವುದರಿಂದ ಹೆಚ್ಚಿನ ಸಾರಜನಕ ಬೇಕಾಗುವುದಿಲ್ಲ ಎಂದು ಇದನ್ನು ಹಚ್ಚಿಕೊಂಡಿದ್ದಾರೆ.
  • ಉಳಿದ ರಂಜಕ ಮತ್ತು ಪೊಟ್ಯಾಶ್ ಗಳು ಬೇರೆ ಮೂಲಗಳಲ್ಲಿ ಕಡಿಮೆ ಇರುವ ಕಾರಣ ಇದು ಉತ್ತಮ ಫಲಿತಾಂಶವನ್ನು ಕೊಟ್ಟಿರಬಹುದು.
  • ಬೇರೆ ಬೇರೆ ಪೋಷಕಾಂಶ ಮೂಲಗಳನ್ನು (ಯೂರಿಯಾ, ರಾಕ್ ಫೋಸ್ಫೇಟ್, ಮ್ಯುರೇಟ್ ಆಫ್ ಪೊಟ್ಯಾಶ್ ) ಮಿಶ್ರಣ ಮಾಡಿ ಹಾಕುವ ಬದಲಿಗೆ ಇದು ಸುಲಭ ಎಂಬ ಕಾರಣವೂ ಒಂದು.

ಯಾಕೆ ಸಿಗುತ್ತಿಲ್ಲ :

ಈ ಭ್ರಾಂಡ್ ಮಾತ್ರ ಸಿಗುತ್ತಿಲ್ಲ
ಈ ಭ್ರಾಂಡ್ ಮಾತ್ರ ಸಿಗುತ್ತಿಲ್ಲ
  • ಭಾರತದೇಶದಲ್ಲಿ ತಯಾರಾಗುವ ಹೆಚ್ಚಿನೆಲ್ಲಾ ರಸಗೊಬ್ಬರಗಳಿಗೆ ಮೂಲವಸ್ತು ವಿದೇಶಗಳಿಂದ ಬರಬೇಕು.
  • ವಿದೇಶಗಳಲ್ಲಿ ಈ ಕಚ್ಚಾ ವಸ್ತುಗಳ ಬೆಲೆ ದುಪ್ಪಟ್ಟು ಹೆಚ್ಚಳವಾಗಿದೆ. 
  • ಆ ಕಾರಣ ದುಬಾರಿ ಬೆಲೆಯ ಕಚ್ಚಾ ಸಾಮಾಗ್ರಿ ತಂದು ಗೊಬ್ಬರ ಉತ್ಪಾದನೆ ಮಾಡುವುದು ಅಸಾಧ್ಯವಾದ ಕಾರಣ 10:26:26 ಗೊಬ್ಬರ ಉತ್ಪಾದನೆ ಆಗುತ್ತಿಲ್ಲ ಎಂಬುದು ಸುದ್ದಿ.
  • ಇದು ಪೂರ್ತಿ ಸತ್ಯ ಸಂಗತಿ ಅಲ್ಲ. ಜನರ ಸಮಾಧಾನಕ್ಕಾಗಿ ಹೇಳುವ ಮಾತು.
  • ನಿರಂತರ ಸರಬರಾಜು ಇಲ್ಲ ಎಂಬುದು ನಿಜ ಅಲ್ಲ. ಒಂದೆರಡು ಖಂಪೆನಿಗಳ ತಯಾರಿಕೆ ಸಿಗುತ್ತಿಲ್ಲ.
  • ಇತರ ತಯಾರಿಕೆಗಳು ಬಂದ ತಕ್ಷಣ ಖಾಲಿಯಾಗುತ್ತದೆ.
  • ಕೆಲವು ಡೀಲರ್ ಗಳು ಮುಂಗಡ ಪಾವತಿಸಿ ತರಿಸುತ್ತಾರೆ. ಅವರಿಗೆ ಅದು ಸಿಗುತ್ತದೆ.
  • ಈ   ಪರಿಮಾಣದ ಗೊಬ್ಬರವನ್ನು ಇಫ್ಕೋ ಸಂಸ್ಥೆ ಅಲ್ಲದೆ, ಇಂಡಿಯನ್ ಪೊಟ್ಯಾಶ್ , ಮಹಾಧನ್  ಗ್ರೋಮೋರ್ ಕಂಪೆನಿಗಳವರೂ ಉತ್ಪಾದಿಸುತ್ತಾರೆ.
  • ಇಫ಼್ಕೋ ಕಂಪೆನಿಯ ಉತ್ಪನ್ನ ಕರ್ನಾಟಕದ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂದು ಜನ ಹೇಳುತ್ತಾರೆ.
  • ಎಲ್ಲಾ ಕಂಪೆನಿಗಳೂ ಒಂದೇ ರೀತಿಯಲ್ಲಿ ತಯಾರಿಸುತ್ತಾರೆ. ಇದರಲ್ಲಿ ಯಾವ ಭಿನ್ನತೆಯೂ ಇರುವುದಿಲ್ಲ.  

ಬದಲಿಯಾಗಿ ಯಾವ ಗೊಬ್ಬರ ಬಳಸಬಹುದು.

ಸಾರಜನಕ ಮೂಲ ಗೊಬ್ಬರ
ಸಾರಜನಕ ಮೂಲ ಗೊಬ್ಬರ
  • ಈ ಗೊಬ್ಬರದ ಬದಲಿಯಾಗಿ ಬಳಸಬಹುದಾದ ಬೇರೆ ಗೊಬ್ಬರವೂ ಇದೆ. ಅದಕ್ಕೆ ಬೇರೆ ಗೊಬ್ಬರವನ್ನು ಸೇರಿಸಬೇಕಾಗುತ್ತದೆ.
  • ಇಲ್ಲಿ ರೈತರು ಗಮನಿಸಬೇಕಾದದ್ದು, ಸಮತೋಲನ ಗೊಬ್ಬರ ಎಂಬ ವಿಷಯ ಮಾತ್ರ.
  • 10;26:26  ಪರಿಮಾಣದ ಗೊಬ್ಬರ ಅಡಿಕೆಗೆ ಶಿಫಾರಿತ ಪ್ರಮಾಣದ ಪೋಷಕಗಳನ್ನು ಒದಗಿಸುವುದಿಲ್ಲ.
  • ಇದರಲ್ಲಿ ಇರುವ ಸಾರಜನಕ ಅಡಿಕೆ, ತೆಂಗಿಗೆ ಸಾಕಾಗುವುದಿಲ್ಲ.
  • ಸಾರಜನಕ ಅತೀ ಕಡಿಮೆ ಬೇಕಾಗುವ ಬೆಳೆಗಳಿಗೆ ಇದು ಆಗಬಹುದು.
  • ಅಂತಹ ಬೆಳೆಗಳು ತೀರಾ ಕಡಿಮೆ. ಸೋಯಾಬೀನ್ ಬೆಳೆಗೆ ಅತೀ ಕಡಿಮೆ ಸಾರಜನಕ ಸಾಕಾಂತೆ.
  • ಸಾರಜನಕದ ಮೂಲವಾಗಿ ಬೇರೆ  ಪೋಷಕಗಳನ್ನು ಬಳಸಬೇಕಾಗುತ್ತದೆ.
  • ಪೊಟ್ಯಾಶ್ ಮತ್ತು ರಂಜಕ ಸಮಪ್ರಮಾಣದಲ್ಲಿ ಬೇಕಾಗುವುದಿಲ್ಲ.
  • ಇವೆರಡೂ ಸಮ ಪ್ರಮಾಣದಲ್ಲಿ ಬಯಸುವ ಬೆಳೆಗಳೂ  ನಮ್ಮಲ್ಲಿ ಇಲ್ಲ. ಹಾಗಾಗಿ ನಾವು ಪೊಟ್ಯಾಶ್ ಸಹ ಹೆಚ್ಚುವರಿಯಾಗಿ ಕೊಡಬೇಕು.
  • ಈ ಕಾರಣಕ್ಕಾಗಿ 10:26:26 ಗೊಬ್ಬರ ಸಿಗುವುದಿಲ್ಲ ಎಂದು  ಚಿಂತೆ ಮಾಡಬೇಕಾಗಿಲ್ಲ.
  • ಬೇರೆ ಬೇರೆ ಗೊಬ್ಬರಗಳನ್ನು ಮಿಶ್ರಣ ಮಾಡಿ ಸಮತೋಲನ ಪ್ರಮಾಣದಲ್ಲಿ ಪೋಷಕಗಳನ್ನು ತಯಾರಿಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು.

ಯಾವ ಗೊಬ್ಬರವನ್ನು ಹಾಕಬಹುದು:

  • ಮಾರುಕಟ್ಟೆಯಲ್ಲಿ ಈಗ ಲಭ್ಯವಿರುವ ಯೂರಿಯಾ + ಸೂಪರ್ ಫೋಸ್ಫೇಟ್ ಮತ್ತು ಮ್ಯುರೇಟ್ ಆಪ್ ಪೊಟ್ಯಾಶ್ ಗಳನ್ನು ಮಿಶ್ರಣ ಮಾಡಿ ಹಾಕಬಹುದು. ಇದು ಮೂಲ ಗೊಬ್ಬರ. ಯೂರಿಯಾ 100 ಗ್ರಾಂ ಹಾಕಿದಾಗ 46 ಗ್ರಾಂ ಸಾರಜನಕ ಸಿಗುತ್ತದೆ. ಒದು ಅಡಿಕೆ ಗಿಡಕ್ಕೆ ವರ್ಷಕ್ಕೆ 120 ಗ್ರಾಂ ಸಾರಜನಕ ಬೇಕಾಗುತ್ತದೆ. ಕೊಟ್ಟಿಗೆ ಗೊಬ್ಬರ ಕೊಟ್ಟು ಒಟ್ಟು 250 ಗ್ರಾಂ ಯೂರಿಯಾ ಕೊಟ್ಟರೆ ಅಡಿಕೆಗೆ ಬೇಕಾಗುವ ಸಾರಜನಕ ಪೂರೈಕೆಯಾದಂತಾಗುತ್ತದೆ. 
  • ರಂಜಕ ಪೋಷಕದ ವಿಚಾರದಲ್ಲಿ ಸೂಪರ್ ಫೋಸ್ಫೇಟ್  ಅಥವಾ ರಾಕ್ ಫೋಸ್ಫೇಟ್ ಬಳಸುವವರು ತಿಳಿದಿರಬೇಕಾದದ್ದು ಅದರಲ್ಲಿ 16-18% ರಂಜಕಾಂಶ ಇರುತ್ತದೆ. 100 ಗ್ರಾಂ ಇದನ್ನು ಹಾಕಿದರೆ 16-18 ಗ್ರಾಂ ರಂಜಕ ಸಿಗುತ್ತದೆ.ಒಂದು ಅಡಿಕೆ ಗಿಡಕ್ಕೆ ವರ್ಷಕ್ಕೆ 40-50 ಗ್ರಾಂ ನಷ್ಟು ಮಾತ್ರ ರಂಜಕ ಬೇಕಾಗುತ್ತದೆ. ಒಟ್ಟು 300 ಗ್ರಾಂ ನಷ್ಟು ಶಿಲಾ ರಂಜಕವನ್ನು  ಹಾಕಿದರೆ ವರ್ಷಕ್ಕೆ ಸಾಕು.
  • ಪೊಟ್ಯಾಶ್ ವಿಷಯದಲ್ಲಿ ಹೇಳುವುದಾದರೆ ಮ್ಯುರೇಟ್ ಆಫ್ ಪೊಟ್ಯಾಶ್ ನಲ್ಲಿ ಶೇ.60 ಪೊಟ್ಯಾಶಿಯಂ ಇರುತ್ತದೆ. 100 ಗ್ರಾಂ MOP ಹಾಕಿದರೆ 60 ಗ್ರಾಂ ಪೊಟ್ಯಾಶ್ ಸಿಗುತ್ತದೆ. ಒಂದು ಅಡಿಕೆ ಗಿಡಕ್ಕೆ 250 ಗ್ರಾಂ ಪೊಟ್ಯಾಶ್ ಬೇಕಾಗುತ್ತದೆ. ಅದಕ್ಕೆ 250 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಬೇಕು.
  • 1 ಚೀಲ ಯೂರಿಯಾ ದಲ್ಲಿ (40 ಕಿಲೋ) 18.4 ಕಿಲೋ ಸಾರಜನಕ ಇರುತ್ತದೆ. 1 ಚೀಲ ಸೂಪರ್ ಅಥವಾ ರಾಕ್  ಫೋಸ್ಫೇಟ್ ನಲ್ಲಿ 9 ಕಿಲೋ ರಂಜಕ ಇರುತ್ತದೆ. 1 ಚೀಲ MOP ಯಲ್ಲಿ 30 ಕಿಲೋ ಪೊಟ್ಯಾಶ್ ಇರುತ್ತದೆ.
  • 50 ಕಿಲೋ ಯೂರಿಯಾ ಮತ್ತು  60 ಕಿಲೋ ರಾಕ್ ಅಥವಾ ಸೂಪರ್ ಫೋಸ್ಫೇಟ್  ಮತ್ತು  50 ಕಿಲೋ ಮ್ಯುರೇಟ್ ಆಫ್ ಪೊಟ್ಯಾಶ್  ಮಿಶ್ರಣ ಮಾಡಿದರೆ  ಒಟ್ಟು 160 ಕಿಲೋ ಆಗುತ್ತದೆ. ಇದರಲ್ಲಿ  ಈ ಮೂರನ್ನೂ ಮಿಶ್ರಣ ಮಾಡಿ ಅದರಲ್ಲಿ 800 ಗ್ರಾಂ ಪ್ರಮಾಣವನ್ನು ವರ್ಷದ ಪ್ರಮಾಣವಾಗಿ ಬಳಸಿದರೆ ಸಾಕಾಗುತ್ತದೆ. ಇದನ್ನು ಮೂರು ವಿಭಾಗ ಮಾಡಿಯೂ ಹಾಕಬಹುದು. ಇದು 200 ಮರಗಳಿಗೆ ಸಾಕಾಗುತ್ತದೆ.    

DAP ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಕೊಡುವುದಾದರೆ:

  • DAP ಅಂದರೆ ಡಿ ಅಮೋನಿಯಂ ಫೋಸ್ಫೇಟ್. ಇದರಲ್ಲಿ 18% ಸಾರಜನಕ ಮತ್ತು 46%  ರಂಜಕ ಇರುತ್ತದೆ.
  • ಇದಕ್ಕೆ ಮತ್ತೆ ಯೂರಿಯಾ ಮತ್ತು ಪೊಟ್ಯಾಶ್ ಮಿಶ್ರಣ ಮಾಡಿ ಅಡಿಕೆಗೆ ಹಾಗೂ ತೆಂಗಿಗೆ ಬೇಕಾದ ಸಮತೋಲನ ಪ್ರಮಾಣದ ಗೊಬ್ಬರ ಆಗುತ್ತದೆ.
  • DAP 90-100 ಗ್ರಾಂ ಯೂರಿಯಾ 200-225 ಗ್ರಾಂ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ 250 ಸೇರಿದಾಗ ಅಡಿಕೆಗೆ ಬೇಕಾದ ಸಮತೋಲನ ಗೊಬ್ಬರ ಆಗುತ್ತದೆ.
  • 20 ಕಿಲೋ DAP 40 -45 ಕಿಲೋ ಯೂರಿಯಾ ಮತ್ತು 50 ಕಿಲೋ ಮ್ಯುರೇಟ್ ಆಫ್ ಪೊಟ್ಯಾಶ್ ಮಿಶ್ರಣ ಮಾಡಿದಾಗ 110-115 ಕಿಲೋ ಆಗುತ್ತದೆ.
  • ಅದರಲ್ಲಿ 550 ಗ್ರಾಂ ಪಮಾಣವನ್ನು ಹಾಕಿದಾಗ ಅದರ ಅನುಪಾತ 18+92=110:48:150 ಆಗುತ್ತದೆ.
  • ಇದನ್ನು 200 ಮರಗಳಿಗೆ ಹಾಕಬಹುದು. ಮೂರು ಕಂತುಗಳಾಗಿ 550 ಗ್ರಾಂ ಅನ್ನು (175 ಗ್ರಾಂ)ಇದೇ ಪ್ರಮಾಣವನ್ನು ವಿಭಜಿಸಿ ಕೊಡಬಹುದು.

20:20:0:13 ಗೊಬ್ಬರ ಕೊಡುವ ಸಂದರ್ಭದಲ್ಲಿ:

ಗಂಧಕ ಯುಕ್ತ ಗೂಬ್ಬರ
ಗಂಧಕ ಯುಕ್ತ ಗೂಬ್ಬರ
  • ಈ ಗೊಬ್ಬರದಲ್ಲಿ  ಪೊಟ್ಯಾಶ್ ಇಲ್ಲ. 
  • ಹಾಗಾಗಿ ಪ್ರತ್ಯೇಕ ಪೊಟ್ಯಾಶ್ ಕೊಡಬೇಕು.50 ಕಿಲೋದಲ್ಲಿ 10 ಕಿಲೋ ಸಾರಜನಕ, 10 ಕಿಲೋ ರಂಜಕ ಮತ್ತು  13 ಕಿಲೋ ಗಂಧಕ ಅಂಶ ಇರುತ್ತದೆ.
  • ಇದನ್ನು ಒಂದು ಫಲ ಕೊಡುವ ಅಡಿಕೆ ಮರಕ್ಕೆ 200-250 ಗ್ರಾಂ ಗಿಂತ ಹೆಚ್ಚು ಕೊಡಬಾರದು.
  • 50 ಕಿಲೋ 20:20:00:13 ಮತ್ತು 25 ಕಿಲೋ ಯೂರಿಯಾ ಮತ್ತು 50 ಕಿಲೋ MOP ಸೇರಿಸಿದಾಗ ಆಗುವ 125 ಕಿಲೋ ವನ್ನು ಪ್ರತೀ ಫಲ ಕೊಡುವ ಮರಕ್ಕೆ 625 ಗ್ರಾಂ ನಂತೆ ಕೊಟ್ಟರೆ ವರ್ಷದ ಶಿಫಾರಿತ ಪ್ರಮಾಣ ಆಗುತ್ತದೆ.

15:15:15 ಅಥವಾ 16:16:16 ಕೊಡುವಾಗ:

  • ಇದನ್ನು ಒಂದು ಫಲ ಕೊಡುವ ಮರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೊಟ್ಟರೆ ರಂಜಕ ಹೆಚ್ಚಾಗುತ್ತದೆ.
  • 60 ಕಿಲೋ 15:15:15 ,30 ಕಿಲೋ ಯೂರಿಯಾ, ಹಾಗೂ 30-35 ಕಿಲೋ MOP ಮಿಶ್ರಣ ಮಾಡಿ 600 ಗ್ರಾಂ ಪ್ರಮಾಣದಲ್ಲಿ ವರ್ಷದ ಕಂತಾಗಿ ಒಂದು ಫಲ ಬರುವ ಅಡಿಕೆ ಮರಕ್ಕೆ ಕೊಡಬೇಕು.
  • ಇದನ್ನು ವಿಭಜಿಸಿ ಎಷ್ಟು ಕಂತುಗಳಲ್ಲೂ ಕೊಡಬಹುದು.
  • 14:6:21 ಪರಿಮಾಣದ ಗೊಬ್ಬರ ಮಿಶ್ರಣವನ್ನು ಕೆಲವು ಖಾಸಗಿ ತಯಾರಕರು ಉತ್ಪಾದಿಸುತ್ತಿದ್ದು, ಇದನ್ನು ಒಂದೇ ಆಗಿ 700 ಗ್ರಾಂ ಪ್ರಕಾರ ಹಾಕಿದರೆ ಅಡಿಕೆಗೆ ಶಿಫಾರಿಸಲ್ಪಟ್ಟ ಗೊಬ್ಬರ ಪೂರೈಸಿದಂತೆ ಆಗುತ್ತದೆ. 
  • ಸಾರಜನಕ ಸ್ವಲ್ಪ ಕಡಿಮೆಯಾದರೂ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಮುಂತಾದವುಗಳಿಂದ ಹೊಂದಿಸಬಹುದು.

ಅಡಿಕೆ ಬೆಳೆಗಾರರು ಯಾವುದಾದರೂ ಒಂದು ಗೊಬ್ಬರ ಇಲ್ಲ ಎಂದು ಚಿಂತಿಸಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಹಲವಾರು ಪರಿಮಾಣದ ತಯಾರಿಕೆಗಳಿವೆ. ಪುಣೆ ಮೂಲದ ಮಹಾಧನ್ ರಸಗೊಬ್ಬರ ತಯಾರಿಕಾ ಸಂಸ್ಥೆ, ಗುಜರಾತ್ ನ ಗ್ರೋಮೋರ್ ಸಂಸ್ಥೆಯಲ್ಲಿ ವೈವಿಧ್ಯಮಯವಾದ ಪರಿಮಾಣಗಳ ಗೊಬ್ಬರಗಳಿದ್ದು, ಆಯ್ಕೆಗೆ ಅನುಕೂಲ ಇದೆ.

ನಮ್ಮೂರಿನ ಗೊಬ್ಬರ ಮಾರಾಟ ಮಾಡುವ ಅಂಗಡಿಯವರಿಗೆ ಬರೇ ಒಂದೇ ಕಂಪೆನಿಯ ಗೊಬ್ಬರ ತರಿಸಲು ಬೇಡಿಕೆ ಸಲ್ಲಿಸಬೇಕು. ಒಂದೇ ಬ್ರಾಂಡ್ ನ ಗೊಬ್ಬರಕ್ಕೆ  ಅಂಟಿಕೊಳ್ಳಬಾರದು. ಯಾವಾಗಲೂ ಒಂದೇ ಪ್ರಕಾರದ ಗೊಬ್ಬರ ಕೊಡುವ ಬದಲು ಶಿಫಾರಿತ ಪ್ರಮಾಣಕ್ಕೆ ಸರಿಯಾಗುವಂತೆ ಬೇರೆ ಬೇರೆ ಗೊಬ್ಬರಗಳನ್ನು ಬದಲಿಸುತ್ತಾ ಕೊಡಬಹುದು.  ರೈತರಿಗೆ ತಿಳುವಳಿಕೆ ಹೆಚ್ಚಾದರೆ ಅದಕ್ಕನುಗುಣವಾಗಿ ರಸಗೊಬ್ಬರ – ಕೀಟನಾಶಕ- ರೋಗ ನಾಶಕ ಮಾರಾಟಮಾಡುವವರೂ ಅದಕ್ಕೆ ಹೊಂದಾಣಿಕೆ ಆಗುತ್ತಾರೆ.ಯಾವಾಗಲೂ ಮೂಲ ಗೊಬ್ಬರ ಮಿಶ್ರಣ ಮಾಡಿ ಬಳಕೆ ಅಗ್ಗ. ಕಂಪೆನಿಗಳೂ ಇದನ್ನೇ ಕಾಂಪ್ಲೆಕ್ಸ್ ಗೊಬ್ಬರ ಮಾಡಿ ಪ್ಯಾಕ್ ಮಾಡುವುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!