10:26:26 ಗೊಬ್ಬರ ಬಳಸುವವರು ಅಗತ್ಯವಾಗಿ ಗಮನಿಸಿ.

by | Aug 19, 2021 | Manure (ಫೋಷಕಾಂಶ), Uncategorized | 0 comments

ಬಹಳ ಜನ  ರೈತರು ತಮ್ಮ ಬೆಳೆಗಳಿಗೆ 10:26:26 ರಸಗೊಬ್ಬರ ಬಳಸುತ್ತಿದ್ದು, ಅದನ್ನೊಂದೇ  ಬಳಕೆ ಮಾಡಿದರೆ ಏನಾಗುತ್ತದೆ ಎಂಬುದರ  ವಿಸ್ತೃತ ಮಾಹಿತಿ ಇಲ್ಲಿದೆ.

ಅಡಿಕೆ ಬೆಳೆಗಾರರ ನೆಚ್ಚಿನ ಪೋಷಕಾಂಶಗಳ ಆಯ್ಕೆಯಲ್ಲಿ 10:26:26 ಎಂಬ ರಸಗೊಬ್ಬರವೂ ಒಂದು. ಸೊಸೈಟಿಗಳಲ್ಲಿ, ಗೊಬ್ಬರ ಮಾರಾಟದ ಅಂಗಡಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಸ್ತಾನು ಇರುವ ಗೊಬ್ಬರವೂ ಇದೇ. ಅಡಿಕೆ ಬೆಳೆಗಾರರು ಇರುವ ಪ್ರದೇಶಗಳಲ್ಲಿ ಇದರಷ್ಟು ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ರಸ ಗೊಬ್ಬರ ಬೇರೊಂದಿರಲಿಕ್ಕಿಲ್ಲ. ಈ ಗೊಬ್ಬರದ ಬಳಕೆಯಿಂದ ತೊಂದರೆ ಇಲ್ಲ. ಆದರೆ ಇದನ್ನೊಂದೇ ಬಳಕೆ ಮಾಡಿದರೆ  ಅದು ಪೂರ್ಣ ಪೋಷಕಾಂಶ ಎನ್ನಿಸುವುದಿಲ್ಲ. ಅಸಮತೋಲನದ ಗೊಬ್ಬರ ಪೂರೈಕೆಯಿಂದ ಉಂಟಾಗುವ ಎಲ್ಲಾ ಸಮಸ್ಯೆಗಳೂ ಈ ಒಂದೇ ಗೊಬ್ಬರ ಬಳಕೆಯಿಂದ ಆಗುತ್ತದೆ. ಹಲವಾರು ರೈತರು ಎದುರಿಸುವ  ಮಿಡಿ ಉದುರುವಿಕೆ, ಸಿಂಗಾರ ಒಣಗುವಿಕೆ , ಸಸಿ ಸಣಕಲಾಗುವಿಕೆ. ಗಿಡದ ನಿತ್ರಾಣ,ಎಲೆ ಹಳದಿಯಾಗುವಿಕೆ, ಇದಕ್ಕೆಲ್ಲಾ ಒಂದು ಕಾರಣ ರಂಜಕಾಂಶ ಹೆಚ್ಚು ಇರುವ  ಗೊಬ್ಬರವನ್ನು ಬಳಕೆ ಮಾಡುವುದು. 

 • ಯಾವುದೇ ಬೆಳೆ ಇರಲಿ, ಅದಕ್ಕೆ ಸಾರಜನಕ ಗೊಬ್ಬರ ಅಧಿಕ ಪ್ರಮಾಣದಲ್ಲೂ , ರಂಜಕ ಮಧ್ಯಮ ಪ್ರಮಾಣದಲ್ಲೂ ಪೊಟ್ಯಾಶ್ ಸರಿ ಸುಮಾರು ಸಾರಜನಕದಷ್ಟೇ ಕೆಲವು ಬೆಳೆಗಳಿಗೆ  ಸ್ವಲ್ಪ ಹೆಚ್ಚು ಬೇಕಾಗುತ್ತದೆ.
 • ತೆಂಗು, ಅಡಿಕೆ ಮುಂತಾದ ಬೆಳೆಗಳಿಗೆ ಪೊಟ್ಯಾಶ್ ಅಧಿಕ ಪ್ರಮಾಣದಲ್ಲೂ ಸಾರಜನಕ ಸ್ವಲ್ಪ ಕಡಿಮೆ ಪ್ರಮಾಣದಲ್ಲೂ ರಂಜಕ ಅವೆರಡರ ಅರ್ಧ ಪ್ರಮಾಣದಲ್ಲೂ ಬೇಕಾಗುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. 
 • ಬಹುತೇಕ ಬೆಳೆಗಳಿಗೆ ಈ ಪ್ರಮಾಣ ಸರಿ ಸುಮಾರು ಒಂದೇ ರೀತಿಯಲ್ಲಿ ಇರುತ್ತದೆ.
10:26:26 ಗೊಬ್ಬರ

ಅಡಿಕೆ ಮರಕ್ಕೆ ಏನು ಗೊಬ್ಬರ ಬೇಕು?

 • ಫಲ ಕೊಡುವ (ಅಧಿಕ ಇಳುವರಿಗೆ) ಅಡಿಕೆ ಮರ ಒಂದಕ್ಕೆ ಸಾರಜನಕ ಗೊಬ್ಬರ (N) 100 ರಿಂದ 120 ಗ್ರಾಂ ತನಕ , ರಂಜಕ 40 ರಿಂದ 50 ಗ್ರಾಂ ತನಕ ಹಾಗೂ ಪೊಟ್ಯಾಶ್ 140 ರಿಂದ150  ಗ್ರಾಂ  ತನಕ ಬೇಕು ಎಂಬುದಾಗಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಹೇಳುತ್ತದೆ. 
 • ಅಡಿಕೆ ಬೆಳೆಯಲ್ಲಿ ಸಾರಜನಕದ ಪಾತ್ರದ ಬಗ್ಗೆ ಹೇಳುವುದೇ ಆದರೆ, ಸಾರಜನಕವು ಸಸ್ಯದ ಗಾತ್ರವನ್ನು ಹೆಚ್ಚಿಸುತ್ತದೆ.
 • ಮರ ದಷ್ಟ ಪುಷ್ಟವಾಗುತ್ತದೆ. ನಮಗೆ ದೇಹ ದಾಢ್ಯತೆ ಹೇಗೆ ಅವಶ್ಯಕವಾಗಿ ಬೇಕೋ ಅದೇ ರೀತಿ ಸಸ್ಯಗಳಿಗೂ. ಸಾರಜನಕ ಅಡಿಕೆ/ ತೆಂಗು ಮುಂತಾದ ಬೆಳೆಗಳಲ್ಲಿ ಎಲೆಗಳನ್ನು ಹೆಚ್ಚಿಸಲು, ದ್ಯುತಿ ಸಂಸ್ಲೇಷಣ ಕ್ರಿಯೆಯನ್ನು ಸಮರ್ಪಕವಾಗಿ ಮಾಡಲು ನೆರವಾಗುತ್ತದೆ. 
 • ಸಸ್ಯಗಳಲ್ಲಿ ಹರಿತ್ತು, ಕೋಶ ಕೇಂದ್ರ, ನ್ಯೂಕ್ಲಿಯೋ ಪ್ರೋಟೀನು,  ಹಾಗೆಯೇ ಅನೇಕ ಬಗೆಯ ಕಿಣ್ವಗಳ  ಉತ್ಪಾದನೆಗೆ ಸಾರಜನಕ ಬೇಕಾಗುತ್ತದೆ
 • ಸಾರಜನಕ ಕೊರತೆ ಉಂಟಾದರೆ ಇವೆಲ್ಲಾ ಕೈಕೊಟ್ಟು ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ.
 • ಸಾರಜನಕ ಮಿತಿಗಿಂತ ಹೆಚ್ಚಾಗಬಾರದು. ಅಗತ್ಯಕಿಂತ ಕಡಿಮೆ ಆಗಬಾರದು.

10:26:26 ಗೊಬ್ಬರ ಮಾತ್ರ ಕೊಟ್ಟರೆ ಏನಾಗುತ್ತದೆ?

 • ಕೆಲವರು ವರ್ಷಕ್ಕೆ ಎರಡು ಸಾರಿ ತಲಾ 250 +250  ಗ್ರಾ ನಂತೆ 10:26:26 ಗೊಬ್ಬರವನ್ನು ಕೊಡುತ್ತಾರೆ.
 • ಆಗ ಅಡಿಕೆ ಮರಕ್ಕೆ ಅಗತ್ಯವಾಗಿ ಬೇಕಾಗುವ ಸಾರಜನಕದ ಕೊರತೆ ಉಂಟಾಗುತ್ತದೆ. 
 • ಅದೇ ರೀತಿಯಲ್ಲಿ ರಂಜಕದ ಪೂರೈಕೆ ಹೆಚ್ಚಾಗುತ್ತದೆ.
 • ಒಟ್ಟು 500 ಗ್ರಾಂ ಪ್ರಮಾಣದಲ್ಲಿ ಈ ಗೊಬ್ಬರವನ್ನು ಕೊಟ್ಟಾಗ ಒಂದು ಅಡಿಕೆ ಮರಕ್ಕೆ ಕೇವಲ 50 ಗ್ರಾಂ ಸಾರಜನಕ ಕೊಟ್ಟಂತಾಗುತ್ತದೆ.
 • ಇನ್ನುಳಿದ 50 ಅಥವಾ 70 ಗ್ರಾಂ ಸಾರಜನಕ ಗೊಬ್ಬರವನ್ನು ಬೇರೆ ಮೂಲಗಳಿಂದ ಒದಗಿಸಿದರೆ ಅದು ಹೊಂದಾಣಿಕೆಯಾಗಬಹುದು.
 • ಕೊಡದೇ ಇದ್ದರೆ ಸಸ್ಯಗಳು ಸಾರಜನಕ ಕೊರತೆಯಿಂದ ಬಳಲುತ್ತದೆ.
 • ಕೆಲವು ರೈತರು ನಾವು ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದೇವೆ ಎಂದು ಹೇಳಿ ಸಾರಜನಕ ಗೊಬ್ಬರವನ್ನು ಬಹಳ ಕಡಿಮೆ ಮಾಡಲು ಇಚ್ಚಿಸುತ್ತಾರೆ.
 • ಆದರೆ ಕೊಟ್ಟಿಗೆ ಗೊಬ್ಬರದಲ್ಲಿ ಅಷ್ಟು ಸಾರಜನಕ ಸಿಗಬೇಕಾದರೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂದು ತಿಳಿದುಕೊಂಡು ಕೊಡಬೇಕಾಗುತ್ತದೆ.

ನಾವೆಲ್ಲಾ ವಾತಾವರಣದಿಂದ ಮಳೆ ಸಿಡಿಲು ಮೂಲಕ ಸಾಕಷ್ಟು ಸಾರಜನಕ ಭೂಮಿಗೆ ಲಭ್ಯವಾಗುತ್ತದೆ.  ಹಾಗಿರುವಾಗ ನಾವು ಯಾಕೆ ಹೆಚ್ಚು ಕೊಡಬೇಕು? ಸಾರಜನಕ ಹೆಚ್ಚು ಕೊಟ್ಟರೆ  ಒಳ್ಳೆಯದಲ್ಲ. ರೋಗ ರುಜಿನಗಳು ಬರುತ್ತವೆ ಎಂದು ಹೇಳುತ್ತಾರೆ. ಸಾರಜನಕ ಹೆಚ್ಚು ಕೊಡಬಾರದು ನಿಜ. ಆದರೆ ಶಿಫಾರಿತ ಪ್ರಮಾಣದಷ್ಟನ್ನು ಕೊಡಲೇ ಬೇಕು. ಅಷ್ಟು ಕೊಡದಿದ್ದರೆ ನಿತ್ರಾಣ  ಇರುವ ವ್ಯಕ್ತಿ ಉತ್ತಮ ದಷ್ಟ ಪುಷ್ಟ ಮಕ್ಕಳನ್ನು ಹೆರಬೇಕು ಎಂದು ಬಯಸಿದಂತಾಗುತ್ತದೆ.

10:26:26 ಗೊಬ್ಬರದ ಹರಳು
10:26:26 ಗೊಬ್ಬರದ ಹರಳು

ರಂಜಕ ದುಪ್ಪಟ್ಟಾಗುತ್ತದೆ:

 • ಫಲ ಕೊಡುವ ಅಡಿಕೆ ಮರಕ್ಕೆ ವರ್ಷಕ್ಕೆ 500 ಗ್ರಾಂ ಪ್ರಮಾಣದಲ್ಲಿ 10:26:26 ಗೊಬ್ಬರವನ್ನು ಕೊಟ್ಟಾಗ 130 ಗ್ರಾಂ ರಂಜಕವನ್ನು ಕೊಟ್ಟಂತಾಗುತ್ತದೆ.
 • ಒಂದು ಮರಕ್ಕೆ ಬೇಕಾಗುವ ಪ್ರಮಾಣಕ್ಕಿಂತ ಇದು ದುಪ್ಪಟ್ಟಾಗುತ್ತದೆ.
 • ರಂಜಕ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ  ಕೊಡುವುದರಿಂದ  ಸಸ್ಯಗಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ.
 • ಸೂಕ್ಷ್ಮ ಪೋಷಕಾಂಶಗಳಾದ  ಸತು ,ಕಬ್ಬಿಣ ಮುಂತಾದವುಗಳನ್ನು ಸಸ್ಯಗಳು ಬಳಸಿಕೊಳ್ಳುವುದಿಲ್ಲ.
 • ಮಣ್ಣು ಪರಿಕ್ಷೆಯಲ್ಲಿ ಇವು ಯಥೇಚ್ಚ ಇದ್ದಂತೆ ಕಂಡರೂ ಸಸ್ಯಗಳಿಗೆ ಲಭ್ಯವಾಗುವುದಿಲ್ಲ.
 • ಅಡಿಕೆ ಸಸ್ಯಗಳಲ್ಲಿ ಇರಬೇಕಾದ ಪ್ರಮಾಣದ ಎಲೆಗಳು ಇಲ್ಲದೆ.
 • ಕಾಂಡ ಸಣಕಲಾಗುತ್ತದೆ. ಹೂ ಗೊಂಚಲು ಬಿಟ್ಟರೂ ಅವು ಫಲಿತವಾಗುವಲ್ಲಿ ತೊಂದರೆ ಉಂಟಾಗುತ್ತದೆ.
 • ಎಲೆಗಳ ಅಲಗುಗಳು ಹಳದಿಯಾಗುತ್ತದೆ. ಹೂ ಗೊಂಚಲು ಚೆನ್ನಾಗಿದ್ದರೂ ಫಸಲು ಉಳಿಯುವುದಿಲ್ಲ. 
 • ಇನ್ನೂ ಹಲವಾರು ಸಸ್ಯಗಳ ಶಾರೀರಿಕ ನ್ಯೂನತೆಗಳು ಉಂಟಾಗುತ್ತವೆ.
 • ಎಲ್ಲದಕ್ಕಿಂತ ಮಿಗಿಲಾಗಿ ರಂಜಕ  ದುಬಾರಿ ವಸ್ತುವಾಗಿರುವುದರಿಂದ  ಹೆಚ್ಚು ಬಳಕೆ ಸೂಕ್ತವಲ್ಲ.
 • Execs phosphorus is not good for plants either for they cannot properly assimilate it because most phosphates are in in organic for, especially in vegetative organs. When phosphorus is excessive crops mature early and their yield are low.
 • ರಂಜಕವು ಹೆಚ್ಚಾಗಿ ಫಲದಲ್ಲೇ  ಸಂಗ್ರಹವಾಗುವ  ಕಾರಣ ಹೆಚ್ಚಾದರೆ ಫಲ ನಿಶ್ಪಲವಾಗುತ್ತದೆ.
 • Phosphorus in plants is heavily predominant in seeds and generally speaking in the commercially valuable part of crops.

ಹೇಗೆ ಕೊಟ್ಟರೆ ಸೂಕ್ತ:

 • 10:26:26 ಗೊಬ್ಬರವನ್ನು ಕೊಡುವಾಗ  ಸಾರಜನಕದ ಕೊರತೆ ಉಂಟಾಗುವ ಕಾರಣ ಅದನ್ನು ಸಾವಯವ ಮೂಲದಲ್ಲಿ ಅಥವಾ ರಾಸಾಯನಿಕ ಮೂಲದಲ್ಲಿ  ಕೊರತೆಯ ಪ್ರಮಾಣದಷ್ಟನ್ನೂ ಕೊಡಬೇಕು.
 • ಈ ಗೊಬ್ಬರವನ್ನು ಕೇವಲ 250  ಗ್ರಾಂ ಅಥವಾ 300  ಗ್ರಾಂ ಗೆ ಮಿತಿಗೊಳಿಸಿ  ನಂತರ ಕೊರತೆಯಾಗುವ ಸಾರಜಕನ ಮತ್ತು ಪೊಟ್ಯಾಶ್ ಗೊಬ್ಬರವನ್ನು ಸೇರಿಸಬೇಕು.
 • 250  ಗ್ರಾಂ 10:26:26 ಗೊಬ್ಬರದ ಜೊತೆಗೆ 200 ಗ್ರಾಂ ಯೂರಿಯಾ ಮತ್ತು 125  ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಸೇರಿಸಿ ಅದನ್ನು ಮೂರು ಕಂತುಗಳಲ್ಲಿ ಕೊಡುವುದರಿಂದ  ಮೂರೂ ಪೋಷಕಗಳ ಸಮತೋಲನ ಉಂಟಾಗುತ್ತದೆ.
 • ಮಳೆಗಾಲದ ಪ್ರಾರಂಭದಲ್ಲಿ 10:26:26 ಪೋಷಕವನ್ನೊಂದೇ  250  ಗ್ರಾಂ ಪ್ರಮಾಣದಲ್ಲಿ ಕೊಟ್ಟರೆ  ನಂತರದ 2 ಕಂತುಗಳಲ್ಲಿ  ತಲಾ  100 ಗ್ರಾಂ ಯೂರಿಯಾ ಮತ್ತು 65  ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಮಾತ್ರ ಕೊಡಬೇಕು.
 • ಮಿಶ್ರಣ ಮಾಡುವುದಕ್ಕಿಂತ ಇದು ಸುಲಭ ವಿಧಾನ.

ರೈತರು ಒಬ್ಬ ಹೇಳುತ್ತಾನೆ ಎಂದು ಅದನ್ನೇ ಅನುಸರಿಸುವುದಲ್ಲ. ಕೆಲವರು ಸಾಕಷ್ಟು ಸಾವಯವ ಸಾರಜನಕ ಗೊಬ್ಬರ ಕೊಟ್ಟದ್ದೂ ಇರಬಹುದು (ಉದಾ: ಹರಳು ಹಿಂಡಿ, ಪಶು ಆಹಾರ ಹೆಚ್ಚು ನೀಡಿ ಬೆಳೆಸಿದ ಹಸುಗಳ ಸಗಣಿ, ಮುಂತಾದವು) ಅಂತವರಲ್ಲಿ ಈ ಗೊಬ್ಬರವು ಸ್ವಲ್ಪ ಸಮಯ ಉತ್ತಮ ಇಳುವರಿ ಕೊಟ್ಟಿರಬಹುದು. ಹಾಗೆಂದು ಎಲ್ಲಾ ಕೃಷಿ ಭೂಮಿಗೂ, ಕೃಷಿಕರಿಗೂ ಇದು ಅನ್ವಯವಾಗಲಾರದು. ಮುಖ್ಯವಾಗಿ ಪ್ರತೀಯೊಬ್ಬನೂ ತಾವು ಬೆಳೆಯುವ ಬೆಳೆಗೆ ಶಿಫಾರಿತ ಪ್ರಮಾಣದ ಪೋಷಕಾಂಶಗಳು ಎಷ್ಟು ಎಂಬುದನ್ನು ಅಗತ್ಯವಾಗಿ ತಿಳಿದು ಅದಕ್ಕನುಗುಣವಾಗಿ ಅಸಮತೋಲನ ಉಂಟಾಗದಂತೆ ಗೊಬ್ಬರ ಕೊಡಬೇಕು. ಗೊಬ್ಬರ ಶಿಫಾರಸಿಗಿಂತ ಹೆಚ್ಚು ಕೊಡಿ ಅಂತಹ ತೊಂದರೆ ಆಗಲಾರದು. ಆದರೆ ಅಸಮತೋಲನ  ಮಾತ್ರ ಮಾಡಬೇಡಿ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!