ಆನ್ ಲೈನ್ ಕೃಷಿ ಉತ್ಪನ್ನಗಳ ವ್ಯವಹಾರ- ಗ್ರಾಹಕರೇ ಎಚ್ಚರ!

ಪರಿಶುದ್ಧ ತುಪ್ಪ

ಇತ್ತೀಚಿನ ದಿನಗಳಲ್ಲಿ ಅಮಾಯಕ ರೈತರನ್ನು ಹಾಗೆಯೇ ಪೇಟೆ ಪಟ್ಟಣದ ಜನರನ್ನು  ಮೋಸ ಮಾಡಿ  ಹಣ ಸಂಪಾದನೆ ಮಾಡುವ ಹೈಟೆಕ್ ಆನ್ ಲೈನ್ ಕೃಷಿ ಉತ್ಪನ್ನ ಮಾರಾಟ ಜಾಲಗಳು ಹೆಚ್ಚುತ್ತಿದೆ.  ರೈತರು ಹಾಗೆಯೇ ಪೇಟೆ ಪಟ್ಟಣದ ಜನ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡದೆ ಕೊಳ್ಳಬೇಡಿ.

ಈ ರೀತಿ ಕೊರೋನಾ ಮಹಾಮಾರಿ, ಹಾಗೆಯೇ ನೆರೆ, ಬರ ಮುಂತಾದ ಅವಘಡಗಳು ಮನುಕುಲದ ಬೆನ್ನು ಹತ್ತುತ್ತಿದ್ದರೂ ಇನ್ನೂ ಪರರನ್ನು ಸುಲಿಗೆ ಮಾಡಿ ಹಣ ಮಾಡಬೇಕೆಂಬಾಸೆ ಕೆಲವರಲ್ಲಿ.  ಎಲ್ಲಿ ಇಡುತ್ತಾರೋ ಹಣವನ್ನು ಗೊತ್ತಿಲ್ಲ.  ಇವೆಲ್ಲಾ ಕೆಲಸ ಹಣ ಇರುವ ಜನರಿಂದಲೇ ನಡೆಯುತ್ತಿದೆ.  ಪೇಟೆ ಪಟ್ಟಣದ ಜನ ಅಮಾಯಕರು, ಹಾಗೆಯೇ ಹಳ್ಳಿಯ ಜನರೂ. ಇವರೇ ಈ ಜನರ ಟಾರ್ಗೆಟ್. ಹಣ ಇದ್ದವರಿಗೆ ಮತ್ತೆ ಮತ್ತೆ ಹಣ ಕೂಡಿಸುವ ಆಸೆ. ಆಕರ್ಷಕ ಪ್ಯಾಕಿಂಗ್ ಹಾಗೂ ಪ್ರಚಾರಗಳ ಮೂಲಕ ಕಳಪೆ ಉತ್ಪನ್ನಗಳನ್ನು ಮಾರಲಾಗುತ್ತಿದೆ.

  • ವಿಶಿಷ್ಟ  ಪ್ರಚಾರದ  ಅಬ್ಬರದ ಮಧ್ಯೆ ಬೆರಳೆಣಿಕೆಯಲ್ಲಿರುವ ಪ್ರಾಮಾಣಿಕರ ವ್ಯವಹಾರವನ್ನು ನಂಬುವವರೇ ಇಲ್ಲದಾಗಿದೆ.
  • ಕೆಲವು ಸಾಪ್ಟ್ ವೇರ್ ಉದ್ಯೋಗಿಗಳಿಗೆ ಇದು ಒಂದು ವ್ಯವಹಾರವಾಗಿದ್ದು, ಮೋಸದಲ್ಲಿ ಹಣ ಸಂಪಾದನೆ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಸೊಸೈಟಿ ಜೇನು ಎಂಬುದನ್ನು ಈ ವಿನ್ಯಾಸದ ಬಾಟಲಿಗಳಲ್ಲಿ  ಗುರುತಿಸಬಹುದು.
ಸೊಸೈಟಿ ಜೇನು ಈ ತರಹ ಬಾಟಲಿಗಳಲ್ಲಿ ಮಾರಲ್ಪಡುತ್ತದೆ.

ಜೇನು ಮಾರಾಟದ ದಂಧೆ;

  • ಕೆಲವು ಜನ ಈಗ ಪರಿಶುದ್ಧ ಜೇನಿನ ವ್ಯವಹಾರದಲ್ಲಿ ತೊಡಗಿದ್ದಾರೆ.
  • ಇವರ ಕೃಪೆಯಿಂದ ಅದೆಷ್ಟೋ  ಜೇನು ವ್ಯವಸಾಯ ಸಂಘಗಳು ಈಗ ಮತ್ತೆ ವ್ಯವಹಾರ ಚುರುಕುಗೊಳಿಸಿವೆ.
  • 100 ಕ್ಕೆ 98%  ಜನ ಈಗ ಸೊಸೈಟಿಗಳಲ್ಲಿ ಸಿಗುವ ಜೇನನ್ನು ಖರೀದಿ ಮಾಡಿ ತಮ್ಮ ಲೇಬಲ್ ಅಂಟಿಸಿ ಕಾಡಿನ ಮರಗಳ ಜೇನು, ಅಥವಾ ಸಾವಯವ ಜೇನು ಎಂಬ ಹೆಸರಿನಲ್ಲಿ ಮಾರಾಟ ಮಾಡಲಾರಂಭಿಸಿದ್ದಾರೆ.  
  • ಇದೆಲ್ಲವೂ  ಜೇನು ವ್ಯವಸಾಯ ಸಹಕಾರಿ ಸಂಘದಿಂದ ಕಿಲೊ ಗೆ ರೂ. 275-300 ದರದಲ್ಲಿ ಖರೀದಿ ಮಾಡಿದ ಜೇನು ಹೊರತಾಗಿ ಇವರು ಯಾರೂ  ಜೇನು ಕೃಷಿ ಮಾಡುವವರ ಕೈಯಿಂದ ಖರೀದಿ ಮಾಡುತ್ತಿಲ್ಲ.
  • ಇವರಿಗೆ ಜೇನು ಕೃಷಿಯ ಗಂಧ ಗಾಳಿಯೂ ಗೊತ್ತಿಲ್ಲ.
  • ದಕ್ಷಿಣ ಕನ್ನಡದ ಒಂದು ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಕಾರ್ಯದರ್ಶಿ ಗಳು ಹೇಳುತ್ತಾರೆ ‘ಈಗ ಒಂದೆರಡು ವರ್ಷಗಳಿಂದ ಜೇನು ಎಷ್ಟಿದ್ದರೂ ಬಲ್ಕ್ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ‘ ಎಂದು.
  •  ಕಳೆದ 5-6 ವರ್ಷಗಳಿಂದ ಪುತ್ತೂರು, ಸುಳ್ಯ, ಮಡಿಕೇರಿ, ಸಕಲೇಶಪುರ, ಕೊಪ್ಪ ಮುಂತಾದ ಕಡೆಯ ಜೇನು ವ್ಯವಸಾಯ ಸಹಕಾರಿ ಸಂಘಗಳಿಗೆ ಭಾರೀ ವ್ಯಾಪಾರ.
  • ಇವರು ಉತ್ತರ ಭಾರತದಿಂದ  ಭಾರೀ ಪ್ರಮಾಣದಲ್ಲಿ ಬ್ಯಾರಲ್ ಗಳಲ್ಲಿ ಕಚ್ಚಾ ಜೇನು ತುಪ್ಪವನ್ನು ತಂದು ತಮ್ಮ ಸಂಸ್ಕರಣಾ ಘಟಕಗಳಲ್ಲಿ ಅದರ ಕಶ್ಮಲಗಳನ್ನು  ತೆಗೆದು  ಇಲ್ಲಿ ತೋರಿಸಲಾದ ಆಕಾರದ ಬಾಟಲಿಗಳಲ್ಲಿ ತುಂಬಿ ಲೇಬಲ್ ಸಹಿತ ಅಥವಾ ಲೇಬಲ್ ರಹಿತವಾಗಿ  ಕೊಡುತ್ತಾರೆ.
  • ಇದನ್ನು ಅದೇ ರೀತಿಯಲ್ಲಿ ಖರೀದಿ ಮಾಡಿ ತಮ್ಮ ಲೇಬಲ್ ಹಚ್ಚಿ ಸಾವಯವ ಜೇನು, ಕಾಡಿನ ಜೇನು ಎಂಬ ಹೆಸರಿನಲ್ಲಿ ಮಾರಾಟ ಮಾಡುವುದು ಕಂಡು ಬರುತ್ತಿದೆ

ಒಮ್ಮೆ ನಿಮ್ಮೂರಿನ ಜೇನು ಸೊಸೈಟಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಹಾರವನ್ನು ಕೇಳಿ. ಸ್ಥಳೀಯ  ಗ್ರಾಹಕರಿಗಿಂತ ಹೆಚ್ಚು ತಮ್ಮದೇ ಬ್ರಾಂಡ್ ಮೂಲಕ ಮಾರಾಟ ಮಾಡುವವರು ಲೇಬಲ್ ರಹಿತ ಜೇನು  ಒಯ್ಯುತ್ತಾರೆ ಎಂಬುದಾಗಿ ಹೇಳುತ್ತಾರೆ.

  • ಜೇನು ವ್ಯವಸಾಯ ಮಾಡುವವರ  ಜೇನು ಅವರ ಮನೆಯಲ್ಲಿ ಕೇಳುವವರಿಲ್ಲದೆ ಉಳಿದಿದೆ. ಇಂತವರ ಜೇನು ಬಿಸಿ ಕೇಕ್ ನಂತೆ ಮಾರಾಟವಾಗುತ್ತಿದೆ.
ನೀವು ಖರೀದಿಸುವ ತುಪ್ಪ ಹೀಗಿದೆಯೇ? ಇದ್ದರೆ ಅದು ಶುದ್ಧ ತುಪ್ಪ
ನೀವು ಖರೀದಿಸುವ ತುಪ್ಪ ಹೀಗಿದೆಯೇ? ಇದ್ದರೆ ಅದು ಶುದ್ಧ ತುಪ್ಪ

ಹಸುವಿನ ತುಪ್ಪ:

  • ಹಿಂದೆ ಸ್ವಲ್ಪ ತುಪ್ಪ ಮತ್ತು ಸ್ವಲ್ಪ ಬೇಯಿಸಿದ ಆಲೂಗಡ್ಡೆ ಮಿಶ್ರಣ  ಮಾಡಿ ತುಪ್ಪ ಎಂದು  ಸ್ಟೀಲು ಕ್ಯಾನುಗಳಲ್ಲಿ ತುಂಬಿ ಮನೆ ಮನೆ ಮಾರಾಟ ಮಾಡುವವರು ಇದ್ದರು,
  • ಒಂದೆರಡು  ಬಾರಿ ಪೋಲೀಸರ ಕೈಗೆ ಸಿಕ್ಕಿ ಬಿದ್ದ ವರದಿಗಳೂ ಇವೆ.
  • ಈಗ ಅಂತಹ ಚಿಲ್ಲರೆ ಜನಗಳು ತುಪ್ಪದ ವ್ಯವಹಾರ ಮಾಡುವುದಲ್ಲ.
  • ಹೈಟೆಕ್ ಜನಗಳೇ  ಈ ವ್ಯವಹಾರಕ್ಕೆ ಇಳಿದಿದ್ದಾರೆ.
  • ಹಸುವಿನ ತುಪ್ಪ ಕಿಲೋ 2000 ರೂ. ತನಕ ಮಾರಾಟ ಮಾಡುವವರೂ ಇದ್ದಾರೆ.
  • ದನದ ತುಪ್ಪದ ವ್ಯವಹಾರವೂ ಸಹ ಜೇನಿನಂತೆ ನಡೆಯುತ್ತಿರುವ ದೊಡ್ಡ ಮೋಸದ ವ್ಯವಹಾರವಾಗಿದೆ.
  • ಹೆಚ್ಚಿನ ಜನ ಮಾರುಕಟ್ಟೆಯಲ್ಲಿ ಸಿಗುವ ತುಪ್ಪವನ್ನೇ ಖರೀದಿ ಮಾಡಿ ಅದನ್ನು  ಸ್ವಲ್ಪ ಕಾಯಿಸಿ ಅದಕ್ಕೆ ನಾಟಿ ದನದ ತುಪ್ಪ, ಗಿರ್ ದನದ ತುಪ್ಪ  A2 ತುಪ್ಪ ಎಂಬೆಲ್ಲಾ ಹೆಸರುಗಳಿಂದ ಮಾರಾಟ ಮಾಡುತ್ತಾರೆ.
  • ಇದು  ಕಿಲೋಗೆ ೨000 ಕ್ಕೂ ಮಿಕ್ಕಿದ ಬೆಲೆಗೆ.
  • ಕೆಲವರು ಹಾಲು ಮಾರದೆ ತುಪ್ಪ ಮಾಡಿ ಇಂತವರಿಗೆ ತುಪ್ಪ ಮಾರಾಟ ಮಾಡುವವರೂ ಇದ್ದಾರೆ.
  • ಆನ್ ಲೈನ್ ನಲ್ಲಿ ಗುರುತು ಪರಿಚಯ ಇಲ್ಲದವರಿಗೆ ಮಾರಾಟ  ಮಾಡುವುದೆಂದು ಖಾತ್ರಿ ಇರುವಾಗ ಯಾರೂ ತಾಜಾ ವಸ್ತುಗಳನ್ನು ಕೊಡುವುದಿಲ್ಲ.
ಜೇನು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಜೇನನ್ನು ವೈಜ್ಞಾನಿಕವಾಗಿ ಶುದ್ಧೀಕರಿಸುವ  ವ್ಯವಸ್ಥೆ
ಜೇನು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಜೇನನ್ನು ವೈಜ್ಞಾನಿಕವಾಗಿ ಶುದ್ಧೀಕರಿಸುವ ವ್ಯವಸ್ಥೆ

ಹೊಸ ಹೆಸರು ಕೊಟ್ಟ ಗಿಡಗಳು:

  • ನಿನ್ನೆ ತಾನೇ ಒಂದು ಮಾರ್ಕೆಟಿಂಗ್ ವ್ಯವಸ್ಥೆಯ ಜಾಹೀರಾತು ನೋಡಿದೆ.
  • ಫ್ಯಾಶನ್ ಪ್ರೂಟ್ ಎಂಬ ಹಣ್ಣಿನ ಗಿಡವನ್ನು 150 ರೂ. ಗಳಿಗೆ ಮಾರಾಟಕ್ಕೆ ಇಟ್ಟಿದ್ದರು.
  • ಇದು  ಬೀಜ ಹಾಕಿದರೆ ಎಲ್ಲವೂ ಮೊಳಕೆಯೊಡೆಯುವ ಗುಣ ಹೊಂದಿದ ಸಸ್ಯವಾಗಿದ್ದು, ಇಂತಹ ಸಸಿಯನ್ನು 150 ರೂ. ಗಳಿಗೆ ಮಾರಾಟ ಮಾಡುವ  ದಂಧೆ ನಡೆಯುತ್ತಿದೆ.

ಬರೇ ಜೇನು ಮಾತ್ರವಲ್ಲ. ಕರಿಮೆಣಸು, ಜೋನಿ ಬೆಲ್ಲ, ಅಪ್ಪೆ ಮಿಡಿ,  ಅರಶಿನ, ಹೀಗೆ ಕೃಷಿಕರಿಂದ ಅಥವಾ ಅಂಗಡಿಯಿಂದ ನಿಮ್ಮ ಆರ್ಡರ್ ಮೇಲೆ ಖರೀದಿ ಮಾಡಿ ಅದನ್ನು ತಮ್ಮ ಸ್ವಂತ ಹೆಸರಿನಲ್ಲಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ.

ಗ್ರಾಹಕರು ಏನು ಮಾಡಬೇಕು:

  • ಗ್ರಾಹಕರೇ ನೀವು ಜೇನು ತುಪ್ಪ ಕೊಳ್ಳಲೇ ಬೇಕೆಂದಾದರೆ ನಿಮ್ಮ ಸಮೀಪದಲ್ಲಿ ಯಾರಾದರೂ ಜೇನು ಪೆಟ್ಟಿಗೆ ಇಟ್ಟುಕೊಂಡು ಅವರ ಇತಿಮಿತಿಯಲ್ಲಿ ಜೇನು ಉತ್ಪಾದನೆ ಮಾಡುತ್ತಿದ್ದರೆ ಅದನ್ನು ಕೊಳ್ಳಿ.
  • ಅದು ಶ್ರೇಷ್ಟವಾಗಿರುತ್ತದೆ.
  • ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ ಎಂದು ಅದನ್ನು ಬೇಕಾಬಿಟ್ಟಿ ತಿನ್ನುವುದಲ್ಲ.
  • ಅದಕ್ಕೂ ಒಂದು ಇತಿ ಮಿತಿ ಇದೆ.
  • ಇಷ್ಟಕ್ಕೂ ಜೇನು ತುಪ್ಪ ಬೇಕಿದ್ದರೆ ಸಮೀಪದ ಜೇನು ವ್ಯವಸಾಯ ಸಹಕಾರೀ ಸಂಘದಿಂದ ಖರೀದಿಸಿ ತಿನ್ನಿ.
  • ಇದು ಸಂಸ್ಕರಿತ ಜೇನು ತುಪ್ಪ ಆಗಿದ್ದು, ಸ್ಥಳೀಯ ಜೇನು ತುಪ್ಪದಷ್ಟೇ ಪರಿಶುದ್ಧವಾಗಿರುತ್ತದೆ.

ತುಪ್ಪ ಬೇಕೇ- ಎಲ್ಲಾ ತುಪ್ಪವೂ ಒಂದೇ:

  • ನಾಟಿ ಹಸುವಿನ ತುಪ್ಪ. ಗೀರ್ ದನದ ತುಪ್ಪ ಎಂದು ಮರುಳಾಗದಿರಿ.
  • ಈ ದನಗಳಿಗೂ ತಿನ್ನಿಸುವುದು  ಮಾಮೂಲಿ ರಾಸಾಯನಿಕ ಮಿಶ್ರಣಗಳಿರುವ ಪಶು ಆಹಾರಗಳನ್ನೇ.
  • ಹಿರಿಯರು ಹೇಳುವ ಮಾತು ಇದು, ತಿಂಡಿಯಂತೆ ಲದ್ದಿ, ಸಂಘದಂತೆ ಬುದ್ಧಿ. 
  • ಯಾವ ಹಸುವೇ ಆಗಿರಲಿ ಅದಕ್ಕೆ ಕೊಡುವ ಆಹಾರದ ಮೇಲೆ, ಅದು ಬೆಳೆಯುವ ಪ್ರದೇಶದ  ಹವಾಮಾನದ ಮೇಲೆ, ಅದರ ಹಾಲಿನ ಗುಣ, ತುಪ್ಪದ ಗುಣ  ಇರುತ್ತದೆ.
  • ಆದ ಕಾರಣ ನೀವು  ವೃತಾ ನಾಟಿ, A2 ಎಂದೆಲ್ಲಾ ತಲೆಗೆ ಹಾಕಿಕೊಳ್ಳಬೇಡಿ.
  • ನೀವೇ ತುಪ್ಪ ತಯಾರಿಸಿ ಬಳಸುವುದಿದ್ದರೆ ಅದು ಶ್ರೇಷ್ಟ.
  • ಇಲ್ಲವಾದರೆ ನಿಮಗೆ ಗೊತ್ತಿರುವವರು ಮಾಡಿದ ತುಪ್ಪ ಖರೀದಿಸಿ. 
  • ತುಪ್ಪ ಎಂಬುದು ಬೆಣ್ಣೆ  ಕಾಯಿಸಿ ಒಂದು ವಾರದ ಒಳಗೆ ಸೇವಿಸಲು ರುಚಿ. ನಂತರ ಅದು ಹಳತಾಗುತ್ತದೆ.
  • ವಾಸನೆಯೂ ಇರುತ್ತದೆ. ಕೆಲವು ವ್ಯವಹಾರಸ್ಥರು ತೂಕಕ್ಕಾಗಿ ತುಪ್ಪವನ್ನು ಸರಿಯಾಗಿ ಕಾಯಿಸದೇ  ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಾರೆ.
  • ಇದು  ವಾಸನೆ ಹೊಂದಿರುತ್ತದೆ. ಕೆನೆ ಸಹಿತದ ಹಾಲನ್ನು ಖರೀದಿಸಿ ನೀವೇ ತುಪ್ಪ ಮಾಡುವುದು ಎಲ್ಲದಕ್ಕಿಂತ ಉತ್ತಮ.

ಗ್ರಾಹಕರೇ ರೈತರ ಹೆಸರಿನಲ್ಲಿ ಅಮಾಯಕರನ್ನು ಮೋಸ ಮಾಡುವ ಹಲವಾರು ಆನ್ ಲೈನ್  ವ್ಯವಹಾರಸ್ಥರು ಹುಟ್ಟಿಕೊಂಡಿದ್ದಾರೆ. ಇವರಿಗೆ ಸಂಪಾದನೆ ಆಗಬೇಕೆಂದು ನೀವು ಮೋಸ ಹೋಗಬೇಡಿ.  ಹಣ ಆಗಬೇಕಿದ್ದರೆ ಪ್ರಾಮಾಣಿಕವಾಗಿ ದುಡಿದು ಮಾಡಲಿ. ಇಂತಹ ಮೋಸದ ವ್ಯವಹಾರದ ಮೂಲಕ ಸಂಪಾದನೆ ಮಾಡುವುದು ಬೇಡ. ಅರಶಿನ ಬೇಕಿದ್ದರೆ ಒಂದೆರಡು ಗಿಡವನ್ನು ಕುಂಡದಲ್ಲಿ ನೆಡಿ. ತುಪ್ಪ ಬೇಕಿದ್ದರೆ ಅಂಗಡಿಯಿಂದ ತಂದು ಸ್ವಲ್ಪ ಕಾಯಿಸಿ ಬಳಸಿ.  ನಿಮ್ಮ ಪರಿಚಯಸ್ಥರು ಪ್ರಾಮಾಣಿಕವಾಗಿ ಕೊದುವವರಿದ್ದರೆ ಅವರಿಂದ ಕೊಳ್ಳಿ. ಗುರುತು ಪರಿಚಯವಿಲ್ಲದವರ ಸಹವಾಸ ಮಾಡಬೇಡಿ.

Leave a Reply

Your email address will not be published. Required fields are marked *

error: Content is protected !!