ಆಫ್ರಿಕನ್ ಬಸವನ ಹುಳುವಿನ ಅಪಾಯ-ನಿಯಂತ್ರಣ.

by | Aug 21, 2021 | Pest Control (ಕೀಟ ನಿಯಂತ್ರಣ) | 0 comments

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಆಫ್ರಿಕನ್ ಬಸವನ ಹುಳ Giant African Snail (Lissachatina fulica) ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರ ಹೊಲದಲ್ಲಿ, ಮನೆ, ಶೆಡ್ ಎಲ್ಲೆಂದರಲ್ಲಿ ಈ ಹುಳ ಹರಿದಾಡುವ ಸ್ಥಿತಿ ಉಂಟಾಗಿದೆ. ಹಿಡುದು ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತಲೇ ಇದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗದೆ ಕಂಗಾಲಾಗಿದ್ದಾರೆ ರೈತರು ಮತ್ತು ಇತರ ಜನ ಸಮುದಾಯ.

ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತುಕೊಳ್ಳುತ್ತದೆ.ಹಗಲು ನಾಲ್ಕು- ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ, ನೆಲದ ತುಂಬಾ ಇರುತ್ತವೆ.ಇವು ದೊಡ್ಡ ಗಾತ್ರದ  ಬಸವನ ಹುಳುಗಳು. ಇವು ಅಡಿಕೆ ಮರದ ಎಳೆ ಎಲೆಗಳನ್ನು ಮತ್ತು ಪಕ್ಕದಲ್ಲಿರುವ  ಇತರ ಗಿಡಗಳ ಎಳೆ ಎಲೆಗಳನ್ನು ತಿನ್ನುತ್ತವೆ.   ಅಡಿಕೆ ಮರಕ್ಕೆ ಭಾರೀ ಸುಳಿ ಕೊಳೆ ರೋಗಕ್ಕೂ ಇದು ಕಾರಣವಾಗುತ್ತಿದೆ.

 • ಜನ ಇವುಗಳನ್ನು  ಕಂಡಾಗಲೆಲ್ಲಾ ಹಿಡಿದು ಗೋಣಿ ಚೀಲದಲ್ಲಿ ತುಂಬಿ  ದೂರದ  ಒಯ್ದು ಬಿಸಾಡುತ್ತಾರೆ.
 • ಸಿಕ್ಕ ಸಿಕ್ಕ ಕೀಟ ನಾಶಕಗಳನ್ನು ಬಳಸಿ ನಾಶ ಮಾಡಲು ಸಾಹಸ ಪಡುತ್ತಿದ್ದಾರೆ.
ಆಫ್ರಿಕನ್ ಬಸವನ ಹುಳು
ಆಫ್ರಿಕನ್ ಬಸವನ ಹುಳು

ಬಸವನ ಹುಳು ಏನು:

 • ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಪ್ರಕೃತಿಯಲ್ಲಿ ಹುಟ್ಟಿಕೊಳ್ಳುವ ಮೃದು ಶರೀರದ ಜೀವಿಗಳೇ  ಬಸವನ ಹುಳು ,
 • ಕಪ್ಪೆ ಚಿಪ್ಪಿನ ಜೀವಿಗಳು, ಮುತ್ತಿನ ಚಿಪ್ಪಿನ ಜೀವಿಗಳು, ಶಂಖದ ಹುಳುಗಳು, ಕವಡೆ ಹುಳು ಮುಂತಾದ  ಹೆಸರುಂಟು.
 • ಇದು ಮೃದ್ವಂಗಿ  ಪ್ರಭೇದಕ್ಕೆ ಸೇರಿವೆ.
 • ಇವುಗಳು ಕೆಲವು ಮಣ್ಣಿನಲ್ಲಿ, ಕೆಲವು ನೀರಿನಲ್ಲಿಯೂ ಮತ್ತೆ ಕೆಲವು ಉಪ್ಪು ನೀರಿನಲ್ಲಿ ವಾಸಿಸುತ್ತವೆ.
 • ಚಿಪ್ಪು ಸಹಿತವಾಗಿ ಇರುವ  ಜೀವಿ ಬಸವನ ಹುಳು
 • ಚಿಪ್ಪು ರಹಿತವಾಗಿ ಇರುವಂತಹ ಹುಳುವಿಗೆ ಸಿಂಬಳದ ಹುಳ (Slug ) gray garden slug ಎಂದು ಹೆಸರು.
 • ಮಳೆಗಾಲದಲ್ಲಿ, ಮಂಜು ಬೀಳುವ ಚಳಿಗಾಲದಲ್ಲಿ ಇವುಗಳ ಸಂತಾನಾಭಿವೃದ್ಧಿ ಜಾಸ್ತಿ.
 • ಮಳೆಗಾಲ ಪ್ರಾರಂಭವಾಗುವಾಗಲೂ ಸಂಖ್ಯೆ ಹೆಚ್ಚಿಗೆಯಾಗುತ್ತವೆ. ನಿರುಪದ್ರವಿಯಂತೆ ಕಂಡರೂ ಇವುಗಳಿಂದ ತೊಂದರೆ ಇದೆ.
 • ಇವು ಸಸ್ಯದ  ಎಳೆ ಚಿಗುರು, ಹೂವು ಕಾಯಿಗಳನ್ನು  ಚೀಪಿ ರಸ ಹೀರುತ್ತವೆ ಮತ್ತು ಭಕ್ಷಿಸುತ್ತವೆ.
 • ಪ್ರಾದೇಶಿಕವಾಗಿ ಬೇರೆ ಬೇರೆ ಜಾತಿಯ  ಮೃದ್ವಂಗಿ ಹುಳುಗಳನ್ನು ಕಾಣಬಹುದು.
 • ಇವು ಕೇವಲ ಭಕ್ಷಕಗಳು ಮಾತ್ರವಲ್ಲ, ರೋಗ ವಾಹಕಗಳೂ ಆಗಿವೆ.
ಅಡಿಕೆ ಮರದ ಎಲೆ ತಿನ್ನುತ್ತಿರುವ ಶಂಖದ ಹುಳು
ಅಡಿಕೆ ಮರದ ಎಲೆ ತಿನ್ನುತ್ತಿರುವ ಶಂಖದ ಹುಳು

ಆಪ್ರಿಕನ್ ಬಸವನ ಹುಳುಗಳು:

 • ಇದು ನಮ್ಮ ದೇಶದ  ಮೂಲದ್ದಲ್ಲ. 
 • ಯಾರೋ ಒಬ್ಬ ಸಂಶೋಧಕ ಇದನ್ನು ಯಾವುದೋ ಅಧ್ಯಯನಕ್ಕಾಗಿ ಇಲ್ಲಿಗೆ ತಂದು ಈಗ ಎಲ್ಲರೂ ಇದರ ತೊಂದರೆಗೆ ಪಶ್ಚಾತ್ತಾಪ ಪಡುವಂತಾಗಿದೆ.
 • ಇದು ಬೆಳೆಗಳಿಗೆ ಭಾರೀ ತೊಂದರೆ  ಮಾಡುತ್ತದೆ.
 • ಎಲ್ಲೆಂದರಲ್ಲಿ ಅಡಗಿ ಕುಳಿತಿರುತ್ತದೆ.

ಹಾನಿ :

ಸತ್ತು ಹೋದ ಬಾಳೆ ಬುಡದಲ್ಲಿ ಇವು ಹೆಚ್ಚಾಗಿರುತ್ತವೆ
ಸತ್ತು ಹೋದ ಬಾಳೆ ಬುಡದಲ್ಲಿ ಇವು ಹೆಚ್ಚಾಗಿರುತ್ತವೆ
 • ಬಸವನ ಹುಳು ಮತ್ತು ಸಿಂಬಳದ ಹುಳುಗಳು ಬೆಳೆಗಳ ಎಳೆ ಎಲೆಗಳನ್ನು ಭಕ್ಷಿಸುತ್ತವೆ.
 • ಎಳೆ ಸಸಿಗಳ ಮೃದು ಕಾಂಡವನ್ನೂ ತಿನ್ನುತ್ತದೆ.
 • ಹೂವುಗಳನ್ನು ತಿಂದು  ಹಾನಿ ಮಾಡಿ ಫಸಲಿಗೆ ತೊಂದರೆ ಮಾಡುತ್ತದೆ.
 • ಹಣ್ಣು ಹಂಪಲಿನ ಸಿಪ್ಪೆಯ ಮೇಲೆ ಕುಳಿತು ಅಲ್ಲಿನ ಭಾಗವನ್ನು ತಿನ್ನುತ್ತವೆ.
 • ನೆಲಕ್ಕೆ ಹತ್ತಿರವಾಗಿ ಬೆಳೆಯುವ ಹಣ್ಣೂ ಹಂಪಲು ಗಿಡಗಳಿಗೆ ಇದರ ಹಾವಳಿ ಜಾಸ್ತಿ.
 • ಸ್ಟ್ರಾಬೆರ್ರಿ, ಟೊಮಾಟೋ, ಅನನಾಸು, ಬೆಂಡೆ, ಹತ್ತಿ , ಮುಂತಾದ ಹಲವಾರು ಬೆಳೆಗಳಿಗೆ ಭಾರೀ ಹಾನಿಮಾಡುತ್ತವೆ. 
 • ಎಳೆ ಪ್ರಾಯದ ಅಡಿಕೆ ಮರದ ಮೇಲೆ ಏರಿ ಅಲ್ಲಿ ಏಳೆ ಸಿಂಗಾರವನ್ನು ತಿನ್ನುವ ಮೂಲಕ  ಫಸಲು ಕಡಿಮೆಯಾಗುವಂತೆ ಮಾಡುತ್ತವೆ.
 • ಲಿಂಬೆ ಕಾಯಿ, ಪಪ್ಪಾಯಿ ಗಿಡ ಕಾಯಿಗಳ ರಸ ಹೀರಿ ತೊಂದರೆ ಮಾಡುತ್ತವೆ. 
 • ಆರೋಗ್ಯವಂತ  ಗಿಡ, ರೋಗ ಪೀಡಿತ ಗಿಡಗಳ ರಸ ಹೀರಿ ಪರಸ್ಪರ ರೋಗ ವರ್ಗಾವಣೆ ಮಾಡುತ್ತದೆ.
 • ಹೆಚ್ಚಾಗಿ ನಂಜಾಣು ರೋಗ(ವೈರಸ್) ಹೀಗೆ ಪ್ರಸಾರವಾಗುತ್ತದೆ.
ಈ ಬಸವನ ಹುಳು ಸುಳಿ ಕೊಳೆಗೆ ಕಾರಣವಾಗುತ್ತದೆ
ಈ ಬಸವನ ಹುಳು ಸುಳಿ ಕೊಳೆಗೆ ಕಾರಣವಾಗುತ್ತದೆ

ಹತೋಟಿ:

ಆಪ್ರಿಕನ್ ಬಸವನ ಹುಳದ ಹತೋಟಿಗೆ ಸಾಮೂಹಿಕ ನಿಯಂತ್ರಣ ಕ್ರಮವೇ ಆಗಬೇಕು. ಒಬ್ಬೊಬ್ಬ ಇದನ್ನು ನಿಯಂತ್ರಣ ಮಾಡಿದರೆ ಅದು ಯಾವ ಪ್ರತಿಫಲವನ್ನೂ ಕೊಡದು. ಊರಿನ ಜನ ವಾರಕ್ಕೊಮ್ಮೆ ಒಟ್ಟು ಸೇರಿ  ಅವುಗಳನ್ನು ತೋಟ, ರಸ್ತೆ ಬದಿ, ಎಲ್ಲೆಲ್ಲಾ ಅಡಗಿರುತ್ತವೆಯೋ ಅಲ್ಲೆಲ್ಲಾ ಹುಡುಕಿ ಹಿಡಿದು  ಬ್ಯಾರಲ್ ನಲ್ಲಿ ಉಪ್ಪು ನೀರು  ಮಾಡಿ ಅದಕ್ಕೆ ಹಾಕಿ  ಕೊಲ್ಲುವುದರಿಂದ ಮಾತ್ರ ಅದನ್ನು ಹತೋಟಿ ಮಾಡಲು ಸಾಧ್ಯ. ಪ್ರತೀಯೊಬ್ಬರ ಸಹಕಾರ ಇಲ್ಲವಾದರೆ  ಇದು ಕೃಷಿ ಇಲ್ಲದವರ ಮನೆಗೂ ಧಾಳಿ ಇಡಬಹುದು. ಬೆಡ್ ರೂಮಿಗೂ ಬರಬಹುದು.   ಯಾವ ವಿಷ ಸಿಂಪರಣೆಯಿಂದಲೂ ಇದನ್ನು ನಾಶ ಮಾಡಲು ಸಾಧವಿಲ್ಲ. ವಿಷವನ್ನು ಅನವಶ್ಯಕ ನೆಲಕ್ಕೆ ಸುರಿದು ವಾತಾವರಣ  ಮಾಲಿನ್ಯ ಮಾಡಿದಂತಾಗಬಹುದು.

ಸಿಂಬಳದ ಹುಳ
ಸಿಂಬಳದ ಹುಳ
 • ಸವನ ಹುಳು ಮತ್ತು ಸಿಂಬಳದ ಹುಳುಗಳು ನೆರಳಿರುವ, ಕೊಳೆಯುವ ವಸ್ತುಗಳಿರುವಲ್ಲಿ ಹೆಚ್ಚು.
 • ಮಳೆಗಾಲದಲ್ಲಿ ಹಾವಸೆಗಳೇ ಇದರ ಆಹಾರ.
 • ಬಾಳೆ ಬೆಳೆಯುವಲ್ಲಿ ಅಧಿಕವಾಗಿರುತ್ತವೆ.
 • ಗೋಡೆಯ ಸೆರೆಗಳಲ್ಲಿ ಕಳೆ ಹೆಚ್ಚು ಇರುವಲ್ಲಿಯೂ ಇರುತ್ತವೆ.
 • ಸಾಧ್ಯವಾದಷ್ಟು  ಹೆಕ್ಕಿ  ಅದನ್ನು ಶೇ. 10 ಸಾಂದ್ರತೆಯ ಉಪ್ಪು ನೀರಿನಲ್ಲಿ ಹಾಕಿ ನಾಶಮಾಡಬೇಕು.
 • ಮೊದಲು ದಿನಾಲೂ ಹೆಕ್ಕಿ ನಾಶಮಾಡಬೇಕು.
 • ಸಂಖ್ಯೆ ಕಡಿಮೆಯಾದ ನಂತರ ವಾರಕ್ಕೊಮ್ಮೆ ಹೆಕ್ಕಿದರೂ ಸಾಕು.
 • ಮದ್ಯಾಹ್ನದ ಮೇಲೆ ಅಥವಾ ಸಂಜೆ ಹೊತ್ತು  ಟಾರ್ಚ್ ಲೈಟ್ ಹಾಕಿ ಹೆಕ್ಕಿದರೆ ಹೆಚ್ಚು ಸಂಖ್ಯೆಯ ಹುಳು ಸಿಗುತ್ತದೆ ಮತ್ತು ಇದರಿಂದ  ನಿರ್ಮೂಲನೆ ಪರಿಣಾಮಕಾರಿಯಾಗುತ್ತದೆ.
 • ಹಗಲು ಹೊತ್ತು ಅವು ಎಲ್ಲಿ ಅಡಗಿರುತ್ತವೆ ಎಂಬುದನ್ನು ಪತ್ತೆ ಹಚ್ಚಬೇಕು.
 • ಸಾಧ್ಯವಾದಷ್ಟು ಅಲ್ಲಲ್ಲಿ ಗೋಣಿ ಚೀಲ ಮರದ ಹಲಗೆಯನ್ನು ಹಾಕಿ ಇಟ್ಟರೆ ಅದರ ಅಡಿ ಭಾಗದಲ್ಲಿ ಅವು ಸೇರಿಕೊಳ್ಳುತ್ತವೆ.
 • ಉಪ್ಪು , ತಾಮ್ರ ಮತ್ತು ಸುಣ್ಣ ಇದಕ್ಕೆ  ದೂರ. ಬಸವನ ಹುಳು ಮತ್ತು ಸಿಂಬಳದ ಹುಳುಗಳ  ಮೇಲೆ ಉಪ್ಪಿನ ದ್ರಾವಣ, ತಾಮ್ರದ ಸಲ್ಫೇಟ್‍ನ ದ್ರಾವಣ , ಸಾಬೂನಿನ ನೀರು ಅಥವಾ ಸುಣ್ಣ ಬಿದ್ದರೆ ಅದು ಉಸಿರಾಟ ಸಮಸ್ಯೆಗೊಳಪಟ್ಟು ಸಾಯಬಹುದು.
 • ಸತ್ತ  ಹುಳುಗಳನ್ನು ವಿಷಕಾರಿಯಲ್ಲದ ಕಾರಣ ಕಂಪೋಸ್ಟು ಗುಂಡಿಗೆ ಹಾಕಬಹುದು. ಇದರಲ್ಲಿ ಸಾರಜನಕದ ಅಂಶ ಇರುತ್ತದೆ.
  ಜೀವಿಗಳ ಅಭಿವೃದ್ದಿಗೆ ಅವಕಾಶವಾಗುವ ಸನ್ನಿವೇಶಗಳನ್ನು ಕಡಿಮೆ ಮಾಡಿ ಇದನ್ನು ಹತೋಟಿ ಮಾಡಬಹುದು.
ಚಿಪ್ಪಿನ ಸಿಂಬಳದ ಹುಳ
ಚಿಪ್ಪಿನ ಸಿಂಬಳದ ಹುಳ

ಟ್ರಾಪ್ ಗಳು:

 • ಹುಳುಗಳನ್ನು  ಆಕರ್ಷಣೆ ಮಾಡಲು ನಾವೇ  ಟ್ರಾಪ್‍ಗಳನ್ನು ಮಾಡಿಕೊಳ್ಳಬಹುದು.
 • ಇದರಿಂದ ಹುಳುಗಳನ್ನು  ನಾಶಮಾಡಲು ಅನುಕೂಲ.
 • ಮರದ ಹಲಗೆಗಳನ್ನು  ಓರೆಯಾಗಿ ಗೋಡೆಗೆ ತಾಗಿಸಿ  ಇಡುವುದು,  ಹೂ ಕುಂಡಗಳನ್ನು ಒಂದು ಬದಿ ಸ್ವಲ್ಪ ಎತ್ತಿ ಅಲ್ಲಲ್ಲಿ ಕವುಚಿ ಹಾಕಿದರೆ ಅಲ್ಲಿಗೆ ಹಗಲು ಹೊತ್ತು ಅವು ಅಡಗಿಕೊಳ್ಳಲು ಬರುತ್ತವೆ. 
 • ನಂತರ ಅವುಗಳನ್ನು ಹಿಡಿದು ನಾಶ ಮಾಡುವುದು ಸುಲಭ. ಪ್ಲಾಸ್ಟಿಕ್ ತೊಟ್ಟೆಯೊಳಗೆ ತುಂಬಿ ಗಾಳಿಯಾಡದಂತೆ  ಮೂರು ನಾಲ್ಕು ದಿನ ಮುಚ್ಚಿಟ್ಟರೆ ಅವು ಸಾಯುತ್ತದೆ.
 • ಅನಂತರ ಅದನ್ನು ಕಂಪೋಸ್ಟು   ಹಾಕಬಹುದು. ಸಕ್ಕರೆ ನೀರು ಮತ್ತು ಈಸ್ಟ್ ಮಿಶ್ರಣ ಮಾಡಿದ ಕಳಿತ ದ್ರಾವಣಕ್ಕೂ  ಈ ಹುಳುಗಳು ಆಕರ್ಷಿತವಾಗುತ್ತವೆ.
 • ಬೀಯರ್ ಗೂ ಇದು ಆಕರ್ಷಿತವಾಗುತ್ತದೆ. ಬಸವನ ಹುಳು ಮತ್ತು ಸಿಂಬಳದ ಹುಳು ಆಕರ್ಷಿಸುವ ಟ್ರಾಪ್ ಗಳು ಲಭ್ಯವಿದೆ.
 • ನೆಲಕ್ಕೆ  ಪ್ಲಾಸ್ಟಿಕ್ ಹೊದಿಕೆ ಹಾಕಿದರೆ  ಅದರೊಳಗೆ ಬಿಸಿ ಏರ್ಪಟ್ಟು  ಹುಳುವಿನ ಮೊಟ್ಟೆಗಳು ನಾಶವಾಗುತ್ತವೆ.
ಶಂಖದ ಬಸವನ ಹುಳದ ಓಡಾಟ

ಮರಮಟ್ಟಿನ ಬೆಳೆಗಳಿಗೆ  ಇವುಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಲು  ಸುಣ್ಣ ಮತ್ತು ಡೆಲ್ಟಾಮೆಥ್ರಿನ್ (Deltamethrin) ಪುಡಿಯನ್ನು  10 : 2 ಪ್ರಮಾಣದಲ್ಲಿ ಮಿಶ್ರಣ ಮಾಡಿ ಮರದ ಕಾಂಡಕ್ಕೆ  ಪೈಂಟ್‍ನಂತೆ ಲೇಪನ ಮಾಡಿದಂತೆ ಲೇಪಿಸಿದರೆ ಹುಳುಗಳು ಹರಿದು ಹೋಗಲು ಅನನುಕೂಲವಾಗುತ್ತದೆ. ಮರಗಳಲ್ಲಿ ನೆಲಕ್ಕೆ ಬಾಗಿದ ಗೆಲ್ಲುಗಳನ್ನು  ತೆಗೆಯಬೇಕು.

 • ರಾಸಾಯನಿಕವಾಗಿ ಹತೋಟಿ ಮಾಡಲು  ಮೆಟಾಲ್ಡಿಹೈಡ್, ಐರನ್‍ಫೋಸ್ಫೇಟ್‍ಗಳನ್ನು ಬಳಸಬಹುದು.
 • ಇದರಲ್ಲಿ  ಹುಳುಗಳು ಸಾಯುತ್ತವೆ. ಆದರೆ ಇದನ್ನು ತಿಂದ ಬೆಕ್ಕು  ನಾಯಿಗಳೂ ಸಾಯಬಹುದು.
 • ಕೈಗೆ ಗ್ಲೌಸ್ ಹಾಕಿ ಹಿಡಿದು ಕೊಲ್ಲುವುದು  ಉತ್ತಮ.

ಅನವಶ್ಯಕವಾಗಿ ಇವುಗಳನ್ನು ಕೊಲ್ಲಬೇಕಾಗಿಲ್ಲ. ಬೆಳೆಗಳಿಗೆ ಹಾನಿ ಮಾಡುತ್ತಿದ್ದು ತುಂಬಾ ನಷ್ಟವಾಗುತ್ತದೆ ಎಂದಾದರೆ ಮಾತ್ರ ಇದರ ನಾಶಕ್ಕೆ ಕ್ರಮ ಕೈಗೊಳ್ಳಬೇಕು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!