ಕೀಟಗಳ ಹಾವಳಿ ಹೆಚ್ಚುತ್ತಿರುವುದಕ್ಕೆ ಕಾರಣ ಏನು ಗೊತ್ತೇ?

ತರಹೇವಾರು ಸೌಂದರ್ಯದಕೀಟಗಳು

ಪ್ರತೀಯೊಬ್ಬ ಕೃಷಿಕನೂ ತಪ್ಪದೇ ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರ ಇದು. ರೈತರು ಕೀಟಗಳ ವಿರುದ್ಧ ಹೋರಾಡಲು ಕೀಟನಾಶಕಗಳ ಮೊರೆ ಹೋಗಿದ್ದಾರೆ. ಕೀಟನಾಶಕ ತಯಾರಕರು ರೈತರ ನೆರವಿಗೆ ಇದ್ದಾರೆ. ಕೀಟಗಳು ಪ್ರಾಭಲ್ಯ ಸಾಧಿಸುತ್ತಿವೆ.  ಇದಕ್ಕೆಲ್ಲಾ ಕಾರಣ ಎನು ಎಂಬುದು ಇಲ್ಲಿ ಹೇಳಲಿಚ್ಚಿಸುವ  ಮಹತ್ವದ ವಿಚಾರ.

ಕೀಟಗಳ ಸಂತತಿ ಹೆಚ್ಚುತ್ತಾ ಇದೆ. ಕೀಟನಾಶಕಗಳಿಗೆ ಅವು ನಿರೋಧಕ ಶಕ್ತಿ ಪಡೆಯುತ್ತಿವೆ. ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳೇ ಇಲ್ಲದಿದ್ದಾಗ ಈ ಕೀಟಗಳು ಎಲ್ಲಿದ್ದವು. ಇವು ಹೊಸತಾಗಿ ಸೃಷ್ಟಿಯಾದವುಗಳೇ ಎಂಬೆಲ್ಲಾ ಸಂದೇಹಗಳು ಬರಬಹುದು. ಕೀಟಗಳು ನಾವು ಬೆಳೆ ಬೆಳೆಸಲು ಪ್ರಾರಂಭಿಸುವುದಕ್ಕೂ ಮುಂಚೆಯೇ ಇದ್ದವು. ಕೀಟಗಳಿಗೆ ಬೆಳೆ ಮಾತ್ರ ಆಹಾರ ಅಲ್ಲ.  ಪ್ರಕೃತಿಯಲ್ಲಿರುವ ಹಸುರು ಎಲೆ ಬಿಡುವ ಸೊಪ್ಪುಗಳನ್ನೂ ಇವು ಭಕ್ಷಿಸುತ್ತವೆ. ಹಾಗೆಯೇ ಇನ್ನೂ ಅನೇಕ ಕೊಳೆ ತಿನಿಗಳನ್ನೂ ಇವು ಭಕ್ಷಿಸಿ ಬದುಕುತ್ತವೆ.

  • ಬೆಳೆಗಳು  ಅವುಗಳಿಗೆ ರುಚಿಕಟ್ಟಾದ ಆಹಾರವನ್ನು ಸುಲಭವಾಗಿ ಒದಗಿಸುತ್ತವೆ.
  • ಅವು ಸಿದ್ದ ಆಹಾರವಾಗಿಯೇ ಲಭ್ಯವಾಗುತ್ತವೆ.
  • ಆ ಕಾರಣಕ್ಕೆ ಅವು ಬೆಳೆಗಳಲ್ಲಿ ಆಶ್ರಯ ಪಡೆಯುತ್ತವೆ.
  • ಹಿಂದೆ ಜೀವ ಸರಪಳಿಯಲ್ಲಿ ಒಂದಕ್ಕೊಂದು  ವೈರುಧ್ಯವುಳ್ಳ ಜೀವಿಗಳ ಸಮತೋಲನ ಇತ್ತು.
  • ಪ್ರಾಕೃತಿಕವಾಗಿಯೋ , ಮಾನವಕೃತ ಕ್ರುತ್ಯಗಳಿಂದಲೋ ಅವುಗಳ ಸಮತೋಲನದ ಅಂತರ ಹೆಚ್ಚಾಗಿದ್ದು,
  • ಉಪಟಳ ಕೊಡುವ ಕೀಟಗಳ ಪ್ರಾಭಲ್ಯ ಹೆಚ್ಚಾಗಿದೆ. 
  • ಪ್ರಾಕೃತಿಕ ತೊಂದರೆಯನ್ನು ನಾವು ಸರಿಪಡಿಸುವುದು ಕಷ್ಟವಾದರೂ, ನಾವು ಮಾಡುವ ಕೃತ್ಯಗಳ ಬಗ್ಗೆ ಸ್ವಲ್ಪ ವಿವೇಕ ಇದ್ದರೆ ಇದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ಜೇಡರ ಬಲೆಯಲ್ಲಿ ಬಂದಿಯಾದ ಕೀಟ ಕಂಚುಗಾರ
ಜೇಡರ ಬಲೆಯಲ್ಲಿ ಬಂದಿಯಾದ ಕೀಟ ಕಂಚುಗಾರ

ಪ್ರಕೃತಿಯಲ್ಲಿ ಕಂಡು ಬರುವ ಕೌತುಕ:

  • ಒಮ್ಮೆ ಮಳೆ ಬಿಟ್ಟ ದಿನ ಟಾರ್ಚ್ ಲೈಟ್ ಮೂಲಕ ನೆಲಮಟ್ಟಕ್ಕೆ ಬೆಳಕು ಹರಿಸಿ ನೆಲವನ್ನು ಸೂಕ್ಷ್ಮವಾಗಿ ನೋಡಿ.
  • ನೆಲದಲ್ಲಿ ಅಲ್ಲಲ್ಲಿ ಹೊಳೆಯುವ ವಜ್ರಗಳು ಕಾಣಿಸುತ್ತದೆ.
  • ವಜ್ರವನ್ನು ಹೆಕ್ಕಲು ಅದೇ ದಿಕ್ಕಿಗೆ ಟಾರ್ಚ್ ಲೈಟ್ ಬಿಟ್ಟು ಮುಂದೆ ಮುಂದೆ ಹೋಗಿ.
  • ಕೊನೆಗೆ ನಿಮಗೆ ಸಿಗುವುದು ಒಂದು ಜೇಡ.
  • ಈ ಜೇಡ ತನ್ನ  ದೇಹದ  ಮೂಲಕ  ಬೆಳಕನ್ನು ಹರಿಸುತ್ತಾ ಎಲೆಯ ಮೇಲೆಯೋ ಸಣ್ಣ ಕಲ್ಲಿನ ಮೇಲೆಯೋ  ಕುಳಿತು ಹೊಂಚು ಹಾಕುತ್ತಿರುತ್ತದೆ.
  • ಇದು ಯಾಕೆ ಹೊಂಚು ಹಾಕುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮಸಿದರೆ ನಿಮಗೆ ಹಲವು ವಿಚಾರಗಳು ಅರಿವಿಗೆ ಬರುತ್ತದೆ.
  • ಇನ್ನೂ ಕೆಲವು ಬೆಳಕಿನ ಬೆನ್ನು ಹತ್ತಿ ಹೋದರೆ ನಿಮ್ಮ ಟಾರ್ಚ್ ಲೈಟ್ ಬೆಳಕು ಸಣ್ಣ ತೂತಿನ ಕಡೆಗೆ ಕೊನೆಗೊಳ್ಳುತ್ತದೆ.
  • ಅಲ್ಲಿ ನಿಮಗೆ ಏನೂ ಕಾಣಿಸುವುದಿಲ್ಲ. ತೂತಿನ ದ್ವಾರ ಸ್ವಲ್ಪ  ಸವೆದಂತೆ ಕಾಣುತ್ತದೆ.
  • ಹಾಗೆಯೇ ಸ್ವಲ್ಪ ಹೊತ್ತು ಟಾರ್ಚ್ ಬೆಳಕು ಹಾಕದೆ ಕಾದು ಕುಳಿತುಕೊಳ್ಳಿ.
  • ಮತ್ತೆ ಬೆಳಕು ಹರಿಸಿದರೆ ಪಕ್ಕನೆ ಒಂದು ಜೇಡ ತೂತಿನ ದ್ವಾರದ ಮೂಲಕ ಒಳ ಸೇರುತ್ತದೆ.
  • ಇವೆಲ್ಲವೂ ತಮ್ಮ ಆಹಾರಕ್ಕಾಗಿ ಯಾವುದಾದರೂ ಕೀಟವನ್ನು ಬೆಳಕಿನ ಮೂಲಕ ಆಕರ್ಷಿಸಿ ಹೊಂಚು ಹಾಕುವ  ಕ್ರಮ.
  • ಬೆಳಗ್ಗಿನ ಹೊತ್ತು ಚೆನ್ನಾಗಿ ಬಿಸಿಲು ಬೀಳುವ ಮುನ್ನ ಒಮ್ಮೆ ನಿಮ್ಮ ಹೊಲದಲ್ಲಿ ಓಡಾಡಿ.
  • ನೆಲದಲ್ಲೆಲ್ಲಾ ಜೇಡರ ಬಲೆಗಳು ಕಾಣಸಿಗುತ್ತವೆ. ಇವು ಕೆಲಸ ಇಲ್ಲದಕ್ಕೆ ಹೀಗೆ ಬಲೆ ಹೆಣೆದಿಲ್ಲ.
  • ನೆಲಮಟ್ಟದಲ್ಲಿ  ಹಾರಾಡುವ , ನಡೆದಾಡುವ ಕೆಲವು ಕೀಟಗಳನ್ನು ಹೊಂಚು ಹಾಕಿ ಭಕ್ಷಿಸಲಿಕ್ಕಾಗಿ ಈ ಬಲೆಯ ಬೋನು ಹಾಕಿ ಕುಳಿತಿರುತ್ತದೆ.
  • ರಾತ್ರೆ ಹೊತ್ತು ಮಿಂಚು ಹುಳದಂತೆ ಜೇಡಗಳು ಹೊಂಚು ಹಾಕುತ್ತಾ ಕುಳಿತುಕೊಳ್ಳುವುದು ಹುಳ ಹುಪ್ಪಟೆಗಳನ್ನು ಭಕ್ಷಿಸಲು ಎಂಬುದು ಎಲ್ಲಾ ಕೃಷಿಕರಿಗೆ ತಿಳಿದಿರಬೇಕು.
  • ಮರದಿಂದ ಮರಕ್ಕೆ ಬಲೆ ಹೆಣೆದು ಹೊಂಚು ಹಾಕುವ ಜೇಡಗಳು ಅದೆಷ್ಟೊ ಹಾರುವ ಕೀಟಗಳನ್ನು ಬಂಧಿಸುತ್ತವೆ.
ಜೇಡರ ಬಲೆಯಲ್ಲಿ ಬಂದಿಯಾದ ಪತಂಗ
ಜೇಡರ ಬಲೆಯಲ್ಲಿ ಬಂದಿಯಾದ ಪತಂಗ

ಇಂದು ಏನಾಗುತ್ತಿದೆ?

  • ಕೀಟ ನಾಶಕಗಳ ಅವೈಜ್ಞಾನಿಕ ಬಳಕೆ ನಮ್ಮಲ್ಲಿ ಹೆಚ್ಚುತ್ತಿದೆ.
  • ಕೀಟನಾಶಕಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಕೆ ಮಾಡಬೇಕು.
  • ಅದಕ್ಕೆ ಒಂದು ನಿರ್ದಿಷ್ಟ ಪ್ರಮಾಣ ಇದೆ.
  • ಬಹುತೇಕ ರೈತರು ಪ್ರಮಾಣವನ್ನು ಆನುಸರಿಸದೆ ಬಾಟಲಿ ಪೂರ್ತಿ ಅಥವಾ ಅಂದಾಜಿನಲ್ಲಿ ಮಿಶ್ರಣ  ಮಾಡಿ ಸಿಂಪರಣೆ  ಮಾಡುತ್ತಾರೆ.
  • ಇದರಿಂದಾಗಿ ತೊಂದರೆ ಕೊಡುವ ಕೀಟಗಳ ಜೊತೆಗೆ ಅವುಗಳ ನೈಸರ್ಗಿಕ ವೈರಿಗಳೂ ನಾಶವಾಗುತ್ತವೆ.
  • ಉಪಟಳ ನೀಡುವ ಕೀಟಗಳಿಗಿಂತ ಉಪಕಾರೀ ಕೀಟಗಳು ಬೇಗ ನಾಶವಾಗುವುದು ಪ್ರಕೃತಿಯಲ್ಲಿ ವಿಶೇಷ.
  • ಇದು ಈಗ ಆದ ಜ್ವಲಂತ ಸಮಸ್ಯೆ.
  • ಉದಾಹರಣೆಗೆ ಕಾಗೆಗಳು ಕಡಿಮೆಯಾದ ಕಾರಣ ಈಗ ಕೀಟಗಳನ್ನು ಹೆಕ್ಕಿ ತಿನ್ನುವ ಒಂದು ಜೀವಿ ಕಡಿಮೆಯಾಯಿತು.
  • ಭತ್ತ , ರಾಗಿ, ಜೋಳ ಮುಂತಾದ  ಧವಸ ಧಾನ್ಯದ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದಾಗ ಅವುಗಳನ್ನು ತಿನ್ನುವ  ಹಕ್ಕಿಗಳ ಮೊಟ್ಟೆಯ ಸಿಪ್ಪೆ ತೆಳುವಾಗಿ ಅವು ಹುಟ್ಟದೆಯೇ ಇರುವ ಸಾಧ್ಯತೆ ಹೆಚ್ಚಾಗಿದೆ. 
  • ಇದು ನಮ್ಮ ಪ್ರಾಕೃತಿಕ ಅಸಮತೋಲನವನ್ನು ಸೂಚಿಸುತ್ತದೆ.
  • ಕೀಟನಾಶಕ ಒಂದೇ ಅಲ್ಲ ಇನ್ನೂ ಕೆಲವು ಕಾರಣಗಳಿಂದ ಒಂದನ್ನೊಂದು ತಿನ್ನುವ ಜೀವಿಗಳು ಕ್ಷೀಣಿಸುತ್ತಿವೆ.
  • ಪರಭಕ್ಷಕಗಳು ಎಂದು ಗುರುತಿಸಲ್ಪಟ್ಟ ಹಲವಾರು ಜೀವಿಗಳು ಈಗ ಕ್ಷೀಣಿಸುತ್ತಿವೆ.
  • ಇದು ಕೃಷಿಕರಿಗೆ ಅತಿ ದೊಡ್ಡ ತೊಂದರೆಯಾಗಿ ಪರಿಣಮಿಸಲಿದೆ.
ಬಲೆ
ನೆಲದ ಬಲೆ

ರೈತರು ಏನು ಮಾಡಬೇಕು:

  • ರೈತರು ಬೇರೆಯವರಿಗಾಗಿ ತಮ್ಮ ಕೃಷಿ ಕ್ರಮದಲ್ಲಿ ಬದಲಾವಣೆ ಮಾಡುವುದಲ್ಲ. 
  • ತಮ್ಮ ತಮ್ಮ ಲಾಭಕ್ಕಾಗಿಯೇ ಮಾಡಬೇಕು.
  • ಕೀಟನಾಶಕ ಸ್ಟ್ರಾಂಗ್ ಇದ್ದರೆ ಕೀಟದ ಸಂತಾನ ನಶಿಸುತ್ತದೆ ಎಂದು ನಾವು ತಿಳಿಯುವುದು ತಪ್ಪು.
  • ಕೀಟನಾಶಕ ನಮ್ಮ ಬೆಳೆ ಉಳಿಸಲು ನೆರವಾಗುತ್ತದೆ ಎಂದು ಸಾಂಪ್ರದಾಯಿಕ ಕೀಟ ನಿಯಂತ್ರಣ ಮಾಡುವ ಬೇಸಾಯ ಕ್ರಮಗಳನ್ನು ಬಿಡಬಾರದು.
  • ಭತ್ತದ ಬೇಸಾಯ ಮಾಡುವಾಗ ಹೊಲದ ಸುತ್ತಮುತ್ತ ಎಲ್ಲೆಂದರಲ್ಲಿ ಹುಲ್ಲು, ಕಳೆ ಸಸ್ಯಗಳನ್ನು ಬೆಳೆಯಲು ಬಿಟ್ಟರೆ ನಾವು ವಾರಕ್ಕೊಮ್ಮೆ ಕೀಟನಾಶಕ ಸಿಂಪಡಿಸಿ ರಸ ಹೀರುವ ಬಂಬು ಕೀಟವನ್ನು ನಿಯಂತ್ರಿಸಬೇಕಾದೀತು.
  • ಹೊಲದಲ್ಲಿ ಕಳೆಗಳನ್ನು ಬೆಳೆಯಲು ಬಿಡದೇ ಇದ್ದರೆ ಈ ಕೀಟಗಳು ಹೆಚ್ಚಳವಾಗುವುದಿಲ್ಲ.
  • ಒಂದು ಸಲ ಅಥವಾ ಎರಡು ಸಲ ಕೀಟನಾಶಕ ಅಗತ್ಯವಾದರೆ ಸಿಂಪಡಿಸಿದರೆ ಸಾಕಾಗುತ್ತದೆ.
  • ಪ್ರಭಲ ಕೀಟನಾಶಕಗಳೂ ಬೇಕಾಗುವುದಿಲ್ಲ.
  • ಕೀಟಗಳನ್ನು ಬಾರದಂತೆ ಪ್ರಾರಂಭಿಕ ಹಂತದಲ್ಲಿ ತಡೆಯುವ ಕೃಷಿ ಕ್ರಮವನ್ನು ಅನುಸರಿಸಬೇಕು.
  • ಎಷ್ಟು ಕೀಟನಾಶಕ ಸಿಂಪರಣೆ ಉಳಿಸುತ್ತೇವೆಯೋ ಅಷ್ಟು ನಮಗೆ ಕೃಷಿ ಲಾಭದಾಯಕವಾಗುತ್ತದೆ.
  • ಆಧುನಿಕ ಕೀಟ ಆಕರ್ಷಣೆಯ ಉಪಾಯಗಳಾದ ಅಂಟಿನ ಬಲೆ, ಬಲೆ ಬೆಳೆ, ಜೀವಾಣುಗಳ ಬಳಕೆ ಮಾಡಿ ಸಾಧ್ಯವಾದಷ್ತೂ ಕೀಟನಾಶಕಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.
  • ಇಂದು ಕೀಟ ನಾಶಕಗಳ  ಅವೈಜ್ಞಾನಿಕ ಬಳಕೆಯಿಂದಾಗಿಯೇ ಸಮಸ್ತ ಕೃಷಿಗೆ ಆತಂಕ ಉಂಟಾಗಿರುವುದು.

ಕೀಟನಾಶಕ ಸಿಂಪಡಿಸುವಾಗ ಕೀಟಗಳು ಎಲ್ಲಿ ಇರುತ್ತದೆಯೋ ಆ ಭಾಗಕ್ಕೆ ಸಿಂಪರಣೆ  ಮಾಡಬೇಕು. 99% ರೈತರು ಇದನ್ನು ಪಾಲಿಸುತ್ತಿಲ್ಲ. ಬಹುತೇಕ ಕೀಟಗಳು ಎಲೆ ಅಡಿ ಭಾಗದಲ್ಲಿ ವಾಸಿಸುತ್ತದೆ. ಅಲ್ಲಿಗೆ ಸಿಂಪರಣೆ ಮಾಡುವುದರಿಂದ ಅನವಶ್ಯಕ ಕೀಟನಾಶಕ ಬಳಸಿ ಮಾಲಿನ್ಯ ಉಂಟಾಗುವುದಿಲ್ಲ.

  • ಖಾಲಿ ಸ್ಥಳಗಳಲ್ಲಿ ಕೆಲವು ಹೂವು ಹಣ್ಣು  ಹಂಪಲು ಸಸ್ಯಗಳನ್ನು ಜೀವ ಜಂತುಗಳಿಗೆ ಭಕ್ಷಿಸಲು ಅನುಕೂಲ ಆಗುವಂತೆ ನೆಟ್ಟು ಬೆಳೆಸಿ.
  • ಹೊಲದಲ್ಲಿ  ಎಷ್ಟು ಹೆಚ್ಚು  ಜೇಡರ ಬಲೆಗಳಿರುತ್ತದೆಯೋ ಅಷ್ಟೂ ಒಳ್ಳೆಯದು. 
  • ಅನವಶ್ಯಕ ಕತ್ತಲೆ ಹೊತ್ತು ಪ್ರಭಲ ಬೆಳಕಿನ ದೀಪಗಳನ್ನು ಬೆಳಗಿ  ಎಲ್ಲಾ ನಮೂನೆಯ ಕೀಟಗಳನ್ನೂ ಕೊಲ್ಲಬೇಡಿ.
  • ಕೀಟಗಳು ಸಂತಾನಾಭಿವೃದ್ಧಿಯಾಗುವ ಕೊಳೆತ ತರಕಾರಿ, ಹಣ್ಣು ಹಂಪಲುಗಳನ್ನು ಹೊಲದಲ್ಲಿ ಎಸೆಯಬೇಡಿ.
  • ಅದನ್ನು ತೆಗೆದು ಸುಟ್ಟು ಮೊಟ್ತೆ ಮರಿಗಳನ್ನು ನಾಶ ಮಾಡಬೇಕು.
ಬಲೆಯಲ್ಲಿ ಬಂದಿಯಾದ ಕುರುವಾಯಿ ಕೀಟ
ಬಲೆಯಲ್ಲಿ ಬಂದಿಯಾದ ಕುರುವಾಯಿ ಕೀಟ

ಅಂತರ್ ವ್ಯಾಪೀ ಕೀಟನಾಶಕಗಳ ಬಳಕೆ ಕಡಿಮೆ ಮಾಡಿ:

  • ಇಂದು ರೈತರು ಅಂತರ್ ವ್ಯಾಪೀ Systemic insecticides) ಕೀಟನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ  ಮಾಡಲು ಪ್ರಾರಂಭಿಸಿರುವುದು ಒಂದು ದೊಡ್ಡ ದುರಂತ.
  • ಅಂತರ್ ವ್ಯಾಪೀ ಕೀಟನಾಶಕಗಳನ್ನು   ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು.
  • ಪ್ರಮಾಣ ಹೆಚ್ಚು ಮಾಡುವುದು ಮಾಡಿದರೆ ಕೀಟಗಳಿಗೆ ನಿರೋಧಕ ಶಕ್ತಿ ಬರುತ್ತದೆ.
  • ಇಂದು ಹಳೆಯ ಅಂತರ್ ವ್ಯಾಪೀ ಕೀಟನಾಶಕಗಳು ಕೆಲಸ ಮಾಡದೆ ಇರುವುದಕ್ಕೆ ಕಾರಣವೇ ಇದು.
  • ಪ್ರಾರಂಭಿಕ ಹಂತದಲ್ಲಿ ಕಡಿಮೆ ವಿಷಕಾರಿತ್ವ ಹೊಂದಿದ ಸ್ಪರ್ಶ ಕೀಟನಾಶಕಗಳನ್ನು ಬಳಸಿ ಕೀಟಗಳನ್ನು ಹದ್ದುಬಸ್ತಿನಲ್ಲಿಟ್ಟರೆ ಅವು  ಸಂಖ್ಯಾಭಿವೃದ್ದಿ ಹೊಂದುವುದಿಲ್ಲ.
  • ಮೊದಲ ಹಂತದಲ್ಲೇ  ಪ್ರಭಲ ಕೀಟನಾಶಕ ಬಳಕೆ ಮಾಡಿದರೆ ಮತ್ತೆ ಕೀಟ ಉಲ್ಬಣಿಸಿದರೆ ಆ ಕೀಟನಾಶಕ ಫಲಿತಾಂಶ ಕೊಡುವುದಿಲ್ಲ.
  • ಕೀಟನಾಶಕಗಳಲ್ಲಿ ಸ್ಪರ್ಶ ಕೀಟನಾಶಕಗಳಿಗೆ ನಿರೋಧಕ ಶಕ್ತಿ ಬರುವುದು ಕಡಿಮೆ.
  • ಇದರ ಬೆಲೆಯೂ ಕಡಿಮೆ ಇರುತ್ತದೆ.
  • ಅಂತರ್ ವ್ಯಾಪೀ ಕೀಟನಾಶಕಗಳ ಬೆಲೆ ಅಧಿಕವಿರುತ್ತದೆ.
  • ಹೊಸ ತಲೆಮಾರಿನ ಔಷಧಿಗಳಂತೂ ಬಹಳ ದುಬಾರಿಯಾಗಿರುತ್ತವೆ.

ನಮ್ಮ ರೈತರಿಗೆ ತಿಳುವಳಿಕೆ ಕೊಡುವುದು ಕಡಿಮೆಯಾಗಿದೆ. ಯಾವುದೇ ರೈತನೂ ಉದ್ದೇಶಪೂರ್ವಕವಾಗಿ  ಕೀಟನಾಶಕ ಬಳಕೆ ಮಾಡುವುದಿಲ್ಲ.ಅನಿವಾರ್ಯಕ್ಕೆ ಮಾತ್ರ. ಅವರಿಗೆ ಯಾವ ಸಮಯದಲ್ಲಿ ಹೇಗೆ  ಕೀಟನಾಶಕ ಬಳಕೆ ಮಾಡಬೇಕು ಎಂಬುದನ್ನು ಮನವರಿಕೆಯಾಗುವಂತೆ ತಿಳಿಸಿಕೊಟ್ಟರೆ ಅವರು ಖಂಡಿತವಾಗಿಯೂ  ಪರಿವರ್ತನೆ ಹೊಂದುತ್ತಾರೆ. ಈಗಿನ ಕ್ರಮದಲ್ಲೇ ನಾವು ಮುಂದುವರಿದರೆ ನಮ್ಮ ಉದ್ದಾರ ಆಗುವುದಿಲ್ಲ. ಕೀಟನಾಶಕ ತಯಾರಕರ , ಮಾರಾಟಗಾರರ ಉದ್ದಾರ ಆಗುತ್ತದೆ.

Leave a Reply

Your email address will not be published. Required fields are marked *

error: Content is protected !!