ಸಾರಜನಕ – ಸಸ್ಯ ಬೆಳವಣಿಗೆಯ ಟಾನಿಕ್.

ಸಮತೋಲನ ಗೊಬ್ಬರ ಕೊಟ್ಟ ಮರದ ಲಕ್ಷಣ

ಬೆಳೆಗಳ ಪೋಷಣೆಗೆ ಪ್ರಮುಖ ಆಹಾರವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಷ್ ಎಂಬ ಮೂರು ಪೋಷಕಗಳು ಬೇಕು. ಇದನ್ನು ರಾಸಾಯನಿಕ ಮೂಲದಲ್ಲೂ, ನೈಸರ್ಗಿಕ ಮೂಲದಲ್ಲೂ ಪಡೆಯಬಹುದು. ಸಾರಜನಕ ಯಾವುದೇ ಮೂಲದ್ದು ಇರಲಿ, ಅದನ್ನು ಸಸ್ಯಕ್ಕೆ ಬೇಕಾದಷ್ಟು ಬಳಕೆ ಮಾಡಿದರೆ ಅದು ಟಾನಿಕ್. ಇಲ್ಲವಾದರೆ ಇದು ಹಾನಿಕರ.

  • ಸಸ್ಯ ಬೆಳವಣಿಗೆಗೆ ಸುಮಾರು 64 ಪೋಷಕಾಂಶಗಳು ಬೇಕಾಗುತ್ತವೆ.
  • ಅದರಲ್ಲಿ ಬಹುಸಂಖ್ಯೆಯ ಪೋಷಕಗಳು ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ಇರುತ್ತವೆ.
  • ಆಯ್ದ ಸುಮಾರು 16  ಪೋಷಕಾಂಶಗಳು  ಅಗತ್ಯವಾಗಿ ಬೇಕಾಗುತ್ತವೆ.
  • ಅದರಲ್ಲಿ ಅಗ್ರ ಫಂಕ್ತಿಯದ್ದು ಸಾರಜನಕ.
  • ನಮಗೆಲ್ಲಾ ಗೊತ್ತಿರುವ NPK ಯಲ್ಲಿ ಮೊದಲಿನ N ( Nitrogen) ಇದೇ ಸಾರಜನಕ.

ಸಾರಜನಕ ಹೆಚ್ಚಾದಾಗ ಗರಿಗಳಿಗೆ ಶಕ್ತಿ ಕಡಿಮೆಯಾಗುತ್ತದೆ.

ಸಾರಜನಕ ಯಾಕೆ ಬೇಕು?

  • ಸಾರಜನಕ ಎಂಬ ಸಸ್ಯ ಅಹಾರವು ಸಸ್ಯಗಳ  ಗಾತ್ರ ಹೆಚ್ಚಿಸುವಂತವುಗಳು.
  • ಸಾರಜನಕ ಬೇಕಾದಷ್ಟು ದೊರೆತಾಗ ಸಸ್ಯಗಳು ದಷ್ಟ ಪುಷ್ಟವಾಗಿ ಬೆಳೆಯುತ್ತವೆ.
  • ಎಲೆಗಳು ಹೆಚ್ಚುತ್ತವೆ. ಕಾಳುಗಳು – ಕಾಯಿಗಳು ದೊಡ್ಡದಾಗುತ್ತವೆ.
  • ಎಲೆಗಳು ಸಸ್ಯದ ಉಸಿರಾಟ ದ ಅಂಗ.
  • ಈ ಎಲೆಗಳು ಸಮರ್ಪಕವಾಗಿ ಉಸಿರಾಟ ನಡೆಸಬೇಕಾದರೆ ಅದಕ್ಕೆ ಆಹಾರವಾಗಿ  ಬೆಂಬಲವಾಗಿ ಸಾರಜನಕ ಅಂಶ ಬೇಕಾಗುತ್ತದೆ.
  • ಸಸ್ಯಗಳ ಕೋಶಿಕಾ ಕೇಂದ್ರ, ನ್ಯೂಕ್ಲಿಯೋಪ್ರೊಟೀನು ಮತ್ತು ಅನೇಕ ಬಗೆಯ ಕಿಣ್ವಗಳು ಮತ್ತು ಪ್ರಚೋದಕಗಳು  ಹಾಗೂ ವಿಟಮಿನ್ ಗಳು ಕಾರ್ಯ ನಿರ್ವಹಿಸಬೇಕಾದರೆ ಸಾರಜನಕ ಅಂಶ ಬೇಕೇ ಬೇಕು.
  • ಸಾರಜನಕ ಎಂಬುದು ಸಸ್ಯ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಸಸ್ಯದ ಶರೀರದ ಬೆಳವಣಿಗೆಯನ್ನು ನಿರ್ಧರಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
  • ಇದನ್ನು ಸಸ್ಯ ಜೀವ ದ್ರವ್ಯ ಎಂದು ಕರೆಯುತ್ತಾರೆ.
  • ಬೆಳೆಗಳಿಗೆ ಸಾರಜನಕ ಗೊಬ್ಬರ ದೊರೆತಾಗ ಅವು ಉಳಿದ ಪೋಷಕಗಳಾದ ರಂಜಕ, ಪೊಟ್ಯಾಶ್ , ಕ್ಯಾಲ್ಸಿಯಂ ಪೋಷಕಗಳನ್ನು ಸರಿಯಾಗಿ ಸೇವಿಸುತ್ತದೆ.
  • ಒಟ್ಟಿನಲ್ಲಿ ದಷ್ಟ ಪುಷ್ಟವಾದ ಮನುಷ್ಯ ಹೇಗೆ ಇರುತ್ತಾನೆಯೋ ಅದೇ ತರಹ ಸಸ್ಯ ಇರಬೇಕಾದರೆ ಅದಕ್ಕೆ ಸಾರಜನಕ ಪೋಷಕ ಅಗತ್ಯ.

ಒಂದು ಸಸ್ಯ ಪುಷ್ಟವಾಗಿರಬೇಕಿದ್ದರೆ ಅದಕ್ಕೆ  ಸಾರಜನಕ ಬೇಕು. ಅದು ಇದ್ದರೆ ಜೊತೆಗೆ ಬೇರೆ ಪೋಷಕಗಳ ಬಳಕೆಯೂ ಉತ್ತಮವಾಗುತ್ತದೆ.

  • ಮಾರುಕಟ್ಟೆಯಲ್ಲಿ ದೊರೆಯುವ ಗೊಬ್ಬರದಲ್ಲಿ ನಮೂದಾಗಿರುವ NPK ಯ ಕೆಳಗೆ ನಮೂದಾಗಿರುವುದು ಅದರಲ್ಲಿ ಇರುವ ಸಾರಜನಕದ ಪ್ರಮಾಣ.

ಸಾರಜನಕ ಹೆಚ್ಚಾದರೆ ಏನಾಗುತ್ತದೆ:

ಸಾರಜನಕದ ಕೊರತೆಯ ಒಂದು ಲಕ್ಷಣ
ಸಾರಜನಕದ ಕೊರತೆಯ ಒಂದು ಲಕ್ಷಣ
  • ಒಂದು ಗೊಬ್ಬರದ ರಾಶಿಯ ಸಮೀಪದಲ್ಲಿ ಅಥವಾ ರಾಶಿಯಲ್ಲೇ ಒಂದು ಗಿಡ ಇದ್ದರೆ ಅದು  ಬಹಳ ಚೆನ್ನಾಗಿ ಬೆಳೆಯುತ್ತದೆ.
  • ಆದರೆ ಬೆಳೆದದ್ದಕ್ಕೆ ಸರಿಯಾಗಿ ಫಸಲು ಇರುವುದಿಲ್ಲ. ಭತ್ತದ ಗದ್ದೆಯಲ್ಲಿ ಎಲ್ಲೆಲ್ಲಿ ಗೊಬ್ಬರದ ರಾಶಿ ಹಾಕಲಾಗಿದೆಯೋ ಅಲ್ಲಿ ಪೈರು ಚೆನ್ನಾಗಿ ಬೆಳೆಯುತ್ತದೆ.
  • ಆದರೆ ಫಸಲಿಲ್ಲ. ಕಾರಣ ಅಲ್ಲೆಲ್ಲಾ ಸಾರಜನಕ ಹೆಚ್ಚಾಗಿದೆ.
  • ಸಾರಜನಕ ಎಂಬ ಪೋಷಕವು ಎಷ್ಟು ಪ್ರಮಾಣದಲ್ಲಿ ಸಸ್ಯಗಳು ಸ್ವೀಕರಿಸಲು ಸಾಮರ್ಥ್ಯ ಇದೆಯೋ ಅಷ್ಟು ಮಾತ್ರ ಕೊಡಬೇಕು.
  • ಅತಿಯಾದರೆ ಅದು ವೈಪರೀತ್ಯದ ಬೆಳೆವಣಿಗೆಯನ್ನು ಉಂಟು ಮಾಡುತ್ತದೆ.
  • ಹೆಚ್ಚು ಸಾರಜನಕ ಪೂರೈಕೆಯಾದಾಗ ಎಲೆ, ಕಾಂಡದ ಬೆಳವಣಿಗೆಯೇ ಮುಂದುವರಿದು, ಹೂವಾದರೂ ಕಾಯಿ ಕಚ್ಚಿಕೊಳ್ಳಲಾರದು.

ಕಾಯಿಗಳು ಉದುರುವುದು, ಬೆಳೆಗಳು ಬೇಗ ರೋಗ ರುಜಿನಗಳಿಗೆ ತುತ್ತಾಗುವುದು, ಎಲೆಗಳು ಶಕ್ತಿ ಕುಂದಿ ಮೃದುವಾಗುವುದು, ಬಿಸಿಲಿನ ಝಳವನ್ನು ಸಹಿಸಿಕೊಳ್ಳದೇ ಇರುವುದು, ಮರ/ ಸಸ್ಯಕ್ಕೆ ಶಕ್ತಿ ಇಲ್ಲದಾಗುವುದು ಸಾರಜನಕ ಹೆಚ್ಚಾದ ಲಕ್ಷಣ.

ಕೊರತೆಯ ಲಕ್ಷಣ:

  • ಹೆಚ್ಚು ಆಮ್ಲೀಯವಾದ ಮಣ್ಣಿನಲ್ಲಿ ಸಾರಜನಕದ ಕೊರತೆ ಉಂಟಾಗಬಹುದು.
  • ಅಂತಹ ಕಡೆ ಬೆಳೆದ ಸಸ್ಯಗಳು ಗಿಡ್ಡವಾಗುತ್ತವೆ. ಹರಿತ್ತು ಕಡಿಮೆಯಾಗುತ್ತದೆ.
  • ಸಸ್ಯಗಳು ಹಳದಿಯಾಗಿ ಕಾಣುತ್ತವೆ. ಸಸ್ಯದ ಕೆಳಭಾಗದ ಎಲೆಗಳು ಮೊದಲಿಗೆ ಈ ಲಕ್ಷಣವನ್ನು ತೋರಿಸುತ್ತದೆ.
  • ಕೆಳಭಾಗದ ಎಲೆಗಳು ಮೊದಲಿಗೆ ಹಳದಿಯಾದರೆ ಅಲ್ಲಿ ಸಾರಜನಕದ ಕೊರತೆ ಇದೆ ಎಂದು ತಿಳಿಯಬಹುದು.
  • ಎಲೆಗಳ ದಂಟು ಹಸುರಾಗಿದ್ದು, ಅಲಗುಗಳು ಹಳದಿಯಾಗಿ ಅಥವಾ ತಿಳಿ ಹಸುರಾಗಿ ಇದ್ದರೆ ಅದು ಸಾರಜನಕ ಕೊರತೆಯ ಸೂಚಕ.
ಸಾರಜನಕದ ಕೊರತೆಯ ಸಸಿ ಲಕ್ಷಣ
ಸಾರಜನಕದ ಕೊರತೆಯ ಸಸಿ ಲಕ್ಷಣ

ಭತ್ತ, ಗೋಧಿ, ರಾಗಿ, ಕಬ್ಬು  ಮುಂತಾದ  ಬೆಳೆಗಳು ಗಿಡ್ಡವಾಗಿದ್ದು, ತಿಳಿ ಹಸುರು ಬಣ್ಣದ ಎಲೆಗಳನ್ನು ಹೊಂದಿದ್ದರೆ ಅಲ್ಲಿ ಸಾರಜನಕ ಕಡಿಮೆಯಾಗಿದೆ.

  • ಗಿಡದ ಬೆಳವಣಿಗೆ ಕುಂಠಿತ ಮತ್ತು ಹೂ ಬರುವಿಕೆ ಮತ್ತು ಹೂ ಗೊಂಚಲಿನ ಉದ್ದ ಕಡಿಮೆಯಾದರೆ ಸಾರಜನಕ ಕೊರತೆಯಾಗಿದೆ.
  • ಸಾರಜನಕ ಕೊರತೆಯಾದರೆ ಸಸ್ಯ ಬೆಳವಣಿಗೆ, ಎಲೆ ಬೆಳವಣಿಗೆ ಮತ್ತು ಹೂ ಗೊಂಚಲು ಗಿಡ್ಡವಾಗುತ್ತದೆ.
  • ಸರಳವಾಗಿ ಹೇಳಬೇಕಾದರೆ ಎಲೆಗಳು  ತುಂಬಾ ಹಚ್ಚ ಹಸುರುರಾಗಿ ಇದ್ದರೆ ಸಾರಜನಕ ಚೆನ್ನಾಗಿ ದೊರೆತಿದೆ ಎಂದರ್ಥ.

ಸಾರಜನಕ ಹೆಚ್ಚಾದ ಪರಿಣಾಮ:

ಸಾರಜನಕದ ಹೆಚ್ಚಾದಾಗ ಗರಿಗಳು ತುಂಡಾಗಿ ಬೀಳುತ್ತದೆ
ಸಾರಜನಕದ ಹೆಚ್ಚಾದಾಗ ಗರಿಗಳು ತುಂಡಾಗಿ ಬೀಳುತ್ತದೆ
  • ಭತ್ತದ ಗದ್ದೆಯಲ್ಲಿ ಗೊಬ್ಬರ ಹಾಕಿದ ಸ್ಥಳದಲ್ಲಿ ಪೈರು ಸ್ವಲ್ಪ ಎತ್ತರವಾಗಿ ಬೆಳೆಯುತ್ತದೆ.
  • ಅದು ಎದ್ದು ಕಾಣುತ್ತದೆ. ಅಲ್ಲಿ ಫಸಲು ಇರುವುದಿಲ್ಲ. ಇದು ಸಾರಜನಕ ಹೆಚ್ಚಾದ ಪರಿಣಾಮ.
  • ಕೆಲವು ಅಡಿಕೆ ಮರಗಳ ಗರಿಗಳು ಬುಡದಿಂದ ಮುರಿದು ಬೀಳುತ್ತವೆ. ಇದು ಸಾರಜನಕ ಹೆಚ್ಚಾದ  ಪರಿಣಾಮ.
  • ದೊಡ್ಡ ದೊಡ್ದ ಎಲೆಗಳು, ಅವುಗಳಿಗೆ ಶಕ್ತಿ ಕಡಿಮೆ ಇದ್ದು, ಜೋತು ಬೀಳುವುದು, ಮುರಿದು ಬೀಳುವುದು, ಕಾಂಡದ ಅತಿಯಾದ ದಪ್ಪ, ಇವೆಲ್ಲಾ ಸಾರಜನಕ ಹೆಚ್ಚಾದ  ಲಕ್ಷಣಗಳು.
  • ತೆಂಗಿನ ಮರದ ಶಿರಭಾಗ ಲಕ್ಷಣವಾಗಿರುತ್ತದೆ. ಗರಿಗಳು ಉದ್ದ ಇರುತ್ತವೆ.
  • ಹಚ್ಚ ಹಸುರಾಗಿರುತ್ತವೆ. ಹೂ ಗೊಂಚಲಿನಲ್ಲಿ  ಮಿಡಿಗಳು ಇದ್ದರೂ ಹೆಚ್ಚಿನವು ಬಿದ್ದು ಹೋಗಿ ಉಳಿಯುವುದು ನಾಲ್ಕಾರು ಮಾತ್ರ  ಇದು ಸಾರಜನಕ ಹೆಚ್ಚಾದ ಪರಿಣಾಮ.
  • ತರಕಾರಿ ಬೆಳೆಗಳಲ್ಲಿ ಫಸಲು ಚೆನ್ನಾಗಿರುತ್ತದೆ. ಆದರೆ ರುಚಿ ಇಲ್ಲದಿರುವುದು ಸಾರಜನಕ ಹೆಚ್ಚಾದ ಪರಿಣಾಮ.
  • ತರಕಾರಿ ಅಥವಾ ಇನ್ಯಾವುದೇ ಫಸಲು ಬೇಗ ಕೆಡುವುದು ಸಾರಜನಕ ಹೆಚ್ಚಾದ ಪರಿಣಾಮ.

ಸಸ್ಯಗಳು ಹಚ್ಚ ಹಸುರಾಗಿ ಇರಬೇಕು. ಆಗ ಸಾರಜನಕ  ಲಭ್ಯವಾಗಿದೆ ಎಂದರ್ಥ. ವೈಪರೀತ್ಯದ ಬೆಳವಣಿಗೆ, ಅತಿಯಾದ ದಪ್ಪ, ಎಲೆ , ದಂಟು ಫಲಗಳಲ್ಲಿ ಅಸಹಜತೆ ಕಂಡು ಬಂದರೆ ಸಾರಜಕ ಹೆಚ್ಚಾಗಿದೆ. ಹೆಚ್ಚಾದಾಗ ಉಳಿದ ಪೊಷಕಗಳನ್ನು ಕೊಟ್ಟು ಸಮತೋಲನ ಮಾಡಬೇಕು. ಮತ್ತೆ ಮತ್ತೆ ಕೊಡಬಾರದು.

ಭತ್ತಕ್ಕೆ ಸಾರಜನಕ ಹೆಚ್ಚಾದ ಲಕ್ಷಣ
ಭತ್ತಕ್ಕೆ ಸಾರಜನಕ ಹೆಚ್ಚಾದ ಲಕ್ಷಣ

ಸರಿಯಾದ ಪ್ರಮಾಣದಲ್ಲಿ ಸಾರಜನಕವನ್ನು ಬಳಕೆ ಮಾಡಬೇಕು. ಸಾರಜನಕ ಎಂಬುದು ಅವಿಯಾಗುವ ಗುಣ ಪಡೆದ ಪೋಷಕಾಂಶ. ಅದು ರಾಸಾಯನಿಕ ಮೂಲದ್ದು  ಇರಲಿ, ಸಾವಯವ ಮೂಲದ್ದು ಇರಲಿ, ವಾತಾವರಣದಲ್ಲಿ ಅದು ಅಮೋನಿಯಾ ರೂಪದಲ್ಲಿ ( ವಾಸನೆ) ಗಾಳಿಗೆ ಸೇರಿ ನಷ್ಟವಾಗುತ್ತದೆ.

ಒಂದು ಬೆಳೆಗೆ ಇಷ್ಟೇ ಪ್ರಮಾಣದಲ್ಲಿ ಸಾರಜನಕ ಕೊಡಬೇಕು ಎಂಬುದಾಗಿ ಶಿಫಾರಸು ಇರುತ್ತದೆ. ಇದರಿಂದ ಹೆಚ್ಚು ಕೊಡಬಾರದು. ಉಳಿದ ಪೋಷಕಗಳನ್ನು ಕೊಟ್ಟಾಗ ಮಾತ್ರ ಸಾರಜನಕದ ಫಲಿತಾಂಶ ಫಲಪ್ರದವಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!