ಸಾರಜನಕ ಒದಗಿಸಬಲ್ಲ ಗೊಬ್ಬರಗಳ ಮಾಹಿತಿ.

ಯೂರಿಯಾ ಸಾರಜನಕ ಗೊಬ್ಬರ

ಸಾರಜನಕ ಎಂಬ ಪೋಷಕವು  ನೈಸರ್ಗಿಕವಾಗಿ ಸಾವಯವ ವಸ್ತುಗಳು ಕಳಿತಾಗ ಮಣ್ಣಿಗೆ ಆಮ್ಲ ರೂಪದಲ್ಲಿ ಸೇರಿಕೊಳ್ಳುತ್ತದೆ. ವಾತಾವರಣದಲ್ಲಿ ಇರುವ ಸಾರಜನಕವನ್ನು ಸಸ್ಯಗಳು ಹೀರಿಕೊಂಡು ತಮ್ಮ ಬೇರುಗಳಲ್ಲಿ ಸಂಗ್ರಹಿಸಿ ಮಣ್ಣಿಗೆ ಲಭ್ಯವಾಗುವಂತೆ ಮಾಡುತ್ತವೆ. ಇನ್ನು ಹಲವಾರು ಬೆಳೆ ಉಳಿಕೆಗಳಲ್ಲಿ ಸಾರಜನಕ ಅಂಶ ಇರುತ್ತದೆ. ಇದರಿಂದ ಕೊರತೆಯಾಗುವ ಸಾರಜನಕವನ್ನು ಒದಗಿಸಲು ರಾಸಾಯನಿಕ ಮೂಲದಲ್ಲಿ ಬೇರೆ ಬೇರೆ ಗೊಬ್ಬರಗಳು ಇವೆ.

 • ಸಾರಜನಕ ಎಂಬ ಪೋಷಕವು ಮಳೆ- ಸಿಡಿಲು, ಮಿಂಚುಗಳಿಂದ ಮಣ್ಣಿಗೆ ಲಭ್ಯವಾಗುತ್ತದೆ.
 • ಇದನ್ನು ಬಳಸಿಕೊಂಡು ಕೆಳದರ್ಜೆಯ ಸಸ್ಯಗಳು( ಹಾವಸೆ, ಹುಲ್ಲು ಇತ್ಯಾದಿ) ಮಳೆಗಾಲ ಬಂದಾಕ್ಷಣ ಜೀವ ಪಡೆದುಕೊಳ್ಳುತ್ತದೆ.
 • ಇವೆಲ್ಲಾ ಸತ್ತು ಮತ್ತೆ ಮಣ್ಣಿಗೆ ಸಾರಜನಕ ಸೇರಿಕೊಳ್ಳುತ್ತದೆ.

ಇದು ಬೆಳೆಗಳ ಅವಶ್ಯಕತೆಗೆ ಸಾಲದ ಕಾರಣಕ್ಕೆ ರಾಸಾಯನಿಕ ಮೂಲದಲ್ಲಿ ಸಾರಜನಕವನ್ನು ಉತ್ಪಾದಿಸಲಾಗುತ್ತದೆ. ಇದು ಒಂದು ಸಿದ್ದ ರೂಪದ ಸಾರಜನಕ ಪೋಷಕವಾಗಿರುತ್ತದೆ.

ರಾಸಾಯನಿಕ ಸಾರಜನಕ ಗೊಬ್ಬರಗಳು:

 • ಮೊತ್ತ ಮೊದಲಾಗಿ ಸೋಡಿಯಂ ನೈಟ್ರೇಟ್ ಎಂಬ ಸಾರಜನಕ ಗೊಬ್ಬರ ಇತ್ತು. ಇದು ಅಮೇರಿಕಾದ ಚಿಲಿಯ ಪ್ರಾಕೃತಿಕ ಗಣಿಯಿಂದ ತೆಗೆದ ವಸ್ತು. ಅದು ನಂತರ ನಿಂತು ಹೋಗಿದೆ.
 • ಈಗ ಮಾರುಕಟ್ಟೆಯಲ್ಲಿ  ಬದಲಿ ಗೊಬ್ಬರವಾಗಿ  ಅಮೋನಿಯಾ ರೂಪದ, ನೈಟ್ರೇಟ್ ರೂಪದ, ಇವೆರಡೂ ಸೇರಿರುವ ಮತ್ತು ಅಮೈಡ್ ರೂಪದ ನಾಲ್ಕು ಬಗೆಯ ಸಾರಜನಕ ಗೊಬ್ಬರಗಳು ಲಭ್ಯವಿದೆ.
 • ಅಮೋನಿಯಾ ರೂಪದ   ಗೊಬ್ಬರಕ್ಕೆ ಸ್ವಲ್ಪ ವಾಸನೆ ಇರುತ್ತದೆ. ಇದು ಗಾಳಿಗೆ ಆವಿಯಾಗುವುದು ಹೆಚ್ಚು.
 • ನೈಟ್ರೇಟ್ ರೂಪದಕ್ಕೆ  ಅಂತಹ ವಾಸನೆಯನ್ನು ಹೊಂದಿಲ್ಲ. ಇದು ಬೇರೆ ಸಂಯುಕ್ತದ ಜೊತೆಗೆ ಸೇರಿರುವ ಕಾರಣ ಆವೀಕರಣ ನಿಧಾನ.
 • ಅಮೋನಿಯಾ ಮತ್ತು ನೈಟ್ರೇಟ್ ರೂಪದಲ್ಲಿರುವ  ಗೊಬ್ಬರಗಳು ಅಮೋನಿಯಾ ರೂಪದ ಮತ್ತು ನೈಟ್ರೇಟ್ ರೂಪದ ಸಾರಜನಕವನ್ನು ಹೊಂದಿರುತ್ತದೆ.
 • ಅಮೈಡ್ ರೂಪದ  ಗೊಬ್ಬರಗಳು ವಾಸನೆಯನ್ನು ಹೊಂದಿರುವುದಿಲ್ಲ. ಇದರಲ್ಲಿ ಉಳಿದ ಗೊಬ್ಬರಕ್ಕಿಂತ ಹೆಚ್ಚು ಸಾರಜನಕ ಇರುತ್ತದೆ. ಇದುವೇ ವ್ಯಾಪಕವಾಗಿ ಸಾರಜನಕ ಗೊಬ್ಬರವಾಗಿ ಬಳಕೆಯಲ್ಲಿದೆ.

ಅಮೋನಿಯಾ ರೂಪದ ಸಾರಜನಕ ಗೊಬ್ಬರಗಳು:

 •  ಅಮೋನಿಯಂ ಸಲ್ಫೇಟ್; 
 • ಇದರಲ್ಲಿ ಸಾರಜನಕ ಮತ್ತು ಗಂಧಕ ಇದ್ದು, ಸಾರಜನಕ 20% ಮತ್ತು ಗಂಧಕ 24%  ಇರುತ್ತದೆ.
 • ಇದು ತ್ವರಿತವಾಗಿ ಸಸ್ಯಗಳಿಗೆ ಲಭ್ಯವಾಗುತ್ತದೆ.
 • ಹೆಚ್ಚು ಸಮಯ ದಾಸ್ತಾನು ಇಡಬಹುದಾದ ಗೊಬ್ಬರ.
 • ಮಣ್ಣಿಗೆ ಇದನ್ನು ನಿರಂತರ ಬಳಸಿದರೆ ಆಮ್ಲೀಯ ಸ್ಥಿತಿ ಹೆಚ್ಚುತ್ತದೆ.
 • ಇದರ ಒಂದು ಗುಣ ಎಂದರೆ ಸೋರಿ ಹೋಗಿ ನಷ್ಟವಾಗುವುದಿಲ್ಲ.

ಅಮೋನಿಯಂ ಸಲ್ಫೆಟ್

ಅಮೋನಿಯಂ ಫೋಸ್ಫೇಟ್ 12:61:0 ಎಂಬುದು ಇದರಲ್ಲೇ ಸೇರಿದ್ದರೂ ಇದನ್ನು ರಂಜಕ ಗೊಬ್ಬರವಾಗಿ ಬಳಕೆ ಮಾಡಲಾಗುತ್ತದೆ.
ಅಮೋನಿಯಂ ಕ್ಲೋರೈಡ್;

 • ಇದರಲ್ಲಿ ಎಲ್ಲಾ ಸಾರಜನಕವೂ ಅಮೋನಿಯಾ ರೂಪದಲ್ಲಿ ಇರುತ್ತದೆ.
 • ಇದರಲ್ಲಿ 26% ಸಾರಜನಕ 66% ಕ್ಲೋರಿನ್ ಇರುತ್ತದೆ.
 • ಕೆಲವು ಬೆಳೆಗಳಿಗೆ ( ಟೊಮಾಟೋ, ತಂಬಾಕು) ಇದು ವರ್ಜ್ಯ.
 • ಎಣ್ಣೆ ಕಾಳು ಬೆಳೆಗಳಾದ ತೆಂಗು, ತಾಳೆ, ಕೆಲವು ಹಣ್ಣಿನ ಬೆಳೆಗಳಿಗೆ ಇದು ಉತ್ತಮ.
 • ಆಮ್ಲೀಯ ಮಣ್ಣಿಗೆ ಇದು ಸೂಕ್ತ ಗೊಬ್ಬರ ಅಲ್ಲ. ಭತ್ತದ ಬೆಳೆಗೆ ಇದು ಉತ್ತಮ ಗೊಬ್ಬರ.

ನೈಟ್ರೇಟ್ ರೂಪದ ಸಾರಜನಕ ಗೊಬ್ಬರಗಳು :

 • ಸೋಡಿಯಂ ನೈಟ್ರೇಟ್ ಇದು ಆಮ್ಲ ಮಣ್ಣಿಗೆ ಹೊಂದುವ ಗೊಬ್ಬರ.
 • ಇದರಲ್ಲಿ 16 %  ಸಾರಜನಕ ಇರುತ್ತದೆ.
 • ಕ್ಷಾರ ಮಣ್ಣಿನಲ್ಲಿ ಇದನ್ನು ಉಪಯೋಗಿಸಿದರೆ ಅದು ಮತ್ತಷ್ಟು ಕ್ಷಾರವಾಗುತ್ತದೆ.
 • ಸೋಡಿಯಂ ನೈಟ್ರೇಟ್ ನಲ್ಲಿ ಬೋರಾನ್, ಮ್ಯಾಂಗನೀಸ್ ಮತ್ತು ಅಯೋಡಿನ್ ಸಹ ಇರುತ್ತದೆ.

ಕ್ಯಾಲ್ಸಿಯಂ ನೈಟ್ರೇಟ್ :

ಕ್ಯಾಲ್ಸಿಯಮ್ ನೈಟ್ರೇಟ್
ಕ್ಯಾಲ್ಸಿಯಮ್ ನೈಟ್ರೇಟ್
 • ಇದರಲ್ಲಿ ಕ್ಯಾಲ್ಸಿಯಂ ಮತ್ತು ಸಾರಜನಕ ಇರುತ್ತದೆ.
 • ಸಾರಜನಕ ಅಂಶ 15.5% ಮತ್ತು ಕ್ಯಾಲ್ಸಿಯಂ 19% ಇರುತ್ತದೆ.
 • ಇದನ್ನು ಬೆಳೆಗಳ ಸಾರಜನಕ ಅವಶ್ಯಕತೆಗಿಂತಲೂ ಹೆಚ್ಚಾಗಿ ಸುಣ್ಣದ ಅವಶ್ಯಕತೆಗಾಗಿ ಬಳಕೆ ಮಾಡುತ್ತಾರೆ.
 • ಇದರ ಸಾರಜನಕ ತ್ವರಿತವಾಗಿ ಲಭ್ಯವಾಗುತ್ತದೆ.
 • ಪೊಟ್ಯಾಶಿಯಂ ನೈಟ್ರೇಟ್ 13:0:45 ಸಹ ನೈಟ್ರೇಟ್ ರೂಪದ ಪೋಷಕವಾಗಿದೆ.
 • ಇದನ್ನು ಪೊಟ್ಯಾಶಿಯಂ ಗೊಬ್ಬರವಾಗಿ ಬಳಕೆ ಮಾಡುತ್ತಾರೆ.

ಅಮೋನಿಯಾ ಮತ್ತು ನೈಟ್ರೇಟುಗಳ ಸಾರಜನಕ:

ಅಮೋನಿಯಂ ಸಲ್ಫೇಟ್ ನೈಟ್ರೇಟ್ :

 • ಇದರಲ್ಲಿ ಸಾರಜನಕ 26%  ಗಂಧಕ 15%  ಇರುತ್ತದೆ. ಇದು ಗುಳಿಗೆ ರೂಪದ ಗೊಬ್ಬರ.
 • ಇದು ಆಮ್ಲೀಯ ಮಣ್ಣಿಗೆ ಸೂಕ್ತವಾದ ಗೊಬ್ಬರ ಅಲ್ಲ. ಅದರೂ ಅಮೋನಿಯಂ ಸಲ್ಫೇಟ್ ಗಿಂತ ಕಡಿಮೆ ಆಮ್ಲಕಾರಕ. ನೀರಿನಲ್ಲಿ ಕರಗುತ್ತದೆ.

ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ :

 • ಇದು ಸಾರಜನಕ ಗೊಬ್ಬರವಾಗಿದ್ದರೂ ಸಹ ಇದರಲ್ಲಿ 20.5% ಸಾರಜನಕ, 13% ನೈಟ್ರೇಟ್ ಮತ್ತು 6 % ಕ್ಯಾಲ್ಸಿಯಂ  ಇರುತ್ತದೆ.
 •  ಸುಲಭವಾಗಿ ಸಸ್ಯಗಳಿಗೆ ಬಳಕೆಯಾಗುತ್ತದೆ.  ಬೂದಿ ಬಣ್ಣದ ಗುಳಿಗೆ ರೂಪದಲ್ಲಿ ಇರುತ್ತದೆ.
 • ನೈಟ್ರೇಟ್ ರೂಪದ ಸಾರಜನಕ ತ್ವರಿತವಾಗಿಯೂ, ಅಮೋನಿಯಾ ರೂಪದ ಸಾರಜನಕ ನಿಧಾನಗತಿಯಲ್ಲಿಯೂ ಸಸ್ಯಗಳಿಗೆ ಲಭ್ಯವಾಗುತ್ತದೆ.
 • ಸುಣ್ಣ ಕನಿಷ್ಟ ಪ್ರಮಾಣದಲ್ಲಿ ಇರುವ ಕಾರಣ ಇದನ್ನು ಸಸ್ಯಗಳ ಜೀವ ಕೋಶಗಳಿಗೆ ಬೇಕಾಗುವ ಸುಣ್ಣದ ಅವಶ್ಯಕತೆಗೆ ಸಾಕು. ಮಣ್ಣಿನ ಪಿಎಚ್ ಸರಿಪಡಿಸಲು ಸಾಲದು.

ಅಮೋನಿಯಂ ನೈಟ್ರೇಟ್:

ಅಮೋನಿಯಂ ನೈಟ್ರೇಟ್
ಅಮೋನಿಯಂ ನೈಟ್ರೇಟ್
 • ಇದರಲ್ಲಿ   32-33 % ಸಾರಜನಕ ಹೊಂದಿದ ಸಾರಜನಕ ಗೊಬ್ಬರ. ಅಧಿಕ ಸಾರಜನಕ ಇದೆ.
 • ಅರ್ಧ ಭಾಗ ಅಮೋನಿಯಾ ರೂಪದಲ್ಲೂ, ಉಳಿದರ್ಧ ನೈಟ್ರೇಟ್ ರೂಪದಲ್ಲೂ ಇರುತ್ತದೆ.
 • ಗೊಬ್ಬರವು ಗಟ್ಟಿಯಾಗುತ್ತದೆ. ಇದು ಸ್ಪೋಟಕವಾದ ಕಾರಣ ಇದಕ್ಕೆ ಲೇಪನ ಮಾಡಿರುತ್ತಾರೆ.

ಅಮೈಡ್ ರೂಪದ ಸಾರಜನಕ:

ಯೂರಿಯಾ:

 • ಇದು ನಮ್ಮೆಲ್ಲರ ಚಿರ ಪರಿಚಿತ ಸಾರಜನಕ ಗೊಬ್ಬರ.
 • ಬಿಳಿಯ ಸ್ಪಟಿಕ ರೂಪದಲ್ಲಿದ್ದು, 44 -46% ಸಾರಜನಕ ಇರುತ್ತದೆ.
 • ಇದನ್ನು ಅಮೋನಿಯಾ ಹಾಗೂ ಇಂಗಾಲದ ಡೈಆಕ್ಸೈಡ್  ಪ್ರಕ್ರಿಯೆಯಿಂದ ಹೆಚ್ಚು ಒತ್ತಡ ಹಾಗೂ ಉಷ್ಣತೆಗೊಳಪಡಿಸಿ ತಯಾರಿಸುತ್ತಾರೆ.
 • ಇದು ಪೂರ್ತಿಯಾಗಿ ನೀರಿನಲ್ಲಿ ಕರಗುತ್ತದೆ. ಇದನ್ನು ಸಸ್ಯಗಳು ನೇರವಾಗಿ ಸ್ವೀಕರಿಸುತ್ತವೆ.
 • ಎಲೆಗಳೂ ಸ್ವೀಕರಿಸುತ್ತದೆ. ಮಣ್ಣಿಗೆ ಹಾಕಿದಾಗ 7 ದಿನಗಳಲ್ಲಿ ನೈಟ್ರೇಟ್ ರೂಪಕ್ಕೆ ಪರಿವರ್ತನೆ ಅಗಿ ಸಸ್ಯಗಳಿಗೆ ದೊರೆಯುತ್ತದೆ.
 • ಇದು ಕಡಿಮೆ ಆಮ್ಲಕಾರಕ. ಸಿಂಪರಣೆ ರೂಪದಲ್ಲಿ ಬಳಕೆ ಮಾಡಬಹುದು.ತೇವಾಂಶ ಹೀರಿಕೊಳ್ಳುವ ಗೊಬ್ಬರ.

ಸಾರಜನಕ ಒದಗಿಸುವ ಯೂರಿಯಾ ಹೊರತಾದ  ಹೆಚ್ಚಿನ ಇತರ ಗೊಬ್ಬರಗಳು ವಿಶೇಷ ಗೊಬ್ಬರಗಳಾಗಿದ್ದು, ಕೆಲವು ಬೆಳೆ ಮತ್ತು ಕೆಲವು ಮಣ್ಣುಗಳಿಗೆ ಮಾತ್ರ ಬಳಕೆ ಮಾಡಬೇಕು. ಯಾವ  ಬೆಳೆಗೆ , ಯಾವ ಪ್ರದೇಶಕ್ಕೆ ಇದು ಅಗತ್ಯವೋ ಅಲ್ಲಿ ಮಾತ್ರ ಬಳಕೆ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!