ಕುರಿ – ಕೋಳಿ ಗೊಬ್ಬರ ಸದ್ಯಕ್ಕೆ ಬಳಸಬೇಡಿ. ಎಲೆ ಚುಕ್ಕೆಗೆ ಇದೂ ಕಾರಣವಾಗಬಹುದು

by | Nov 10, 2022 | Manure (ಫೋಷಕಾಂಶ) | 0 comments

ಕರಾವಳಿ ಮಲೆನಾಡಿನಲ್ಲಿ ಈಗ ಕೊಟ್ಟಿಗೆ ಗೊಬ್ಬರದ ಬದಲಿಗೆ ಕುರಿ ಗೊಬ್ಬರ, ಕೋಳಿ ಗೊಬ್ಬರ ಬಳಕೆ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಗೊಬ್ಬರವನ್ನು ಬಳಕೆ ಮಾಡದೆ ಇರುವುದು ಒಳ್ಳೆಯದು. ಎಲೆ ಚುಕ್ಕೆ ರೋಗ ಬರೇ ಅಡಿಕೆಗೆ ಮಾತ್ರವಲ್ಲ, ಬೇರೆ ಬೇರೆ ಬೆಳೆಗೂ ಬರುತ್ತದೆ. ಅದು ಸಸ್ಯ ಶೇಷಗಳ ಮೂಲಕ ಪ್ರದೇಶದಿಂದ ಪ್ರದೇಶಕ್ಕೆ ಹರಡುವ ಸಾಧ್ಯತೆ ಇದೆ.

ರೋಗಗಳು , ಕೀಟಗಳು ಪ್ರದೇಶದಿಂದ ಪ್ರದೇಶಕ್ಕೆ ಹರಡುದಕ್ಕೆ ಹಲವಾರು ಕಾರಣಗಳಿವೆ. ಸಸ್ಯ ಸಾಮಾಗ್ರಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಅದರ ಮೂಲಕ ಇವು ಪ್ರಸಾರವಾಗುತ್ತದೆ. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವಾಗ ಅದು ಅದರ ಮೂಲಕವೂ ಪ್ರಸಾರವಾಗುತ್ತದೆ. ರೈತರು ಬೆಳೆದ ಉತ್ಪನ್ನವನ್ನು ಸಾಗಾಣಿಕೆ ಮಾಡುವಾಗ ಗಾಯಗಳಾಗದಂತೆ ಕೆಲವು ಎಲೆ ಇತ್ಯಾದಿಗಳನ್ನು ಹಾಕಿ ಸಾಗಿಸುವುದು ನಮಗೆಲ್ಲಾ ಗೊತ್ತಿದೆ. ಇಂತಹ ಎಲೆಗಳನ್ನು ಮಾರಾಟದ ನಂತರ ಎಲ್ಲಿಯಾದರೂ ದಾರಿಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದಲೂ ರೋಗಗಳು ಪ್ರಸಾರವಾಗುತ್ತದೆ. ಇದಲ್ಲದೆ ಬೇರೆ ಬೇರೆ ಬೆಳೆಗಳಲ್ಲಿರುವ ರೋಗ , ಕೀಟಗಳು ಗೊಬ್ಬರ ಮುಂತಾದ ಬೆಳೆ ಒಳಸುರಿಗಳ ಮೂಲಕವೂ ಪ್ರಸಾರವಾಗುತ್ತದೆ.ಹಾಗಾಗಿ ಜಾಗರೂಕತೆಯಲ್ಲಿ ಇದನ್ನೆಲ್ಲಾ ಮಾಡಬೇಕು.

ಬಾಳೆಗೆ ಎಲೆ ಸುರುಳಿಕಟ್ಟುವ ಒಂದು ಹುಳದ ಬಾಧೆ (ಕೀಟ) ಪ್ರಾರಂಭವಾದದ್ದು ನಮಗೆಲ್ಲಾ ಗೊತ್ತು. ಇದು ಒಮ್ಮೆ ಬೆಳೆಗಾರರಲ್ಲಿ ಭಾರೀ ಗೊಂದಲವನ್ನು ಉಂಟು ಮಾಡಿತು. ಎಲ್ಲಿಂದ ಬಂತಪ್ಪಾ ಈ ಕೀಟ ಎಂದು ಅಚ್ಚರಿಪಟ್ಟರು. ಆದರೆ ಅದು ಹಕ್ಕಿಗಳ ಮೂಲಕ ಭಕ್ಷಿಸಲ್ಪಟ್ಟು ಹೇಗೆ ಬಂತೋ ಹಾಗೆಯೇ ಕಡಿಮೆಯೂ ಆಯಿತು.  ಇದು ಎಲ್ಲಿಂದ ಬಂತು ಎಂದು ವಿಚಾರ ಮಾಡಿದಾಗ ಎಲ್ಲೋ ಇದ್ದ ಈ ಕೀಟ ಬಾಳೆ ಗೊನೆ ಸಾಗಿಸುವಾಗ ಅದರ ಜೊತೆಗೆ ಪ್ಯಾಕಿಂಗ್ ಮಾಡಲು ಬಳಸಿದ ಎಲೆಗಳ ಮೂಲಕ ಬಂದಿರಬಹುದು ಎಂದು ತಿಳಿಯಲಾಗಿತ್ತು.ತೆಂಗಿನ ಮರಗಳಿಗೆ ಹಿಂದೊಮ್ಮೆ ಕಪ್ಪುತಲೆ ಕಂಬಳಿ ಹುಳ ಬಂತು . ಇದೂ ಸಹ ಹೀಗೆಯೇ ಬಂದದ್ದು. ಇತ್ತೀಚೆಗೆ ತೆಂಗಿನ ಗರಿಗಳಿಗೆ ಬಿಳಿ ನೊಣ ಬಂದದ್ದು ನಮಗೆಲ್ಲಾ ಗೊತ್ತಿದೆ. ಇದು ಸಹ ಎಳನೀರು ಸಾಗಾಣಿಕೆ ಮಾಡುವಾಗ ಅದರ ಜೊತೆಗೆ ಪ್ಯಾಕಿಂಗ್ ಗಾಗಿ ಬಳಸಿದ ಗರಿಗಳ ಮೂಲಕ ಬಂದಿದೆ ಎಂಬುದಾಗಿ ಹೇಳುತ್ತಾರೆ. ಇತ್ತೀಚೆಗೆ  ತೆಂಗಿನ ಮರಗಳಿಗೆ ಲಾಸಿಯೋ ಡಿಪ್ಲೋಡಿಯಾ Lasiodiplodia ಎಂಬ ಮಚ್ಚೆ ಶಿಲೀಂದ್ರ  ರೋಗ ಪ್ರಾರಂಭಾವಾಗಿದೆ. ಇದು ಸಹ ಬಂದದ್ದು ನೆರೆ ರಾಜ್ಯದಿಂದ. ಹಾಗಾಗಿ ನೆಡು ಸಾಮಾಗ್ರಿ ತರುವಾಗ, ಅಥವಾ ಇನ್ಯಾವುದೇ ಬೆಳೆ ಒಳ ಸುರಿ ತರುವಾಗ ಜಾಗರೂಕತೆ ವಹಿಸಿ. ಜಾಗರೂಕತೆ ವಹಿಸುವುದು ಹೇಳುವಷ್ಟು ಸುಲಭ ಅಲ್ಲ. ಅದರ ಬದಲಿಗೆ ಸಧ್ಯಕ್ಕೆ ಇದರ ಬಳಕೆ ಕಡಿಮೆ ಮಾಡುವುದೇ ಸೂಕ್ತ.

ಕುರಿ ಗೊಬ್ಬರ ಮತ್ತು ರೋಗ ಪ್ರಸಾರ:

ಇಂತಹ ಸ್ವಚ್ಚ ವ್ಯವಸ್ಥೆಯಲ್ಲಿ ಕುರಿ ಸಾಕಣೆ ಮಾಡುವುದು ಕಡಿಮೆ
ಇಂತಹ ಸ್ವಚ್ಚ ವ್ಯವಸ್ಥೆಯಲ್ಲಿ ಕುರಿ ಸಾಕಣೆ ಮಾಡುವುದು ಕಡಿಮೆ
  • ಕುರಿ ಗೊಬ್ಬರ ಉತ್ಪಾದಿಸುವವರು ಅದಕ್ಕೆ ರೋಗಕಾರಕವನ್ನು ಸೇರಿಸಿ ಕೊಡುವುದಿಲ್ಲ.
  • ಅವರಿಗೆ ಅದರಲ್ಲಿ ರೋಗ ಇರಬಹುದು  ಎಂದು ಗೊತ್ತೂ ಇರುವುದಿಲ್ಲ.
  • ಕುರಿ ಗೊಬ್ಬರವನ್ನು ಒಟ್ಟು ಹಾಕುವ ವಿಧಾನ, ಕುರಿಗಳಿಗೆ ಮೇಯಲು ಕೊಡುವ ಆಹಾರ ಇವೆಲ್ಲದರಲ್ಲಿ ಯಾರಿಗೂ ತಿಳಿಯದೆ ರೋಗ ಇದ್ದಿರಬಹುದು.
  • ಇದು ಪ್ರಸಾರ ಆಗಲೂ ಬಹುದು ಆಗದೆಯೂ ಇರಬಹುದು.
  • ನಾವು ಹೆಚ್ಚಾಗಿ ಕುರಿ ಗೊಬ್ಬರವನ್ನು ತರುವುದು ಬಯಲು ನಾಡಿನಿಂದ. ಚಿತ್ರದುರ್ಗ, ಬಳ್ಳಾರಿ ಆಂದ್ರದ ಗಡಿ ಭಾಗಗಳಿಂದ ತರುತ್ತಾರೆ ಎಂಬ ವರದಿ ಇದೆ.
  • ಅದೇನೇ ಇರಲಿ, ಅಲ್ಲಿನ ಭಾಗಗಳಲ್ಲಿ ಬೆಳೆಯುವ ಟೊಮ್ಯಾಟೋ, ಜೋಳ, ಹಾಗೆಯೇ ಇನ್ನಿತರ ಬೆಳೆಗಳಿಗೂ ಅಡಿಕೆಗೆ ಈಗ ಬಂದ ಎಲೆ ಚುಕ್ಕೆ ರೋಗಕ್ಕೆ ಕಾರಣವಾದ ಶಿಲೀಂದ್ರದ Colletotrichum gloeosporioides and Phyllosticta spp.) ತೊಂದರೆ ಇದೆ.
  • ಹಾಗಾಗಿ ಅದು ಪ್ರಸಾರ ಆಗಲೂ ಬಹುದು ಅಗದೆಯೂ ಇರಬಹುದು. ಸಾಧಾರಣವಾಗಿ ನಾವು ತರಿಸುವ ಕುರಿ ಹಿಕ್ಕೆಯಲ್ಲಿ ಜೋಳದ ದಂಟು, ಬೆಳೆ ಉಳಿಕೆ ಇತ್ಯಾದಿಗಳು ಮಿಶ್ರಣವಾಗಿರುತ್ತದೆ.
  • ಇದನ್ನು ಬೇಕೆಂದು ಮಿಶ್ರಣ ಮಾಡುವುದಲ್ಲ.
  • ಕುರಿಗಳನ್ನು ಮೇಯಿಸುವ ಹೊಲದಲ್ಲಿ ಅದರ ಹಿಕ್ಕೆಯನ್ನು ರಾಶಿ ಮಾಡುವಾಗ ಅದರೊಂದಿಗೆ ಇದು  ಸೇರಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ.
  • ಹೆಚ್ಚಾಗಿ ಬೆಳೆ ಬೆಳೆದ ನಂತರ ಆ ಹೊಲದಲ್ಲಿ ಕುರಿ ಮೇಯಿಸಲು ಬಿಡುತ್ತಾರೆ. ಅದರಲ್ಲಿ ಅವುಗಳಿಗೆ ಸ್ವಲ್ಪ ತಿನ್ನುವ ಆಹಾರ ಇರುತ್ತದೆ.
  • ಕುರಿಗಾಹಿಗಳು  ಅಲ್ಲಿ ಬಿದ್ದ ಹಿಕ್ಕೆಯನ್ನು ಅಥವಾ ರಾತ್ರೆ ಕೂಡಿ ಹಾಕಿದಲ್ಲಿ ಸಂಗ್ರಹವಾಗುವ ಹಿಕ್ಕೆಯನ್ನು ರಾಶಿ ಮಾಡಿ ಕುರಿ ಗೊಬ್ಬರವಾಗಿ ಮಾರಾಟ ಮಾಡುತ್ತಾರೆ.
  • ಇದರ ಜೊತೆ ಬೆಳೆ ಕಸಗಳು ಎಲ್ಲಾ ಸೇರಿರುತ್ತವೆ.
  • ಇದಕ್ಕೆ ಎಲ್ಲಿಯಾದರೂ ರೋಗಗಳು ಇದ್ದಲ್ಲಿ ಅದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಸಾರ ಆಗಬಹುದು.
ಈಗ ಕುರಿ, ಕೋಳಿ ಗೊಬ್ಬರಗಳು ಗೋಣಿ ಚೀಲದಲ್ಲಿ ತುಂಬಿ ಬರುವ ಕಾರಣ ಒಳಗೆ ಏನಿದೆ ಎಂದು ಪರೀಕ್ಷಿಸುವುದೂ ಕಷ್ಟ
ಈಗ ಕುರಿ, ಕೋಳಿ ಗೊಬ್ಬರಗಳು ಗೋಣಿ ಚೀಲದಲ್ಲಿ ತುಂಬಿ ಬರುವ ಕಾರಣ ಒಳಗೆ ಏನಿದೆ ಎಂದು ಪರೀಕ್ಷಿಸುವುದೂ ಕಷ್ಟ

ಶಿಲೀಂದ್ರದ ಸ್ಪೋರ್ ಗಳು ಮಣ್ಣು, ನೀರು ಬೆಳೆ ಉಳಿಕೆಗಳ ಮೂಲಕ ಪ್ರಸಾರವಾಗುತ್ತದೆ. ಈ ಗೊಬ್ಬರದಲ್ಲಿ ಅವೆಲ್ಲಾ ಅಲ್ಪ ಸ್ವಲ್ಪ ಸೇರಿದ್ದರೂ ಸಹ ಶಿಲೀಂದ್ರ ಪ್ರಸಾರವಾಗುವ ಸಾಧ್ಯತೆ ಇರುತ್ತದೆ.

ಕೋಳಿ ಗೊಬ್ಬರ:

  • ಕೋಳಿ ಗೊಬ್ಬರ ಎಂದರೆ ಅದು ಕೋಳಿ ಸಾಕಾಣಿಕಾ ಮನೆಗಳಲ್ಲಿ ಸಂಗ್ರಹವಾಗುವ ಕೋಳಿ ಹಿಕ್ಕೆ.
  • ಕೋಳಿಗಳಿಗೆ ಯಾವುದೇ ಬೆಳೆ ಉಳಿಕೆಗಳನ್ನು ಆಹಾರವಾಗಿ ನೀಡಲಾಗುವುದಿಲ್ಲ.
  • ಆದರೂ ಅವುಗಳಿಗೆ ಮಣ್ಣು ಇತ್ಯಾದಿ ಮಿಶ್ರಣ ಮಾಡಿದರೆ ಅದರಲ್ಲಿಯೂ ಈ ಶಿಲೀಂದ್ರ ಪ್ರಸಾರವಾಗಬಹುದು.
  • ಆದ ಕಾರಣ ಸದ್ಯಕ್ಕೆ ಈ ಗೊಬ್ಬರಗಳನ್ನು ತಂದು ಬಳಕೆ ಮಾಡುವುದು ಸೂಕ್ತವಲ್ಲ.

ಕುರಿ, ಕೋಳಿ ಗೊಬ್ಬರಗಳಲ್ಲಿ ಸಾರಜನಕ ರಂಜಕ ಮತ್ತು ಪೊಟ್ಯಾಶ್ ಈ ಮೂರೂ ಅಡಿಕೆಗೆ  ಬೇಕಾದಷ್ಟು  ಪ್ರಮಾಣದಲ್ಲಿ  ಇರುವುದಿಲ್ಲ. ಹಾಗಾಗಿ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ. ಪೋಷಕಾಂಶಗಳ ಅಸಮತೋಲನ ಎಲೆ ಚುಕ್ಕೆ ರೋಗಕ್ಕೆ ಒಂದು ಕಾರಣವಾಗಿರುವುದರಿಂದ ಸದ್ಯಕ್ಕೆ ಇದರ ಬಳಕೆ ಬೇಡ.

ಬಳಕೆ ಮಾಡಬೇಕಿದ್ದರೆ ಹೇಗೆ:

  • ಕುರಿ ಗೊಬ್ಬರ , ಕೋಳಿ ಗೊಬ್ಬರ ಇತ್ಯಾದಿಗಳನ್ನು ತಂದು ಸೂಕ್ತ ವಿಧಾನದಲ್ಲಿ ಮುಚ್ಚಿಟ್ಟು ಕಾಂಪೋಸ್ಟು ಮಾಡಿ ಒಂದು ವರ್ಷದ ನಂತರ ಬಳಕೆ ಮಾಡಿದರೆ ಸಮಸ್ಯೆ ಉಂಟಾಗಲಾರದು.
  • ತೆರೆದು ರಾಶಿ ಹಾಕಬಾರದು. ತಂಪಾದ ವಾತಾವರಣವಿರುವ ನೆರಳಿನಲ್ಲಿ  ರಾಶಿ ಮಾಡಿ ಅದಕ್ಕೆ ಪ್ಲಾಸ್ಟಿಕ್ ಮುಚ್ಚಿ ಇಡುವುದರಿಂದ ಕಾಂಪೊಸ್ಟ್ ಕ್ರಿಯೆ ಚೆನ್ನಾಗಿ ಆಗುತ್ತದೆ.
  • ಹಾಗೆಯೇ ಏನಾದರೂ  ರೋಗದ ಬೀಜಾಣುಗಳು ಇದ್ದರೂ ಸಹ ಅವು ನಾಶವಾಗುತ್ತವೆ. 

ಯಾವ ಯಾವ ಬೆಳೆಗೆ ಕೊಲೆಟ್ರೋಟ್ರಿಕಂ ಬಾಧಿಸುತ್ತದೆ:

  • ಕೊಲೆಟ್ರೋಟ್ರಿಕಂ ಶಿಲೀಂದ್ರದ ಬೇರೆ ಬೇರೆ ಪಭೇಧಗಳು Colletotrichum gloeosporioides and Phyllosticta spp.) ಬಹುತೇಕ ಬೆಳೆಗಳಿಗೆ ಬಾಧಿಸುತ್ತವೆ.
  • ತರಕಾರಿ ಬೆಳೆಗಳಾದ ಟೊಮಟೋ, ಮೆಣಸು, ಬೀನ್ಸ್, ಸೂರ್ಯಕಾಂತಿ, ಹುಲ್ಲು ಸಸ್ಯಗಳು, ಭತ್ತ, ಅರಳು ಜೋಳ,
  • ಹಣ್ಣಿನ ಬೆಳೆಗಳಾದ ಮಾವು ದಾಳಿಂಬೆ, ಸಪೋಟಾ ಮುಂತಾದವುಗಳಿಗೆ ಎಲ್ಲಾ ತಾಳೆ ಜಾತಿಯ ಮರಗಳಿಗೆ,
  • ತೋಟಗಾರಿಕಾ ಬೆಳೆಗಳಾದ ಕಾಫೀ, ತೆಂಗು, ಕರಿಮೆಣಸು ಮುಂತಾದ ಬಹುತೇಕ ಬೆಳೆಗಳಿಗೆ ಇದು ಬಾಧಿಸುತ್ತದೆ.
  • ಕೆಲವು ಮರಮಟ್ಟುಗಳಿಗೂ ಬಾಧಿಸುತ್ತದೆ. ಇದು ಅತ್ಯಂತ ಕ್ಲಿಷ್ಟಕರ ಶಿಲೀಂದ್ರವಾಗಿದ್ದು,  ಹರಡುವ ರೋಗವಾಗಿರುತ್ತದೆ.
  • ಸಾಮಾನ್ಯವಾಗಿ ಬೆಳೆಗಳು ಪೊಷಕಾಂಶದ ಅಸಮತೋಲನ (Nutrition deficiency) ಉಂಟಾಗಿದ್ದರೆ ಅಲ್ಲಿ ಈ ಶಿಲೀಂದ್ರದ ಪ್ರಸಾರಕ್ಕೆ ಅನುಕೂಲವಾಗುತ್ತದೆ.
  • ಅಡಿಕೆ , ತೆಂಗು ಮರಗಳು ಪೊಟ್ಯಾಶಿಯಂ ಕೊರತೆ ಉಂಟಾದಾಗ ಎಲೆ ಆಂಚು ಸುಟ್ಟಂತೆ ಆಗುತ್ತದೆ.
  • ಇಂತಹ ಭಾಗಗಳಲ್ಲಿ ಇವು ಪ್ರವೇಶ ಮಾಡುತ್ತದೆ. ಮಳೆಗಾಲದ ವಾತಾವರಣದಲ್ಲಿ ಇದು ಹೆಚ್ಚು ಕ್ರಿಯಾತ್ಮವಾಗಿರುತ್ತದೆ ಎನ್ನುತ್ತಾರೆ.
  • ಇತ್ತೀಚೆಗೆ ಹವಾಮಾನ ಬದಲಾವಣೆ ಊಂಟಾಗಿದ್ದು, ಡಿಸೆಂಬರ್ ತನಕ ಮಳೆ ಹಾಗೆಯೇ ಆನಂತರ ಬಿಸಿಲು ಇದ್ದರೂ ಹೂ ಗೊಂಚಲುಗಳಿಗೆ ಬಾಧಿಸುವ ಕಾರಣ ವರ್ಷದುದ್ದಕ್ಕೂ ಇದು ಜೀವಂತವಾಗಿರುತ್ತದೆ.
  • ಅಡಿಕೆ ಸಸ್ಯದಲ್ಲಿ ಅದು ಮರ ಇರಲಿ, ಗಿಡ ಇರಲಿ ಇದು ತೀವ್ರವಾಗಿ ಬಾಧಿಸಿದಾಗ ಎಲೆಗಳು ಸಹಜವಾಗಿ ಉದುರಿ ಬೀಳುವುದಿಲ್ಲ.
  • ಅಲ್ಲೇ ಉಳಿದುಕೊಂಡು ಅಥವಾ ಉಳಿದುಕೊಂಡು ಕೋಟ್ಯಾಂತರ ಸಂಖ್ಯೆಯಲ್ಲಿ ಬೀಜಾಣುಗಳು ಮೇಲಿನ ಗರಿಗಳಿಗೆ ವರ್ಗಾವಣೆ ಆಗುತ್ತದೆ.
  • ಒಣ ಎಲೆಗಳಲ್ಲಿ ಈ ಬೀಜಾಣುಗಳ ಅಭಿವೃದ್ಧಿ ಆಗುತ್ತದೆ ರೋಗ (Inoculum development). ತೀವ್ರವಾದ ಕಾರಣ ಇದು ಎಲೆ ಅಲ್ಲದೆ ಕಾಯಿಗಳಿಗೂ ಬಾಧಿಸಲು ಪ್ರಾರಂಭವಾಗಿವೆ.
  • ಹೂ ಗೊಂಚಲಿಗೆ ಬಾಧಿಸುವುದು ಹಿಂದಿನಿಂದಲೂ ಇತ್ತಾದರೂ ಇದು ಅಲ್ಲಿಂದ ಅದು ಎಲೆಗೆ ಹೆಚ್ಚಾಗಿ ಬಾಧಿಸಿರಲಿಲ್ಲ.
  • ಬಾಧಿಸುತ್ತಿದ್ದರೂ ಕಡಿಮೆ ಪ್ರಮಾಣದಲ್ಲಿ ಇದ್ದ ಕಾರಣ ಎಲೆ ಉದುರಿದಾಗ ಸಂಖ್ಯೆ ಕಡಿಮೆಯಾಗಿ ಪ್ರಸಾರದ ವೇಗ ತಗ್ಗುತ್ತಿತ್ತು.
  • ರೋಗ ಹೆಚ್ಚಾಗಲು ವಾತಾವರಣ ಅನುಕೂಲ ಇರುವ ತನಕ ಇದು ಮುಂದುವರಿಯಬಹುದು.
  • ಆ ನಂತರ ಕಡಿಮೆ ಆಗಬಹುದು ಎನ್ನುತ್ತಾರೆ ಹಿರಿಯ ರೋಗ ಶಾಸ್ತ್ರಜ್ಞರಾದ ಡಾ. ನಾರಾಯಣ ಸ್ವಾಮಿಯವರು.

ರೋಗ ಬಂದಾಗ ಕೆಲವು ಪಥ್ಯಗಳನ್ನು ಅಗತ್ಯವಾಗಿ ಮಾಡಬೇಕು. ನೆಗಡಿ ಆದಾಗ ತಂಪು ಪಾನೀಯ ಸೇವಿಸಬಾರದು. ಹಾಗೆಯೇ ಕೆಲವು ಸಸ್ವಾಸ್ತ್ಯಗಳಿಗೆ ಬೆಂಬಲಾಗುವ ಆಹಾರಾಭ್ಯಾಸಗಳನ್ನು ಮಾಡದಿದ್ದರೆ ಅದು ಬೇಗ ಗುಣಮುಖವಾಗಲು ಅನುಕೂಲವಾಗುತ್ತದೆ. ಹಾಗೆಯೇ ಸಸ್ಯಗಳ ರೋಗಕ್ಕೂ ಒಳಸುರಿ, ಬೇಸಾಯ ಕ್ರಮಗಳನ್ನು ಕ್ರಮಪ್ರಕಾರ ಮಾಡಿದರೆ ರೋಗಗಳು ನಿಯಂತ್ರಣಕ್ಕೆ ಬರುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!