ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ಹುಳ ಇರುವ ಬದನೆಕಾಯಿ

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು.

 • ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು.
 • ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ.
 • ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ.
 • ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು ಬರುತ್ತದೆ.
 • ಕೊಯಿದು ಕೊರೆದರೆ ಒಳಗೆ ಹುಳ ಇರುತ್ತದೆ.

ತೂತು ಆದ ಬದನೆ

 • ಕಾಯಿ ಕೊರಕ ಮತ್ತು  ಚಿಗುರು ಕುಡಿ  ಕೊರಕಕ್ಕೆ ನಿರೋಧಕ ಶಕ್ತಿ ಪಡೆದ ತಳಿ ಇಲ್ಲ.
 • ಇದನ್ನು ನಿಯಂತ್ರಿಸದೇ  ಇದ್ದಲ್ಲಿ ಬೆಳೆಯಲ್ಲಿ ಗಣನೀಯ ಪ್ರಮಾಣದಲ್ಲಿ  ನಷ್ಟ  ಉಂಟಾಗುತ್ತದೆ.
 • ಕುಡಿ ಕೊರೆಯುವಾಗ ಹೂ ಮೊಗ್ಗುಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತದೆ.
 • ಒಂದು ಹುಳ 4-5 ಕಾಯಿಯನ್ನು ಹಾಳು ಮಾಡುತ್ತದೆ.
 • ಅದೇ ರೀತಿ 1 ಹುಳ ಒಂದು ಕುಡಿ ಕೊರೆದು ಮತ್ತೊಂದಕ್ಕೆ ಹೋಗುತ್ತದೆ.
 • ಹೀಗೆ 3-4 ಚಿಗುರನ್ನು ಹಾನಿ ಮಾಡುತ್ತದೆ. ಇದು ತನ್ನ ಸುಪ್ತಾವಸ್ಥೆಯನ್ನು  ನೆಲದಲ್ಲಿ  ಮಾಡುತ್ತದೆ.

ಹೇಗೆ ಬರುತ್ತದೆ:

 • ಕುಡಿ ಕೊರಕ ಮತ್ತು ಕಾಯಿ ಕೊರಕ ಹುಳು ಉಂಟಾಗಲು ಒಂದು ರೀತಿಯ ಪತಂಗ ಕಾರಣ.
 • ಇದು ಪ್ರದೇಶವಾರು ಬಿಳಿ ಮತ್ತು ಮರದ ಬಣ್ಣದಲ್ಲಿರುತ್ತದೆ.
 • ಈ ಪತಂಗವು ಸಸ್ಯದ ಎಲೆಯ ಮೇಲೆ, ಕುಡಿಯ ಮೇಲೆ, ಕಾಯಿಯ ಮೇಲೆ  ಕುಳಿತು ಸುಮಾರು 250 ರಷ್ಟು  ಮೊಟ್ಟೆಗಳನ್ನು ಒಂದೊಂದಾಗಿ ಇಡುತ್ತವೆ.
ಚಿಗುರು ಕೊರಕ ಇಲ್ಲಿಂದ ಪ್ರಾರಂಭವಾಗುತ್ತದೆ
ಚಿಗುರು ಕೊರಕ ಇಲ್ಲಿಂದ ಪ್ರಾರಂಭವಾಗುತ್ತದೆ
 • 2 -5 ದಿನದ ಒಳಗೆ ಅದು ಮರಿಯಾಗುತ್ತದೆ.
 • ಎಲೆಯಲ್ಲಿ ಇಟ್ಟದ್ದು ಅಲ್ಲೇ ಮರಿಯಾಗಿ ಎಲೆಯನ್ನು ಭಕ್ಷಿಸುತ್ತದೆ.
 • ಕುಡಿಯಲ್ಲಿ ಇಟ್ಟದ್ದು ಕುಡಿಯ ಯಾವುದಾದರೂ ಎಳೆ ಭಾಗದ ಮೂಲಕ ಒಳ ಸೇರಿ ಅದರ ಒಳ ಭಾಗದ ತಿರುಳನ್ನು ಭಕ್ಷಿಸುತ್ತದೆ.
 • ಇದು ಜನವರಿಯಿಂದ ಮಾರ್ಚ್ ತನಕ ಅತೀ ಹೆಚ್ಚು.
 • ಆದರೂ ಉಳಿದ ಸಮಯದಲ್ಲಿ ಅಲ್ಪ ಸ್ವಲ್ಪ ಇರುತ್ತದೆ.
ಚಿಗುರು ಕೊರಕ, ಕಾಯಿ ಕೊರಕ ಹುಳಗಳು
ಚಿಗುರು ಕೊರಕ, ಕಾಯಿ ಕೊರಕ ಹುಳಗಳು

ನಿಯಂತ್ರಣ:

 • ರಾಸಾಯನಿಕ ಹತೋಟಿಯಾಗಿ ಇದಕ್ಕೆ  ಬೇರೆ  ಬೇರೆ ಕೀಟನಾಶಕಗಳನ್ನು ಶಿಫಾರಸು ಮಾಡುತ್ತಾರೆ.
 • ಇದೆಲ್ಲಾ ಫಸಲಿನಲ್ಲಿ ಉಳಿಯುವಂತದ್ದು.
 • ಸುರಕ್ಷಿತವಾದ ಕೀಟನಾಶಕ ಎಂದರೆ ಬೇವು ಮೂಲದ ಸಸ್ಯ ಜನ್ಯ ಕೀಟನಾಶಕವಾದ ಅಜಡಿರಕ್ಟಿನ್.
 • ಇದನ್ನು ವಾರಕ್ಕೊಂದಾವರ್ತಿಯಂತೆ ಸಿಂಪರಣೆ ಮಾಡಿ ಹತೋಟಿ ಸಾಧ್ಯ.
 • ಕೀಟನಾಶಕಗಳನ್ನು ಬಳಕೆ ಮಾಡಿದಾಗ ಇದನ್ನು ಬಳಸಿದ 20-40 ದಿನಗಳ ತನಕ ನಾವು ತಿನ್ನುವ ಕಾಯಿಯಲ್ಲಿ ಉಳಿಕೆ ಅಂಶ ಉಳಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ಕ್ಷೇಮಕರವಲ್ಲ.  ಇದರ ಬದಲಿಗೆ ಕೆಲವು  ಸುರಕ್ಷಿತ ಕ್ರಮಗಳನ್ನು  ಅನುಸರಿಸಬಹುದು.
ಇಂತಹ ಪತಂಗ ಮೊಟ್ಟೆ ಇಡುತ್ತದೆ
ಇಂತಹ ಪತಂಗ ಮೊಟ್ಟೆ ಇಡುತ್ತದೆ

ಮುಂಜಾಗ್ರತೆ:

 • ಮೊದಲನೆಯದಾಗಿ ಒಮ್ಮೆ ಬೆಳೆದ  ಕಡೆ  ಮತ್ತೊಮ್ಮೆ  ಬದನೆಯನ್ನು ಬೆಳೆಯಬೇಡಿ.
 • ಅನುಕೂಲ ಇದ್ದರೆ ಬದನೆ ಬೆಳೆಸುವ ಜಾಗದಲ್ಲಿ ಮಣ್ಣನ್ನು ಉಳುಮೆ ಮಾಡಿ  ತರಗೆಲೆ ಮುಂತಾದ ಕೃಷಿ ತ್ಯಾಜ್ಯಗಳನ್ನು  ಹಾಕಿ ಮಣ್ಣನ್ನು  ಒಮ್ಮೆ ಬಿಸಿ ಮಾಡಿ.
 • ಅದು ಅಸಾಧ್ಯವಾದರೆ ಮಣ್ಣಿನ ಮೇಲೆ ಪಾರದರ್ಶಕ ಪಾಲಿಥೀನ್  ಹಾಳೆ ಹೊದಿಸಿ ಎರಡು ವಾರ ಕಾಲ ಸೋಲರೈಸೇಶನ್ ಮಾಡಬೇಕು.
 • ನಂತರ ಸಸಿ ನಾಟಿ  ಮಾಡಬೇಕು. ನಾಟಿ ಮಾಡುವ  ಮೂರು ನಾಲ್ಕು ವಾರಕ್ಕೆ ಮುಂಚೆ ಉಪಚಾರ  ಪ್ರಾರಂಭಿಸಬೇಕು.
 • ಸಸ್ಯ ಬೆಳೆಯುತ್ತಿದ್ದಾಗ ಮೊದಲಾಗಿ  ಈ ಪತಂಗವು ಎಲೆಯಲ್ಲಿ  ಬಂದು ಕುಳಿತು ಮೊಟ್ಟೆ ಇಡುತ್ತದೆ.
 • ಆ ಸಮಯದಲ್ಲಿ ಎಲೆಗಳನ್ನು ಸುತ್ತಿ ಅದರಲ್ಲಿ  ಹುಳ ಇರುತ್ತದೆ. ಅದನ್ನು ಗಮನಿಸಿದ ತಕ್ಷಣ ಆ ಭಾಗವನ್ನೇ ತೆಗೆದು  ಅದನ್ನು ಬೆಂಕಿಗೆ ಹಾಕಿ ಸುಡಬೇಕು.
ಪತಂಗ ಆಕರ್ಷಣೆಗೆ ಲಿಂಗಾಕರ್ಷಕ ಬಲೆ
ಪತಂಗ ಆಕರ್ಷಣೆಗೆ ಲಿಂಗಾಕರ್ಷಕ ಬಲೆ
 • ಸಸ್ಯದಲ್ಲಿ ಎಳೆ ಚಿಗುರು  ಬಾಡಿ  ಒಣಗಿದ್ದು  ಕಂಡು ಬಂದರೆ ಅದನ್ನು  ಕೆಳಭಾಗದಲ್ಲಿ  ಎಲ್ಲಿ ತೂತು ಇದೆಯೋ  ಅಲ್ಲಿ ತನಕ  ಕತ್ತರಿಸಿ ಹುಳುವನ್ನು  ಕಣ್ಣಿನಲ್ಲಿ  ಕಂಡು ಅದನ್ನು  ಸುಟ್ಟು ನಾಶಮಾಡಬೇಕು. ಯಾವುದೇ ಕಾರಣಕ್ಕೂ ಅದನ್ನು ಹಾಗೇ ಬಿಡಬಾರದು. ಅದೇ ರೀತಿ ಕಾಯಿಗೆ ಹುಳ ತೂತು ಮಾಡಿದ್ದರೆ ಅದನ್ನು  ಕೊಯ್ಯದೆ ಗಿಡದಲ್ಲಿ ಬಿಡಬೇಡಿ.ಅಲ್ಲೇ ಉಳಿಸಿದರೆ ಅದು ಪ್ರಸಾರವಾಗುತ್ತದೆ.

ಚಿಗುರು ಕೊರಕದ ಹಾನಿ

 • ಈ ಕಾಯಿ , ಮಿಡಿ ಕೊರಕಕ್ಕೇ ಈಗ ಲಿಂಗಾಕರ್ಷಕ ಬಲೆಗಳು ಲಭ್ಯವಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮತ್ತು ಕೆಲವು ಖಾಸಗಿ ತಯಾರಕರಲ್ಲಿ  ಈ ಫೆರಮೋನು ಟ್ರಾಪುಗಳು ಲಭ್ಯವಿದ್ದು  ಇದನ್ನು ಬದನೆ ಬೆಳೆಸುವಾಗ ಗಿಡ ಹಂತದಲ್ಲೇ  ಹಾಕಬೇಕು.
 • ಸಣ್ಣ ಬೆಳೆಗಾರರು ಬದನೆ ಮಿಡಿ ಇರುವಾಗ ಅದಕ್ಕೆ ಪೂರ್ತಿ ಕಾಗದ ಸುತ್ತಿದರೆ ಚಿಟ್ಟೆ ಮೊಟ್ಟೆ ಇಡಲಾರದು.
 • ಜೈವಿಕವಾಗಿ ಇದನ್ನು ನಿಯಂತಿಸಲು  ಬ್ಯಾಸಿಲಸ್  ತುರಂಜೆನ್ಸಿಸ್ ಜೈವಿಕ  ಕೀಟನಾಶಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು  ಬಳಕೆ ಮಾಡಿದರೆ ತಿನ್ನುವವನಿಗೆ ತೊಂದರೆ ಇಲ್ಲ. ಇದನ್ನು ಸಿಂಪಡಿಸಿದಾಗ ಮಣ್ಣು ಮತ್ತು ಸಸ್ಯದಲ್ಲಿರುವ  ಹುಳುವನ್ನು ಅದು ಹುಡುಕಿ ಸಾಯಿಸುತ್ತದೆ. ಇದು ಅಪಾಯ ರಹಿತ ಜೈವಿಕ ಕೀಟನಾಶಕ.

ಬದನೆಯ ಹುಳ ನಿಯಂತ್ರಣಕ್ಕೆ  ಕೀಟನಾಶಕ ಸಿಂಪಡಿಸುವುದಾದರೆ  ಹೂ ಬಿಡುವ ಸಮಯದೊಳಗೆ ಅದನ್ನು  ಸಿಂಪಡಿಸಿ ಮುಗಿಸಬೇಕು. ನಂತರ ಸಿಂಪಡಿಸಿದರೆ ತಿನ್ನುವವರಿಗೆ ಅಪಾಯ ಇದೆ.

End of the article:

search words: brinjal crop# brinjal pest# brinjal fruit borer # brinjal shoot borer#  brinjal pest control# brinjal  crop protection#

Leave a Reply

Your email address will not be published. Required fields are marked *

error: Content is protected !!