ಕೆಲಸದವರು ಇಲ್ಲದೆ ಕೃಷಿ ಮುಂದುವರಿಯಬಹುದೇ? ರೈತರಿಗೆ ಕೃಷಿಯೇ ಬೇಡವಾಗುತ್ತಿದೆ.

ಕೆಲಸದವರು ಇಲ್ಲದೆ ಕೃಷಿ ಮುಂದುವರಿಯಬಹುದೇ?

ಕೃಷಿ ಎಂಬುದು ಉಳಿದ ಉದ್ದಿಮೆಗಳಂತೆ ಮಾಲಕ ಮತ್ತು ಕೆಲಸದವರ ಸಹಯೋಗದಲ್ಲಿ ಮುನ್ನಡೆಸಬೇಕಾದ ಕಸುಬು. ಆದರೆ ಇತ್ತೀಚಿನೆ ವರ್ಷಗಳಲ್ಲಿ ಕೃಷಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ಸಿಗುವ ಜನರ ಕ್ಷಮತೆ ಏನೇನೂ ಇಲ್ಲದಾಗಿದೆ. ಕೆಲಸದವರ ಸಹಕಾರ ಇಲ್ಲದೆ ಕೃಷಿ ಇಂದು ಬಡವಾಗುತ್ತಿದೆ. ಇದರಿಂದಾಗಿ ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿದವರಿಗೆ ಇದು ಬೇಡ ಎಂಬ ಭಾವನೆ ಬರಲಾರಂಭಿಸಿದೆ !.
ಕೃಷಿ ಕೆಲಸ ಎಂದರೆ ಅದು ಸ್ವಲ್ಪ ಕೆಳಮಟ್ಟದ್ದು ಎಂಬ ಭಾವನೆ ಹೊಸ ತಲೆಮಾರಿನಲ್ಲಿ ಮೂಡಲಾರಂಭಿಸಿದೆ. ವಿಶೇಷವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕೆಲಸಕ್ಕೆ ಜನ ಇಲ್ಲದ ಸ್ಥಿತಿ ಉಂಟಾಗಿದೆ. ಇದಕ್ಕೂ ಹಿಂದೆ ನೆರೆಯ ಕೇರಳದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಅಲ್ಲಿಯ ಜನ ಈ ಕುರಿತು ಎಚ್ಚೆತ್ತುಕೊಂಡು ನೆರೆಯ ಕರ್ನಾಟಕ, ಮಹಾರಾಷ್ಟ್ರ ಹಾಗೆಯೇ ಉತ್ತರ ಭಾರತದ ಜಾರ್ಖಂಡ್, ಚತ್ತೀಸ್ ಘಡ್ ಮುಂತಾದ ಕಡೆಯಲ್ಲಿ ಕೃಷಿ ಭೂಮಿ ಖರೀದಿಸಿ ಅಲ್ಲಿ ತಮ್ಮ ವ್ಯವಹಾರವನ್ನು ಚೆನ್ನಾಗಿಯೇ ಮಾಡಿಕೊಂಡರು. ಕರ್ನಾಟಕದ ಕರಾವಳಿ, ಮಲೆನಾಡು ಅರೆಮಲೆನಾಡುಗಳಲ್ಲಿ ಈಗ ಕೇರಳಿಗರು ತುಂಬಿ ಹೋಗಿದ್ದಾರೆ. ನೆರೆಯ ಮಹಾರಾಷ್ಟ್ರದ ಆಯಕಟ್ಟಿನ ಸ್ಥಳಗಳಲ್ಲಿಯೂ ಕೇರಳಿಯನ್ನರು ತುಂಬಿದ್ದಾರೆ. ಕೆಲವು ಮೂಲಗಳ ಪ್ರಕಾರ ಶ್ರೀಲಂಕಾ ದೇಶಕ್ಕೂ ಕೇರಳಿಯನ್ನರು ತಲುಪಿದ್ದಾರೆ.
ಕೇರಳದ ಕಥೆ ಹಾಗಿರಲಿ. ಈಗ ತಮಿಳುನಾಡಿನಲ್ಲೂ ಕೆಲಸದವರ ಭಾರೀ ಅಭಾವವಂತೆ. ಅಲ್ಲಿಯ ದೊಡ್ಡ ದೊಡ್ಡ ಕೃಷಿಕರು ಬೇರೆ ರಾಜ್ಯಗಳ ಕೆಲಸಗಾರರನ್ನು ತರಿಸಿ ಕೃಷಿ ಮಾಡುವಂತಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಕೃಷಿ ಕೆಲಸಕ್ಕೆ ಆಳುಗಳ ಸಮಸ್ಯೆ ವಿಪರೀತವಾಗುತ್ತಿದ್ದು, ಸದ್ಯಕ್ಕೆ ಹೊರರಾಜ್ಯಗಳ ಜನರಿಂದ ಕೃಷಿ ನಡೆಯುತ್ತಿದೆ. ಸ್ಥಳೀಯವಾಗಿ ಕೃಷಿ ಕೂಲಿ ಕಾರ್ಮಿಕರ ತೀವ್ರ ಕೊರತೆ ಇದ್ದು, ಸದ್ಯೋಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ದುಡಿಯಲು ಸ್ಥಳೀಯ ಜನರೇ ಇಲ್ಲದ ಸ್ಥಿತಿ ಉಂಟಾಗಲಿದೆ. ಶಿಕ್ಷಣ ಮತ್ತು ಇತರ ಕ್ಷೇತ್ರಗಳ ಅಭಿವೃದ್ದಿ ಈಗ ಕೃಷಿಯನ್ನು ಬಡವಾಗಿಸಿದೆ. ಬಹುತೇಕ ಎಲ್ಲರ ಮನೆಯಲ್ಲೂ ಶಿಕ್ಷಣ ಪಡೆದವರೇ ಇದ್ದಾರೆ. ಸ್ಥಳೀಯವಾಗಿ ಬೇಕಾದ ಶಿಕ್ಷಣ ಪಡೆಯಲು ಅನುಕೂಲವಾಗುವ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಶಿಕ್ಷಣ ಪಡೆಯಲು ಹಣಕಾಸಿನ ಸಮಸ್ಯೆ ಇದ್ದರೆ ಸ್ಪಂದಿಸಲು ಬ್ಯಾಂಕುಗಳು, ಸ್ವ ಸಹಾಯ ಸಂಘಗಳು ನೆರವಾಗುತ್ತಿವೆ. ಹಾಗಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಜನ ಇಲ್ಲದಾಗಿದ್ದಾರೆ.

ಯಾಕೆ ಈ ಸ್ಥಿತಿ ಉಂಟಾಯಿತು?

 • ಕೃಷಿ ಮಾಡುವವರಿಗೆ ಅದು ಪ್ರಧಾನ ವೃತ್ತಿ. ಆದರೆ ಅವರ ಸಹಾಯಕರಾಗಿ ದುಡಿಯುವ ಕೆಲಸಗಾರರಿಗೆ ಇದು ಆಯ್ಕೆಯ ವೃತ್ತಿ ಹೊರತಾಗಿ ಅನಿವಾರ್ಯ ವೃತ್ತಿ ಅಲ್ಲ.
 • ಹಾಗಾಗಿ ಸಹಜವಾಗಿಯೇ ಈ ಸ್ಥಿತಿ ಇಂದಲ್ಲ ನಾಳೆ ಸೃಷ್ಟಿಯಾಗಿಯೇ ಆಗುತ್ತದೆ.
 • ಹೊರ ದೇಶಗಳಲ್ಲಿ ಅದರಲ್ಲೂ ಜಪಾನ್ ನಲ್ಲಿ ಈ ಸ್ಥಿತಿ ಬಹಳ ಹಿಂದೆಯೇ ಆಗಿತ್ತಂತೆ.
 • ಆಗ ಅವರು ಕೆಲವು ಕಾನೂನಾತ್ಮಕ ಸುಧಾರಣೆಗಳನ್ನು ತಂದು ಅದನ್ನು ಸರಿಪಡಿಸಿಕೊಂಡರು ಎಂಬುದಾಗಿ ಕೆಲವು ಮೂಲಗಳು ತಿಳಿಸುತ್ತವೆ.
 • ನಮ್ಮ ದೇಶದಲ್ಲಿ ಇದು ಸ್ವಲ್ಪ ತಡವಾಗಿ ಬಂದಿರಬಹುದು. ಕೆಲವೇ ಕೆಲವು ರಾಜ್ಯಗಳು ಈಗ ಈ ವಿಷಯದಲ್ಲಿ ಸೋತಿರಬುದು.
 • ಆದರೆ ಸಧ್ಯೋಭವಿಷ್ಯದಲ್ಲಿ ಎಲ್ಲಾ ರಾಜ್ಯಗಳಲ್ಲೂ ಇದೇ ಸ್ಥಿತಿ ಬಂದರೂ ಅಚ್ಚರಿ ಇಲ್ಲ.
 • ಯಾಕೆಂದರೆ ಎಲ್ಲಾ ಕಡೆಗಳಲ್ಲೂ ಕೆಲಸಗಾರರನ್ನು ಬಯಸುವ ಬೇರೆ ಬೇರೆ ಉದ್ದಿಮೆಗಳು ತಲೆ ಎತ್ತುತ್ತಿವೆ.
 • ಜನ ಒಂದು ಕಡೆಯಲ್ಲಿ ಕೆಲಸದವರ ಅಭಾವ ಇದ್ದರೆ ಎಲ್ಲಿ ಲಭ್ಯತೆ ಇದೆಯೋ ಅಲ್ಲಿಗೆ ತಮ್ಮ ವ್ಯವಹಾರವನ್ನು ಬದಲಾಯಿಸುತ್ತಿದ್ದಾರೆ.
 • ಎಲ್ಲಾ ಕಡೆಯಲ್ಲೂ ಶಿಕ್ಷಣ ಸೌಲಭ್ಯ ಕೈಗೆಟಕುವಂತಾಗಿದೆ.
 • ಹಾಗಾಗಿ ಮುಂದೆ ಯಾವ ಊರಲ್ಲಿಯೂ ಕೃಷಿ ಕೆಲಸಕ್ಕೆ ಜನ ಸಿಗದ ಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ.
ಮುದುಕರಿಗೆ ಮಾತ್ರ ಕೃಷಿ ಬೇಕಾಗಿದೆ
ಮುದುಕರಿಗೆ ಮಾತ್ರ ಕೃಷಿ ಬೇಕಾಗಿದೆ


ಯುವ ಪೀಳಿಗೆ ಕೃಷಿ ಕೆಲಸಕ್ಕೆ ಇಲ್ಲ:

 • ಕೃಷಿ ಕೆಲಸಕ್ಕೆ ಯುವಕರು, ಮುದುಕರು, ಹೆಂಗಸರು ಎಲ್ಲರೂ ಬೇಕು.
 • ಕೆಲವು ಗಟ್ಟಿ ಕೆಲಸಗಳಾದ ಅಗೆತ, ಮರ ಕಡಿಯುವಿಕೆ, ಇತ್ಯಾದಿಗಳಿಗೆ ಯುವಕರ ಅಗತ್ಯ ಇದ್ದರೆ, ಹೊರುವುದು, ಕಳೆ ತೆಗೆಯುವುದು,ಸೊಪ್ಪು ಸದೆ ಸಿದ್ದತೆ ಇತ್ಯಾದಿ ಸಾಧಾರಣ ಕೆಲಸಗಳಿಗೆ ಪ್ರಾಯದವರು, ಹೆಂಗಸರು ಬೇಕು.
 • ಆದರೆ ಈಗ ಅದರಲ್ಲಿ ಅಸಮತೋಲನ ಉಂಟಾಗಿದೆ.
 • ಹೆಂಗಸರಲ್ಲಿ 50-55 ದಾಟಿದವರು ಕೆಲಸಕ್ಕೆ ಬರುವುದಿಲ್ಲ.
 • ಯುವಕರೆಲ್ಲಾ ಪೈಂಟಿಂಗ್, ಗಾರೆ ಕೆಲಸ ಹಾಗೆಯೇ ಪರವೂರಿನಲ್ಲಿ ಗಾರ್ಮೆಂಟ್ ಕೆಲಸಗಳಲ್ಲಿ ಸೇರಿಕೊಂಡಿದ್ದಾರೆ.
 • ಕೃಷಿ ಕೆಲಸಕ್ಕೆ 55-65 ವಯೋಮಾನದ ಜನ ಮಾತ್ರ ಇದ್ದಾರೆ.
 • ಅವರ ಆರೋಗ್ಯ ಸ್ಥಿತಿಯ ಮೇಲೆ ಹಾಜರಾತಿಯೂ ಇರುತ್ತದೆ.
 • ಯುವ ಪೀಳಿಗೆ ಇಲ್ಲದೆ ಕೃಷಿಯ ಕೆಲವು ಅಗತ್ಯ ನಿರ್ವಹಣೆಗಳು ನಡೆಸಲು ಬಹಳ ಕಷ್ಟವಾಗಿದೆ.
 • ಅಡಿಕೆ ಇದ್ದರೆ ಕೊಯಿಲು ಮಾಡುವವರಿಲ್ಲ, ತೆಂಗಿನ ಕಾಯಿ ಕೊಯ್ಯುವವರಿಲ್ಲ, ಔಷಧಿ ಸಿಂಪಡಿಸುವವರಿಲ್ಲ ಈ ಕೆಲಸಗಳು ಹೇಗೋ ಆಗುತ್ತಿವೆ.
 • ಬೆಳಗ್ಗೆ ಊಟ ಮಾಡುವುದನ್ನು ಸಂಜೆಯೋ ನಾಳೆಯೋ ಮಾಡಿದಂತೆ ಆಗುತ್ತಿದೆ.


ಉತ್ತರ ಭಾರತದ ಕೆಲಸಗಾರರು:

 • ಬಿಹಾರ್, ಜಾರ್ಖಂಡ್, ಚತ್ತೀಸ್ಘಡ್, ಅಸ್ಸಾಂ ಕಡೆಗಳಿಂದ ಜನ ತರಿಸಿ ಕೆಲಸ ಮಾಡಿಸಲಾಗುತ್ತಿದೆ.
 • ಇದಲ್ಲೆವೂ ಕೆಲವು ಬ್ರೋಕರ್ ಗಳ ಮೂಲಕ ನಡೆಯುತ್ತಿದೆ.
 • ಇತ್ತೀಚೆಗೆ ಅವರೂ ಸಹ ಕೃಷಿ ಕೆಲಸಕ್ಕಿಂತ ಬೇರೆ ಕೆಲಸದತ್ತ ಒಲವು ತೋರಲಾರಂಭಿಸಿದ್ದಾರೆ.
 • ಕೃಷಿ ಕ್ಷೇತ್ರ ಒಂದರಲ್ಲೇ ಕೆಲಸದವರ ಕೊರತೆ ಆಲ್ಲ.
 • ಅಂಗಡಿಯಲ್ಲಿ ಸಾಮಾನು ಸರಂಜಾಮು ಕಟ್ಟಿಕೊಡಲು, ಲೋಡ್ ಮಾಡಲು,ನಿರ್ಮಾಣ ಕೆಲಸಗಳಲ್ಲಿಯೂ ಕೆಲಸಗಾರರಿಗೆ ಭಾರೀ ಬೇಡಿಕೆ ಇದೆ.
 • ಈ ಕೆಲಸಗಳು ಸಾಮಾನ್ಯವಾಗಿ ಪೇಟೆ ಪಟ್ಟಣಗಳ ಸಮೀಪ ಇರುವ ಕಾರಣ ಇಲ್ಲಿ ದುಡಿಯಲು ಜನ ಉತ್ಸುಕರಿರುತ್ತಾರೆ.
 • ಉತ್ತರ ಭಾರತದ ನೈಪುಣ್ಯ ಇಲ್ಲದ ಕೆಲಸಗಾರರು ಮಾತ್ರ ಈಗ ಕೃಷಿ ಕ್ಷೇತ್ರದಲ್ಲಿ ಉಳಿದುಕೊಂಡಿದ್ದಾರೆ.
 • ಇವರು ಎಷ್ಟು ಸಮಯವೋ ಗೊತ್ತಿಲ್ಲ. ಹಿಂದಿನ ಅಬ್ಬರ ಈಗ ಇಲ್ಲ.
 • ಹೊರಲಿಕ್ಕೆ ಒಲ್ಲದ, ಅಗೆಯಲಿಕ್ಕೆ ತಿಳಿಯದ ಬರೇ ಯಂತ್ರ ಮಾನವರಂತವರು ಮಾತ್ರ ಕೃಷಿ ಕೆಲಸಕ್ಕೆ ಸಿಗುತ್ತಿದ್ದಾರೆ.
 • ಒಬ್ಬ ಜಾರ್ಖಂಡ್ ರಾಜ್ಯದ ಕೆಲಸಗಾರ ಹೇಳುತ್ತಾನೆ, ನಮ್ಮಲ್ಲೂ ಈಗ ಅಡಿಕೆ ತೋಟಗಳು, ಗೇರು ಬೀಜದ ಕಾರ್ಖಾನೆಗಳು , ಕೆಲವು ಉದ್ದಿಮೆಗಳು ಬರುತ್ತಿವೆಉ
 • ಹಾಗಾಗಿ ಮುಂದಿನ ವರ್ಷಗಳಲ್ಲಿ ಅಲ್ಲಿಯ ಜನರಿಗೆ ಅಲ್ಲಿಯೇ ಕೆಲಸ ಇದೆ ಎಂದು.
 • ಹಾಗೇನದರೂ ಆದರೆ ಇಲ್ಲಿಯ ಕೃಷಿಯ ಗತಿ ಅಧೋಗತಿಯಾಗಬಲ್ಲದು.
 • ನೈಪುಣ್ಯ ತಿಳಿಯದ ಕೆಲಸಗಾರರಿಂದ ಕೃಷಿ ಮಾಡಿಸುವುದು ಅಷ್ಟಕ್ಕಷ್ಟೇ.
ಇನ್ನು ಈ ದೃಶ್ಯಾವಳಿ ಒಂದು ಕನಸು ಎನ್ನಬಹುದು
ಇನ್ನು ಈ ದೃಶ್ಯಾವಳಿ ಒಂದು ಕನಸು ಎನ್ನಬಹುದು


ಕೃಷಿಯ ಮೇಲೆ ಪರಿಣಾಮ:

 • ಕೃಷಿ ಎಂದರೆ ಅದು ಮಣ್ಣಿನ ಸಹಕಾರದಲ್ಲಿ ನಡೆಯುವಂತದ್ದು.
 • ಮಣ್ಣು ಎಂಬ ಮಧ್ಯಮದ ಸಹಕಾರ ಉತ್ತಮವಾಗಿದ್ದರೆ ಮಾತ್ರ ಕೃಷಿ ಲಾಭದಾಯವಾಗಿರಲು ಸಾಧ್ಯ.
 • ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ನಮ್ಮ ಕೃಷಿ ಉತ್ಪಾದನೆ ಕಡಿಮೆಯಾಗುತ್ತಿದೆ.
 • ಹೆಚ್ಚು ಹೆಚ್ಚು ಭೂಮಿ ಕೃಷಿಗೊಳಪಡುತ್ತಿರುವ ಕಾರಣ ಇದು ನಮಗೆ ಗೊತ್ತಾಗುವುದಿಲ್ಲ.
 • ಎಕ್ರೆವಾರು ಉತ್ಪಾದನೆ ಕಡಿಮೆಯಾಗಲು ಕಾರಣ ಮಣ್ಣಿನ ಫಲವತ್ತತೆಯ ಕೊರತೆ.
 • ಮಣ್ಣು ಎಂಬ ಮಾಧ್ಯಮದಲ್ಲಿ ಬೆಳೆ ಬೆಳೆಯುವಾಗ ಅದು ಮಣ್ಣಿನ ಸಾರವನ್ನು ಬಳಸಿಕೊಳ್ಳುತ್ತದೆ.
 • ಅಗ ಸಹಜವಾಗಿ ಅಲ್ಲಿ ಕೊರತೆ ಉಂಟಾಗುತ್ತದೆ.
 • ಕೊರೆತೆಗೆ ಮರು ಪೂರಣ ಮಾಡದಿದ್ದರೆ ಅದು ಮತ್ತಷ್ಟು ಕೊರತೆ ಅನುಭವಿಸುತ್ತದೆ.
 • ರಸ ಗೊಬ್ಬರಗಳು ಇವೆಯಾದರೂ ಅದು ಸಮರ್ಪಕವಾಗಿ ಕೆಲಸ ಮಾಡಲು ಮಣ್ಣಿನ ಫಲವತ್ತತೆಯೂ ಬೇಕಾಗುತ್ತದೆ.
 • ಮಣ್ಣು ಎಂಬುದು ಸಾವಯವ ಇಂಗಾಲ ( ಸಾವಯವ ಅಂಶದ ಮಿಶ್ರಣ) ಚೆನ್ನಾಗಿದ್ದರೆ ಮಾತ್ರ ಅದು ಬೆಳೆಗಳನ್ನು ಚೆನ್ನಾಗಿ ಪೋಷಿಸಬಲ್ಲದು.
 • ಈಗ ಕೆಲಸಗಾರರ ಕೊರತೆಯಿಂದ ಸಾವಯವ ವಸ್ತುಗಳಿದ್ದರೂ ಅದು ಅನವಶ್ಯಕ ಹಾಳಾಗಿ ಹೋಗುತ್ತದೆಯೇ ಹೊರತು ಅದು ಬೆಳೆಗಳಿಗೆ ಬಳಕೆ ಆಗುತ್ತಿಲ್ಲ.
 • ಈ ಕಾರಣದಿಂದ ಕೃಷಿಕರಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಿ ಲಾಭ ಕಡಿಮೆಯಾಗುತ್ತಿದೆ.
 • ಮುಂದೊಂದು ದಿನ ಸಾವಯವ ಅಂಶ ಇಲ್ಲದ ಭೂಮಿಯಲ್ಲಿ ಕೃಷಿ ಮಾಡುವುದು ಪೂರೈಸದ ಕಸುಬು ಎಂದಾದರೂ ಅಚ್ಚರಿ ಇಲ್ಲ.


ಪರಿಹಾರ ಏನು?

 • ಕೆಲಸದವರು ಇಲ್ಲದೆ ಕೃಷಿ ಮಾಡುವುದು ಅಸಾಧ್ಯವಾದ ಮಾತು.ಭೂಮಿ, ಕೆಲಸಗಾರ ಮತ್ತು ಬಂಡವಾಳ ಈ ಮೂರು ಸೇರಿದರೆ ಮಾತ್ರ ಕೃಷಿ.
 • ಆದರೆ ಈಗ ಮೊದಲಿನದ್ದು, ಮತ್ತು ಮುರನೆಯದ್ದು ಇದೆ. ಎರಡನೆಯದ್ದು ಇಲ್ಲ.
 • ಹಾಗಾಗಿ ರಥದ ಚಾಲನೆಗೆ ಸಾರಥಿ ಇಲ್ಲದಾಗಿದೆ. ಇದನ್ನು ಸರಿಪಡಿಸಲು ರೈತರೆಲ್ಲರೂ ಸೇರಿ ಏನಾದರೂ ಮಾಡಬೇಕಾಗಿದೆ.
 • ಕೃಷಿ ಕೆಲಸಕ್ಕೆ ಸ್ಥಳೀಯರು ಅದರಲ್ಲೂ ದೈಹಿಕವಾಗಿ ಸಮರ್ಥರು ಸಿಗುತ್ತಾರೆ ಎಂದು ಕನಸು ಕಾಣುವಂತಿಲ್ಲ.
 • ಹಾಗಾಗಿ ಎಲ್ಲಿ ಕೆಲಸಗಾರರು ಲಭ್ಯವಿದ್ದಾರೆಯೋ ಅಲ್ಲಿಂದ ಜನರನ್ನು ತರುವ ಕೆಲಸ ಮಾಡಬೇಕು.
 • ಇದಕ್ಕೆ ರೈತರು ಸಂಘಟಿತರಾಗುವುದು ಒಂದೇ ಪರಿಹಾರ.
 • ಉತ್ತರ ಭಾರತದ ಭಾಗಗಳಿಂದ ಕೃಷಿ ಉದ್ದೇಶಕ್ಕಾಗಿಯೇ ಜನ ತರಿಸುವ ಪ್ರಯತ್ನಗಳು ಆಗಬೇಕಾಗಿದೆ.
 • ಅವರನ್ನು ತರಬೇತಿಗೊಳಿಸಿ, ಕೆಲಸದ ಬಧ್ರತೆಯನ್ನು ನೀಡಿ ಪೊಷಿಸುವುದು ಅನಿವಾರ್ಯವಾಗಿದೆ.
 • ಜೀವನ ಬಧ್ರತೆ ಇರುವಲ್ಲಿ ಕೆಲಸಕ್ಕೆ ಜನ ಸಿಕ್ಕೇ ಸಿಗುತ್ತಾರೆ. ಶೊಷಣೆಗೆ ಆಸ್ಪದ ನೀಡಬಾರದು.
 • ಹೆಚ್ಚು ಹೆಚ್ಚು ದುಡಿ ಹೆಚ್ಚು ಹೆಚ್ಚು ಸಂಪಾದನೆ ಮಾಡು ಎಂಬುದಕ್ಕೆ ಅವಕಾಶ ಕಲ್ಪಿಸಿದರೆ ಜನ ಕೃಷಿ ಕೆಲಸಕ್ಕೂ ಸಿಗುತ್ತಾರೆ.
 • ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸಗಾರರನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಒಮ್ಮೆ ಗಮನಿಸಿ.
 • ಅದನ್ನು ನಾವೂ ಕೊಟ್ಟರೆ ಈ ಸಮಸ್ಯೆ ನಿವಾರಣೆ ಸಾಧ್ಯ.


ಕೃಷಿ ಕೆಲಸಗಾರರನ್ನು ಪೋಷಿಸದೆ ವಿನಹ ಕೃಷಿ ಉಳಿಯುವುದಿಲ್ಲ. ನಮ್ಮ ಈಗಿನ ನಡವಳಿಕೆಯನ್ನು ಹೀಗೆ ಮುಂದುವರಿಸಿಕೊಂಡು ಹೋದರೆ ಇನ್ನು ಎರಡು ಮೂರು ವರ್ಷಗಳಲ್ಲಿ ಕೃಷಿ ಬಡವಾಗುತ್ತದೆ. ಕೃಷಿ ವೃತ್ತಿಯೇ ಬೇಡವಾಗುತ್ತದೆ ಕೃಷಿ ಭೂಮಿ ಮಾರಾಟ ಮಾಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಆಗ ಭೂಮಿಯ ಬೆಲೆ ಸಹಜವಾಗಿ ಕುಸಿಯುತ್ತದೆ. ಅಂತಹ ಸಂದರ್ಭಗಳಲ್ಲಿ ಇದೇ ಉತ್ತರ ಭಾರತದವರು ನಮ್ಮಲ್ಲಿ ಭೂಮಿ ಖರೀದಿಸಿ ಅಲ್ಲಿಂದಲೇ ಜನ ತಂದು ಕೃಷಿ ಮಾಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ.

Leave a Reply

Your email address will not be published. Required fields are marked *

error: Content is protected !!