ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ. 

 ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು, ಒಣಗಿಸುವುದು ಮಾಡುತ್ತಾ ಬೇಸಿಗೆಯ ದಿನಗಳನ್ನು ಅದೇ ಕಸುಬಿನಲ್ಲಿ  ಕಳೆಯುತ್ತಿದ್ದರು ಅವಿಭಕ್ತ ಕುಟುಂಬದ ಮನೆ ಮಂದಿ. ಗೇರು ಬೀಜ ಮಾರಿ,ಒಂದಷ್ಟು ಮನೆ  ಸಾಮಾನು, ಸ್ವಲ್ಪ ಬಟ್ಟೆ ಬರೆ ಬಿಟ್ಟರೆ ಅಂದೂ ರೈತ ಗಳಿಸಿದ್ದು ಅಷ್ಷಕ್ಕಷ್ಟೇ. ಮನೆತುಂಬಾ ಜನ ಇದ್ದಾಗ ಕಸುಬು ಮಾಡಲು ಕೆಲಸ ಬೇಕು ಎಂದು ಮುಂದುವರಿದ ಗೋಡಂಬಿ ಕೃಷಿ, ಈಗ ಬೇರೆ ಲಾಭದಾಯಕ ಕಸುಬುಗಳ ಮಧ್ಯೆ ನಿರ್ಲಕ್ಶ್ಯಕ್ಕೊಳಗಾಗಿದೆ. ಜನ ಗೇರು ಎಂದರೆ  ಅಪಹಾಸ್ಯ ಮಾಡುವಂತಾಗಿದೆ. ಸಂಶೋಧನಾ ಸಂಸ್ಥೆಗಳು ಗೇರು ಬೆಳೆಯಿರಿ ಎನ್ನುತ್ತಾರೆ. ನಮಗೆ ನಿಮ್ಮ ಉಪದೇಶ ಬೇಡ ಎಂದು ಜನ ಮರಗಳನ್ನು ಕಡಿಯುತ್ತಿದ್ದಾರೆ.

ಗೇರು ಹಣ್ಣು

ಗೇರು ಬೆಳೆ ಪ್ರೋತ್ಸಾಹ ಮತ್ತು ನಿರ್ಲಕ್ಷ್ಯ:

  • ನಮ್ಮ ದೇಶದಲ್ಲಿ ಸಂಸ್ಕರಣೆಗೆ ಬೇಕಾಗುವಷ್ಟು  ಗೇರು ಬೀಜ ಇಲ್ಲ ಎಂದು ಬಹಳ ಹಿಂದಿನಿಂದಲೂ ಇದ್ದಂತಹ ಸುದ್ದಿ.
  • ಗೇರು ಬೆಳೆ ಪ್ರಚಾರಕ್ಕಾಗಿ ಭಾರತ ಸರಕಾರವು 1966 ರಲ್ಲಿ ಗೇರುಬೀಜ ಅಭಿವೃದ್ದಿ ನಿರ್ಧೇಶನಾಲಯವನ್ನು ಪ್ರಾರಂಭಿಸಿತು.
  • ಆ ಸಮಯದಲ್ಲಿ ರೈತರು ಗೇರು ಬೆಳೆ ಬೆಳೆಸಲು ಉತ್ತೇಜನ ನೀಡಲು  ರಾಜ್ಯ ಸರಕಾರದ ಮೂಲಕ ಬಹಳಷ್ಟು  ರೈತರಿಗೆ 5-10-20 30 ಎಕ್ರೆಯಂತೆ ಭೂಮಿಯನ್ನೂ ಸಹ ಲೀಸ್ ಗೆ ನೀಡಲಾಗಿತ್ತು.
  • ರಾಜ್ಯ ಸರಕಾರ ತನ್ನ ಅಧೀನದಲ್ಲಿ ಸಾಕಷ್ಟು ಕಡೆ ಗೇರು ನೆಡು ತೋಪುಗಳನ್ನೂ ಸಹ (Karnataka Cashew development corporation) ಮಾಡಿತ್ತು.
  • ರೈತರಿಗೆ ಉಚಿತ ಸಸಿಗಳನ್ನು ಸಹ ನೀಡಲಾಗಿತ್ತು.
  • ಗೇರು ಮರಗಳು ಬೆಳೆದಿದ್ದವು ಗೇರು ಬೀಜವೂ ಆಗುತ್ತಿತ್ತು.
  • ಕ್ರಮೇಣ ಗೇರುವಿನ ತಳಿ ಅಭಿವೃದ್ದಿ ಕಾರ್ಯಗಳು ನಡೆದು ಕಸಿ ಗಿಡಗಳನ್ನು ಪರಿಚಯಿಸಲಾಯಿತು. 
  • ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದ ಅಧೀನದಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಗೇರು ಸಂಶೋಧನಾ ಸಂಸ್ಥೆ ತೆರೆಯಲ್ಪಟ್ಟಿತು.  
  • ಆ ನಂತರ ಪುತ್ತೂರಿನಲ್ಲಿ ರಾಷ್ಟ್ರೀಯ ಗೇರು ಸಂಶೋಧನಾ ಸಂಸ್ಥೆಯೂ ತೆರೆಯಲ್ಪಟ್ಟಿತು.
  • ಇಲ್ಲೆಲ್ಲಾ ಗೇರು ಬೆಳೆಯ ಹೊಸ ಹೊಸ ತಾಂತ್ರಿಕತೆಯನ್ನು ರೈತರಿಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
  • ಒಂದಷ್ಟು ಉತ್ತಮ ಇಳುವರಿಯ ವಿಶೇಷ ತಳಿಗಳನ್ನು ಸಹ ಬಿಡುಗಡೆಗೊಳಿಸಿದ್ದಾರೆ.
  • ಯಾವುಯಾವುದೋ ಯೋಜನೆಗಳ ಮೂಲಕ ಕೆಲವು  ರೈತರಿಗೆ ಉಚಿತ ಸಸಿ , ಸಹಾಯಧನ ಇತ್ಯಾದಿಗಳನ್ನು ಕೊಡಲಾಗಿದೆ.
  • ಕೆಲವು ರೈತರು ಸ್ವ ಆಸಕ್ತಿಯಲ್ಲಿ ಬೆಳೆ ಬೆಳೆಸಿದ್ದೂ ಉಂಟು. ವರ್ಷ ವರ್ಷವೂ ಲಕ್ಷಾಂತರ ಸಂಖ್ಯೆಯ ಸಸ್ಯೋತ್ಪಾದನೆ ಮಾಡಿ ಹಂಚುತ್ತಾ ಬರಲಾಯಿತು.
  • ಸಂಶೊಧನಾ ಕೇಂದ್ರಗಳ ಸಸ್ಯೋತ್ಪಾದನೆ ಸಾಲದ್ದಕ್ಕೆ ಕೆಲವು ಖಾಸಗಿಯವರಿಗೆ ಗೇರು ಅಭಿವೃದ್ದಿ ನಿರ್ಧೇಶನಾಲಯದ ಅಧಿಕೃತ ನರ್ಸರಿ ನಡೆಸುವ ಪರವಾನಿಗೆಯನ್ನೂ ನೀಡಲಾಯಿತು. 
  • ಸರಕಾರಿ ವ್ಯವಸ್ಥೆಯಲ್ಲೂ ಲಕ್ಷಾಂತರ ಸಸಿಗಳು ನೂರಾರು ಖಾಸಗಿ ನರ್ಸರಿಗಳಲ್ಲಿ ಕೋಟಿಗಟ್ಟಲೆ ಸಸಿಗಳು ತಯಾರಾಗಿ  ಅದೆಲ್ಲವೂ ನಾಟಿಯಾಗಿವೆ. 
  • ಅವೆಲ್ಲಾ  ಫಲ ಕೊಟ್ಟಿದ್ದರೆ ಇಂದು ನಮ್ಮ ರಾಜ್ಯದಲ್ಲಿ ಇರುವ ಗೇರು ಬೀಜ ಸಂಸ್ಕರಣಾ ಫ್ಯಾಕ್ಟರಿಗಳಿಗೆ ಬೇಕಾದಷ್ಟು ಗೇರು ಬೀಜ ದೊರೆತು ಮಿಗತೆಯಾಗುತ್ತಿತ್ತೇನೋ? 
  • ಆದರೆ ನಮ್ಮ ಗೇರು ಬೀಜ  ಸಂಸ್ಕರಣಾ ಘಟಕಗಳು ಕಚ್ಚಾ ಗೇರು ಬೀಜವನ್ನು ಹಲವಾರು ವರ್ಷಗಳಿಂದ ಆಫ್ರಿಕಾ, ವಿಯೆಟ್ನಾಂ ಮುಂತಾದ ದೇಶಗಳಿಂದ ಹೇರಳವಾಗಿ ಆಮದು ಮಾಡಿಕೊಳ್ಳುತ್ತಲೇ ಇವೆ.
  • ನಮ್ಮ ಗೇರು ಬೀಜ ಸಂಸ್ಕರಣಾ ಘಟಕಗಳು ಕಾರ್ಯ ಮಾಡುವುದೇ ಹೊರ ದೇಶದ ಆಮದು ಗೇರು ಬೀಜಗಳ ಕೃಪೆಯಿಂದ ಎಂಬ  ಪರಿಸ್ಥಿತಿ ಇದೆ. 
  • ಲೀಸ್ ಗೆ ಭೂಮಿ ಪಡೆದವರು ಅದರಲ್ಲಿ ಅಡಿಕೆ, ರಬ್ಬರ್ ಹಾಕಿದ್ದಾರೆ.
  • ಸರಕಾರಿ ನೆಡು ತೋಪುಗಳು ನಿರ್ವಹಣೆ ಇಲ್ಲದೆ  ಪಾಳು ಬಿದ್ದಿವೆ.
  • ಕೋಟ್ಯಾಂತರ ಸಂಖ್ಯೆಯ ಸಸಿಗಳು ನಾಟಿಯಾಗಿದ್ದರೂ ಈಗ ಎಲ್ಲೆಲ್ಲೂ ಗೇರು ಸಸಿಗಳು ಕಾಣುತ್ತಿಲ್ಲ.
  • ಆ ಸ್ಥಳವನ್ನು ರಬ್ಬರ್, ಅಡಿಕೆ ಆತಿಕ್ರಮಿಸಿದೆ.
  • ಗೇರು ಬೆಳೆ ಪ್ರೋತ್ಸಾಹ ಕಾರ್ಯ ಕೈಗೊಂಡರೂ ಅದನ್ನು ಫಾಲೋ ಅಪ್ ಮಾಡದೆ ಸರಕಾರದ  ಯೋಜನೆ ನೀರಿನಲ್ಲಿ  ಹೋಮ ಮಾಡಿದಂತಾಗಿದೆ.
ದೈತ್ಯ ಮರಗಳು ಈಗ ಇಲ್ಲವೆ ಇಲ್ಲ.

ಗೇರು ಬೀಜದ ಬೆಲೆಯ ಅವ್ಯವಸ್ಥೆ:

  • ಗೇರು ಬೀಜದ ತಿರುಳು ಗೋಡಂಬಿ ಎಂಬುದು ಇದ್ದ ಒಣ ಹಣ್ಣುಗಳಲ್ಲಿ ಅತ್ಯಂತ ದುಬಾರಿಯ  ಒಣ ಹಣ್ಣು ( ಬೀಜ).
  • ಇದು ರಪ್ತು ಆಗುವಂತದ್ದು. ಬಹುತೇಕ ಎಲ್ಲಾ ಗೇರು ಸಂಸ್ಕರಣಾ ಘಟಕಗಳೂ ರಪ್ತು ಉದ್ದೇಶದವುಗಳೇ ಆಗುರುತ್ತವೆ.
  • ಎಲ್ಲಾ  ಗೋಡಂಬಿ ಸಂಸ್ಕರಣಾ ಘಟಕಗಳೂ XYZ Cashew exports)   ಎಂಬ ನಾಮಫಲಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ  ಕಾರ್ಯನಿರ್ವಹಿಸುತ್ತಿವೆ.  
  • ಆದರೆ ಗೇರು ಬೆಳೆಗಾರರಿಗೆ ಈ ಸಂಸರಣಾ ಘಟಕಗಳಿಂದ ಲಾಭವಾಗಿದೆ ಎನ್ನುವಂತಿಲ್ಲ.
  • ಕಡಿಮೆ ಬೆಲೆಗೆ ಖರೀದಿ ಮಾತ್ರ ನಡೆಯುತ್ತದೆ.    
  • ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಕರ್ನಾಟಕದಲ್ಲಿ ಗೇರು ಬೀಜ ಖರೀದಿ ವ್ಯವಸ್ಥೆ ಚೆನ್ನಾಗಿಯೇ ಇದೆ.
  • ಆದರೆ ಬೆಲೆ ಮಾತ್ರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ. ಒಂದು  ಮಳೆ ಬಂದರೆ ಸಾಕು ಗೇರು ಬೀಜದ ದರ 20-30% ಇಳಿಕೆಯಾಗುತ್ತದೆ.
  • ಕಳೆದ 5 ವರ್ಷಗಳ ದಾಖಲೆಯನ್ನು ನೋಡಿದರೆ ಗೇರು ಬೀಜದ ದರ ಕಿಲೋ 100 ರೂ.ಗಳಿಂದ ಮೇಲೆ ಹೋಗಲೇ ಇಲ್ಲ.
  • ಮಳೆ ಬರುವ ಮುಂಚೆ 100 ರ ಆಸು ಪಾಸಿನಲ್ಲಿ ಇದ್ದರೆ ಮಳೆ ಬಂದರೆ ಅದು 70 ಕ್ಕೆ ಇಳಿಯುತ್ತದೆ.
  • ಇತ್ತೀಚೆಗೆ ಜನವರಿ ತಿಂಗಳ ನಂತರ ಮಳೆ ಪ್ರಾರಂಭವಾಗುತ್ತಿದ್ದು, ಗೇರು ಬೀಜ ಬೆಳೆಯುವವರು ಕೊಂದ ಪಾಪವನ್ನು ತಿಂದು ಪರಿಹಾರ ಮಾಡಿಕೊಂಡಂತೆ ಅದನ್ನು ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.

ಕಳೆದ 6 ವರ್ಷಕ್ಕೆ ಹಿಂದೆ ಒಮ್ಮೆ ಗೇರು ಬೀಜಕ್ಕೆ ಉತ್ತಮ ಬೆಲೆ ಬಂದಿತ್ತು. ಆ ಸಮಯದಲ್ಲಿ ಗೋಡಂಬಿ ಸಂಸ್ಕರಣಾ ಘಟಕಗಳ ಸಂಘಟನೆಗೆ ಕೇಂದ್ರ ವಾಣಿಜ್ಯ ಮಂತ್ರಾಲಯದಿಂದ ಆಮದು ಮಾಡಿಕೊಳ್ಳಲು ಅನುಮತಿ ಸಿಕ್ಕಿರಲಿಲ್ಲ. ಆ ನಂತರ ಆ ಬಿಗು ಸಡಿಲವಾಗಿದೆ.  ದರ ಏರಿದ್ದು ಅದೇ ಮೊದಲು. ನಂತರ ಏರಲೇ ಇಲ್ಲ.

ಗೇರು ಬೀಜದ ಕೆಲಸ

ಗೇರು ಬೀಜದ ಉತ್ಪಾದನಾ ವೆಚ್ಚ:

  • ಗೇರು ಬೀಜ ಯಾರೋ ಬೀಜ ಹಾಕಿ ಹೇಗೇಗೋ ಹುಟ್ಟಿದ್ದು ಆದರೆ ಅದರ ಬುಡದಲ್ಲಿ ಯಾವಾಗಲಾದರೂ ಹೆಕ್ಕುವಾಗ ಅದನ್ನು ಹೆಕ್ಕಿದ ಮಜೂರಿಗಿಂತ ಹೆಚ್ಚು ಹಣ ಸಿಗುವುದಾದರೆ ಅದು ಲಾಭದಾಯಕವಾಗುತ್ತಿತ್ತು.
  • ಆದರೆ ಗೇರು ಮರ ಹಾಗಿಲ್ಲ. ಗೇರು ಮರ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಹೆಚ್ಚು ವರ್ಷ ಬದುಕುವುದೇ ಇಲ್ಲ.
  • ಇದಕ್ಕೆ ಕಾಂಡ ಕೊರಕ ಹುಳದ ಉಪಟಳ ಅತ್ಯಧಿಕ.
  • ಗೇರು ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಉತ್ತಮ ಇಳುವರಿ ಕೊಡುತ್ತದೆ.
  • ವರ್ಷಕೊಮ್ಮೆಯಾದರೂ ಗೊಬ್ಬರ ಹಾಕಬೇಕು. ಫಸಲು ಉಳಿಸಲು ಕೀಟನಾಶಕ ಸಿಂಪರಣೆ ಮಾಡಬೇಕು.
  • ವರ್ಷ ವರ್ಷವೂ ಹೊಲದ ಕಲೆ ಇತ್ಯಾದಿ ಸವರಿ ಸ್ವಚ್ಚಮಾಡಬೇಕು.
  • ಕೊಯ್ಯಲು ಜನಕ್ಕೆ ಮಜೂರಿ ಕೊಡಬೇಕು.
  • ಇವೆಲ್ಲಾ ಸೇರಿದರೆ ಒಂದು ಕಿಲೋ ಗೇರು ಬೀಜ ಮಾರಾಟಕ್ಕೆ  ತಯಾರಾಗಲು ಕನಿಷ್ಟ 150 ರೂ. ಖರ್ಚು ಇದೆ. 
  • ಗೇರು ಬೀಜ ಕೊಯ್ದು ಹೆಕ್ಕಿ ಮಾರಾಟ ಮಾಡಿದರೆ  ಅವನಿಗೆ ಕಿಲೋ ಮೇಲೆ 50 ರೂ ನಷ್ಟವಾಗುತ್ತದೆ.
  • ಹಾಗಾಗಿ ಗೇರು ಮರಳಲ್ಲಿ ಗೇರು ಬೀಜ ಇದ್ದರೂ ಕೊಯ್ಯುವ ಗೋಜಿಗೆ ಜನ ಓಗುತ್ತಿಲ್ಲ.
  • ಗೇರು ಬೀಜ ಕದಿಯುವವರೂ ಇಲ್ಲ.

ಗೇರು ಸಂಸ್ಕರಣಾ ಉದ್ದಿಮೆದಾರರು ಆಮದು ಗೇರು ಬೀಜಕ್ಕೇ ಆದ್ಯತೆ ನೀಡುತ್ತಿದು, ಅದು ಕಡಿಮೆ ಬೆಲೆಗೆ ನಿರಾಯಾಸವಾಗಿ ಬೇಕಾದ ಪ್ರಮಾಣ ಸಿಗುತ್ತಿದೆ. ತಕ್ಷಣ ಹಣ ಪಾವತಿಯೂ ಬೇಕಾಗುವುದಿಲ್ಲ. ಒಂದಷ್ಟು ಜನ ಆಫ್ರಿಕಾದಲ್ಲೇ ಸಂಸ್ಕರಣಾ ಘಟಕ ತೆರೆದವರೂ ಇದ್ದಾರೆ.ಹಾಗಾಗಿ ನಮ್ಮ ಉತ್ಪಾದನಾ ವೆಚ್ಚಕ್ಕೆ ಗೇರು ಬೆಳೆ ಪೂರೈಸದಾಗುತ್ತದೆ. ನಿದಾನವಾಗಿ ಇದು ಬದಿಗೆ ಸರಿಯುತ್ತದೆ. ಇದನ್ನು  ಸರಕಾರ ಅಥವಾ ಸಂಬಂಧಿಸಿದವರ ಗಮನಕ್ಕೆ  ತರದೇ ಇದ್ದರೆ ಈ ತನಕ ಗೇರು ಬೆಳೆಯಲ್ಲಿ ನಡೆದ ಸಂಶೋಧನೆಗಳು ರಾಷ್ಟ್ರೀಯ ನಷ್ಟವಾಗುತ್ತದೆ.

ಒಳ್ಳೆಯ ಬೀಜಕ್ಕೂ ಕಳಪೆಗೂ ಬೆಲೆಯಲ್ಲಿ ವ್ಯತ್ಯಾಸ ಇಲ್ಲ:

ಒಣಗಿಸಿದ ಬೀಜ
  • ಕೆಲವು ರೈತರು ಗೇರು ಬೀಜ ಕೊಯ್ದು, ಅದನ್ನು ಒಂದು ತಪ್ಪಿದರೆ ಎರಡು ದಿನ ಬಿಸಿಲಿನಲ್ಲಿ ಒಣಗಿಸಿ ಅದನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವವರೂ ಇದ್ದಾರೆ.
  • ಕೆಲವರು ಕೊಯಿಲು ಮಾಡಿ ತಕ್ಷಣ ಮಾರಾಟ ಮಾಡುವವರೂ ಇದ್ದಾರೆ.
  • ಈ ಎರಡೂ ಪ್ರಕಾರದ ಬೆಳೆಗಾರರಿಗೂ ಸಿಗುವ ಬೆಲೆ ಒಂದೇ.
  • ದಾಸ್ತಾನು ಇಟ್ಟರೂ ಸಹ ಬೆಲೆ ವ್ಯತ್ಯಾಸ ಬರೇ 5-10 ರೂ ಮಾತ್ರ.
  • ರೈತರಾದವರು ತಮ್ಮ ಉತ್ಪನ್ನವನ್ನು ಸಂಸ್ಕರಣಾ ಘಟಕಗಳಿಗೆ ನೇರವಾಗಿ ಮಾರಾಟ ಮಾಡಿ ಉತ್ತಮ ಗುಣಮಟ್ಟದ ಬೀಜಕ್ಕೆ ಹೆಚ್ಚು ಬೆಲೆ ಪಡೆಯುವುದೂ  ಸಹ ಕಷ್ಟ ಇದೆ.
  • ಫ್ಯಾಕ್ಟರಿಗಳವರು ಸ್ಥಳೀಯ ಬೆಳೆಗಾರರ ಗೇರು ಬೀಜವನ್ನು ಖರೀದಿಸುವ ಗೋಜಿಗೇ ಹೋಗುವುದಿಲ್ಲ.
  • ವಿದೇಶಗಳಿಂದ ಇಲ್ಲಿನ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿ ನಡೆಯುತ್ತದೆ ಎನ್ನುತ್ತಾರೆ ಬೆಳೆಗಾರರು.

ನಿರ್ಲಕ್ಷಿಸಬೇಡಿ- ಇದು ಉತ್ತಮ ಬೆಳೆ:

  • ಗೇರು ಬೆಳೆಯ ಅಭಿವೃದ್ದಿಯ ಕುರಿತಾಗಿ ಸಂಶೋಧನೆ ಮಾಡುವವರು, ನಿರ್ದೇಶನಾಲಯ ಇವರು ಗೇರು ಬೀಜದ  ಉತ್ಪಾದನಾ ವೆಚ್ಚವನ್ನು ಗೊತ್ತು ಮಾಡಬೇಕು.
  • ಅದಕ್ಕನುಗುಣವಾಗಿ ಈ ಬೆಳೆಗೆ ಬೆಲೆ ನಿರ್ಧರಿಸುವಂತೆ ಸರಕಾರಕ್ಕೆ ಷಿಫಾರಸು ಮಾಡಬೇಕು.
  • ಇವರು ಬರೇ ಸಸಿ ಉತ್ಪಾದೈನ ಮಾರಾಟ ಮಾಡಿದರೆ   ಅಥವಾ ತಳಿ ಅಭಿವೃದ್ದಿ ಮಾಡುತ್ತಾ ಬಂದರೆ ಅದೆಲ್ಲವೂ ಮುಡಿಯುವ ಆಸಕ್ತಿ ಇಲ್ಲದವರಿಗೆ ಹೂ ಮಾಲೆ ಕೊಟ್ಟಂತೆ ಆಗುತ್ತದೆ.
  • ಇವರ ಶ್ರಮಕ್ಕೂ ಬೆಲೆ ಇಲ್ಲದಾಗುತ್ತದೆ. ಬೆಳೆಯೊಂದು ಇರುವಾಗ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಅಗಬೇಕು.
  • ಅದು ಅಳಿದ  ನಂತರವಲ್ಲ. ನಮ್ಮ ಕರಾವಳಿ ಮಲೆನಾಡು ಅರೆ ಮಲೆನಾಡು ಹಾಗೂ ಆಯ್ದ  ಬಯಲುಸೀಮೆಯ ಪ್ರದೇಶಗಳಲ್ಲಿ ಈಗ  ವ್ಯಾಪಿಸಿರುವ ಅಡಿಕೆ ಬೆಳೆ,
  • ಮುಂದೆ ಬೆಲೆ ಕುಸಿತ ಆದರೆ ಆ ಸಮಯದಲ್ಲಿ ಬೆಳೆಗಾರರನ್ನು ಗೇರು ಬೆಳೆಗೆ ಬೆಲೆ ಆಕರ್ಷಕವಾಗಿದ್ದರೆ ಅದು ರಕ್ಷಿಸಬಲ್ಲದು.

ಗೇರು ಬೀಜಕ್ಕೆ ಉಳಿದ ಬೆಳೆಗಳಂತೆ ಆಕರ್ಷಕ ಬೆಲೆ ಇರುತ್ತಿದ್ದರೆ , ಇಂದಿಗೂ ಗೇರು ಬೆಳೆ ಬೆಳೆಯಲು ಸೂಕ್ತವಾದ ಏರು ತಗ್ಗಿನ ಗುಡ್ಡಗಳು ಅಡಿಕೆ , ರಬ್ಬರ್  ತೋಟಗಳಾಗುತ್ತಿರಲಿಲ್ಲ. ಜನ ಗೇರು ಬೆಳೆಯನ್ನು ಬಿಡುತ್ತಲೂ ಇರಲಿಲ್ಲ.   ಗೇರು ಬೆಳೆ ಒಂದು ರೀತಿಯಲ್ಲಿ ಪರಿಸರ ಸ್ನೇಹಿ ಬೆಳೆಯೂ ಹೌದು. ಇದು ಬರೇ ಗೇರು ಬೀಜ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೆ  ಆಹಾರ, ಆಸರೆಯನ್ನೂ ನಿಡುವಂತದ್ದು. 

ಬೆಳೆಗಾರರಿಗೆ ಗೋವಾ ಸರಕಾರದಂತೆ ಗೇರು ಬೆಳೆಯ ಎಲ್ಲಾ  ಉತ್ಪನ್ನಗಳನ್ನು  ಮೌಲ್ಯವರ್ಧನೆ ಮಾಡಲು ಅವಕಾಶ ಕೊಟ್ಟರೆ ಈ ಬೆಳೆ ಉಳಿಯಬಹುದು. ಇದನ್ನು ಸಂಬಂಧಿಸಿದ ಇಲಾಖೆಗಳು ಸರಕಾರದ ಗಮನಕ್ಕೆ ತರಬೇಕು. ತಮ್ಮ ಬದುಕಿಗೆ ಆಸರೆ ನೀಡಿದ ಬೆಳೆ, ರೈತರಿಂದ ತಿರಸ್ಕೃತವಾದರೆ ಅದು ಅವರ ಬೇಜವಾಬ್ಧಾರಿ ಎನ್ನಿಸುತ್ತದೆ.  ಗೇರು ಬೀಜಕ್ಕೆ ನ್ಯಾಯುತವಾದ ಬೆಲೆ ದೊರೆಯುವಂತೆ  ಮಾಡಿ, ಗೇರು ಬೆಳೆಯನ್ನು ಉಳಿಸಬೇಕಾದ  ತುರ್ತು ಅಗತ್ಯವಿದೆ.

4 thoughts on “ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

  1. ತೋಟಗಾರಿಕೆ ಬೆಳೆಗಳಲ್ಲಿ ಗೇರುಕೃಷಿ ಅತ್ಯುತ್ತಮವಾದ್ದದು. ಆದರೆ ಅಡಿಕೆಯಷ್ಟು ಲಾಭಕರವಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದ ಗೇರು ಅಭಿವೃದ್ಧಿ ಸಂಸ್ಥೆಗಳು ಕಸಿ ಗಿಡಗಳ ನಾಟಿಗೆ ಆದ್ಯತೆ ನೀಡುತ್ತಿವೆ. ಆದರೆ ಇದು ಬೇಗ ಫಸಲು ಕೊಡುತ್ತಿವೆಯಾದರು ಬಳಿಕ ಕಡಿಮೆ ಫಸಲು ಕೊಡುತ್ತಿರುವುನ್ನು ನಾನು ಗಮನಿಸಿದ್ದೇನೆ. ಆದರೆ ನಾಟಿ ಗಿಡಗಳು ತಡವಾಗಿ ಫಸಲು ಕೊಟ್ಟರು ೫೦ ವರ್ಷಗಳ ವರೆಗೆ ನಿರಂತರವಾಗಿ ಫಸಲು ಕೊಡುತ್ತದೆ.
    ನಮ್ಮಲ್ಲಿ ನೀರಿನ ಕೊರತೆ ನೆಪದಲ್ಲಿ ಎಷ್ಟೋ ರೈತರು ಕೃಷಿ ಕೈಗೊಳ್ಳುತ್ತಿಲ್ಲ. ಲಾಭಕರವಾಗಿರುವ ಅಡಿಕೆ ಕೃಷಿಗೆ ಆರಂಭಿಕ ಬಂಡವಾಳ ಹೆಚ್ಚು ಬೇಕಾಗುವ ಸಾಧ್ಯತೆ ಇದ್ದಲ್ಲಿ ಗೇರುಕೃಷಿ ಕೈಗೊಳ್ಳುವುದು ಉತ್ತಮ. ನಾಟಿ ಮಾಡಿದ ೨-೩ ವರುಷ ಬಳಿಕ ಈ ಗೇರು ಗಿಡಗಳಿಗೆ ಕರಿ ಮೆಣಸು ನಟಿ ಮಾಡಬೇಕು.
    ಕರಿಮೆಣಸು ಚೆನ್ನಾಗಿ ಹಬ್ಬಿದ ನಂತರ ಕನಿಷ್ಠ ೩-೪ ಕೆಜಿ ಕರಿ ಮೆಣಸು ಪಡೆಯಬಹುದು. ಜೊತೆಗೆ ಗೇರು ತೋಪಿನಲ್ಲಿ ದನ, ಆಡು, ಕುರಿ ಸಾಕಣೆ ಕೈಗೊಳ್ಳಬಹುದು.

    1. ನೀವು ಹೇಳಿದ್ದು ಸರಿ. ಆದರೆ ಬೆಲೆ ಬಗ್ಗೆ ಯಾರಾದರು ಧ್ವನಿ ಎತ್ತಬೇಕು. ಕನಿಶ್ಟ 125 ರು> ಆದರು ಬೇಕು. ಪ್ರತಿಕ್ರಿಯೆಗೆ ಧನ್ಯವಾದಗಳು

    2. ಗೇರು ಮರಗಳಿಗೆ ಹೆಚ್ಚು ನೀರನ್ನು ನೀಡಿದರೆ ಅದು ಹೂವುಗಳನ್ನು ಹೊರಡಿಸುವ ಸಂಖ್ಯೆ ಕಡಿಮೆ ಆಗುತ್ತಾ….

Leave a Reply

Your email address will not be published. Required fields are marked *

error: Content is protected !!