ಇಂದು ಕೃಷಿ ನೀರಾವರಿಗೆ, ಮನೆಬಳಕೆಯ ನೀರಿಗೆ ಎಲ್ಲದಕ್ಕೂ ಬೋರ್ವೆಲ್ ಮೂಲವೇ ಆದಾರ. ಕೊಳವೆ ಬಾವಿಯನ್ನು ತೋಡುವಾಗ ನೀರು ಸಿಗುತ್ತದೆ. ಆದರೆ ಬಾವಿಯೊಳಗೆ ನೀರು ಎಷ್ಟು ಇದೆ, ಎಷ್ಟು ತೆಗೆಯಲು ಸಾಧ್ಯ ಎಂಬುದನ್ನು ಮೇಲಿನಿಂದು ನೋಡಿ ಲೆಕ್ಕಾಚಾರ ಹಾಕಲಿಕ್ಕೆ ಆಗುವುದಿಲ್ಲ. ಪಂಪು ಇಳಿಸಿ ನೀರನ್ನು ಹೊರ ತರಬೇಕು. ಎಷ್ಟು ಆಳಕ್ಕೆ ಪಂಪು ಇಳಿಸಬೇಕು. ಎಷ್ಟು ಅಶ್ವ ಶಕ್ತಿ ಇವೆಲ್ಲದರ ಮಾಹಿತಿ ಇಲ್ಲಿದೆ.
ಹೆಚ್ಚಿನವರು ಕೊಳವೆ ಬಾವಿ ತೋಡುತ್ತಾರೆ. ಸುಮಾರು 500 ಅಡಿ ಹೋಗಿದೆ, ಪಂಪು ಎಷ್ಟು ಇಳಿಸಬೇಕು ಎಂಬ ಬಗ್ಗೆ ಸಲಹೆ ಕೇಳುವುದು ಪಂಪು ಹಾಕುವವರ ಬಳಿಯಲ್ಲಿ. ಇದು ಸರಿಯಾದ ವಿಧಾನವೇ ಆಗಿದ್ದರೂ ಸಹ ಕೊಳವೆ ಬಾವಿ ತೋಡಿದವರಿಗೆ ಆ ಬಗ್ಗೆ ಸ್ವಲ್ಪ ಜ್ಜಾನ ಇರಲೇ ಬೇಕಾಗುತ್ತದೆ. ಸಾಮಾನ್ಯವಾಗಿ ಸ್ಥಳೀಯ ಪಂಪು ಇಳಿಸುವವರು ಮೋಸ ಮಾಡುವುದಿಲ್ಲವಾದರೂ ನಮ್ಮಲ್ಲಿ ತಿಳುವಳಿಕೆ ಇದ್ದರೆ ನಷ್ಟ ಇಲ್ಲ ತಾನೇ? ಕೆಲವು ರೈತರಿಗೆ ಕೊಳವೆ ಬಾವಿ ತೋಡಿ ತೋಡಿ ಅದರ ಎಲ್ಲಾ ಒಳ ಹೊರಗುಗಳ ಅನುಭವ ಇರುತ್ತದೆ. ಕೆಲವರು ಹೊಸತಾಗಿ ತೋಡಿರುತ್ತಾರೆ. ಹೊಸಬರಿಗೆ ತಿಳುವಳಿಕೆ ಕಡಿಮೆ ಇರುತ್ತದೆ. ಒಂದು ಎರಡು ಕೊರೆಸಿದ ನಂತರ ಸಹಜವಾಗಿ ಅವರೂ ಅನುಭವಿಗಳಾಗುತ್ತಾರೆ.
ಬಾವಿ ತೋಡುವಾಗ ತಿಳಿದುಕೊಳ್ಳಬೇಕಾದ ಅಂಶಗಳು:
ಕೊಳವೆ ಬಾವಿ ತೋಡುವಾಗ ಡ್ರಿಲ್ಲಿಂಗ್ ಆಗುವ ಸಮಯದಲ್ಲಿ ನಿಮ್ಮ ಉಪಸ್ಥಿತಿ ಅತ್ಯಗತ್ಯ. ಸ್ಸಾಮಾನ್ಯವಾಗಿ ಒಂದು ಕೊಳವೆ ಬಾವಿ ಡ್ರಿಲ್ಲಿಂಗ್ ಮಾಡಲು 3-4 ಗಂಟೆ ಸಾಕಾಗುತ್ತದೆ. ಅಷ್ಟು ಸಮಯ ಬಿಡುವು ಮಾಡಿಕೊಂಡು ಬಾವಿ ತೋಡುವಲ್ಲಿ ತೊಡುವಿಕೆ ಮುಗಿಯುವ ತನಕ ಎಲ್ಲಾ ತುರ್ತು ಕೆಲಸಗಳನ್ನು ಬದಿಗೊತ್ತಿ, ಒಂದು ಖುರ್ಚಿ ಇಟ್ಟು ಕುಳಿತುಕೊಳ್ಳಿ. ಕೈಯಲ್ಲಿ ಒಂದು ಪೆನ್ನು ಕಾಗದ ಇರಲಿ. ಮೊದಲು ತೋಡುವಾಗ ಮಣ್ಣು ಕೊರೆಯುತ್ತಾರೆ. ಮಣ್ಣು ಮುಗಿದು ಶಿಲೆ ಸಿಗುವ ತನಕ ಎಷ್ಟು ರಾಡ್ ಹಾಕಿದ್ದಾರೆ ಎಂಬುದನ್ನು ಬರೆದು ಇಟ್ಟುಕೊಳ್ಳಿ. ಕಲ್ಲು ಸಿಕ್ಕಿದಾಗ ಡ್ರಿಲ್ಲಿಂಗ್ ಮಾಡಿದ ರಾಡ್ ಗಳನ್ನು ತೆಗೆಯುತ್ತಾರೆ.ಆಗಲೂ ಅದನ್ನು ಲೆಕ್ಕಾಚಾರ ಹಾಕಬಹುದು.
- ಶಿಲೆಯನ್ನು ಡ್ರಿಲಿಂಗ್ ಮಾಡುವ ಮುಂಚೆ ಮಣ್ಣು ಇರುವಷ್ಟೂ ಭಾಗಕ್ಕೆ ಕೇಸಿಂಗ್ ಪೈಪನ್ನು ಹಾಕುತ್ತಾರೆ.
- ಅದು ಮಣ್ಣು ಎಷ್ಟು ಆಳದ ವರೆಗೆ ಇತ್ತೋ ಅಷ್ಟು ಆಳದ ತನಕ ಇರುತ್ತದೆ.
- ಮಣ್ಣಿನ ನಂತರ ಕಲ್ಲು ಸಿಕ್ಕಿ ಸುಮಾರು 5 ಅಡಿ ಕಲ್ಲನ್ನೂ ಕೊರೆದು ಕೇಸಿಂಗ್ ಜೋಡಿಸಬೇಕು.
- ಎಷ್ಟು ಕೇಸಿಂಗ್ ಹಾಕಲಾಗಿದೆಯೋ ಅದು ಮಣ್ಣು ಎಷ್ಟು ಆಳದ ತನಕ ಇದೆ ಎಂಬುದರ ಲೆಕ್ಕಾಚಾರ.
- ಆ ನಂತರ ಕೊರೆಯುವಾಗ ಗಮನಿಸುತ್ತಾ ಇರಬೇಕು. ನೀರು ಯಾವಾಗ ಸಿಗುತ್ತದೆ.
- ಎಷ್ಟು ಪ್ರಮಾಣದಲ್ಲಿ ಬರುತ್ತದೆ ಎಂಬುದನ್ನು ಗಮನಿಸುತ್ತಾ ಇರಬೇಕು.
- ನೀರು ಆಗಾಗ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತಾ ಬರುತ್ತದೆ. ಇದನ್ನು ಗಮನಿಸುತ್ತಾ ಇರಬೇಕು.
- ಆಗಾಗ ಕೊರೆಯುವ ಸ್ಠಳಕ್ಕೆ ಹೋಗಿ, ನೀರಿನ ಜೊತೆಗೆ ಜಲ್ಲಿ ಕಲ್ಲಿನ ಗಾತ್ರದ ಕಲುಗಳೇನಾದರೂ ಬರುತ್ತವೆಯೇ ಎಂದು ನೀರಿಗೆ ಬೊಗಸೆ ಒಡ್ಡಿ ಅದರೊಂದಿಗೆ ಬರುವ ಹುಡಿಯಲ್ಲಿ ಗಮನಿಸಿ.
- ಹೆಚ್ಚಾಗಿ ಇದನ್ನು ಡ್ರಿಲ್ಲಿಂಗ್ ಮಾಡುವವರು ನೋಡುತ್ತಾ ಇರುತ್ತಾರೆ. ತಿಳಿಸುತ್ತಾರೆ ಸಹ.
- ಎಷ್ಟು ರಾಡ್ ಇಳಿಸುವಾಗ ಎಷ್ಟು ನೀರು ಹೆಚ್ಚಾಯಿತು ಎಂಬ ಲೆಕ್ಕಾಚಾರ ಇರಲಿ.
- ನೀರನ್ನು ಹರಿಯಲು ಬಿಡುವ ಜಾಗದಲ್ಲಿ ಒಂದು 2.5-3 ಇಂಚಿನ PVC ಪೈಪು ತುಂಡನ್ನು ಇಟ್ಟು ಅದರ ಒಳಭಾಗದ ಮೂಲಕ ನೀರು ಹೊರ ಹರಿಯುವಂತೆ ಸುತ್ತಲೂ ಕಟ್ಟೆ ಕಟ್ಟಿ ಅವಕಾಶ ಮಾಡಿಕೊಡಿ.
- ಆಗ ನಿಮಗೆ ನೀರಿನ ಇಳುವರಿ ಹೆಚ್ಚಾದುದು ಗೊತ್ತಾಗುತ್ತದೆ.
- ರಾಡ್ ಬದಲಿಸುವಾಗ ಬರುವ ನೀರು ಅದರ ನೈಜ ಇಳುವರಿ ಅಲ್ಲ.
- ಡ್ರಿಲ್ಲಿಂಗ್ ಆಗುವಾಗ ಬರುತ್ತಿರುವ ನೀರು ನೈಜ ಇಳುವರಿ. ಪೈಪಿನ ಮೂಲಕ ಹರಿಯುವಾಗ ಅದರ ಒಳಭಾಗ ತುಂಬಿ ಹೆಚ್ಚುವರಿಯಾಗಿ ಹೊರ ಹರಿವು ಇದ್ದರೆ ಅದು 2.5 ಇಂಚಿಗಿಂತ ಹೆಚ್ಚಿನ ಇಳುವರಿ ಎಂದು ಹೇಳಬಹುದು.
- ಯಾವಾಗ 2 ಅಥವಾ 2.5 ಇಂಚು ನೀರು ಹೊರ ಹರಿಯುತ್ತದೆಯೋ ಆಗ ಅದರಲ್ಲಿ ಒತ್ತಡದ ಮೂಲಕ ಪಂಪಿನಿಂದ ಹೊರ ಚೆಲುವ ನೀರು 1.5 -2 ಇಂಚು ತನಕ ನೀರಿನ ಇಳುವರಿ ಇರುತ್ತದೆ. ಹೆಚ್ಚು ಬೇಕಿದ್ದರೆ ಮತ್ತೆ ಮತ್ತೆ ತೋಡಬಹುದು.
ಯಾವಾಗಲೂ ಡ್ರಿಲ್ಲಿಂಗ್ ಮಾಡುವವರು ಹೇಳುವ ಇಳುವರಿಯನ್ನು ನೀವು ಖಾತ್ರಿ ಮಾಡಿಕೊಳ್ಳಬೇಡಿ. ಮೇಲೆ ಹೇಳಿದಂತೆ ನೀವೇ ಖುದ್ದು ಇಳುವರಿ ಪರೀಕ್ಷೆ ಮಾಡಿ ಖಾತ್ರಿ ಮಾಡಿಕೊಳ್ಳಿ. ಸಾಮಾನ್ಯವಾಗಿ ಡ್ರಿಲ್ಲಿಂಗ್ ಮಾಡುವವರು ಸ್ವಲ್ಪ ಹೆಚ್ಚು ಹೇಳುತ್ತಾರೆ. ಕಾರಣ ಅವರಿಗೆ ನೀವು ಸಂತೋಷದಲ್ಲಿ ಹಣ ಕೊಡಬೇಕು. ಇದು ವ್ಯವಹಾರದಲ್ಲಿ ಎಲ್ಲರೂ ಮಾಡುವಂತದ್ದೇ.
ಪಂಪು ಆಯ್ಕೆ ಮತ್ತು ಇಳಿಸುವಿಕೆ:
- ಪಂಪು ಇಷ್ಟು ಸಾಮರ್ಥ್ಯದ್ದೇ ಆಗಬೇಕು ಎಂಬುದನ್ನು ನಿರ್ಧರಿಸುವುದು ತೋಡಿದ ಬಾವಿಗೆ ಟೆಸ್ಟ್ ಪಂಪು ಇಳಿಸಿ ನೋಡಿದ ನಂತರ.
- ಇದನ್ನು ಈಗ ಮಾಡುವವರು ತುಂಬಾ ಕಡಿಮೆ. ಇದಕ್ಕೆ ಸಾಮಾನ್ಯವಾಗಿ ರೂ. 5000 ದಿಂದ 7000 ತನಕ ಶುಲ್ಕ ಕೇಳುತ್ತಾರೆ.
- ಶುಲ್ಕ ಉಳಿಸುವುದಕ್ಕಾಗಿ ನಾವು ಪಂಪು ಇಳಿಸುವವರ ಸಲಹೆಯ ಮೇರೆಗೆ ಅಂದಾಜಿಗೆ ಇಷ್ಟು ಸ್ಟೇಜ್ ಇಷ್ಟು ಅಶ್ವ ಶಕ್ತಿಯ ಪಂಪು ಖರೀದಿಸುತ್ತೇವೆ.
- ಹೀಗೆ ಇಳಿಸಿದಾಗ ಹೆಚ್ಚಿನ ಸಂಧರ್ಭಗಳಲ್ಲಿ ನೀರು ಬರುತ್ತದೆ. ಕೆಲವೊಮ್ಮೆ ಬರುವುದಿಲ್ಲ.
- ಪಂಪು ಇಳಿಸುವಾಗ ಮೊದಲು 100 ಅಡಿ ಇಳಿಸಿ ಎಷ್ಟು ಸಮಯದ ತನಕ ನೀರು ಏಕ ಪ್ರಕಾರವಾಗಿ ಬರುತ್ತದೆ ಎಂಬುದನ್ನು ಗಮನಿಸಿ.
- ಹೆಚ್ಚಾಗಿ ಈ ಅಂತರದಲ್ಲಿ 5-10 ನಿಮಿಷ ಬರಬಹುದು. ಹಾಗಿದ್ದರೆ ಮತ್ತೆ 50ಅಡಿ ಇಳಿಸಿ ಮತ್ತೆ ಟೆಸ್ಟ್ ಮಾಡಿ.
- ಅದರಲ್ಲೂ ½ ಗಂಟೆಗಿಂತ ಹೆಚ್ಚು ಬಾರದೆ ಇದ್ದರೆ ಮತ್ತೆ ಇಳಿಸಬೇಕು. ½ ಗಂಟೆ ನಿರಂತರವಾಗಿ ನೀರು ಬರುವ ಹಂತಕ್ಕೆ ಪಂಪು ಇಳಿಸುವುದನ್ನು ನಿಲ್ಲಿಸಬಹುದು.
ಕೆಲವು ಸಮಸ್ಯೆಯುಳ್ಳ ಬಾವಿಗಳು:
- ಕೆಲವು ಬಾವಿ ತೋಡುವಾಗ 300-400 ಅಡಿ ಕೆಳಗೆ ನೀರು ಸಿಗುತ್ತದೆ. 600 ತನಕವೂ ಹೋಗಬೇಕಾಗುತ್ತದೆ.
- ಅಂತಹ ಬಾವಿಗಳಿಗೆ ಪಂಪು ಇಳಿಸುವ ಮುಂಚೆ ನೀವು ತೋಡುವಾಗ ಬರೆದುಕೊಂಡ ದಾಖಲೆಯನ್ನು ಪಂಪು ಪೂರೈಸುವವರಿಗೆ ತಿಳಿಸಬೇಕು.
- ಇಂತಹ ಬಾವಿಗಳಿಗೆ ಟೆಸ್ಟ್ ಮಾಡಿಯೇ ಪಂಪು ಆಯ್ಕೆ ಉತ್ತಮ. ಇಲ್ಲವಾದರೆ ತುಂಬಾ ನುರಿತವರಿಂದ ಅನುಭವ ಪಡೆಯಬೇಕು.
- ಇಂತಹ ಬಾವಿಗಳಲ್ಲಿ 400 -450 -500 ಅಡಿ ತನಕ ಪಂಪು ಇಳಿಸಿದಾಗ ಮಾತ್ರ ನೀರು ಬರುವುದು ಇರುತ್ತದೆ.
- ಆಗ ಹೆಚ್ಚು ಸ್ಟೇಜ್ ನ ಪಂಪು ಆಗಬೇಕಾಗುತ್ತದೆ. ನೀರು ಸ್ವಲ್ಪ ಸಮಯ ಬರುವುದು ಮತ್ತೆ ಒತ್ತಡ ಕಡಿಮೆಯಾಗುವುದು ಅಥವಾ ಪ್ರಾರಂಭದಲ್ಲಿ ಬೀಳುತ್ತಿದ್ದ ಜಾಗಕ್ಕಿಂತ ಹಿಂದೆ ಹಿಂದೆ ಬರುವುದು ಆದರೆ ಪಂಪು ಹೆಚ್ಚು ಇಳಿಸಬೇಕಾಗುತ್ತದೆ.
- ತೋಡಿದ ಆಳದ ತನಕ ಇಳಿಸಿದರೂ ನೀರು ಬರುವುದು ಕಡಿಮೆ ಆಗುವುದೇ ಆದರೆ ಆ ಬಾವಿಯಲ್ಲಿ ನೀರು ಇಳುವರಿ ಕಡಿಮೆ ಇದೆ ಎಂದರ್ಥ.
- ಆಗ ಪಂಪಿಗೆ ಗೇಟ್ ವಾಲ್ವ್ ಹಾಕಿ ನೀರಿನ ಹೊರ ಹರಿವನ್ನು ಕಡಿಮೆ ಮಾಡುತ್ತಾ ನಿರಂತರ ಒಂದೇ ಕಡೆಗೆ ಬೀಳುವ ತನಕ ವಾಲ್ವ್ ನಿಯಂತ್ರಣ ಮಾಡಬೇಕು.
- ನೀರು ಕಡಿಮೆ ಇದೆ ಎಂದು ಬಾವಿಯ ನೀರನ್ನು ಬಿಡಬೇಕಾಗಿಲ್ಲ.
ಪಂಪಿನ ಆಯ್ಕೆ:
- ನಿಮ್ಮ ಬಾವಿಯಲ್ಲಿ ನೀರಿನ ಇಳುವರಿ ಎಷ್ಟು ಇದೆ ಎಂದು ಖಾತ್ರಿಯಾಗಿ ಗೊತ್ತಿದ್ದರೆ, ತೋಡಿದ ಆಳ 300 ಅಡಿ ಒಳಗೆ ಇದ್ದರೆ , ಮೇಲ್ ಸ್ಥರದಲ್ಲಿ 150-200 ಅಡಿಗೇ ನೀರು ಬಂದಿದ್ದರೆ, ಅದಕ್ಕೆ 10 ಸ್ಟೇಜ್ ಒಳಗಿನ ಪಂಪು ಸಾಕು.
- ಅದಕ್ಕಿಂತ ಆಳ ಹೋಗಿದ್ದರೆ, ತೋಡುವಾಗ ಹೆಚ್ಚು ಒತ್ತಡದಲ್ಲಿ ನೀರು ಬರುತ್ತಿದ್ದರೆ ಸಹ ಅಷ್ಟು ಸ್ಟೇಜ್ ನ ಪಂಪು ಸಾಕು. ( ನೀರಿನ ವಿತರಣೆಯ ಎತ್ತರ ಹೆಚ್ಚಾಗಿದ್ದರೆ ಅದಕ್ಕನುಗುಣವಾಗಿ ಸ್ಟೇಜ್ ಬೇಕಾಗುತ್ತದೆ)
- ಸಾಮಾನ್ಯವಾಗಿ ಒಂದು ಸ್ಟೇಜ್ ಎಂದರೆ 30 ಅಡಿ ನೇರ. ಕೆಲವು 50 ಅಡಿಯದ್ದೂ ಬರುತ್ತದೆ) ಅಶ್ವ ಶಕ್ತಿ ಬಗ್ಗೆ ಹೇಳುವುದೇ ಆದರೆ ಹನಿ ನೀರಾವರಿಯಲ್ಲಿ ನೀರುಣಿಸುವುದೇ ಆಗಿದ್ದರೆ 5 ಎಕ್ರೆ ಹೊಲದ ತನಕ 5 HP ಸಾಕು.
- ಅದಕ್ಕಿಂತ ಹೆಚ್ಚು ಹೊಲ ಇದ್ದರೆ ನೀರಿನ ಹರಿವು 3 ಇಂಚಿಗಿಂತಲೂ ಹೆಚ್ಚು ಇದ್ದರೆ 7.5 ಹೀಗೆಲ್ಲಾ ಅಶ್ವ ಶಕ್ತಿಯನ್ನು ಹೆಚ್ಚಿಸಬಹುದು.
- 3 -5-7.5 HP ಗಳಿಗೆ ಮೊದಲ ಎರಡರಲ್ಲಿ ಗರಿಷ್ಟ 2 ಇಂಚು ನೀರಿನ ಹೊರ ಹರಿವು ಇರುತ್ತದೆ.
- 7.5 ರಲ್ಲಿ ಅದು 2.5 ಇಂಚು ಇರುತ್ತದೆ. ಹಾಗಾಗಿ ನೀರು ಹೆಚ್ಚು ಸಿಕ್ಕಿದಾಕ್ಷಣ ಹೆಚ್ಚು ಅಶ್ವ ಶಕ್ತಿಯ ಪಂಪು ಹಾಕಬೇಕಾಗಿಲ್ಲ.
- ಎಷ್ಟೇ ನೀರಿನ ಇಳುವರಿ ಇದ್ದರೂ ಸಹ ನಮಗೆ ಬಳಕೆಗೆ ಎಷ್ಟು ಬೇಕು ಅಷ್ಟೇ ತೆಗೆದರೆ ಸಾಕು.
- ತೋಡಿದಷ್ಟೂ ಆಳಕ್ಕೆ ಪಂಪು ಇಳಿಸಬೇಡಿ. ನೀರು ಬರುವಷ್ಟು ಮಾತ್ರ ಇಳಿಸಿ. ಆಗ ಮುಂದೆ ಪಂಪು ಕೆಳಕ್ಕೆ ಇಳಿಸಲು ಅವಕಾಶ ಇರುತ್ತದೆ.
- ನೀರಿನ ಇಳುವರಿ ಲೆಕ್ಕಾಚಾರ ಹಾಕಲು ಪಂಪು ಇಳಿಸಿ ನೀರು ಸರಾಗವಾಗಿ ಬಂದ ನಂತರ ಒಂದು ಬ್ಯಾರಲ್ ಇಟ್ಟು ಅದಕ್ಕೆ ಎಷ್ಟು ಸಮಯದಲ್ಲಿ (ನಿಮಿಷ) ನೀರು ತುಂಬುತ್ತದೆ ಅದಕ್ಕೆ ಗಂಟೆ ಲೆಕ್ಕಕ್ಕೆ ಪರಿವರ್ತಿಸಿ ಒಟ್ಟು ಗಂಟೆಗೆ ಎಷ್ಟು ಲೀಟರ್ ನೀರು ಎಂದು ತಿಳಿಯಬಹುದು.
ಕೊಳವೆ ಬಾವಿಗೆ ಪಂಪು ಇಳಿಸುವಾಗ ಅನುಭವಿಗಳ ಮೂಲಕ ಇಳಿಸಿ. ಹಾಗೆಯೇ ಟೆಸ್ಟ್ ಮಾಡಲು ಮೊದಲಾಗಿ ಪಂಪು ಇಳಿಸಿ ನೋಡಿ ಹಾಕುವುದು ಉತ್ತಮ. ಯಾವಾಗಲೂ ಕೊಳವೆ ಬಾವಿ ತೋಡುವಾಗ ನೀವು ಬಿಡುವು ಮಾಡಿ ಅದರ ಸಮೀಪ ಇದ್ದರೆ ಬಹಳ ಉತ್ತಮ. ಬೋಲ್ಡ್ರಾಸ್ ಸಿಕ್ಕಿದರೆ ಅದು ಎಷ್ಟು ಆಳದಲ್ಲಿ ಸಿಕ್ಕಿತು ಅದಕ್ಕಿಂತ 2-3 ಅಡಿ ಮೇಲೆ ತನಕ ಮಾತ್ರ ಪಂಪು ಇಳಿಸಬೇಕು. ಬಾವಿ ತೋಡುವಾಗ ಕಡಲೆ ಮತ್ತು ಅದಕ್ಕಿಂತ ದೊಡ್ಡ ಗಾತ್ರದ ಕಲ್ಲು ಚೂರುಗಳು ಬಂದಿರುವುದು ಕಂಡು ಬಂದರೆ ಪಂಪು ಮತ್ತು ಮೋಟರಿನ ಮಧ್ಯೆ ಇರುವ ಮೆಶ್ ಸ್ವಲ್ಪ ಸಣ್ಣ ತೂತಿನದ್ದು ಹಾಕಿ. ಇಲ್ಲವಾದರೆ ಕಲ್ಲು ಪಂಪಿನ ಒಳ ಸೇರಿ ನೀರು ಬರುವುದು ಕಡಿಮೆಯಾಗುತ್ತದೆ.