ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಬ್ಲಾಕ್ ಆಗದಂತೆ ಮಾಡುವ ಸರಳ ವಿಧಾನ

ಡ್ರಿಪ್ ಇರಿಗೇಶನ್ ಅಳವಡಿಸಿದ ಅಡಿಕೆ ತೋಟ

ಬಹಳ ಜನ ರೈತರು ಡ್ರಿಪ್ ಮಾಡಿದರೆ ಅದು ಬ್ಲಾಕ್ ಆಗುತ್ತದೆ, ನೀರು ಸರಿಯಾಗಿ ಹೋಗದೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ. ಬ್ಲಾಕ್ ಆಗುವುದಕ್ಕೆ ಕಾರಣವನ್ನು ಗುರುತಿಸಿ ಅದಕ್ಕೆ ಬೇಕಾಗುವ ಸರಳ ಪರಿಹಾರಗಳನ್ನು ಮಾಡಿದರೆ  ಅದು ಸಮಸ್ಯೆಯೇ ಆಗದು. ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದ ಕೆಲವು ಲವಣಗಳು ಸ್ವಲ್ಪ ಸ್ವಲ್ಪವೇ ಆಂಟಿಕೊಂಡು ನೀರು ಹರಿಯುವ  ದ್ವಾರವನ್ನು ಮುಚ್ಚುತ್ತದೆ. ಇದು ಹೆಚ್ಚಿನವರು ಅನುಭವಿಸುವ ಸಮಸ್ಯೆ. ಈ ಲವಣಗಳನ್ನು ಕಾಲ ಕಾಲಕ್ಕೆ ಅನುಗುಣವಾಗಿ ಸ್ವಚ್ಚತೆ ಮಾಡುತ್ತಿದ್ದರೆ ಆ ಸಮಸ್ಯೆಯಿಂದ ಪಾರಾಗಬಹುದು.

ಮಳೆಗಾಲದಲ್ಲಿ ಯಾರೂ ಹನಿ ನೀರಾವರಿಯನ್ನು ಬಳಕೆ ಮಾಡುವುದಿಲ್ಲ. ಕೆಲವರು ಮಡಚಿ ಇಡುತ್ತಾರೆ. ಮತ್ತೆ ಕೆಲವರು  ನೆಲದಲ್ಲೇ ಬಿಟ್ಟಿರುತ್ತಾರೆ. ಮಳೆಗಾಲ ಕಳೆದು ಬೇಸಿಗೆ ಬಂದಾಗ ಹನಿ ನೀರಾವರಿ ವ್ಯವಸ್ಥೆಯಲ್ಲಿ ಕೆಲವು ಕಶ್ಮಲಗಳು, ಬಾಹ್ಯ ವಸ್ತುಗಳಾದ ಕಸ, ಇರುವೆ ಸೇರಿಕೊಂಡು ಡ್ರಿಪ್ಪರಿನ ಡಯಫ್ರಾಂ ನಲ್ಲಿ ಸಿಲುಕಿ ನೀರಿನ ಹರಿವನ್ನು ಕಡಿಮೆ ಮಾಡುತ್ತದೆ. ಇಂತಹ ವಸ್ತುಗಳನ್ನು ಮೊದಲು ಹೊರ ತೆಗೆದು ನಂತರ ವ್ಯವಸ್ಥೆ ನಡೆಸಿದರೆ ಸಮಸ್ಯೆ ಪರಿಹಾರವಾಗುತ್ತದೆ.

ಡ್ರಿಪ್ಪರು, ಪೈಪು, ಪಂಪು, ಫಿಲ್ಟರ್, ಇನ್ಯಾವುದೇ ನೀರು ಹರಿಯುವ  ಭಾಗ, ನೀರು ಸಂಗ್ರಹವಾಗುವ ಪಾತ್ರೆಗಳ  (ಟಾಂಕಿಯ ಒಳಭಾಗ) ಅಂಟಿಕೊಂಡು ಗಂಧ ಮೆತ್ತಿದಂತೆ ಕಾಣುವ ವಸ್ತು ಇದ್ದರೆ ಆ ನೀರು ಡ್ರಿಪ್ಪರನ್ನು ಖಂಡಿತವಾಗಿಯೂ ಕಟ್ಟಿಕೊಳ್ಳುವಂತೆ ಮಾಡುತ್ತದೆ. ಇದನ್ನು ಬೇರೆ ಯಾವ ರೀತಿಯಲ್ಲೂ  ತೆಗೆಯಲು ಸಾಧ್ಯವಿಲ್ಲ. ಅದು ಬಗ್ಗುವುದು ಬರೇ ಆಮ್ಲಗಳಿಗೆ ಮಾತ್ರ. ಆಮ್ಲ ಉಪಚಾರ  (Acid treatment) ಎಂಬ ಈ ಪದ್ದತಿ ತುಂಬಾ ಸರಳ. ವರ್ಷಕ್ಕೆ ಒಮ್ಮೆ  ಅಗತ್ಯ ಇದ್ದರೆ ಎರಡು ಬಾರಿ ಆಮ್ಲ ಉಪಚಾರ ಮಾಡಿದರೆ  ಅಂಟಿಕೊಂಡ  ವಸ್ತು ಕರಗಿ ಹೊಚ್ಚ ಹೊಸತರಂತೆ ಆಗುತ್ತದೆ.

ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಆಗುವ ಸಮಸ್ಯೆ ಇದು
ಡ್ರಿಪ್ಪರ್ ನ ಡಯಪ್ರಾಂ ನಲ್ಲಿ ಸೇರಿಕೊಂಡ ಲವಣ ಕಶ್ಮಲ

ಪ್ರಾಥಮಿಕ ಸ್ವಚ್ಚತೆ:

 • ಹನಿ ನೀರಾವರಿ ಅಳವಡಿಸಿಕೊಂಡವರು ಅದು ಡ್ರಿಪ್ಪರ್ ಇರಲಿ, ಮೈಕ್ರೋ ಟ್ಯೂಬ್ ಇರಲಿ ಅಥವಾ ಇನ್ ಲೈನ್ ಡ್ರಿಪ್ ಇರಲಿ,
 • ಅಳವಡಿಸಿದ ಸಮಯದಲ್ಲಿ ಅದರ ನೀರಿನ ಹೊರ ಹರಿವು (Discharge) ಹೇಗೆ ಎಂಬುದನ್ನು ಅದರ ಪ್ರಮಾಣಕ್ಕನುಗುಣವಾಗಿ (ಗಂಟೆಗೆ 2-4-8) ಗಮನ ಇಟ್ಟು ನೋಡಿಕೊಳ್ಳಿ.
 • ಡ್ರಿಪ್ಪರ್ ಅನ್ನು ನೆಲದಿಂದ 2-3 ಇಂಚು ಮೇಲೆ ಇರುವಂತೆ  ನೋಡಿಕೊಳ್ಳಿ. (ಡ್ರಿಪ್ಪರು ಇರುವಲ್ಲಿ ತೆಂಗಿನ ಸಿಪ್ಪೆಯನ್ನು ಇಡಿ) ಇದರ ಡಿಶ್ಚಾರ್ಜ್  ಅನ್ನು ಆಗಾಗ ಗಮನಿಸುತ್ತಿರಲು ಇದು ಸಹಾಯಕ.
 • ಮೊದಲು ಅಳವಡಿಸಿದ ಸಮಯದಲ್ಲಿ ಗಮನಿಸಿದಷ್ಟು ನೀರು ಹೊರ ಬರುತ್ತಿಲ್ಲ ಎಂದು ಕಂಡು ಬಂದರೆ ಡ್ರಿಪ್ಪರಿನ ಒಳಗಿನ ಡಯಪ್ರಂ ನಲ್ಲಿ ಯಾವುದಾದರೂ ಕಸ ಸಿಕ್ಕಿ ಕೊಂಡಿರಬಹುದು.
ಲ್ಯಾಟರಲ್ ಸ್ವಚ್ಚತೆ ಅತೀ ಮುಖ್ಯ.
ಲ್ಯಾಟರಲ್ ಸ್ವಚ್ಚತೆ ಅತೀ ಮುಖ್ಯ.
 • ಅದನ್ನು ಸರಿಮಾಡಲು ಡ್ರಿಪ್ಪರು ಬಿಚ್ಚುವ ಮುಂಚೆ ಲ್ಯಾಟರಲ್ ನ ಎಂಡ್ ಕ್ಯಾಪ್ ತೆಗೆದು 2-3 ನಿಮಿಷ  ನೀರು ಹೊರ ಬಿಡಿ.
 • ಆಗ ಸರಿಯಾಗದೆ ಇದ್ದರೆ ಮಾತ್ರ ಡ್ರಿಪ್ಪರ್ ಬಿಚ್ಚಿ. 
 • ಸಾಧ್ಯವಾದಷ್ಟು ಡ್ರಿಪ್ಪರ್ ಅನ್ನು ಲ್ಯಾಟರಲ್ ನಿಂದ ಪ್ರತ್ಯೇಕಿಸಿ ಸ್ವಚ್ಚ ಮಾಡಬೇಡಿ.
 • ಹೀಗೆ ಮಾಡಿದರೆ ಒಂದೆರಡು ಸಲ ಮಾಡಿದ ನಂತರ ತೂತು ದೊಡ್ದದಾಗಿ ನೀರು ಅಲ್ಲಿ ಸೋರಲ್ಪಡುತ್ತದೆ.
ಫಿಲ್ಟರ್ ನಲ್ಲಿ ಅಂಟಿಕೊಂಡ ಕಶ್ಮಲ ತೆಗೆಯುತ್ತಿರಬೇಕು.
ಫಿಲ್ಟರ್ ನಲ್ಲಿ ಅಂಟಿಕೊಂಡ ಕಶ್ಮಲ ತೆಗೆಯುತ್ತಿರಬೇಕು.

ತೋಟಕ್ಕೆ ಹೋಗುವಾಗ ನೀರು ಹರಿಯುತ್ತಿದ್ದರೆ ಆಗಾಗ ಲ್ಯಾಟರ್ಲ್ ಎಂಡ್ ಕ್ಯಾಪ್ ತೆಗೆದು ನೀರನ್ನು ಸ್ವಲ್ಪ ಹರಿಯಲು ಬಿಡಿ.  ಆಗ ಲ್ಯಾಟರಲ್ ನಲ್ಲಿ ಸೇರಿಕೊಂಡಿರುವ ಕಶ್ಮಲಗಳು ಹೋಗುತ್ತದೆ. ತಗ್ಗಿನಲ್ಲಿ ಅಳವಡಿಸಿದ ಪ್ಲಶ್ ವಾಲ್ವ್ ಅನ್ನು 15 ದಿನಕ್ಕೊಮ್ಮೆ ತೆಗೆದು ನೀರನ್ನು ಹರಿದು ಹೋಗಲು ಬಿಡಿ. ಫಿಲ್ಟರ್ ಅನ್ನು ಆಗಾಗ  ಸ್ವಚ್ಚ ಮಾಡುತ್ತಾ ಆಗತ್ಯ ಇದ್ದರೆ ಹಳೆಯ ಹಲ್ಲುಜ್ಜುವ ಬ್ರಶ್ ಮೂಲಕ ಮಣ್ಣು ಇತ್ಯಾದಿ ಇದ್ದರೆ ತೆಗೆದು ಸ್ವಚ್ಚ ಮಾಡುತ್ತಿರಿ. ನೀರು ನಿಲ್ಲಿಸುವಾಗ ಆಗಾಗ ಫಿಲ್ಟರ್ ಭಾಗದಲ್ಲಿ ನೀರನ್ನು ರಿವರ್ಸ್ ಪ್ಲೋ ಹರಿಸಿದರೆ ಪೈಪ್ ಲೈನ್ ನಲ್ಲಿ ಇರುವ ಕಶ್ಮಲಗಳು ಹಿಂದೆ ಬಂದು ಸ್ವಚ್ಚ ಆಗುತ್ತದೆ. ಇದರಲ್ಲಿ ಬಹುತೇಕ ಕಶ್ಮಲಗಳು  ಹೋಗುತ್ತದೆ. ಅದಕ್ಕೂ ಬಗ್ಗದ ಕಶ್ಮಲಗಳು ಇದ್ದರೆ ಆಮ್ಲ ಉಪಚಾರ ಮಾಡಬೇಕು.

ಎಲ್ಲಿಗೆ ಆಮ್ಲ ಉಪಚಾರ ಬೇಕು:

 • ಪಾಚಿ (Alge) ಮತ್ತು ಹಳದಿ ಬಣ್ಣದ ಗಂಧದ ತರಹದ ಕಶ್ಮಲಗಳಿಗೆ ಮಾತ್ರ ಆಮ್ಲ ಉಪಚಾರ ಅಗತ್ಯ.
 • ಕೊಳವೆ ಬಾವಿಯ ನೀರನ್ನು ನಿರಂತರ 6 ತಿಂಗಳ ಕಾಲ ಹರಿಸಿ ಒಮ್ಮೆ ಪೈಪಿನ ಒಳ ಭಾಗದ  ಗೋಡೆಯಲ್ಲಿ ಏನಾದರೂ ಅಂಟಿಕೊಂಡಿದೆಯಾ ಪರಿಶೀಲಿಸಿ.
 • ಏನೂ ಅಂಟಿಕೊಳ್ಳದೇ ಇದ್ದರೆ ಅಂತಹ ನೀರಿನಲ್ಲಿ  ಆಮ್ಲ ಉಪಚಾರದಲ್ಲಿ ತೆಗೆಯುವ ಕಶ್ಮಲ ಇಲ್ಲ ಎಂದೇ ಹೇಳಬಹುದು.
 • ಒಂದು ವೇಳೆ ಪೈಪಿನ ಗೋಡೆಗಳಲ್ಲಿ ಅಂಟಿಕೊಂಡಿದ್ದರೆ ಅದು ಡ್ರಿಪ್ಪರಿನಲ್ಲೂ ಅಂಟಿಕೊಂಡಿದೆ ಎಂದರ್ಥ.
 • ಅಂತಹ ನೀರಿಗೆ ಆಮ್ಲ ಉಪಚಾರ ಅಗತ್ಯ.
ಈ ತರಹದ ಗಂಧ ಕೇವಲ ಆಮ್ಲ ಉಪಚಾರದಲ್ಲಿ ಮಾತ್ರ ಹೋಗುತ್ತದೆ.
ಈ ತರಹದ ಗಂಧ ಕೇವಲ ಆಮ್ಲ ಉಪಚಾರದಲ್ಲಿ ಮಾತ್ರ ಹೋಗುತ್ತದೆ.

ಯಾವ ಆಮ್ಲ ಬಳಸಬೇಕು:

 • ಹನಿ ನೀರಾವರಿಯ ಕೊಳವೆಗಳು ಹಾಗೂ ನೀರು ತೊಟ್ಟಿಕ್ಕುವ ಸಾಧನಗಳನ್ನು ಸ್ವಚ್ಚ ಮಾಡಲು ಬಳಸಲಾಗುವ ಆಮ್ಲಗಳು ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಫೋಸ್ಫೋರಿಕ್ ಆಮ್ಲಗಳು.
 • ಪಾಚಿಯಂತಹ ಕಶ್ಮಲವನ್ನು ಕಾಪರ್ ಸಲ್ಫೇಟ್ ದ್ರಾವಣದಲ್ಲಿ ಹೋಗಲಾಡಿಸಬಹುದು.
 • ಹನಿ ನೀರಾವರಿ ಅಳವಡಿಸಿಕೊಂಡವರು ಕಶ್ಮಲಗಳು ಇರಲಿ ಇಲ್ಲದಿರಲಿ ವರ್ಷಕ್ಕೊಮ್ಮೆ ಆಮ್ಲ ಉಪಚಾರ ಮಾಡಿದರೆ ಒಳ್ಳೆಯದು.  
 • ಆಮ್ಲಗಳು ಹನಿ ನೀರಾವರಿಯ ಸಾಧನಗಳನ್ನು ಮಾರಾಟ ಮಾಡುವ ಉತ್ತಮ ಮಾರಾಟಗಾರರು ಒದಗಿಸುತ್ತಾರೆ.
 • ಹೈಡ್ರೋಕ್ಲೋರಿಕ್ ಅಸಿಡ್ ನಲ್ಲಿ ಕ್ಲೋರಿನ್ ಇರುತ್ತದೆ.
 • ಫೋಸ್ಫೋರಿಕ್ ಆಸಿಡ್ ನಲ್ಲಿ ಫೋಸ್ಫೊರಸ್ ಇರುತ್ತದೆ.
 • ಕ್ಲೋರಿನ್ ಅಂಶ ಸಸ್ಯಗಳಿಗೆ ಅಷ್ಟು ಒಳ್ಳೆಯದಲ್ಲ ಎನ್ನುತ್ತಾರೆ.
 • ಆದರೆ ಇದು ಅತೀ ಕನಿಷ್ಟ ಪ್ರಮಾಣವಾದ ಕಾರಣ ಅಂತಹ ಹಾನಿ ಬಲಾರದು.
 • ಫೋಸ್ಫೋರಿಕ್ ಅಸಿಡ್ ಮತ್ತು ಸಲ್ಫ್ಯೂರಿಕ್ ಅಸಿಡ್ ಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸ ಇಲ್ಲ.
 • ಯಾವುದನ್ನೂ  ಬಳಸಬಹುದು. ಫೊಸ್ಫೋರಿಕ್ ಆಮ್ಲ ಒಳ್ಳೆಯದು ಎನ್ನುತ್ತಾರೆ.
ಪಾಚಿಯು ಡ್ರಿಪ್ ಮೂಲಕ ಬಂದು ನೆಲದಲ್ಲೂ ಸೇರಿಕೊಂಡಿರುವುದು
ಪಾಚಿಯು ಡ್ರಿಪ್ ಮೂಲಕ ಬಂದು ನೆಲದಲ್ಲೂ ಸೇರಿಕೊಂಡಿರುವುದು

ಹೇಗೆ ಬಳಸುವುದು:

 • ನೀರಿನ ಜೊತೆಗೆ ಆಮ್ಲವು ಇಡೀ ಪೈಪ್ ವ್ಯವಸ್ಥೆಯ ಒಳಗೆ ಸೇರುವಂತೆ ಮಾಡಬೇಕು.
 • ಇದಕ್ಕೆ ರಸಾವರಿಗೆ ಬಳಸುವ ವೆಂಚುರಿ, ಅಥವಾ ಪವರ್ ಸ್ಪ್ರೇಯರ್ ಅಥವಾ ಡೊಸರ್  ಪಂಪ್ ಅನ್ನು  ಬಳಸಬಹುದು.
 • ಈ ಆಮ್ಲವನ್ನು ಹ್ಯಾಂಡಲ್ ಮಾಡುವಾಗ ಕಣ್ಣು, ಮುಖ ಒಡ್ಡಬಾರದು. ಚರ್ಮ ಕ್ಕೆ ತಗಲಬಾರದು.
 • ಸ್ವಲ್ಪ ನೀರಿನೊಂದಿಗೆ ಮಿಶ್ರ ಮಾಡಿ ಕೊಡುವುದು ಉತ್ತಮ.
 • ಪೈಪಿನ ಒಳಗೆಲ್ಲಾ ನೀರು ಸೇರಿಕೊಳ್ಳಲು ಎಷ್ಟು ಸಮಯಾವಕಾಶ ಬೇಕೋ ಅಷ್ಟು ಸಮಯದ ತನಕ ಆಮ್ಲ ವನ್ನು ಹರಿಸಿ, ಪಂಪಿನ ಮೂಲಕ ನೀರಿಗೆ ವಾಪಾಸು ಬಾರದಂತೆ ವಾಲ್ವ್ ಬಂದ್ ಮಾಡಿ.
 • ನಂತರ ಆಮ್ಲ ಹರಿಸಿದ ಸಾಧನ ( ಪಂಪ್) ವನ್ನು ಶುದ್ಧ ನೀರಿನಲ್ಲಿ  ಸ್ವಚ್ಚಗೊಳಿಸಿ.

ಆಮ್ಲ ಸೇರಿದ ನೀರು ಪೈಪಿನ ಒಳಗೆ ಒಂದು ದಿನ ಕಾಲ ಉಳಿಸಿ ಮರುದಿನ ಪಂಪ್ ಚಾಲನೆ ಮಾಡುವಾಗ  ಕೊನೆಯಿಂದ ಪೈಪಿನ ಎಲ್ಲಾ ಕೊಳವೆಗಳ ಎಂಡ್ ಕ್ಯಾಪ್ ಗಳನ್ನು  ಜೊತೆಗೆ ಮುಖ್ಯ ಕೊಳವೆಗಳ ಪ್ಲಶ್ ವಾಲ್ವ್  ತೆರೆದಾಗ ಪೈಪಿನಲ್ಲಿ ಮತ್ತು ಕೊಳವೆಗಳ ಗೋಡೆಯಲ್ಲಿ ಅಂಟಿಕೊಂಡ ಮಣ್ಣಿನಂತಹ ಕಶ್ಮಲ ಹೊರ ಹೋಗುತ್ತದೆ.

ಆಮ್ಲ ಉಪಚಾರದ ನಂತರ ಡ್ರಿಪ್ಪರಿನ ಒಳಗೆ ಪೂರ್ತಿ ಸ್ವಚ್ಚವಾಗುತ್ತದೆ.
ಆಮ್ಲ ಉಪಚಾರದ ನಂತರ ಡ್ರಿಪ್ಪರಿನ ಒಳಗೆ ಪೂರ್ತಿ ಸ್ವಚ್ಚವಾಗುತ್ತದೆ.
 • ಡ್ರಿಪ್ಪರಿಗಳಲ್ಲಿ ಸೇರಿದ್ದರೆ ಅದು ಕರಗಿ ನೀರಿನ ಜೊತೆಗೆ ಹೊರ ಹೋಗುತ್ತದೆ.
 • ಒಂದು ವೇಳೆ ಪೈಪಿಗೆ ಇಂಜೆಕ್ಟ್ ಮಾಡುವ ಯಾವುದೇ ಸಾಧನಗಳಿಲ್ಲದಿದ್ದರೆ,
 • ಪಂಪಿನ  ಭಾಗಕ್ಕೆ ಆಮ್ಲ ಹಿಂದೆ ಬಾರದಂತೆ ವಾಲ್ವ್ ಬಂದ್ ಮಾಡಿ ಕೊನೆ (End point) ಕ್ಲಪೆಟ್ ವಾಲ್ವ್ ತೆರೆದು ಆಮ್ಲ ದ್ರಾವಣವನ್ನು ಪೈಪಿನ ಒಳಗೆ ಸಾಧ್ಯವಾದಷ್ಟು ತುಂಬಿ.
 • ಹೀಗೆ ತುಂಬುವಾಗ ಆಮ್ಲಕ್ಕೆ 50% ನೀರು ಸೇರಿಸಿ.
 • ಆ ನಂತರ ವಾಲ್ವ್ ತೆರೆದು ತಕ್ಷಣ ಪಂಪನ್ನು ಚಾಲೂ ಮಾಡಿ.
 • ಆಗ ಆಮ್ಲವು ಪೈಪಿನ ಒಳಗೆಲ್ಲಾ ಸೇರಿಕೊಳ್ಳುತ್ತವೆ.
 • ಅದನ್ನು ಒಂದು ದಿನ ಬಿಟ್ಟು ಮರುದಿನ ವಾಲ್ವ್ ತೆರೆದು ಪಂಪ್ ಚಾಲೂ ಮಾಡಿ.
 • ತುದಿಯಿಂದ ಎಂಡ್ ಕ್ಯಾಪ್ ಗಳನ್ನೆಲ್ಲಾ  ತೆರೆದು, ಕೆಸರು ನೀರು ಹೊರ ಹೋಗಿ ಸ್ವಚ್ಚ ನೀರು ಬರುವಷ್ಟು  ನೀರನ್ನು ಹೊರ ಬಿಟ್ಟು ಮುಚ್ಚುತ್ತಾ ಬನ್ನಿ.
PVC ಮತ್ತು ಲ್ಯಾಟರಲ್ ಅನ್ನು ಪ್ಲಶ್ ಮಾಡುವುದರಿಂದ ಬಹಳಷ್ಟು ಕಶ್ಮಲಗಳು ಹೋಗುತ್ತವೆ.
PVC ಮತ್ತು ಲ್ಯಾಟರಲ್ ಅನ್ನು ಪ್ಲಶ್ ಮಾಡುವುದರಿಂದ ಬಹಳಷ್ಟು ಕಶ್ಮಲಗಳು ಹೋಗುತ್ತವೆ.

ಹನಿ ನೀರಾವರಿ ಇಲ್ಲದಿದ್ದರೂ ಆಮ್ಲ ಉಪಚಾರ ಮಾಡುವುದರಿಂದ ಪೈಪಿನ ಒಳಭಾಗ ನಯವಾಗಿರುತ್ತದೆ. ನೀರಿನ ಒತ್ತಡ  Friction loss) ಕಡಿಮೆಯಾಗಲಾರದು. ಈ ಆಮ್ಲವು ಹಾನಿಕರವಲ್ಲ. ಇದು ಒಂದು ಪೋಷಕವೂ ಹೌದು.  

ಸರಳ ವಿಧಾನದ ಕ್ಲೀನಿಂಗ್:

ಕೆಲವರ ಕೊಳೆವೆ ಬಾವಿ, ಅಥವಾ ತೆರೆದ ಬಾವಿಯಲ್ಲಿ ಗಂಧದ ತರಹದ ಲವಣ ಇರುವುದಿಲ್ಲ. ಬರೇ ಸಣ್ಣ ಸಣ್ಣ ಸೂಕ್ಷ್ಮ ಕಲ್ಲಿನ ಹುಡಿ ಇರಬಹುದು. ಅಂತವರು  ಆಗಾಗ್ಗೆ ಈ ರೀತಿ ಮಾಡುವುದರಿಂದ ಈ ವಸ್ತುಗಳನ್ನು ಹೊರ ಹಾಕಬಹುದು.

 • ಮೊದಲು ನಿರಾವರಿ ಮಾಡುವಾಗ ಲ್ಯಾಟರಲ್ ಪೈಪಿನ ಎಂಡ್ ಕ್ಯಾಪ್ ಗಳನ್ನೆಲ್ಲಾ  ಒಫನ್ ಮಾಡಿ ನೀರು ಬಿಡಬೇಕು.
 • ಅದಕ್ಕೂ ಮುಂಚೆ  ವ್ಯವಸ್ಥೆಯ pvc ಎಂಡ್ ಕ್ಯಾಪ್ ತೆಗೆಯಬೇಕು. ನೀರು ಹರಿಸಿ pvc ಎಂಡ್ ಕ್ಯಾಪ್  ಮೂಲಕ ನೀರು ರಭಸವಾಗಿ ಹೊರ ಬಂದ ಮೇಲೆ  (ಪ್ಲಶ್ ಮಾಡುವುದು) ಅದನ್ನು ಮುಚ್ಚಿ. ನಂತರ ಲ್ಯಾಟರಲ್ ಗೆ ಬನ್ನಿ
 •  ಆಗ ಕೆಳ ಭಾಗದಲ್ಲಿ ಮಾತ್ರ ನೀರು ಹೊರಬಹುದುತ್ತದೆ. ಪ್ರತಿ ಲ್ಯಾಟರಲ್ ನಿಂದ  5 ನಿಮಿಷ ತನಕ ನೀರು ಹೊರ  ಬಿಟ್ಟು  ಅದನ್ನು ಮುಚ್ಛಿ ಮುಂದಿನ ಪೈಪನ್ನು  ಹಾಗೆ ಮಾಡುತ್ತಾ ಕೊನೆ ತನಕ ಮುಂದುವರಿಸಬೇಕು.
 • ಎರಡು ಬದಿಯಲ್ಲಿ ಲ್ಯಾಟರಲ್ ಇದ್ದರೆ ಎರಡನ್ನು ಎಕಕಾಲದಲ್ಲಿ ಮುಚ್ಚುತ್ತಾ ಬರಬೇಕು.  ಇಲ್ಲವಾದರೆ ಮುಂದೆ ಒತ್ತಡ ಸಿಗುವುದಿಲ್ಲ. 
 • ಲ್ಯಾಟರಲ್ ನಲ್ಲಿ   ಸೇರಿಕೊಂಡ ಮಣ್ಣು, ಕಲ್ಲಿನ ಹುಡಿ, ಇರುವೆ   ಮಣ್ಣಿನ ಆಂಶ ಇದ್ದರೆ ಸ್ವಲ್ಪ ಸ್ವಚ್ಚವಾಗುತ್ತದೆ.
 • ಈ ವಿಧಾನವನ್ನು ತಿಂಗಳಿಗೊಮ್ಮೆ ಮಾಡುತ್ತಿದ್ದರೆ ಬಹಳ ಒಳ್ಳೆಯದು.
ರಿವರ್ಸ್ ಪ್ಲಶ್ ಮಾಡಿದರೆ ತುಂಬಾ ಪ್ರಯೋಜನ
ರಿವರ್ಸ್ ಪ್ಲಶ್ ಮಾಡಿದರೆ ತುಂಬಾ ಪ್ರಯೋಜನ
 • ಹೆಚ್ಚು ಕಶ್ಮಲ ಇರುವಲ್ಲಿ ವರ್ಷಕ್ಕೆ  ಎರಡು ಸಲ ಆಮ್ಲ ಉಪಚಾರ ಮಾಡಿದರೆ ಡ್ರಿಪ್ಪರಿನಲ್ಲಿ ಶೇಖರಣೆ ಆಗುವುದಿಲ್ಲ.
 • ಒಂದು ವೇಳೆ  ಡ್ರೀಫ್ಫರಿನ ಡಯಪ್ರಾಮ್ ಒಳಗೆ  ಅಂಟಿದ ಕಶ್ಮಲ ಇದ್ದರೆ ಅದನ್ನು ತೆಗೆದು  ಆಮ್ಲದ ದ್ರಾವಣದಲ್ಲಿ ಹಾಕಿ ಒಂದು ದಿನ ಬಿಟ್ಟು ಮತ್ತೆ ಹಾಕಬೇಕಾಗುತ್ತದೆ.
 • ಕಾಪರ್ ಸಲ್ಫೇಟ್  ಉಪಚಾರವೂ ಹೀಗೆಯೇ ಆಗಿರುತ್ತದೆ.
 • 1 ಕಿಲೋ ಕಾಪರ್ ಸಲ್ಪೇಟ ಹುಡಿಯನ್ನು 10 ಲೀ. ನೀರಿನ ಪ್ರಮಾಣದಲ್ಲಿ ಕರಗಿಸಿ ನೀರಿನೊಂದಿಗೆ ಸೇರಿಸಬೇಕು.
 • ಇದು ಪಾಚಿಯ ಬೀಜಾಣುಗಳನ್ನು ಸಾಯುವಂತೆ ಮಾಡಿ ಬೆಳೆಯಲು ಅವಕಾಶ  ನೀಡುವುದಿಲ್ಲ.

ಆಮ್ಲ  ಉಪಚಾರ ಎಂದಾಕ್ಷಣ ರೈತರು ಗಾಬರಿ ಪಡುತ್ತಾರೆ . ಎಷ್ಟು ಕಷ್ಟವೋ ಎಂದು. ಆದರೆ ಇದು ಹಾಗೆ ಕಷ್ಟದ ಕೆಲಸ ಅಲ್ಲ. ತುಂಬಾ ಸುಲಭ ಮತ್ತು ಸರಳ. ಈ ಮೇಲಿನ ವಿಧಾನವಲ್ಲದೆ ಇನ್ನೂ ಸರಳ ವಿಧಾನಗಳಿದ್ದರೂ ಮಾಡಿಕೊಳ್ಳಬಹುದು. ಫಿಲ್ಟರ್ ಮೆಶ್ ಗೆ ಆಮ್ಲ ಉಪಚಾರ ಮಾಡುವಾಗ ಅದು ಹೆಚ್ಚು ಸಾಂದ್ರೀಕೃತವಾಗಿರಬಾರದು.  ಹೆಚ್ಚು ಸ್ಟ್ರಾಂಗ್ ಇದ್ದರೆ ಮೆಶ್ ಕರಗುತ್ತದೆ.

error: Content is protected !!