ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ನೀವು ತಿಳಿದಿರಬೇಕಾದ ವಿಷಯಗಳು.

ಹನಿ ನೀರಾವರಿ ಸಾಧನ

ಈ ವರ್ಷ ಬಹಳಷ್ಟು ಜನ ಅಡಿಕೆ ತೋಟ ಮಾಡುತ್ತಿದ್ದಾರೆ. ಹೆಚ್ಚಿನವರ ಆಯ್ಕೆ ಹನಿ ನೀರಾವರಿ. ಜನ ನೀರು ಉಳಿತಾಯದ ಕಡೆಗೆ ಹೆಚ್ಚಿನ ಗಮನ ಕೊಡುವಷ್ಟು ಮುಂದುವರಿದದ್ದು ಸಂತೋಷದ ವಿಚಾರ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಾಗ, ಅಳವಡಿಸುವವರ ಜೊತೆಗೆ ನಾವೂ ಸ್ವಲ್ಪ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದಿದ್ದರೆ ಬಹಳ ಒಳ್ಳೆಯದು.

ಹನಿ ನೀರಾವರಿ ಎಂದರೆ ಲಭ್ಯವಿರುವ ನೀರನ್ನು ಎಲ್ಲೆಲ್ಲಿ ಬೆಳೆಗಳಿವೆಯೋ ಅಲ್ಲಿಗೆ ತಲುಪಿಸಿ ಆ ಸಸ್ಯಕ್ಕೆ ದಿನಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಕೊಡುವ ವ್ಯವಸ್ಥೆ. ಇಲ್ಲಿ ಕೆಲವು ಲೆಕ್ಕಾಚಾರಗಳು, ವಿನ್ಯಾಸಗಳು ಬೇಕು. ಆ ಪ್ರಕಾರ ಅಳವಡಿಕೆ ಮಾಡಿದರೆ, ವ್ಯವಸ್ಥೆಗೆ ಧೀರ್ಘಾವಧಿಯ ತನಕ ಆಯುಸ್ಸು ಇರುತ್ತದೆ. ಹನಿ ನೀರಾವರಿ ಮಾಡಿದ ನಂತರ ನನಗೆ ತುಂಬಾ ಅನುಕೂಲವಾಯಿತು ಎಂದು ಹೇಳುವಂತಾಗಬೇಕಾದರೆ ನುರಿತ ತಜ್ಞರಿಂದ ಅಳವಡಿಕೆ ಮಾಡಿಕೊಳ್ಳಬೇಕು, ಹಾಗೆಯೇ ಅಳವಡಿಸಿಕೊಳ್ಳುವವರಿಗೆ ಅದರ ಮೂಲಭೂತ ವಿಷಯಗಳು ತಿಳಿದಿರಬೇಕು.

ಇನ್ ಲೈನ್ ಅಥವಾ ಸಬ್ ಸರ್ಫೇಸ್ ಡ್ರಿಪ್ಪರ್
ಇನ್ ಲೈನ್ ಅಥವಾ ಸಬ್ ಸರ್ಫೇಸ್ ಡ್ರಿಪ್ಪರ್
 • ಹನಿ ನೀರಾವರಿ ಅಳವಡಿಕೆ ಎಂಬುದು ಈಗ ಭಾರೀ ವ್ಯಾವಹಾರಿಕವಾಗಿದೆ.
 • ಹಳ್ಳಿ ಹಳ್ಳಿಗಳಲ್ಲೂ ಹನಿ ನೀರಾವರಿ ಸಾಧನ ಮಾರಾಟಗಾರರು, ಅಳವಡಿಕೆದಾರರು ಹೆಚ್ಚಾಗುತ್ತಿದ್ದಾರೆ.
 • ಅದಕ್ಕೆ ತುಪ್ಪ ಸುರಿದಂತೆ ತೋಟಗಾರಿಕಾ ಇಲಾಖೆ ಹನಿ ನೀರಾವರಿಗೆ ಸಬ್ಸಿಡಿ ಇದೆ. ಅಳವಡಿಸಿಕೊಳ್ಳಿ ಎಂದು ಡಂಗುರ ಸಾರುತ್ತದೆ.
 • ಇವರಲ್ಲಿ ಮಾಡಿಸಿಕೊಂಡರೆ ಮಾತ್ರ ಸಬ್ಸಿಡಿ ಲಭ್ಯ ಎಂಬ ಅಲಿಖಿತ ಶರತ್ತನ್ನು ಸಹ ವಿಧಿಸುತ್ತದೆ.
 • ಇವೆಲ್ಲಾ ವ್ಯಾವಹಾರಿಕತನದಲ್ಲಿ ಬಡವಾಗುವುದು ಕೃಷಿಕರು.
ಹನಿ ಹನಿ ನೀರು ಚೆಲ್ಲುವ ಡ್ರಿಪ್ಪರು
ಹನಿ ಹನಿ ನೀರು ಚೆಲ್ಲುವ ಡ್ರಿಪ್ಪರು

ಕೃಷಿಕರೇ ಈ ಒಂದು ವಿಚಾರ ನಿಮ್ಮ ಗಮನದಲ್ಲಿ ಇರಲಿ. ಹನಿ ನೀರಾವರಿ ಮಾಡುವುದು ನಿಮ್ಮ ಹೊಲದ ಬೆಳೆಗಳ ಅನುಕೂಲಕ್ಕೆ. ಅದು ಯಾವ ಮಾರಾಟಗಾರರನ್ನು ಸಾಕುವುದಕ್ಕೆ ಅಲ್ಲ. ಯಾವ ಇಲಾಖೆಯವರ ಒತ್ತಾಯಕ್ಕೂ ಅಲ್ಲ. ಸರಕಾರ ಕೊಡುವ ಸಬ್ಸಿಡಿಯ ಆಸೆಗೂ ಅಲ್ಲ. ಅಳವಡಿಸಿಕೊಂಡ ವ್ಯವಸ್ಥೆಯಲ್ಲಿ ನೀವು ಗರಿಷ್ಟ ಪ್ರಯೋಜನ ಪಡೆಯಬೇಕು. ಕನಿಶ್ಟ 10  ವರ್ಷವಾದರೂ ಅದರಲ್ಲಿ ಯಾವ ಸಮಸ್ಯೆಯೂ ಬರಬಾರದು. ಇದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ.

ಇದು ನಿಮ್ಮ ಗಮನದಲ್ಲಿ ಇರಲಿ:

 • ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ಪಂಪಿನ ಕ್ಷಮತೆ ಸರಿಯಾಗಿರಲಿ.
 • ಹನಿ ನೀರಾವರಿಯಲ್ಲಿ ಕೊಳವೆಗಳ ಮೂಲಕ ನೀರು ತಲುಪಬೇಕಾದಲ್ಲಿಗೆ ತಲುಪಲು ಪಂಪಿಗೆ ದೂಡಿ ಕೊಡುವ ಸಾಮರ್ಥ್ಯ ಚೆನ್ನಾಗಿರಬೇಕು.
 • ಅಧಿಕ ಹೆಡ್ ಉಳ್ಳ ಪಂಪು ಆಗಿರಬೇಕು.
 • ಟ್ಯಾಂಕ್ ಮಾಡಿ ಅಲ್ಲಿಂದ ನೀರನ್ನು ಸರಬರಾಜು ಮಾಡುವುದು ಉತ್ತಮ.
 • ಅದು ಗುರುತ್ವ ಶಕ್ತಿಯಲ್ಲಿ ಕಾರ್ಯನಿರ್ವಹಿಸುವಂತಿದ್ದರೆ ಮತ್ತೂ ಉತ್ತಮ.
 • ಟಾಂಕಿ ರಚಿಸುವಾಗ ತಳ ಭಾಗದಲ್ಲಿ ಅರ್ಧ ಅದಿಯಷ್ಟಾದರೂ ಕಶ್ಮಲಗಳು ತಂಗುವ ಭಾಗ ಇರಲಿ.
 • ಕೊಳವೆ ಬಾವಿಯಿಂದ ನೀರುಣಿಸುವುದೇ ಆದರೆ ಕೊಳವೆ ಬಾವಿಯಲ್ಲಿ ಗಂಟೆಗೆ ಎಷ್ಟು ನೀರಿನ ಇಳುವರಿ ಇದೆ ಎಂಬುದನ್ನು ಕಡ್ದಾಯವಾಗಿ ನೀವು ಲೆಕ್ಕಾಚಾರ ಹಾಕಿರಬೇಕು.
 • ತೆರೆದ ಬಾವಿಯ ನೀರಾದರೆ ಅದರ ಗುಣಮಟ್ಟ ಹೇಗಿದೆ ಎಂಬುದು ತಿಳಿದಿರಲಿ.
 • ಕೆಲವು ಬಾವಿಯ ನೀರು ತಿಳಿಯಾಗಿರುತ್ತದೆ.
 • ಕೆಲವು ಕೆಸರಿನ ಅಂಶದಿಂದ ಕೂಡಿರುತ್ತದೆ.
 • ನೀರನ್ನು ಆರಿಸಿ ಮತ್ತೆ  ಒರತೆ ಬಂದು ತುಂಬುವಾಗ  ನೀರು ಯಾವ ರೀತಿ ಇರುತ್ತದೆ ಎಂಬುದನ್ನು ನೀವು ಗಮನಿಸಿರಬೇಕು.
 • ಎಷ್ಟು ಗಿಡಗಳಿಗೆ ನೀರಾವರಿ ಆಗಬೇಕು, ಅದಕ್ಕೆ ಎಷ್ಟು ಬ್ಲಾಕುಗಳು ಬೇಕಾಗಬಹುದು ಎಂಬುದನ್ನು ನೀವೂ ಸಹ ಲೆಕ್ಕಾಚಾರ ಹಾಕಿರಬೇಕು.

ಸಾಧ್ಯವಾದಷ್ಟು ಪಂಪಿನ  ಬುಡದಲ್ಲಿ ಫಿಲ್ಟರ್ ಹಾಕುವುದನ್ನು ಕಡಿಮೆ ಮಾಡಿ,ಮುಖ್ಯ ಪೈಪನ್ನು ನಿಮಗೆ ನಿರ್ವಹಣೆಗೆ ಅನುಕೂಲವಾಗುವ ವರೆಗೆ ತಂದು ಅಲ್ಲಿಂದ ವಿತರಣೆಯನ್ನು ಪ್ರಾರಂಭಿಸಿರಿ. ಆಗ ಅದರಲ್ಲಿ ನೈಜ ಒತ್ತಡ ಸಿಗುತ್ತದೆ. ಮನೆ ಫಾರಂ ಹೌಸ್ ಪಕ್ಕ ಇದ್ದರೆ ರಾತ್ರೆಯೂ ನಿರ್ವಹಣೆ ಮಾಡಬಹುದು.

ಎರಡು ಸಾಲಿನ ಡ್ರಿಪ್ಪರುಗಳು
ಎರಡು ಸಾಲಿನ ಡ್ರಿಪ್ಪರುಗಳು

ಅಳವಡಿಕೆ ಮಾಡುವಾಗ ನೀವು  ತಿಳಿದಿರಬೇಕಾದ ಸಂಗತಿಗಳು:

 • ಹನಿ ನೀರಾವರಿ ಅಳವಡಿಕೆ ಮಾಡುವವರು ಸಾಮಾನ್ಯವಾಗಿ ಅಳವಡಿಕೆಗೆ ಇಂತಿಷ್ಟು ಶೇ. ದರ ವಿಧಿಸುತ್ತಾರೆ.
 • ಅದರಲ್ಲಿ ಉಳಿತಾಯವಾಗುವಂತೆ ತರಾತುರಿಯಲ್ಲಿ ಅಳವಡಿಕೆ ಮಾಡಿ ಹೋಗುತ್ತಾರೆ.
 • ಅವಸರ ಮಾಡದಂತೆ ಅವರಿಗೆ ಕೆಲಸಕ್ಕೆ ಸಹಕರಿಸಿ ಓರಣವಾಗಿ ಮಾಡಿಸಿಕೊಳ್ಳಿ.
 • ಡ್ರಿಪ್ಪರುಗಳನ್ನು ಹಾಕುವಾಗ ಅದರ ಒಳಗಿನ ನೀರು ನಿಯಂತ್ರಕಗಳು ಗೆದ್ದಳು, ಇರುವೆ ತಿನ್ನದ ಗುಣಮಟ್ಟದ್ದು ಆಗಿರಲಿ.
 • ಇದನ್ನೇ ಕೇಳಿ ಪಡೆಯಿರಿ. ಇಲ್ಲವಾದರೆ ಒಂದೇ ವರ್ಷದಲ್ಲಿ ಅದು ಹಾಳಾಗುತ್ತದೆ. 
 • ಹೆಚ್ಚಿನ ಅಳವಡಿಕೆದಾರರು ಪೈಪಿಗೆ ತೂತು ಕೊರೆದು ಅದಕ್ಕೆ ರಬ್ಬರ್ ವಾಶರ್ ( ಗ್ರೋಮೆಟ್ ) ಹಾಕಿ ಅದರಿಂದ ಲ್ಯಾಟರಲ್ ಅಳವಡಿಸಿತ್ತಾರೆ.
 • ಗ್ರೋಮೆಟ್ ಎಂಬ ರಬ್ಬರ್ ಕಳಪೆಯಾಗಿದ್ದರೆ ಅದನ್ನು ಇರುವೆ , ಗೆದ್ದಲು ತಿಂದು ಕೆಲವೇ ಸಮಯದಲ್ಲಿ ಅದು ಹಾಳಾಗುತ್ತದೆ.
 • ಅದನ್ನು ತೆಗೆದು ಬೇರೆ ಹಾಕಬೇಕಾಗುತ್ತದೆ. ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ರಬ್ಬರ್ ಬಳಸಿದ ಗ್ರೋಮೆಟ್ ಹಾಕಿಸಿಕೊಳ್ಳಿ.
 • ಇದರ ಬದಲು ಬೇರೆ  ವ್ಯವಸ್ಥೆಗಳಿವೆ. ಅವು ಬಹಳ ಸಮಯದ ತನಕ ಹಾಳಾಗಲಾರದು.
 • ನೀರಿನಲ್ಲಿ ಏನು ಕಶ್ಮಲಗಳು ಇವೆ ಎಂಬುದನ್ನು ನೀವೂ ಪರೀಕ್ಷಿಸುವುದು ಅವಶ್ಯಕ.
 • ಪಂಪನ್ನು ಚಾಲನೆ ಮಾಡುವಾಗ ಒಮ್ಮೆ ಮತ್ತು ಅರ್ಧ ಗಂಟೆಯ ನಂತರ ಒಮ್ಮೆ ನೀರನ್ನು  ಹೊರ ಬಿಟ್ಟು ಪರೀಕ್ಷಿಸಿರಿ.

ಒಂದು ಬ್ಯಾರಲ್ ಗೆ ಅತೀ ಸಣ್ಣ ತೂತು ಇರುವ (ನೀರು ಮಾತ್ರ ಪಾಸ್ ಆಗುವ) ಬಟ್ಟೆಯನ್ನು ಹಾಕಿ ಅದಕ್ಕೆ ನೀರನ್ನು ಅದಕ್ಕೆ ಬಿಡಿ. ನಂತರ ಬಟ್ಟೆಯಲ್ಲಿ ಸಂಗ್ರಹವಾದ ಕಶ್ಮಲವನ್ನು ಗಮನಿಸಿ. ಹಾಗೆಯೇ ಅರ್ಧ ಗಂಟೆ ನೀರು ಹರಿದ ನಂತರ ಪುನಹ ನೀರು ಬಿಟ್ಟು  ಪರೀಕ್ಷೆ ಮಾಡಿ, ಎರಡನ್ನು  ಗಮನಿಸಿ. ಅದಕ್ಕನುಗುಣವಾಗಿ ಬೇಕಾಗುವ ಸೋಸು ಸಾಧನವನ್ನು( ಫ್ಹಿಲ್ಟರ್) ಅಳವಡಿಸಿಕೊಳ್ಳಿ.

ಡ್ರಿಪ್ ಲ್ಯಾಟರಲ್ ಗಳನ್ನು ಎಳೆದು ಕಟ್ಟುವುದು ಅತೀ ಮುಖ್ಯ.
ಡ್ರಿಪ್ ಲ್ಯಾಟರಲ್ ಗಳನ್ನು ಎಳೆದು ಕಟ್ಟುವುದು ಅತೀ ಮುಖ್ಯ.
 • ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಪೈಪುಗಳನ್ನು ಆಯ್ಕೆ ಮಾಡಿ.
 • ಕೆಲವು ಪೈಪುಗಳು ಒಂದೆರಡು ವರ್ಷಗಳಲ್ಲಿ ಬಿಸಿಲಿಗೆ ಹಾಳಾಗುತ್ತದೆ.
 • ಅಂತದ್ದನ್ನು ಆಯ್ಕೆ ಮಾಡಿಕೊಳ್ಳಬೇಡಿ. ಉತ್ಪನ್ನಗಳಿಗೆ  ಎಷ್ಟು ವರ್ಷಗಳ ವಾರಂಟಿ ಎಂಬುದನ್ನು ಕೇಳಿ ತಿಳಿದುಕೊಳ್ಳಿ.
 • ಮಣ್ಣು ಮಿಶ್ರಿತ ನೀರಾಗಿದ್ದರೆ ಮಾತ್ರ ಸ್ಯಾಂಡ್ ಫಿಲ್ಟರ್ ಅಳವಡಿಸಿಕೊಳ್ಳಿ.
 • ಶಿಲೆ ಕಲ್ಲಿನ ಸಣ್ಣ ಸಣ್ಣ ಹುಡಿ ಆಗಿದ್ದರೆ ಡಿಸ್ಕ್ ಅಥವಾ ಸ್ಕ್ರೀನ್ ಫಿಲ್ಟರ್ ಸಾಕು.
 • ಕಲ್ಲಿನ ತೇಲದ ಹುಡಿಯಾಗಿದ್ದರೆ ಅದಕ್ಕೆ ಹೈಡ್ರೋ ಸೈಕ್ಲೋನ್ ಫ್ಲಿಲ್ಟರ್ ಅಳವಡಿಸಿಕೊಳ್ಳಿ.
 • ಸಾಧ್ಯವದಷ್ಟು ಎಚ್ ಡಿ ಪಿ ಇ ಬಾಡಿಯ ಫಿಲ್ಟರ್  ಅಳವಡಿಸಿಕೊಳ್ಳಿ.
 • ಕಬ್ಬಿಣದ ಫಿಲ್ಟರ್ ತುಕ್ಕು ಹಿಡಿಯುವ ಗುಣ ಹೊಂದಿರುತ್ತದೆ.
 • ಕೆಲವು ಉತ್ತಮ ಗುಣಮಟ್ಟದ್ದೂ ಇರುತ್ತದೆ. ಅದನ್ನು ತಿಳಿದು ಅಳವಡಿಸಿಕೊಳ್ಳಿ. 
 • ಒಂದು ಲೈನಿನಲ್ಲಿ ಹೆಚ್ಚು ಡ್ರಿಪ್ಪರ್ ಜೋಡಿಸುವುದಿಲ್ಲ ಎಂದಾದರೆ 12 ಎಂ ಎಂ ಲ್ಯಾಟರಲ್  ಪೈಪ್ ಹಾಕಿ.
 • ಹೆಚ್ಚು ಇದ್ದರೆ  ಮಾತ್ರ 16 ಎಂ ಎಂ ಹಾಕಿ. ಇದರಿಂದ ಉಳಿತಾಯ ಆಗುತ್ತದೆ.
 • 12 ಎಂ ಎಂ ಗೆ 4 ಲೀ. 15 -16 ಡ್ರಿಪ್ಪರ್ ಹಾಕಲಿಕ್ಕೆ ಬರುತ್ತದೆ.

ಬಿಳಿ ಡ್ರಿಪ್ ಲ್ಯಾಟರಲ್ ಗಳನ್ನು ಎಳೆದು ಕಟ್ಟಿ ಅಳವಡಿಸಿರುವುದು.

ಬಿಳಿ ಡ್ರಿಪ್ ಲ್ಯಾಟರಲ್ ಗಳನ್ನು ಎಳೆದು ಕಟ್ಟಿ ಅಳವಡಿಸಿರುವುದು.ಅಳವಡಿಕೆ ಮಾಡುವಾಗ ನಿಮ್ಮ ನೀರಿನ ಪ್ರಮಾಣ, ಅದನ್ನು ವಿತರಿಸುವ ಸಸ್ಯಗಳ ಸಂಖ್ಯೆ, ಮತ್ತು ಅದಕ್ಕಾಗಿ ಹಾಕುವ ನೀರು ಹೊರ ಚೆಲ್ಲುವ ಸಾಧನ( ಡ್ರಿಪ್ಪರ್) ಲೆಕ್ಕಾಚಾರ ಹಾಕಿಕೊಂಡು ಸಮರ್ಪಕವಾಗಿ ಅಳವಡಿಕೆ ಮಾಡಿಕೊಳ್ಳಿ. ವಿತರಣೆಯ ಕೊನೇ ಭಾಗದಲ್ಲಿ ದೊರೆಯುವ ನೀರಿನ ಪ್ರಮಾಣವೇ ಅದರ ನಿಜವಾದ ಇಳುವರಿ ಆಗಿರುತ್ತದೆ.

ನೀರಿನ ಇಳುವರಿ ಪರೀಕ್ಷೆ:

ಪಂಪನ್ನು ಒಂದು ಗಂಟೆ ಚಾಲನೆ ಮಾಡಿ ನೀರನ್ನು ಹೊರ ಹೋಗಲು ಬಿಡಿ.   ನಂತರ ಎಂಡ್ ಪಾಯಿಂಟ್ ನಲ್ಲಿ ಒಂದು ಹೋಸ್ ಪೈಪಿನ ಮೂಲಕ ಒಂದು ಬ್ಯಾರಲ್ ಗೆ  ನೀರನ್ನು ತುಂಬಿ. 200 ಲೀ. ಬ್ಯಾರಲ್ ತುಂಬಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ಗಂಟೆಯನ್ನು ಗುಣಿಸಿ ಒಟ್ಟು ನೀರಿನ ಇಳುವರಿಯನ್ನು ಲೆಕ್ಕಾಚಾರ ಹಾಕಿ.(ಉದಾ. 5 ನಿಮಿಷಕ್ಕೆ 200 ಲೀ. ನೀರು ತುಂಬಿದರೆ 1 ಗಂಟೆಗೆ ನಿಮ್ಮ ಬಾವಿಯಲ್ಲಿ ಸಿಗುವ ನೀರಿನ ಇಳುವರಿ 2400ಲೀ. ಅದಕ್ಕೆ 4 ಲೀ. ನೀರು ಹೊರ ಹಾಕುವ 400 ಡ್ರಿಪ್ಪರ್ ಹಾಕಬಹುದು (500 ಆದರೂ ಸ್ವಲ್ಪ ಕಡಿಮೆ ಹಾಕಿ. ಬೇಸಿಗೆಯಲ್ಲಿ ಮೇಲಿನ ಒರತೆ ಕಡಿಮೆಯಾಗಿ ನೀರು ಕಡಿಮೆ ಬರಬಹುದು.)

 • ಹನಿ ನೀರಾವರಿಯ ಕೊಳವೆಗಳನ್ನು ಎಳೆದು ಕಟ್ಟಿ ನಂತರವೇ ಡ್ರಿಪ್ಪರುಗಳನ್ನು ಜೋಡಿಸಿರಿ.
 • ಇನ್ ಲೈನ್ ಡ್ರಿಪ್ ಆಗಿದ್ದರೂ ಹಾಗೆಯೇ ಮಾಡುವುದು ಉತ್ತಮ.
 • ಅನುಕೂಲ ಇದ್ದವರು ಇನ್ ಲೈನ್ ಡ್ರಿಪ್ ಹಾಕಿಸಿಕೊಂಡರೆ ಅದರ ಪ್ರಯೋಜನ ಉತ್ತಮವಾಗಿರುತ್ತದೆ. 
 • ಸೋಸು ವ್ಯವಸ್ಥೆ ಮಾತ್ರ ಚೆನ್ನಾಗಿರಬೇಕು.
 • ಡ್ರಿಪ್ಪರುಗಳ ಮೂಲಕ ನೀರು ಬೀಳುವ ಜಾಗ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಆಗಬಾರದು.
 • ಹನಿ ನೀರಾವರಿ ಮಾಡುವವರು ವರ್ಷಕ್ಕೊಮ್ಮೆ ಅದನ್ನು ಸುತ್ತಿ ಇಡುವ ಕೆಲಸ ಮಾಡಬೇಡಿ.
 • ಅದು ನೆಲದಲ್ಲೇ ಹಾಗೆ ಇರಲಿ. ಮಳೆಗಾಲದಲ್ಲೂ ಅದರಲ್ಲಿ ವಾರಕ್ಕೊಮ್ಮೆಯಾದರೂ ನೀರು ಬಿಡುತ್ತಾ ಇರುವುದರಿಂದ ಯಾವ ಬ್ಲಾಕ್ ಸಮಸ್ಯೆ ಉಂಟಾಗಲಾರದು.
 • ಡ್ರಿಪ್ಪರ್ ಗಳನ್ನು ಅಳವಡಿಸುವ ಮುಂಚೆ ಲ್ಯಾಟರಲ್ ಅನ್ನು ಸುತ್ತು ಬಿಡಿಸಿಕೊಳ್ಳಬೇಕು.
 • ಇಲ್ಲಿ ಯಾವ ಉದಾಸೀನವನ್ನೂ ಮಾಡಬಾರದು.ನೆಲದಲ್ಲಿ ಅದು ಯಾವುದೇ ಟೆನ್ಶನ್ ಇಲ್ಲದೆ ಹಾಸಲ್ಪಡಬೇಕು.
 • ಕೊಳವೆಯಲ್ಲಿ ಕೆಂಪು ಅಥವಾ ಹಳದಿ ಪಟ್ಟಿ ಇದ್ದರೆ ಅದು ಎಲ್ಲಾ ಭಾಗದಲ್ಲೂ  ಒಂದು ಬದಿಗೆ ಇರುವಂತಾದರೆ  ಅದರ ಸುರುಳಿತನ ಹೋಗಿದೆ ಎಂದರ್ಥ.
 • ಬಣ್ಣದ ಪಟ್ಟಿಯು ಮೇಲ್ಮುಖವಾಗಿರಬಾರದು,ಮೇಲ್ಮುಖವಾಗಿರಬಾರದು.
 • ಅಡ್ಡವಾಗಿದ್ದರೆ ಆ ಭಾಗಕ್ಕೆ ಡ್ರಿಪ್ಪರುಗಳನ್ನು  ಚುಚ್ಚಬೇಕು.
 • ಡ್ರಿಪ್ಪರುಗಳ ತುದಿ ನೆಲಕ್ಕೆ ತಾಗಬಾರದು. ತಾಗಿದರೆ ಇರುವೆ ಇತ್ಯಾದಿ ಒಳ ಸೇರಿ ಡ್ರಿಪ್ಪರಿನ ಡಯಪ್ರಾಮ್ ನಲ್ಲಿ ಸೇರಬಹುದು.
 • ಕೆಲವು ಡ್ರಿಪ್ಪರುಗಳಲ್ಲಿ (ಡಯಪ್ರಾಮ್) ಬಿಡಿಸುವ ವ್ಯವಸ್ಥೆ ಇರುತ್ತದೆ.
 • ಕೆಲವು ಇರುವುದಿಲ್ಲ. ಸೋಸು ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೆ ಬಿಡಿಸುವ ತರಹದ ಡ್ರಿಪ್ಪರ್ ಹಾಕಿಕೊಳ್ಳಿ.
 • ನೀರು ಬೀಳುವ ಪ್ರಮಾಣದ ಅಂದಾಜು ಸಹ ಇದರಲ್ಲಿ ಸುಲಭವಾಗಿ ಗೊತ್ತಾಗುತ್ತದೆ.
 • ನೀರಿನ ಹರಿವಿಗೂ ಅದು ಅನುಕೂಲವಾಗುತ್ತದೆ.
 • ಎತ್ತರ ತಗ್ಗು ಇರುವಾಗ ನೀರು ಕೆಲವೊಮ್ಮೆ ಪೈಪಿನಲ್ಲಿ ಹಿಂದೆ ಅಥವಾ ಮುಂದೆ ಬೀಳುವುದಿದೆ. ಅದನ್ನು ತಡೆಯಲು ಇದು ಅನುಕೂಲ.

ಕೆಲವು ಡ್ರಿಪ್ಪರಿಗಳಲ್ಲಿ ತಿರುಗಿಸಲು ಅನುಕೂಲವಾಗುವಂತೆ ಆಕಾರ ಇರುತ್ತದೆ. ಅದು ಕೆಳಮುಖವಾಗಿದ್ದರೆ ನೀರು ನೇರವಾಗಿ  ನೆಲಕ್ಕೆ ಬೀಳುತ್ತದೆ.ಪೈಪು, ಫಿಲ್ಟರ್, ವಾಲ್ವ್, ಡ್ರಿಪ್ಪರ್ ಇತ್ಯಾದಿಗಳ ಬಳಕೆ ವಿಧಾನದ ಹಸ್ತ ಪ್ರತಿಯನ್ನು User manual ಸರಿಯಾಗಿ ಓದಿ.

 • ಉತ್ತಮ ಗುಣಮಟ್ಟದ  ಲ್ಯಾಟರಲ್ ಪೈಪುಗಳು ವೀಡ್ ಕಟ್ಟರ್ ನಲ್ಲಿ ಹುಲ್ಲು ತೆಗೆಯುವಾಗ ಘಾಸಿಯಾಗಲಾರದು.
 • ಅದ ಕಾರಣ ಅದನ್ನು ಪ್ರತೀ ವರ್ಷ ಮಡಚಿ ಇಡಬೇಕಾಗಿಲ್ಲ.
 • ಕಳಪೆ ಪೈಪಿಗೆ ಒಂದು -ಎರಡು ಸಾರಿ ಡ್ರಿಪ್ಪರ್ ಚುಚ್ಚಿದರೆ ತೂತು ದೊಡ್ದದಾಗಿ ಮತ್ತೆ ಬೇರೆ ತೂತು ಮಾಡಬೇಕಾಗುತ್ತದೆ.

ಹನಿ ನೀರಾವರಿ ಬೆಳೆಗಳಿಗೆ ಉತ್ತಮ. ಸಸ್ಯಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನೇ ಕೊಡುವುದರಿಂದ ಅದರ ಆರೋಗ್ಯ ಉತ್ತಮವಾಗಿರುತ್ತದೆ. ಫಲ ಚೆನ್ನಾಗಿರುತ್ತದೆ. ಯಾವುದೇ ಕಾರಣಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ಹನಿ ನೀರಾವರಿಯ ಮೂಲಕ ಕೊಡಬಾರದು. ಇದರಿಂದ ಪೊಷಕಗಳು ಬೇರು ವಲಯಕ್ಕಿಂತ ಕೆಳಗೆ ಹೋಗುತ್ತದೆ. ಸಸ್ಯಗಳಿಗೆ ಲೆಕ್ಕಕ್ಕಿಂತ ಹೆಚ್ಚು ನೀರು ಕೊಟ್ಟರೆ ಬಾಷ್ಪೀಭವನ ಹೆಚ್ಚಾಗಿ ನೀರು ನಷ್ಟವೇ ಆಗುತ್ತದೆ.

error: Content is protected !!